ನನ್ನ ರಸಯಾತ್ರೆ - ಮಲ್ಲಿಕಾರ್ಜುನ ಮನ್ಸೂರ.
ಸಂಗೀತಗಾರರೂ ಸಂಗೀತದ ಹಾಗೇ ಬರೆದ ಆತ್ಮಕಥಾನಕ ಇದು.
ಎಪ್ಪತ್ತೂ ಚಿಲ್ಲರೆ ಪುಟಗಳ ಓದಿ ಮುಗಿಸಿದಾಗ ಸಂಗೀತ ಕೇಳಿದ ಅನುಭವವಾಗುವುದು ವೈಶಿಷ್ಟ್ಯ.
ತನ್ನ ಬಾಲ್ಯ,ಕಲಿಕೆಯ ಹಾದಿ,ಎದುರಿಸಿದ ಎಡರು ತೊಡರು, ಕುಟುಂಬ,ಗುರುಗಳು, ಕಾಪಾಡಿದವರು, ಸಲಹಿದವರು ,ಹಾಡಿದ ಚೀಜುಗಳು,ಕೌಟುಂಬಿಕ ಆರ್ಥಿಕ ಸಮಸ್ಯೆ, ದುಃಖ,ಸಂತೋಷ ಏನುಂಟು ಏನಿಲ್ಲ ಇಲ್ಲಿ!
ಯಾವುದೂ ಅತಿಯಿಲ್ಲ.
ಬಹುಶಃ ಎಲ್ಲವೂ ಅವನ ಇಚ್ಛೆ ಎಂದು ಕೈ ಮುಗಿದಾಗ ಮಾತ್ರ ಇಂತಹ ಬರವಣಿಗೆ ಸಾಧ್ಯ!
ಬೇಂದ್ರೆಯವರು ಗುರುತಿಸಿದ ಹಾಗೆ
ಅವರ ಸಂಗೀತ ಕೇಳಿದಾಗ
' ಮನಸೂರೆ ಹೋಯಿತೋ
ಹೋ ಇದ್ದಕ್ಕಿದ್ದಂತೆ.
ಈ ಗೀತೆ ಹಾಡಿದುದು
ಹೊಸ ಸಪ್ನ ಬಿದ್ದಂತೆ
ಅಂತೆ, ಇಂತೆ ಎನ್ನುತ್ತಾ ಮನಮೀರಿ ನಾನಿಂತೆ.
ಕಳಚಿಬಿದ್ದಿತು ಗೆಳೆಯ
ಜಗದ ಸಂತೆಯ ಚಿಂತೆ'
ಅಭಿನವದ ಪ್ರಕಟಣೆ.