ದೀಪ್ತಿಯವರ ಕಥೆಗಳು ಎರಡು ಕಾರಣಕ್ಕೆ ಗಮನ ಸೆಳೆಯುತ್ತವೆ. ಒಂದು ಭಾಷೆ.ಇನ್ನೊಂದು ವಿವರಗಳು. ಇದವರ ಮೊದಲ ಸಂಕಲನ. ಗೆಳೆಯ ರಾಜುಗೌಡರು ಅನೇಕ ಬಾರಿ ಉಲ್ಲೇಖಿಸಿದರು ಅಂತ ಇವರ ಕಥೆಯೊಂದನ್ನು ಮಾಸಪತ್ರಿಕೆಯಲ್ಲಿ ಓದಿ ಖುಷಿಯಾಗಿ ಮೆಸೇಜ್ ಮಾಡಿದಾಗ ಹಸ್ತಾಕ್ಷರ ಸಹಿತವಾಗಿ ಕಳುಹಿಸಿಕೊಟ್ಟ ದೀಪ್ತಿಯವರಿಗೆ ಧನ್ಯವಾದಗಳು.
ತಿಮ್ಮಯ್ಯ ಮಾರ್ಕೆಟ್ ಕಥೆ ಹೇಗೆ ಕೆಲ ವಿಷಯಗಳು ದುರಂತದಲ್ಲಿ ಪರ್ಯಾವಸಾನಗೊಂಡಾಗ ಅದಕ್ಕೆ ಕಾರಣವಾದದ್ದೂ ಇಲ್ಲವಾದಾಗ ಎಲ್ಲವೂ ಎಷ್ಟೊಂದು ಅರ್ಥಹೀನ ಎಂಬುದನ್ನು ಪರಿಣಾಮಕಾರಿಯಾಗಿ ಹೇಳುತ್ತದೆ. ನೀಲಾಂಬರ ಕಥೆಯ ಬೆಂಕಿಪುರದ ವರ್ಣನೆ ಮತ್ತು ಅವನತಿ ನಮ್ಮೂರಿನ ವಾಸ್ತವವೇ ಆಗುತ್ತದೆ. ಬೆವರ ಸಂತೆ ಫ್ಯಾಂಟಸಿ ಕಥೆಯಂತೆ ಶುರುವಾಗುವುದು ಮುಗಿಯುತ್ತಾ ಬಂದಂತೆ ಅರೇ ಇದು ನಮ್ಮೆಲ್ಲರ ಬದುಕಿನ ರೂಪಕವೇ ಅಲ್ಲವೇ ಅನಿಸಿಬಿಡುತ್ತದೆ. ಈ ಬಗೆಯ ಕಥೆ ಬರೆವಾಗ ಕೊಂಚ ಯಾಮಾರಿದರೂ ಕಥೆಯ ಸತ್ವ ಕಳಕೊಳ್ಳುವ ಅಪಾಯ ಇದೆ. ಅದನ್ನು ಲೇಖಕಿ ನಿಭಾಯಿಸಿದ್ದು ಬಹಳ ಇಷ್ಟವಾಯಿತು.ಅಂಚು ಕಥೆಯ ನಾಯಕನ ಆದರ್ಶ ಮತ್ತು ಆ ಸೋತ ಹೋರಾಟ ಕೊನೆಗೆ ಮೋಡದಂಚಿನ ಬೆಳ್ಳಿ ರೇಖಿನಂತಹ ಬದಲಾವಣೆ ಸಮಾಧಾನ ಕೊಡುತ್ತದೆ. ಇದೇ ರೀತಿ ಆಸ್ಪತ್ರೆ ಪರಿಸರದ ಗ್ರಾಸ ಕಥೆಯೂ ಅನುಕಂಪ ಕಳಕೊಂಡು ಬರಡಾಗಿರುವ ಸ್ಥಿತಿಯನ್ನು ಹೇಳುತ್ತದೆ. ದೇವರ ಕಲ್ಲು ಕಥೆ ಅಷ್ಟೇನೂ ವಿಶೇಷವಿಲ್ಲ ಅನಿಸಿತು. ಈ ಸಂಕಲನದ ಮಹತ್ವದ ಕಥೆಯಾದ ಕನ್ನಡಿಗಳು ಏನು ಹೇಳಬೇಕೋ ಅದನ್ನು ಚಂದವಾಗಿ ಹೇಳಿ ವಿರಮಿಸುತ್ತದೆ. ಇರದಾಗ ಅರ್ಥ ಮಾಡಿಕೊಳ್ಳದೆ ಇಲ್ಲದಾಗ ಕಾಡುವುದರ ಕುರಿತು ಬಹಳ ಚಂದದ ಕಥೆ.
ಇವರ ಮೊದಲ ಸಂಕಲನದ ಕಥೆಗಳ ಓದಿದ ಬಳಿಕ ಎರಡನೆಯ ಸಂಕಲನ ಓದುವ ಕಾತರ ಉಂಟಾಗಿದ್ದು ಇದರ ಹೆಚ್ಚುಗಾರಿಕೆಗೆ ಸಾಕ್ಷಿ.