ಕೇಶವ ಶರ್ಮರ 'ಚಾರುಚರಿತ' ಓದಿದ್ದೆ. ಹಾಗಾಗಿ ಕಳೆದ ವರ್ಷ ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಹೋದಾಗ ಸಮಾಜ ಪುಸ್ತಕಾಲಯದಲ್ಲಿ ಈ ಪುಸ್ತಕ ಕಂಡ ಕೂಡಲೇ ತೆಗೆದು ಬ್ಯಾಗಿಗಿಳಿಸಿದ್ದೆ. ಓದಲು ಈಗ ಸಮಯ ಸಿಕ್ಕಿತು.
ಮೊದಲ ಹತ್ತು ಪುಟ ಓದಿದ್ದಷ್ಟೆ ; ಭಯ ಶುರುವಾಗತೊಡಗಿತು. ನಮ್ಮ ಕುಟುಂಬದ ಚರಿತ್ರೆಯನ್ನು ಇವರು ಹೇಳಹೊರಟಿದ್ದರಾ? ಅಂತನಿಸತೊಡಗಿತು. ವಿಟ್ಲ ಅರಸರು ತಮ್ಮ ಕಣ್ಣಿನ ಚಿಕಿತ್ಸೆ ಮಾಡಿದ್ದಕ್ಕೆ ಉಂಬಳಿ ಕೊಟ್ಟ ಭೂಮಿಯಿಂದ ಇಲ್ಲಿ ನೆಲೆ ನಿಂತ ಉತ್ತರ ಕನ್ನಡದ ಹವ್ಯಕರು ನಾವು. ಅದೇ ಪರಿಸರದ ಅದೇ ಧಾಟಿಯ ಕಥೆಯ ಆರಂಭ.. ಆದರೆ ಓದುತ್ತಾ ಹೋದಂತೆ ಈ ಪುಸ್ತಕ ಯಾಕೆ ಯಾರ ಗಮನಕ್ಕೂ ಬಿದ್ದಿಲ್ಲ ಎಂದು ಗಾಢವಾಗೇ ಅನಿಸಿತು.
ನಿಶಿತ ಎಂಬ ಮುಖ್ಯ ಪಾತ್ರವು ಒಂದು ವರ್ಷದ ಡೈರಿಯಲ್ಲಿ ಉಲ್ಲೇಖಿಸಿದ ತನ್ನ ಭಾವನೆಗಳು ಅಕಸ್ಮಾತ್ ಆಗಿ ನಿರೂಪಕನಿಗೆ ಸಿಗುತ್ತದೆ. ಅದರ ಪ್ರಕಟಿತ ರೂಪವಾಗಿ ಡೈರಿಯ ರೂಪವಾಗಿ ಕಾದಂಬರಿ ಹರಡಿಕೊಂಡಿದೆ. ನವ್ಯದ ಮುಖ್ಯ ಅಂಶಗಳಾದ ಕಾಮ, ಸ್ವಮರುಕ ನಾಯಕನ ಸ್ವಭಾವವಾದರೆ, ಕಾದಂಬರಿ ಬರೇ ಅಷ್ಟೇ ಅಲ್ಲ ಅಸಂಖ್ಯಾತ ಪಾತ್ರಗಳ ಬದುಕಿನ ಚಿತ್ರಣ ಅವರು ಕಷ್ಟಗಳ ಎದುರಿಸಿದ ರೀತಿ,ಅನೈತಿಕ ಎನ್ನಬಹುದಾದ ಆದರೆ ಅವರಿಗೆ ಅನಿವಾರ್ಯವಾದ ಸಂಬಂಧಗಳು ಎಲ್ಲಕ್ಕಿಂತ ಮುಖ್ಯ ಊರಿನ ಸಮಗ್ರ ಚಿತ್ರಣ...ಇಲ್ಲಿ ಆಸೆಗೆ ಬಿದ್ದು ಸಂಬಂಧ ಬೆಳೆಸಿ ಸುಳಿಗೆ ಸಿಕ್ಕಿಕೊಂಡವರಿದ್ದಾರೆ, ಕುಡಿದು ಕುಡಿದೇ ಸತ್ತವರಿದ್ದಾರೆ, ಆಸೆಗೆ ಬಿದ್ದು ಬದುಕ ಹಾಳು ಮಾಡಿಕೊಂಡವರಿದ್ದಾರೆ, ಸೋತವರೇ ಹೆಚ್ಚಿನವರು,ಹಾಗೇ ಗಟ್ಟಿಯಾದ ಹೆಣ್ಣು ಜೀವಗಳಿವೆ..ಇವರೆಲ್ಲ ನಿಶಿತನ ಪ್ರಜ್ಞೆಗೆ ತಕ್ಕಂತೆ ಅಲ್ಲಲ್ಲಿ ತುಂಡು ತುಂಡಾಗಿ ಒಳಗ ಬಿಟ್ಟುಕೊಡುವ ಬಗೆ ಚಂದದ್ದು.. ಈ ಕಾದಂಬರಿಯ ಕಾಲಘಟ್ಟ ನಾನು ಹುಟ್ಟುವ ಮೊದಲಿನದ್ದು. ಹಾಗಾಗಿಯೇ ನಾನು ಬೆಳೆಯುತ್ತಿದ್ದಾಗ ಅಳಿವಿನೆಡೆಗೆ ಹೊರಳುತ್ತಿದ್ದ ಒಂದು ಜೀವನಕ್ರಮದ ಅವಶೇಷಗಳ ಕಾಣುವ ಭಾಗ್ಯ ಸಿಕ್ಕಿತ್ತು.ಅದು ಇಲ್ಲಿ ಅಕ್ಷರಶಃ ಒಡಮೂಡಿದೆ. ಈ ಕಾದಂಬರಿಯಲ್ಲಿ ನಿರೂಪಿತ ಕೆಲ ಘಟನೆಗಳ ನನ್ನ ಹಿರಿಯರ ಆಡುಮಾತಲ್ಲಿ ಕೇಳಿದ ನೆನಪೂ ಇದೆ ನನಗೆ. ಇವೆಲ್ಲದರಿಂದ ಖಾಸಗಿಯಾಗಿ ಬಹಳ ಖುಷಿ ಕೊಟ್ಟ ಕೃತಿ.
ಶಂಕರ ಮೊಕಾಶಿ ಪುಣೇಕರ್ ಮತ್ತು ಕೇಶವ ಶರ್ಮ ಇಬ್ಬರೂ ಕಾದಂಬರಿ ಫಾರಮ್ ಬಗ್ಗೆ ಅಧಿಕೃತವಾಗಿ ಮಾತನಾಡುವಷ್ಟು ಪಾಂಡಿತ್ಯ ಉಳ್ಳವರು. ಅವರಿಬ್ಬರು ಬರೆದ ಕಾದಂಬರಿಗಳಲ್ಲೂ ಅದು ಚೆನ್ನಾಗೇ ಗೋಚರಿಸುತ್ತದೆ. ತೆಂಕನಿಡಿಯೂರಿನ ಕುಳವಾರಿಗಳು ಎಂಬ ಪುಸ್ತಕ ಓದಿದವರಿಗೆ ಅದರ ಕಾಮಿಕ್ ಧಾಟಿಯ ನಿರೂಪಣೆ ಇಷ್ಟವಾಗಿರಬಹುದು.ಅದೇ ಪುಸ್ತಕವನ್ನು ಇನ್ನೂ ಹರಳುಗಟ್ಟಿಸಿ ತಮಾಷೆಯ ಜಾಗದಲ್ಲಿ ದಟ್ಟ ವಿಷಾದವ ಹಾಕಿದರೆ ಅದೇ ಈ ಕಾದಂಬರಿ.
ಆಸಕ್ತರಿಗೆ ಪುಸ್ತಕದ ಪ್ರಕಾಶಕರ ವಿಳಾಸ ಹಾಕಿರುವೆ. ಖಂಡಿತಾ ಓದಿ. ಇಂತಹದ್ದೊಂದು ಪುಸ್ತಕ ಕನ್ನಡದ ಅತ್ಯುತ್ತಮ ಹತ್ತರೊಳಗೆ ಅದರಲ್ಲೂ ನವ್ಯರ ಕಾಲದಲ್ಲಿ ಆಗಿದ್ದರೆ ಅತ್ಯುತ್ತಮ ಐದರೊಳಗೆ ಸೇರಬೇಕಾದ್ದು ಯಾಕೆ ವಿಮರ್ಶಕರ ಅವಜ್ಞೆಗೆ ಒಳಗಾಯಿತು? ಕನ್ನಡ ಓದುಗರ ಕಣ್ಣಿಗೆ ಕೆಲವು ಪುಸ್ತಕಗಳು ಮಾತ್ರ ಬೀಳುವಂತೆ ಪಟ್ಟಿ ಕಟ್ಟಿದವರು ಯಾರು ಎಂಬಿತ್ಯಾದಿ ಪ್ರಶ್ನೆಗಳು ನಮಗುಳಿಯುವಂತದ್ದು.