Jump to ratings and reviews
Rate this book

ಒಂದು ಬದಿ ಕಡಲು [Ondu Badi Kadalu]

Rate this book
ಈ ಕಥನವು ಘಟಿಸುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಕರಾವಳಿಯ ಈ ಜಿಲ್ಲೆಯಲ್ಲಿ ಹಲವು ನದಿಗಳು ಹರಿದು ಸಮುದ್ರ ಸೇರುತ್ತವೆ. ನದಿಯು ಸಮುದ್ರವನ್ನು ಸೇರುವ ತಾಣವು ದೂರದಿಂದ ಶಾಂತ ಮನೋಹರವಾಗಿ ತೋರಿದರೂ, ಆ ಅಳಿವೆಯ ನಡುವೆ ಹೋಗಿ ನೋಡಿದಾಗಲೇ ನದಿಯು ಸಾಗರವನ್ನು ಸೇರುವಾಗಿನ ಕೋಲಾಹಲ ಕಾಣುವುದು. ಅಂತೆಯೇ ಬದಲಾವಣೆಯೊಡನೆ ಸೆಣಸುತ್ತಿರುವ ಇಲ್ಲಿಯ ಜೀವನವೂ.

216 pages, Paperback

First published January 1, 2007

5 people are currently reading
47 people want to read

About the author

Vivek Shanbhag

17 books331 followers

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
4 (10%)
4 stars
26 (68%)
3 stars
7 (18%)
2 stars
1 (2%)
1 star
0 (0%)
Displaying 1 - 9 of 9 reviews
Profile Image for That dorky lady.
375 reviews73 followers
January 21, 2021
ಇಲ್ಲಿಯವರೆಗೆ ವಿವೇಕ ಶಾನುಭಾಗರ ಕಥೆಗಳನ್ನಷ್ಟೇ ಓದಿಕೊಂಡಿದ್ದ ನನಗೆ ಎಲ್ಲೋ ಶುರುವಾಗಿ ಇನ್ನೆಲ್ಲೋ ತಿರುಗಿ ಹಾದು ಮತ್ತದೇ ಎಡೆಗೆ ಬಂದು ಪರ್ಯಾವಸನವಾದ ಇನ್ನೂರು ಚಿಲ್ಲರೆ ಪುಟಗಳ ಈ ಕಾದಂಬರಿಯ ವಿಸ್ತಾರ, ಅಗಾಧತೆ ಒಂದು ಅಚ್ಚರಿ. ನಾವು ಓದುಗರಿಗೊಂದು ಗೀಳಿರುತ್ತದಲ್ಲಾ - ಎರಡು ಪುಟ ಓದಿ ಮೂರನೆಯದ್ದನ್ನು ಊಹಿಸುವುದು - ಅಂತಾ ನನ್ನೆಲ್ಲಾ ಊಹೆಗಳನ್ನೂ ಹೆಚ್ಚೂಕಮ್ಮಿ ಬುಡಮೇಲು ಮಾಡುತ್ತಾ ಮುಂದುವರೆದು ಖುಷಿಕೊಟ್ಟಿತು.

ಹೆಸರೇ ಸೂಚಿಸುವಂತೆ ಕರಾವಳಿ ತೀರದ ಜನಜೀವನದ ಕಥೆ. ಕಷ್ಟಸಹಿಷ್ಣು ಅತ್ತೆ-ಸೊಸೆಯರ ಜೋಡಿ ಮರಳಿ ಮಣ್ಣಿಗೆ ಕಾದಂಬರಿಯ ಅತ್ತಿಗೆ ನಾದಿನಿಯರ ಜೋಡಿ ನೆನಪಿಸಿತು. ಗೋದಾವರಿ, ಯಮುನೆ, ಫಂಡರಿಯರ ಛಲ, ಜೀವನೋತ್ಸಾಹ, ಪುರಂದರ, ಸುನಂದೆಯರ ಅನಾಥ ಪ್ರಜ್ಞೆ, ಇದ್ದೂಇಲ್ಲದಂತಿರುವ ಮನೆಯ ಗಂಡಸರು.. ಎಲ್ಲವೂ ಎಷ್ಟು ಸಹಜ!
ಮೇಲ್ನೋಟಕ್ಕೆ ಸರಳವಾಗಿರುವ ಜೀವನ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತಾ ಜಟಿಲವಾಗುವ, ಆಯ್ಕೆ ಮತ್ತು ಸಾಧ್ಯತೆಗಳ ನಡುವೆ ಸಂಬಂಧಗಳ ಸಂಕೀರ್ಣತೆ, ನಿಲ್ಲದೇ ಮುಂದುವರಿಯಲೇಬೇಕಾದ ಬದುಕಿನ ಅನಿವಾರ್ಯತೆಗಳ ಸುತ್ತ ಕುಸುರಿಯಾದ ಕಾದಂಬರಿ‌ ಮೊದಲ ಓದಿಗೆ ಇಷ್ಟು ಸಿಕ್ಕಿ ಇಷ್ಟವಾಯಿತು. ಮತ್ತೆ ಇನ್ನೊಮ್ಮೆ ಓದಿದರೆ ಬೇರೆಯದೇ ಆಯಾಮ ಸಿಕ್ಕೀತು.. Lets see.
Profile Image for Harini  S T.
28 reviews8 followers
October 5, 2021
!•ಒಂದು ಬದಿ ಕಡಲು•!|
ವಿವೇಕ ಶಾನಭಾಗ

ಒಂದು ಬದಿ ಸಹ್ಯಾದ್ರಿ ಒಂದು ಬದಿ ಕಡಲು
ನಡು ಮಧ್ಯದಲ್ಲಿ ಅಡಿಕೆ ತೆಂಗುಗಳ ಮಡಿಲು.
ಶರಾವತಿ ನದಿ ಸಮುದ್ರ ಸೇರುವುದು ಹೊನ್ನಾವರದಲ್ಲಿ .ಮೀನು ದೋಣಿಗಳು,ಲಾಂಚುಗಳು,ದೊಡ್ಡ ತೆಪ್ಪಗಳು,ಮೀನು ಮಾಡುವವರು,ನದಿ ದಾಟುವವರ,ದಾಟಿ ಬಂದವರು ,ಅನಗತ್ಯ ಓಡಾಡುವವರು,ದೋಣಿಯಲ್ಲಿ ಹತ್ತಿ ಕೋರುತ್ತಿರುವ ಜನರು ಹುಟ್ಟು ಹಾಕುವ ಅಂಬಿಗರ ಉದ್ಗಾರಗಳು ದೋಣಿ ಇನ್ನೊಂದು ಬದಿ ತಲುಪಿದ ನಂತರ ದೋಣಿ ಮತ್ತೆ ಮರಳಿ ಹೊನ್ನಾವರಕ್ಕೆ ಆಗಮನ.

ಕಾಸರಗೋಡು ಊರಿನ ಪುರಂದರ ಬೇಸಿಗೆಯ ರಜಾ ದಿನಗಳನ್ನು ಕಳೆಯಲು ಹೊನ್ನಾವರದ ದೇವರಾಯನ ಮಾವನ ಮನೆಗೆ ಪುರಂದರ ಬಂದಿದ್ದು.ಪಂಢರಿ ಮತ್ತು ಯಮುನೆ ಇಬ್ಬರು ವಿಧವೆಯರು ಘಾಟಿ ಹೆಂಗಸರು.ದೇವರಾಯ ಹಾಗೂ ಪಂಢರಿಯನೇ ಮನೆ ಅಕ್ಕಪಕ್ಕ .ಎರಡು ಅಷ್ಟು ದೊಡ್ಡ ದೊಡ್ಡ ಮನೆಗಳಲ್ಲದಿದ್ದರೂ ಮಹಡಿಗೆ ಹಂಚು ಹಾಕಿಸಿದ್ದರು ಸ್ವಲ್ಪ ಘನವಾಗಿ ಕಾಣಿಸುತ್ತಿತ್ತು‌.
ಎರಡು ಮನೆಯ ಹಿಂಭಾಗದಲ್ಲಿ ದೊಡ್ಡ ದೊಡ್ಡ ಎತ್ತರದ ಮರಗಳು ಮಾವಿನಮರಗಳು ನಾನಾ ಹೂಬಳ್ಳಿಗಳು, ತರಕಾರಿ,ದೇವರಾಯನ ಭಾಗಕ್ಕಿಂತ ಅತ್ತೆ-ಸೊಸೆ ಜಾಸ್ತಿ ಇದ್ದರೂ ಅವರು ಸ್ವಚ್ಛವಾಗಿ ಬೆಳೆಸಿದ್ದರು.

ಪಂಢರಿ ಮನೆಗೆ ದೂರದ ಸಂಬಂಧವಾಗಬೇಕು ರಜೆಯ ಕೆಲವು ದಿನಗಳು ಕಳೆಯಲು ಬಂದಿದ್ದಳು ಅವಳ ಹೆಸರು ಮೋಹಿನಿ.ಇವರಿಬ್ಬರೂ ಹಿಂಭಾಗದ ಹಿತ್ತಿಲಿನಲ್ಲಿ ಮಾವಿನಕಾಯಿ ಹುಡುಕುತಿದ್ದರು ಯಾರಿಗೆ ಮೊದಲು ಸಿಗುತ್ತದೆ? ಯಾರಿಗೆ ಎಷ್ಟು ಸಿಗುತ್ತದೆ? ಪುರಂದರ ಹಾಗೂ ಮೋಹಿನಿ ಮೊದಲು ಯಾರು ಹಿತ್ತಲಿಗೆ ಬರುವುದು ಮಾವಿನಕಾಯಿ ಹುಡುಕುವುದು ಇವರಿಬ್ಬರ ನಡುವೆ ಪಂದ್ಯ ಶುರುವಾಯಿತು.ಪುರಂದರನಿಗೆ ಅವಳ ಮೇಲೆ ಮನಸಾಯ್ತು ಆದರೆ ಅವನಿಗೆ ಹೇಳಿಕೊಡಲು ಧೈರ್ಯವಿಲ್ಲ.ಪುರಂದರನಿಗೆ ಮೋಹಿನಿ ಅವನ ಮನಸ್ಸಿನಲ್ಲಿ ಆಳವಾಗಿ ಉಳಿದುಬಿಟ್ಟಳು ಮತ್ತೆ ಅವಳನ್ನು ಬೆಟ್ಟಿ ಯಾಗುವ ಅವಕಾಶ ಅವನಿಗೆ ಸಿಗಲಿಲ್ಲ .

ಗೋದಾವರಿ ಗಂಡ ಸರ್ವೋತ್ತಮ ಕುಟುಂಬ ಸಮೇತ ಹೊನ್ನಾವರದ ದೇವರಾಯರ ಮನೆಯಲ್ಲಿ ವಾಸಿಸುತ್ತಾರೆ .ಸುನಂದೆ ತಾಯಿ ಬಾವಿಯಲ್ಲಿ ಬಿದ್ದು ಸತ್ತಳು,ತಂದೆ ಮುಡೇಶ್ವರ ಸಮುದ್ರದಲ್ಲಿ ತೀರಿಕೊಂಡರು, ಗೋದಾವರಿ ಅವಳನ್ನು ಮಗಳ ಹಾಗೆ ಬೆಳೆಸಿದಳು. ಸುನಂದಳ ಮದುವೆಗಾಗಿ ಗಂಡು ಹುಡುಕಾಟ .ಅವಳ ಜಾತಕದಲ್ಲಿ ತಂದೆಯಿಲ್ಲದ ಹುಡುಗನನ್ನು ಮದುವೆಯಾಗಬೇಕು.

ಧಾರವಾಡದಲ್ಲಿ ಬಿಎ ಮುಗಿದನಂತರ ಪುರಂದರ ಹುಬ್ಬಳ್ಳಿಯಲ್ಲಿ ದಿನನಿತ್ಯದ ಖಾನಾವಳಿ ಅಲ್ಲಿ ಊಟ.ಪುರಂದರನ ಗೆಳೆಯ ಯಶವಂತ ತನ್ನ ಆಸೆ ಎಂಬಂತೆ ಪುಣೆ ನಾಟಕ ಕಂಪನಿಗೆ ಹೋಗಿದ್ದಾನೆ.
ರಾತ್ರೋರಾತ್ರಿ ಯಾರಿಗೂ ಹೇಳದೆ ಯಶವಂತ ಪುಣೆಗೆ ಹೋಗಿದ್ದಾನೆ ಅವನ ಮನೆಯಲ್ಲಿ ಅವನಿಗಾಗಿ ಹುಡುಕಾಟ.ನಾಟಕಗಾರ ಬಗ್ಗೆ ಹೇಳುವುದು ಉಂಟೆ ರಸಿಕತೆ, ರಾಮಲೀಲೆ,ನಾಟಕ ಕಂಪನಿ ಅಂದಮೇಲೆ ಎಲ್ಲಾ ಬಗ್ಗೆ ಅನುಭವಗಳು,ಒಂದೂರಿನಿಂದ ಮತ್ತೊಂದು ಊರು ಎಲ್ಲವೂ ಯಶವಂತನ ಬದುಕಿನಲ್ಲಿ ನಡೆದುಹೋದ ಘಟನೆಗಳು.

ರಮಕಾಂತ್ ಮಾಸ್ತರ ಮನಃಸ್ಪೂರ್ತಿಯಾಗಿ ಇಷ್ಟಪಟ್ಟಿದ್ದ ವಿಧವೆ ಎಂಬ ಕಾರಣಕ್ಕೋ ಅಥವಾ ಅವಳ ಸೌಂದರ್ಯಕ್ಕೆ ಅಥವಾ ಅವಳ ಮನೆಗೆ ಹೋಗಿ ಬರುವ ಕಾರಣಕ್ಕೂ.ಯಮುನೆಯನ್ನು ಇಷ್ಟಪಟ್ಟಿದ್ದರು. ರಮಾಕಾಂತ ಮಾಸ್ತರ್ ಕ್ರಾಂತಿಯೆಂಬ ಬಂಡಾಯವನ್ನು ಹೊರತುಪಡಿಸಿ ಪದ್ಧತಿ ಮುರಿದು ವಿಧವೆಯಾದ ಯಮುನೆ ಮದುವೆಯಾದರೂ ಅವಳ ಬದುಕಿಗೊಂದು ಅರ್ಥ ಕಲ್ಪಿಸಿಕೊಟ್ಟರು.

ಬ್ಯಾಂಕೊಂದರಲ್ಲಿ ಕಾಯಂ ನೌಕರಿ
ಕಾರ್ಯನಿರ್ವಹಿಸುತ್ತಿದ್ದ ಪುರಂದರ ಸುನಂದೆಯನ್ನು ಮದುವೆಯಾದ. ಇದೊಂದು ನಮ್ಮ ಸುತ್ತಮುತ್ತಲಿನ ನಡೆಯುವ ಕಾದಂಬರಿ.ಕಥೆಯ ಬಗ್ಗೆ ಸಾಕಷ್ಟು ಹೇಳಬಹುದು. ಪಾತ್ರಗಳು ಹಲವಾರು . ಇಲ್ಲಿ ಬಡತನದ ನೋವಿದೆ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಮದುವೆ ಮಾಡಬೇಕೆಂಬ ಹಿರಿಯರ ತಯಾರಿ.ನೌಕರಿಯಿಲ್ಲ,ಬರುವ ಸಂಬಳದಲ್ಲಿ ಸಂಸಾರ ನಡೆಸುವುದು ಕಷ್ಟವಿದ್ದರೂ ಹೇಳಲಾಗುವುದಿಲ್ಲ .ಈಗಿನ ಕಾಲಘಟ್ಟಕ್ಕೆ ನಡೆಯುವ ಕಥೆಯ ಆಧಾರ ಕಾದಂಬರಿಯ ರೂಪದಲ್ಲಿ ಇದು ನಿಜವಾಗಲೂ ಓದಲೇ ಬೇಕಾಗಿರುವುದು.

ಹರಿಣಿ
Profile Image for Soumya.
217 reviews48 followers
November 7, 2021
ಎಷ್ಟೊಂದು ಪಾತ್ರಗಳು. ಎಲ್ಲ ಪಾತ್ರಗಳಿಗೂ ಒಂದೊಂದು ಕಥೆ. ಈ ಪಾತ್ರಗಳ ಕಥೆಗಳನ್ನ ಸೇರಿಸಿರುವ ರೀತಿ ಅಚ್ಚುಕಟ್ಟಾಗಿದೆ.

ಮುಂದೆ ಹೀಗೆ ಆಗತ್ತೆ ಅಂತ ಓದುತ್ತಿರುವಾಗ ಅದು ನಾ ಎಣಿಸಿದ ಹಾಗೆ ಆಗೋದೇ ಇಲ್ಲ, ಮತ್ತೇನೋ ಆಗಿರತ್ತೆ.
Starting ಅಲ್ಲಿ ಎಲ್ಲೋ ಒಂದ್ ಕಡೆ ಒಂದ್ ರೀತಿ ಪತ್ತೇದಾರಿ ಕಾದಂಬರಿ feel ಕೊಡ್ತು. ಇನ್ನೇನ್ ಕೊಲೆನೆ ಆಗತ್ತೇನೋ ಅನ್ನೋ ತರ ಇತ್ತು :P
ಬರುವ ಹಲವು ಪಾತ್ರಗಳು ಒಂದಲ್ಲ ಒಂದು ಕಾರಣಕ್ಕೆ ಇಷ್ಟ ಆಗುತ್ತದೆ.
ಪೂರ್ತಿ ಪುಸ್ತಕ ಓದಿದ ನಂತರ ಫಂಡರಿ ಪಾತ್ರ ಹೆಚ್ಚೇ ಇಷ್ಟ ಆಯ್ತು.

ಎಲ್ಲೂ ಬೇಜಾರ್ ಮಾಡದೆ, ಓದಿಸ್ಕೊಂಡು ಹೋಗುವ ಪುಸ್ತಕ.
Profile Image for Srinath.
54 reviews15 followers
November 30, 2020
ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು
ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು
ಹೀಗೆ ಆರಂಭವಾಗುವ ದಿನಕರ ದೇಸಾಯಿ ಯವರ ಕರಾವಳಿ ಜಿಲ್ಲೆ ಉತ್ತರ ಕನ್ನಡದ ಬಗೆಗಿನ ಪದ್ಯದ ಸಾಲಿನಿಂದ ಪಡೆದ ಹೆಸರಿನ ಈ ಕಾದಂಬರಿಯಲ್ಲಿನ ಮುಖ್ಯ ಕಥನವು ಘಟಿಸುವುದು ಅದೇ ಕರಾವಳಿ ಜಿಲ್ಲೆಯಲ್ಲಿ. ಯಶವಂತ ಚಿತ್ತಾಲರಿಂದ ಹಿಡಿದು ಈಚೆಗಿನ ಹಲವು ಬರಹಗಾರರ ಕೃತಿಗಳಲ್ಲಿ ಈ ಜಿಲ್ಲೆಯ ಬದುಕಿನ ಚಿತ್ರಣ ಪರಿಣಾಮಕಾರಿಯಾಗಿ ಮೂಡಿಬಂದಿರುವುದು ವಿಶೇಷ.
ಈಚಿನ ವರ್ಷಗಳಲ್ಲಿ ಕನ್ನಡದಲ್ಲಿ ಒಂದು ಪ್ರಜ್ಞಾವಂತ ಓದುಗ ವರ್ಗವನ್ನೆ ಗುರಿಯಾಗಿಸಿಕೊಂಡು ಏಳು ವರ್ಷಗಳ ಕಾಲ ಅತ್ಯುತ್ತಮವಾಗಿ ಹಾಗೂ ಅತ್ಯಂತ ಯಶಸ್ವಿಯಾಗಿ ಪ್ರಕಟಣೆ ಕಂಡ 'ದೇಶ ಕಾಲ' ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಪರಿಚಿತರಾಗಿದ್ದ ವಿವೇಕ್ ಶಾನಭಾಗ್ ಅವರ ಕಾದಂಬರಿ ಎಂದೊಡನೆ ಸಹಜವಾಗಿಯೇ ಕೃತಿಯ ಕುರಿತು ಕುತೂಹಲವಿತ್ತು. ಹೊಸ ಆರ್ಥಿಕ ವ್ಯವಸ್ಥೆ, ಮಾರುಕಟ್ಟೆ, ಜಾಗತೀಕರಣ, ನಗರೀಕರಣ ಇತ್ಯಾದಿಗಳು ದೈನಂದಿನ ಜೀವನದಲ್ಲಿ ತಂದೊಡ್ಡುವ ಸವಾಲುಗಳನ್ನೂ ಬದಲಾವಣೆಗಳನ್ನೂ ಸಮರ್ಥವಾಗಿ ಅಭಿವ್ಯಕ್ತಿಸಲು ದೇಶ ಕಾಲ ಒಂದು ಉತ್ತಮ ವೇದಿಕೆಯಾಗಿ ರೂಪುಗೊಂಡಿತ್ತು. ಹೊಸ ಸಾಹಿತ್ಯದ ಪ್ರಕಾಶನದ ಜೊತೆಗೇ ಈ ಪತ್ರಿಕೆಯು ವರ್ತಮಾನದ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಪ್ರಶ್ನೆಗಳಿಗೆ ಮುಖಾಮುಖಿಯಾಗುತ್ತಿದ್ದ ಬಗೆಯೂ ವಿಶಿಷ್ಟವಾಗಿರುತ್ತಿತ್ತು. ಅಂತಹದ್ದೊಂದು ಪತ್ರಿಕೆಯ ರೂವಾರಿಯಾಗಿದ್ದ ಲೇಖಕರು ತಮ್ಮ 'ಒಂದು ಬದಿ ಕಡಲು' ಕೃತಿಗೆ ನಗರದಿಂದ ದೂರದಲ್ಲಿರುವ ಚಿಕ್ಕದೊಂದು ಊರಿನ ಜೀವನದ ಹಿನ್ನೆಲೆಯನ್ನು ಆರಿಸಿಕೊಂಡ ಬಗ್ಗೆಯೂ ಕುತೂಹಲವಿತ್ತು.
ಆಧುನಿಕ ತಂತ್ರಜ್ಞಾನ ಸಂಬಂಧದ ವೃತ್ತಿಗಳನ್ನು ಅವಲಂಬಿಸಿ ನಗರವಾಸಿಗಳಾಗಿರುವ ನಮ್ಮಂತಹವರು ಈ ಸಮಕಾಲೀನ ತಂತ್ರಜ್ಞಾನ ತಂದು ಹೇರುವ ಒಂದು ನಿರ್ದಿಷ್ಟವೂ ಏಕರೂಪಿಯೂ ಆದ ಜೀವನ ಕ್ರಮಕ್ಕೆ ಪಕ್ಕಾಗಿರುತ್ತೇವೆ. ಎಷ್ಟರಮಟ್ಟಿಗೆಂದರೆ, ಕೆಲವೇ ವರುಷಗಳ ಹಿಂದೆ ನಮ್ಮ ಜೀವನದ ಭಾಗವೇ ಆಗಿದ್ದ ಹಳ್ಳಿ ಮತ್ತು ಕಿರುಪಟ್ಟಣಗಳ ಬದುಕು ಇಂದು ನಮಗೆ ಸಂಬಂಧವೇ ಪಡದ ಬೇರೊಂದು ಲೋಕ ಎಂದು ಅನಿಸುವಷ್ಟು. ಆದರೆ ಸಾಹಿತ್ಯ ಎಂದರೆ ಎಲ್ಲ ಜೀವನ ಕ್ರಮಗಳ, ಎಲ್ಲ ಜನರ ಅನುಭವಗಳ ಅಭಿವ್ಯಕ್ತಿ.
'ಒಂದು ಬದಿ ಕಡಲು' ಪ್ರತಿನಿಧಿಸುವ ಜೀವನ ಕ್ರಮ ಸದ್ಯ���್ಕೆ ನಮ್ಮದಲ್ಲದೆ ಇರಬಹುದು. ಇಲ್ಲಿನ ಪಾತ್ರಗಳ ಗೋಳುಗಳು, ಗೋಜಲುಗಳು ನಮಗೆ ಸಂಬಂಧವೇ ಪಡದಿರಬಹುದು. ನಾವು ಮುಖ್ಯವಾಗಿ ಗಮನಿಸಬೇಕಾದದ್ದು ಇಲ್ಲಿನ ಪಾತ್ರಗಳು ಜೀವನ ತಂದು ಒಡ್ಡುವ ಸಮಸ್ಯೆಗಳಿಗೆ ಸಂಕಷ್ಟಗಳಿಗೆ ತಾಳ್ಮೆಯಿಂದ ಧೈರ್ಯದಿಂದ ನಿರುದ್ವಿಗ್ನತೆಯಿಂದ ಎದಿರಾಗುವ ಬಗೆ. ಅದರಲ್ಲೊಂದು ಪಾಠವಿದೆ. ಆ ದೃಷ್ಟಿಯಿಂದ ಎಲ್ಲ ಉತ್ತಮ ಕೃತಿಗಳಿಗೂ ಒಂದು ಪ್ರಸ್ತುತತೆಯಿರುತ್ತದೆ.
ಇಪ್ಪತ್ತರ ವಯಸ್ಸಿಗೇ ವಿಧವೆಯರಾದರೂ ಧೈರ್ಯಗೆಡದೆ ಆತ್ಮವಿಶ್ವಾಸದಿಂದ ಜೀವನ ಸಾಗಿಸುವ ಅತ್ತೆ-ಸೊಸೆ ಪಂಢರಿ ಮತ್ತು ಯಮುನಾ, ಅನಾಥೆಯಾದ ತನ್ನ ತಂಗಿಯ ಮಗಳು ಸುನಂದೆಯನ್ನು ಕರೆತಂದು ಸಾಕಿ, ಮುಂದೆ ತನ್ನೆಲ್ಲ ಚಾಣಾಕ್ಷತೆಯನ್ನುಪಯೋಗಿಸಿ ಉತ್ತಮ ವರನಾದ ಪುರಂದರನ ಜತೆ ಅವಳ ವಿವಾಹವನ್ನೂ ಮಾಡುವ 'ಜೀರಿ ಮೆಣಸು' ಗೋದಾವರಿ, ನಾಟಕದ ಖಯಾಲಿಗೆ ಬಿದ್ದ ಯಶವಂತ, ಸಮಾಜದ ಕಟ್ಟುಪಾಡನ್ನು ಮೀರುವ ಧೈರ್ಯ ತೋರುವ ರಮಾಕಾಂತ ಮಾಸ್ತರ, ಹೀಗೇ ಹಲವು ಪಾತ್ರಗಳು ನೆನಪಲ್ಲುಳಿಯುತ್ತವೆ.
ಉತ್ತರ ಕನ್ನಡದ ಜನರು ತಮ್ಮ ಎಂದಿನ ಧಾವಂತವಿಲ್ಲದ ಸಾವಧಾನದ ಬದುಕಿನಲ್ಲಿ ಅನಿವಾರ್ಯವಾಗಿ ಎದುರಾಗುವ ಸನ್ನಿವೇಶಗಳನ್ನು ನಿರ್ವಿಕಾರವಾಗಿ ನಿಭಾಯಿಸುವುದರ ಚಿತ್ರಣ ಕೃತಿಯಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

For more reviews, see:
https://srikannadi.blogspot.com/
Profile Image for ಸುಶಾಂತ ಕುರಂದವಾಡ.
422 reviews25 followers
April 17, 2024
ವಿಭಿನ್ನ ಪಾತ್ರಗಳನ್ನೊಳಗೊಂಡಿರುವ ಕಾದಂಬರಿ. ಮಲೆನಾಡಿನ ಕಡೆಗೆ ಲೇಖಕರು ನಮ್ಮನ್ನು ಈ ಕಾದಂಬರಿಯ ಮುಖಾಂತರ ಕರೆದೊಯ್ಯುತ್ತಾರೆ. ಕಾದಂಬರಿಯ ಕಥೆ ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ನೋಡುವಂತಹದು. ಒಬ್ಬರ ದಾಕ್ಷಿಣ್ಯಕ್ಕೆ ಬಿದ್ದಾಗ ಅವರ ವಿರುದ್ಧ ಹೋದರೆ ಮನಸ್ತಾಪ, ಅವರ ಇಚ್ಛೆಯಂತೆ ನಡೆದುಕೊಂಡರೆ ಸ್ವಮನಸ್ತಾಪ. ಇದೊಂದು ದೊಡ್ಡ ಸಮಸ್ಯೆ. ಇದಷ್ಟೇ ಅಲ್ಲದೆ ಕೌಟುಂಬಿಕ ಕಥಾವಸ್ತುವನ್ನು ಈ ಕಾದಂಬರಿ ಹೊಂದಿದೆ. ಸ್ವಲ್ಪ ನಿಧಾನವಾದರೂ ಓದಿಸಿಕೊಂಡು ಹೋಗುತ್ತದೆ
5 reviews1 follower
April 27, 2020
ಘಾಚರ್ ಘೋಚರ್ ನಂತರ ಓದಿದ ವಿವೇಕ ಶಾನಭಾಗರ ಎರಡನೇ ಪುಸ್ತಕ ಇದು. ಒಂದು ಬದಿ ಕಡಲು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುವ ಒಂದು ಕಥನ. ಕೊಂಕಣಿ ಕುಟುಂಬದ ಒಳಗೆ ನಡೆಯುವ ಈ ಕಥೆಯನ್ನು ಲೇಖಕರು ಬಹಳ ನವಿರಾಗಿ ಚಿತ್ರಿಸಿದ್ದಾರೆ.

ಇದೊಂದು ಕಥಾಗುಚ್ಛ ಎನ್ನಬಹುದೇನೋ.. ಹಲವಾರು ಪಾತ್ರಗಳ ಕಥೆಗಳು ಒಂದರೊಳಗೊಂದು ಮಿಳಿತವಾಗಿರುವ ರೀತಿಯನ್ನು ಚಿತ್ರಿಸುವುದು ಸುಲಭವಲ್ಲ. ಆದರೆ ಶಾನಭಾಗರು ಅಂತಹ ಕೆಲವು ಕಥಾಸುಳಿಗಳನ್ನು ಬಹಳ ಸೂಕ್ಷ್ಮವಾಗಿ ನೇಯ್ದಿದ್ದಾರೆ ಈ ಪುಸ್ತಕದಲ್ಲಿ.

ಪುಸ್ತಕದ ಶುರುವಿನಲ್ಲಿ ಒಂದು ಎಳೆಗೂ ಮತ್ತೊಂದು ಎಳೆಗೂ ಸಂಬಂಧ ತಿಳಿಯದೆ ಓದುಗ ಕೊಂಚ ಕಸಿವಿಸಿಗೊಳ್ಳಬಹುದು. ಆದರೆ ನಿಧಾನವಾಗಿ ಒಂದು ಕಥೆಯೊಳಗೆ ಮತ್ತೊಂದು ಹೊಕ್ಕುವ ವೇಳೆಗೆ ಅವು ಬರಿಯ ರೇಖೆಗಳಲ್ಲ, ಅವೆಲ್ಲ ಸೇರಿ ಒಂದು ಚಿತ್ರದ ಆಕಾರ ಪಡೆಯುವುದೆಂದು ತಿಳಿಯುತ್ತದೆ. ಆ ಹಂತದವರೆಗೆ ಓದುಗನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಶಾನುಭಾಗರು ಯಶಸ್ವಿಯಾಗುವುದು ತಮ್ಮ ಬರವಣಿಗೆಯ ಶೈಲಿಯಿಂದಲೇ ಹೊರತು ಕಥೆಯ ಹೊಳಹಿನಿಂದಲ್ಲ. ಆದರೆ ಯಾವ ಕ್ಷಣದಲ್ಲಿ ಎಲ್ಲ ಎಳೆಗಳ ಸಂಗಮ ಗೋಚರವಾಗುವುದೋ, ಆ ಕ್ಷಣದಿಂದ ಕಥೆ ಕೂಡ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.

ನವಿರಾದ ರೀತಿಯಲ್ಲಿ ಅವರು ಕಥೆಯನ್ನು ಬಿಡಿಸಿಡುವ ರೀತಿ ನೋಡಿದಾಗಲೆಲ್ಲ ಅವರ ಪಾದದ ಬುಡದಲ್ಲಿ ಕುಳಿತು "ನನಗೂ ಹೇಳಿಕೊಡಿ" ಎಂದು ಕೇಳಿಬಿಡುವ ಅನ್ನಿಸುವುದುಂಟು. ಅವರ ಲೇಖನಿಯಿಂದ ಇನ್ನು ಹಲವಾರು ಕಥೆ-ಕಾದಂಬರಿಗಳು ಮೂಡಿ ಬರಲಿ ಎಂದು ಆಶಿಸುತ್ತೇನೆ.

- ವಿಜಯ್ ಭಟ್.
https://kathegeethe.wordpress.com/
Profile Image for Nishchita.
15 reviews4 followers
January 6, 2023
ಈ ಕಥನವು ಘಟಿಸುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿಯ ಈ ಜಿಲ್ಲೆಯಲ್ಲಿ ಹಲವು ನದಿಗಳು ಹರಿದು ಸಮುದ್ರ ಸೇರುತ್ತವೆ. ನದಿಯು ಸಮುದ್ರವನ್ನು ಸೇರುವ ತಾಣವು ದೂರದಿಂದ ಶಾಂತ ಮನೋಹರವಾಗಿ ತೋರಿದರೂ, ಆ ಅಳಿವೆಯ ನಡುವೆ ಹೋಗಿ ನೋಡಿದಾಗಲೇ ನದಿಯು ಸಾಗರವನ್ನು ಸೇರುವಾಗಿನ ಕೋಲಾಹಲ ಕಾಣುವುದು, ಅಂತೆಯೇ ಬದಲಾವಣೆಯೊಡನೆ ಸೆಣಸುತ್ತಿರುವ ಇಲ್ಲಿಯ ಜೀವನವೂ.

'ಒಂದು ಬದಿ ಕಡಲು' ಈ ಕೃತಿಯು, ೧೦-೧೫ ದಶಕಗಳ ಹಿಂದಿನ ಕರಾವಳಿಯ ಗ್ರಾಮೀಣ ಬದುಕಿನ ಚಿತ್ರಣವನ್ನು ನಮ್ಮ ಮುಂದೆ ಇಡುತ್ತದೆ. ಇಲ್ಲಿ ಬರುವ ಪಾತ್ರಗಳು ನಮಗೆ ಚಿರಪರಿಚವೆನಿಸುವಂತೆ ಅಕ್ಕ-ಪಕ್ಕದಲ್ಲೇ ಹಿಂದೊಮ್ಮೆ ಘಟಿಸಿದ ಘಟನೆಗಳಂತೆ ಕಾಣುತ್ತದೆ. ಪ್ರತಿ ಪುಟದಲ್ಲು ಬರುವ ಕರಾವಳಿಯ ಭಾಷೆಯ ಕಂಪು ತುಂಬಾ ಆಪ್ತವೆನಿಸಿತು.
Profile Image for Rakshith Kumar P.
23 reviews1 follower
September 8, 2020
ಕಡಲ ತೀರದ ನಡುವೆ ಜೀವನದ ಇರುಸು ಮುರುಸುಗಳು ಇದರಲ್ಲಿವೆ....
1 review1 follower
December 18, 2021
ಓದಿದ್ದು ಬಹಳ ಹಿಂದೆ, ಆದರೆ ಕಥೆ ಇನ್ನು ತಾಜ.ಎಲ್ಲವನ್ನ ಎಷ್ಟು ಬೇಕು ಅಷ್ಟೇ ವಿವರಿಸುವ ಹಳ್ಳಿ ಸೊಗಡಿರುವ ಸು‌ಂದರ ಕಥೆ.
ಇದರಿಂದಲೇ ವಿವೇಕ್ ಅವರ ಮತ್ತೊಂದು ಪುಸ್ತಕ ಓದುತ್ತಿದ್ದೇನೆ.
Displaying 1 - 9 of 9 reviews

Can't find what you're looking for?

Get help and learn more about the design.