ಅಲಕ ತೀರ್ಥಹಳ್ಳಿ ನವಕರ್ನಾಟಕ ಪ್ರಕಾಶನ ಪುಟಗಳು - 192 ಬೆಲೆ 190 ಲಭ್ಯತೆ - ಎಲ್ಲಾ ಪುಸ್ತಕ ಮಳಿಗೆಗಳು ಮತ್ತು ನವಕರ್ನಾಟಕ ಆನ್ಲೈನ್ ಮಳಿಗೆಗಳು. ಕನ್ನಡ ಲೋಕ ಇವರನ್ನು ಸಂಪರ್ಕಿಸಿದರೆ ಯಾವ ಲಭ್ಯವಿರುವ ಪುಸ್ತಕವನ್ನು ಮನೆಬಾಗಿಲಿಗೆ ಕಳುಹಿಸಿಕೊಡ್ತಾರೆ.
ಶ್ರೀಧರ ಬಳಗಾರ ಮತ್ತು ಅಲಕ ತೀರ್ಥಹಳ್ಳಿ ಅವರ ಕಥೆಗಳು ಅಂದರೆ ನನಗೆ ಬಹಳ ಇಷ್ಟ. ಶ್ರೀಧರ ಬಳಗಾರರ ಕಥೆಗಳಿಗೆ ನಾಗರೀಕತೆಯ ಸೋಂಕು ಇನ್ನೂ ತಟ್ಟದ ಊರನ್ನು, ಮಳೆಗಾಲದಲ್ಲಿ ಅಂಗಳದಲ್ಲಿ ಕೆಸರಿಗೆ ಅಂತ ಹಾಕಿದ ಅಡಿಕೆ ಮರದ ಸಂಕವನ್ನೂ,ನಡು ನಡುವೆ ಹೋಗುವ ಕರೆಂಟನ್ನೂ, ಎಲೆ ಅಡಿಕೆ ತಿನ್ನುವ ಅಜ್ಜಿಯನ್ನೂ ನೀವು ಕೂತಿರುವಲ್ಲಿಗೆ ತರಿಸುವ ಶಕ್ತಿಯಿದೆ. ಅಲಕ ತೀರ್ಥಹಳ್ಳಿ ಅವರ ಕಥಾಜಗತ್ತು ನವಿಲೆಸರ ಎಂಬ ಊರಲ್ಲಿ ನಡೆಯುತ್ತದೆ. ಅದು ಕೂಡ ನಾವೆಲ್ಲಾದರೂ ಬ್ಯಾಗು ಏರಿಸಿಕೊಂಡು ಪ್ರವಾಸ ಹೋಗಿ ಅದೇ ಊರಲ್ಲಿ ಮೊಕ್ಕಾಂ ಹೂಡಿದ ಅನುಭವ ಕೊಡುವಂತಹವು. ಆದರೆ ಇವರಿಬ್ಬರಲ್ಲಿ ನನಗೆ ಅನ್ನಿಸಿದ ಸಮಾನ ಅಂಶವಿದೆ. ಇಬ್ಬರ ಕಾದಂಬರಿಗಳೂ (ಆಡುಕಳ,ಕೇತಕಿಬನ- ಶ್ರೀಧರ ಬಳಗಾರ) ಅಳ್ಳಕವಾದ ಅಂಗಿ ಹಾಕಿದ ಹುಡುಗನ ಹಾಗೆ ಕಾಣುತ್ತದೆ. ಸಣ್ಣ ಕಥೆಗಳಲ್ಲಿ ಝಗಮಗಿಸುವ ಇಬ್ಬರ ಕಾದಂಬರಿಯ ವಿಷಯಕ್ಕೆ ಬಂದಾಗ ಓದು ಸರಾಗವಾಗದ ಹಾಗಾಗುತ್ತದೆ.ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ.
ಈ ಕಾದಂಬರಿಯನ್ನೇ ತಗೊಳಿ. ಇಲ್ಲಿ ಮತ್ತೆ ನವಿಲೆಸರವೇ ಕಥಾಜಗತ್ತು. ಕುಟುಂಬದ ಎಲ್ಲ ಮದುವೆಗಳ ಮದುವೆಮನೆಗಳಲ್ಲೂ ಅದೇ ಪರಿಚಿತ ಮುಖಗಳು ಎದುರಾಗುವ ಹಾಗೆ, ವರ್ಷ ಕಳೆದಂತೆ ಅವಕ್ಕೆ ವಯಸ್ಸಾಗುವುದು ಅಪರೂಪಕ್ಕೆ ನೋಡುವವರಿಗೆ ಗೊತ್ತಾಗುತ್ತದೆ. ಖುಷಿಯೆಂದರೆ ಇಲ್ಲಿ ಪ್ರತೀ ಅಧ್ಯಾಯವೂ ಒಂದು ಸಣ್ಣ ಕಥೆಯೇ..ಹಾಗಾಗಿ ಬಿಡಿ ಬಿಡಿಯಾಗಿ ಓದುವುದೇ ಖುಷಿ.ಒಟ್ಟಾಗಿ ಅಲ್ಲ!
ಇಲ್ಲೊಂದು ಮಾತು ಹೇಳಬೇಕು. ಅಲಕ ತೀರ್ಥಹಳ್ಳಿ, ಶ್ರೀಧರ ಬಳಗಾರ ಇಬ್ಬರೂ ಕಥನ ಶೈಲಿಯಲ್ಲಿ,ಶಕ್ತಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಬಹಳ ಎತ್ತರದಲ್ಲಿ ಇರುವವರು. ಅವರ ಕಾದಂಬರಿ ಅಷ್ಟು ಖುಷಿ ಕೊಡಲಿಲ್ಲ ಅಂದರೆ ಸಾಮಾನ್ಯವಾಗಿದೆ ಅಂತ ಅಲ್ಲ. ಆ ಕಥೆಗಳ ಎತ್ತರ ಇಲ್ಲಿ ಸಿದ್ಧಿಸಿಲ್ಲ ಅಂತ ಅಷ್ಟೇ! (ಇನ್ನೂ ಸರಳವಾಗಿ ಹೇಳಬೇಕು ಅಂದರೆ ಭೈರಪ್ಪರ ಕವಲು ನನಗೆ ಅಷ್ಟು ಇಷ್ಟವಾಗಿಲ್ಲ.ಆದರೆ ಆ ಕಾಲದಲ್ಲಿ ಬಂದ ಇತರ ಕಾದಂಬರಿಗಳಿಗಿಂತ ಅದು ಬಹಳ ಎತ್ತರದಲ್ಲಿತ್ತು )
ಮತ್ತೊಂದು ವಿಷಯ ಅಂದರೆ ಅಲಕ ತೀರ್ಥಹಳ್ಳಿ ಈ ಕಾದಂಬರಿಯ ಹೆಸರು ಅಪ್ಪೆಮಿಡಿ ಪ್ರಸಂಗ ಅಂತ ಬದಲಿಸಿದ್ದರೆ ಇನ್ನೂ ಜನರ ಸೆಳೆಯುತ್ತಿತ್ತು.ಪೂರಕವೂ ಅಗುತ್ತಿತ್ತು. ಸಾಧಾರಣ ಮಲೆನಾಡುಗಳಲ್ಲಿ ಮಾಡುವ ಉಪ್ಪಿನಕಾಯಿ ವಿಧಾನವೂ,ಜಹಾಂಗೀರ್ ಹುಟ್ಟಿಕೊಂಡ ವಿಧಾನ ಎಲ್ಲವೂ ಇಲ್ಲಿದೆ.
ಇದನ್ನು ಕಾದಂಬರಿ ಅಂತ ಒಂದೇ ಗುಕ್ಕಿಗೆ ಓದಬೇಡಿ. ಒಂದೊಂದೇ ಅಧ್ಯಾಯ ಓದಿ. ಆಗ ಇನ್ನೂ ಆಪ್ತವಾಗುತ್ತದೆ.