ಪುಸ್ತಕದ ಅಂಗಡಿಯಲ್ಲಿ ಹೀಗೆ ತಡಕಾಡುತ್ತಿದ್ದಾಗ ಈ ಸರಣಿ ಪುಸ್ತಕಗಳು ಕಣ್ಣಿಗೆ ಬಿದ್ದವು. ಮಾಂತ್ರಿಕಲೋಕದ ಅಥವಾ ಶಾಕ್ತ ಪಂಥದ ಕುರಿತಾದ ಪುಸ್ತಕಗಳು ಕನ್ನಡದಲ್ಲಿ ಹೆಚ್ಚಿಲ್ಲ. ಓದಿನ ಏಕತಾನತೆಯನ್ನು ದೂರವಾಗಿಸಲು ನಡುವೆ ಓದಬಹುದೆಂದು ಖರೀದಿಸಿದೆ. ಐದು ಪುಸ್ತಕಗಳನ್ನು ಒಂದೇ ಸಲಕ್ಕೆ ಓದಬೇಕಾಗಬಹುದು ಎಂಬ ಕಾರಣಕ್ಕೆ ಓದುವ ಮನಸ್ಸು ಮಾಡಿರಲಿಲ್ಲ. ಈ ವರ್ಷಾರಂಭದಲ್ಲಿ ಹೇಗಾದರೂ ಸಂಗ್ರಹದಲ್ಲಿರುವ ಪುಸ್ತಕಗಳನ್ನು ಓದಬೇಕು ಎಂದು ನಿಶ್ಚಯಿಸಿ ಈ ಸರಣಿಯ ಮೊದಲ ಪುಸ್ತಕವನ್ನು ಕೈಗೆತ್ತಿಕೊಂಡು ಓದಲಾರಂಭಿಸಿ ಎರಡೇ ದಿನಗಳಲ್ಲಿ ಮುಗಿಸಿಯೂ ಆಯಿತು.
ಮಾಂತ್ರಿಕ ಲೋಕದ ಪರಿಚಯವನ್ನು ಮಾಡಿಕೊಂಡು ಸಿದ್ಧಿಯನ್ನು ಗಳಿಸಿಕೊಳ್ಳುವ ಮಾರ್ಗವನ್ನು ಅರಸುತ್ತಾ ಹೋಗುವ ಹದಿಹರೆಯದ ಯುವಕನೊಬ್ಬನ ಕಥೆ ಇಲ್ಲಿದೆ. ಮನೆಬಿಟ್ಟು ಹೋಗಿ ಗೊತ್ತು ಗುರಿಯಿಲ್ಲದೆ ಅಲೆಯುತ್ತಾ ಗುರಿ ಸಾಧನೆಗೆ ಗುರುವನ್ನು ಅರಸುತ್ತಾ ಕಾಡುಮೇಡುಗಳಲ್ಲಿ ಅಲೆಯುತ್ತಾ ಹೋಗುವ ಯುವಕ ಶ್ಯಾಮನಿಗೆ ಆಗುವ ಅಲೌಕಿಕ ಅನುಭವಗಳು ಮೈನವಿರೇಳಿಸುತ್ತವೆ, ರೋಮಾಂಚನಗೊಳಿಸುತ್ತವೆ. ಕೆಲವು ಕಪಟ ಸಾಧಕರ ಕೈಗೆ ಸಿಕ್ಕಿಬಿದ್ದು ಪ್ರಾಣಾಪಾಯಕ್ಕೀಡಾದರೂ ಅಲ್ಲಿಂದ ಸ್ವಲ್ಪದರಲ್ಲೇ ಬಚಾವಾಗುತ್ತಾನೆ. ಕೆಲವೊಂದು ಘಟನೆಗಳನ್ನು ಓದಿದಾಗ ಹಳೆಯ ತಲೆಮಾರಿನವರು ಹೇಳುವ ಭೂತ ಪ್ರೇತಗಳ ಕಥೆಯು ನೆನಪಾಗುತ್ತದೆ. ಹೀಗೂ ನಡೆಯಲು ಸಾಧ್ಯವೇ ಅಥವಾ ನಡೆದಿರಬಹುದೇ ಎಂದು ಆಶ್ಚರ್ಯಚಕಿತರಾಗುವ ಸರದಿ ಓದುಗರದ್ದು. ಅನೇಕ ಬಾರಿ ತನ್ನ ಮನಸ್ಸಿನ ನಿಯಂತ್ರಣವನ್ನು ಕಳೆದುಕೊಂಡರು ದಾರಿ ತಪ್ಪದೆ ಗುರಿ ಸಾಧನೆಯ ಕಡೆಗೆ ಸಾಗಲು ಶ್ಯಾಮನ ನೈತಿಕ ಬಲವೇ ಕಾರಣ. ತಾನು ಸಾಧಿಸಿದ ಸಿದ್ಧಿಯನ್ನು ಜನಹಿತಕ್ಕಾಗಿ ಬಳಸಬೇಕೆಂಬ ವಿವೇಚನೆ ಸಹ ಶ್ಯಾಮನನ್ನು ಸರಿಯಾದ ದಾರಿಯಲ್ಲಿ ನಡೆಸುತ್ತಿರುತ್ತದೆ. ಅಂದಹಾಗೆ ಈ ಶ್ಯಾಮ ಬೇರೆ ಯಾರೂ ಅಲ್ಲ….. ಈ ಕೃತಿಯ ಲೇಖಕರಾದ ಇಂದಿರಾತನಯ ಅವರೇ….
ಇಲ್ಲಿ ಬರುವ ಪವಾಡಸದೃಶ ಘಟನೆಗಳನ್ನು ನಂಬುವುದು ಬಿಡುವುದು ಓದುಗರಿಗೆ ಬಿಟ್ಟ ವಿಚಾರ. ಏಕೆಂದರೆ ಅತೀಂದ್ರಿಯ ಅನುಭವಗಳಿಗೆ ತರ್ಕದ ನೆಲೆಗಟ್ಟಿನಲ್ಲಿ ಯಾವುದೇ ಸಮಜಾಯಿಷಿಯನ್ನು ನೀಡಲಾಗುವುದಿಲ್ಲ. ನಮಗರಿವಿಲ್ಲದ ವಿಚಾರಗಳು ಸುಳ್ಳು ಅಥವಾ ತಪ್ಪು ಎಂಬ ಅಭಿಪ್ರಾಯವೂ ಸರಿಯಲ್ಲ. ಹಾಗಾಗಿ ತರ್ಕದ ಗೋಜಿಗೆ ಹೋಗದಿದ್ದರೆ ಒಂದು ಅದ್ಭುತ ಅನುಭವವನ್ನು ನೀಡುತ್ತದೆ ಈ ಕೃತಿ. ತಂತ್ರಲೋಕದಲ್ಲಿ ಸಿದ್ಧಿಯನ್ನು ಪಡೆದುಕೊಳ್ಳಲು ಯಾವ ರೀತಿಯಲ್ಲಿ ಹೆಣಗಾಡಬೇಕಾಗುತ್ತದೆ ಎಂಬುದನ್ನು ತಿಳಿಸುತ್ತಾರೆ ಲೇಖಕರು. ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಕುತ್ತು. ಮನಸ್ಸನ್ನು ನಿಯಂತ್ರಿಸಲು ಸಾಧ್ಯವಾಗದೇ ದುಶ್ಚಟಗಳಿಗೆ ಬಲಿಯಾಗುವ ಮತ್ತು ತಂತ್ರ ಸಾಧಕರ ದುರಾಸೆಗೆ ಬಲಿಯಾಗುವವರ ಸಂಖ್ಯೆಯೂ ಹೆಚ್ಚು. ಅಜ್ಞಾತ ಲೋಕವೋಂದಕ್ಕೆ ಪಯಣಿಸಿದ ಅನುಭೂತಿಯನ್ನು ನೀಡಿತು ಈ ಕೃತಿ.
ಪುಸ್ತಕದ ನಿರೂಪಣೆ ಬಹಳ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಒಮ್ಮೆ ಕೈಗೆತ್ತಿಕೊಂಡರೆ ಕೆಳಗಿಡಲು ಮನಸ್ಸಾಗುವುದೇ ಇಲ್ಲ. ವಾಮಾಚಾರ,ಶವಸಾಧನೆ, ಹಲವು ಬಗೆಯ ಸಿದ್ಧಿಗಳ ಕುರಿತಾದ ಅನೇಕ ಘಟನೆಗಳು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು. ಅಲೌಕಿಕ ಅನುಭವಕ್ಕಾಗಿ ಓದಿ ನೋಡಿ….
ಚಕ್ರಾಯಣ - ಇಂದಿರಾತನಯ. ತಮ್ಮ ಮಾಂತ್ರಿಕ ಕಾದಂಬರಿಗಳಿಂದ ಪ್ರಸಿದ್ಧರಾದವರು ಇಂದಿರಾತನಯ.ಅವರ ಮಂತ್ರಶಕ್ತಿ, ಶಕ್ತಿ ಪೂಜೆ, ಸೇಡಿನ ಕಿಡಿ, ಪೂಜಾ ತಂತ್ರ ಹಾಗೂ ಚಕ್ರಾಯಣ ಈ ಪ್ರಕಾರದಲ್ಲಿ ಯಶಸ್ಸು ಪಡೆದವು. ಹಳೆಯವಾದರೂ ಇತ್ತೀಚೆಗೆ ಅಂಕಿತ ಮರುಮುದ್ರಣಗೊಳಿಸಿದ ಕಾರಣ ಇವು ಈಗ ಲಭ್ಯವಿದೆ. ಮೈ ನೇವಿರೆಳಿಸುವ ಅನುಭವ ,ಶಿಷ್ಟ ಭಾಷೆ, ಮಂತ್ರಾನುಭವ , ಅಧ್ಯಾತ್ಮ ಇವೆಲ್ಲ ಸಮ್ಮಿಳಿತಗೊಳಿಸಿದ ಒಳ್ಳೆಯ ಓದು. ಚಕ್ರಾಯಣ ಸಾಧನೆಯ ಹಾದಿಯಲ್ಲಿ ಹೊರಟ ಸಾಧಕನ ಪ್ರಥಮ ಪುರುಷ ನಿರೂಪಣೆಯ ಕಥನ. ಇಲ್ಲಿ ಸಾಧಕ ಎಲ್ಲೂ ಹಾದಿ ತಪ್ಪುವುದಿಲ್ಲ.ಕೊಂಚ ಮನೋವಿಕಾರಗಳು ಉಂಟಾದರೂ 'ತಾಯಿ' ಜಗನ್ಮಾತೆಯ ನೆನಹು ಅವನ ಸರಿಪಡಿಸುತ್ತದೆ. ಸಾಧನೆಯ ಹಾದಿಯಲ್ಲಿ ಮುಂದೆ ಸಾಗಿದಂತೆ ಸಿದ್ದಿಗಳು ವಶವಾಗಿ ಅವನು ಉಪಕಾರಿ ಆಗುತ್ತಾನೆ. ಅವನ ಮಿತ್ರ ಸಾಧಕರ ಕತೆ ಹಾಗಲ್ಲ.ತಾತ್ಕಾಲಿಕ ಸುಖಕ್ಕೋಸ್ಕರ ಗಾಂಜಾ ,ಹೆಣ್ಣು ಇತ್ಯಾದಿ ಅಮಲುಗಳಿಗೆ ದಾಸರಾಗಿ ಜೀವನ ಹಾಳುಮಾಡಿಕೊಳ್ಳುವ ಸ್ಥಿತಿ ಅವರದ್ದು. ಉಗುರು ಕಚ್ಚುವಷ್ಟು ಭಯಭೀತರಾಗಿಸದಿದ್ದರೂ ಬಹುಶಃ ಇದಕ್ಕೆ ಕಾಲಮಾನ ವ್ಯತ್ಯಾಸವೂ ಕಾರಣವಿರಬಹುದು. ಆದರೆ ಒಂದೊಳ್ಳೆಯ ಯಾನ. ಸತ್ಯಕಾಮರ, ಸ್ವಾಮಿ ರಾಮರ ನೆನಪಿಸಿದ ಬರಹ. ಹಳೆಯದಾದರೂ ರುಚಿಯಾಗಿದೆ.
ಒಬ್ಬ ಸಿದ್ಧಿಪುರುಷ ದೇವಿ ಉಪಾಸನೆ ಬೆನ್ನು ಹತ್ತಿ ಹೇಗೆ ಅದನ್ನು ಸಿದ್ಧಿ ಪಡೆದುಕೊಳ್ಳುತ್ತಾನೆ. ಕೆಲವರು ಹೇಳುವ ಪ್ರಕಾರ ಕಾದಂಬರಿ ಲೇಖಕ ಇಂದಿರಾತನಯ(ಶ್ಯಾಮ್) ಅವರೇ ಈ ಕಾದಂಬರಿಯ ನಾಯಕ ಎಂದು