ಕೆಲವು ಪುಸ್ತಕಗಳೇ ಹಾಗೆ ಅವು ನೀಡುವ ಖುಷಿ ಹೇಳಲಾಗದು. ಅಂತಹ ಒಂದು ಪುಸ್ತಕ ಮನಸುಖರಾಯನ ಮನಸು.
ಎಂಥ ಚಂದದ ಟೈಟಲ್ 'ಮನಸುಖರಾಯನ ಮನಸು', ಅಷ್ಟೇ ಚೆಂದದ ಬರಹಗಳು ಈ ಕೃತಿಯ ಒಳಗೂ ಇದೆ. ಧಾರವಾಡದ ಭಾಷೆ ಓದುವುದಕ್ಕೆ ಆಚೀಚೆ ಆಗುತ್ತಿದ್ದರೂ, ಈ ವರ್ಷ ಓದಿದ ಪುಸ್ತಕಗಳಲ್ಲಿ ತುಂಬಾ ಖುಷಿ ಕೊಟ್ಟಂತಹ ಕೃತಿ.
#ಪುಸ್ತಕದಹುಳು ಲೇಖಕರು ಇಲ್ಲಿಯವರೆಗೂ ಸಂಗ್ರಹಿಸಿರುವ ಪುಸ್ತಕಗಳಲ್ಲಿ ಕೆಲವೊಂದು ಪುಸ್ತಕಗಳ ಬಗ್ಗೆ ಹೇಳುತ್ತಾ, ಅವುಗಳನ್ನು ಓದದೇ ತಮ್ಮದೇ ಆದ ಕಥೆಗಳನ್ನು ಅವುಗಳ ಬಗ್ಗೆ ಕಟ್ಟುತ್ತಾ, ಅದರಲ್ಲೇ ತಮ್ಮ ಮನಸ್ಸನ್ನು ಹರಿಬಿಡುತ್ತಾ, ಓದುಗರನ್ನು ಅವರ ಕಲ್ಪನಾ ವಿಲಾಸದೊಳಗೆ ಕರೆದೊಯ್ಯುತ್ತಾರೆ. ಆ ಕಲ್ಪನಾ ವಿಲಾಸವೇ ಪುಸ್ತಕದ ಹುಳು.
#ಶ್ರದ್ಧಾ ತಮ್ಮ ತಂದೆಯವರ ಸರ್ವರೂಪವನ್ನು ಸಾದರಪಡಿಸುತ್ತಾ, ಅವರಿಗೂ ತಂದೆಯವರಿಗೂ ಇದ್ದ 'ತಲಿ ಬೋಳಿಸಿಕೊಳ್ಳುವ' ಎಂಬ ಅನ್ಯೋನ್ಯ ಬಾಂಧವ್ಯವನ್ನು ವಿವರಿಸುತ್ತಾ, ತಾವು ಕೆಲಸಕ್ಕೆಂದು ಮುಂಬೈಗೆ ಹೊರಟು ನಿಂತಾಗ ಹೊಸರೂಪ ಪಡೆದ ತಂದೆಯವರ ಭಾವನಾತ್ಮಕತೆಯನ್ನು ಎಂದೆಂದಿಗೂ ಅಳಿಯದಂತೆ ತಮ್ಮ ಮನಸ್ಸಿನೊಳಗೆ ಕಾಪಿಟ್ಟುಕೊಂಡಿರುವ ಬರಹವೇ ಶ್ರದ್ಧಾ.
#ಬಾಶಿಂಗಬಲ ತನ್ನ ಅಣ್ಣನ ಮಗನ ಮದುವೆಗೆ ಬಾಷಿಂಗ ತರುವುದಕ್ಕೆ ಹೋಗಿ, ತನ್ನ ವಿಧವಾ ಜೀವನವನ್ನು ಮುಕ್ತಿಗೊಳಿಸಲು ಮುಂದೆ ಬಂದ ವಿಧುರನೊಂದಿಗೆ ಕಲ್ಯಾಣಯೋಗ ಪಡೆದುಕೊಂಡ ಸಣ್ಣಿರವ್ವ ಮತ್ತು ಮಲ್ಲಿಕಾರ್ಜುನರ ವಿಚಿತ್ರ ಪ್ರೇಮಕಥೆ ಬಾಶಿಂಗ ಬಲ.
#ತ್ರಯಸ್ಥ ಬಾಲ್ಯಾವಸ್ಥೆಯಿಂದ ಸ್ನೇಹಿತರಾಗಿದ್ದ ಶೀನೂ ಮತ್ತೆ ಕಮಲಿಯೂ ಹರೆಯಕ್ಕೆ ಕಾಲಿಡುತ್ತಿದ್ದಂತೆ ತಮಗೇ ಅರಿಯದಂತೆ ಪ್ರೇಮದ ಬಲೆಯೊಳಗೆ ಸಿಕ್ಕಿ, ಅದು ಹರಿದು ಹೋಗಿ, ಕಾಲಾನಂತರ ಸಿಕ್ಕಾಗಲೂ ಅವರ ಅಂತರಂಗಗಳನ್ನು ಚಡಪಡಿಸುವಂತೆ ಮಾಡಿದ ಕಥೆಯನ್ನೊಳಗೊಂಡ ಪ್ರೇಮಕಥೆ ತ್ರಯಸ್ಥ.
#ಗಾಯಕವಾಡದಾದಾ ಶಾಲೆಯಲ್ಲಿ ಬೆಪ್ಪುತಕ್ಕಡಿಯಾಗಿದ್ದು, ನಂತರದ ಜೀವನದ ಹೊರಗಡೆ ಪ್ರಪಂಚದಲ್ಲಿ ಸಿರಿವಂತರಿಂದ ಹಿಡಿದು ಬಡವರವರೆಗೂ 'ಬೇಕಾದವ'ನಾಗಿದ್ದ, ಒಂಚೂರು ಕಲ್ಮಶವಿಲ್ಲದ ಎಲ್ಲರಿಂದಲೂ ಪ್ರೀತಿಸಲ್ಪಡುತ್ತಿದ್ದ, ಸಾದಾಸೀದ ವ್ಯಕ್ತಿಯಾಗಿದ್ದ ಲೇಖಕರ ಆತ್ಮೀಯ ಗೆಳೆಯ ದಾದಾ ಬಗೆಗಿನ ಬರಹವೇ ಗಾಯಕವಾಡ ದಾದ. ತುಂಬಾ ಹಿಡಿಸಿದ ಬರಹ ನನಗೆ.
#ಗದೇಪಂಚವೀಶಿ. ಮುಂಬಯಿಯಲ್ಲಿದ್ದುಕೊಂಡು, ತನ್ನ ಹಳ್ಳಿ ಮತ್ತು ತನ್ನಪ್ಪನನ್ನು ಬೈದುಕೊಂಡು, ಸುಂದರಿಯೊಬ್ಬಳ ಪ್ರೇಮಕ್ಕೆ ಹಪಾಹಪಿಸುತ್ತಾ, ಅದೇ ಸುಂದರಿಯಿಂದಾಗಿ ಪೋಲಿಸ್ ಸ್ಟೇಷನ್ ಮೆಟ್ಟಿಲು ಹತ್ತಿ, ಸುಂದರಿಯ ಕುರೂಪಿತನ ಮತ್ತು ತನ್ನಪ್ಪನ ಹೆಸರಿನ ಶಕ್ತಿಯಿಂದ ಹೊರಬರುವ ಯಂಕಣ್ಣನ ವಿನೋದ ಪ್ರೇಮಕಥೆಯೇ ಗದೇ ಪಂಚವೀಶಿ.
ಹೀಗೆ ಧಾರವಾಡ ಪೇಡದಂತ ಆರು ಬರಹಗಳು ಮನಸುಖರಾಯನ ಮನಸು ಪೊಟ್ಟಣದೊಳಗೆ ಸಿಕ್ಕುತ್ತವೆ. ನೀವು ಓದಿ ಸವಿಯಿರಿ.
ಶ್ರೀನಿವಾಸ ವೈದ್ಯರ ಪುಸ್ತಕಗಳು ಓದೋದು ಅಂದ್ರೇನೆ ಒಂದು ಮಜಾ.. ಉತ್ತರ ಕರ್ನಾಟಕದ ಭಾಷೆ ಅಲ್ಲಲಿ ಓದೋಕೆ ಕಷ್ಟ ಅದ್ರೂನು ಅವರ ಸರಳ ನಿರೂಪಣೆ ಶೈಲಿ ಹಾಗೂ ಎಲ್ಲ ಪಾತ್ರಗಳ ಮತ್ತೆ ಸನ್ನಿವೇಶಗಳ ವಿವರಣೆ ತುಂಬಾ ಹಿಡಿಸಿತು..
ತುಂಬ ತೃಪ್ತಿಕರವಾದ ಓದು. ತಿಳಿ ಹಾಸ್ಯದ ಧಾಟಿ, ಸ್ಥಳ ಚಿತ್ರಣ, ಕಾಲ ಚಿತ್ರಣ ಎಲ್ಲವೂ ಮಂತ್ರಮುಗ್ದವಾಗಿಸುವಷ್ಟು ಸಶಕ್ತ. ಶ್ರದ್ಧಾ, ತ್ರಯಸ್ಥ, ಪುಸ್ತಕತದ ಹುಳು, ಗಾಯಕವಾಡ ದಾದಾ ಎಲ್ಲವೂ ನೆನಪಿನಲ್ಲಿ ಉಳಿಯುವಂತಾ ಬರಹಗಳು/ಕಥೆಗಳು.
Ps; ಸ್ಟೋರಿಟೆಲ್'ನಲ್ಲಿ 'ಪುನೀತ್ ಕಬ್ಬೂರ್' ಅವರ ನಿರೂಪಣೆಯಲ್ಲಿರುವ ಪುಸ್ತಕ ಬಹಳ ಸೊಗಸಾಗಿದೆ. Worth listening.
ಪುಸ್ತಕದ ಹುಳು, ಶ್ರದ್ಧಾ, ಬಾಶಿಂಗ ಬಲ, ತ್ರಯಸ್ಥ, ಗಾಯಕವಾಡ ದಾದಾ ಮತ್ತು ಗಧೇಪಂಚವೀಶಿ ಎಂಬ ಹಾರೈಕೆ, ವಿಡಂಬನೆ, ಪ್ರಬಂಧ ಮುಂತಾದ ಆರು ಲೇಖನಗಳ ಸಂಕಲನವೇ ಮನಸುಖರಾಯನ ಮನಸು. ಪುಸ್ತಕದ ತಿರುಳು ಏನೇ ಆಗಿದ್ದರೂ ಓದುವಾಗ ದೊರೆಯುವ ಖುಷಿ ಮತ್ತು ಮನಸ್ಸಿಗಾಗುವ ಕಚಗುಳಿ ಅವರ್ಣನೀಯ. ಎಲ್ಲಾ ಲೇಖನಗಳಲ್ಲಿರುವ ನವಿರಾದ ಹಾಸ್ಯ ಲೇಪನ ಇನ್ನಷ್ಟು ಮುದವನ್ನು ನೀಡುವ ಮೂಲಕ ಓದುಗರನ್ನು ಇನ್ನಷ್ಟು ಪ್ರಸನ್ನಗೊಳಿಸುತ್ತವೆ..
#ಪುಸ್ತಕದಹುಳು
ಸಂಗ್ರಹದಲ್ಲಿರುವ ಪುಸ್ತಕಗಳ ಮೇಲೆ ಕಣ್ಣಾಡಿಸಿದಾಗ ಅವು ಯಾವೆಲ್ಲ ನೆನಪುಗಳನ್ನು ಕೆದಕಿ ನಮ್ಮ ಮುಂದೆ ನಿಲ್ಲಿಸಬಹುದು?ಯಾವ ವಿಚಾರಗಳು ನಮ್ಮ ಕಣ್ಣ ಮುಂದೆ ಹಾದು ಕಣ್ಣುಗಳನ್ನು ಮಂಜಾಗಿಸಬಹುದು? ಹಳೆಯ ಪುಸ್ತಕಗಳನ್ನು ಸಂಗ್ರಹಿಸುವವರಾಗಿದ್ದರೆ ಅದರ ಮೇಲೆ ಬರೆದಿರುವ ಹೆಸರುಗಳೋ ಅಥವಾ ಕೆಲವೊಂದು ವಾಕ್ಯಗಳೋ ಅಥವಾ ಆ ಪುಸ್ತಕ ಮುದ್ರಣದ ವರ್ಷ ನಮ್ಮ ಕಲ್ಪನಾಲೋಕದಲ್ಲಿ ಎಬ್ಬಿಸಬಹುದಾದ ತರಂಗಗಳ ಕುರಿತ ಬರಹ.
#ತ್ರಯಸ್ಥ
ನೆರೆಹೊರೆಯ ಒಂದು ಹುಡುಗಿ ಮತ್ತು ಹುಡುಗ ಬಾಲ್ಯದಿಂದಲೂ ಒಟ್ಟಾಗಿ ಬೆಳೆದು ಹರೆಯಕ್ಕೆ ಕಾಲಿಟ್ಟಾಗ ಇಬ್ಬರಲ್ಲೂ ಪ್ರೀತಿ ಮೊಳಕೆಯೊಡೆದು ಕಾರಣಾಂತರಗಳಿಂದ ಅವರು ಬೇರೆಯಾಗಿ ಸ್ವತಂತ್ರವಾಗಿ ತಂತಮ್ಮ ಜೀವನವನ್ನು ರೂಪಿಸಿಕೊಂಡು ಸಾಗುತ್ತಿರಬೇಕಾದರೆ ಅಚಾನಕ್ಕಾಗಿ ಅವರಿಬ್ಬರೂ ಭೇಟಿಯಾಗುವ ಸಂದರ್ಭ ಒದಗಿದರೆ ಹೇಗಿರಬಹುದು?......ಹದಿಹರೆಯದ ತುಮುಲಗಳು ಬಹಳ ಸಶಕ್ತವಾಗಿ ಚಿತ್ರಿತವಾದ ಹದವಾದ ಈ ಲೇಖನ ನಮ್ಮ ಹರೆಯದ ದಿನಗಳನ್ನು ಕಣ್ಣಮುಂದೆ ನಿಲ್ಲಿಸುತ್ತದೆ.
#ಶ್ರಧ್ಧಾ
ಜೊತೆಗೆ ಇದ್ದಷ್ಟು ದಿನ ಶಿಸ್ತಿನ ಸಿಪಾಯಿಯಂತೆ ವರ್ತಿಸಿದ ತಂದೆ ವಯಸ್ಸಿಗೆ ಬಂದ ಮಗ ತನ್ನ ಬದುಕಿನ ದಾರಿಯನ್ನು ಕಂಡುಕೊಳ್ಳಲು ಹೊರಟು ನಿಂತಾಗ ಕಣ್ಣೀರು ಸುರಿಸಿದರೆ???? ತಂದೆ ಮಗನ ಬಾಂಧವ್ಯದ ಕುರಿತಾದ ಈ ಲೇಖನ ಮೊದಲು ತಮಾಷೆಯಾಗಿ ಓದಿಸಿಕೊಂಡು ಹೋದರೂ ಕೊನೆಯ ಭಾಗ ಎಂತಹ ದೃಢ ಮನಸ್ಸಿನವರನ್ನು ಸಹ ಅಲುಗಾಡಿಸಿ ಬಿಡುತ್ತದೆ.
#ಗಾಯಕವಾಡದಾದಾ
'ಡಿಫರೆನ್ಸ್' ಶಬ್ದವನ್ನು ಸರಿಯಾಗಿ ಬರೆಯಲಾರದ ಹುಡುಗನೊಬ್ಬ ಮುಂದೆ ತನ್ನ ಊರಿನಲ್ಲಿ ಪ್ರಾಮಾಣಿಕವಾಗಿ ನೆಲೆನಿಂತು,ಸಮಾಜಮುಖಿಯಾಗಿ ಬಾಳಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ತನ್ನ,ಗೆಳೆಯರ ಮತ್ತು ತನ್ನ ಊರಿನ ಜನರ ಜೀವನದಲ್ಲಿ ಡಿಫರೆನ್ಸನ್ನು ತಂದ ಯುವಕನ ಕಥೆ….
ಈ ಕೃತಿಯ ಪ್ರತಿಯೊಂದು ಲೇಖನದಲ್ಲಿರುವ ಬದುಕು ಮತ್ತು ಜೀವನ ಮೌಲ್ಯಗಳ ಕುರಿತಾದ ವಿಚಾರಗಳು ಹಾಗೂ ಎತ್ತುವ ಪ್ರಶ್ನೆಗಳು ಎಲ್ಲಾ ಕಾಲಕ್ಕೂ ಸಲ್ಲುತ್ತವೆ. ಶ್ರೀನಿವಾಸ ವೈದ್ಯ ಅವರ ಶೈಲಿ ಮತ್ತು ಬಳಸಿರುವ ಭಾಷೆ ಬಹಳ ಆಪ್ತವಾಗಿದ್ದು ಬಹಳ ಕಾಲದವರೆಗೆ ಜನಮಾನಸದಲ್ಲಿ ನಿಲ್ಲುವ ಗುಣವನ್ನು ಹೊಂದಿವೆ.
Stories are written North Karnataka (Dharwad) Kannada. So it took a little bit of time to get used to the style. But once that initial hump was gone, I was able to thoroughly enjoy the stories.