Jogi Girish Rao Hatwar ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.
ಲೇಖಕರ ಬೆಂಗಳೂರು ಸರಣಿಯ ಪುಸ್ತಕ, ಹಿಂದಿನ ಪುಸ್ತಕದಲ್ಲಿ ಒಂದು ಪಾತ್ರದ ಸುತ್ತ ಒಂದು ಕಾಲ್ಪನಿಕ ಕಥೆ ಕಟ್ಟುವ ಲೇಖಕರು ,ಅದೇ ಹೆಸರಿನ ಮೊಮ್ಮಗನನ್ನು ಹುಡುಕಿ ಬರುವ ಪರಮೇಶ್ವರಿ ಅಜ್ಜಿಯ ಕಥೆ ಇದು.ಅಪ್ಪಂದಿರಿಗಾಗಿ ಆತ್ಮಾಹುತಿ ಆಗುವ ಗಂಡು ಮಕ್ಕಳು ಅನ್ನೋ ಒಂದು ಸನ್ನಿವೇಶ ತುಂಬಾ ಚೆನ್ನಾಗಿದೆ .
ಬೆಂಗಳೂರು ಸರಣಿಯ ಆರು ಸ್ವತಂತ್ರ ಕೃತಿಗಳಲ್ಲಿ ಇದು ನಾಲ್ಕನೆಯದು. ಜೋಗಿಯವರ ಆಪ್ತವಲಯ ಅಂತ ನಾವು ಅಂದುಕೊಂಡಿರುವ ವ್ಯಕ್ತಿಗಳೆಲ್ಲ ಇದರಲ್ಲಿ ಪಾತ್ರವಾಗಿ ಬರುವುದರಿಂದ ಇದನ್ನು ಕಾದಂಬರಿ ಎನ್ನಲು ಮನಸು ಹಿಂದೇಟು ಹಾಕುತ್ತದೆ.. ಆದರೆ ಕತೆ ತೆಗೆದುಕೊಳ್ಳುವ ನಾಟಕೀಯ ತಿರುವುಗಳ ನೋಡಿದರೆ ಇದು ಕಾಲ್ಪನಿಕವೂ ಅನಿಸುತ್ತದೆ. ಬದುಕು ನಡೆಸುವ ಅನಿವಾರ್ಯತೆಗೋಸ್ಕರ ಊರು ಬಿಟ್ಟು ಪಟ್ಟಣ ಸೇರುವವರ ಕತೆ ಜೋಗಿಯವರ ಸ್ಥಾಯಿ ಭಾವ. ಪ್ರತೀ ಸಲ ಅದೇ ಅಗೆತದಲ್ಲೂ ಹೊಸ ಹೊಸದನ್ನು ತರುವುದು ಅವರ ವಿಶೇಷತೆ. ಹಾಗಾಗಿ ಇದು ಓದಬೇಕಾದ ಪುಸ್ತಕ. ಹುಡುಕಾಟ, ವಿಷಾದ, ಬದುಕಿನ ಕುರಿತಾದ ಪ್ರಶ್ನೆಗಳು, ಯಾಂತ್ರಿಕ ಜೀವನ,ಮನುಷ್ಯನ ಅಲ್ಪತನ ಇವೆಲ್ಲವನ್ನು ಹದವಾಗಿ ಜೋಗಿ ಪಾಕದಲ್ಲಿ ಬೆರೆಸಿ ಮುಂದಿಟ್ಟಿದ್ದಾರೆ. ಕುತೂಹಲಕಾರಿ ಓದು.
ನಗರ ಜೀವನದ ನಿರ್ಭಾವುಕತೆ, ಒಬ್ಬರನ್ನೊಬ್ಬರು ಗುರುತಿಸುವುದಕ್ಕೂ ಹಿಂಜರಿದು ತಮ್ಮ ದಿನನಿತ್ಯದ ಜೀವನದ ಹೊರಳಾಟದಲ್ಲಿ ಕಳೆದುಹೋಗಿ ಬಿಡುವ ನಗರವಾಸಿಗಳು ಮತ್ತು ನಗರದ ಅರಿಯಾಲಾಗದ ಪಾಮಜ್ಜಿಯ ಮೊಮ್ಮಗನ ಹುಡುಕಾಟದ ಕತೆ, ಮನಮುಟ್ಟುವಂತೆ ಮೂಡಿ ಬಂದಿದೆ. ಹಳ್ಳಿಗಳಲ್ಲಿ ಹುಟ್ಟಿ ಬೆಳೆದ ನನ್ನಂತವರಿಗೆ ಇದೆಂತ ನಿರ್ಲಿಪ್ತ ನಗರ ಜೀವನ, ಯಾಂತ್ರಿಕತೆಯ ಪರಮಾವಧಿ ಎಂಬ ಅರಿವು ಚಕ್ಕನೆ ನೆನಪಿಸಿ, ಸರಿ ಯಾವುದು? ತಪ್ಪಾವುದು? ಎಂಬ ಜಿಜ್ಞಾಸೆ ಹುಟ್ಟಿಸುತ್ತದೆ.