ನಮ್ಮ ದೇಹದ ಯಾವುದೋ ಭಾಗದಲ್ಲಿ ಒಂದು ಗಾಯವಾದರೆ ಅದು ವಾಸಿಯಾಗುವವರೆಗೂ ಅದರ ನೋವು, ನಮ್ಮ ದೇಹ ಮತ್ತು ಮನಸ್ಸನ್ನು ಕಾಡುತ್ತಲೇ ಇರುತ್ತದೆ. ಆದರೆ ಅದು ಮಾಯವಾಗದ ಸ್ಥಿತಿಗೆ ತಲುಪಿದರೆ!? ಯೋಚಿಸುವುದಕ್ಕೂ ಕಷ್ಟವಾಗುತ್ತದೆ ಅಲ್ಲವೇ. ಅದೇ ರೀತಿ ನಾವು ಅಂದರೆ ಮನುಷ್ಯರು ಭೂಮಿಯ ಮೇಲಿರುವ ಇತರ ಸಂಕುಲಗಳ ಮೇಲೆ ಮಾಡಿರುವ ಗಾಯ ವಾಸಿಮಾಡಲಾಗದಂಥದ್ದು.
ಭೂಮಿ ಇರುವುದು ಮನುಷ್ಯರಿಗೆ ಮಾತ್ರವಲ್ಲ ಸಕಲ ಜೀವರಾಶಿಗೆ. ಆದರೆ ಮನುಷ್ಯನ ಹುಚ್ಚಾಟಗಳಿಂದ ಕಳೆದುಹೋದ ಅನೇಕಾನೇಕ ಸಂಕುಲಗಳನ್ನು ಮರುಸೃಷ್ಟಿಸಲು ಮನುಷ್ಯನಿಂದ ಎಂದೂ ಸಾಧ್ಯವಿಲ್ಲ. ಈ ಮೇಲಿನ ಮಾತುಗಳ ಅರ್ಥ ಮೂಡಿಸುವ ಕೃತಿಯೇ "ಜೀವಜಾಲ".
ಈ ಕೃತಿಯೂ ಜೀವವಿಕಾಸದಿಂದಿಡಿದು- ಜೀವನಾಶದವರೆಗೂ ಬೆಳಕು ಚೆಲ್ಲುತ್ತದೆ.
ಇದರ ಮಧ್ಯದಲ್ಲಿ ಜೀವಿಗಳ ಬದುಕು, ಬದುಕಿಗಾಗಿ ಮಾಡುವ ಹೋರಾಟ, ಹೊಂದಾಣಿಕೆ, ಅವುಗಳ ವಂಶಾಭಿವೃದ್ಧಿ ಬಗ್ಗೆ ಸರಳವಾಗಿ, ಸುಂದರವಾಗಿ, ಅಚ್ಚರಿಪಡುವಂತೆ, ಅಳುಕು ಮೂಡುವಂತೆ ಕಟ್ಟಿಕೊಟ್ಟಿದ್ದಾರೆ ಲೇಖಕರು.
ಓದುತ್ತಾ ಹೋದಂತೆ ತೇಜಸ್ವಿಯವರ ಮಿಲೇನಿಯಂ ಸರಣಿಯನ್ನು ನೆನಪಿಸುತ್ತದೆ. ಎಲ್ಲರೂ ಓದಬೇಕಾದ ಪುಸ್ತಕ. ಅದರಲ್ಲೂ ಶಾಲಾ ಕಾಲೇಜುಗಳ ಮಕ್ಕಳು ಇಂಥ ಪುಸ್ತಕಗಳನ್ನು ಓದಬೇಕು.
ಉತ್ತಮ ಕೃತಿ.