ಬದಿಕಿಗೆ ಹತ್ತಿರವಾದ ಪಾತ್ರಗಳನ್ನು ನಾವು ಸ್ವಾಭಾವಿಕವಾಗಿಯೇ ಪ್ರೀತಿಸುವಂತೆ ಕತೆಗಳು ನಿರೂಪವಾಗಿವೆ. ರಮ್ಯ ಸಂಪ್ರದಾಯದ ಕತೆಗಾರರ ಹಾಗೆ ದೂರ ನಿಲ್ಲದೇ, ದೂರ ನಿಂತು ವ್ಯಾಖ್ಯಾನ ಮಾಡದೇ, ವಿವೇಕ ಕತೆಗಳ ಒಳಗೆ ಪ್ರವೇಶಿಸಿಬಿಡುತ್ತಾರೆ. ನಮ್ಮನ್ನು ಒಳಗೆ ಕರೆದು, ಅವುಗಳೊಳಗೆ, ಅವರ ಪಾತ್ರಗಳ ಸಂಗಡ ನಾವೂ ಬದುಕುವಂತೆ ಮಾಡಿಬಿಡುತ್ತಾರೆ. ಇದು ಅವರ ಹೆಚ್ಚುಗಾರಿಕೆಯಲ್ಲದೇ ಇನ್ನೇನು?
ವಿವೇಕರ ಕಥೆಗಳು ಅಂದರೆ ಅಲ್ಲಿ ಆಡಂಬರವಿರುವುದಿಲ್ಲ, ಅಬ್ಬರವಿರುವುದಿಲ್ಲ; ಸಾಮಾನ್ಯ ಜನರ ಸಾಮಾನ್ಯ ಕಥೆಗಳೇ, ನಮ್ಮನ್ನು ತಟ್ಟುವುದು ವಿವೇಕರ ಪಾತ್ರಗಳ ಅಸಹಾಯಕತೆ. ಅವುಗಳಲ್ಲಿ ನಮ್ಮನ್ನೋ, ನಮ್ಮ ತಂದೆಯನ್ನೋ, ನಮ್ಮ ತಾಯಿಯನ್ನೋ ಕಾಣುವಷ್ಟು ನೈಜ ಘಟನೆಗಳ ಸರಣಿಗಳು. ಪಾತ್ರಗಳ ಚಡಪಡಿಕೆ ಮತ್ತು ಉತ್ತಮ ಭಾಷೆಯ ಮೆರಗು ಕಥೆಗಳ ಕೊನೆಯ ಸಾಲಿನವರೆಗೂ ಓದುಗರನ್ನು ಅದರ ಕಥಾಪ್ರಪಂಚದಲ್ಲಿ ತೊಡಗಿಸಿಕೊಳ್ಳುತ್ತದೆ.