ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದ ನಡುವಿನ ಘರ್ಷಣೆ, ಎರಡರ ನಡುವೆ ಒಂದರೆಡೆಗೆ ಹೆಚ್ಚುವ ಆಸಕ್ತಿ, ಗೊಂದಲ, ಇದರಿಂದ ಮಾನವ ಸಂಬಂಧಗಳಲ್ಲಿ ಉಂಟಾಗುವ ತರಂಗಗಳು ಇವೆಲ್ಲ ಕಾದಂಬರಿಯ ಮುಖ್ಯವಸ್ತು. ಆದರೂ ಪಾತ್ರಪೋಷಣೆ, ಕೆಲವೆಡೆ ಮಾನಸಾ, ಶಶಾಂಕರ ವರ್ತನೆ, ಬರಹಗಾರ ಅದಕ್ಕೆ ಕೊಡುವ ಸಮರ್ಥನೆ ಪೂರಕವೆನಿಸಲಿಲ್ಲ. ಪಿಂಡಾಂಡ ಎಂಬ ಪಾತ್ರ ಬಹಳವೇ ಆಸಕ್ತಿಕರವಾಗಿತ್ತು. ಅದಕ್ಕೆ ಇನ್ನಷ್ಟು stage space ಕೊಡಬಹುದಿತ್ತಲ್ಲ ಎನಿಸಿತು. ಹಿಪ್ನೋಥೆರಪಿ ಕೂಡ ಅವಸರದಲ್ಲಿ ಅನುಕೂಲಕ್ಕೆ ತಕ್ಕಷ್ಟೇ ಪ್ರಸ್ತಾಪಿಸಿದಂತೆನಿಸಿತು. ಎಂತದೇ ಸೃಜನಾತ್ಮಕ ಬರವಣಿಗೆಯೇ ಆದರೂ ಕೆಲವೊಂದು ಸತ್ಯಗಳ ನೆಲೆಗಟ್ಟಿನ ಮೇಲೆಯೇ ಅದನ್ನ ಕಟ್ಟಲಾಗೋದು. ಅದರಲ್ಲೂ ಒಬ್ಬ ಲೇಖಕ ಒಂದೇ ಜ಼ಾನರ್ರಿನ ವಸ್ತುವನ್ನು ಮುಖ್ಯವಿಷಯವಾಗಿಟ್ಟುಕೊಂಡು ರಚಿಸೋ ಸಾಹಿತ್ಯ ಅಂದರೆ (ಓದುಗರಿಗೆ) ಒಂದು ಕೃತಿಗೂ ಮತ್ತೊಂದು ಕೃತಿಗೂ ಹೋಲಿಕೆ ಇರುವಂತೆ, ಕೆಲ ಸಾಲುಗಳು ಪುನರಾವರ್ತನೆ ಆದಂತೆ ಅನಿಸುವುದು ಸಹಜ. ತರ್ಕ- ಸಾವು- ಉತ್ತರ ಸುಪ್ರೀತರ ಈ ಮೂರೂ ಕೃತಿಗಳೂ ಆಧ್ಯಾತ್ಮಿಕ ನೆಲೆಗಟ್ಟಿನ ಮೇಲೆ ರಚಿತವಾದ ಕಾದಂಬರಿಗಳು ಮತ್ತು ಮೂರರಲ್ಲೂ ಒಂದು ಬಗೆಯ ಸಾಮ್ಯತೆ ಕಂಡಿದ್ದು ಆಶ್ಚರ್ಯವೆನಿಸಲಿಲ್ಲ. (ಕಥೆಯಷ್ಟೇ ಅಲ್ಲದೇ ತರ್ಕದ ರಾಘವ ಮತ್ತು ಉತ್ತರದ ಸ್ಕಂದನಲ್ಲಿ ಕೂಡ ಸಾಮ್ಯತೆ ಇದೆ ಎನಿಸಿತು)
ಒಟ್ಟಾರೆಯಾಗಿ ಕಾದಂಬರಿ ಚೆನ್ನಾಗಿಯೇ ಇದೆ. ಕಾದಂಬರಿಯ ಈ ಕೆಳಗಿನ ಸಾಲುಗಳೇ ಕಥೆಯ ಸಾರ, ಉದ್ದೇಶ ಮತ್ತು ಮೌಲ್ಯವನ್ನು ಹೇಳುತ್ತವೆ ಎನಿಸಿದ್ದರಿಂದ ಹೆಚ್ಚಿನ ಟಿಪ್ಪಣಿ ಅನವಶ್ಯಕ ಎನಿಸುತ್ತದೆ.
"ನಮ್ಮ ಬುದ್ಧಿ; ಯಾವುದು ನಿಜ? ಯಾವುದು ಸುಳ್ಳು? ಯಾವುದು ಸರಿ ಇದೆ? ಯಾವುದು ಸರಿ ಇಲ್ಲ? ಯಾವುದು ಮೌಲ್ಯ? ಯಾವುದು ಮೌಲ್ಯ ಅಲ್ಲ? ಅಂತ ತರ್ಕ ಮಾಡ್ತಾನೇ ಇರುತ್ತೆ. ನಾವು ನಮ್ಮ ನಂಬಿಕೆಗಳನ್ನಿಟ್ಟುಕೊಂಡು ಬದುಕುವ ಹಕ್ಕು ನಮಗೆ ಇರುವ ಹಾಗೆ, ಪಕ್ಕದಲ್ಲಿರುವವನಿಗೆ ಅವನ ನಂಬಿಕೆಗಳನ್ನ ಇಟ್ಟುಕೊಂಡು ಬದುಕುವ ಹಕ್ಕು ಇದೆ ಅಲ್ವಾ? ಈ ಬೃಹತ್ ವಿಶ್ವದ ದೃಷ್ಟಿಯಿಂದ ನೋಡಿದಾಗ, ಮತ್ತೊಬ್ಬರ ನಂಬಿಕೆಗಳನ್ನು, ಅನುಭವಗಳನ್ನು ಪ್ರಶ್ನಿಸೋದು ಎಷ್ಟು ಯಕಃಶ್ಚಿತ್ ಅನ್ಸುತ್ತೆ ಅಲ್ವಾ? ಕೆಲವೊಂದು ವಿಚಾರಗಳು ನಮ್ಮ ಅನುಭವಕ್ಕೆ ಬಂದಾಗಲೇ ನಮಗೆ ಸತ್ಯ ಅನ್ನಿಸೋದು. ಮತ್ತೊಂದೇನು ಅಂದ್ರೆ ವಿಜ್ಞಾನ ಇಷ್ಟೊಂದು ಮುಂದುವರೆದಿದ್ದರೂ, ನಮ್ಮ ದೇಹದಲ್ಲಿ ನಡೆಯುವ ಕ್ರಿಯೆಗಳೇ ನಮಗೆ ಸಂಪೂರ್ಣ ಅರ್ಥ ಮಾಡಿಕೊಳ್ಳೋಕೆ ಆಗಿಲ್ಲ, ಇನ್ನು ದೇವರು, ವಿಶ್ವ ಇವೆಲ್ಲ ಸುಲಭಕ್ಕೆ ಅರ್ಥ ಆಗುತ್ತಾ?
ಕೆಲವೊಂದು ಪುಸ್ತಕಗಳು ಅಚಾನಕ್ ಆಗಿ ಬಾಳಿಗೆ ಎಂಟ್ರಿ ಕೊಟ್ಟುಬಿಡ್ತವೆ! ಯಾವುದೋ ಪುಸ್ತಕ ಖರೀದಿಸಲು ಅಂಡಿಗೆ ಹೋಗಿ ಅದುವರೆಗೆ ಯೋಚಿಸಿಯೂ ಇರದ ಅಮೂಲ್ಯ ಪುಸ್ತಕದೊಡನೆ ಹೊರ ಬಂದ ಅನುಭವ ಹಲವು ಬಾರಿ ನನಗಾಗಿದೆ. ಆದರೆ ಓದುಗ ಮಿತ್ರರೊಬ್ಬರ ಬತ್ತಳಿಕೆಯಿಂದ ಹೀಗೊಂದು ವಿಶೇಷವಾದ ಪುಸ್ತಕ ಸಿಕ್ಕಿ, ಅದು ನನ್ನನು ಬಿಡದೆ ಕಾಡಿ, ಓದಿಸಿಕೊಂಡ ಅನುಭವ ಅನೂಹ್ಯವಾದದ್ದು. ಅವರು ಒಂದು ತಿಂಗಳ ಹಿಂದೆ "ತರ್ಕ ಓದಿದ್ದೀರಾ?" ಎಂಬ ಸಂದೇಶ ಕಳುಹಿಸಿದಾಗ ಅದು ಯಾರ ಪುಸ್ತಕ ಎಂದೂ ತಿಳಿದಿರಲಿಲ್ಲ. ತಕ್ಷಣವೇ ಅದರ ಬಗ್ಗೆ ಗೂಗಲ್ ಮಾಡಿ ಲೇಖಕರು ಯಾರು, ಯಾವ ಜಾನರ್ - ಮುಂತಾದ ಮಾಹಿತಿಗಳನ್ನು ತಿಳಿದುಕೊಂಡಿದ್ದೆ. ಪುಸ್ತಕದ ಶೀರ್ಷಿಕೆ ತುಂಬಾನೇ ಸೆಳೆದಿತ್ತು. ಎರಡು ವಾರದ ಹಿಂದೆ ಭೇಟಿಯಾದ ಅವರು ತರ್ಕವನ್ನು ನನ್ನ ಕೈಗಿತ್ತರು. ಅಲ್ಲಿಂದ ಶುರುವಾಯ್ತು ನೋಡಿ ಓದಿನ ಪಯಣ! ಅದೇ ದಿನ ನಾನು ಬೆಂಗಳೂರಿಂದ ಮೈಸೂರಿಗೆ ಬರುವುದಿತ್ತು. ಸಂಗಾತಿಯಾಗಿ "ತರ್ಕ"ವೂ ಜೊತೆಗಿತ್ತು. ಕಿಟಕಿ ಪಕ್ಕದ ಸೀಟನ್ನು ಹಿಡಿದು ಮೊದಲ ಪುಟವನ್ನು ತೆರೆದು ಮೊದಲ ಸಾಲನ್ನು ಓದುತ್ತಿದ್ದಂತೆಯೇ ಈ ಪುಸ್ತಕ ಒಂದು ಸ್ಪೆಷಲ್ ಅನುಭವ ನೀಡೋದು ಗ್ಯಾರಂಟೀ ಎಂದು ಖಾತ್ರಿಯಾಗಿತ್ತು.
ಹೀಗೆ ಶುರುವಾದ ಓದಿನ ಪಯಣ ಒಮ್ಮೆ ಹುಚ್ಚು ಕುದುರೆಯಂತೆ ಸಾಗಿ, ಕೆಲವೊಮ್ಮೆ ಆಮೆಗತಿಯಲ್ಲಿ ಮುಂದುವರೆದಿತ್ತು(ಬೇರೆ ಕಾರಣಗಳಿಂದ ; ಇಷ್ಟೊಂದು ಬಿಲ್ದಪ್ ಕೊಟ್ಟ ಪುಸ್ತಕ ಆಮೆ ಗತಿಯಲ್ಲಿ ಯಾಕೆ ಓದಿಸಿಕೊಂಡಿತು ಎಂದು ಬೈಕೋಬೇಡಿ ಮತ್ತೆ!) ತರ್ಕ ನನ್ನನ್ನು ಕುರ್ಚಿಯ ಮೇಲೆ ಕಾಲು ತಕ ತಕ ಕುಣಿಸಿಕೊಂಡು ಓದುವಂತೆ ಮಾಡಿದೆ ಹಾಗೆಯೇ ದೇವಸ್ಥಾನದ ಪ್ರಾಂಗಣದಲ್ಲಿ ಚಿಂತಿಸುತ್ತಾ ಕೂರಿಸಿಕೊಂಡಿದೆ. ಇಲ್ಲಿ ಪ್ರಶ್ನೆಗಳೂ ಇವೆ; ಅದಕ್ಕೆ ಸರಿಯಾದ ಜವಾಬುಗಳೂ ಇವೆ. ದೇವರ ಕುರಿತಾಗಿ ವಿವಿಧ ಆಯಾಮಗಳ ಚಿಂತನೆಗಳಿವೆ. ಒಂದು ಪಾತ್ರ ದೇವರನ್ನು ಕೆಣಕುತ್ತಾ ಹೋಗುತ್ತಿದ್ದಂತೆ, ಇನ್ನೊಂದು ಪಾತ್ರ ವೈಜ್ಞಾನಿಕವಾಗಿ ದೇವರು ಎಂದರೇನು ಎಂಬುದನ್ನು ತಿಳಿಸುತ್ತಾ ಹೋಗುತ್ತದೆ. ಶ್ರೀ ಚಕ್ರದ ಆರಾಧನೆಯ ಆಚರಣೆಯ ವಿವಿಧ ಮಜಲುಗಳ ಸೊಗಸಾದ ವರ್ಣನೆಯಿದೆ. ಹಾಗೆಯೇ ಶ್ರೀ ಚಕ್ರದ ಬಗೆಗಿರುವ ಸಂಶೋಧನೆಗಳ ಮಾಹಿತಿಯಿದೆ. ನಮ್ಮ ಅಸ್ತಿತ್ವದ ಕುರಿತಾದ ವಿಡಂಬನೆಗಳಿವೆ. ಇವೆಲ್ಲವುಗಳ ಮಧ್ಯೆಯೊಂದು ತ್ರಿಕೋನ ಪ್ರೇಮ ಕಥೆ! ಅದಕ್ಕೆ ಹೊಂದಿಕೊಂಡಂತಿರುವ ಮನೋವೈಜ್ಞಾನಿಕ ಎಳೆಯೂ ಸುಂದರವಾಗಿದೆ.
ನಿಸ್ಸಂದೇಹವಾಗಿ ಇದೊಂದು ವಿಭಿನ್ನ ಓದು. ಇದರಲ್ಲಿ ಯಾವ ಪಾತ್ರವನ್ನು ನಂಬಬೇಕು, ಯಾವುದನ್ನು ಅನುಮಾನಿಸಬೇಕು, ಯಾವುದನ್ನು ಅನುಸರಿಸಬೇಕು ಎಂಬುದು ಓದುಗರು ತಮ್ಮ ಅನುಭವ-ಆಲೋಚನೆಗಳ ಆಧಾರದ ಮೇಲೆ ತರ್ಕ ಮಾಡಬೇಕು. ೨೧೭ ಪುಟಗಳಲ್ಲಿ ಬದುಕು, ಬ್ರಹ್ಮ, ಬ್ರಹ್ಮಾಂಡಗಳ ಸತ್ಯಾನ್ವೇಷಣೆಯಿದೆ. ಒಂದೊಳ್ಳೆ ಓದಿನ ಅನುಭವ.
ತರ್ಕ - ಸುಪ್ರೀತ್ ಕೆಎನ್. ಇವರು ಬಹುಕಾಲದ ಫೇಸ್ಬುಕ್ ಸ್ನೇಹಿತರು.ಹಾಗಾಗಿ ಸಹಜ ಕುತೂಹಲದಿಂದಲೇ ಮೊದಲ ಕಾದಂಬರಿ 'ಕಾದಂಬರಿ(?)' ಓದಿದ್ದೆ. ಮನಸುಗಳ ತಾಕಲಾಟ, ರಾ ಅನಿಸಬಹುದಾದ ಬರವಣಿಗೆ, ಇವೆಲ್ಲದರಿಂದ ನನಗೆ ಇಷ್ಟವಾಗಿತ್ತು. ಅದಾದ ಬಳಿಕದ ಎರಡು ಕಾದಂಬರಿ ಓದಿರಲಿಲ್ಲ.ಮೊನ್ನೆ 'ತರ್ಕ ' ಸಿಕ್ಕಿತು. ಸಾಮಾನ್ಯವಾಗಿ ಕಾದಂಬರಿಕಾರರ ಮೊದಲ ಕಾದಂಬರಿ ಆತ್ಮಕಥಾನಕವಾಗಿರುತ್ತದೆ. ಆಮೇಲಿನ ಕೃತಿಗಳ ವಸ್ತಗಳನ್ನು ಅವರು ಹ್ಯಾಂಡಲ್ ಮಾಡುವ ರೀತಿ ಅವರನ್ನು ಯಶಸ್ವಿ ಮತ್ತು ಸಮರ್ಥ ಬರಹಗಾರರನ್ನಾಗಿಸುತ್ತದೆ. ತರ್ಕ ಜಿಜ್ಞಾಸೆಯನ್ನೇ ಕೇಂದ್ರವನ್ನಾಗಿಟ್ಟುಕೊಂಡ ಕೃತಿ. ಶ್ರೀ ಚಕ್ರದ ಆರಾಧನೆ,ಕಾಮ,ಹಟ, ಪ್ರೇಮ, ಅಹಂ ಇತ್ಯಾದಿಗಳ ಪದರ ಹೊಂದಿರುವ ಕತೆ. ಬರವಣಿಗೆಯ ಶೈಲಿ ಹಿಡಿಸಿತು. ಆದರೆ ಅನುಭವವಿಲ್ಲದ ಬರವಣಿಗೆ ಅನ್ನುವುದು ಕೆಲವು ಕಡೆ ಬಾಲಿಶವಾಗಿ ಗೋಚರಿಸುತ್ತಿತ್ತು. ಮಾನಸ ಮತ್ತು ರಾಘವ ನಡುವಿನ ಪ್ರಣಯ, ಮೂರನೆಯವನಾದ ಶಶಾಂಕ್ ,ಅವನ ಪಾತ್ರ ಇವೆಲ್ಲ ತೀರಾ ಕೃತಕ ಅನಿಸಿತು. ಮಾಹಿತಿ ಸಂಗ್ರಹ ಮೊದಲ ಹೆಜ್ಜೆ, ಸ್ಥೂಲ ಕಥಾರೂಪ ಎರಡನೆಯ ಹೆಜ್ಜೆ ಅದಾದ ಬಳಿಕ ಆಯಾ ಪಾತ್ರಗಳ ಬಾಯಲ್ಲಿ ಸಂಗ್ರಹಿತ ಮಾಹಿತಿಗಳ ವಿವರಣೆ. ಇವೆಲ್ಲ ಕಾದಂಬರಿ ಆಳಕ್ಕಿಳಿಯದೆ ತೀರಾ ಮೇಲು ಮಟ್ಟದಲ್ಲಿ ಮುಟ್ಟಿಕೊಂಡು ಹೋದಂತಹ ಭಾವ. ಅಂದರೆ ಗಹನವಾದ ವಿಷಯದ ಮೇಲ್ಪದರ ಮಾತ್ರ ಸವರಿಕೊಂಡು ಹೋದಂತೆ. ಪಿಂಡಾಂಡ ಪಾತ್ರ ನನಗೆ ಗೋಪಾಲಕೃಷ್ಣ ಪೈಯವರ ಸ್ವಪ್ನ ಸಾರಸ್ವತದ ನಾಗ್ಣೊ ಬೇತಾಳನ ನೆನಪಿಸಿತು. ಸುಪ್ರೀತ್ ಒಳ್ಳೆಯ ಶೈಲಿ ಹೊಂದಿದ್ದಾರೆ. ಅವರು ಹುಡುಕುವ ಬರೆವ ವಿಷಯವೂ ವಿಭಿನ್ನ. ಓದುಗನ ಹಿಡಿದಿಟ್ಟುಕೊಳ್ಳುವಂತೆ ಬರೆಯಲು ಗೊತ್ತು. ಆದರೆ ವಿಷಯ ಮತ್ತು ಕತೆಯ ನಡುವಿನ ಸಂಯೋಜನೆಯ ಶೈಲಿಯ ಹದ ಸಿಕ್ಕರೆ ಇನ್ನಷ್ಟು ಎತ್ತರಕ್ಕೆ ಏರುವುದರಲ್ಲಿ ಸಂಶಯವೇ ಇಲ್ಲ. ಬರೆದಿಟ್ಟುಕೊಳ್ಳಿ.ಇನ್ನಷ್ಟು ವರ್ಷ ಕಳೆದು, ಕೊಂಚ ಮಾಗಿದರೆ, ಈತ ಬರೆವುದರ ಬಗೆಯೇ ಬೇರೆಯಾಗುತ್ತದೆ. ಮುಂದಿನ ದಿನಗಳಲ್ಲಿ ಭರವಸೆಯಿಡಬಹುದಾದ ಲೇಖಕ.