#ಅಕ್ಷರವಿಹಾರ_೨೦೨೨ ಕೃತಿಗಳು: ೧) ಮಂತ್ರಶಕ್ತಿ ೨) ಶಕ್ತಿ ಪೂಜೆ ೩) ಸೇಡಿನ ಕಿಡಿ ೪) ಪೂಜಾ ತಂತ್ರ ಲೇಖಕರು: ಇಂದಿರಾತನಯ ಪ್ರಕಾಶಕರು: ಅಂಕಿತ ಪುಸ್ತಕ ಬೆಂಗಳೂರು
ಈ ನಾಲ್ಕು ಪುಸ್ತಕಗಳು ಮಾಂತ್ರಿಕ ಲೋಕದಲ್ಲಿ ನಡೆಯುವ ಹೋರಾಟದ ಕುರಿತಾಗಿವೆ. ವಾಮಾಚಾರ, ವಶೀಕರಣ ತಂತ್ರ, ಮನದ ಕಾಮನೆಗಳನ್ನು ತಣಿಸಿಕೊಳ್ಳಲು ಸುಲಭದ ಮಾರ್ಗವನ್ನು ಕಂಡುಕೊಳ್ಳುವಿಕೆ, ಸ್ವಾರ್ಥಕ್ಕಾಗಿ ಇತರರ ಮೇಲೆ ದುಷ್ಟ ಶಕ್ತಿಗಳ ಪ್ರಯೋಗ ಹಾಗೂ ಕೆಟ್ಟದಿರುವ ಕಡೆ ಒಳ್ಳೆಯದು ಇರುವಂತೆ ತಮಗೆ ದೊರೆತ ಸಿದ್ಧಿ ಶಕ್ತಿಗಳನ್ನು ಜನಹಿತಕ್ಕಾಗಿ ಬಳಸುವ ಸಜ್ಜನರ ಕಥೆಯೂ ಇಲ್ಲಿದೆ.
ನಾಲ್ಕು ಪುಸ್ತಕಗಳಲ್ಲಿ ಕೂಡ ಜನಪೀಡಕನಾದ ಒಬ್ಬ ಮಂತ್ರವಾದಿಗೆ ಪ್ರತಿಯಾಗಿ ಒಬ್ಬ ಪ್ರಜಾಹಿತಕಾರಿಯಾದ ಸಿದ್ಧಿ ಪುರುಷ ಎದುರಾಳಿಯಾಗಿ ಹೋರಾಡುವ ವಿಚಾರದ ಮೂಲಕ ಶಾಕ್ತ ಪಂಥದ ಹತ್ತು ಹಲವು ವಿದ್ಯೆಗಳು, ಅವುಗಳನ್ನು ಕರಗತ ಮಾಡಿಕೊಳ್ಳಲು ಮಾಡಬೇಕಾದ ಸಾಹಸಗಳು, ಸ್ವಲ್ಪ ಎಚ್ಚರ ತಪ್ಪಿದರೂ ಎದುರಿಸಬೇಕಾಗಬಹುದಾದ ಆಪತ್ತು ಮುಂತಾದವುಗಳ ಕುರಿತು ಬಹಳ ರಸವತ್ತಾಗಿ ಹೇಳುತ್ತಾರೆ. ಯಕ್ಷಿಣಿ ಪ್ರೇತಗಳ ವಶಪಡಿಕೆ ಮತ್ತು ಅವುಗಳ ಆಯಸ್ಸು, ಚಂಡೀ ಉಪಾಸನೆಯ ಪದ್ಧತಿಗಳು, ಗಣಪತಿ ಔಪಾಸನೆ, ಶ್ರೀ ಚಕ್ರವನ್ನು ಸಾಧಿಸಿಕೊಳ್ಳಲು ಮಾಂತ್ರಿಕ ಲೋಕದಲ್ಲಿ ನಡೆಯುವ ವಿದ್ಯಮಾನಗಳನ್ನು ಓದುವಾಗ ಇಂತಹ ಒಂದು ಲೋಕವೂ ಇದೆಯೋ ಎಂಬ ಅಚ್ಚರಿ ಮೂಡುತ್ತದೆ.
ಬಹುಶಃ ಎಲ್ಲರಿಗೂ ಮಾಂತ್ರಿಕ ಲೋಕದ ಚಿಕ್ಕ ಪರಿಚಯ ಖಂಡಿತವಾಗಿಯೂ ಇರುತ್ತದೆ.ಕೆಲವು ಕೇಳಿದ್ದು ಇನ್ನೂ ಕೆಲವು ಸ್ವತಃ ಅನುಭವಕ್ಕೆ ಬಂದದ್ದು. ಆದರೆ ಸಾಧಕನಾಗಲು ಬಳಸುವ ಮಾರ್ಗಗಳು, ಅನುಸರಿಸಬೇಕಾದ ಆಚಾರ ವಿಚಾರಗಳನ್ನು ಈ ಕೃತಿಗಳು ತೆರೆದಿಡುತ್ತದೆ.ಯಾವುದೇ ವಿದ್ಯೆಯಾಗಲಿ ಅದನ್ನು ಸಾರಾಸಗಟಾಗಿ ಕೆಟ್ಟದ್ದು ಎನ್ನಲು ಬರುವುದಿಲ್ಲ. ನಾವು ಅದನ್ನು ಯಾಕೆ ಮತ್ತು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ಒಳಿತು ಕೆಡುಕುಗಳ ನಿರ್ಧಾರವಾಗುತ್ತದೆ.
ಲೇಖಕರ ನಿರೂಪಣಾ ಶೈಲಿ ಬಹಳ ಸೊಗಸಾಗಿದೆ ಮತ್ತು ವೇಗವಾಗಿ ಓದಿಸಿಕೊಂಡು ಹೋಗುತ್ತದೆ. ಇಲ್ಲಿರುವ ಅತಿಮಾನುಷ ಘಟನೆಗಳನ್ನು ನಂಬಬಹುದು ಅಥವಾ ನಂಬದೆಯೂ ಬಿಡಬಹುದು. ಆದರೆ ಲೇಖಕರಿಗೆ ಈ ಕ್ಷೇತ್ರದಲ್ಲಿ ಇರುವ ಜ್ಞಾನಕ್ಕೆ ಒಂದು ಸಲಾಂ….