ಅನುಭವಗಳ ಒಂದು ದೊಡ್ಡ ಸಂತೆಯೇ ಜೀವನ ಎಂಬ ಶಿವರಾಮ ಕಾರಂತರ ಮಾತುಗಳ ಅಡಿಬರಹ ಹೊಂದಿರುವ ಈ ಪುಸ್ತಕ ವೈದ್ಯರ ವೃತ್ತಿಜೀವನದ ನೆನಹುಗಳದ್ದು.ತೊಂಬತ್ತೆಂಟು ಪುಟಗಳಷ್ಟು ಕಿರಿದಾದರೂ ಎಷ್ಟೋ ಸಾವಿರ ಅನುಭವಗಳ ತನ್ನ ಒಡಲಲ್ಲಿ ಇಟ್ಟುಕೊಂಡಿರುವಂತದ್ದು. ಅಪ್ಪ ಅಮ್ಮನ ಬಿಟ್ಟ ಪೋರ ದೂರದ ಮುಂಬಯಿಗೆ ಬ್ಯಾಂಕ್ ನಲ್ಲಿ ನೌಕರಿ ಮಾಡಲು ಬಂದಲ್ಲಿಂದ ಹಿಡಿದು ನಿವೃತ್ತಿಯಾಗುವವರೆಗಿನ ಅನುಭವಗಳ ಅಕ್ಷರ ರೂಪ ಇದು.ಇಲ್ಲಿ ನೆನಪುಗಳಿವೆ, ಬೆಚ್ಚಗೆನಿಸುವ ಶುದ್ಧ ಜೀವನಪ್ರೀತಿಯಿದೆ, ತನ್ನ ಸೇವಾವಧಿಯಲ್ಲಿ ಭಾರತ ಬದಲಾದ ಕುರಿತ ಚಿತ್ರಣವಿದೆ. ಎಲ್ಲೂ ಯಾರೊಬ್ಬರ ಬಗ್ಗೆಯೂ ಅವಹೇಳನವಿಲ್ಲದ ಬರಿಯ ಹಾಸ್ಯ ಮತ್ತು ಭಾವುಕತೆಯ ಈ ವಿಶಿಷ್ಟ ಶೈಲಿ ಶ್ರೀನಿವಾಸ ವೈದ್ಯರಿಗೆ ಮಾತ್ರ ಸಿದ್ಧಿಸಿದ್ದು. ಒಂದೊಂದು ಪ್ರಸಂಗಗಳು ನಮ್ಮಲ್ಲಿ ವಿಧ ವಿಧವಾದ ಭಾವ ಹುಟ್ಟಿಸಿ ಮನಕಲಕುತ್ತವೆ. ಒಂದೇ ಒಂದು ಪುಟ್ಟ ಪ್ರಸಂಗ ನಿಮಗಾಗಿ
" ಒಂದು ದಿನ ನಾನು ಬ್ಯಾಂಕಿನಲ್ಲಿದ್ದಾಗ, ನಮ್ಮ ಕಾಲೇಜು ದಿನಗಳ ಒಬ್ಬ ಗೆಳೆಯ, ನನಕಿಂತ ಮೂರು ನಾಲ್ಕು ವರುಷಕ್ಕೆ ಚಿಕ್ಕವ,ಆಢ್ಯ ಶ್ರೀಮಂತ, ನೂರಾರು ಏಕರೆ ಭೂಮಿಗೆ ಒಡೆಯ, ತರಾತುರಿಯಲ್ಲಿ ಬಂದು ,' ವೈದ್ಯರೇ ಒಂದು ಹೊಲಾ ಮಾರಿದ ದುಡ್ಡು ಮುಂಗಡ ಬಂದೈತಿ, ನನ್ನ ಹೆಸರಲ್ಲೇ ಒಂದು ಖಾತೆ ತೆಗೆದು ಇಡರಿ,ಉಳಿದ ಫಾರ್ಮ್ಯಾಲಿಟೀಸ್ ಆಮ್ಯಾಲ ನೋಡೂಣಂತ' ಎಂದು ಹೇಳಿ ಅಂದಿನ ಮಾನಕ್ಕೆ ಬಲುದೊಡ್ಡ ರಕಮನ್ನೇ ಕೊಟ್ಟು ಹೋದರು. ಹೋದವರು ಮುಂದೆ ಒಂದೆರಡು ಗಂಟೆಗಳಲ್ಲಿ ವಾಹನ ಅಪಘಾತದಲ್ಲಿ ತೀರಿ ಹೋದರು. ನನಗೆ ಕಾಲೇಜಿನಲ್ಲಿ ಕೂಡ ಆಗೀಗ ಮಾತನಾಡಿಸಿದ ಮೇಲು ಮೇಲಿನ ಪರಿಚಯ ಬಿಟ್ಟರೆ ಅವರ ಪೂರ್ವಾಪರ ಗೊತ್ತಿರಲಿಲ್ಲ. ಆಮೇಲೆ ಅವರ ಮನೆಯವರನ್ನು ಹುಡುಕಿ ತೆಗೆದು, ಕಾನೂನಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಆ ದೊಡ್ಡ ಮೊತ್ತದ ಹಣವನ್ನು ಅವರ ಮನೆಗೇ ಒಯ್ದು ಮುಟ್ಟಿಸಿದ್ದು ಅದೇ ಒಂದು ಸಾಹಸದ ಕತೆ! ಅಂದು ಇನ್ನೂ ಎಳೆ ವಯಸ್ಸಿನ ಅವರ ವಿಧವೆ,ಕಣ್ಣೀರಿಡುತ್ತಾ ಕಾಗದಗಳಿಗೆ ಸಹಿ ಹಾಕಿದ ದುರಂತ ನೆನಪು ಎಂದಾದರೂ ಮಾಸೀತೇ?"
ಬದುಕು ಒಂದು ಸಂತೆ ಅನ್ನುವುದ ಮನೋಜ್ಞವಾಗಿ ಅನುಭವದಿಂದ ನಮ್ಮ ಅರಿವಿಗೆ ಬರುವಂತಹ ಬರವಣಿಗೆಯ ಈ ಪುಟ್ಟ ಪುಸ್ತಕ ಓದಲೇಬೇಕಾದ್ದು.
ಲೇಖಕರೇ ಹೇಳಿದಂತೆ ಅವರು ಬರವಣಿಗೆ ಪ್ರಾರಂಭಿಸಿದ್ದು ಸ್ವಲ್ಪ ತಡವಾಗಿ ಆದರೆ ಅವರ ಬರೆಯುವ ಶೈಲಿ ಪ್ರೌಢತೆಯನ್ನು ಎದ್ದು ತೋರಿಸುತ್ತದೆ. ಅವರ ಪುಸ್ತಕಗಳಲ್ಲಿ ತಿಳಿಹಾಸ್ಯ ಸಾಮಾನ್ಯವಾದದ್ದು ಅದರ ಜೊತೆಗೆ ಅಲ್ಲಲ್ಲಿ ಬದುಕಿನ ರಸಪ್ರಸಂಗಗಳ ಭಾವಗಳು ಮೂಡಿಬರುತ್ತವೆ. ಹಳ್ಳ ಬಂತು ಹಳ್ಳ ಕಾದಂಬರಿ ಓದಿದಾಗ ಗಂಭೀರ ಕಥಾವಸ್ತುವನ್ನು ಕೂಡ ಎಷ್ಟು ಚೆನ್ನಾಗಿ ಬರೆಯಬಲ್ಲರು ಅನಿಸುತ್ತದೆ. ಪ್ರಸ್ತುತ ಪುಸ್ತಕವು ವೈದ್ಯರ ಅಲ್ಪಮಟ್ಟಿಗೆ ಆತ್ಮವೃತ್ತಾಂತವೆಂದೇ ಹೇಳಬಹುದು. ವೈದ್ಯರನ್ನು ನೋಡಿದವರಿಗೆ ಗೊತ್ತು, ಅವರದು ಸಾಧಾರಣ ಸಣ್ಣ ಮೈಕಟ್ಟು. ಬ್ಯಾಂಕ್ ನೌಕರನಾಗಿ ಹೇಗೆ ಕೆಲಸ ನಿಭಾಯಿಸುತ್ತಾನೋ ಎಂಬ ಕುಟುಕುಟು ಅವರಮ್ಮನಿಗೆ. ಆದರೂ ಬ್ಯಾಂಕಿಗೆ ಸೇರಿ ತಮ್ಮ ಅನುಭವಗಳನ್ನು ಸವಿದವರು. ಬ್ಯಾಂಕಿನ ಜೀವನವೆಂದರೆ ದಿನವೂ ಭೇಟಿಯಾಗುವ ಜನರು ಲೆಕ್ಕವಿಲ್ಲದಷ್ಟು. ಆ ವೈವಿಧ್ಯಮಯ ಜನರನ್ನು ಸಂಧಿಸಿದ ಘಳಿಗೆಗಳನ್ನು ಬರೆದರೆ ದೊಡ್ಡ ಗ್ರಂಥವೇ ಆಗುತ್ತಿತ್ತೇನೋ. ಆದರೆ ವೈದ್ಯರು ಅದಕ್ಕೆ ಅವಕಾಶ ಕೊಡದೆ ಆ ಘಳಿಗೆಯಲ್ಲಿಯ ಅಮೂಲ್ಯವಾದವುಗಳನ್ನು ಬರೆದಿದ್ದಾರೆ. ಮೇಲೆ ಹೇಳಿದ ಹಾಗೆ ಜನರ ಸಂಪರ್ಕ ಹೆಚ್ಚಾಗಿದ್ದ ಕಾರಣ ವೈದ್ಯರಿಗೆ ಕನ್ನಡದ ಸಾಹಿತ್ಯದ ಜನರ ಸಂಪರ್ಕವು ಹೆಚ್ಚಾಗತೊಡಗಿತು. ಗೋಕಾಕರಂತೂ ಗಂಟೆಗಟ್ಟಲೆ ವೈದ್ಯರ ಚೇಂಬರಲ್ಲಿ ಕುಳಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಹುಟ್ಟೂರು ಧಾರವಾಡಕ್ಕೆ ಹೋದಾಗ ಸಮಯ ಸಿಕ್ಕಾಗ ಮನೋಹರ ಗ್ರಂಥಮಾಲೆಗೆ ಭೇಟಿ ನೀಡಿ ಅಲ್ಲಿಯವರ ಜೊತೆ ಸಾಹಿತ್ಯದ ಚಿಂತನೆಗಳನ್ನು ನಡೆಸುತ್ತಿದ್ದರು. ಈ ಚಿಂತನೆಗಳು ಮತ್ತು ಭೇಟಿಗಳು ವೈದ್ಯರಿಗೆ ಬರೆಯುವ ಹುಮ್ಮಸ್ಸನ್ನು ಇಮ್ಮಡಿಗೊಳಿಸಿತು. ಅಂದಿನಿಂದ ಪ್ರಬಂಧಗಳನ್ನು ಬರೆಯಲು ಆರಂಭಿಸಿ ಮುಂದೆ ಕೆಲವು ಕಥೆಗಳನ್ನು ಬರೆದರು. ಹಳ್ಳ ಬಂತು ಹಳ್ಳ ಪುಸ್ತಕ ವೈದ್ಯರ ಬಗ್ಗೆ ಜನರು ತಿಳಿದಿದ್ದ ಸಾಹಿತ್ಯ ಪ್ರಕಾರವನ್ನ ಬದಲಿಸುವಂತೆ ಮಾಡಿತು. ಅದೇ ಪುಸ್ತಕಕ್ಕೆ ಮುಂದೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಬಂದಿತು. ಕನ್ನಡಕ್ಕೆ ಅಲ್ಪವೇ ಪುಸ್ತಕಗಳನ್ನು ನೀಡಿದ್ದರೂ ಅವೆಲ್ಲ ಪುಸ್ತಕಗಳು ಕನ್ನಡ ಸಾಹಿತ್ಯದಲ್ಲಿ ಅಜರಾಮರ. ಇತ್ತೀಚಿಗೆ ನಿಧನಹೊಂದಿದ ವೈದ್ಯರನ್ನು ಭೇಟಿಯಾಗಬೇಕೆಂಬ ಆಸೆ ಆಸೆಯಾಗಿಯೇ ಉಳೀತು.