ಆತ್ಮಕಥನಗಳಷ್ಟು ಒಳ್ಳೆಯ ಓದು ಇನ್ನೊಂದಿಲ್ಲ. ಸಮಸ್ಯೆ ಎಂದರೆ ಒಳ್ಳೆಯ ,ಪ್ರಾಮಾಣಿಕ ಆತ್ಮಕತೆ ಓದಲು ಸಿಗುವುದಿಲ್ಲ.
ನಿಷ್ಪಕ್ಷಪಾತ ಜೀವನಚರಿತ್ರೆಗಳು ಇರಬಹುದು. ಆದರೆ ಆತ್ಮಕತೆಗಳು ಪ್ರಾಮಾಣಿಕ ಮಾತ್ರ ಆಗಿರುತ್ತದೆ. ಯಾಕೆಂದರೆ ಅದು ಬರೆಯುವವ ತನ್ನ ಮನಸಿನ ಭಾವನೆಗಳನ್ನು ವ್ಯಕ್ತಪಡಿಸಿರುತ್ತಾನೆ. ಅವರ ನಿಲುವು ಸರಿಯೋ ತಪ್ಪೋ ಬೇರೆ ಮಾತು. ಅಂತಹ ಒಂದು ಆತ್ಮಕತೆ ಇದು.
ಲೇಖಕಿ ಉಡುಪಿಯವರು. ಅವರ ತಂದೆ ನವಯುಗ ಪತ್ರಿಕೆ ತಂದ ಹೊನ್ನಯ್ಯ ಶೆಟ್ಟರು. ಬ್ಯಾಂಕ್ ಉದ್ಯೋಗದಲ್ಲಿದ್ದು ಬರವಣಿಗೆಯ ಹವ್ಯಾಸ ಬೆಳೆಸಿಕೊಂಡವರು. ಅವರ ಬಾಲ್ಯದ ಚಿತ್ರಣ ದಟ್ಟವಾಗಿ ಬಂದಿದೆ. ತಮ್ಮ ವೃತ್ತಿ ಬದುಕಿನ ಬಗ್ಗೆ,ಬರವಣಿಗೆ ಬಗ್ಗೆ ಹೀಗೆ ಎಲ್ಲವನ್ನೂ ಮುಕ್ತವಾಗಿ ಬರೆದುಕೊಂಡಿದ್ದಾರೆ. ನನಗೆ ಪ್ರಾಮಾಣಿಕ ಅನಿಸಿದ್ದು ಇದಲ್ಲ. ತಮ್ಮ ಮಗನ ಸಂಸಾರದ ಬಗ್ಗೆ ,ಇಳಿವಯಸ್ಸಿನ ಕಷ್ಟಗಳ ಬಗ್ಗೆ ಉಷಾ ರೈ ಅವರು ಬರೆದ ರೀತಿ ಇದೆಯಲ್ಲ ಅದು ಸಾಮಾನ್ಯರು ಮುಕ್ತವಾಗಿ ಬರೆಯಲು ಹಿಂದೇಟು ಹಾಕುವಂತಿದೆ. ಇಲ್ಲಿ ಅವರ ನಿಲುವು ನಿಷ್ಪಕ್ಷಪಾತ ಅಂತ ನಾನು ಹೇಳುತ್ತಿಲ್ಲ.ಆದರೆ ಪ್ರಾಮಾಣಿಕವಾಗಿ ತನ್ನ ಅಭಿಪ್ರಾಯ ದಾಖಲಿಸುವುದು ಇದೆಯಲ್ಲ ಅದು ನಿಜವಾಗಿಯೂ ಸ್ತುತ್ಯರ್ಹ.
ಬಹಳ ದಿನಗಳ ನಂತರ ಒಬ್ಬರು ಹೃದಯವಂತರ ಬರವಣಿಗೆ ಓದಿದ ನೆಮ್ಮದಿ. ಇಷ್ಟವಾಯಿತು. ನೋವೂ ಆಯಿತು.