Jogi Girish Rao Hatwar ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.
ಜೋಗಿಯವರ ಬರಹಗಳ ಪತ್ರಿಕೆಗಳಲ್ಲಿ ಓದಿ ಗೊತ್ತಿಲ್ಲದವರಿಗೆ ಅವರ ರಾಯಭಾಗದ ರಹಸ್ಯರಾತ್ರಿ ನಂತರ ಬಂದ ಮತ್ತೆ ಕೆಲವು ಭೂತದ ಕತೆಗಳ ಸಂಕಲನ. ನಿಜವಾಗಿಯೂ ಇರುವವರ ಹೆಸರುಗಳ, ಜಾಗಗಳ , ಕೆಲವೊಮ್ಮೆ 'ಹೋಗಿ ನೋಡಿ ಬಿಡುವ ಅಲ್ಲಿಗೆ' ಅನಿಸುವಂತೆ ಬರೆದ ಕತೆಗಳಿವು. ಅವರೇ ಹೇಳುವಂತೆ ಇದು ಸತ್ಯವೂ ಆಗಿರಬಹುದು ಅಲ್ಲದೆಯೂ ಇರಬಹುದು. ಹಾಲಿವುಡ್ ಸಿನಿಮಾಗಳಂತೆ ಭಾಸವಾಗುವ ಕತೆಗಳೂ ಇಲ್ಲಿವೆ; ದೆಯ್ಯದ ಮನೆಯಂತಹ ಕತೆಗಳೂ ಇವೆ. ನಡುರಾತ್ರಿಯ ಪಯಣ, ಇದ್ದಕ್ಕಿದ್ದಂತೆ ಎದುರಾಗುವ ಅಪರಿಚಿತ ಜಾಗ, ನಡೆವ ಘಟನೆಗಳು, ಸ್ಟಾರ್ಟಾಗದ ಕಾರು ಇಂತಹವನ್ನು ಹೊರತುಪಡಿಸಿಯೂ ಏನೋ ಅರ್ಥವಾಗದ್ದರ ಕಡೆ ಟಾರ್ಚ್ ಬಿಡುವ ಕಾರಣ ಈ ಪುಸ್ತಕ ಖುಷಿ ಕೊಡುತ್ತದೆ. ಓದಿ ನೋಡಿ.