ಹೆಣ್ಣು ಮಕ್ಕಳು ಹುಟ್ಟಿದ್ದಾರೆ ಎಂದು ಅಸಹ್ಯ ತಾಳುವ, ಬೇಜವಾಬ್ದಾರಿಯ ಗಂಡನಿಂದ ದೂರವಾಗಿ ತನ್ನ ಮಕ್ಕಳನ್ನು ಸಮಾಜವೇ ಗೌರವ ಕೊಡುವಂತಹ ಸತ್ಪ್ರಜೆಗಳಾನ್ನಾಗಿ ಬೆಳೆಸುವ ಹೆಣ್ಣಿನ ಕಥೆಯನ್ನು ಒಳಗೊಂಡಿರುವ ಕೃತಿಯಿದು. ಬೇಗ ಬೇಗನೆ ಓದಿಸಿಕೊಂಡು ಹೋಗುವ ಕೃತಿ ತುಂಬಾ ಸರಳವಾಗಿದೆ. ಓದುವಾಗ, ಎಲ್ಲೋ ಕೇಳಿದ ಅಥವಾ ನಮ್ಮ ನಡುವೆ ನಡೆದ ಕಥೆಯೇ ಅನಿಸುತ್ತದೆ
ಮಗಳು ಅಂದರೆ ತರ್ಕ ಹಿನ್ನೆಲೆಗೆ ಸರಿದು ಭಾವಗಳು ಮುನ್ನೆಲೆಗೆ ಬರುವ ನನ್ನಂಥವರ ಕರಗಿಸುವ ವಿಷಯವೊಂದನ್ನು ಹಿಡಿದು ವಿವೇಕಾನಂದ ಕಾಮತ್ ಅವರ ಈ ಕಾದಂಬರಿ ಬಂದಿದೆ. ಗಂಡನಿಂದ ಪರಿತ್ಯಕ್ತಳಾಗಿ ಹೆಣ್ಣು ಮಕ್ಕಳ ಏಕಾಂಗಿಯಾಗಿ ದುಡಿದು ದಡ ಸೇರಿಸುವ ಹೆಂಗಸೊಬ್ಬಳ ಕಥೆ ಇದು. ನನಗೆ ಓದಿನ ಬಂಡಿಯ ಹತ್ತಿಸಿಬಿಟ್ಟವರು ಇವರು. ಇವರ ' ಎಲ್ಲಿ ಜಾರಿತೋ ಮನವು' ಕಾದಂಬರಿ ಉದಯವಾಣಿಯಲ್ಲಿ ಧಾರಾವಾಹಿಯಾಗಿ ಬರುತ್ತಿದ್ದಾಗ ನಾನು ಪ್ರೈಮರಿ ಹುಡುಗ.ಕದ್ದು ಮುಚ್ಚಿ ದೊಡ್ಡವರು ಓದುವ ಕಾದಂಬರಿಯ ಓದಿದ್ದೆ. ಸುದೈವಶಾತ್ ಅವರ ಭೇಟಿಯಾಗಿ ಪರಿಚಯವಾದಾಗ ಈ ವಿಷಯ ಪ್ರಸ್ತಾಪ ಮಾಡಿದ್ದೆ. ವಿವೇಕಾನಂದ ಕಾಮತ್ ಕಾದಂಬರಿಗಳಲ್ಲಿ ಎರಡು ಅಂಶಗಳು ಬಹಳ ಮುಖ್ಯವಾದವು. ಒಂದು ನಮ್ಮ ನಿಮ್ಮೆಲ್ಲರ ದಿನನಿತ್ಯದ ಬದುಕಿನ ಕಥೆ. ಇದು ಎಲ್ಲೂ ಕೃತಕತೆ ಕಾಣುವುದಿಲ್ಲ. ಇನ್ನೊಂದು ಲೀಲಾಜಾಲ ಬರವಣಿಗೆ. ನೀವು ಓದುವಾಗ ನಿಮಗೆ ಅದರ ಗತಿ ಎಲ್ಲೂ ಕುಂಠಿತವಾದಂತೆ ಅನಿಸುವುದಿಲ್ಲ.
ಪುತ್ರಿಕಾಮೇಷ್ಟಿಯಲ್ಲಿ ಪರಿತ್ಯಕ್ತ ಗಂಡನ ಜೊತೆ ಸ್ವಗತವಾಡುವ ಹೆಂಡತಿಯೊಬ್ಬಳ ಮಾತುಗಳು ಈ ತುಂಡರಿಸದ ಎಳೆಯ ಹಾಗೆ ಗತಿ ಕಾಪಾಡಿಕೊಳ್ಳುವುದಕ್ಕೆ ಈ ಬರವಣಿಗೆಯೇ ಕಾರಣ. ಧನ್ಯವಾದ ಸರ್.
ಇದರ ಪುಸ್ತಕ ಬಿಡುಗಡೆಯಾದ ವಿಷ್ಯ ಗೊತ್ತಿರಲಿಲ್ಲ ನಂಗೆ. ಹೋದ ವರ್ಷ ನಾನು ಪ್ರತಿಲಿಪಿಯಲ್ಲಿ ಓದಿದ ನನ್ನಿಷ್ಟದ ಕಥೆಗಳಲ್ಲಿ ಒಂದು ಇದು. ಗಂಡು ಮಗುವೇ ಬೇಕು ಎಂದು ಬಯಸುವ ಗಂಡ ಮತ್ತು ಆತನ ಮನೆಯವರು. ಒಂದರ ನಂತರ ಒಂದರಂತೆ ಮೂರು ಹೆಣ್ಣು ಮಕ್ಕಳ ಜನನವಾದರೂ ಧೃತಿಗೆಡದೇ, ಗಂಡನ ಮನೆಯವರಿಂದ ಹೊರ ಹಾಕಲ್ಪಟ್ಟರೂ ಕಷ್ಟಪಟ್ಟು ಮಕ್ಕಳನ್ನು ಸಾಕಿ ಬೆಳೆಸುವ ತಾಯಿ. ತಾಯಿಯ ಕಷ್ಟಗಳನ್ನು ಮೊದಲಿಂದಲೂ ನೋಡುತ್ತಾ ಬಂದ ಮಕ್ಕಳು ತಮ್ಮ ಸತತ ಪ್ರಯತ್ನದಿಂದ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ನಿಲ್ಲುತ್ತಾರೆ. ಪ್ರಕೃತಿ ನಿಯಮವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಎಲ್ಲವೂ ಹೆಣ್ಣು ಮಕ್ಕಳು ಎಂದು ತಿಳಿದು ಹೆಂಡತಿಯನ್ನು ತೊರೆದು ಬೇರೆ ಹೆಣ್ಣನ್ನು ಮದುವೆ ಮಾಡಿಕೊಂಡು ಹೋಗುವ ಗಂಡ ನಂತರದಲ್ಲಿ ಅದೇ ಹೆಣ್ಣು ಮಕ್ಕಳ ಪ್ರೀತಿಗಾಗಿ ವಾಪಾಸ್ ಬರುತ್ತಾನೆ. ಆದರೆ ಆಗ ಆ ಮಕ್ಕಳು ತೆಗೆದುಕೊಳ್ಳುವ ನಿರ್ಣಯ ಮಾತ್ರ ಊಹೆಗೂ ಮೀರಿದ್ದು. ಎಲ್ಲರೂ ಒಮ್ಮೆ ಓದಲೇಬೇಕಾದ ಕಥೆಯಿದು.