✍️ 12/8/19
ಕೆಲವೊಂದು ಕೃತಿಗಳನ್ನು ಓದಿದ ಮೇಲೆ.. ಇಷ್ಟು ದಿನ ಈ ಕೃತಿಯನ್ನು ಯಾಕೆ ಓದಲಿಲ್ಲ, ಮುಂಚೇನೇ ಓದಬೇಕಿತ್ತು ಅಂತ ಅನಿಸುತ್ತೆ. ಅಂತಹ ಒಂದು ಅಭಿಜಾತ ಕೃತಿ 'ತೇರು'.
ಧರಮನಟ್ಟಿ ವಿಟ್ಠಲ ದೇವರ ಗುಡಿಯ ತೇರು ಈ ಕೃತಿಯ ಪ್ರಧಾನ ಬಿಂದು. ಆಜು-ಬಾಜು 60-70ರ ದಶಕದ ಪರಿಸರದಲ್ಲಿ ಆರಂಭವಾಗುತ್ತದೆ ಕಾದಂಬರಿ.
ಪತ್ರಕರ್ತ ಬೆಟಗೇರಿಯವರು ಯಾವುದೊ ಕೆಲಸದ ವಿಚಾರವಾಗಿ ಬೆಳಗಾವಿಗೆ ಬಂದಾಗ ಸ್ವಾಂವಪ್ಪ ಎಂಬ ವ್ಯಕ್ತಿಯು ಹಿಂದಿನ ಬಾರಿ ಭೇಟಿಯಾದ ನೆನಪಿನಿಂದ ಇವರನ್ನು ಗುರುತಿಸಿ, ಮಾತನಾಡಿಸುತ್ತಾ ತನ್ನೂರಾದ ಧರಮನಟ್ಟಿಯ ತೇರಿನ ಕಥೆಯನ್ನು ಅವರಿಗೆ ತಿಳಿಸಲು ಊರಿಗೆ ಕರೆದೊಯ್ಯುತ್ತಾನೆ.
#ಭಾಗ1
ತೇರನ್ನು ಎಳೆಯುವ ಹಿಂದಿನ ದಿನ, ಗೊಂದಲಿಗ ಎಂಬ ಜಾತಿಯವರು ತೇರಿನ ಕತೆಯನ್ನು ಜಾನಪದ ಗೀತೆಯ ಮುಖಾಂತರ ಸವಿಸ್ತಾರವಾಗಿ ಹೇಳುತ್ತಾರೆ. ಆ ಜಾನಪದವನ್ನು ಓದುವುದೇ ಒಂದು ಖುಷಿ.
ನೂರೈವತ್ತು ವರ್ಷಗಳ ಹಿಂದೆ ದೇಸಗತಿಯ ಸೀಮೆಯನ್ನು ಸ್ಥಾಪಿಸಿದ ದೇಸಾಯಿಯವರು, ಧರಮನಟ್ಟಿಯ ಗ್ರಾಮದಲ್ಲಿ ವಿಠ್ಠಲ ದೇವರಿಗೆಂದು ಈ ತೇರನ್ನು ಕಟ್ಟಿಸುತ್ತಾರೆ. ತೇರನ್ನು ಕಟ್ಟಿದ ಮೇಲೆ, ಒಂದು ಮಹೂರ್ತದಲ್ಲಿ ಅದನ್ನು ಎಳೆಯಲು ಹೊರಟಾಗ ಅದು ಒಂದಿಂಚು ಅಲುಗಾಡುವುದಿಲ್ಲ. ಶಾಸ್ತ್ರವನ್ನು ಕೇಳಿದಾಗ ಒಂದು ನರಬಲಿ ಕೊಟ್ಟರೆ ಅದು ಚಲಿಸುತ್ತದೆ ಎಂದು ತಿಳಿಯುತ್ತದೆ. ನರಬಲಿಯನ್ನು ಹುಡುಕೋದಕ್ಕೆ ಹೊರಟ ಡಣ್ಣಾನಾಯಕನಿಗೆ ಬಲಿ ಎಲ್ಲೂ ಸಿಗುವುದಿಲ್ಲ. ಅವನ ಸಂಕಟ ಕಂಡು ಅವನ ಮಡದಿ ತಾನು ಹುಡುಕಿ ತರುತ್ತೇನೆ ಎಂದು ಹೊರಡುತ್ತಾಳೆ. ಗೊಂಬೆರಾಮ ಜಾತಿಯ ದ್ಯಾವಯ್ಯನನ್ನು ಒಪ್ಪಿಸಿ, ಅವನ ಮಗನನ್ನು ಬಲಿಕೊಡುವುದೆಂದು ನಿರ್ಧಾರವಾಗುತ್ತದೆ. ಆ ಬಲಿಗಾಗಿ ದ್ಯಾವಯ್ಯ ಮತ್ತು ಅವನ ಮುಂದಿನ ತಲೆಮಾರಿಗಾಗಿ ಕಳ್ಳಿಗುದ್ದಿ ಎಂಬ ಗ್ರಾಮದಲ್ಲಿ ಜಮೀನು ನೀಡುವುದೆಂದು ದೇಸಾಯರು ಅಪ್ಪಣೆ ನೀಡುತ್ತಾರೆ. ನವಮಿಯಂದು ದ್ಯಾವಯ್ಯನ ಮಗ ತೇರಿನ ಚಕ್ರಕ್ಕೆ ಬಲಿಯಾಗುವುದರೊಂದಿಗೆ ತೇರು ಚಲಿಸುತ್ತದೆ. ಇನ್ನು ಪ್ರತಿ ರಾಮನವಮಿಯಂದು ತೇರಿನ ಉತ್ಸವ ನಡೆಯುವುದೆಂದು.. ದ್ಯಾವಯ್ಯ ನ ವಂಶಸ್ಥರು ಬಂದು ರಕ್ತ ತಿಲಕವನ್ನು ತೇರಿಗೆ ಹಚ್ಚುವುದೆಂದು ನಿರ್ಧರಿತವಾಗುತ್ತದೆ. ಇದು ಜಾನಪದ ಗೀತೆಯ ಸಾರಾಂಶ.
ಅಲ್ಲಿಂದ ದ್ಯಾವಯ್ಯ, ತೇರಿನ ಉತ್ಸವ ಇನ್ನೂ ಹದಿನೈದು ದಿನ ಮುಂಚೆಯೇ ಇರುವಂತೆಯೇ, ಒಂದು ವಿಶಿಷ್ಟ ಕಟ್ಟುನಿಟ್ಟಿನ ವ್ರತವನ್ನು ಆಚರಿಸುತ್ತಾ ನವಮಿಗಿಂತ ಎರಡು ದಿನದ ಮುಂಚೆ ಧರಮನಟ್ಟಿಗೆ ಬಂದು, ನವಮಿಯಂದು ರಕ್ತದ ತಿಲಕವನ್ನು ಹಚ್ಚುವುದನ್ನು ರೂಢಿಸಿಕೊಳ್ಳುತ್ತಾನೆ. ಅವನ ಈ ವಿಶಿಷ್ಟ ಆಚರಣೆಯನ್ನು ಆತನ ಮುಂದಿನ ತಲೆಮಾರು ಮಾಡುವುದು ಕರ್ತವ್ಯವೆಂದು ಅವನ ಮಡದಿಗೆ ಮನನ ಮಾಡಿಸಿ ಆಚರಣೆ ಮುಂದುವರಿಸುತ್ತಾನೆ.
ಇಷ್ಟು ಕಥೆ ಕೇಳಿದ ಬೆಟಗೇರಿಯವರು ದ್ಯಾವಯ್ಯನ ವಂಶಸ್ಥರನ್ನು ಕಳ್ಳಿಗುದ್ಧಿಗೆ ಹೋಗಿ ನೋಡಿಕೊಂಡು ಬೆಂಗಳೂರಿಗೆ ಹಿಂತಿರುಗುತ್ತಾರೆ.
#ಭಾಗ2
ಧರಮನಟ್ಟಿಗೆ ಹೋಗಿ ಏಳೆಂಟು ವರ್ಷಗಳೇ ಕಳೆದು ಹೋಗಿರುತ್ತದೆ. ಒಂದು ದಿನ ಇದ್ದಕ್ಕಿದ್ದಂತೆ ಒಬ್ಬ ಯುವಕನು ಬೆಟಗೇರಿಯವರ ಮನೆಗೆ ಬರುತ್ತಾನೆ. ತಕ್ಷಣ ಅವನ ಗುರುತು ಹತ್ತುವುದಿಲ್ಲ. ಅವನೆ ತನ್ನ ಪರಿಚಯ ಹೇಳಿಕೊಳ್ಳುತ್ತಾ, ತಾನು ಕಳ್ಳಿಗುದ್ದಿಯ ದ್ಯಾವಯ್ಯ ವಂಶಸ್ಥರಾದ ಹುಡುಗ ದ್ಯಾಮಪ್ಪನೆಂದು, ಜೆಪಿ ಚಳುವಳಿಯ ಭಾಗವಾಗಿ ಬಂದು ಪೊಲೀಸರ ಅತಿಥಿಯಾಗಿ ಫಜೀತಿ ಪಟ್ಟು, ತಮ್ಮ ಪರಿಚಯವಿದೆ ಎಂದೊಡನೆ ಬಿಟ್ಟುಬಿಟ್ಟಾಗಿಯೂ, ಅಲ್ಲಿಂದ ತಮ್ಮ ವಿಳಾಸವನ್ನು ಹೇಗೋ ಪತ್ತೆ ಮಾಡಿ ಬಂದೆನೆಂದು ಹೇಳುತ್ತಾನೆ.
ಅವನನ್ನು ಉಪಚರಿಸಿ, ಹೊರಗಡೆ ಸುತ್ತಾಡಲು ಕರೆದೊಯ್ಯುತ್ತಾರೆ. ತೇರಿನ ವಿಷಯ, ಅವನ ವಂಶದ ರಕ್ತ ತಿಲಕದ ವಿಷಯ ಎತ್ತಿದಾಗ.. ತನ್ನ ತಂದೆಯವರೇ ಅದನ್ನು ಸರಿಯಾಗಿ ಮಾಡುತ್ತಿಲ್ಲ, ಆ ಕಟ್ಟುನಿಟ್ಟಿನ ವೃತದಿಂದ ಪ್ರಯೋಜನವೇನು? ಎಂದು ಸ್ವಲ್ಪ ಖಾರವಾಗಿ, ಉದಾಸೀನವಾಗಿಯೂ ಮಾತನಾಡುತ್ತಾನೆ. ಯಾಕೋ ಅವನ ಮನೆ ಸ್ಥಿತಿ ಮತ್ತು ಮನಸ್ಥಿತಿ ಸರಿಯಿಲ್ಲವೆಂದು ಬೆಟಗೇರಿಯವರು ಭಾವಿಸುತ್ತಾರೆ. ಬೇಡವೆಂದರೂ ಅಂದು ರಾತ್ರಿಯೇ ದ್ಯಾವಪ್ಪ ಊರಿಗೆ ಹೋಗುತ್ತಾನೆ.
#ಭಾಗ3
ಮತ್ತೆ ಏಳೆಂಟು ವರ್ಷಗಳು ಕಳೆದ ಮೇಲೆ ಬೆಟಗೇರಿಯವರಿಗೆ
ಸ್ವಾಂವಜ್ಜನಿಂದ ಪತ್ರ ಬರುತ್ತದೆ. ಈ ವರ್ಷಕ್ಕೆ, ನೂರೈವತ್ತನೇ ವರ್ಷದ ತೇರಿನ ಉತ್ಸವ ನಡೆಯುತ್ತದೆ, ತಾವು ಕುಟುಂಬ ಸಮೇತರಾಗಿ ಬರಬೇಕೆಂದು ವಿನಂತಿಸಿರುತ್ತಾರೆ.
ಹೆಂಡತಿಯ ಒತ್ತಾಯದ ಮೇರೆಗೆ, ತನ್ನೂರು ಬೆಟಗೇರಿಯನ್ನು ನೋಡುವ ಸಲುವಾಗಿ ಕುಟುಂಬ ಸಮೇತ ಧರಮನಟ್ಟಿಗೆ ಆಗಮಿಸುತ್ತಾರೆ.
ಧರಮನಟ್ಟಿಯ ಆಚಾರ ವಿಚಾರಗಳು, ಜನರ ಮನಸ್ಥಿತಿ ಎಲ್ಲವೂ ಬದಲಾಗಿರುತ್ತದೆ. ದ್ಯಾವಪ್ಪನ ಬಗ್ಗೆ ವಿಚಾರಿಸಿದಾಗ.. ಅವನು ಈಗ ಉಡಾಳನಾಗಿದ್ದಾನೆ. ಒಂದೆರಡು ವರ್ಷ ಕಟ್ಟುನಿಟ್ಟಿನ ವೃತ ಮಾಡಿ ತೇರಿನ ಉತ್ಸವದಲ್ಲಿ ಭಾಗಿಯಾಗಿದ್ದ, ಈಗಲೂ ಹದಿನೈದು ದಿನ ತನ್ನ ಮನೆಯಿಂದ ದೂರವಿದ್ದರೂ, ಎಲ್ಲಾ ಕಟ್ಟುಪಾಡುಗಳನ್ನು ಬಿಟ್ಟು, ಉದಗಟ್ಟಿ ಎಂಬ ಊರಲ್ಲಿ ಯಾವುದೋ ಹೆಂಗಸಿನ ಸಹವಾಸಕ್ಕೆ ಬಿದ್ದು ಹಾಳಾಗಿದ್ದಾನೆ. ಎಂದು ಸ್ವಾಂವಜ್ಜ ಹೇಳುತ್ತಾರೆ. ಅದನ್ನು ಬೆಟಗೇರಿಯವರಿಗೆ ನಂಬಲಾಗಲಿಲ್ಲ. ದ್ಯಾವಪ್ಪನನ್ನು ಮಾತನಾಡಿಸಬೇಕೆಂದುಕೊಳ್ಳುತ್ತಾರೆ.
ಆ ವರ್ಷದ ತೇರಿನ ಉತ್ಸವದ ಮುಂಚಿನ ಆಚರಣೆಗಳು ನಡೆಯುತ್ತಿರುತ್ತವೆ. ನವಮಿಗಿಂತ ಎರಡು ದಿನದ ಮುಂಚೆ ಊರವರೆಲ್ಲ ದ್ಯಾವಪ್ಪನನ್ನು ಕಾಯುತ್ತಿರುತ್ತಾರೆ. ಆದರೆ ಅಂದು ಅವನು ಬರುವುದಿಲ್ಲ. ಊರಿನ ಮಂದಿಯೆಲ್ಲ ತಲೆಗೊಂದರಂತೆ ಕೆಟ್ಟದಾಗಿ ಅವನ ಬಗ್ಗೆ ಮಾತಾಡುತ್ತಾರೆ.
ಮಾರನೇ ದಿನ ಅವನನ್ನು ಹುಡುಕಿಕೊಂಡು ಬರಲು ಯುವಕರಿಬ್ಬರನ್ನು ಊರವರು ಕಳುಹಿಸುತ್ತಾರೆ. ಯುವಕರು ಅವನನ್ನು ಅರಸುತ್ತಾ ಉದಗಟ್ಟಿಗೆ ಬಂದು ವಿಚಾರಿಸಿ, ಕೊನೆಗೆ ಆ ಹೆಂಗಸಿನ ಮನೆಗೆ ಬಂದಾಗ.. ಆ ಹೆಂಗಸಿನ ಅತ್ತೆಯು ದ್ಯಾವಪ್ಪನ ಒಳ್ಳೆಯತನ, ಗುಣ, ಉಪಕಾರ ಮನೋಭಾವ, ಅವಳ ವಿಧವೆ ಸೊಸೆಯನ್ನು ಮದುವೆಯಾಗುತ್ತೇನೆ ಎಂಬ ಉದಾರ ಮನಸ್ಸನ್ನು, ಊರವರು.. ಬೇರೆಯವರು ಅವನ ಬಗ್ಗೆ ತಿಳಿದುಕೊಂಡಿರುವ ತಪ್ಪು ಕಲ್ಪನೆಗಳನ್ನು ತಿಳಿಸುತ್ತಾಳೆ.
ಅವಳ ಮಾತನ್ನೇ ಆ ಯುವಕರು ಬಂದು ಊರಿಗೆ ಹೇಳಿದಾಗ, ಎಲ್ಲರೂ ಸೋಜಿಗ ಪಡುತ್ತಾರೆ. ಆ ದಿನವೂ ಅವನು ಸಿಗೋದಿಲ್ಲ.
ಮರುದಿನ ವಿಟ್ಠಲ ದೇವರ ಗುಡಿಯ ಕಳ್ಳತನವಾಗುತ್ತದೆ. ಊರವರಿಗೆ, ಹಿರಿಯ ಸ್ವಾಂವಜ್ಜನಿಗೆ ಬರಸಿಡಿಲು ಬಡಿದಂತಾಗುತ್ತದೆ. ಎಲ್ಲರೂ ದ್ಯಾವಪ್ಪನ ಮೇಲೆ ಅನುಮಾನ ಪಡುತ್ತಾರೆ. ಪೊಲೀಸ್ ಕಂಪ್ಲೇಂಟ್ ಕೂಡ ಕೊಡುತ್ತಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಲು ಕೆಲವರೂ ಹೊರಡುತ್ತಾರೆ. ಸ್ವಾಂವಜ್ಜನನ್ನು ನಿಂದಿಸುತ್ತಾರೆ. ಆ ಅವಮಾನದಿಂದ ಸ್ವಾಂವಜ್ಜ ಜರ್ಜರಿತ ರಾಗುತ್ತಾರೆ. ಅದೇ ಸಮಯಕ್ಕೆ ಬೆಟಗೇರಿಯವರು ಬೆಂಗಳೂರಿಗೆ ಹಿಂತಿರುಗುತ್ತಾರೆ.
#ಭಾಗ4
ಮತ್ತೆ ನಾಲ್ಕೈದು ವರ್ಷಗಳು ಕಳೆದ ನಂತರ ಬೆಟಗೇರಿಯವರು ರಿಟೈರ್ಡ್ ಆಗುತ್ತಾರೆ. ತಮ್ಮ ಉಳಿದ ಜೀವನವನ್ನು ಊರಲ್ಲಿ ಕಳೆಯಲು ನಿರ್ಧರಿಸಿ ಊರಿಗೆ ಬಂದು ನೆಲೆಸುತ್ತಾರೆ.
ಆ ಸಮಯದಲ್ಲಿ ಧರಮನಟ್ಟಿಯ ತೇರು, ಸ್ವಾಂವಜ್ಜ, ದ್ಯಾವಪ್ಪರ ನೆನಪಾಗಿ ಅವರನ್ನು ಕಾಣಲು ಹೊರಡುತ್ತಾರೆ.
ಹೊರಟಾಗ, ಸ್ವಾಂವಜ್ಜನ.. ಆ ಆಘಾತದ ನಂತರದ ಬದುಕು, ದ್ಯಾವಪ್ಪನ ಹುಡುಕಾಟ.. ಆ ಹುಡುಕಾಟದಲ್ಲಿ ಕಾಣಿಸಿಕೊಳ್ಳುವ ಅಗೋಚರ ಸತ್ಯಗಳು, ಆ ಹೆಂಗಸಿನಿಂದ ತಿಳಿಯುವ ದ್ಯಾವಪ್ಪನ ಶ್ರೇಷ್ಠತೆ. ಹೀಗೆ ಎಷ್ಟೋ ವಿಷಯಗಳು ಸ್ಪಷ್ಟವಾಗುತ್ತಾ ಹೋಗುವುದರೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.
ಬೆಟಗೇರಿ, ಸ್ವಾಂವಜ್ಜ, ದ್ಯಾವಪ್ಪ, ಧರಮನಟ್ಟಿ ಗ್ರಾಮ, ವಿಠಲದೇವರ ಗುಡಿ, ತೇರಿನ ಹಿಂದಿನ ಕಥೆ ಹೇಳುವ ಜಾನಪದ ಗೀತೆ, ಪದ್ದತಿಗಳು ಕಾಲಕಾಲಕ್ಕೆ ಬದಲಾಗುವ ಪರಿ, ಪುಸ್ತಕದಲ್ಲಿ ಬಳಸಿರುವ ರೇಖಾಚಿತ್ರಗಳು, ಎಚ್ ಎಸ್ ವೆಂಕಟೇಶಮೂರ್ತಿಯವರು ರಚಿಸಿರುವ ತೇರಿನ ಕವನ, ತೇರು ಮತ್ತು ಉತ್ತರ ಕರ್ನಾಟಕದ ಭಾಷೆ.. ಎಲ್ಲವೂ ಓದುಗನ ಮನದಲ್ಲಿ ಉಳಿಯುತ್ತವೆ.
ಇವೆಲ್ಲವನ್ನು ಸೇರಿಸಿ ತೇರನ್ನು ಕಟ್ಟಿಕೊಟ್ಟಿರುವ ರಾಘವೇಂದ್ರ ಪಾಟೀಲರಿಗೆ ದೊಡ್ಡ ನಮನ.