ಸುರೇಂದ್ರನಾಥರ ಮೂರು ನೀಳ್ಗತೆಗಳ ಸಂಕಲನ. ಸುರೇಂದ್ರನಾಥರ ಕತೆಗಳು ನನಗೆ ವಿಕ್ಷಿಪ್ತ ಅನಿಸಿವೆ. ಬಹುಶಃ ಅವರ ಸಮಗ್ರ ಹೊರಬಂದಾಗಲೂ ಅದಕ್ಕಿಡಬಹುದಾದ ಹೆಸರು ' ತಾಪತ್ರಯಗಳು ' ಅಂತಿದ್ದರೆ ಹೊಂದುತ್ತದೆ. ವ್ಯಕ್ತಿಯೊಬ್ಬನ ಸಮಸ್ಯೆಗಳ ಕೇಂದ್ರಿಕರಿಸಿಕೊಂಡು ಅದರಿಂದ ಅವನಿಗೂ,ಅವನು ಸಂವಹನಮಾಡುವ ಹೊರ ಜಗತ್ತಿಗೂ ಆಗುವ ತೊಂದರೆಗಳ ವಿಸ್ತೃತ ಚಿತ್ರಣ ಇವರ ಕತೆಗಳಲ್ಲಿ ಎದ್ದು ಕಾಣುತ್ತದೆ. ವಾಸ್ತವತೆಯ ಅತಿ ವಿವರಣೆ ಕೆಲವೊಮ್ಮೆ ನಾಟಕದ ಸಜ್ಜಿಕೆಯಂತೆ ಭಾಸವಾಗುತ್ತದೆ. ಇಲ್ಲಿ ಒಂದು ಕತೆಯಲ್ಲಿ ಬೇರೆಲ್ಲಿಂದಲೋ ಪಾತ್ರಗಳು ನಡೆದು ಬರುತ್ತದೆ. (ತೇಜಸ್ವಿಯ ಟೈಲರ್ ತುಕ್ಕೋಜಿ). ಸುರೇಂದ್ರನಾಥರ ಕತೆಗಳ ಗಮನಿಸಿದಾಗ ಎರಡು ಅಂಶಗಳು ಢಾಳಾಗಿ ಕಣ್ಣಿಗೆ ರಾಚುತ್ತದೆ. ಒಂದು ಸಣ್ಣ ಸಮಸ್ಯೆಯೊಂದರ ಚಪಾತಿ ನಾದಿದಂತಹ ಚಿತ್ರಣ. ಬರೇ ಗೋಡೆಯ ಮೇಲೆ ಬರೆದ ಗೋಡೆಬರಹದ ಬರಹಗಾರ ವಿದ್ಯಾರ್ಥಿ ಯಾರು ಎಂಬುದರ ಪತ್ತೆಗೆ ಹೊರಡುವ ಪ್ರಸಂಗ ಬೆಳೆದು ಬೆಳೆದು ಎಲ್ಲಿಗೋ ಹೋಗುತ್ತದೆ. ಒಂಥರಾ ಅಣುವಿನೊಳಗೆ ಬ್ರಹ್ಮಾಂಡದ ರೀತಿ. ಇನ್ನೊಂದು ವಿವರಗಳ ದಟ್ಟ ಚಿತ್ರಣ. ಜಾಗ ಮತ್ತು ವ್ಯಕ್ತಿಯ ಚಿತ್ರಣ ಕೊಡುವಾಗ ಅದು ಓದುಗನಿಗೆ ವ್ಯಕ್ತಿಯ ಮೈಯ ಬಟ್ಟೆಯ ವಾಸನೆಯೂ ತಾಕುವಂತೆ ಬರೆವ ಶೈಲಿ.
ಕನ್ನಡಕ್ಕೆ ಈ ಬಗೆಯ ಬರಹ ಅಷ್ಟು ಪರಿಚಿತವಲ್ಲ. ಸುರೇಂದ್ರನಾಥರ ಶೈಲಿ ಎಂದು ಹೇಳಬಹುದಾದ ಒಂದು ಶೈಲಿ ಅದು. ಕೆಲವೊಮ್ಮೆ ಓದುಗನಿಗೆ ಅಲ್ಲೇ ಸುತ್ತು ಹೊಡೆವ ಭಾವವೂ ಕಾಡಿ ಕಿರಿಕಿರಿಯಾಗುವ ಶೈಲಿ ಅದು.