Jump to ratings and reviews
Rate this book

ತೆಂಕನಿಡಿಯೂರಿನ ಕುಳುವಾರಿಗಳು - Tenkanidiyurina Kuluvarigalu

Rate this book
Novel

272 pages, Paperback

Published January 1, 2016

10 people want to read

About the author

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
11 (61%)
4 stars
5 (27%)
3 stars
2 (11%)
2 stars
0 (0%)
1 star
0 (0%)
Displaying 1 - 8 of 8 reviews
Profile Image for Sanjay Manjunath.
200 reviews10 followers
January 4, 2025
ಕೆಲವೊಂದು ಕೃತಿಗಳನ್ನು ಓದಿ ಮುಗಿಸಿದ ಮೇಲೆ ಇಷ್ಟು ದಿನ ಯಾಕೆ ಓದಿರಲಿಲ್ಲ? ಮತ್ತು ಅದರ ಬಗ್ಗೆ ಏನು ಬರೆಯಬೇಕೆಂಬುದು ತೋಚುವುದಿಲ್ಲ. ಅಂತಹ ಕೃತಿಗಳಲ್ಲೊಂದು 'ತೆಂಕನಿಡಿಯೂರಿನ ಕುಳುವಾರಿಗಳು'

ತೆಂಕನಿಡಿಯೂರು. ಆ ಊರಲ್ಲಿ ದೊಡ್ಡಜನ ಎನಿಸಿಕೊಳ್ಳಲು ಒದ್ದಾಡುವ ರಂಗಪ್ಪ ಸೆಟ್ಟರು, ದೊಡ್ಡಜನ ಆಗೇ ಬರುವುದು ಎಂದು ಮುಂಬೈಗೆ ಹೊರಡುವ ಅವರ ಮಗ ಶಂಭು, ಮುಂಬೈಯಲ್ಲಿ ಹೋದಾಗ ಅವನ ಆಸರೆಯಾಗಿ ನಿಂತ ಅಲ್ಲಿನ ಬ್ಯಾಂಕ್ ಗೆಳೆಯರು ಮತ್ತು ಹಲವು ಸಂದರ್ಭಗಳು. ಊರಿನ ಒಳ್ಳೆಯ ಮತ್ತು ದೊಡ್ಡಜನರಾದ ದುಗ್ಗಪ್ಪ ಹೆಗ್ಗಡೆಯವರು. ಆದರೆ ಅವರ ಮಕ್ಕಳು ಮುಂಬಯಿಯಲ್ಲಿ ಅಕ್ರಮ ವ್ಯವಹಾರಗಳಲ್ಲಿ ದೊಡ್ಡಜನವಾಗಿ ಕೊನೆಗೆ ಸಣ್ಣಜನವಾಗುವುದು. ಊರಲ್ಲಿನ ತಟ್ಟಿ ಹೋಟೆಲ್ ಮತ್ತು ಅದರ ಓನರ್ ಶಿವರಾಮ ಭಟ್ಟರು ಎಂಬ ತೆಂಕನಿಡಿಯೂರಿನ ಬಿಬಿಸಿ, ಜಿಲ್ಲಾ ಎಂಬ ವಿಶಿಷ್ಟ ವಿನೋದ ವ್ಯಕ್ತಿ, ರುಕ್ಕು,ರತ್ನಮ್ಮ, ಗುಲಾಬಿ, ಮಾಲತಿ ಹೀಗೆ ಹಲವಾರು ಪಾತ್ರಗಳು ಸಹಜವಾಗಿ ಮಿಳಿತಗೊಂಡಿವೆ.

ಲೇಖಕರು ಕಥೆಯೊಳಗೆ ಆಗಾಗ ಬರುವುದು ಮತ್ತು ಪಾತ್ರಗಳೊಂದಿಗೆ ಸಮಾಲೋಚಿಸುವುದು. ಅವು ಇವರನ್ನು ಪ್ರೀತಿಯಿಂದ ದಭಾಯಿಸುವುದು. ಇದು ತುಂಬಾ ಸಹಜವಾಗಿ ಮೂಡಿಬಂದಿದೆ ಮತ್ತು ತುಂಬಾ ಇಷ್ಟವಾಯಿತು ಕೂಡ.

ಕರಾವಳಿ ಭಾಷೆಯಲ್ಲಿದ್ದರೂ ಸರಳವಾಗಿ
ತಿಳಿಹಾಸ್ಯ ಲೇಪನದೊಂದಿಗೆ ಮತ್ತೆ ಮತ್ತೆ ಓದಬೇಕೆನಿಸುವಂತೆ ನಿರೂಪಿಸಿರುವ ಅತ್ಯುತ್ತಮ ಕೃತಿಯಿದು.
172 reviews21 followers
November 25, 2023
#ಅಕ್ಷರವಿಹಾರ_೨೦೨೩
ಕೃತಿ: ತೆಂಕನಿಡಿಯೂರಿನ ಕುಳುವಾರಿಗಳು
ಲೇಖಕರು: ಡಾ.ವ್ಯಾಸರಾವ್ ನಿಂಜೂರು
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು

ಪ್ರಸಕ್ತ ಸಾಲಿನಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಅಂದರೆ ಒಂದೇ ದಿನದಲ್ಲಿ ಓದಿ ಮುಗಿಸಿದ ಪುಸ್ತಕ ಇದು. ಕರ್ನಾಟಕದ ಕರಾವಳಿ ಭಾಗದ ಗ್ರಾಮೀಣ ಜನಜೀವನ ಶೈಲಿಯನ್ನು ಮತ್ತು ಮುಂಬೈ ಶಹರದ ಧಾವಂತವನ್ನು ಅಲ್ಲಿಯ ಭಾಷೆಯ ಸೊಗಡಿನಲ್ಲಿ ಚಿತ್ರಿಸಿದ ಅಪೂರ್ವ ಕೃತಿ. ನೀವೇನಾದರೂ ನನ್ನ ತರಹ ಉಡುಪಿಯವರಾಗಿದ್ದರೆ ಇದೊಂದು ಸುಗ್ರಾಸ ಭೋಜನವೇ ಸರಿ. ಆ ಪ್ರಾಂತ್ಯದ ಜನರಿಗೆ ಹೆಚ್ಚು ಕನೆಕ್ಟ್ ಆಗುತ್ತದೆ ಎಂಬುದನ್ನು ಹೊರತುಪಡಿಸಿ ಇತರರು ಸಹ ಈ ಕೃತಿಯನ್ನು ಓದಿ ಸವಿಯಲು ಅಡ್ಡಿಯೇನಿಲ್ಲ.

ತನ್ನ ಬಹುಪಾಲು ಜೀವನವನ್ನು ಮುಂಬೈನಲ್ಲಿ ಕಳೆದ ನಿಂಜೂರರು ತನ್ನ ಹುಟ್ಟೂರಿನ ಕುಳುವಾರಿಗಳ(ಆಸಾಮಿ) ಪರಿಚಯವನ್ನು ಮಾಡುವಾಗ ಕಚಗುಳಿಯಿಟ್ಟಂತಾಗುತ್ತದೆ. ದುಗ್ಗಪ್ಪ ಹೆಗ್ಡೆ,ದುಗ್ಗಪ್ಪ ಶೆಟ್ಟರು,ಶಿವರಾಮ ಭಟ್ಟರು,ಜಿಲ್ಲ ನಾಯ್ಕ,ಚಿಕ್ಕು,ತನಿಯ,ಶಂಭು, ಸುಂದರ ಶೇಖರ ಮತ್ತಿತರರು ನಮಗೆ ಅರಿವಿಲ್ಲದಂತೆಯೇ ಆಪ್ತರಾಗಿ ಬಿಡುತ್ತಾರೆ. ಇಲ್ಲಿ ಲೇಖಕರು ಕಟ್ಟಿಕೊಡುವ ವಡಭಾಂಡ ದೇವಸ್ಥಾನ,ಊರು ಕೇರಿಗಳು,ಗದ್ದೆ ತೋಟಗಳು ಮತ್ತು ಅಂಗಡಿ ಹೋಟೆಲುಗಳ ಚಿತ್ರಣ ಬಾಲ್ಯದ ಜೀವನವನ್ನು ನೆನಪಿಸಿತು. ಆಧುನಿಕತೆಯ ಹಂಗಿಲ್ಲದ, ಟೀವಿ, ಸೋಷಿಯಲ್ ಮೀಡಿಯಾಗಳ ಹಾವಳಿಯಿಲ್ಲದ ಹಳ್ಳಿಯ ಕತೆಗಳು,ಪರಸ್ಪರರ ನಡುವೆ ಇದ್ದ ಪ್ರೀತಿ,ಗೌರವ,ಅಸೂಯೆ, ಹೊಟ್ಟೆಕಿಚ್ಚುಗಳ ವರ್ಣನೆ ಸಹಜವಾಗಿ ಬಹಳ ಆಪ್ತವಾಗಿ ಕಂಡವು. ಕಂಬಳ, ಕೋಳಿ ಅಂಕ,ಯಕ್ಷಗಾನ, ಭೂತಾರಾಧನೆಯ ವಿವರಗಳು ಸಹ ಬಹಳಷ್ಟು ಹಿಡಿಸಿತು.

70-80ರ ದಶಕದಲ್ಲಿ ಉಡುಪಿಯಿಂದ ಮುಂಬೈಗೆ ವಲಸೆ ಹೋಗಿ ತಮ್ಮ ಜೀವನವನ್ನು ಕಟ್ಟಿಕೊಂಡವರು ಮತ್ತು ಅಧೋಗತಿಗೆ ಇಳಿದವರುಗಳ ಕತೆಯು ಸಹ ಇಷ್ಟವಾಯಿತು. ಅತ್ಯಂತ ಶ್ರದ್ಧೆಯಿಂದ ಕಷ್ಟಪಟ್ಟು ಮೇಲೆ ಬಂದವರು ಮತ್ತು ಅಲ್ಲಿನ ಭೂಗತ ಜಗತ್ತಿನೊಂದಿಗೆ ಸಂಪರ್ಕ ಬೆಳೆಸಿ ತಮ್ಮ ಹೆಸರಿಗೆ ಊರಿಗೆ ಮಸಿಬಳಿದವರ ಕತೆಯ‌ ಜೊತೆಗೆ ಮುಂಬೈನ ಅಂದಿನ ಜೀವನ ಶೈಲಿಯನ್ನು,ಅಲ್ಲಿನ ಅನೇಕ ಗಲ್ಲಿಗಲ್ಲಿಗಳನ್ನು ಚಂದವಾಗಿ ಚಿತ್ರಿಸಿದ್ದಾರೆ ಲೇಖಕರು. ಹಳ್ಳಿ ನಗರಗಳ ಜೀವನವನ್ನು ಚಿತ್ರಿಸುತ್ತಾ ಆ ಎಲ್ಲಾ ಕತೆಗಳನ್ನು ಒಂದೇ ಕ್ಯಾನ್ವಾಸಿನ ಒಳಗೆ ತಂದು ಕೂರಿಸಿ ಒಂದಕ್ಕೊಂದು ಪೂರಕವಾಗುವಂತೆ ಕತೆಯನ್ನು ಬೆಳೆಸಿದ್ದು ಧನಾತ್ಮಕ ಅಂಶ.

ಇನ್ನು ನನಗೆ ಅತ್ಯಾಪ್ತವಾಗಲು ಕಾರಣ, ಇಲ್ಲಿನ ಕತೆಯನ್ನು ಅಲ್ಪಸ್ವಲ್ಪ ಕೇಳುತ್ತಾ ಬೆಳೆದವರು ನಾವು. ಅವನ ಹೋಟೇಲು ರೇಡಿಯೋ ಕೇಂದ್ರ, ಅವಳು ಮದುವೆಯಾಗದೆ ಬಸಿರಾದಳು, ಇವತ್ತು ಕೋಳಿಯಂಕದಲ್ಲಿ ಇವರ ಸೊಕ್ಕು ಮುರಿಯಿತು, ಮತ್ತೊಬ್ಬರ ಮಗ ಹೇಳದೆ ಕೇಳದೆ ಮುಂಬೈಗೆ ಪದ್ರಾಡ್ ಆದ(ಹೇಳದೆ ಕೇಳದೆ ಹೋದ), ಮುಂಬೈನಲ್ಲಿ ದೋ ನಂಬರ್ ಕೆಲಸ ಮಾಡಿ ಕೊಲೆಯಾದ, ಅಲ್ಲಿ ಹೋಗಿ ರಾತ್ರಿ ಕಾಲೇಜಿನಲ್ಲಿ ಓದಿ ದೊಡ್ಡ ವ್ಯಕ್ತಿಯಾದ ಮುಂತಾದ ಕತೆಗಳು ಬಹಳಷ್ಟು ಪ್ರಚಲಿತದಲ್ಲಿದ್ದವು. ಅವುಗಳಲ್ಲೆ ತುಂಡು ತುಂಡಾಗಿ ನಮ್ಮಗಳ ಕಿವಿಗೆ ಬೀಳುತ್ತಿತ್ತು. ಈಗ ಬೆಳೆದು ನಮ್ಮದೇ ಸಂಸಾರ ಬಿಡಾರವಾದ ಮೇಲೆ ಈ ಎಲ್ಲಾ ಕತೆಗಳನ್ನು ಒಟ್ಟಿಗೆ ಕೇಳಿದರೆ ಯಾವ ರೋಮಾಂಚನವನ್ನು ಅನುಭವಿಸಬಹುದಿತ್ತೋ ಅದೇ ಭಾವವನ್ನು ಪುಸ್ತಕವನ್ನು ಓದುತ್ತಾ ಪಡೆದುಕೊಂಡೆ. ಪುಸ್ತಕದಲ್ಲಿನ ಹೆಸರು ಮತ್ತು ನಾವು ಕೇಳಿದ ಹೆಸರುಗಳಷ್ಟೇ ವ್ಯತ್ಯಾಸ. ಕೆಲವು ಕಡೆ ಇಂತಹುದೇ ಅಥವಾ ಇದೇ ಘಟನೆಯು ನಮ್ಮೂರಿನಲ್ಲಿ ಸಹ ನಡೆದಿತ್ತಲ್ಲ ಎಂಬಷ್ಟು ಸಾಮ್ಯತೆ ಕೃತಿಯಲ್ಲಿದೆ.

ನನಗೆ ಬೇಸರ ತರಿಸಿದ ಅಂಶವೆಂದರೆ ಈ ಸೋಶಿಯಲ್ ಮೀಡಿಯಾ,ಓಟಿಟಿಗಳ ಹಾವಳಿಯಲ್ಲಿ ಹಳ್ಳಿಗಳ ಮುಗ್ಧತೆ ಕಳೆದುಹೋಗಿ ಬಹಳ ಕಾಲವಾಯಿತು. ಒಬ್ಬರನ್ನೊಬ್ಬರು ಬೆಸೆಯುತ್ತಿದ್ದ ಹರಟೆ ಮಾತುಕತೆಗಳು ಮೊಬೈಲ್ ಪರದೆಯಲ್ಲಿ ಹುದುಗಿ ಹೋಗಿವೆ. ಆಂಗ್ಲ ಭಾಷೆಯ ಮೋಹಕ್ಕೆ ಬಹಳಷ್ಟು ಗ್ರಾಮೀಣ ಪದಗಳು ಹೇಳಹೆಸರಿಲ್ಲದಂತೆ ಮಾಯವಾಗಿವೆ. ಕೆಲವೊಂದು ಪದಗಳನ್ನು ಓದುವಾಗ ನಾನು ಇವುಗಳನ್ನು ಬಳಸಿ ಯಾವ ಕಾಲವಾಯಿತು ಎಂದು ಪಿಚ್ಚೆನಿಸಿತು. ಕಳೆದು ಹೋದ ಆ ದಿನಗಳು ಮತ್ತೆ ಮರಳಿ ಬರಬಾರದೇ … ಆ ಸವಿಯ ದಿನಗಳು ಮತ್ತೊಮ್ಮೆ ಕಚಗುಳಿಯಿಡಬಾರದೇ ಎಂಬ ಭಾವವೊಂದು ನನ್ನಲ್ಲಿ ಗಾಢವಾಗಿ ಬೇರೂರಿದೆ.

ನಮಸ್ಕಾರ,
ಅಮಿತ್ ಕಾಮತ್
Profile Image for Nishanth Hebbar.
50 reviews13 followers
August 12, 2020
Just wonderful. The way the writer tells the story is closely similar to Tejaswi. The characters are funny and it feels like we are reading about people from our own villages.
Worth multiple reads!
Profile Image for Vignesh ಕೃಷ್ಣ.
18 reviews1 follower
February 3, 2025
ಒಂದು ಒಳ್ಳೆಯ ಓದು !!! ಲೇಖಕರು ಕಥೆ ನಡೆಸಿಕೊಂಡು ಹೋಗುವ ಪರಿ ಬಹಳ ಸುಂದರವಾಗಿದೆ..
Profile Image for Karthikeya Bhat.
109 reviews13 followers
April 5, 2024
ಕಾದಂಬರಿ: ತೆಂಕನಿಡಿಯೂರಿನ ಕುಳುವಾರಿಗಳು
ಲೇಖಕರು: ಡಾ. ವ್ಯಾಸರಾವ್ ನಿಂಜೂರ್
ಪ್ರಕಾಶಕರು: ಅಂಕಿತ ಪುಸ್ತಕ
ಮೊದಲನೆಯ ಮುದ್ರಣ: ೨೦೧೬
ಬೆಲೆ: ೨೨೫

ಕುಳುವಾರಿಗಳು ಎನ್ನುವ ಪದ ಕರಾವಳಿ ಜಿಲ್ಲೆಗಳಲ್ಲಿ ಪ್ರಚಲಿತವಿದ್ದು, ಇದು ಹೆಚ್ಚು ಕಡಿಮೆ ಆಸಾಮಿಗಳು ಎನ್ನುವ ಅರ್ಥವನ್ನು ಧ್ವನಿಸುತ್ತದೆ ಎಂಬುದನ್ನು ಲೇಖಕರು ಮುನ್ನುಡಿಯಲ್ಲಿ ಹೇಳಿದ್ದಾರೆ. ಇದು ತೆಂಕನಿಡಿಯೂರಿನ ಕುಳುವಾರಿಗಳ ಕಥೆ, ಒಬ್ಬೊಬ್ಬ ಕುಳುವಾರಿಗಳದು ಒಂದೊಂದು ಕಥೆ.

ದುಗ್ಗಪ್ಪಶೆಟ್ಟರಿಗೆ ಊರಿನಲ್ಲಿ ತಾನು ಪ್ರತಿಷ್ಠಿತ ಕುಳ ಎಂದು ರಾರಾಜಿಸಬೇಕು ಹಾಗು ತನ್ನದೆ ಹೆಸರಿನವರಾದ ದುಗ್ಗಪ್ಪಯ್ಯ ಹೆಗ್ಗಡೆಯವರ ಸೊಕ್ಕು ಮುರಿಯಬೇಕೆಂಬುವ ಬಯಕೆ, ಆದರೆ ಎಷ್ಟೇ ಪ್ರಯತ್ನಪಟ್ಟರೂ ಅದು ನೆರವೇರುತ್ತಿರಲಿಲ್ಲ. ಶೆಟ್ಟರು ಕೆಟ್ಟವರಲ್ಲ, ಬೇರೆಯವರಿಗೆ ಕೆಡುಕೆಣಿಸುವವರೂ ಅಲ್ಲ, ತನ್ನ ಗಂಡ ಭೋಳೆ ಸ್ವಭಾವದ ಬೋದಾಳ ಶಂಕರ ಎನ್ನುವುದು ಹೆಂಡತಿ ರುಕ್ಕು ಶಡ್ತಿಯ ಅಭಿಪ್ರಾಯ. ಇವರಲ್ಲದೆ ದುಗ್ಗಪ್ಪ ಹೆಗ್ಗಡೆ, ಶಿವರಾಮ ಭಟ್ಟರು, ಜಿಲ್ಲಾ ನಾಯ್ಕರು, ತನಿಯ, ಶಂಭು, ಶೇಖರ ಹಾಗು ಸುಂದರ, ಚಿಕ್ಕು, ಕಿಟ್ಟಪ್ಪು, ಕಾಳು ಭಟ್ಟರು, ಶೀನು ಭಟ್ಟರು ಈ ಎಲ್ಲಾ ಆಸಾಮಿಗಳ ಕತೆಯನ್ನು ನಮ್ಮ ಮುಂದೆ ಹಂತ ಹಂತವಾಗಿ ತೆರದಿಡುತ್ತಾ ಹೋಗುತ್ತಾರೆ, ಓದುತ್ತಾ ಓದುತ್ತಾ ಆ ಆಸಾಮಿಗಳ ಕಥೆಯಲ್ಲಿ ತಲ್ಲೀನರಾಗಿಬಡುತ್ತೇವೆ. ಕೆಲವು ಪ್ರಸಂಗಗಳು ಹಾಸ್ಯೋಸ್ಪದವಾಗಿ ಮೂಡಿಬಂದಿವೆ. ಲೇಖಕರು ಹೀಗೆ ಹೇಳುತ್ತಾರೆ * ಏನಾದರೂ ಮಾಡಲು ಹೋಗಿ ಮತ್ತೇನಾದರೂ ಆಗುವಂತಾದರೆ ತಮ್ಮಲ್ಲಿ ಅದಕ್ಕೆ “ಕುಪ್ಪಣ್ಣಯ್ಯನ ಕಶಿಗಿಶಿ” ಎಂದೋ ಅಥವಾ “ಸುಬ್ಬಯ್ಯ ಶೆಟ್ರಿ ವಿಲೇವಾರಿ” ಎಂದೋ ಹೇಳುವ ರೂಢಿ, ಅದರ ಜೊತೆ ತೆಂಕನಿಡಿಯೂರಿನ ಪೋಕರಿ ಹುಡುಗರು “ದುಗ್ಗಪ್ಪ ಶೆಟ್ರ ಕಂಬಳದಂತೆ” ಎನ್ನುವ ಮಾತನ್ನು ಸೇರಿಸಿ ಖುಷಿಪಟ್ಟಿದ್ದರು*. ಅದಕ್ಕೆ ಕಾರಣವೂ ಇತ್ತು, ಬೆಳ್ಳಳೆ ಕಂಬಳದಲ್ಲಿ ದುಗ್ಗಪ್ಪ ಶೆಟ್ಟರ ಕೋಣ ಓಡಸಿಲಿಕ್ಕೆ ಹೋಗಿ ಬಾರುಕೋಲಿನಿಂದ ಒಡೆದ ಚೀಂಕ್ರನನ್ನು ಅಟ್ಟಿಸಿಕೊಂಡು ಹೋಗಿದ್ದು, ತಾನು ಬದುಕುಳಿದರೇ ಸಾಕೆಂದು ಚೀಂಕ್ರನು ಮರ ಹತ್ತಿದ್ದು, ಅಲ್ಲಿ ಕೆಂಪಿರುವೆ ದಾಳಿಗೆ ತುತ್ತಾಗಿ ಧಡಾರನೆ ಬಿದ್ದದ್ದು, ಬೂದ ಗೋಲಿ ಸೋಡಾ ಹಾಗು ತನಿಯ ಮಡಿಕೆ ತುಂಬ ಕಳ್ಳು ಕುಡಿಸಿದ ಬಳಿಕ ಚೀಂಕ್ರ ಚಡ್ಡಿಯಲ್ಲೇ ಮೂತ್ರ ಮಾಡಿದ್ದು ಇದನ್ನು ಇಡೀ ಊರೇ ನೆನಸಿಕೊಂಡು ನಕ್ಕಾಗ ಶೆಟ್ಟರಿಗೆ ಅವಮಾನವಾಗಿತ್ತು, ಆದ್ದರಿಂದ ತೆಂಕನಿಡಿಯೂರಿನ ಪೋಕರಿ ಹುಡುಗರು ದುಗ್ಗಪ್ಪ ಶೆಟ್ರ ಕಂಬಳದಂತೆ ಎನ್ನುವ ಮಾತನ್ನು ಸೇರಿಸಿ ಖುಷಿಪಟ್ಟಿದ್ದರು.

ಇನ್ನು ಮತ್ತೊಂದು ಸಂಗತಿಯೆಂದರೆ ಲೇಖಕರೂ ಕಾದಂಬರಿಯಲ್ಲಿ ಆಗಾಗ ಬರುವುದಲ್ಲದೆ ಪಾತ್ರಗಳ ಜೊತೆ ಸಂಭಾಷಣೆಯನ್ನೂ ನಡೆಸುತ್ತಾರೆ. ತಮ್ಮ ಬಗ್ಗೆ ಮಾಸ್ತರರು (ಲೇಖಕರು) ಅವರ ಪುಸ್ತಕದಲ್ಲಿ ಬರೆದಿರುವುದನ್ನು ತಿಳಿದ ಪಾತ್ರಗಳು ಮಾಸ್ತರರಿಗೇ ತನ್ನ ಬಗ್ಗೆ ಹೀಗೆ ಬರೆಯಬಾರದಿತ್ತು, ಅದರಿಂದ ತನ್ನ ಪಾತ್ರಕ್ಕೆ ಕೆಟ್ಟ ಹೆಸರು ಬಂದಿತೆಂದು ಆದ್ದರಿಂದ ಒಳ್ಳೆ ರೀತಿಯಲ್ಲೀ ಬರೆಯಿರಿ ಎಂದು ಆದೇಶಿಸುವ ಪಾತ್ರಗಳ ಪ್ರಸಂಗಗಳು ಸ್ವಾರಸ್ಯಕರವಾಗಿವೆ. ಪಾಂಚ, ಜಿಲ್ಲ, ಚಂಪಾ, ಮಾಲತಿ ಇನ್ನು ಕೆಲವರು ತಮ್ಮ ಬರಹದಲ್ಲಿ ತಾವು ಬರಲೇ ಇಲ್ಲ, ತಮ್ಮ ಕುರಿತೂ ಬರೆಯಬೇಕೆಂದು ತಮಗೂ ಒಂದು ಸ್ಥಾನ ಕಲ್ಪಿಸಿಕೊಡಬೇಕೆಂದು ಕೇಳಿಕೊಂಡಾಗ ಲೇಖಕರು ಯಾರನ್ನೂ ನಿರಾಶೆಗೊಳಿಸದೆ ಎಲ್ಲ ಪಾತ್ರಗಳ ಬಗ್ಗೆಯೂ ಮನಸಾರೆ ಚಿತ್ರಿಸಿದ್ದಾರೆ.

ಶಿವರಾಮ್ ರಾವ್ ಅಂದರೆ ಊರಲ್ಲಿ ಯಾರಿಗೂ ಗೊತ್ತಾಗುತ್ತಿರಲಿಲ್ಲ ಅದೇ ತಟ್ಟಿ ಹೋಟಲು ಭಟ್ಟರು ಅಂದರೆ ಊರಿಗೇ ಅವರು ಪ್ರಸಿದ್ಧಿ, ಅವರ ತಟ್ಟಿ ಹೋಟಲು ಆ ಊರಿಗಿದ್ದ ಏಕೈಕ ಪಂಚತಾರಾ ಹೋಟೆಲು, ಅವರ ಹೋಟೇಲು ತೆರೆಯುವುದಕ್ಕೆ ದುಗ್ಗಪ್ಪ ಹೆಗ್ಗಡೆಯವರ ಸಹಾಯ ಹಾಗು ಅವರಲ್ಲಿ ಸಿಗುವ ರುಚಿಕರವಾದ ತಿಂಡಿ ತಿನಿಸುಗಳ ಕುರಿತು ಸುಂದರವಾಗಿ ವಿವರಿಸಿದ್ದಾರೆ. ಇದರ ಜೊತೆ ಜನರ ನಂಬಿಕೆಗಳ ಕುರಿತೂ ವಿವರಣೆ ಕೊಡುತ್ತಾರೆ, ಉದಾಹರಣೆಗೆ ತಮ್ಮ ಊರಿನಲ್ಲಿ ಬೊಬ್ಬರ್ಯ ಭೂತ ಮುನಿದಿದೆ, ಪಂಜುರ್ಲಿ ಮುನಿದಿದೆ, ಬೆಳ್ಳಳೆ ಮಾಲಿಂಗೇಶ್ವರನಿಗೆ ಸಹಸ್ರ ಬೊಂಡಾಭಿಷೇಕ ಮುಡುವುದೇ ಇದಕ್ಕೆ ಪರಿಹಾರ ಎಂದು ಭೂತ ನುಡಿಕಟ್ಟು ಕೊಟ್ಟಿದೆ ಎನ್ನುವ ನಂಬಿಕೆಗಳು.

ಊರು ಬಿಟ್ಟು ಮುಂಬಯಿಗೆ ಹೋದ ದುಗ್ಗಪ್ಪ ಶೆಟ್ಟರ ಮಗ ಶಂಭುವಿನ ಕಥೆ ಇದೆ, ಆತನು ಮುಂಬಯಿಗೆ ಹೋಗಬೇಕು ದೊಡ್ಡ ಜನ ಅನಿಸಿಕೊಳ್ಳಬೇಕೆಂದು ಹೋಗಿರುತ್ತಾನೆ, ಆತನು ದೊಡ್ಡ ಜನ ಯಾವಾಗಾಗುತ್ತಾನೋ ಊರಿಗೆ ಯಾವಾಗ ಬರುತ್ತಾನೋ ಎನ್ನುವ ಚಿಂತೆಯಲ್ಲಿ ಶೆಟ್ಟರು ಜೀವನ ಸಾಗಿಸುತ್ತಾರೆ. ಶಂಭುವಿನ ಸಮಾಚಾರ ತಿಳಿಯಲು ಜ್ಯೋತಿಷ್ಯ ಕೇಳಿಸಿ, ಕೇರಳದ ಯಾವನೊ ಸುಡುಗಾಡು ಮಂತ್ರವಾದಿ ಅಂಜನ ಹಾಕಿಸಿ, ನಾಗ ತಂಬಿಲ, ಭೂತಕ್ಕೆ ಪನಿವಾರ ಸೇವೆ, ಭೋಗ, ನಾಗಮಂಡಲ, ಪಂಜುರ್ಲಿಗೆ ಕೋಲ ನಡೆಸುವ ಶೆಟ್ಟರ ಭಾವನೆಗಳನ್ನು ಅತ್ಯದ್ಭುತವಾಗಿ ವರ್ಣಿಸಿದ್ದಾರೆ.

ಇದರ ಜೊತೆಗೆ ಮುಂಬಯಿಯಲ್ಲಿ ನಡೆಯುವ ತೆಂಕನಿಡಿಯೂರಿನ ಕುಳುವಾರಿಗಳ ಕಥೆಯನ್ನೂ ಎಳೆಎಳೆಯಾಗಿ ವಿವರಿಸುತ್ತಾರೆ, ದುಗ್ಗಪ್ಪ ಹೆಗ್ಗಡೆ ಮಕ್ಕಳಾದ ಶೇಖರ, ಸುಂದರರ ದುಷ್ಕೃತ್ಯಗಳ ಬಗ್ಗೆ, ಕೊಲೆ, ಎಕ್ಸ್ ಟಾರ್ಶನ್, ಡ್ರಗ್ಸ್, ವಿದೇಶಿ ಮಾಲುಗಳ ಕಾಳದಂಧೆ, ವೇಶ್ಯಾ ವ್ಯಾಪರ ಹೀಗೆ ಅದೆಷ್ಟೋ ಅಪರಾಧಗಳನ್ನು ಮಾಡುವ ಶೇಖರ, ಸುಂದರರ ಕುರಿತು, ಮಾಲತಿಯನ್ನು ಚಂದು ಶೆಟ್ಟಿಯ ಮೂಲಕ ಘರವಾಲಿಗೆ ಮಾರಿದ್ದು, ಹೆಗ್ಗಡೆ ಸೋದರರು ಶಂಭುವನ್ನು ಕೊಲ್ಲಿಸಲು ಯತ್ನಿಸಿದ್ದು, ಆದರೆ ಶಂಭುವಿನ ಬ್ಯಾಂಕಿನ ಗೆಳೆಯರ ಸಹಾಯದಿಂದ ಪಾರಾಗಿ ನಂತರ ಉಡುಪಿ ಕಫೆಯ ಶೇಠ್ ಆದದ್ದು, ಚಂಪಾರಾಣಿ ಪ್ರಸಂಗ, ಶಂಭು ಮಾಲತಿಯ ಭೇಟಿ, ಆಕೆಯೊಂದಿಗ ಮದುವೆ, ಬ್ಯಾಂಕಿನ ಗೆಳೆಯ ನರಸಿಂಹನ ಹತ್ಯೆ, ಎಕ್ಸ್ ಟಾರ್ಶನ್, ಡ್ರಗ್ಸ್, ವಿದೇಶಿ ಮಾಲುಗಳ ಕಾಳದಂಧೆ, ವೇಶ್ಯಾ ವ್ಯಾಪರ ಕೇಸುಗಳಲ್ಲಿ ಶೇಖರನಿಗೆ ಶಿಕ್ಷೆಯಾದದ್ದು, ಸುಂದರ ಆಕಸ್ಮಿಕವಾಗಿ ನಾಪತ್ತೆಯಾದದ್ದು ಎಲ್ಲವನ್ನೂ ವಿವರಿಸುತ್ತಾರೆ.

ಊರಿನಲ್ಲಿ ಒಂದು ಸುದ್ಧಿ ಹೇಗೆಲ್ಲಾ ಹರಡುತ್ತೆಂದರೆ, ಶೆಟ್ಟರ ಕೋಣಗಳು ಚೀಂಕ್ರನನ್ನು ಅಟ್ಟಿಸಿಕೊಂಡು ಹೋದದ್ದು, ಕೋಳಿಯಂದಲ್ಲಿ ಶೆಟ್ಟರಿಗೆ ಗೆಲುವಾದದ್ದು, ಶಂಭು ಮುಂಬಯಿಗೆ ಓಡಿಹೋದ, ಪತ್ತೆಯಾದ ನಂತರ ಶೆಟ್ಟರಿಗೆ ೫೦೦ ರೂ ಮನಿ ಆರ್ಡರ್ ಬಂದಾಗ ವಿಷಯ ಜಿಲ್ಲನಿಗೆ ತಿಳಿದು ತಟ್ಟಿ ಹೋಟಲಿನ ಭಟ್ಟರಿಗೆ ಶೆಟ್ಟರಿಗೆ ಶಂಭು ೫೦೦೦ ಕಳುಹಿಸಿದ್ದಾನೆಂದು, ಶಿವರಾಮ ಭಟ್ಟರು ಹೆಗ್ಗಡೆಯವರಲ್ಲಿ ಶಂಭು ೫೦೦೦೦ ಕಳುಹಿಸಿದನೆಂದು , ಇದನ್ನು ತಿಳಿದ ಹೆಗ್ಗಡೆ ಹಾಗು ಇನ್ನಿತರ ಕುಳುವಾರಿಗಳು ಶಂಭು ಏನೋ ಅಡ್ಡದಾರಿಯೇ ಹಿಡಿದಿರಬೇಕು, ಹೋಟಲ್ ವ್ಯಾಪಾರ ಮಾಡುತ್ತಾ ೫೦೦೦೦ ಸಾವಿರ ಕಳುಹಿಸಿದ್ದಾನೆಂದರೆ ನಂಬಲು ಸಾಧ್ಯವಿಲ್ಲ ಎಂದು ಮಾತಾನಾಡಿಕೊಂಡಿದ್ದರು, ಮಾಲತಿ ಓಡಿಹೋದಳು, ಮೊದುವೆಯಾಗದೇ ಶಂಭುವಿನಿಂದ ಬಸುರಾದಳು, ಆದ್ದರಿಂದ ಶಂಭುವು ಮಾಲತಿ ಗುಟ್ಟಾಗಿ ಮದುವೆಯಾದದ್ದು ಹೀಗೆ ಒಂದು ಸುದ್ಧಿಯು ಊರಿನಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವಿಷಯಗಳ ಕುರಿತೂ ಹೇಳುತ್ತಾರೆ.ಈ ಒಂದಲ್ಲಾ ಒಂದು ಸುದ್ಧಿಗಳು ನಾವು ನಮ್ಮ ಬಾಲ್ಯದಿಂದ ಕೇಳಿರುವಂತವುಗಳೇ.

ಈ ಕಾದಂಬರಿಯಲ್ಲಿ ಅಲ್ಲಲ್ಲಿ ತುಳುವಿನ ಪದಗಳೂ ಬಳಸಿದ್ದಾರೆ. ನನಗೂ ತುಳು ಅರ್ಥವಾಗುವ ಕಾರಣ ಆ ಪದಗಳನ್ನು ಓದುತ್ತಿದ್ದಾಗ ಏನೋ ಒಂದು ರೀತಿ ಸಂತೋಷವಾಗುತ್ತಿತ್ತು. “ಈ ಕಾದಂಬರಿ ಓದಿ ಮುಗಿಸಿದ ನಂತರ ಕಂಬಳವನ್ನು ನೋಡಿದ ಹಾಗಾಯ್ತು, ತಟ್ಟಿ ಹೋಟಲಿನ ಬಿಸ್ಕಟ್ಟು, ಆಂಬೋಡೆಯನ್ನು ಸವಿದದ್ದಾಯ್ತು, ನಾಗ ತಂಬಿಲ, ಭೂತಕ್ಕೆ ಪನಿವಾರ ಸೇವೆ, ಭೋಗ, ನಾಗಮಂಡಲ, ಪಂಜುರ್ಲಿಗೆ ಕೋಲ ಇವೆಲ್ಲವನ್ನೂ ನೋಡಿದ ಹಾಗಾಯ್ತು, ಮುಂಬಯಿ ಜೀವನವನ್ನೂ ಅನುಭವಿಸಿದ್ದಾಯ್ತು, ಕುಳುವಾರಿಗಳ ಜೊತೆ ಸಂಭಾಷಣೆಯನ್ನೂ ನಡೆಸಿದ್ದಾಯ್ತು, ಅಲ್ಲಲ್ಲಿ ಕಾಣಿಸಿಕೊಳ್ಳುವ ಲೇಖಕರನ್ನೂ ಮಾತಡಿಸಿದ ಹಾಗಾಯ್ತು. ಒಂದೊಳ್ಳೆ ಕಾದಂಬರಿಯನ್ನು ಓದಿದ ಖುಷಿಯೂ ಆಯ್ತು.”

*ಕಾರ್ತಿಕೇಯ*
Profile Image for Naresh Bhat.
10 reviews4 followers
August 8, 2017
Undoubtedly one of the amazing novels in Kannada. People of Udupi should not miss this :) The characters Jilla, Shambhu, Bhatru.. Will remain close to the hearts of the readers.
Profile Image for Anirudh .
833 reviews
August 8, 2020
The first half is hilarious, though things slow down in the 2nd half of the book. Overall quite an enjoyable read
10 reviews
July 16, 2018
ಇತ್ತೀಚಿಗೆ ಓದಿದ ಪುಸ್ತಕಗಳಲ್ಲಿ ಇಷ್ಟವಾದ ಪುಸ್ತಕ ಡಾ. ವ್ಯಾಸರಾವ್ ನಿಂಜೂರು ಅವರ 'ತೆಂಕನಿಡಿಯೂರಿನ ಕುಳುವಾರಿಗಳು.' ಓದಲೇಬೇಕಾದ ಕೃತಿ.
Displaying 1 - 8 of 8 reviews

Can't find what you're looking for?

Get help and learn more about the design.