ಗ್ರಾಮಾಯಣ ಅಪರೂಪದ ಕೃತಿ. ಒಂದು ಪುಟ್ಟ ಗ್ರಾಮದಲ್ಲಿ ನಡೆಯುವ ದಿನ ನಿತ್ಯದ ಬದುಕೇ ಇಲ್ಲಿಯ ಕಥಾವಸ್ತು. ಮನುಷ್ಯನ ಬದುಕಿನ ಆಳಕ್ಕಿಳಿದು ಅದನ್ನೇ ಕಥೆಯಾಗಿಸಿ ನಮ್ಮ ಮುಂದಿಟ್ಟಿದ್ದಾರೆ ಲೇಖಕರು. ಇಲ್ಲಿ ಯಾರೂ ಹೆಚ್ಚಲ್ಲ, ಕಡಿಮೆಯೂ ಅಲ್ಲ. ಎಲ್ಲರೂ ರಾಗ ದ್ವೇಷಗಳಿಗೆ ಒಳಗಾದವರೇ. ಆ ಸಂದರ್ಭಕ್ಕೆ ತಕ್ಕಂತೆ ಒಮ್ಮೊಮ್ಮೆ ಸ್ವಾರ್ಥ , ಇನ್ನು ಕೆಲವೊಮ್ಮೆ ಅಂತಃಕರಣದಿಂದ ಯೋಚಿಸಿ ಕಾರ್ಯವೆಸಗುವ ಜನರ ನಡುವಿನ ಸಂಬಂಧಗಳು, ರಾಜಕೀಯ, ದ್ವೇಷ, ಅಸೂಯೆ, ಹೆಣ್ಣು ಮಣ್ಣ ಮೇಲಣ ಆಸೆ ಇವೆಲ್ಲ ಆ ಹಳ್ಳಿಯ ಅವನತಿಗೆ ಹೇಗೆ ಕಾರಣವಾಗುತ್ತವೆ ಎಂಬುದು ಕಾದಂಬರಿಯ ಸಾರ.
ಕನ್ನಡದ ಪ್ರಮುಖ ಕಾದಂಬರಿಗಳಲ್ಲಿ ಗ್ರಾಮಾಯಣ ತನ್ನ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಈ ಪುಸ್ತಕ ಹಲವಾರು ಬಾಷೆಗಳಿಗೆ ಅನುವಾದಗೊಂಡು ಅನೇಕ ಪ್ರಶಸ್ತಿಗಳನ್ನು ಲೇಖಕರಿಗೆ ತಂದುಕೊಟ್ಟಿದೆ. ಪುಸ್ತಕದ ಶೀರ್ಷಿಕೆ ಹೇಳುವಂತೆ ಇದು ಒಂದು ಗ್ರಾಮದಲ್ಲಿ ನಡೆಯುವ ರಾಮಾಯಣದ ಕಥೆ. ರಾಮಾಯಣ ಅಂದರೆ ರಾಮ ಸೀತೆಯಂತಹ ಆದರ್ಶ ಬದುಕುಗಳದಲ್ಲ. ಬದಲಾಗಿ ಒಂದು ಗ್ರಾಮದಲ್ಲಿ ನಡೆಯುವ ರಾಜಕೀಯಗಳ ಮೇಲಿನ ಕಥೆ. ಸ್ವಾತಂತ್ರಪೂರ್ವದ ಘಟ್ಟದಲ್ಲಿ ನಡೆಯುವ ಈ ಕಥಾಪ್ರಸಂಗವು ಆ ದಿನಗಳಲ್ಲಿ ಹಳ್ಳಿಗಳಲ್ಲಿ ನಡೆಯುತ್ತಿದ್ದ ಕಪಟತನ, ಕೀಳುರಾಜಕೀಯ ಮತ್ತು ಅವುಗಳಿಂದ ಪಡೆದ ಲಾಭಗಳ ಬಗ್ಗೆ ಚೆನ್ನದ ವಿಶ್ಲೇಷಣೆಯನ್ನೊಳಗೊಂಡಿದೆ. ಜಹಾಗೀರದಾರರ ದರ್ಪ ಮತ್ತು ಅವರ ಕುಟುಂಬದಲ್ಲಿ ನಡೆಯುವ ಕೋಲಾಹಲಗಳಿಂದ ಊರಿನಲ್ಲಿ ಸಂಚಲನ ಮೂಡುತ್ತದೆ. ಅದು ತನ್ನ ಜಾಗವಲ್ಲದಿದ್ದರೂ ಪುತಲಾಬಾಯಿಯ ತಮ್ಮ ಬಾಪುಸಾಹೇಬ ಅಲ್ಲಿ ನೆಲೆಯೂರುತ್ತಾನೆ, ಮತ್ತು ಜಹಾಗೀರದಾರರ ಮೊದಲನೇ ಹೆಂಡತಿ ಲಕ್ಷ್ಮಿಬಾಯಿಯನ್ನು ಅಲ್ಲಿಂದ ಉಪಾಯದಿಂದ ಹೊರಗೆ ಹಾಕುತ್ತಾನೆ. ಕಾರಣ ತಾನು ಅಲ್ಲಿದ್ದರೆ ಅಲ್ಲಿ ತನಗೆ ಉಳಿಗಾಲವಿಲ್ಲವೆಂದು. ಅವನಿಗೆ ಈ ಕುಮ್ಮಕ್ಕನ್ನು ನೀಡಿದ್ದು ಪಾದಲ್ಲಿಯ ಹಿರೇಮಠದ ಸ್ವಾಮಿ ಪಡದಯ್ಯ. ಇದೇ ಪಡದಯ್ಯ ಗಡ್ಡವೇಶಧಾರಿಯಾದ ಒಬ್ಬ ಕಾಮುಕ. ಮಠದಲ್ಲಿ ಚಿಮುನಾ ಎಂಬ ಅಬಲೆಯನ್ನು ಸಂಭೋಗಿಸಿತ್ತಾನೆ. ಹಾಗೆಯೇ ಉಪಾಯವಾಗಿ ಚಿಮನಾಳ ತಂದೆ ಶಿಲೆದಾರ ನಾನಾನನ್ನು ಕೊಲ್ಲುತ್ತಾರೆ. ಅವನ ಕೊಲೆಯ ತನಿಖೆ ನಡೆದಾಗ ಅದರಲ್ಲಿ ತನ್ನ ಕೈವಾಡವಿದೆ ಎಂದು ವರದಿಯಲ್ಲಿ ಬಂದಾಗ ಪುತಲಾಬಾಯಿ ಹೆದರಿ ಆತ್ಮಹತ್ಯೆಗೆ ಶರಣಾಗುತ್ತಾಳೆ. ದಾದಾ ಊರಿನ ಕುಸ್ತಿಪಟು, ನಾನಾ ತಮ್ಮ ಲಕ್ಷ್ಮಣನ ಮಗ. ಚಿಮನಾಳಿಗಾದ ಅವಸ್ಥೆ ತಿಳಿದು ಅದಕ್ಕೆ ಕಾರಣೀಭೂತರಾಗಿದ್ದ ಪಡದಯ್ಯ ಮತ್ತು ಬಾಪೂಸಾಹೇಬನನ್ನು ಒಂದು ಕೈತೆಗೆದುಕೊಳ್ಳುತ್ತಾನೆ. ಇದು ತಡೆಯಲಾಗದೆ ದಾದಾನ ಮೇಲೆ ಹತ್ತುಹಲವಾರು ಆಪಾದನೆಗಳನ್ನು ಹೋರಿಸಿಸುತ್ತಾರೆ. ಗೌಡರು ಪಾದಳ್ಳಿಯನ್ನು ತಮ್ಮ ಕುಟುಂಬವೆಂದು ತಿಳಿದಿರುತ್ತಾರೆ. ದಾದಾನ ಮೇಲೆ ಈ ಅಪವಾದಗಳು ಬಂದಾಗ ಪ್ರತಿ ಸಲ ದಾದಾನನ್ನು ಅವರು ಪಾರುಮಾಡುತ್ತಿರುತ್ತಾರೆ. ಅದಕ್ಕೆ ದಾದಾನೂ ಸಹ ಅವರನ್ನು ಬಹಳ ಆದರದಿಂದ ಕಾಣುತ್ತಿರುತ್ತಾನೆ. ಊರಲ್ಲಿ ಬರಗಾಲ ಬಂದಾಗ ಎಲ್ಲರಿಗೂ ತಮ್ಮ ಕಣಜದಿಂದ ಧಾನ್ಯಗಳನ್ನು ಹಂಚುತ್ತಾರೆ. ಅದಾದ ಕೆಲಸಮಯದ ನಂತರ ಊರಲ್ಲಿ ಕೆಲಸಾವುಗಳು ಉಂಟಾಗುತ್ತವೆ. ಅದಕ್ಕೆ ವಿಷದಿಂದ ಮಿಶ್ರಿತವಾದ ಆ ಕಾಳುಗಳೇ ಕಾರಣವೆಂದು ಪಡದಯ್ಯ ಊರಲ್ಲಿ ಗೌಡರ ವಿರುದ್ಧ ವಿಷದ ಬೀಜ ಬಿತ್ತುತ್ತಾನೆ. ಇದೇ ದುಃಖದಲ್ಲಿ ಗೌಡರು ಸಾವನ್ನಪ್ಪುತ್ತಾರೆ. ಇದು ಊರಿಗಾದ ದೊಡ್ಡ ಆಘಾತ. ಅದಕ್ಕಿಂತ ದೊಡ್ಡ ಆಘಾತ, ಊರಿನ ಗೌಡ ಯಾರು ಎಂಬ ತೀರ್ಮಾನ ಮಾಡುವುದು. ಬಾಳಾಚಾರ್ಯರು ಊರಿಗೆ ಹಿರಿಯರು. ಅವರ ಮಾತನ್ನು ಊರಲ್ಲಿ ಎಲ್ಲರೂ ಗೌರವದಿಂದ ನಡೆಸುತ್ತಿರುತ್ತಾರೆ. ಅವರೂ ಊರನ್ನು ತಮ್ಮ ಮನೆಯಂತೆಯೇ ಕಾಣುತ್ತಿರುತ್ತಾರೆ. ಮಗು ಚಿಕ್ಕದಾಗಿದ್ದಾಗಲೇ ಕಳೆದುಕೊಂಡು ಅದೇ ದುಃಖದ ಛಾಯೆಯಲ್ಲಿ ತಮ್ಮ ಜೀವನವನ್ನು ನಡೆಸುತ್ತಿರುತ್ತಾರೆ. ಊರಿನಲ್ಲಿ ಯಾವುದೇ ಅಸಮತೋಲನ ಉಂಟಾದರೆ ಅಲ್ಲಿ ಬಾಳಾಚಾರ್ಯರು ಮುಂದುನಿಂತು ಎಲ್ಲವನ್ನು ಸಂಗೋಪಾಯವಾಗಿ ನಡೆಸುವರು. ಇದೇ ಆಚಾರ್ಯರು ಮಾಮಲೆದಾರನ ದೃಷ್ಟಿಯಲ್ಲಿ ಒಳ್ಳೆಯವರಾಗಿ ದಾದಾನನ್ನು ಅಬಂಧೀತರನ್ನಾಗಿ ಮಾಡಿಸುತ್ತಾರೆ. ಹಾಗೆಯೇ ತಮ್ಮ ವಿರುದ್ಧ ನಿಂತಿದ್ದ ಕುಲಕರ್ಣಿ ಶೇಷಪ್ಪನನ್ನೂ ಸೆರೆಯಿಂದ ಬಿಡಿಸುತ್ತಾರೆ. ದಾದಾನನ್ನು ತಮ್ಮ ಆಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ. ಇದರಿಂದ ದಾದಾ ಅಲ್ಲಿ ಆರಾಮಾಗಿರುತ್ತಾನೆಂದು ಆಚಾರ್ಯರಿಗೆ ಮತ್ತು ಲಕ್ಷ್ಮಣನಿಗೆ ಧೈರ್ಯ ಬರುತ್ತದೆ. ಗೌಡರ ಪಟ್ಟಕ್ಕೆ ತಾನೇ ಉತ್ತರಾಧಿಕಾರಿಯಾಗಬೇಕು ಅಂತ ಲಿಂಗಪ್ಪ ಬಂದು ಪಾದಳ್ಳಿಯಲ್ಲಿ ರಂಪ ಮಾಡುತ್ತಾನೆ. ಅವಾಗ ಊರಿನಲ್ಲಿ ಜಗಳ, ರಾಜಕೀಯ ಮತ್ತು ಎಷ್ಟೋ ಹೊಡೆದಾಟಗಳಾಗುತ್ತವೆ. ಊರೇಂಬುದು ಹೊಲಸ್ಸಾಗಿ ಪರಿವರ್ತನೆಯಾಗುತ್ತದೆ. ಇಲ್ಲಿ ಬೆಂಕಿಗೆ ತುಪ್ಪ ಸುರಿದು ಪಡದಯ್ಯ ಊರನ್ನು ಬಿಟ್ಟು ಬೇರೆ ನೆಲೆಯನ್ನು ಕಂಡುಕೊಳ್ಳುತ್ತಾನೆ. ಬಾಪುಸಾಹೇಬ ತಮ್ಮ ಮಾವನ ಸಲಹೆಯಂತೆ ತನ್ನ ಊರನ್ನು ಸೇರುತ್ತಾನೆ. ಲಿಂಗಪ್ಪನು ಸಹ ಬೇರೆ ಕಡೆ ಹೋದರೆ ಇಲ್ಲಿ ಚಿಮನಾ ಊರಿನಲ್ಲಿ ಸಾಯುವ ಹಂತ ತಲುಪಿರುತ್ತಾಳೆ. ಆಚಾರ್ಯರ ಹೆಂಡತಿಯ ಪ್ರಾಣ ಪಕ್ಷಿ ಹಾರಿಹೋಗುತ್ತದೆ. ಆಚಾರ್ಯರು ಭಗವದ್ಗೀತೆಯ ಪಾರಾಯಣವನ್ನು ಆರಂಭಿಸುತ್ತಾರೆ. ಹೀಗೆ ಎಷ್ಟೋ ಅನಾಹುತಗಳು ಊರಿನಲ್ಲಾಗುತ್ತವೆ. ಎಷ್ಟೋ ದಿನಗಳ ತರುವಾಯ ದಾದಾ ತನ್ನ ಊರು ಪಾದಳ್ಳಿಗೆ ಬಂದಾಗ ತನ್ನ ಕಣ್ಣನ್ನೇ ನಂಬಲಾಗುವುದಿಲ್ಲ. ಆ ರೀತಿಯಲ್ಲಿ ಊರು ಬದಲಾಗಿತ್ತು. ಊರಿಗೆ ಕ್ಷಾಮ, ಜನರಿಗೆ ಸೋಂಕು, ಊರಿಗೆ ಪ್ರವಾಹ, ಆಹಾರದ ಬರ ಹೀಗೆ ನಾನಾವಿಧಗಳಲ್ಲಿ ಎಲ್ಲರೂ ಊರನ್ನು ತೊರೆದಿರುತ್ತಾರೆ. ಒಂದು ಕಾಲದಲ್ಲಿ ಜನರಿಂದ ಕೂಡಿ ಒಂದೇ ಮನೆಯಂತಾಗಿದ್ದ ಈ ಪಾದಳ್ಳಿ ಈಗ ಅಕ್ಷರಶಃ ಸ್ಮಶಾಣದಂತಿತ್ತು.
#ಮಸ್ತಕಬೆಳಗಿದಪುಸ್ತಕ ಪುಸ್ತಕ:ಗ್ರಾಮಾಯಣ ಲೇಖಕರು:ರಾವಬಹದ್ದೂರ ಪ್ರಕಾಶಕರು: ಅಂಕಿತ ಪುಸ್ತಕ ಬೆಂಗಳೂರು
ಭಾರತ ಹಳ್ಳಿಗಳ ದೇಶ. ಆದರೆ ಇಂದು ಬಹುತೇಕ ಹಳ್ಳಿಗಳು ಆಧುನಿಕತೆಗೆ ತೆರೆದುಕೊಂಡು ತನ್ನ ನೈಜ ಸೊಗಡನ್ನು ಕಳೆದುಕೊಳ್ಳುತ್ತಿವೆ. ಸುಮಾರು ಎಂಟು ದಶಕಗಳ ಹಿಂದೆ ಹಳ್ಳಿಗರ ಜೀವನ ಹೇಗಿದ್ದಿರಬಹುದು ಎಂಬ ಕಲ್ಪನೆಯೇ ನಮಗೆ ಕಷ್ಟವಾದೀತು.
ಈ ಕಾದಂಬರಿಯ ಹೆಸರೇ ಸೂಚಿಸುವಂತೆ ಇದು ಒಂದು ಗ್ರಾಮದ ಕಥೆ. ಅಂದಿನ ಕಾಲದ ಜನಜೀವನವನ್ನು ಪಾದಳ್ಳಿ ಎಂಬ ಗ್ರಾಮದಲ್ಲಿ ನಡೆಯುವ ಆಗುಹೋಗುಗಳ ಮೂಲಕ ಕಟ್ಟಿಕೊಡುತ್ತಾರೆ. ಗ್ರಾಮದ ಜಹಗೀರಿನಲ್ಲಿ ಉಂಟಾದ ಗೊಂದಲಗಳಿಂದ ಮೊದಲ್ಗೊಂಡು ಇಡೀ ಗ್ರಾಮವೇ ಪ್ರಳಯಕ್ಕೆ ತುತ್ತಾಗುವವರೆಗೆ ಕಥಾ ಹಂದರವು ಹರಡಿಕೊಂಡಿದೆ.
ಹಳ್ಳಿಗರ ಮುಗ್ಧತೆ,ನಂಬಿಕೆಗಳು ಹಾಗೂ ಅನಕ್ಷರತೆಯನ್ನು ಕೆಲವೇ ಕೆಲವು ಸ್ವಾರ್ಥಿಗಳು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿದ್ದ ಬಗೆಯನ್ನು ಯಥಾವತ್ತು ವಿವರಿಸಲಾಗಿದೆ. ಯಾವುದೇ ಒಂದು ಘಟನೆಗೆ ಅಥವಾ ವಿಚಾರಕ್ಕೆ ಊರಿಗೆ ಊರೇ ಸ್ಪಂದಿಸುವ ರೀತಿ ಮತ್ತು ಅದರಿಂದಾಗಿ ಉಂಟಾಗುವ ತಲ್ಲಣಗಳು,ಅದು ಜೀವನವನ್ನು ಪ್ರಭಾವಿಸುತ್ತದ್ದ ರೀತಿ ಬಹಳ ಆಶ್ಚರ್ಯವನ್ನುಂಟು ಮಾಡುತ್ತದೆ. ಒಳ ರಾಜಕೀಯ, ಬಣ ರಾಜಕೀಯ ನಮ್ಮ ಜೀವನದಲ್ಲಿ ಅಂದಿನಿಂದ ಹಾಸು ಹೊಕ್ಕಾಗಿರುವ ರೀತಿಯು ಖೇದವನ್ನುಂಟು ಮಾಡಿತು.
ಹಾಗೆಯೇ ಕಾಲರಾ ಪ್ಲೇಗ್ ಮುಂತಾದ ಮಾರಕ ರೋಗಗಳು ಇಡೀ ಊರನ್ನೇ ಕಾಡುತ್ತಿದ್ದ ರೀತಿ ಇಂದಿನ ಕೊರೋನಾ ವೈರಾಣು ಸೃಷ್ಟಿಸಿರುವ ವಾತಾವರಣಕ್ಕೆ ಹೋಲಿಸಬಹುದು. ವ್ಯತ್ಯಾಸ ಇಷ್ಟೇ ಅಂದು ಅಜ್ಞಾತ ಕಾರಣ ಇಂದು ಅರ್ಧ ಜ್ಞಾನ ಕಾರಣ!!!.
ಹಳ್ಳಿಯ ಜನಜೀವನದ ಮೇಲೆ ಬೆಳಕು ಚೆಲ್ಲುವ ಬಹು ಅಪರೂಪದ ಕಾದಂಬರಿ. ಒಂದೊಳ್ಳೆ ಓದಿನ ಅನುಭವ
ನೀವು ಫಾಸ್ಟ್ ಆಗಿ ಓದಿಸಿಕೊಂಡು ಹೋಗುವ ಧೀರ್ಘ ಕಾದಂಬರಿಗಳ ಅಭಿಮಾನಿಗಳಾಗಿದ್ದರೆ ಇದು ನಿಮಗೆ ಕಬ್ಬಿಣದ ಕಡಲೆಯಾಗಬಹುದು. ಪಾದಳ್ಳಿಯಲ್ಲಿ ದಿನನಿತ್ಯದ ಘಟನೆಗಳೇ ಈ ಕಾದಂಬರಿಯ ವಸ್ತು. ಊರಿನ ಒಳ ರಾಜಕೀಯ, ಹಸಿವು, ಜನ, ಶೈಲಿ, ಪದ್ದತಿ, ಸ್ಥಿತಿ, ಗತಿ, ಅವನತಿಗಳ ಕತೆಯಿದು. ನಿಮಗೆ 18ರ ಶತಮಾನದಲ್ಲಿ ಜನಜೀವನ ಹೆಂಗಿತ್ತು ಅಂಬ ಕುತೂಹಲ ಇದ್ರೆ ಇದನ್ನ ಓದಿ. ಕಾದಂಬರಿ ವೇಗವಾಗಿ ಓದಿಸಿಕೊಂಡು ಹೋ��ದಿದ್ದರೂ ಕಾದಂಬರಿ ತನಗೆ ಬೇಕಾದ ಸ್ಪೀಡನ್ನು ನಿಮ್ಮಿಂದ ತಗೊಳುತ್ತೆ. ಜಾಸ್ತಿ ಜಾಸ್ತಿ ಈ ಕಾದಂಬರಿಯ ಜೊತೆ ಕಳೀತಾ ಕಳೀತಾ ಹೋದಾಗೂ ಕಾದಂಬರಿ ಇಷ್ಟವಾಗುತ್ತ ಹೋಗುತ್ತೆ.