ಇಸವಿ 2000 ರಲ್ಲಿ ಲಂಕೇಶ್ ಹೋದ ಬಳಿಕದಿಂದ ಅದಾಗಲೇ ಸರಕೆಲ್ಲ ಮುಗಿದುಹೋಗಿದ್ದ ಅವರನ್ನು ಜನರಲ್ಲಿ ಜೀವಂತ ಇರಿಸಲು (ಜನರು ಅಂದರೆ ಅವರ ಬಾಲಬಡುಕರಾಗಿದ್ದ ಒಂದು ಹತ್ತು ಹದಿನೈದು ಜನರ ಭ್ರಮೆ) ಇನ್ನಿಲ್ಲದ ಪ್ರಯತ್ನ ನಡೆಸಲಾಗುತ್ತಿದೆ. ಅವರು ತೀರಿ ಹೋದ ಬಳಿಕ ಎರಡು ಕಡೆಗಳಿಂದ ಹೊರಬರುತ್ತಿದ್ದ ಪತ್ರಿಕೆ ಸೊರಗಿ ಸೋತು ಸುಣ್ಣವಾಗಿ ಮಲಗಿದಲ್ಲೇ ಆದರೂ ಅಧಿಕಾರ ಬಿಡಲೊಲ್ಲದ ರಾಜಕಾರಣಿಯಂತಾಗಿತ್ತು. ಅಪ್ಪನ ಶೈಲಿಯ ಆದರೆ ಹೂರಣವಿಲ್ಲದ ಬೈಯ್ಗುಳ, ಈ 2000ದ ನಂತರದ ದಿನಗಳಲ್ಲಿ ಲಂಕೇಶ್ ಯಾವತ್ತೋ ತೊಂಬತ್ತು ಎಂಬತ್ತರ ದಶಕದಲ್ಲಿ ಬರೆದ ಸಂಗತಿಗಳ ಮರುಮುದ್ರಣ ಹೀಗೆ ನಿಜವಾದ ಸಮಸ್ಯೆ ಅದಲ್ಲ ಲಂಕೇಶ್ ಬಿತ್ತಿ ಹೋದ ಬೆಳೆಗಳೆಲ್ಲ ತಮ್ಮೆದುರಿನ ಹೊಸ ಪೀಳಿಗೆಯ ಮುಂದೆ ತಾವು ಲಂಕೇಶ್ ವಿಶ್ವವಿದ್ಯಾಲಯದಲ್ಲಿ ಕಲಿತವರು ಅಂತ ತಮ್ಮನ್ನ ದೊಡ್ಡ ಸ್ಕಾಲರ್ ತರಹ ಬಿಂಬಿಸಿಕೊಂಡು, ಆ ಮನುಷ್ಯನನ್ನು 'ಮೇಷ್ಟ್ರು' ಅಂತ ಕರೆದು ರಾಮ ರಾಮ ಹೇಳಿ ಪ್ರಯೋಜನವಿಲ್ಲ. ಆಗೆಲ್ಲ ನಾನು ನಮ್ಮ ಕದ್ರಿ ದ್ವಾರ ಇದೆಯಲ್ಲ ಮಲ್ಲಿಕಟ್ಟೆ ಅಲ್ಲೊಂದು ಲೈಬ್ರರಿ ಇದೆ ಅಲ್ಲಿ ಹೋಗಿ ಇದ್ದ ಬದ್ದ ಪೇಪರ್ ಎಲ್ಲಾ ಓದ್ತಾ ಇದ್ದೆ. ಆಗ ಈ ಲಂಕೇಶ್ ಪತ್ರಿಕೆ ಕೂಡ ಅಲ್ಲಿತ್ತು. ಒಂದು ಸಂಚಿಕೆಯಲ್ಲಿ ಓದುಗರ ಪ್ರತಿಕ್ರಿಯೆ ಪ್ರಕಟಿಸುತ್ತಾ ' ನನ್ನ ಬಳಿ ಲಂಕೇಶ್ ಬರೆದ ಎಲ್ಲ ಪುಸ್ತಕ ಇದೆ .ಆದರೆ ಪತ್ರಿಕೆಯಲ್ಲಿ ನೀವು ಪ್ರಕಟಿಸುವ ಅವರ ಹಳೇ ಲೇಖನ ಓದ್ತೇನೆ.ಖುಷಿಯಾಗ್ತದೆ' ಅಂತ ಇತ್ತು. ಅಯ್ಯೋ ಇವರ ಅವಸ್ಥೆಯೇ ಅನಿಸಿತ್ತು. ಆಯಿತು. ಟೀಕಿಸುವುದಾದರೂ ಓದಬೇಕಲ್ಲ. ಲಂಕೇಶರ ಓದಿ, 'ಕಂಡ ಹಾಗೆ' ಅನ್ನುವ ಗೌರಿ ಲಂಕೇಶ್ ಬರಹ ಸಂಕಲನ ಓದುವಾಗ ಸಾಕು ಸಾಕಾಗಿತ್ತು. ಆ ಪ್ರಕಾಶನದಿಂದ ಬಂದ ಒಳ್ಳೆಯ ಪುಸ್ತಕಗಳಲ್ಲಿ ' ಮಂಗನ ಬ್ಯಾಟೆ' 'ಜಿಮ್ ಕಾರ್ಬೆಟ್' ಮಾತ್ರ ಓದಬೇಕಾದವು. ಮತ್ತೆಲ್ಲ ವಿಷ ಅಷ್ಟೇ. ವಿಷಯಕ್ಕೆ ಬಂದೆ. ವಿಷಯ ಏನೆಂದರೆ ಲಂಕೇಶ್ ಸತ್ತ ಮೇಲೆ ಬರೆಯಲಿಲ್ಲ. ಹೇಗೆ ಬರೆಯುತ್ತಾರೆ ಅಲ್ವಾ? ಹಾಗಾಗಿ ಆ ಹೆಸರು ಹಾಕಿ ಅವರ ಅದೇ ಹಳೆಯ ಬರಹಗಳ ವಿಂಗಡಿಸಿ ' ಮನಕೆ ಕಾರಂಜಿಯ ಸ್ಪರ್ಶ', ''ಆಟ ಜೂಜು ಮೋಜು',' ಸಾಹಿತಿ ಸಾಹಿತ್ಯ ವಿಮರ್ಶೆ' ಅಂತೆಲ್ಲ ತಂದರು. ಗೊತ್ತಿಲ್ಲದೆ ಕೊಂಡು ಅದೇ ಹಳೆಯ ಬರಹಗಳ ಓದಿ ಸಿಟ್ಟು ಬಂತು.
ನನ್ನ ಪ್ರಾಮಾಣಿಕ ಅಭಿಪ್ರಾಯ ಏನೆಂದರೆ ಬಿರುಕು, ಕಲ್ಲು ಕರಗುವ ಸಮಯ, ನೀಲು ಪದ್ಯಗಳು,ಅವ್ವ ಕವಿತೆ, ತೆರೆಗಳು,ಸಂಕ್ರಾಂತಿ, ಟೀಕೆ ಟಿಪ್ಪಣಿ ೧,೨ ಇವಿಷ್ಟು ಲಂಕೇಶರ ಅತ್ಯುತ್ತಮ ರಚನೆಗಳು.ಎಲ್ಲ ಪ್ರಕಾರಗಳಲ್ಲೂ ಒಳ್ಳೆಯ ಗುಣಮಟ್ಟದ ಬರಹಗಳ ಬರೆದವರು. ಆದರೆ ಎಲ್ಲ ಬಣ್ಣ ಮಸಿ ನುಂಗಿತು ಎಂಬಂತೆ ಕನ್ನಡ ಪತ್ರಿಕೆಗಳ ಭಾಷೆ ಹಾಳುಮಾಡಿದರು. ಭಟ್ಟಂಗಿಗಳ ಪಡೆ ಬೆಳೆಸಿ ಬಿಟ್ಟು ಹೋದರು, ಎಲ್ಲಕ್ಕಿಂತ ತಮ್ಮ ನಂತರ ಪತ್ರಿಕೆ ನಡೆಯುವಂತೆ ಮಾಡಿದರು. ಇವೆಲ್ಲ ಕನ್ನಡ ಸಾಹಿತ್ಯದ ದುರಂತಗಳು.
ಪ್ರಸ್ತುತ ಪುಸ್ತಕದ ಕುರಿತು ಹೇಳಲು ಹೆಚ್ಚೇನೂ ಇಲ್ಲ. ಲಂಕೇಶರ ಅಷ್ಟೇನೂ ಮುಖ್ಯವಲ್ಲದ ಅಪ್ರಸ್ತುತ ಬರಹಗಳ ಸಂಕಲನ. ವಿಷಾದದಿಂದ ಹಣ ಮಾಡುವುದಕ್ಕೇ ಅಂತ ಮಾಡಿದ ಸಂಕಲನದಂತೆ ಭಾಸವಾಯಿತು.