ಗೊರೂರು ರಾಮಸ್ವಾಮಿ ಅಯ್ಯಂಗಾರ್(ಜುಲೈ ೪, ೧೯೦೪ - ಸೆಪ್ಟೆಂಬರ್ ೮, ೧೯೯೧) ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ ಅಪ್ರತಿಮ ಗಾಂಧಿವಾದಿ. ಗೊರೂರು ಗ್ರಾಮ, ಹೇಮಾವತಿ ನದಿ – ಈ ಎರಡೂ ಗೊರೂರರ ಸಾಹಿತ್ಯದಿಂದ ಅಮರವಾದವು. ‘ಹೇಮಾವತಿ’, ಆ ಸಾಹಿತ್ಯ ಸಮಸ್ತಕ್ಕೂ ಸ್ಪೂರ್ತಿ. ಹೀಗೆ ಒಂದು ಊರಿನೊಡನೆ, ನದಿಯೊಡನೆ ಅಭಿನ್ನತೆ ಸಾಧಿಸಿದ ಲೇಖಕರು ವಿರಳವೇ. ‘ಹಳ್ಳಿಯ ಚಿತ್ರಗಳು’, ‘ಗರುಡಗಂಬದ ದಾಸಯ್ಯ’, ‘ನಮ್ಮ ಊರಿನ ರಸಿಕರು’, ‘ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳು’, ‘ಕಥೆಗಳು ಮತ್ತು ವಿನೋದ ಚಿತ್ರಗಳು’, ‘ಬೆಸ್ತರ ಕರಿಯ’, ‘ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು’ – ಈ ಸಂಕಲನಗಳಲ್ಲಿನ ಗೊರೂರರ ಪ್ರಬಂಧಗಳಲ್ಲಿ ಕಥಾಂಶ ದಟ್ಟವಾಗಿ ಸೇರಿಕೊಂಡಿವೆ. ಆದ್ದರಿಂದ ಗೊರೂರರ ಪ್ರಬಂಧಗಳು, ‘ಪ್ರಬಂಧ’ ಎಂಬ ಶಬ್ದದ ಸೀಮಿತ ಅರ್ಥಕ್ಕಿಂತ ಹೆಚ್ಚಿನ ವ್ಯಾಪ್ತಿಯುಳ್ಳದ್ದು ಎಂಬುದು ಗಮನಾರ್ಹ. ಗೊರೂರರ ಬರವಣಿಗೆ ಅಪರೂಪದ್ದು ಮತ್ತು ಅವರಿಗೇ ಅನುರೂಪವಾದದ್ದು. ಗೊರೂರರು ಸೆಪ್ಟೆಂಬರ್ 28, 1991ರಲ್ಲಿ ನಿಧನರಾದರು.
ನೀವು ಮಾವು ಪ್ರಿಯರಾದರೆ ಮಾವಿನ ಹಣ್ಣಿನ ಸೀಸನ್ ಬಂದಾಗ ಮನಸು ಫ್ರಫುಲ್ಲವಾಗುತ್ತದೆ. ಚೆನ್ನಾಗಿ ಹಣ್ಣಾಗಿರುವ ರಸಭರಿತ ಮಾವಿನ ಹಣ್ಣನ್ನು ಕೈಯಲ್ಲಿ ಹಿಡಿದು ಅದರ ವಾಟೆ ಮಾತ್ರ ಉಳಿಯುವವರೆಗೆ ಚೀಪಿ ಚೀಪಿ ತಿನ್ನುವಾಗ ಮನಸಲ್ಲೊಂದು ತೃಪ್ತಿಯ ಭಾವ ಮೂಡುತ್ತದಲ್ಲ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬರಹಗಳ ಓದುವಾಗ ನನಗೆ ಅದೇ ಭಾವ ಉಂಟಾಗುತ್ತದೆ. ಅವರ ಕಾದಂಬರಿಗಳೇ ಇರಲಿ,ಪ್ರವಾಸ ಕಥೆಯೇ ಇರಲಿ, ಹಳ್ಳಿಯ ಜನರ ಬಗೆಗಿನ ಲೇಖನವೇ ಇರಲಿ ಇಲ್ಲ ಈ ಪುಸ್ತಕದಲ್ಲಿ ಬಂದಂತಹ ವ್ಯಕ್ತಿ ಚಿತ್ರಣಗಳೇ ಇರಲಿ. ಓದುವಾಗ ಆ ವ್ಯಕ್ತಿಯ ಬಗ್ಗೆ ಗೌರವವೂ ಒಂದೂ ಅಪಶಬ್ದವಿಲ್ಲದೆ ಬರೆದ ಗೊರೂರರ ಬಗ್ಗೆ ಪ್ರೀತಿಯೂ ಉಂಟಾಗುತ್ತದೆ. ಪ್ರಸ್ತುತ ಪುಸ್ತಕದಲ್ಲಿ ಆಲೂರು ವೆಂಕಟರಾಯರ,ಡಿ.ವಿ.ಜಿ., ರಾಜರತ್ನಂ,ಕುವೆಂಪು,ಕೈಲಾಸಂ ಹೀಗೆ ಕನ್ನಡ ಸಾಹಿತ್ಯದ ಭದ್ರ ಬುನಾದಿಗಳ ಕುರಿತು ಮೆಲುಕು ಹಾಕಿದ ನೆನಪುಗಳಿವೆ. ಗೊರೂರರು ವ್ಯಕ್ತಿಗಳ ಅವಗುಣಗಳ ಬಗ್ಗೆ ಬರೆಯುವುದಿಲ್ಲ. ಅದು ಅವರ ಚಿಂತನಾ ಲಹರಿ ಇರಬಹುದು.ಅದೊಂದು ಕೊರತೆ ಎಂದು ಅನ್ನಿಸುವುದಿಲ್ಲ. ಹಳೆಯ ಕಾಲದ ಮಹನೀಯರ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇದ್ದರೆ ಈ ಪುಸ್ತಕ ನಿಮಗಾಗಿ.