"ಬೇರು" ನಮ್ಮ ಕಾಲದ ಬದುಕನ್ನು ಕುರಿತ ಸಾವಕಾಶ ಕಥನ. ಕಾದಂಬರಿಯಲ್ಲಿ ಕೆಟ್ಟವರು ಬದಲಾಗುತ್ತಾರೆ, ಅಸಹಾಯಕರು ಹೊಸ ವಿಶ್ವಾಸ ಗಳಿಸುತ್ತಾರೆ, ಸೋತಂತೆ ಕಂಡರೂ ಆದರ್ಶವೆನ್ನುವುದು ಕೆಡುಕರನ್ನು ನಾಶ ಮಾಡದೆ ಒಳ್ಳೆಯವರನ್ನಾಗಿ ಪರಿವರ್ತಿಸುತ್ತದೆ. ಬದುಕೆಂಬ ಮರದ ಸಾವಿರುವುದೇ ಒಳಿತಿನಲ್ಲಿ. ಕ್ರೌರ್ಯ, ಹಿಂಸೆ, ಅನ್ಯಾಯ ಇವೆಲ್ಲವೂ ನಿಜ; ಆದರೆ ಹಂಬಲವಾದ ಶಾಂತಿ ಸಮಾಧಾನ, ಸಹಬಾಳುವೆ ಇವೆ ಜೀವನ ವೃಕ್ಷವನ್ನು ಪೊರೆಯುವ ಬೇರುಗಳು. ಇಂಥ ಸ್ವಸ್ಥ ಬದುಕಿನ ಸಾಧ್ಯತೆಯನ್ನು ಈ ಕಾದಂಬರಿ ಅನಾವರಣಗೊಳಿಸುತ್ತದೆ. ಸೂಕ್ಷ್ಮ ನಿರೀಕ್ಷೆಯಿಂದ ಮೂಡಿದ ಖಚಿತ ಚಿತ್ರಗಳು, ಆ ಚಿತ್ರಗಳೊಂದಿಗೆ ಬೆಸೆದಿರುವ ಭಾವಲೋಕ ಇವನ್ನೆಲ್ಲ ಓದುಗರೂ ಕಾಣುವಂತೆ "ಫಕೀರ" ನಡೆಸಿರುವ ಪ್ರಯತ್ನ ಮೆಚ್ಚುಗೆಗೆ ಅರ್ಹವಾದದ್ದು. ಆದರ್ಶದ ಸಾಖ್ಷತ್ಕಾರದ ಸಾಧ್ಯತೆಯನ್ನು ಹುಡುಕುವ ಪ್ರಯತ್ನವಾಗಿ "ಬೇರು" ಕಾದಂಬರಿ ನಮ್ಮ ಕಾಲದ ಬರವಣಿಗೆ ಮರೆತಿರುವ ಸ್ವಸ್ಥ ಸಮಾಜ ನಿರ್ಮಾಣದ ಜವಾಬ್ದಾರಿಯನ್ನು ನೆನಪಿಸುತ್ತದೆ
-ಪ್ರೊ ಓ ಎಲ್ ನಾಗಭೂಷಣ್
ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಕೆಳಗಿನ ಇಮೇಲ್ ನಲ್ಲಿ ಹಂಚಿಕೊಳ್ಳಿ banvasicircle@hotmail.com
ಒಳ್ಳೆಯತನದ ಆದರ್ಶಗಳ ಕಥೆ ಬರುವುದೇ ಅಪರೂಪವಾದ ಈ ದಿನಗಳಲ್ಲಿ ಇತ್ತೀಚಿಗಷ್ಟೇ ಓದಿದ ಎರಡನೆಯ ಆ ತರಹದ ಪುಸ್ತಕ. ಮೊದಲನೆಯದು ಅಜಿತ್ ಹೆಗ್ಡೆ ಅವರ ಪರಿಧಾವಿ ಕಥಾಸಂಕಲನ. ಈ ಕಾದಂಬರಿಯಲ್ಲಿ ಬೇರೆ ಬೇರೆ ಹಿನ್ನೆಲೆಯ ದೈಹಿಕ ಆರೋಗ್ಯ ಸರಿಯಿಲ್ಲದ ಜನ ತಮ್ಮ ಸಮಸ್ಯೆಗಳ ಹೊತ್ತುಕೊಂಡು ಕರುಣಾಶ್ರಯ ಎಂಬ ಆಸ್ಪತ್ರೆಗೆ ಬರುತ್ತಾರೆ. ಆ ಊರಿನ ಬದುಕಲ್ಲಿ ತಾವೂ ಒಳಗೊಳ್ಳುತ್ತಾರೆ.ಅವರ ಯಾತನೆಯ, ಊರಿನ ಗೊಂದಲಗಳ ಚಿತ್ರಣ ಚೆನ್ನಾಗಿ ಬಂದಿದೆ. ಕೆಟ್ಟವರು ಒಳ್ಳೆಯವರಾಗಿ ಬದಲಾಬಹುದು ಎಂಬುದರ ಚಿತ್ರಣ ಚೆನ್ನಾಗಿ ಬಂದಿದೆ.ಮೊದಲ ಕಾದಂಬರಿ ಎಂಬುದಕ್ಕೆ ಕುರುಹು ಸಿಗುವಂತೆ ಅಲ್ಲಲ್ಲಿ ವರ್ತಮಾನದ ಸಾಲುಗಳಿಗೆ ಭವಿಷ್ಯದ ಪದಬಳಕೆ ಇತ್ಯಾದಿ ಸಣ್ಣ ಪುಟ್ಟ ತಪ್ಪುಗಳಿವೆ. ಆದರೆ ಕಥೆಯ ಓಘಕ್ಕೆ ಇವು ಅಷ್ಟೇನೂ ಅಡ್ಡಿಯಾಗುವುದಿಲ್ಲ. ಭಾಷೆಯ ಬಳಕೆಯಿಂದ ಕೃತಿ ಗಮನ ಸೆಳೆಯುತ್ತದೆ.
ಸಾಹಿತ್ಯಾಸಕ್ತ ಮಿತ್ರರು ಸಿಕ್ಕಾಗ ಹೆಚ್ಚಾಗಿ ಮಾತನಾಡುವುದು ನಾವು ಓದಿದ ಪುಸ್ತಕಗಳ ಬಗ್ಗೆ. ನನ್ನ ಬಹುತೇಕ ಮಿತ್ರರು ಕನ್ನಡ, ಇಂಗ್ಲಿಷ್, ಸಂಸ್ಕೃತ ಮತ್ತು ಒಂದೆರಡು ಹಿಂದಿಯಲ್ಲೂ ಓದಿದ್ದಾರೆ. ಹೆಚ್ಚಿನವರಿಗೆ ಕಾರಂತರು, ತೇಜಸ್ವಿ ಅಂದರೆ ಇಷ್ಟ. ಆ ಒಂದು ಸಾಮ್ಯ ಇರುವುದರಿಂದ ಹಲವಾರು ವಿಚಾರಗಳು ವಿನಿಮಯ ಆಗ್ತಾನೇ ಇರುತ್ತದೆ. ಅದರಲ್ಲಿ ಒಂದು ವಿಭಿನ್ನ ಶೈಲಿಯ ಮತ್ತು ವಿಭಿನ್ನ ಕಥಾವಸ್ತು ಆಧಾರಿತ ಪುಸ್ತಕಗಳನ್ನು ಓದುವುದು ಮತ್ತು ಅದರ ಬಗ್ಗೆ ವಿವರಣೆ ನೀಡುವುದು. ಅಂತಹ ಕಾದಂಬರಿಯ ಸಾಲಿಗೆ ಬೇರು ನಿಲ್ಲುತ್ತದೆ. ಮುಂದೇನಾಗುತ್ತದೆ ಎಂಬ ಕುತೂಹಲ ಕೊನೆವರೆಗೂ ಇದೆ. ಕಥಾವಸ್ತು ಮತ್ತು ಅದರ ಮೂಲಕ ಹೇಳಬೇಕೆದಿರುವ ಮೌಲ್ಯಗಳು ತುಂಬಾ ಹಿಡಿಸಿತು. ಲೇಖಕರು ತಮ್ಮ ಮುಂದಿನ ಕಾದಂಬರಿಯಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ನಿರೂಪಣೆ ಮಾಡುತ್ತಾರೆ ಎಂದು ನಾನು ನಂಬಿದ್ದೇನೆ.
“ಕೆಲವೊಂದು ಸಿನಿಮಾದಲ್ಲಿನ ಉತ್ತಮ ಸಮಾಜ ಮತ್ತು ಪಾತ್ರಗಳನ್ನು ನೋಡಿದಾಗ, ನಿಜ ಜೀವನದ ಸಮಾಜ ಹಾಗೂ ವ್ಯಕ್ತಿಗಳು ಇದೇರೀತಿ ಇದ್ದರೆ ಬದುಕು ಎಷ್ಟು ಸುಂದರವಾಗಿರುತ್ತದೆ ಎನಿಸುತ್ತದೆ, ಅದೇರೀತಿ ಭಾವ ಈ ಕೃತಿಯನ್ನು ಓದಿ ಮುಗಿಸಿದಾಗ ಅನಿಸಿದ್ದು.”
“ಪ್ರಸ್ತುತ ಸಮಾಜದಲ್ಲಿ ಮಧ್ಯಮ ವರ್ಗದ ಜನ ಸಾಮಾನ್ಯರ ದುಡಿದ ಹಣ ಆಸ್ಪತ್ರೆಯ ವೆಚ್ಚಕ್ಕೆ ಹೆಚ್ಚು ಪೋಲಾಗಿ ಆಸ್ಪತ್ರೆಗಳು ಜೀವ ಉಳಿಸಿ ಮತ್ತೆ ಪ್ರತಿನಿತ್ಯ ಸಾಯುವಂತೆ ರಾಕ್ಷಸನಾಗಿ ಕಾಡುತ್ತವೆ. ಅಂತಹ ಸಮಾಜದಲ್ಲಿ “ಕರುಣಾಶ್ರಯ” ಎನ್ನುವ ಮಾದರಿ ಆಸ್ಪತ್ರೆಗಳು ಸಮಾಜಕ್ಕೆ ಬೇಕು ಮತ್ತು ಡಾ. ಚಂದ್ರಶೇಖರ್ ಅಂಥವರ ಉತ್ತಮ ವ್ಯಕ್ತಿತ್ವದ ವೈದ್ಯರುಗಳೂ ಬೇಕು.”
“ಆರ್ಥಿಕ ಉದ್ಯಮದಲ್ಲಿ ಹೆಚ್ಚು ಹಣ ಗಳಿಸಿದವರಿಗೂ ಆರೋಗ್ಯದ ಸಮಸ್ಯೆ ಇದೆಯೆಂದು ಮತ್ತು ಅವರ ಮನಸ್ಸು ಆಸ್ಪತ್ರೆಯಲ್ಲಿದ್ದಾಗ ಹೇಗೆ ಮಾರ್ಪಾಡುಗತ್ತದೆಂದು “ಬಾಬುರಾವ್” ಪಾತ್ರವನ್ನು ಹೆಚ್ಚಾಗಿ ಚಿತ್ರಿಸುವಲ್ಲಿ ಲೇಖಕರು ಸಫಲರಾಗಿದ್ದಾರೆ. ಗಳಿಸಿದ ಹಣ “ಸಂಧ್ಯಾ” ನ ಕಾಲುಗಳ ಆಪರೇಷನ್ ಗೆ ಉಪಯೋಗವಾಗಿ ಅವಳು ಮತ್ತೆ ನಡೆಯುವಂತಾದಾಗ ಆ ಹಣಕ್ಕಿರುವ ಮೌಲ್ಯದ ಜೊತೆ ಬಾಬುರಾವ್ ನ ವ್ಯಕ್ತಿತ್ವ ಎಷ್ಟೋ ಶ್ರೀಮಂತರಿಗೆ ಆದರ್ಶವಾದಂತಿದೆ.
“ಈರಮ್ಮ ಮತ್ತು ರಾಮಸ್ವಾಮಿಯ ಸಂಬಂಧ ಅನ್ಯತಿಕವೆನಿಸಿದರೂ ಲಂಪಟತನವೆನಿಸುವುದಿಲ್ಲ, ಹೆಣ್ಣಿನ ಅನಿವಾರ್ಯತೆಗೆ ಮೈ ಮಾರಿಕೊಳ್ಳುವ ಈರಮ್ಮನ ಜೀವನದಲ್ಲಿನ ವ್ಯಕ್ತಿತ್ವ ಕೊನೆಗೆ ವೀರಸ್ವಾಮಿಯಲ್ಲಿ ದೇಹಕ್ಕೂ ಮೀರಿದ ಪ್ರೀತಿ ಸ್ಫುರಿಸಿ ಹೆಣ್ಣಿನ ಮೇಲೆ ಗೌರವವನ್ನು ಹೆಚ್ಚಿಸಿ ಒಳ್ಳೆಯವನನ್ನಾಗಿ ಮಾಡುತ್ತದೆ.”
“ಜವಾಬ್ದಾರಿಯುತ ಹೆಂಗಸಾದ ಕುಂತಮ್ಮನು ಕೊನೆಯವರೆಗೂ ಕಾಡುತ್ತಾಳೆ, ಗಂಡ ಮತ್ತು ಮಗ ಎಷ್ಟೇ ಕೆಟ್ಟವರಾದರೂ ಮಗನು ಅಪ್ಪನನ್ನು ಕೊಂದಾಗ ಮಾಂಗಲ್ಯ ಭಾಗ್ಯ ಕಳೆದುಕೊಂಡು ದುಃಖಿಸುತ್ತಾಳೆ. ಹೆಣ್ಣಿನ ಹೆಣ್ಣುತನಕ್ಕೆ ಸಾಕ್ಷಿಯಾಗುತ್ತಾಳೆ.ತಮ್ಮನಾದ ಚಂದ್ರಹಾಸ ನಿಜಕ್ಕೂ ಆದರ್ಶ ವ್ಯಕ್ತಿತ್ವಯಾಗಿ ಅಕ್ಕನ ಕಷ್ಟಗಳಿಗೆ ಬೆನ್ನೆಲುಬಾಗುತ್ತಾನೆ. ಹತಾಶೆಯಿಂದ ಆಶ್ರಮದಲ್ಲೇ ಜೀವನ ನಡೆಸುವ ಜೋಗಪ್ಪ ಮತ್ತು ಇತ್ಯಾದಿ ಪಾತ್ರಗಳು ಕಾಡುತ್ತವೆ.”
“ಶಿವಶಂಕರ ದೇಶವಾನ, ಪತ್ನಿ ಫ್ಲಾರೆನ್ಸ್, ಕುಂತಮ್ಮ, ಚಂದ್ರಹಾಸ, ಸಂಧ್ಯಾ, ಭರಮಪ್ಪ, ಈರಮ್ಮ, ಡಾ. ಚಂದ್ರಶೇಖರ್, ಸ್ವಾಮಿ ರಮಾನಂದ , ರಾಮಸ್ವಾಮಿ, ಬಾಬುರಾವ್ , ಮೀನಾ ನಾಯರ್ ಇತ್ಯಾದಿ ಪಾತ್ರಗಳು ಓದಿ ಮುಗಿಸಿದಾಗ ಜೊತೆಯಲ್ಲಿರುವಂತೆ ಭಾಸವಾಗುತ್ತದೆ.”
“ಸ್ವಸ್ಥ ಉತ್ತಮ ಸಮಾಜಕ್ಕೆ ಸ್ವಾಮಿ ರಮಾನಂದ, ಡಾ. ಚಂದ್ರಶೇಖರ್ ಅಂತಹವರು ನಡೆಸುವ “ಕರುಣಾಶ್ರಮ” ಎಲ್ಲೆಲ್ಲೂ ಇರಬೇಕು.”
ಸಮಕಾಲೀನ ಜಗತ್ತಿನ ಬದುಕಿನ ಹೋರಾಟದ ವಿವಿಧ ಮಜಲುಗಳನ್ನು ಮತ್ತು ಸಮಾಜದ ವ್ಯವಸ್ಥೆಗಳನ್ನು ಅನಾವರಣಗೊಳಿಸುವ ಸರಳ ಸುಂದರ ಕಾದಂಬರಿ.
ಈ ಕಾದಂಬರಿಯಲ್ಲಿ ಎಲ್ಲಾ ತರಹದ ಪಾತ್ರಗಳಿವೆ. ಎಂಡೋಸಲ್ಫಾನ್ ಪೀಡಿತ ಹುಡುಗಿ,ರಕ್ತದ ಕ್ಯಾನ್ಸರ್ ನಿಂದ ಬಳಲುವ ಬಾಲಕ,ಪೊಲೀಸರ ಗೋಲಿಬಾರ್ ನಲ್ಲಿ ತಲೆಗೆ ಏಟು ಬಿದ್ದು ಆಸ್ಪತ್ರೆಗೆ ಸೇರಿರುವ ಮೈತುಂಬ ಸಾಲ ಮಾಡಿಕೊಂಡಿರುವ ರೈತ, ಮಗಳಿಗೆ ಸಿಕ್ಕಿದ ಪರಿಹಾರದ ಹಣವನ್ನು ದುರ್ಬಳಕೆ ಮಾಡುವ ಅಪ್ಪ-ಅಣ್ಣ, ನಿಸ್ವಾರ್ಥ ಮನೋಭಾವನೆಯ ಸ್ವಾಮೀಜಿ, ವೈದ್ಯರು ಹೀಗೆ ಇನ್ನು ಕೆಲವು ಪಾತ್ರಗಳು ಬದುಕು ಕಟ್ಟಿಕೊಳ್ಳಲು ಪಡುವ ಹರಸಾಹಸವೇ ಈ ಕಾದಂಬರಿಯ ಕಥಾವಸ್ತು.
ಮೇಲೆ ಹೇಳಿದ ಪಾತ್ರಗಳಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ-ವ್ಯಥೆ. ತಮ್ಮ ತಮ್ಮ ಜೀವನವನ್ನು ಉತ್ತಮ ಪಡಿಸಲು ಹೋರಾಡುವ ಪಾತ್ರಗಳು ಎಷ್ಟು ಸೋಲುಗಳನ್ನು ಉಂಡರೂ,ಅವರ ಜೀವನ ಪ್ರೀತಿ ಸೋಲುವುದಿಲ್ಲ. ಆದರ್ಶ ಅನಾದರ್ಶಗಳು ಆಯ್ಕೆ ಇದ್ದವರಿಗೆ ಮಾತ್ರ. ಎಲ್ಲಾ ದಾರಿಗಳು ಮುಚ್ಚಿದ ಸಂದರ್ಭದಲ್ಲಿ ಬದುಕುಳಿಯುವುದು ಏಕಮಾತ್ರ ಉದ್ದೇಶವಾಗಿರುತ್ತದೆ. ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ಮತ್ತು ಅದಕ್ಕಾಗಿ ಆಯ್ಕೆ ಮಾಡಿಕೊಳ್ಳಬೇಕಾದ ಮಾರ್ಗಗಳ ನಡುವೆ ಇರುವ ಮಾನಸಿಕ ಒತ್ತಡ ಹಾಗೂ ತುಮುಲಗಳೇ ಇಲ್ಲಿ ಪ್ರಮುಖವಾಗಿವೆ.
ತಪ್ಪು ದಾರಿ ಹಿಡಿದವರು ಮಾನಸಿಕವಾಗಿ ಶುಧ್ಧರಾಗಿ ಉಳಿಯಬಹುದೇ? ಪ್ರತಿಯೊಬ್ಬ ವ್ಯಕ್ತಿಗೂ ತನ್ನ ತಪ್ಪನ್ನು ತಿದ್ದಿಕೊಂಡು ಮತ್ತೆ ಹೊಸ ಬಾಳನ್ನು ಕಟ್ಟಿಕೊಳ್ಳುವ ಅವಕಾಶವಿದೆಯೇ? ಇಂತಹ ಸಂದರ್ಭಗಳಲ್ಲಿ ಸುತ್ತಮುತ್ತಲಿನ ಸಮಾಜದ ಪಾತ್ರವೇನು? ನಮ್ಮ ಯೋಚನಾ ಲಹರಿ ಮತ್ತು ಭಾವನೆಗಳು ನಮ್ಮ ಮತ್ತು ಸಮಾಜದ ಬೆಳವಣಿಗೆಯಲ್ಲಿ ಬೀರುವ ಪ್ರಭಾವಗಳು, ಸಾಮಾಜಿಕ ವ್ಯವಸ್ಥೆಯೊಳಗೆ ಹಾಸು ಹೊಕ್ಕಾಗಿರುವ ಕೆಟ್ಟದ್ದನ್ನು ಉದಾತ್ತ ಆಲೋಚನೆ ವಿಚಾರಗಳ ಮೂಲಕ ಗೆಲ್ಲುವ ಬಗೆ, ಹೀಗೆ ಹತ್ತು ಹಲವು ಸಾಧ್ಯತೆಗಳನ್ನು ಪುಸ್ತಕವು ತೆರೆದಿಡುತ್ತದೆ.
ಬರವಸೆ ಒಂದೇ ಬದುಕಿನ "ಬೇರು" ಬೇರು ಈ ವರ್ಷ ನಾನು ಓದಿದ ದೊಡ್ಡ ಪುಸ್ತಕ. ಪುಸ್ತಕ ಸಂತೆಯಲ್ಲಿ ಸೋಶಿಯಲ್ ಮೀಡಿಯಾ ಅಲ್ಲಿ ಪರಿಚಯ ಇಲ್ಲದೆ ಇರುವ,ಗೊತ್ತಿಲ್ಲದ ಲೇಖಕರ ಪುಸ್ತಕ ಓದಬೇಕು ಅನ್ನುವ ಪ್ರಯೋಗಾತ್ಮಕ ಓದಿಗೆ ಆರಿಸಿಕೊಂಡ ಪುಸ್ತಕ ಇದು. ತುಂಬಾ ನಿಧಾನಕ್ಕೆ ಓದಿಸಿಕೊಂಡಿತು, ಅದಕ್ಕೆ ಕಾರಣ ಪುಸ್ತಕದ ವಿಷಯ ಅಂತದ್ದು. ಹೆಚ್ಚಾಗಿ ಮೌಲ್ಯಗಳನ್ನು ಹೇಳುವ ಕತೆಯನ್ನು ಹೆಚ್ಚಾಗಿ ಗ್ರಾಮೀಣ ಪರಿಸರದಲ್ಲಿ ಚಿತ್ರಿಸಿರುವ ಪುಸ್ತಕ ಓದಿದ್ದೆ, ಇದೇ ಮೊದಲ ಬಾರಿಗೆ ಆಸ್ಪತ್ರೆ ಒಂದರ ಅಂಗಳದಲ್ಲಿ ಕತೆ ಬಿಚ್ಚಿಕೊಳ್ಳುವುದು ಓದಿದ್ದು . ಕತೆ ಹೆಣೆದ ರೀತಿ ತುಂಬಾ ಚನ್ನಾಗಿದೆ. ಬದುಕೇ ಮುಗಿಯಿತು ಇದೇ ಕೊನೆಯ ಪ್ರಯತ್ನ ಎನ್ನುವ ನಿರಾಸೆಯನ್ನು ಹೊತ್ತು ಬಂದಿದ್ದ ಆಗರ್ಭ ಶ್ರೀಮಂತ ಬಾಬುರಾವ್ ಅವರ ಕ್ಯಾನ್ಸರ್ ಪೀಡಿತ ಮಗ ನಚಿಕೇತ, ಎಂಡೋಸಲ್ಫಾನ್ ಎಂಬ ವಿಷದ ಕಾರಣ ಅಂಗವೈಕಲ್ಯ ಅನುಭವಿಸುತ್ತಾ ಇದ್ದ ಸಂಧ್ಯಾ, ರೈತರಾ ಚಳುವಳಿಯಲ್ಲಿ ಭಾಗವಹಿಸಿ ತಲೆಗೆ ಪೆಟ್ಟು ಬಿದ್ದು ಹಾಸಿಗೆ ಹಿಡಿದ ಭರಮಪ್ಪ ಎಲ್ಲರಿಗೂ ಭರವಸೆಯ ಬೆಳಕಾಗಿದ್ದು ಬೆಂಗವಾಡಿಯ ಕರುಣಾಶ��ರಮ. ಬಾಬುರಾವ್ ಅವರ, ಸಂದ್ಯಾಳಾ ಕತೆ ಸಂಪೂರ್ಣ ಒಂದಕ್ಕೊಂಡು ತಳುಕು ಹಾಕಿಕೊಂಡು ಸುಖಾಂತ್ಯ ಕಂಡರೂ, ಈರಮ್ಮ ಮಾತ್ರ ದೊಡ್ಡ ಪ್ರಶ್ನೆ ಆಗಿ ಹೋದಳು. ಬಡತನ, ಗಂಡನ ಆರೋಗ್ಯಕ್ಕೋಸ್ಕರ ಈರಮ್ಮ ರಾಮಸ್ವಾಮಿ ಜೊತೆಗೆ ಸಂಬಂಧ ಬೆಳೆಸಿದ್ದು ತ್ಯಾಗ ಅನ್ನಿಸಿದರೂ. ಅಲ್ಲಲ್ಲೇ ರಾಮಸ್ವಾಮಿ ಸಾಂಗತ್ಯವನ್ನು ಬಯಸಿದ್ದು ಯಾಕೋ ಮನಸ್ಸಿಗೆ ಬರಲೇ ಇಲ್ಲ. ಕೊನೆಯಲ್ಲಿ ಅವಳ ಗಂಡ ಭರಮಪ್ಪನೇ ಉದಾತ್ತ ಮನೋಭಾವದವನು ಅನ್ನಿಸಿತು. ರಾಮಸ್ವಾಮಿಯನ್ನು ಒತ್ತಾಯ ಪೂರ್ವಕವಾಗಿ ಒಳ್ಳೆವನ್ನಾಗಿ ಮಾಡಲಾಯಿತು ಅನ್ನಿಸಿತು. ಕೊನೆಯವರೆಗೂ ಅವನು ಅವನ ಲಾಭವನ್ನೇ ನೋಡಿದ ಅನ್ನಿಸಿತು.
ಇನ್ನು ಗುರುಗಳ ಆಧ್ಯಾತ್ಮವೇ ಪುಸ್ತಕಕ್ಕೆ ಒಂದು ತೂಕ ತಂದುಕೊಡುತ್ತದೆ. ಅದಕ್ಕೆ ನಿಧಾನಕ್ಕೆ ಓದಿಸಿಕೊಂಡು ಹೋಯ್ತು. ಓದಿನಲ್ಲಿ ಒಳ್ಳೆಯ ಹಿಡಿತ ಇರುವವರು ಖಂಡಿತಾ ಈ ಪುಸ್ತಕ ಒಮ್ಮೆ ಓದಿ .
I met the author ಫಕೀರಾ (ಶ್ರೀಧರ್ ಬನವಾಸಿ) - at Divine Park. He is at least 3-4 years younger to me. And I was amazed by the talent he displayed. Was impressed by another book - British Bungale - ಬ್ರಿಟಿಷ್ ಬಂಗ್ಲೆ . In ಬೇರು we will see many stories taking place. But, they all are connected. The Idea of a Hospital the Author speaks about in this book is just amazing. Hopefully we will see such Hospital in our life time. Couldn't put this book down - Enjoyed reading this thoroughly