ಒಂದು ಬಲಿಷ್ಠ ಸಮಾಜವನ್ನು ರೂಪಿಸಲು ಶಾಲೆಗಳ ಪಾತ್ರ ಹೇಗೆ ಮುಖ್ಯವಾಗುತ್ತೇ?, ಶಾಲೆಗಳು ಅಂದಾಗ ಮೊದಲು ಬರುವ ಪ್ರಶ್ನೆ, ಕನ್ನಡ ಮೀಡಿಯಂ or ಇಂಗ್ಲಿಶ್ ಮೀಡಿಯಂ ಅಂತಾ. ಇಂತಹ ಒಂದು ಪ್ರಶ್ನೆ ಎಲ್ಲರ ಮನದಲ್ಲಿ ಇರುವುದು ಅಕ್ಷರಶಃ ನಿಜ. ಏಡೂರೂ ಮಂಗಲ ಎಂಬ ಊರಲ್ಲಿ ಇರುವ ಒಂದು ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುವ ಈ ಕತೆ ನಮ್ಮೆಲ್ಲರ ಹಲವಾರು ಪ್ರಶ್ನೆಗಳಿಗೆ ಉತ್ತರ ಒದಗಿಸುತ್ತದೆ. ಇಲ್ಲಿ ಹನೂರು ಅವರು ಆಯ್ಕೆಮಾಡಿಕೊಂಡ ಕಥಾವಸ್ತುವಿನ ವಿವರಣೆ ಕಡಿಮೆಯಾಗಿದ್ದರೂ, ಅದರ ಸುತ್ತ ಮುತ್ತ ನಡೆಯುವ ಸಂಗತಿಗಳ ವಿವರಣೆ ಮತ್ತು ಅಲ್ಲಿರುವಂತಹ ವಿಮರ್ಶೆ ಬಹಳ ಆಳವಾಗಿದೆ. ಇಲ್ಲಿರುವ ಬಗೆ ಬಗೆಯ ಪಾತ್ರಗಳ ಮೂಲಕ ನಾವು ಬದುಕುತ್ತಿರುವ ಸಮಾಜದಲ್ಲಿ ಗೊತ್ತಿದ್ದೂ ಅಥವಾ ಗೊತ್ತಿಲ್ಲದೆ ನಾವು ಮಾಡುತ್ತಿರುವ ತಪ್ಪುಗಳನ್ನ ನಮ್ಮ ಕಣ್ಣಿಗೆ ಕಟ್ಟುವಂತೆ ಬಹಳ ಚೆನ್ನಾಗಿ ಬಿಡಿಸಿ ಬಿಡಿಸಿ ತೋರಿಸಿದ್ದಾರೆ.
ಕನ್ನಡದ ಮಟ್ಟಿಗಂತೂ ತೀರಾ ಹೊಸತಾದ ಕಥಾ ಶೈಲಿಯ ಈ ಕಾದಂಬರಿಯು ವಾಸ್ತವಿಕತೆ ಮತ್ತು ಮಾಂತ್ರಿಕತೆಗಳ ಹದವಾದ ಮಿಳಿತ ಎನ್ನಬಹುದು. ಒಂದು ಗ್ರಾಮದ ಶಾಲೆಯ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯನ್ನೇ ಮುಖ್ಯ ಹಂದರವಾಗಿಟ್ಟುಕೊಂಡು ಹೆಣೆಯಲ್ಪಟ್ಟಿರುವ ಈ ಕಥೆಯಲ್ಲಿ ಲೇಖಕರು ನಾನಾ ಸ್ಥರಗಳ ಜನರ ಜೀವನ ಮತ್ತು ಮನಸ್ಸಿನ ಒಳತೋಟಿಗಳನ್ನೆಲ್ಲ ತುಂಬಾ ಸೂಕ್ಷ್ಮವಾಗಿ ಗಮನಿಸಿ ಚಿತ್ರಿಸಿದ್ದಾರೆ. ಅಲ್ಲಲ್ಲಿ ಮಾರ್ಮಿಕವಾದ ವಿಷಯಗಳನ್ನೊಳಗೊಂಡ ಈ ಕಥೆಯಲ್ಲಿ ಉದ್ದಕ್ಕೂ ತಿಳಿಹಾಸ್ಯದ ಸವಿ ಲೇಪವಿದೆ.
ಮೇಲ್ನೋಟಕ್ಕೆ ತೀರಾ ಸಾಮಾನ್ಯ ಎನಿಸುವ ಎಷ್ಟೆಲ್ಲ ವಿಷಯಗಳು ಆಳಕ್ಕಿಳಿದಂತೆ ಗಾಢವಾಗುತ್ತಾ ಹೋಗುತ್ತದೆ ಎನ್ನುವುದಕ್ಕೆ ಈ ಕಾದಂಬರಿ ಒಳ್ಳೆಯ ಉದಾಹರಣೆ. ಶಾಲೆಯಲ್ಲಿ ನಡೆವ ಛದ್ಮವೇಷ ಸ್ಪರ್ಧೆಗೆ ತಮ್ಮ ತಮ್ಮ ಮಕ್ಕಳಿಗೆ ಯಾವ ಯಾವ ಯಾರ ಯಾರ ವೇಷ ಹಾಕಿಸಬೇಕು ಅನ್ನುವ ಚರ್ಚೆ ತಂದೆ ತಾಯಿಯರಿಂದ ಶುರುವಾಗಿ ಇಡೀ ಊರೇ ಮಾತಾಡಿಕೊಂಡು ದೇಶದ ರಾಜಕೀಯ, ಸಾಮಾಜಿಕ ವಿವರಗಳೆಲ್ಲ ತೆರೆದುಕೊಳ್ಳುವ ಪರಿ ಚೆನ್ನಾಗಿದೆ.ಬಿಳಿಗಿರಿ ಎಂಬ ಗಾಂಧಿವಾದಿಯೊಬ್ಬನ ಜೀವನದ ವಿವರಣೆ ತುಂಬಾ ಚೆನ್ನಾಗಿದೆ. ಕೃತಿಯ ಮೂಲಸತ್ವ ಗುರುತಿಸಲು ಓದುಗನಿಗೆ ಕೊಂಚ ಸಮಯ ಬೇಕಾಗುವ ಕಾರಣ ಓದುಗನಿಗೆ ದಾರ ಕಡಿದ ಗಾಳಿಪಟದ ಹಾಗೆ ಕಥೆ ಎಲ್ಲೆಲ್ಲೋ ಯಾರ ಯಾರದೋ ಬದುಕಿನ ವಿವರಗಳೆಲ್ಲ ಬರುವುದು ಕಂಡು ಸ್ವಲ್ಪ ಕಷ್ಟವಾಗುತ್ತದೆ.ಆದರೆ ಕೃತಿಯ ಹರಹು ದೊಡ್ಡದಾದ ಕಾರಣ ಈ ಕೊಲಾಜ್ ಚಿತ್ರಣದಲ್ಲಿ ಅವೆಲ್ಲವೂ ಸೂಕ್ಷ್ಮವಾದ ಅಂತರ್ ಸಂಬಂಧ ಹೊಂದಿರುವುದು ಕಾಣಸಿಗುತ್ತದೆ.
ಅಜ್ಞಾತನೊಬ್ಬನ ಆತ್ಮಚರಿತ್ರೆಗೆ ಓದಿದವರಿಗೆ ಇದು ಬೇರೆಯ ದಿಕ್ಕಿನ ನಿರೂಪಣೆಯ ಕೃತಿಯಾಗಿ ಗೋಚರಿಸುತ್ತದೆ. ಹಾಗಾಗಿ ತಾಳ್ಮೆಯ ಓದಿಗಷ್ಟೇ ಇಷ್ಟವಾಗುತ್ತದೆ.