Jump to ratings and reviews
Rate this book

ನೀವು ದೇವರನ್ನು ನಂಬಬೇಡಿ

Rate this book

200 pages, Hardcover

Published April 1, 2019

24 people want to read

About the author

ಜೋಗಿ | Jogi

79 books44 followers
Jogi Girish Rao Hatwar
ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.

WikiPage- https://kn.wikipedia.org/s/pyg
Facebook Profile- facebook.com/girish.hatwar

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
4 (21%)
4 stars
8 (42%)
3 stars
7 (36%)
2 stars
0 (0%)
1 star
0 (0%)
Displaying 1 - 3 of 3 reviews
Profile Image for Vishwas Solagi.
17 reviews9 followers
May 27, 2019
ಜೋಗಿ ಅವರ 'ಲೈಫ್‌ ಇಸ್ ಬ್ಯುಟಿಫುಲ್' ಸರಣಿಯ ನಾಲ್ಕನೇ ಕೃತಿ ಇದು. ಗದ್ಯ ಸಾಹಿತ್ಯದ ಯಾವುದೇ ಒಂದು ಪ್ರಕಾರಕ್ಕೆ ನಿಲುಕದ ಈ ಕೃತಿಗಳು, ಲೇಖಕರೇ ಹೇಳುವಂತೆ, ಪ್ರಮುಖವಾಗಿ ಹೊಸ ಓದುಗರಿಗಾಗಿ ಬರೆದಂತವು.

ಶೀರ್ಷಿಕೆಯನ್ನು ಓದಿ, ನಾಸ್ತಿಕರೊಬ್ಬರು ಬರೆದ ದೇವರನ್ನು ಹಳಿಯುವ ಪುಸ್ತಕ ಇದು ಎಂದು ನೀವೆಂದುಕೊಂಡರೆ ನಿಮ್ಮ ಊಹೆ ತಪ್ಪು. ಇದು ಆಸ್ತಿಕತೆ‌ ಮತ್ತು ನಾಸ್ತಿಕತೆ ಎಂಬ ಗಡಿಗಳನ್ನು ಮೀರಿದ ಆಧ್ಯಾತ್ಮದ ಕುರಿತಾದ ಕೃತಿ.

ನಮ್ಮ ನಮ್ಮ‌ದೇವರನ್ನು ನಾವು ಕಂಡುಕೊಳ್ಳಬೇಕು. ನಾನು ಮತ್ತು ದೇವರು ಬೇರೆ ಅಲ್ಲ ಎಂಬಂತಹ ಹೊಸ ರೀತಿಯ ವಿಚಾರಗಳನ್ನು ಈ ಪುಸ್ತಕ ಪ್ರಸ್ತುತ ಪಡಿಸುತ್ತದೆ.

ಹೊಸ ಓದುಗರಿಗೆ ಪುಸ್ತಕ ಇಷ್ಟವಾಗಬಹುದಾದರೂ ಜೋಗಿ ಅವರ ಇತರ ಬರಹಗಳನ್ನು ಓದಿದವರಿಗೆ ಈ ಕೃತಿಯಲ್ಲಿನ ಕೆಲ‌ ಅಂಶಗಳು ಪುನರಾವರ್ತಿತ ಎನಿಸಬಹುದು. 'ದಾಸ್ ಜೊತೆ ಮಾತು ಕತೆ' ವಿಭಾಗದಲ್ಲಿ ಬರುವ ಕತೆಗಳು ಕೆಲವು ಅದ್ಭುತ ಎನಿಸಿದರೆ, ‌ಮತ್ತಷ್ಟು ಅರ್ಥವಾಗದೇ ಉಳಿದುಬಿಡುತ್ತವೆ.

ಪುಸ್ತಕದ ಮೂರನೇ ವಿಭಾಗದಲ್ಲಿರುವ ಝೆನ್ ಕತೆಗಳ ಕುರಿತಾಗಿರುವ ಬರಹದಲ್ಲಿ 'ಝೆನ್ ನಮಗೆ ತತ್ವಜ್ಞಾನವಲ್ಲ. ಓದಿಸಿಕೊಂಡು ಹೋಗುವ ರುಚಿಕಟ್ಟಾದ ಕತೆ ಅಷ್ಟೇ.' ಎನ್ನುತ್ತಾರೆ ಲೇಖಕರು. ಈ ಮಾತನ್ನು ಈ ಕೃತಿಗೂ ಅನ್ವಯಿಸಬಹುದು ಎಂಬುದು ನನ್ನ ಅಭಿಪ್ರಾಯ. ಝೆನ್ ಕತೆಗಳಂತೆ ಇಲ್ಲಿಯೂ ಒಂದಿಷ್ಟು ಬರಹಗಳು ಕೇವಲ‌ ಒಗಟುಗಳಾಗಿಯೇ ಉಳಿದುಬಿಡುತ್ತವೆ. ಅಥವಾ ಅದು ಓದುಗನ ಜ್ಞಾನೋದಯಕ್ಕೆ ಸಂಬಂಧಪಟ್ಟಿದ್ದೋ ಅರಿಯೇ. ಬಹುಶಃ 'ಜ್ಞಾನೋದಯವನ್ನು ಕಲಿಸುವುದು, ಕಲಿಯುವುದು ನೆಪ ಮಾತ್ರ. ಅದನ್ನು ಪ್ರತಿಯೊಬ್ಬನೂ ತಾನಾಗಿಯೇ ಪಡೆಯಬೇಕು' ಎನ್ನುವ ಮೂಲಕ ಲೇಖಕರು, ಈ ಕೃತಿ ನನ್ನ ಜ್ಞಾನೋದಯಕ್ಕೆ ಸಂಬಂಧಪಟ್ಟಿದ್ದು. ನಿಮ್ಮ ಜ್ಞಾನೋದಯವನ್ನು ನೀವು ಪಡೆದುಕೊಂಡು ಈ ಕತೆಗಳ‌ ಅರ್ಥ‌ ಅರಿತುಕೊಳ್ಳಿ ಎಂದು ಅಭಿಪ್ರಾಯಿಸಿದ್ದಾರೇನೊ.

ಸದ್ಯಕ್ಕೆ ದಕ್ಕಿದ್ದಷ್ಟು ಅರಿತುಕೊಂಡಿದ್ದೇನೆ. ನಾನೂ ಬೆಳೆದಂತೆ ಪುಸ್ತಕ ಮತ್ತಷ್ಟು ಅರ್ಥವಾಗಬಹುದು. ಕಾಯುತ್ತೇನೆ!
Profile Image for Abhi.
89 reviews20 followers
January 2, 2021
|!• ನೀವು ದೇವರನ್ನು ನಂಬಬೇಡಿ •!|

ದೇವರೆಡೆಗಿನ ವೈರುಧ್ಯಗಳು ಹೊಸದಲ್ಲ. ಧರ್ಮಗ್ರಂಥಗಳನ್ನು ದೇವರು ಬರೆದದ್ದಲ್ಲ ಎನ್ನುವುದು ಒಂದು ಬಣವಾದರೇ ಅವುಗಳೇ ದೇವರು ಎನ್ನುವ ಒಂದು ಬಣವಿದೆ. ಮತ್ತೊಂದು ಬಣವಿದೆ ಅವರು ಒಳಿತಾದರೇ ದೇವರಿಗೆ ಜೈ ಎನ್ನುವ ಕೆಡುಕಾದರೇ ದೇವರಿಗೆ ಏಯ್ ಎನ್ನುವ ಜಾಯಮಾನದವರು. ಇರಲಿ. ಜೋಗಿಯವರನ್ನು ಇತ್ತೀಚೆಗೆ ಓದಲು ಶುರು ಮಾಡಿದ್ದು. ಎಷ್ಟೊಂದು ಆವರಿಸಿಕೊಂಡಿದ್ದಾರೆ‌ ಎಂದು ಬಣ್ಣಿಸಲಸದಳ!!! ಯಾವುದೇ ಪುಸ್ತಕದ ಅರ್ಧ ಗೆಲುವು ಅದರ ಶೀರ್ಷಿಕೆಯಲ್ಲಿ ಇರುತ್ತದೆ ಎನ್ನುತ್ತಾರೆ. ಹಾಗೇ ಆಕರ್ಷಿಸಿದ ಪುಸ್ತಕ "ನೀವು ದೇವರನ್ನು ನಂಬಬೇಡಿ".

ಇದೇನಿದು‌? ಖ್ಯಾತ ಸಾಹಿತಿಯೊಬ್ಬರು ಆಸ್ತಿಕ ನಾಸ್ತಿಕ ಸಮಾಜ ಯಾವುದನ್ನು ನೋಡದೇ ಹೀಗೊಂದು ಪುಸ್ತಕ ಬಿಡುಗಡೆ ಮಾಡಿಬಿಟ್ಟರಾ ಎಂದುಕೊಂಡೆ ಪುಸ್ತಕ ಓದಲು ಮೊದಲು ಮಾಡಿದೆ. ಪುಸ್ತಕ ಇಷ್ಟವಾಯಿತು ದೇವರಾಣೆ!!!

ಪುಸ್ತಕದ ಒಡಲಿಗೆ ಇಳಿಯುವ ಮುನ್ನ ಮುಖಪುಟವನ್ನು ಸರಿಯಾಗಿ‌ ಗಮನಿಸಿದರೇ ಶೀರ್ಷಿಕೆಯ ಅಡಿಯಲ್ಲಿ ಒಂದು ಸಣ್ಣ ಹೇಳಿಕೆಯಿದೆ. "ಅವನು ನಂಬುವಂತೆ ನಾವು ಬದುಕೋಣ" ಅಂತಾ. ಆ ಸಾಲಿಗೂ ಸಮರ್ಥನೆಯನ್ನು ಲೇಖಕರು ಪುಸ್ತಕದಲ್ಲಿ ಕೊಟ್ಟಿದ್ದಾರೆ. ದೇವರು‌‌ ನಮಗೆ ಕೊಟ್ಟಿರುವ ಈ ಬದುಕನ್ನು ‌ನಂಬುವಂತೆ ಬದುಕಬೇಕು. ಯಾರೋ ನಮಗೆ ಲಕ್ಷ ರೂಪಾಯಿ ಕೊಟ್ಟರೆಂದರೇ ಅದು ನಮ್ಮ ಮೇಲಿನ ನಂಬಿಕೆಯಿಂದಲೇ‌ ಹೊರತು‌ ನಾವು ಅವರ ಮೇಲೆ‌ ಇಟ್ಟ ನಂಬಿಕೆ ನಗಣ್ಯ‌‌ ಎಂದು ಕಿಚಾಯಿಸಿದ್ದಾರೆ.‌ ಆ ಸಾಲುಗಳನ್ನು ಪುನಃ‌ ಓದಿಕೊಂಡರೇ‌ ಆ‌ ತಮಾಷೆ ಮಾತಿನ ಒಳಾರ್ಥ‌ ತಿಳಿಯುತ್ತದೆ. ಈ ಪುಸ್ತಕದಲ್ಲಿ‌ ದಾಸ್ ಎಂಬ ಅಪೂರ್ವವಾದ ವ್ಯಕ್ತಿಯೊಂದಿಗಿನ ಸಂಭಾಷಣೆಗಳನ್ನು ಬರೆದಿದ್ದಾರೆ. ಬದುಕಿಗೆ ಇವರು ಕೊಡುತ್ತಿರುವ ಇನ್‌ಸೈಟ್ ಅಂತರಂಗದಲ್ಲಿ ಪ್ರಶ್ನೆ ಮತ್ತು ಜ್ಞಾನ ಎರಡನ್ನೂ ನೀಡಿ ಪುಸ್ತಕವನ್ನು ಗೆಲ್ಲಿಸಿಬಿಡುತ್ತದೆ.

ನಮ್ಮೊಳಗೆ ದೇವರೆಡೆಗಿನ ಜಿಜ್ಞಾಸೆಗಳು ನಿರಂತರವಾಗಿರಲಿವೆ, ಅದಕ್ಕೊಂದು ಸಾರ್ವತ್ರಿಕ ಉತ್ತರವಿಲ್ಲ. ಪ್ರಾಯಶಃ ಇರುವುದೂ ಇಲ್ಲ. ಕನಕದಾಸರಂಥ‌ ಭಕ್ತರಿದ್ದರು.‌ ಈಗ ಕನಕದದಾಸರು‌ ಇದ್ದಾರೆ. ದೇವರು ಸಿಗಲು ಏನು ಮಾಡಬೇಕು ಎಂಬ ಪ್ರಶ್ನೆಗಳನ್ನು ನಾವು ಕೇಳಿಕೊಂಡಿದ್ದೇವೆ.‌ ಯಾರೋ ರಾಮ ಕುಡಿಯುತ್ತಿದ್ದ ಎನ್ನುತ್ತಾರೆ, ಇನ್ಯಾರೋ ದೇವರೇ ಜಯವಿಜಯರನ್ನು ರಾಕ್ಷಸರಾಗಿಸಿ‌ ಅವತಾರವೆತ್ತುವ ಅವಶ್ಯಕತೆಯಿತ್ತಾ ಎನ್ನುತ್ತಾರೆ. ಇನ್ಯಾರೋ ಅದೆಲ್ಲಾ ಅವನ ಮಹಿಮೆ ಎಂದು ಬಿಡುತ್ತಾರೆ. ಈ ರೀತಿಯ ಪ್ರಶ್ನೆಗಳನ್ನು ತರ್ಕಿಸುತ್ತಾ ಸಾಗುತ್ತದೆ ಪುಸ್ತಕ. ನಮ್ಮ‌ ಚಿಂತನೆಗೆಳಿಗೆ‌ ಹೊಸದಾದ‌‌ ರೂಪನ್ನು‌ ಕೊಡಬಲ್ಲ‌ ತಾಕತ್ತಿದೆ‌ ಎಂದರೂ‌ ತಪ್ಪಲ್ಲ.

ಅಂಧಾಚರಣೆಗಳನ್ನು ಖಂಡಿಸಿದ್ದಾರೆ (!?)‌ ಗುಡಿಯೊಳಗಿನ ದೈವಕ್ಕೂ‌ ದೀಪಕ್ಕೂ ಹೊರಗೆ ಬಿದ್ದಿರುವ ಶಿವಲಿಂಗಕ್ಕೂ ಬೆಸುಗೆ ಹಾಕಿ ಹೇಳಿರುವ ಕಥೆ‌ ಸತ್ಯವಾಗಿಯೂ ಕಣ್ಣು ತೆರೆಸುತ್ತದೆ. ನಮ್ಮದು!!! ಇನ್ನೊಂದು ಕಡೆ ಹೇಳುತ್ತಾರೆ "ನೀನು ದೇವರಿಗೆ ಏನು ಮಾಡಿದರೂ ಕೊನೆಗೆ ಅದು ಸಿಗುವುದು ನಿನಗೆ" ಅಂತಾ.‌ ಇಟ್ ಮೇಡ್ ಸೆನ್ಸ್. ಒಟ್ಟಾರೆ ದೇವರು ಅಥವಾ ದೇವರೆಡೆಗಿನ ಆಚರಣೆಗಳ ಕಡೆಗಿರುವ ವಿರೋಧಾಭಾಸಗಳ ಬಗ್ಗೆ ಪುಸ್ತಕದುದ್ದಕ್ಕೂ ಕಾಣಬಹುದು. ಪೌರಾಣಿಕ ಪಾತ್ರಗಳೊಂದಿಗೆ ತಮ್ಮ ವಿಚಾರಧಾರೆಯನ್ನು ಬರೆದಿರುವುದರಿಂದ ಪುಸ್ತಕ ಮತ್ತಷ್ಟು ಪರಿಣಾಮಕಾರಿಯಾಗಿದೆ.

ಇನ್ನೂ ಹೆಚ್ಚು ಹೇಳಲಾರೆ. ದೇವರು, ನಾನೇ ದೇವರು, ಆನಂದವೇ ದೇವರು ಎಂಬ ಹತ್ತಾರು‌ ರೀತಿಯಲ್ಲಿ ದೇವರುಗಳನ್ನು ‌ಕಂಡುಕೊಂಡಿದ್ದೇವೆ. ನಂಬಿದ್ದೇವೆ. "ನಾವು‌ ಕಂಡುಕೊಂಡ ದೇವರುಗಳು ನಮ್ಮನು ನಂಬುವಂತೆ ಬದುಕಿದ್ದೇವಾ" ಎಂಬ ಪ್ರಶ್ನೆಯೊಂದಿಗೆ‌ ನಿಲ್ಲಿಸುತ್ತೇನೆ. ಈ ಪುಸ್ತಕ ಓದಿಕೊಳ್ಳಿ!!

ಚಿಯರ್ಸ್

ಅಭಿ...
Profile Image for Vishnu Hosmane.
8 reviews
December 23, 2021
ನೀವು ದೇವರನ್ನು ನಂಬಬೇಡಿ – ಜೋಗಿ
(ಅವನು ನಂಬುವಂತೆ ನಾವು ಬದುಕೋಣ)

ಇದು ಒಂದು ದೇವರನ್ನೇ ಕೂರಿಸಿಟ್ಟು ಎಳೆದ ಅಕ್ಷರತೇರು!

ಕಂಬದಲ್ಲಿದ್ದ ದೇವರು ನಿಜವಾಗಿ ಹೊರಬಿದ್ದದ್ದು ಹಿರಣ್ಯಕಶಿಪುವಿನ ದೇಹದೊಳಗಿಂದ. ದೇವನಿರುವುದು ನಮ್ಮೊಳಗೇ!

ದಾಸ್ ಜೊತೆಗೆ ಮಾತನಾಡುತ್ತ ಕಾಡಿನಲ್ಲಿದ್ದ ಶಿವಲಿಂಗಕ್ಕೂ ಗುಡಿಯಲ್ಲಿದ್ದ ಶಿವಲಿಂಗಕ್ಕೂ ತಾರತಮ್ಯ ಯಾಕೆ ಎಂದುದಕ್ಕೆ “ಕಲ್ಲುಗಳಿಗೆ ಜೀವ ಬರುವುದು ಅರ್ಚನೆಯಿಂದ. ಯಾರೇ ಆದರೂ ಈ ಶಿವಲಿಂಗವನ್ನು ನಾಳೆ ಆರಾಧಿಸಲು ಆರಂಭಿಸಿದ ಅಂತಿಟ್ಟುಕೋ, ಅದು ಜೀವ ತಳೆಯುತ್ತದೆ. ದೇವರಾಗುತ್ತದೆ. ನೀನು ಯಾವುದನ್ನು ಭಕ್ತಿಯಿಂದ ಪ್ರೀತಿಯಿಂದ ಸ್ಪರ್ಶಿಸುತ್ತಿಯೋ ಅದಕ್ಕೆಲ್ಲ ಜೀವ ಬರುತ್ತದೆ. ಯಾವುದನ್ನು ಸಿಟ್ಟಿನಿಂದ, ಅಸಡ್ಡೆಯಿಂದ ಮುಟ್ಟುತ್ತೀಯೋ ಅದು ಜೀವ ಕಳೆದುಕೊಳ್ಳುತ್ತದೆ” ಎಂದು ದಾಸ್ ಹೇಳುತ್ತಾರೆ. (ನಮ್ಮೂರಿನ ಹೊಳೆಯಲ್ಲೊಂದು ಶಿವಲಿಂಗ ಇದೆಯೆಂದೂ ಅದನ್ನು ನಾನು ಆಗಾಗ ಎತ್ತಿ ಮೇಲಕ್ಕೆ ಇಟ್ಟರೂ ಮರುದಿನ ಮತ್ತೆ ನೀರಿನೊಳಗೆ ಇರುತ್ತಿತ್ತು ಎಂದು ನನ್ನ ದೊಡ್ಡಪ್ಪ ಹೇಳುತ್ತಿದ್ದರು. ಇದು ಕುತೂಹಲದ ಸಂಗತಿ ಎನಿಸಿತ್ತು. ಅದರೆ ಇದು ನಿಜವಾ? ಗೊತ್ತಿಲ್ಲ! ಈಗ ಕೇಳೋಣವೆಂದರೆ ಅವರಿಲ್ಲ. ಇದೂ ಕೂಡ ಈ ಕಾಡಿನಲ್ಲಿದ್ದ ಲಿಂಗದಂತಹದ್ದೆ ಎಂಬುದು ನೆನಪಾಯಿತು.)
ಇಲ್ಲಿ ನನ್ನ ಹೊಳವಿಗೆ ಸಿಕ್ಕಿದ್ದು; ಇಲ್ಲಿ ಹೇಳಿದ ಅರ್ಚನೆ, ಆರಾಧನೆ, ಪ್ರೀತಿ ಎಲ್ಲವೂ ಮನುಷ್ಯ-ಮನುಷ್ಯರ ನಡುವಿನ ನಂಬಿಕೆಗೂ ಇರಬೇಕಾದದ್ದು. ಸಿಟ್ಟು, ಅಸಡ್ಡೆಯಿಂದ ನಂಬಿಕೆ ಹುಟ್ಟುವುದೂ ಇಲ್ಲ; ಮೊದಲೇ ಹುಟ್ಟಿದ್ದ ನಂಬಿಕೆ ಉಳಿಯುವುದೂ ಇಲ್ಲ.

#ಒಂದಿಷ್ಟುಮನತಟ್ಟಿದಸಾಲುಗಳು;

ನೀನು ದೇವರಿಗೆ ಅಂತ ಏನು ಮಾಡಿದರೂ ಅದು ಸಿಗುವುದು ನಿನಗೇ.

ಭಕ್ತನ ನಂಬಿಕೆಗಿಂತ ಶತ್ರುವಿನ ನಂಬಿಕೆ ದೊಡ್ಡದು.

ನಮಗೆ ನಾವು ಕಾಣುವುದೇ ದೇವರ ದರ್ಶನ.

ನಮ್ಮ ಮುಂದೆ ಇಡೀ ಜೀವನವೇ ಇರುತ್ತದೆ. ನಾವು ಈ ಕ್ಷಣವನ್ನು ಹಿಡಿಯಲು ಹೆಣಗಾಡುತ್ತಿರುತ್ತೇವೆ.

ದ್ವೇಷವೇ ಇಲ್ಲದೇ ಹೋದರೆ ಸೋಲು-ಗೆಲುವುಗಳ ಪ್ರಶ್ನೆಯೇ ಬರುವುದಿಲ್ಲ.

ಭಯವೇ ಜೀವನ್ಮುಖಿ, ಭಯವೇ ಜೀವವಿರೋಧಿ.

...ಇನ್ನೂ ಇವೆ.
ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಯಾಕೆಂದರೆ ಜೋಗಿಯವರ ಜೋಳಿಗೆಯಲ್ಲಿರುವ ಅಕ್ಷರಗಳು ಪದಗಳಾಗಿ ಇಳಿಯುವುದು ಓದುಗನ ಮನದೊಳಗೇ!

ನನ್ನ ಜೊತೆ ನನ್ನ ಮಾತುಕತೆ, ದಾಸ್ ಜೊತೆ ಮತು ಕತೆ ಮತ್ತು ದೇವರಿಗೆ ದೇವರಾಣೆಗೂ ಸಂಬಂಧವಿಲ್ಲದ ಮತ್ತು ಸಂಬಂಧಿಸಿದ ಮತ್ತೊಂದಷ್ಟು ಲಹರಿ ಈ ಮೂರು ಭಾಗಗಳಲ್ಲಿ ಹೊಸ ಬಗೆಯ ಚಿಂತನೆಯನ್ನು ಇಟ್ಟು, ಹೊಸ ಹುಡುಕಾಟದ ದಾರಿಯನ್ನು ತೋರಿಸುತ್ತ ಸಾಗುವ ಬಗೆ ಚಂದ. ಒಂದಿಷ್ಟು ಹೊಸ ಅರಿವುಗಳು, ದಾಸ್ ಜೊತೆಗಿನ ಮಾತು ಕತೆ ದೇವರ ಬಗೆಗಿನ ಹೊಸ ಹುಡುಕಾಟವೇ ಸರಿ. ಜೋಗಿ ಸರ್, ನೀವು ದಾಸ್ ಜೊತೆ ಇನ್ನೊಂದಿಷ್ಟು ಮಾತನಾಡಬೇಕಿತ್ತು.

ಚೊಕ್ಕದಾದ - ಚಿಕ್ಕದಾದ, ಇನ್ನೊಂದಿಷ್ಟು ಓದಲು ಬೇಕಿತ್ತು ಎಂದು ಅನಿಸುವಾಗಲೇ ಮುಗಿದು ಬಿಡುವ ಪುಸ್ತಕ. ಆದರೆ ಈ ಪುಸ್ತಕದಲ್ಲಿ ಒಂದು ವಿಶೇಷವುಂಟು; ನೀವು ಯಾವುದೇ ಪುಟವನ್ನು ತೆಗೆದು ಓದಿದರೂ ಅಲ್ಲೊಂದು ಹೊಸ ಅರಿವುಂಟು.

ನಂಬಿಕೆಯೇ ದೇವರು. ದೇವರು ನಂಬುವಂತೆ ಬದುಕುವನು ದೇವರೇ!

Displaying 1 - 3 of 3 reviews

Can't find what you're looking for?

Get help and learn more about the design.