ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ 'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ.
ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಎರಡು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಯು.ಆರ್. ಅನಂತಮೂರ್ತಿ ಕಥಾ ಪ್ರಶಸ್ತಿ, ದ.ರಾ. ಬೇಂದ್ರೆ ಸ್ಮಾರಕ ಸಾಹಿತ್ಯ ಪುರಸ್ಕಾರ, ವಾರಂಬಳ್ಳಿ ಪ್ರತಿಷ್ಠಾನ ಕಥಾ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಡಾ. ಬೆಸಗರಹಳ್ಳಿ ರಾಮಣ್ಣ ಸಂಸ್ಕರಣಾ ಸಾಹಿತ್ಯ ಪ್ರಶಸ್ತಿ, ಅಜೂರ ಪುಸ್ತಕ ಪ್ರತಿಷ್ಠಾನ ಪ್ರಶಸ್ತಿ ಮತ್ತು 'ಅಮ್ಮ' ಪ್ರಶಸ್ತಿ ಸೇರಿದಂತೆ ಹಲವು ಗೌರನ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ಶ್ರೀಧರ ಬಳಗಾರರ ಕಥೆಗಳು ಸಾಮಾನ್ಯವಾಗಿ ವ್ಯಕ್ತಿ ಕೇಂದ್ರಿತ ಆಗಿರುವುದು ಕಡಿಮೆ.ಒಬ್ಬ ವ್ಯಕ್ತಿಯ ,ಅವನ ಜೀವನದ ವಿವರಗಳ ಹೇಳುತ್ತಾ ಅವರು ಪರಿಸರವನ್ನು ವಿವರಿಸುವ ಬಗೆ ಇದೆಯಲ್ಲ ಅದು ಅಪೂರ್ವ! ಬಹುಶಃ ಜಯಂತ್ ಕಾಯ್ಕಿಣಿಯವರ ನಗರ ಕೇಂದ್ರಿತ ಕಥೆಗಳಿಗೆ ಮುಖಾಮುಖಿಯಾಗಿ ಹಳ್ಳಿಯ ಕೇಂದ್ರವಾಗಿಟ್ಟುಕೊಂಡು ಬರೆದ ಕಥೆಗಾರರು ಯಾರಿದ್ದಾರೆ ಅಂದರೆ ತಟ್ಟನೆ ನೆನಪಿಗೆ ಬರುವ ಹೆಸರು.
ಕೆಲ ಕಥೆಗಳು ತಮ್ಮ ವಿವರ ಸಮೃದ್ಧಿಯಿಂದ ತುಂಬಿ ತುಳುಕಿ ಮೊಸರು ಕಡೆದಾದ ಮೇಲೆ ಬೆಣ್ಣೆ ತೇಲುತ್ತದಲ್ಲ ಮಜ್ಜಿಗೆಯ ಮೇಲೆ ಹಾಗೆ ವಿಷಯವನ್ನು ಆಯ್ದುಕೊಳ್ಳುವ ಕೆಲಸ ಓದುಗನದ್ದು. ಒಂದು ತೆರನಾಗಿ ಅವರ ಎಲ್ಲಾ ಕಥೆಗಳೂ ಒಂದು ಬೃಹತ್ ಕಾದಂಬರಿಯ ಚೂರು ಪಾರು ಚಿತ್ರಗಳು ಅನಿಸಲು ಇದೇ ಕಾರಣ! ನವ ನಾಗರಿಕತೆ ವಸ್ತುಗಳಿಗೆ ಪ್ರವೇಶ ಕಡಿಮೆ ಇರುವ ಸದಾ ಮಳೆ,ಕಿರಿಂಚಿಯ ಊರಿಗೆ ಹೋಗಬೇಕಾದರೆ ಬಳಗಾರರ ಕಥೆ ಒಳ್ಳೆಯ ದಾರಿ ಕಲ್ಪನಾ ಜಗತ್ತಿನಲ್ಲಿ!
ಅಂದ ಹಾಗೆ ಪುಸ್ತಕ ಮುದ್ರಣದಲ್ಲಿ ಇಲ್ಲ. ಅಂಕಿತದವರು ಹೊರತಂದಿದ್ದ ಈ ಪುಸ್ತಕ ಗೆಳೆಯ ನಿತೇಶ್ ಬಳಿ ಇದ್ದದ್ದು ಓದಲು ಕೊಟ್ಟದ್ದು. ಅವರಿಗೆ ಧನ್ಯವಾದಗಳು