'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಅವರು ಬರೆದ 'ನಾಗರಹಾವು' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು. ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಏಪ್ರಿಲ್ ೧೦, ೧೯೮೪ರಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ 'ವರಲಕ್ಷ್ಮಿ ನರ್ಸಿಂಗ್ ಹೋಂ'ನಲ್ಲಿ ನಿಧನ ಹೊಂದಿದರು.
ವಿಜಯೋತ್ಸವದ ಮೆಹೆರ್‌ಬಾನುಳಿಗೆ ಸೋತವರು ಬಹಳ ಕಡಿಮೆ ಮಂದಿಯಿರಬೇಕು! ಆ ರೀತಿಯ ಒಂದು ಮಾಂತ್ರಿಕ ಪಾತ್ರದ ಬಗ್ಗೆ ಓದಲು ಉತ್ಸುಕನಾಗಿ ಈ ಪುಸ್ತದ ಓದಲು ಶುರುವಿಟ್ಟೆ..!!
ದುರ್ಗದ ಸರಣಿಯ ಆರನೇ ಪುಸ್ತಕವಿದು. ಕಂಬನಿಯ ಕುಯಿಲು, ರಕ್ತರಾತ್ರಿ, ತಿರುಗುಬಾಣ, ಹೊಸಹಗಲು ಮತ್ತು ವಿಜಯೋತ್ಸವ ಕಾದಂಬರಿಗಳೆಲ್ಲವೂ ಒಂದು ಮಾರ್ಗದಲ್ಲಿ ಚಲಿಸಿದವು. ರಾಜ್ಯದಾಹ ಭರಮಣ್ಣ ನಾಯಕನ ರಾಜ್ಯಾಡಳಿತದಲ್ಲಿ ಬರುವ ಆಂತರಿಕ ಕಲಹದ ಕುರಿತು ಇರಬಹುದು ಎಂದುಕೊಂಡು ಪುಸ್ತಕವನ್ನು ತೆರೆದೆ. ತ.ರಾ.ಸುಬ್ಭರಾಯರು ಇಲ್ಲಿಯೂ ಆಶ್ಚರ್ಯ ಪಡಿಸುವಲ್ಲಿ ವಿಫಲರಾಗಲಿಲ್ಲ. ಪುನಃ ಸೋತೆ, ಪುನಃ ಶರಣಾದೆ. ಪುನಃ ಹೇಳುವೆ. ಕನ್ನಡ ಕಲಿಯಬೇಕೆ ಶ್ರೀಯುತರ ಕೃತಿಗಳನ್ನು ಓದಿ. ಈಗಲೂ ಹೊಸತೆನಿಸುವ ಎಂದಿಗೂ ಹಳತಾಗದ ಅದ್ಭುತ ಭಾಷಾಬಳಕೆಯಿದೆ.
ಸಿನಿಮಾಗಳಲ್ಲಿ ಸಿಕ್ವೆಲ್ ಮತ್ತು ಪ್ರಿಕ್ವೆಲ್ಲುಗಳು ಸರ್ವೇಸಾಮಾನ್ಯ. ಈಗಿನ ಕೆಲವು ಪುಸ್ತಕಗಳಲ್ಲೂ ಈ ರೀತಿಯ ಪ್ರಯತ್ನಗಳು ನಡೆದಿರಬಹುದು. ಆದರೆ ತ.ರಾ.ಸುರವರು ಇಂತಹ ಒಂದು ಪ್ರಯತ್ನವನ್ನು ದಶಕಗಳ ಹಿಂದೆಯೇ ಮಾಡಿದ್ದರು ಎಂಬುದು ಗಮನಾರ್ಹ. ಕಂಬನಿಯ ಕುಯಿಲು ಮತ್ತು ರಕ್ತರಾತ್ರಿ ಪುಸ್ತಕಗಳ ನಡುವೆ ಒಂದು ಹೇಳಿರದ ಕಥೆಯಿದೆ. ಅದನ್ನು ಓದುಗನ ನಿಲುವಿಗೆ ಅಷ್ಟು ವರ್ಷಗಳ ಕಾಲ ಬಿಟ್ಟು ಕೊನೆಗೊಂದು ದಿನ ರಾಜ್ಯದಾಹ ಪುಸ್ತಕದ ಮೂಲಕ ಆ ಒಂದು ಸೇತುವೆಯನ್ನು ಪೂರ್ಣಗೊಳಿಸಿದ್ದಾರೆ.
ಪುಸ್ತಕದ ಆರಂಭ ಕಂಬನಿಯ ಕುಯಿಲಿನ ಅಂತ್ಯದಿಂದ ಶುರುವಾಗಿದೆ. ಮುದ್ದಣ್ಣ, ಗಿರಿಜೆ, ಕಸ್ತೂರಿ ನಾಯಕ, ವೀರನಾಯಕ, ದಳವಾಯಿ ದೇಸಣ್ಣ, ಭುವನಪ್ಪ ಮತ್ತು ಮುಂತಾದ ಪಾತ್ರಗಳು ಪುಸ್ತಕದಲ್ಲಿ ಮತ್ತೆ ಬರುವುದು ಮತ್ತೆ ಹಿಂದಿನ ಪುಸ್ತಕಗಳನ್ನು ಮೆಲುಕು ಹಾಕಿಸುವುದರಲ್ಲಿ ಸೋತಿಲ್ಲ. ಅದರಲ್ಲೂ ಗಿರಿಜೆಯ ಪಾತ್ರ ರಕ್ತರಾತ್ರಿ ಮತ್ತು ತಿರುಗುಬಾಣ ಕಾದಂಬರಿಯಲ್ಲಿ ಏಕೆ ಅಷ್ಟು ಉಗ್ರವಾಯಿತು ಎಂಬ ಪ್ರಶ್ನೆಗಳಿಗೂ ಉತ್ತರವಿದೆ.
ಮುದ್ದಣ್ಣನ ಕುರಿತು ಹುಟ್ಟುವ ಹೇಯಭಾವ ಒಂದು ಚೂರು ಕಡಿಮೆಯಾಗಬಹುದು. ಮುದ್ದಣ್ಣನ ವರ್ತನೆಗೆ ಕೇವಲ ಅಧಿಕಾರದ ಆಸೆಬಾಕತನ ಒಂದೇ ಕಾರಣವಾಗಿರಲಿಲ್ಲ. ಬೇರೆ ಕಾರಣಗಳೂ ಇದ್ದವು. ಹೇಯಭಾವ ಮತ್ತಷ್ಟು ಹೆಚ್ಚಾಗಿ ಛೀ ಮುದ್ದಣ್ಣ ಎಂದು ಅನಿಸಲೂಬಹುದು. ಉತ್ತರ ಪುಸ್ತಕದಲ್ಲಿದೆ. ರಕ್ತರಾತ್ರಿಯ ಆರಂಭದಲ್ಲೇ ಅಂತ್ಯವಾಗುವ ಚಿಕ್ಕಣ್ಣನಾಯಕನ ಆಳ್ವಿಕೆಯ ಬಗ್ಗೆ ಈ ಹಿಂದಿನ ಪುಸ್ತಕಗಳಲ್ಲಿರದ ವಿವರಣೆ ರಾಜ್ಯದಾಹದಲ್ಲಿದೆ.
ಮುನ್ನುಡಿ ಬೆನ್ನುಡಿ ಎಲ್ಲವೂ ಸೇರಿ ಕೇವಲ ೧೨೦ ಪುಟಗಳಿರುವ ಪುಸ್ತಕವು ಕಳೆದುಹೋಗಿದ್ದ ಕೊಂಡಿಯನ್ನು ಬೆಸೆದು ದುರ್ಗದ ಕಥೆಯ ಓಘವನ್ನು ಇನ್ನಷ್ಟು ರೋಚಕವಾಗಿಸಿದೆ. ಹೇಳಲು ಹೆಚ್ಚು ಅವಕಾಶವನ್ನೂ ನೀಡದಷ್ಟು ಸೂಕ್ಷ್ಮವಾಗಿ ಕಥೆಯನ್ನು ಹೇಳಿದ್ದಾರೆ. ಆಧುನಿಕ ಕನ್ನಡದ ಗದ್ಯಶಿಲ್ಪಿ ಎಂದು ಈ ಲೇಖಕರನ್ನು ಕರೆದವರಿಗೊಂದಷ್ಟು ಪ್ರಣಾಮ ಹೇಳುತಾ...
ಎಂದಿನಂತೆ ಈ ಪುಸ್ತಕವನ್ನು ನೀವು ಓದಿದ್ದಲ್ಲಿ ನಿಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಳ್ಳಿ.
ರಾಜ್ಯದಾಹ - ಇದು ತರಾಸು ವಿರಚಿತ ಚಿತ್ರದುರ್ಗದ ಇತಿಹಾಸದ ಸರಣಿಯ ಆರನೆಯ ಪುಸ್ತಕ. ಕಂಬನಿಯ ಕುಯಿಲು , ರಕ್ತ ರಾತ್ರಿ ಕಾದಂಬರಿಗಳ ನಡುವಿನ ಕಾಲಘಟ್ಟದಲ್ಲಿ ದುರ್ಗವನ್ನು ಆಳಿದ ಚಿಕ್ಕಣ್ಣ ನಾಯಕರ ಜೀವನಕ್ಕೆ ಸಂಭಂದಿಸಿದುದು. . ತುಂಬಿದ ಓಲಗದಲ್ಲಿ ಓಬಣ್ಣ ನಾಯಕರ ಹತ್ಯೆಯ ನಂತರ ಅಧಿಕಾರಕ್ಕೆ ಬಂದ ಚಿಕ್ಕಣ್ಣ ನಾಯಕರು ದಳವಾಯಿ ಮುದ್ದಣ್ಣ ನ ಕೈಗೊಂಬೆಯಾಗಿ ಅಧಿಕಾರ ನಡೆಸುತ್ತಾರೆ. ಒಮ್ಮೆ ಮನಪರಿವರ್ತನೆ ಆದರೂ, ಅನುಭವಿಸಿದ ಭೋಗದ ನಷೆಯಿಂದ ಹೊರಬರಲಾರದೆ ನರಳುವ ಚಿಕ್ಕಣ್ಣ ನ ಅರಸು ಜೀವನ ಓದುಗನ ಮನ ಕಲಕುತ್ತದೆ. . ಲೇಖಕರು ಹಿಂದೊಮ್ಮೆ ಉಲ್ಲೇಖಿಸಿದ್ದ ದಳವಾಯಿ ಮುದ್ದಣ್ಣ ನ ಬಿಜಾಪುರ ಯುದ್ಧದ ವಿಜಯ ಯಾತ್ರೆಯ ಬಗ್ಗೆ ಇಲ್ಲಿ ಬೆಳಕು ಚೆಲ್ಲಿದ್ದಾರೆ. ಗಿರಿಜೆ ಇಲ್ಲೂ ಕಾಣಿಸಿಕೊಂಡು, ತಿರುಗುಬಾಣ ದಲ್ಲಿದ್ದ ಕಾಳೀ ಸ್ವರೂಪದ ಕಾರಣ ಏನೆಂದು ತಿಳಿಸಿಕೊಡುತ್ತಾಳೆ. ಬಹಳ ಇಷ್ಟವಾಗಿದ್ದು, ಚಿಕ್ಕಣ್ಣ ನಾಯಕರ ಪಟ್ಟಾಭಿಷೇಕದ ರಾತ್ರಿ ನಡೆದ ಅರಸರ ಪಂಜಿನ ಮೆರವಣಿಗೆ ಹಾಗೂ ಅಲ್ಲಿ ಗಿರಿಜೆಯು ನಡೆಸಿದ ದಾಳಿ. ಕಣ್ಣೆದುರೇ ನಡೆದಂತೆ ಭಾಸವಾಗಿತ್ತು !
ತರಾಸು ಅವರ ಮತ್ತೊಂದು ದುರ್ಗದ ಐತಿಹಾಸಿಕ ಕಾದಂಬರಿ. ಈ ಕಾದಂಬರಿ ತರಾಸು ಅವರ ಕಂಬನಿ ಕುಯಿಲು ಮತ್ತು ರಕ್ತರಾತ್ರಿ ನಡುವೆ ಜರಗುವ ಘಟನೆಯನ್ನು ಒಳಗೊಂಡಿದೆ. ಓಬಣ್ಣನಾಯಕನ ಕೊಲೆಯ ನಂತರ ಚಿಕ್ಕಣ್ಣನಾಯಕನ ಪಟ್ಟಾಭಿಷೇಕದ ಕಥೆಯನ್ನೊಳಗೊಂಡಿದೆ.
ಮುದ್ದಣ್ಣನ ಒಂದು ಕುತಂತ್ರದ ಭಾಗವನ್ನು ಲೇಖಕರು 'ರಾಜ್ಯಾದಾಹ' ಪುಸ್ತಕದಲ್ಲಿ ಕಥೆಯಾಗಿಸಿದ್ದಾರೆ. ಮೊದಲ ಮೂರು ಪುಸ್ತಕಗಳನ್ನು ಓದಿ ಈ ಪುಸ್ತಕವನ್ನ ಓದಿದರೆ ಉತ್ತಮ ಅಂತ ನನ್ನ ಅನಿಸಿಕೆ. ಓಬಣ್ಣ ನಾಯಕರನ್ನು ಹತ್ಯೆ ಮಾಡಿ ಚಿಕ್ಕಣ ನಾಯಕನನ್ನ ಅರನ್ನಾಗಿಸಿ ಮುದ್ದಣ್ಣ ಹಾಗೂ ಅವನ ಸಹೋದರರು ಅಧಿಕಾರದ ಚುಕ್ಕಾಣಿ ಹಿಡಿಯುವರು. ಇದರಲ್ಲಿ ಎಷ್ಟೋ ಸಂಗತಿಗಳು ಗಮನಾರ್ಹವಾಗಿರುವವು. ಉದಾಹರಣೆಗೆ, ಚಿಕ್ಕಣ ನಾಯಕನ ಅದ್ದೂರಿ ಪಟ್ಟಾಭಿಷೇಕ ಮತ್ತು ಜಂಬೂ ಸವಾರಿ, ಅಲ್ಲಿ ಗಿರಿಜವ್ವೆ ಎಸಗಿದ ಉಪಟಳ, ಹೃದಯ ವಿದ್ರಾವಕವಾದ ಅವಳ ವೃತ್ತಾಂತ, ಚಿಕ್ಕಣನ ಅಸಹಾಯಕತೆ, ಅಧಿಕಾರದ ಮದ ಹಾಗೂ ಅವನ ವ್ಯಸನ ಜೀವನ, ಮುದ್ದಣ್ಣನ ದುರುಳಾಡಳಿತ! ಚೆನ್ನಾಗಿಯೇ ಮೂಡಿ ಬಂದಿದೆ.
ಕಂಬನಿಯ ಕುಯಿಲು, ರಕ್ತರಾತ್ರಿ ಕಾದಂಬರಿಗಳ ನಡುವಿನ ಕಾಲಘಟ್ಟದಲ್ಲಿ, ಚಿತ್ರದುರ್ಗವನ್ನು ಆಳಿದ ಚಿಕ್ಕಣ್ಣನಾಯಕರ ಜೀವನಕ್ಕೆ ಸಂಬಂಧಿಸಿದುದು.
ಪಟ್ಟಾಭಿಷಿಕ್ತ ದೊರೆ ಓಬಣ್ಣನಾಯಕರ ಕೊಲೆಯ ನಂತರ ದಳವಾಯಿ ಮುದ್ದಣ್ಣ ಹೆಸರಿಗೆ ಚಿಕ್ಕಣ್ಣನಾಯಕರನ್ನು ಪಟ್ಟಕ್ಕೆ ತಂದು, ತನ್ನ ಕೈಗೊಂಬೆಯಾಗಿಸುತ್ತಾನೆ.
ಮುದ್ದಣ್ಣ ತನ್ನ ಈ ಎಲ್ಲಾ ಕುತಂತ್ರದ ನಡುವೆಯೂ ದುರ್ಗವನ್ನು ನೆರೆಯ ರಾಜ್ಯದ ಆಕ್ರಮಣಗಳಿಂದ ರಕ್ಷಿಸಿ, ರಣಚಾತುರ್ಯವನ್ನು ತೋರಿ ಪ್ರಖ್ಯಾತನಗುತ್ತಾನೆ.
ಗಮನಾರ್ಹ ಸಾಲುಗಳು: ಮುದ್ದಣ್ಣ ಮತ್ತು ರಾಯಣ್ಣನ ನಡುವಿನ ಸಂವಾದ:
“ಹೆಬ್ಬಯಕೆ, ಹೆಂಡಕ್ಕಿಂತಲೂ ಹೆಚ್ಚು ಅಮಲೇರಿಸುವ ವಸ್ತು ರಾಯಣ್ಣ ಅದು ಯಾರಿಂದ, ಯಾವ ಕಾಲಕ್ಕೆ ಏನು ಮಾಡಿಸಿತೆಂದು ಹೇಳುವುದು ಎಂಥ ಜ್ಯೋತಿಷಿಗೂ ಸಾಧ್ಯವಿಲ್ಲ ಅಲ್ಲದೆ, ಅಟ್ಟವನ್ನು ಹತ್ತಿದ ಮೇಲೆ ಅಟ್ಟಲಿಗೆಯನ್ನು ಮರೆಯುವ ಮಹಾತ್ಮರಿಗೇನೂ ಕೊರತೆಯಿಲ್ಲ.''