ಸ್ವಾತಂತ್ರ್ಯದ ಕೊನೆಯ ಹೋರಾಟವೆಂದು ಖ್ಯಾತಿ ಪಡೆದ 1942ರ ಅಗಸ್ಟ್ ಆಂದೋಲನವೇ 'ಮಾಡಿ ಮಡಿದವರು' ಕಾದಂಬರಿಯ ಕಥಾ ವಸ್ತುವಾಗಿದೆ. 1942ರಲ್ಲಿ ಸುಸಂಘಟಿತವಾದ ರೀತಿಯಲ್ಲಿ ಚಳುವಳಿ ನಡೆದುದೆಂದರೆ ಕೇವಲ ಬೆಳಗಾವಿ ಜಿಲ್ಲೆಯಲ್ಲಿ. ಆ ಕಾಲಕ್ಕೆ ಅಲ್ಲಿ ನಿಜವಾಗಿಯೂ ನಡೆದ ಹಲವು ಘಟನೆಗಳನ್ನು ಈ ಕಾದಂಬರಿಯಲ್ಲಿ ಬಳಸಿಕೊಳ್ಳಲಾಗಿದೆ. ಆ ಆಂದೋಲನದಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸುವ ಸುಯೋಗವೂ ನನಗೆ ಲಭಿಸಿತ್ತಾದ್ದರಿಂದ ಅಂದಿನ ವಾತಾವರಣವನ್ನು ವಾಸ್ತವಿಕವಾಗಿ ಚಿತ್ರಿಸುವುದು ಸುಲಭವಾಗಿದೆ. ~ ಬಸವರಾಜ ಕಟ್ಟೀಮನಿ (ಕಾದಂಬರಿ, ಸಾಧನಕೇರಿ, ಧಾರವಾಡ, 1-6-1967)
ಸ್ವಾತಂತ್ಯ ಸಂಗ್ರಾಮದ ಕೊನೆಯ ಘಟ್ಟ ಮಾಡು ಇಲ್ಲವೇ ಮಡಿ ಆಂದೋಲನದ ಸಮಾವೇಶ ನಡೆಯುವಾಗ ಬರುವ ಕೆಲವು ಸನ್ನಿವೇಶಗಳನ್ನು ತೆಗೆದುಕೊಂಡು ರಚಿಸಿರುವ ಕಾದಂಬರಿ. ಕೆಲವು ನೈಜ ಘಟನೆಗಳು ಸೇರಿ ಇನ್ನು ಮನ ಮುಟ್ಟುವಂತಿದೆ.
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು (ಹಳೆಯ ಪುಸ್ತಕದಂಗಡಿಯಲ್ಲಿ ದೊರೆತ ಪ್ರತಿ)
"ಸ್ವಾತಂತ್ರ್ಯ"ಎನ್ನುವುದು ಇಂದಿಗೆ ಒಂದು ಪದವಾಗಿ ಉಳಿದಿದೆ. ಯಾಕೆಂದರೆ ಇಂದು ಬೇಕಾಬಿಟ್ಟಿಯಾಗಿ ಅದರ ಬಳಕೆ,ದುರ್ಬಳಕೆ ನಡೆಯುತ್ತಿದ್ದು ಅದರ ಮೌಲ್ಯದ ಬಗ್ಗೆ ಅರಿವೆಂಬುದು ಕಡಿಮೆಯಾಗುತ್ತಿದೆ. ಆದರೆ ಒಂದೆರಡು ತಲೆಮಾರುಗಳು ಇದೇ "ಸ್ವಾತಂತ್ರ್ಯ"ಎಂಬ ಒಂದು ಸನ್ನಿವೇಶಕ್ಕಾಗಿ ಎಷ್ಟೊಂದು ಪರಿತಪಿಸಿದ್ದರು,ಬೇರಾವುದೂ ಬೇಡ ಕೇವಲ ಸ್ವಾತಂತ್ರ್ಯ ಸಿಕ್ಕರೆ ಸಾಕು ಎಂದು ತಹತಹಿಸಿದ್ದರು,ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ, ಬದಕಿನ ಸುಖ ಶಾಂತಿ ನೆಮ್ಮದಿಗಳಿಗೆ ತಿಲಾಂಜಲಿ ಇಟ್ಟು ಹೋರಾಟವನ್ನು ನಡೆಸಿದ್ದರು ಎನ್ನುವ ಅರಿವಿದೆಯೇ...ಅವರುಗಳು ಮಾಡಿದ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ.. ಬಡವ ಬಲ್ಲಿದ ಎಂಬ ಬೇಧವಿಲ್ಲದೆ "ಸ್ವಾತಂತ್ರ್ಯ"ದ ಮುಂದೆ ಎಲ್ಲವೂ ನಿಕೃಷ್ಟ ಎಂದು ಆ ತಲೆಮಾರು ಭಾವಿಸಿದರ ಪರಿಣಾಮವಾಗಿ ನಾವಿಂದು ತಲೆಗೊಂದರಂತೆ ಮಾತನಾಡುವುದು ಬರೆಯುವುದರ ಸೌಲಭ್ಯವನ್ನು ಆನಂದಿಸುತ್ತಿದ್ದೇವೆ ಎನ್ನುವ ಕನಿಷ್ಠ ಪ್ರಜ್ಞೆ ಎಷ್ಟು ಜನರಲ್ಲಿ ಉಳಿದಿದೆ ಅಲ್ಲವೇ... ಇಂದಿನ ಸಾಮಾಜಿಕ ಜಾಲತಾಣಗಳು ಇನ್ನಿತರ ಮಾಧ್ಯಮಗಳು ಮತ್ತು ಸಾರ್ವಜನಿಕ ಜೀವನದಲ್ಲಿ,ನಡೆನುಡಿಗಳಲ್ಲಿ ಎಲ್ಲಿಯೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಹಗಲಿನಷ್ಟೇ ಸತ್ಯ.
ಇಂದು ತಾವು ನಂಬಿದ ಸಿದ್ಧಾಂತಗಳಿಗೆ ಅನುಗುಣವಾಗಿ ಸ್ವಾತಂತ್ರ್ಯ ಹೋರಾಟದ ನೇತೃತ್ವವನ್ನು ವಹಿಸಿದ ನಾಯಕರುಗಳ ಕುರಿತು ವಿಶ್ಲೇಷಣೆ ನಡೆಯುತ್ತದೆ,ಅವರವರ ಮೂಗಿನ ನೇರಕ್ಕೆ ಅನುಗುಣವಾಗಿ.ಇರಲಿ. ಆದರೆ ಯಾರೊ ಒಬ್ಬ ಕುಗ್ರಾಮದ ಯುವಕ ಗಾಂಧೀಜಿಯವರು ಕೊಟ್ಟ"ಮಾಡು ಇಲ್ಲವೇ ಮಡಿ" ಕರೆಗೆ ಓಗೊಟ್ಟು ನಿಂತ ಕಾಲಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಜೀವನವನ್ನು ಮುಡಿಪಾಗಿಟ್ಟದ್ದರ ಬಗ್ಗೆ ಏನು ವಿಚಾರ ನಡೆಯುತ್ತಿದೆ... ಗರ್ಭಿಣಿ ಹೆಂಡತಿಯನ್ನು ಬಿಟ್ಟು,ಕಿತ್ತು ತಿನ್ನುವ ಬಡತನವನ್ನು ಲೆಕ್ಕಿಸದೆ, ವಯಸ್ಸಾದ ತಂದೆ ತಾಯಂದಿರನ್ನು ಬಿಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ತನ್ನ ದೇಶಕ್ಕಾಗಿ ತನ್ನವರ ಉದ್ಧಾರಕ್ಕಾಗಿ ಈ ಹೋರಾಟಗಾರರು ಮಾಡಿರುವ ಬಲಿದಾನ ಯಾವ ನಾಯಕರ ಹೋರಾಟ ತ್ಯಾಗಗಳಿಗಿಂತ ಕಡಿಮೆಯಾಗುತ್ತದೆ... ಎಕರೆಗಟ್ಟಲೆ ಜಮೀನು, ಸಾವಿರಾರು ರೂಪಾಯಿಗಳ ಆಸ್ತಿಯನ್ನು ತ್ಯಜಿಸಿ ಕೇವಲ ಸ್ವಾತಂತ್ರ್ಯ ಒಂದೇ ಗುರಿ ಎಂದು ಹೋರಾಡಿದ ಶ್ರೀಮಂತ ಮನೆತನದ ಯುವಕ ಯುವತಿಯರ ತ್ಯಾಗ ಯಾವುದಕ್ಕೆ ಕಡಿಮೆ... ಇವೆರೆಲ್ಲರ ತ್ಯಾಗ ಬಲಿದಾನಗಳ ಫಲವೇ ಇಂದಿನ"ಸ್ವಾತಂತ್ರ್ಯ"
ಹೀಗೆ ತಮ್ಮ ನಾಯಕರುಗಳ ಕರೆಗೆ ಓಗೊಟ್ಟು, ತಮ್ಮ ತಮ್ಮ ಪರಿಮಿತಿಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾಮಾನ್ಯರೆಂಬ ಹಣೆಪಟ್ಟಿ ಹೊತ್ತ ಅಸಾಮಾನ್ಯ ಸ್ವಾತಂತ್ರ್ಯ ಯೋಧರ ಕತೆಯೇ "ಮಾಡಿ ಮಡಿದವರು" ಕಾದಂಬರಿಯ ಕಥಾವಸ್ತು. ಮೇಲ್ನೋಟಕ್ಕೆ ಬಹಳ ಸರಳವಾಗಿದ್ದರೂ ಈ ಕೃತಿಯು ನೀಡುವ ಸಂದೇಶ ಅತ್ಯಂತ ಉತ್ಕೃಷ್ಟವಾದದ್ದು. ಸುದ್ದಿ ಮಾಧ್ಯಮಗಳು ಇಂದಿನ ಕಾಲದಂತೆ ವ್ಯಾಪಕವಾಗಿ ಇಲ್ಲದ ಕಾಲದಲ್ಲಿ ಅಂದಿನ ನಾಯಕರು ಬೀರಿದ ಪ್ರಭಾವ ಯಾವ ಮಟ್ಟದ್ದಾಗಿತ್ತು ಹಾಗೂ ಸ್ವಾತಂತ್ರ್ಯ ಎಂಬುದೊಂದು ಎಂತಹ ತುರ್ತಿನ ಅಗತ್ಯವಾಗಿತ್ತು ಎಂಬುದರ ಅರಿವಾಗುತ್ತದೆ. ಬಹುಶಃ ಒಂದು ದೇಶವನ್ನು ತಮ್ಮ ಒಂದು ಮಾತಿನಿಂದ ಒಗ್ಗೂಡಿಸುವ ಶಕ್ತಿಯಿದ್ದ ಅಂತಹ ವ್ಯಕ್ತಿತ್ವದ ನಾಯಕರುಗಳ ಬಗ್ಗೆ ಗೌರವ ಸಹ ಮೂಡುತ್ತದೆ. ಇದರ ಜೊತೆಗೆ ಮಹಾನ್ ನಾಯಕರು ಮತ್ತು ಅಸಾಮಾನ್ಯ ಯೋಧರುಗಳ ನಡುವೆ ಇದ್ದ,ಎಲ್ಲಿಯೂ ಸಲ್ಲದೇ ತಮ್ಮ ಸ್ವಾರ್ಥ ಸಾಧನೆಗೆ ಮಾತ್ರ ಸ್ವಾತಂತ್ರ್ಯ ಎಂಬ ಹೋರಾಟವನ್ನು ಬಳಸಿಕೊಂಡ ನಾಯಕರುಗಳೆಂಬ ಪುಢಾರಿಗಳ ಕುರಿತು ಹೇಸಿಗೆಯೆನಿಸುತ್ತದೆ.
ಕಾದಂಬರಿಯಲ್ಲಿ ಬರುವ ಪಾತ್ರಗಳಾದ ಶೇಖರಪ್ಪ, ಬಸವೆಣ್ಣೆಪ್ಪ, ಪೈಲ್ವಾನ್ ಸಂಗಣ್ಣ, ವಿಶ್ವನಾಥ ಹೇಮಾ, ಬಾಳಪ್ಪ ಮುಂತಾದವರು ನಮ್ಮಿಂದೇನಾಗುತ್ತದೆ ಎಂದು ಕುಳಿತುಕೊಳ್ಳದೆ ನಮ್ಮಿಂದ ಆದದ್ದು ಮಾಡೋಣ ಎಂದು ಮುಂದುವರಿದ ಪರಿಣಾಮವಾಗಿ ಸರ್ಕಾರದ ಯಂತ್ರವನ್ನು ಅಸ್ಥಿರಗೊಳಿಸೂವಲ್ಲಿ ಸಫಲರಾದರು. ಟಪಾಲುಗಳನ್ನು ಹಾರಿಸುವುದು,ಸ್ಟೇಶನ್ನುಗಳನ್ನು ಉಡಾಯಿಸುವುದು,ಪೂಲು ಒಡೆಯುವುದು, ಕಂದಾಯದ ಹಣವನ್ನು ಲೂಟಿ ಮಾಡುವುದು ಮುಂತಾದ ಕೆಲಸಗಳಿಂದ ಸರ್ಕಾರದ ಮಗ್ಗುಲಮುಳ್ಳಾಗಿ ಕಾಡಿದುದರ ಚಿತ್ರಣ ಕಾದಂಬರಿಯಲ್ಲಿದೆ. ಇಂತಹ ಕುಟುಂಬಗಳ ಉಳಿದ ಸದಸ್ಯರು ಸರ್ಕಾರದ ದೌರ್ಜನ್ಯಕ್ಕೆ ಒಳಗಾಗಿ ಬೀದಿ ಪಾಲಾದ ದಾರುಣ ಚಿತ್ರವಿದೆ. ದುರಾಸೆಯಿಂದ ತಮ್ಮದೇ ದೇಶವಾಸಿಗಳನ್ನು ಅಪಾಯಕ್ಕೆ ದೂಡಿದ ದಗಾಕೋರರ ಕೀಳು ಮಟ್ಟದ ವರ್ಣನೆಯಿದೆ. ಹೋರಾಟದ ಹೆಸರಿನಲ್ಲಿ ತಮ್ಮ ಕೆಟ್ಟ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ ನಾಯಕರ ಭಂಡತನವಿದೆ. ಒಟ್ಟಿನಲ್ಲಿ ಯಾವುದೇ ಬಗೆಯ ಮನ್ನಣೆ ಗೌರವಾದರಗಳ ಕುರಿತು ವಿಚಾರಿಸದೆ ತಾಯ್ನೆಲದ ಸ್ವಾತಂತ್ರ್ಯವೇ ಮುಖ್ಯ ಎಂದು ಹೋರಾಟ ಮಾಡಿ ಮಡಿದವರ ಕತೆಯಿದೆ. ನನ್ನ ಪಾಲಿಗೆ ಕನ್ನಡದ ಬಹುಮುಖ್ಯವಾದ ಅಮೂಲ್ಯವಾದ ಕೃತಿಯ ಓದು.