#ಪರಿಚಯ_೧೧_೨೦೨೬ ಕೃತಿ: ಅಪ್ಪನ ನೀಲಿ ಕಣ್ಣು ಲೇಖಕರು: ಗೋಪಾಲಕೃಷ್ಣ ಕುಂಟಿನಿ ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಯಾವುದೇ ಚೌಕಟ್ಟಿನಲ್ಲಿ ಕೂರದೆ ಸೀಮೋಲ್ಲಂಘನ ಮಾಡುವ ಕತೆಗಳು. ಇಲ್ಲಿರುವ ಕತೆಗಳನ್ನು ಓದಿ ಮುಗಿಸಿದಾಗ ಒಂದು ಬಗೆಯ ನೀರವ ಮೌನ ಆವರಿಸಿಕೊಳ್ಳುತ್ತದೆ. ಈ ಮೌನದೊಳಗಡೆಯಿಂದ ಕತೆಗಳು ಮತ್ತೆ ಪ್ರಾರಂಭವಾಗಿ ಪಾತ್ರಗಳು ಓದುಗರ ಮನಃಪಟಲದಲ್ಲಿ ಮತ್ತೆ ಅರಳುತ್ತವೆ. ಒಂದು ಬಗೆಯಲ್ಲಿ ಪ್ರಾರಂಭವಾಗಿ ಕಲಸುಮೇಲೋಗರದಂತೆ ತೆರೆದುಕೊಳ್ಳುತ್ತಾ ಸಾಗುವ ಕತೆಗಳು,ಇನ್ನೇನು ವಿಸ್ತರಿಸುತ್ತಾ ಹೋಗುತ್ತದೆ ಅನ್ನುವಷ್ಟರಲ್ಲಿ ಮುಗಿದೇ ಹೋಗುತ್ತವೆ. ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಲೇಖಕರು ಕಟ್ಟಿಕೊಡುವ ಕತೆಯ ಸಣ್ಣಪುಟ್ಟ ವಿವರಗಳು ಗಾಢವಾಗಿದ್ದು ಓದುಗರನ್ನು ನೇರವಾಗಿ ಕತೆಯು ಒಳಗಡೆ ಸೆಳೆದುಕೊಳ್ಳಲು ಯಶಸ್ವಿಯಾಗಿವೆ. ಈ ಕೆಳಗಿನ ಸಾಲುಗಳನ್ನು ಗಮನಿಸಿದರೆ, “ಅಸ್ತವ್ಯಸ್ತವಾಗಿದ್ದ ಹಾಸಿಗೆಯಡಿಯಲ್ಲಿ ಸಿಕ್ಕ ಕಾಗದದಲ್ಲಿ ನೀಲಿ ಶಾಯಿಯಲ್ಲಿ ಕತೆಯನ್ನು ಬರೆಯಲಾಗಿತ್ತು.” “ಅವನು ಅರ್ಧ ಕುಡಿದಿದ್ದ ಜ್ಯೂಸ್ ನ ಸ್ಟ್ರಾದ ಬಣ್ಣ ನೋಡಿದಳು... ನೇರಳೆ... ತನ್ನ ಸ್ಟ್ರಾದ ಬಣ್ಣ ನೋಡಿದಳು... ಪಿಂಕ್... ಉಫ್... ಎಂದು ನಿಟ್ಟುಸಿರು ಹೊರಬಿತ್ತು.” ಈ ತರಹದ ವಾಕ್ಯಗಳು ಕತೆಯ ಅಂದದ ಜೊತೆಗೆ ಗಾಢತೆಯನ್ನು ಹೆಚ್ಚಿಸುತ್ತವೆ.
“ನದಿಯು ಮಾತನಾಡಲಿಲ್ಲ” ಎಂಬ ಕತೆಯನ್ನು ತೆಗೆದುಕೊಂಡರೆ, ಕುಮಾರಧಾರಾ ನದಿಗೆ ಸೇತುವೆಯೊಂದನ್ನು ಕಟ್ಟುವ ಪ್ರಸ್ತಾವನೆಯ ಮೂಲಕ ಪ್ರಾರಂಭವಾಗಿ, ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯನಲ್ಲಿರುವ ಕ್ರೌರ್ಯದ ಸಣ್ಣದಾದ ಎಳೆಯೊಂದನ್ನು ತೆರೆದಿಡುತ್ತದೆ. ನದಿಯ ಮೇಲೆ ಸೇತುವೆಯೊಂದು ಬಂದಾಗ ಉಂಟಾಗುವ ಭಾವನಾತ್ಮಕ ಅಂತರವನ್ನು ಈ ಕತೆಯು ಚೆನ್ನಾಗಿ ಹಿಡಿದಿಟ್ಟಿದೆ. ಇದರ ಜೊತೆಗೆ ವಿಪರೀತವಾಗಿ ಮಳೆ ಸುರಿದು ನದಿಯ ಪಾತ್ರವೂ ಬದಲಾಗಿ ಹೋಗುವುದು, ಇದುವರೆಗೆ ಜನಜೀವನದಲ್ಲಿ ಹಾಸುಹೊಕ್ಕಾಗಿದ್ದ ನದಿಯು ವಹಿಸುತ್ತಿದ್ದ ಪಾತ್ರವು ಬದಲಾದ ಸಂಕೇತದಂತೆ ಕಂಡಿತು. “ದೇವರು ರಜಾ ಹಾಕಿದ” ಕತೆಯಲ್ಲಿ ವರುಷಗಳ ಹಿಂದೆ ವಿದೇಶಕ್ಕೆ ಹೋಗಿದ್ದ ಇನಿಯನ ನಿರೀಕ್ಷೆಯಲ್ಲಿ ಬಣ್ಣಬಣ್ಣದ ಕನಸುಗಳನ್ನು ಕಟ್ಟಿರುವ ಪ್ರೇಯಸಿಯೊಬ್ಬಳ ಕತೆ. ಕನಸು ಕಾಣುತ್ತಾ ಕಾಣುತ್ತಾ ಕನಸೊಂದು ಕನಸಾಗಿಯೇ ಉಳಿಯುವ ಕತೆ. ವಿಮಾನ ಅಪಘಾತವಾಗಿ ಎಲ್ಲಾ ಪ್ರಯಾಣಿಕರು ಸತ್ತು, ಅವರ ಜೊತೆಗೆ ಅವರ ಬರುವಿಕೆಗಾಗಿ ಕಾದಿದ್ದದವರ ಕನಸುಗಳು ಸತ್ತು ಹೋಗುವ, ಒಂದು ಕ್ಷಣದಲ್ಲಿ “ದೇವರ ರಜಾ” ಮತ್ತೆಂದೂ ಮರಳಲಾರದಂತಹ ವಿಪತ್ತಿಗೆ ಎದುರಾಗುವ ಅನಾಹುತದ ದೃಶ್ಯವನ್ನು ಚಿತ್ರಿಸಿದೆ.
ಒಟ್ಟಿನಲ್ಲಿ ಒಂದು ವಿಭಿನ್ನವಾದ ಕತೆಗಳ ಕಟ್ಟು. ಆದರೆ ಕೆಲವೊಂದು ಕತೆಗಳು ಒಳಕ್ಕಿಳಿಯದೆ ಕಾಡಿಸುತ್ತವೆ.