ಡಾ| ಗಜಾನನ ಶರ್ಮಾರವರು ಪ್ರಸಿದ್ಧ ನಟ, ನಾಟಕಕಾರ, ನಿರ್ದೇಶಕ ಮತ್ತು ಸಾಹಿತಿಯು ಹೌದು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದರು ಕನ್ನಡ ಸಾಹಿತ್ಯದ ಹಲವಾರು ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ’ಪುನರ್ವಸು’ ಇವರ ಪ್ರಮುಖ ಕಾದಂಬರಿ. 'ನಾಣಿ ಭಟ್ಟನ ಸ್ವರ್ಗದ ಕನಸು', 'ಗೊಂಬೆ ರಾವಣ', ಆಗ ಮತ್ತು ಸುಂದರಿ', 'ಹಂಚಿನಮನೆ ಪರಸಪ್ಪ', 'ಪುಸ್ತಕ ಪಾಂಡಿತ್ಯ' ಮುಂತಾದ ಹತ್ತಕ್ಕೂ ಹೆಚ್ಚು ಮಕ್ಕಳ ನಾಟಕ, 'ಕನ್ನಂಬಾಡಿಯ ಕಟ್ಟದಿದ್ದರೆ', 'ದ್ವಂದ್ವ ದ್ವಾಪರ', 'ಬೆಳ್ಳಿಬೆಳಕಿನ ಹಿಂದೆ' ಮುಂತಾದ ನಾಟಕಗಳನ್ನು ರಚಿಸಿದ್ದಾರೆ.
ವಿಶ್ವೇಶ್ವರಯ್ಯನವರ ವೃತ್ತಿ ಜೀವನದ ಆತ್ಮಕಥೆಯನ್ನು ಕನ್ನಡಕ್ಕೆ 'ನನ್ನ ವೃತ್ತಿ ಜೀವನದ ನೆನಪುಗಳು' ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. 'ಕನ್ನಡದಲ್ಲಿ ಮಕ್ಕಳ ನಾಟಕ ಮತ್ತು ರಂಗಭೂಮಿ' ಎಂಬ ಮಹಾಪ್ರಬಂಧಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾ ಲಯದಿಂದ ಡಾಕ್ಟೋರೇಟ್ ಪದವಿ ಪಡೆದಿದ್ದಾರೆ. ಕನ್ನಡ ಸುಗಮ ಸಂಗೀತದ ಮೇರುಪ್ರತಿಭೆ ಗರ್ತಿಕೆರೆ ರಾಘಣ್ಣನವರ ಬದುಕಿನ ಚಿತ್ರಣವಾದ 'ಕಾಡು ಕಣಿವೆಯ ಹಾಡುಹಕ್ಕಿ ಗರ್ತಿಕೆರೆ ರಾಘಣ್ಣ' ಇವರ ಇನ್ನೊಂದು ಮಹತ್ವದ ಕೃತಿ. ’ಕೈಲಾಸ ಮಾನಸ', 'ಗೋಮುಖಆಗಿ ಹೋಗುವ ಮುನ್ನ ಕಣ್ಣುಂಬಿಕೊಳ್ಳೋಣ' (ಪ್ರವಾಸ ಕೃತಿ), “ನನ್ನ ವೃತ್ತಿಯ ನೆನಪುಗಳು” ಕೃತಿಯಲ್ಲಿ ಅವರ ವೃತ್ತಿ ಬದುಕಿನ ಅನುಭವವನ್ನು ದಾಖಲಿಸಿದ್ದಾರೆ.
ಜೋಗ ಜಲಪಾತಕ್ಕೊಂದು ಅಣೆಕಟ್ಟು ಕಟ್ಟಿದರು, ಜಲಪಾತದಿಂದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಘನ ಕಾರ್ಯವನ್ನು ಮೈಸೂರು ಸಂಸ್ಥಾನ ನೆರವೇರಿಸಿತು ಎಂಬುದನ್ನು ನಾವು ಶಾಲಾ ದಿನಗಳಿಂದ ಓದಿಕೊಂಡು ಬಂದಿದ್ದೇವೆ. ಆದರೆ ಅದರ ಹಿಂದಿನ ಮುಳುಗಡೆಯ ನೋವು ಯಾರಿಗೂ ಗೊತ್ತಿರಲಿಲ್ಲ. ಈ ಪುಸ್ತಕ ಆ ನೋವಿನ ಅಂತರಾಳವನ್ನು ತೆರೆದು ಕೊಡುತ್ತದೆ.
ಐತಿಹಾಸಿಕ ವಸ್ತುವನ್ನು, ಸಾಮಾಜಿಕ ಹಿನ್ನಲೆಯಲ್ಲಿ ಹೇಳುವ ತಂತ್ರ ಇಂಗ್ಲಿಷ್ ಕಾದಂಬರಿಗಳಲ್ಲಿ ಹೆಚ್ಚಾಗಿ ನಾವು ಕಾಣುತ್ತೇವೆ. ಇಲ್ಲಿ ಲೇಖಕರು ಆ ತಂತ್ರವನ್ನು ಉಪಯೋಗಿಸಿ ಚಂದದ ಕೃತಿಯೊಂದನ್ನು ರಚಿಸಿದ್ದಾರೆ. ಸ್ವತಃ ಲೇಖಕರ ಕುಟುಂಬ ಈ ಮುಳುಗಡೆಯ ನೋವನ್ನು ಅನುಭವಿಸಿರುವುದು ಈ ಕೃತಿಯ detailingಗೆ ಪೂರಕವಾಗಿದೆ . ಕೃತಿಕಾರರು ಈ ಕೃತಿಗೆ ಮಾಡಿಕೊಂಡಿರುವ ಅಧ್ಯಯನ ಅಮೋಘ. ಉದಾ: ಈ ಕಾದಂಬರಿಯ ಕಾಲಘಟ್ಟದಲ್ಲಿ ನಡೆದ ಎರಡನೇ ವಿಶ್ವಯುದ್ಧದ ಅಡ್ಡಪರಿಣಾಮಗಳು ಹೇಗೆ ಈ ಅಣೆಕಟ್ಟು ಕಟ್ಟುವ ಸಂದರ್ಭದಲ್ಲಿ ಪರಿಣಾಮ ಬೀರಿರಬಹುದು ಎಂಬುದನ್ನು ಸಹ ಕಾದಂಬರಿಯ ವಸ್ತುವಿಗೆ ತಳುಕು ಹಾಕಿ ವಿವರಿಸಿದ್ದಾರೆ.
ದೋಣಿಗಣಪ ಎಂಬ ಪಾತ್ರ ದತ್ತಪ್ಪ ಹೆಗಡೆಯವರ ಪಾತ್ರಕ್ಕಿಂತ ಹೆಚ್ಚು ಕಾಡುತ್ತದೆ, ತುಂಗಕ್ಕಯ್ಯ ಎನ್ನುವ ಪಾತ್ರ ಇಷ್ಟವಾಗದೇ ಇರಲು ಸಾಧ್ಯವಿಲ್ಲ, ಶರಾವತಿ ಎಂಬ ಪಾತ್ರದ ಮೇಲೆ ಮರುಕ ಹುಟ್ಟುತ್ತದೆ, ಕೃಷ್ಣರಾವ್ ಎಂಬ ಪಾತ್ರವನ್ನು ಓದುಗ ಕೊನೆಗೆ ನೋಡುವ ಪರಿಯೇ ಬದಲಾಗಿ ಹೋಗುತ್ತದೆ. ಇವೆಲ್ಲ ಲೇಖಕರ ಪಾತ್ರ ಪೋಷಣೆಯ ಗೆಲುವು
ಕೆಲವು ಕಡೆ ಅಗತ್ಯಕ್ಕಿಂತ ಹೆಚ್ಚು ವಿವರ ಕಸಿವಿಸಿ ಮಾಡುತ್ತದೆ, ಅಂತ್ಯಕ್ಕೆ ಕೊಡಬೇಕಾಗಿದ್ದ ವಿವರ ಅವಸರವಾಗಿ ಮುಗಿಸಿದ್ದಾರೆ ಎನ್ನಿಸುತ್ತದೆ (ಬಹುಷಃ ಪುಸ್ತಕ ಅದಾಗಲೇ ದೀರ್ಘವಾಗಿದ್ದ ಕಾರಣವಿರಬಹುದು) ಕೆಲವು ಸನ್ನಿವೇಶಗಳು ಹೆಚ್ಚು ಭಾವೋದ್ವೇಗದಿಂದ ಕೂಡಿ ಅಲ್ಲಿ ನೈಜತೆಯ ಘಮ ಸಿಗುವುದೇ ಇಲ್ಲ.
೫೪೪ ಪುಟಗಳ ಪುಸ್ತಕದ ಓದಿನಲ್ಲಿ ಐವತ್ತು ಬಾರಿಯಾದರೂ ನಾನು ಹನಿಗಣ್ಣಾದೆ. ಭಾರಂಗಿಗಾಗಿ!!!
ಅಲ್ಲಿ ರಸ್ತೆಗಳಿರಲಿಲ್ಲ, ದಾರಿಯಿತ್ತು. ಶಾಲೆಗಳಿರಲಿಲ್ಲ, ಶಿಕ್ಷಣವಿತ್ತು. ಆಸ್ಪತ್ರೆಗಳಿರಲಿಲ್ಲ ಔಷಧವಿತ್ತು. ಇಷ್ಟೆಲ್ಲಾ ಇದ್ದರೂ ಕೊನೆಗೆ,
ಮುಳುಗಿದ್ದು ಭಾರಂಗಿಯೇ... ಭರವಸೆಯೇ... ಬದುಕೇ...
ಹೀಗೆಂದುಕೊಂಡು ಪುನರ್ವಸು ಪುಸ್ತಕ ಹೊಟ್ಟೆಗೆ ಸುರಿದ ಸಂಕಟವನ್ನು ತಾಳಲಾರದೆ ಕೊನೆಪುಟ ಓದಿ ಮುಚ್ಚಿಟ್ಟೆ. ಮನಸು ಮಾತ್ರ ಅದೆಷ್ಟು ಪ್ರಶ್ನೆಗಳಿಗೆ ತೆರೆದುಕೊಂಡಿತು ಎಂಬುದು ಅವರ್ಣನೀಯ..!!! ಭಾರಂಗಿಯಲ್ಲೇ ಉಳಿದಿದ್ದೆ, ದೋಣಿ ಗಣಪಣ್ಣನ ಹಾಯಿಯನ್ನು ಒರೆಸಿಕೊಡುತ್ತಿದ್ದೆ, ದತ್ತಪ್ಪ ಹೆಗಡೆಯವರ ಅಶಾವಾದಗಳನ್ನು ಕೇಳುತ್ತಿದ್ದೆ, ತುಂಗತ್ತೆಯ ಜೀವನೋತ್ಸಾಹ ಕಲಿಯುತ್ತಿದ್ದೆ, ಶರಾವತಿಯ ಮುಗ್ದತೆ, ಮುರಾರಿ ಭಟ್ಟರ ಅಸಹಾಯಕತೆ. ಪುನರ್ವಸು ಕೇವಲ ಪುಸ್ತಕವಲ್ಲ. ಪುನರ್ವಸು ಬದುಕು, ಭರವಸೆ ಹಾಗೂ ಭಾರಂಗಿ.
ನಮ್ಮೊಳಗಿನ ಆಧುನಿಕ ಮಾನವ ನಾಗರಿಕತೆಯ ಹೆಸರಲ್ಲಿ ತಲುಪಿರುವ ಅನಾಗರಿಕತೆಯ ಪರಮಾವಧಿಗೆ ಹಿಡಿದ ಕೈಗನ್ನಡಿ ಪುನರ್ವಸು. ಆಧುನಿಕತೆಯ ಹೆಸರಲ್ಲಿ ಬರ್ಬರವಾಗಿ ಕೊಲೆಯಾದ ಪರಿಸರಕ್ಕೆ ಮಾಡಿದ ಶ್ರಾದ್ಧ ಕಾರ್ಯದ ಹೆಸರು ನಾಗರಿಕತೆ ಅಥವಾ ವೈಜ್ಞಾನಿಕತೆ ಎಂದರೇ ತಪ್ಪಲ್ಲವೇನೋ. ಅಭಿವೃದ್ಧಿಶೀಲರ ಕೆಟ್ಟ ಕಣ್ಣು ಪ್ರಕೃತಿ ಮಾತೆಯ ಹಸಿರ ಸೆರಗ ಮೇಲೆ ಬೀಳುವುದೇ ಅಭಿವೃದ್ಧಿಯ ಮೊದಲ ಹೆಜ್ಜೆಯೇನೋ... ತಾತ್ಕಾಲಿಕ ವಿಳಾಸಗಳನ್ನು ಕಟ್ಟಿಸಿಕೊಳ್ಳುವುದಕ್ಕೆ ಪುಷ್ಟಿ ನೀಡಿದ್ದು ಅದೆಯೇನೊ...
ಅದೊಂದು ಕಾಲವಿತ್ತು. ಕಣ್ಣು ಹಾಯಿಸದಲ್ಲೆಲ್ಲಾ ಹಸಿರು ಈಗ ಬಿಕರಿಗಿದೆ ಕೃತಕ ಉಸಿರು
ಪುನರ್ವಸು ಪ್ರಕೃತಿ ಆಧಾರಿತ ಕಾದಂಬರಿಯೆಂದರೇ ಅದರ ಆಳ ಅಗಲಗಳು ಕಡಿಮೆಯಾಗುತ್ತದೆ. ಈ ಪುಸ್ತಕ ಪೃಕೃತಿಯೊಡನೆ ಇರುವ ಬಂಧದ್ದು, ಮಾನವೀಯತೆಯದ್ದು, ಅಸಹಾಯಕನೊಬ್ಬನದು, ಪ್ರಾಮಾಣಿಕತೆಯದ್ದು ವೃತ್ತಿನಿಷ್ಠೆಯದು, ಪ್ರಗತಿ ಮತ್ತು ಪ್ರಕೃತಿಯ ವಿರೋಧಾಭಾಸಗಳದ್ದು, ಹಣಬಾಕರದ್ದು, ಉಂಡಮನೆಗೆ ಗಳ ನೆಟ್ಟವರದ್ದು, ಅಮ್ಮನೊಬ್ಬಳದು!!!
ತಂತ್ರಜ್ಞಾನದ ಮಾಂತ್ರಿಕ ಲೋಕದಲ್ಲಿ ನನ್ನ ಒಡನಾಟ ತೀರಾ ನಿಕಟವಾದದ್ದು. ದಿನ ದಿನವೂ ಆಟೋಮೇಷನ್ನುಗಳನ್ನು ಹುಡುಕುತ್ತಾ ಹುಡುಕಿರುವುದನ್ನು ದೈನಂದಿನ ಬದುಕಿಗೆ ಅಳವಡಿಸಿಕೊಳ್ಳುವುದು ಇಂದಿನ ನ್ಯೂ ವರ್ಲ್ಡ್ ಆರ್ಡರ್ ಎಂಬುದು ಅತಿಶಯೋಕ್ತಿ ಅಲ್ಲ. ಇಂದಿನಿಂದ ನೂರು ವರ್ಷ ಆಚೆಯ ಬದುಕನ್ನು ಊಹಿಸಿಕೊಂಡರೇ ಎದೆಯೆಲ್ಲಾ ಬೆವರುತ್ತದೆ. ಸಾವಿರ ಕಿ.ಮೀಗಳಾಚೆಯ ಗಡಿಗಳಿಗೆ ನಿಮಿಷಗಳಲ್ಲಿ ಹಾರುವ ದಿನಗಳು ಬರಲಿವೆ. ಮಂಗಳನಲ್ಲಿ ಮನೆಗಳು ಬರಲಿವೆ ಎಂಬ ಕಲ್ಪನೆಗಳೇ ನಮ್ಮ ಸಂಸ್ಕೃತಿಯ ಅಳಿವನ್ನು ಶುರುಗೊಳಿಸಿಬಿಡುತ್ತವೆ. ಹಾಗೇ ನೂರು ವರ್ಷಗಳ ಹಿಂದೆ ನಡೆದ ಅಥವಾ ಶುರುವಾದ ಆಧುನಿಕತೆಯ ಕಾಮಗಾರಿಯ ಕಥೆ ಪುನರ್ವಸು.
ಬೆಳಕನಿತ್ತ ದೀಪವೆಂದರು ಬದುಕುವ ಆಸೆಯಿತ್ತೇ ಎಂದು ಕೇಳದೆಯೇ ಕೊಂದರು
"ಭಾರತ ಬೆಳಗಲು ಭಾರಂಗಿಯ ಬಲಿ ಕೊಟ್ಟರೆ"?
ಪ್ರತಿಯೊಬ್ಬ ಸಾಮಾನ್ಯನಿಗೂ ತನ್ನ ಸಮುದಾಯ ತನ್ನವರ ಉನ್ನತಿ ಆಗಬೇಕು ಎನ್ನುವುದು ಅಂದಿನ ಕಾಲದ ಕನಸಾಗಿತ್ತು. ಅಂತೆಯೇ ಯಾವುದಾದರೊಂದು ಸಣ್ಣ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಎಂದರೂ ರಾಜರ ಕೃಪಕಟಾಕ್ಷ ಎಂದುಕೊಳ್ಳುತ್ತಿದ್ದರು. ಹಾಗೆಂದುಕೊಂಡ ದತ್ತಪ್ಪ ಹೆಗಡೆಯವರ ಕನಸು ಕೂಡ ನನಸಾಗುತ್ತದೆ. ಅಗತ್ಯಕ್ಕಿಂತ ಹೆಚ್ಚಾಗಿ ನನಸಾದದ್ದು ದುರಂತ!!!
ವೃತ್ತಿಯೇ ದೇವರೆಂದುಕೊಂಡ ಸರ್ ಎಂವಿ, ಮಿರ್ಜಾ ಇಸ್ಮಾಯಿಲ್‌ರವರನ್ನೇ ಮಾದರಿಯೆಂದುಕೊಂಡು ಕೆಲಸವನ್ನೇ ಪೂಜಿಸಿ ಅಭಿವೃದ್ದಿಶೀಲ ಭಾರತಕ್ಕೆ ಅಡಿಗಲ್ಲಾದ ಕೃಷ್ಣರಾಯರ ಮನೋಭಿಲಾಷೆ ಒಂದು ಹಂತಕ್ಕೆ ಸರಿ ಎನಿಸುತ್ತದೆ. ಒಂದು ಹಂತಕ್ಕೆ ಬೇಕಿತ್ತೆ ಎನಿಸುತ್ತದೆ. ಮೇಲೆ ಹೇಳಿದ ಹಾಗೇ ಪುನರ್ವಸು ಪ್ರಕೃತಿ ಮತ್ತು ಪ್ರಗತಿಯ ನಡುವಿನ ವಿರೋಧಾಭಾಸಗಳದ್ದು ಕೂಡ.
ಪ್ರಕೃತಿ ಮತ್ತು ಪ್ರಗತಿಯ ನಡುವೆ ಏನಾಯಿತು ಏನಾಗಿದೆ ಎಂಬುದಕ್ಕೆ ನಮ್ಮೆದುರಿಗೆ ಸಾಕ್ಷಿಯಾಗಿ ನಿಂತಿದೆ. ಅದೆಲ್ಲದರ ಆಚೆ ಪುನರ್ವಸು ನನ್ನೊಳಗಿನ ಓದುಗನನ್ನು ಆಕರ್ಷಿಸಿದ್ದು ಮಲೆನಾಡಿನ ಸೊಬಗು ಮತ್ತು ಅಲ್ಲಿನ ಸಂಸ್ಕೃತಿಯ ಆಪ್ಯಾಯತೆ. ಹುಟ್ಟಿನಿಂದ ನಗರ ಜೀವನಕ್ಕೆ ಒಗ್ಗಿಕೊಂಡ ನನಗೆ ಮಲೆನಾಡು ಹಸಿರು ಮತ್ತು ಮಳೆ ಮಾತ್ರವಲ್ಲ. ಅಷ್ಟೇ ನಿಷ್ಕಲ್ಮಶ ಹೃದಯಗಳದ್ದು ಅನಿಸಿದ್ದು ಸುಳ್ಳಲ್ಲ.
ಸಾಮಾಜಿಕ ಮತ್ತು ಆರ್ಥಿಕವಾಗಿ ನಡೆದ ಬದಲಾವಣೆಗಳನ್ನು ಸ್ಥೂಲವಾಗಿ ಬರೆದಿರುವುದರಿಂದ ಹಣದುಬ್ಬರ, ಅಪಮೌಲ್ಯೀಕರಣ ಮುಂತಾದ ವಿಷಯಗಳ ಬಗ್ಗೆ ಓದುಗನಿಗೆ ತಿಳಿಯುತ್ತದೆ. ಮನುಷ್ಯ ದಾಹಕ್ಕೆ ಸಾಕು ಎಂದ. ಧನದಾಹಕ್ಕೂ ಕಾಲದೊಂದಿಗೆ ಓದುವ ಮೋಹಕ್ಕೂ ಸಾಕು ಎಂದಿದ್ದರೇ ಪುನರ್ವಸು ಇಂದು ಶ್ರೀ ರಾಮನ ಜನ್ಮ ನಕ್ಷತ್ರವಾಗುತ್ತಿತ್ತು ಅಷ್ಟೇ.
ಪ್ರೀತ್ಯಾದರಗಳನ್ನೇ ಉಸಿರಾಡಿದ್ದ ಭಾರಂಗಿ ಸರ್ಕಾರಕ್ಕೆ ಕಾಗದದ ಮೂಲೆಯ ಚೂರಿನಂತೆ ಅನಿಸಿದ್ದು ಅಂತ್ಯದ ಆರಂಭ. ಆ ಅಂತ್ಯದ ದುರ್ದೈವವಶಾತ್ ಪಯಣದಲ್ಲೇ ನಾವೆಲ್ಲರೂ ಇದ್ದೇವೆ. ಯಾವುದಾದರೂ ಮಹಾಮಳೆಗೆ ಸಿಕ್ಕು "ನಾಗರಿಕತೆ" ನಿರ್ನಾಮವಾದರೇ ಮುಂದಿನ ಜನಾಂಗಕ್ಕೆ ಉತ್ತರೋತ್ತರವಾಗಲಿ. ನಾಗರಿಕತೆಗಿಂತಲೂ ಮಾನವೀಯತೆಯ ಅಭಿವೃದ್ದಿಯಾಗಲಿ.
ನಾವೆಷ್ಟು ಹಳಿದುಕೊಂಡರೂ ಬಡಿದುಕೊಂಡರೂ ವ್ಯವಸ್ಥೆಯ ಮುಂದೆ ವ್ಯಕ್ತಿಯೊಬ್ಬನ ವ್ಯಾಪ್ತಿಯೆಷ್ಟರದು ಎಂಬ ಸತ್ಯವನ್ನು ಅರಗಿಸಿಕೊಳ್ಳಬೇಕಷ್ಟೇ.
ಅಂದಹಾಗೇ, ಪುನರ್ವಸು ಮತ್ತು ಅದಿತಿಯ ಕಥೆಯನ್ನು ಕೂಡ ದತ್ತು ಮಾವ ಹೇಳಿದ್ದಾರೆ. ವಿಪರ್ಯಾಸ!!! ಅಂಥದೇ ಮತ್ತೊಂದು ಯಾಗವನ್ನು ಅದಿತಿ ಕೈಗೊಳ್ಳಲಿ.
ಇರೋದ್ರೊಳ್ಗೆ ಒಮ್ಮೆ ನೋಡು ಜೋಗದ್ ಗುಂಡಿ ಅಂದಂತೆ ಹೋಗೊದ್ರೊಳ್ಗೆ ಒಮ್ಮೆ ಓದು ಪುನರ್ವಸು ಎಂದು ಹೇಳಿ ನಿಲ್ಲಿಸುತ್ತೇನೆ!! ಸಾಕು
ಕಾದಂಬರಿ ಓದಿ ಮುಗಿಸುವ ಹೊತ್ತಿಗೆ ಕಣ್ಣು ಒದ್ದೆಯಾಗಿದ್ದು ಮಾತ್ರ ಸತ್ಯ, ಗಣೇಶ ದನಕರುಗಳನ್ನು ಭಾರಂಗಿಯಿಂದ ಭದ್ರಾವತಿಗೆ ಸಾಗಿಸುವಾಗ ಮಂಗಳಗೌರಿ ಹಸು ಹೇಗೋ ಕಣ್ತಪ್ಪಿಸಿ ಹೊಳೆಗೆ ಹಾರಿ ಭಾರಂಗಿ ಕಡೆ ಈಜುತ್ತಾ ಹೋಗುವ ಪ್ರಸಂಗವಂತೂ ಅತೀ ದುಃಖಕ್ಕೀಡುಮಾಡುತ್ತದೆ, ಅಂತಹ ಪ್ರಾಣಿಗಳಿಗೇ ತಮ್ಮ ನೆಲವೆಂಬ ಮಮತೆ ಇರಬೇಕಾದರೇ ದತ್ತಪ್ಪನಂತವರಿಗೆ ಇಲ್ಲದೇ ಇರುವುದು ಸಾಧ್ಯವಾ? ಇಲ್ಲಿ ಬರುವ ಮುರಾರಿ ಎಂಬಾತನಿಗೆ ಅದು ಹ���ಗೋ ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ಹೇಳಿದಾಗ ಅವನನ್ನು ನೋಡಿ ಹಾಸ್ಯ ಮಾಡಿದವರು ಎಷ್ಟೋ, ಆದರೆ ಆತನು ಈ ಮಾತು ಹೇಳಿರುವುದಂತೂ ಸತ್ಯವೇ ಆಗುತ್ತದೆ. *ಜೋಗ ಪಟ್ಣ ಆಗ್ತು, ಗಾವುದಕ್ಕೊಂದು ದೀಪ ಆಗ್ತು, ಆಕಾಶದ ತುಂಬ ವಿಷದ ಬಳ್ಳಿ ಹಬ್ತು, ನಾನಾ ಶಾಸ್ತ್ರಿಗಳು ಬಿದರೂರು ನರಸಿಂಹ ದೇವ್ರ ಗುಡೀ ಎದ್ರು ಹುಗ್ಸಿದ ವಡೇಕಟ್ಟೆ ಒಡ್ದು ಕಂಡೋರು ತಿಂದು ಕಲ್ತೋರು ಹಾಡ್ತ. ಆಗಲೇ ಪ್ರಳಯ, ಜಗತ್ಪ್ರಳಯ*.
1916 ರಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು ಜೋಗಕ್ಕೆ ಭೇಟಿ ನೀಡಿ ವಿದ್ಯುತ್ ಯೋಜನೆ ಸಮೀಕ್ಷೆ ನಡೆಸಲು ಕಡಾಂಬಿ,ಪೋರ್ಬ್ಸ ರವರ ನೇತೃತ್ವದಲ್ಲಿ ಕೃಷ್ಣರಾವ್ ರವರನ್ನು ಆಯ್ಕೆಮಾಡುತ್ತಾರೆ. ಕೃಷ್ಣರಾವ್ ಆಯ್ಕೆಯಾದಾಗ ವಿಶ್ವೇಶ್ವರಯ್ಯನವರ ನೇತೃದ್ವದಲ್ಲಿ ಕೆಲಸ ಮಾಡಲು ತನಗೆ ಈ ಅವಕಾಶ ಸಿಕ್ಕಿದ್ದು ಅದೃಷ್ಟವೆಂದು ಆನಂದಪಟ್ಟರು, ಹೀಗೆ 1918,1928, ಹಾಗು 1941ರಲ್ಲಿ ಮೂರುಸಲ ಭೇಟಿನೀಡಿ ತಮ್ಮ ಯೋಜನೆಯನ್ನು ಸಫಲಗೊಳಿಸುತ್ತಾರೆ. 1918ರಲ್ಲಿ ಜೋಗ ಹೇಗಿತ್ತು ಅದೊಂದು ದೊಡ್ಡ ಕಾಡು ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಬೇಕಾದರೆ ನಡೆದು ಹೋಗಬೇಕು ಅಥವಾ ದೋಣಿಯಲ್ಲಿ, ಅಲ್ಲಿ ದೋಣಿ ನಡೆಸುತ್ತಿದ್ದವನು ಗಣಪ, ಬಿಡುವಿನ ಸಮಯದಲ್ಲಿ ಆ ಅರಣ್ಯದಲ್ಲಿ ಹಲವಾರು ಮರ ಗಿಡಗಳನ್ನು ಅದರ ಉಪಯುಕ್ತಗಳನ್ನು ತಿಳಿದುಕೊಂಡರು, ಡ್ಯಾಮ್ ಕಟ್ಟಲು ಸೂಕ್ತ ಸ್ಥಳ ಆಯ್ಕೆ ಮಾಡಲು ಹೊನ್ನೇಮರಡು, ಹಿರೇಭಾಸ್ಕರ, ಮಡೆನೂರು ಪ್ರದೇಶದಲ್ಲಿ ಸಮೀಕ್ಷೆ ನಡೆಸಲು ಪ್ರಾರಂಭಿಸಿದರು. ಹೀಗೆ ಒಮ್ಮೆ ಭಾರಂಗಿಗೆ ಹೋದಾಗ ದತ್ತಪ್ಪರವರ ಭೇಟಿಯಿಂದ ಅವರ ಜೀವನದಲ್ಲೇ ಹಲವಾರು ತಿರುವುಗಳನ್ನು ಕಾಣುತ್ತಾರೆ, ಅವರ ಆರೈಕೆಗೆ ಬೆರಗಾಗುತ್ತಾರೆ, ಅಂದಿನಿಂದ ಹಲವಾರು ಸಲ ಇಬ್ಬರೂ ಬೇಟಿಯಾಗುವ ಪ್ರಸಂಗಗಳೂ ಬರುತ್ತವೆ, ಚಿಕ್ಕ ವಯಸ್ಸಿನಲ್ಲೇ ಹೆಂಡತಿಯನ್ನು ಕಳೆದುಕೊಂಡ ದತ್ತಪ್ಪ ಮರು ಮದುವೆಯಾಗದೇ ಕಾಂಗ್ರೇಸ್ ಪಕ್ಷದಲ್ಲಿ ಸೇರಿ ಸಮಾಜ ಸೇವೆ ಮಾಡುತ್ತಾ ಒಳ್ಳೆಯ ಹೆಸರನ್ನು ಪಡೆಯುತ್ತಾರೆ, ಇತ್ತ ಭಾರಂಗಿ ಮನೆಯ ಜವಾಬ್ದಾರಿ ತುಂಗಕಯ್ಯನ ಮೇಲೆ ಬೀಳುತ್ತದೆ, ಭಾರಂಗಿ ಮನೆ ಜೀವಂತವಾಗಿದೆಯಂದರೆ ಅದು ತುಂಗಕ್ಕಯ್ಯನ ತ್ಯಾಗವೇ ಕಾರಣ, ಹಲವಾರು ಸಲ ಗರ್ಭಪಾತವಾಗಿ ವಸುಧಾಳಿಗೆ ಜೀವನದಲ್ಲೇ ಆಸಕ್ತಿಯಿರುವುದಿಲ್ಲ, ಜೋಗ್ ಗೆ ಕರೆತಂದು ಕೃಷ್ಣರಾವ್ ವಸುಧಾಳಿಗೆ ಭಾರಂಗಿಯವರನ್ನು ಪರಿಚಯ ಮಾಡಿಸಿದ ನಂತರವಂತೂ ಅವಳ ಜೀವನವೇ ಬದಲಾಗಿಬಿಡುತ್ತದೆ, ಬಿಡುವಿನ ಸಮಯದಲ್ಲಿ ಜೋಗಕ್ಕೆ ಸಂಬಂಧಪಟ್ಟಂತ ಹಲವಾರು ಗ್ರಂಥಗಳನ್ನು ಓದಿ ಅದರ ಬಗ್ಗೆ ಹಲವಾರು ಲೇಖನಗಳನ್ನು ಬರೆಯುತ್ತಾಳೆ, ಇದರಿಂದ ಕೃಷ್ಣರಾವ್ ರವರ ಯೋಜನೆಗೂ ಉಪಯುಕ್ತವಾಗುತ್ತದೆ, ಭಾರಂಗಿಯವರ ಜೊತೆ ಅನ್ಯೋನ್ಯವೂ ಬೆಳೆಯುತ್ತದೆ, ಭಾರಂಗಿಯವರು ಸಹ ಅವರಿಬ್ಬರನ್ನು ತಮ್ಮ ಸ್ವಂತ ಮಗಳು, ಅಳಿಯ ಎಂದೇ ಆರೈಕೆಮಾಡುತ್ತಾರೆ. ತುಂಗಕ್ಕಯ್ಯ, ದತ್ತಪನವರು ಜವಾಬ್ದಾರಿ ವಹಿಸಿಕೊಂಡು ವಸುಧಾಳಿಗೆ ಗರ್ಭಾಧಾರಣೆಗೆ ಔಷಧಿ ಕೊಟ್ಟು ಅವಳ ಕೌಟುಂಬಿಕ ಜೀವನವನ್ನು ಬದುಕಿಸಿ ಕೊಡುತ್ತಾರೆ, ಅವರ ಧೈರ್ಯ, ಔಷಧ ಪ್ರತಿಫಲ ಹೆಣ್ಣು ಮಗುವಿಗೆ ಜನ್ಮನೀಡಿದಾಗ ಎಲ್ಲರೂ ಪಟ್ಟ ಆನಂದ ಅಷ್ಟಿಷ್ಟಲ್ಲ. “ಹೆಣ್ಣು ಮಗುವಿಗೆ ಪುನರ್ವಸು ಎಂದು ನಾಮಕರಣ ಮಾಡುತ್ತಾರೆ, ಕಾರಣ, ಪುನರ್ವಸು ೨೭ನಕ್ಷತ್ರಗಳಲ್ಲಿ ಒಂದು, ಪುನರ್ವಸು ಎಂದರೆ ಪುನಃ ಪುನಃ ಬಂಗಾರಕೊಡುವುದು ಎಂದು ಅರ್ಥ,ಅದು ಶ್ರೀರಾಮನ ನಕ್ಷತ್ರ.”
ಸ್ವಲ್ಪ ಮೊತ್ತದಷ್ಟೇ ಜೋಗದ ನೀರನ್ನು ಉಪಯೋಗಿಸಿ ವಿದ್ಯುತ್ ನೀಡಲು ಹೊರಟ ಶರಾವತಿಯ ಮೊದಲನೆ ಹಂತದ ಹಿರೇಭಾಸ್ಕರ ಡ್ಯಾಮ್ ಯೋಜನೆ ಪೂರ್ಣಗೊಂಡಾಗ ಸರ್ಕಾರ ಲಿಂಗನಮಕ್ಕಿ ಯೋಜನೆಗೆ ಸಂಬಂಧಪಟ್ಟಂತ ಸಮೀಕ್ಷೆ ನಡೆಸಲು ಆದೇಶ ಜಾರಿಮಾಡುತ್ತದೆ, ಇದರಿಂದ ಇನ್ನೂ ಹಲವಾರು ಊರುಗಳು ಮುಳುಗುವುದು ಖಂಡಿತ ಎಂದು ಜನರು ದುಃಖಪಡುತ್ತಾರೆ. ಅಂತೂ ಶರಾವತಿಯ ಯೋಜನೆಯೂ ಪೂರ್ಣಗೊಳ್ಳುತ್ತದೆ, ಲಿಂಗನಮಕ್ಕಿ ಪ್ರಾಜೆಕ್ಟ್ ಪೂರ್ಣಗೊಂಡ ಸಮಯದಲ್ಲಿ ಹೇಗಿದ್ದ ಭಾರಂಗಿ ಹೇಗಾಯಿತು ಎನ್ನುವುದನ್ನು ನೆನೆದರೆ ದುಃಖವಾಗುತ್ತದೆ, ಕೊನೆಯ ಅಧ್ಯಾಯವಂತೂ ಕಣ್ಣಂಚಿನಲ್ಲೇ ನೀರು ತರಿಸಿಬಿಡುತ್ತದೆ. ಭಾರಂಗಿ ಹಾಗು ಅದರ ಸುತ್ತಮುತ್ತಲ ಹಳ್ಳಿಗರ ಬದುಕಿಗೆ ಶರಾವತಿ ಜಲವಿದ್ಯುತ್ ಯೋಜನೆ ಮಾಡಿದ ಹಾನಿಯನ್ನು ನೆನೆದರೆ ದುಃಖವಾಗುತ್ತದೆ. ಹೌದು ಹೇಳೋದೆ ಮರತೆ ವಿದ್ಯುತ್ ನಮ್ಮ ಬದುಕಿಗೆ ಅತ್ಯಾವಶ್ಯಕ, ವಿದ್ಯುತ್ ಇಲ್ಲದ ಬದುಕು ಊಹಿಸಲು ಸಾಧ್ಯವೇ? ಖಂಡಿತಾ ಇಲ್ಲ, ಒಂದು ಕಡೆ ಬೆಳಕು ಹರಿಸಲು ಮತ್ತೂಂದು ಕಡೆ ಕತ್ತಲೆ ಮಾಡುವುದು ಎಷ್ಟರಮಟ್ಟಿಗೆ ನ್ಯಾಯ? ಶರಾವತಿ ಯೋಜನೆಯಿಂದ ಬೆಂಗಳೂರಿನಲ್ಲಿ ಕೇಂದ್ರೋದ್ಯಮಗಳು ಪ್ರಾರಂಭವಾಗಿ ಬೆಂಗಳೂರು ಬೆಳಯತೊಡಗಿತು, ಇದರಿಂದ ನಗರದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚತೊಡಗಿದವು, ಬಡವರಿಗೆ ಈ ಯೋಜನೆಯಿಂದ ಉದ್ಯೋಗ ದೊರೆತು ತಮ್ಮ ಜೀವನ ನಡೆಸಲು ಉಪಯೋಗವಾಯಿತು, ಬೆಂಗಳೂರಿಗೆ ಒಂದೇ ಅಲ್ಲ, ನಮ್ಮ ದೇಶಕ್ಕೆ ಇಂತಹ ವಿದ್ಯುತ್ ಯೋಜನೆಗಳು ಅನಿವಾರ್ಯ, ಇಂತಹ ಯೋಜನೆಗಳನ್ನು ಒಪ್ಪಿಕೊಳ್ಳೋಣ ಆದರೆ ಈ ಯೋಜನೆಯನ್ನು ಪೂರ್ಣಗೊಳಿಸಲು ಭಾರಂಗಿ ಅಂತಹ ಹಲವಾರು ಪ್ರದೇಶಗಳು ನಾಶಗೊಳ್ಳುವುದು ನ್ಯಾಯವಾ? ನದಿ, ವನ, ಕಣಿವೆಗಳನ್ನು ನಾಶಮಾಡುವುದು ಎಷ್ಟು ಸರಿ? ಈ ಯೋಜನೆಯನ್ನು ಪೂರ್ಣಗೊಳಿಸಲು ಭಾರಂಗಿಯವರ ಹಾಗು ಇತರ ಪ್ರದೇಶದ ಜಮೀನುಗಳನ್ನು ಸರ್ಕಾರ ಹೇಗೂ ಆಕ್ರಮಣ ಮಾಡುತ್ತದೆಂದು ತಿಳಿದು ಜನರು ವ್ಯವಸಾಯ ಮಾಡದೇ ಸೋಮಾರಿಗಳಾದರು, ಕಳ್ಳತನ ಮಾಡುವುದನ್ನು ಕಲೆತರು, ಕೂಡು ಕುಟುಂಬಗಳು ಒಡೆದವು, ಹಲವರು ಊರಿನ ಮೇಲೆ ಪ್ರೀತಿಯಿಂದ ತಮ್ಮ ನೆಲವನ್ನು ಬಿಡದೆ ತೀರಿಹೋದರು, ಕೆಲವರು ಸಾಲ ಮಾಡಿದರು, ದ್ವೇಷ, ಅಸೂಯೆಗಳು ಬೆಳೆಸಿಕೊಂಡರು, ಕೆಲವರು ಸರ್ಕಾರದಿಂದ ಬಂದ ಹಣದಿಂದ ಎಲ್ಲಾದರೂ ಜೀವನ ನಡೆಸಿದರಾಯಿತೆಂದು ಊರುಬಿಟ್ಟರು.
ಈ ಪ್ರಾಜೆಕ್ಟ್ ನಿಂದ ಭಾರಂಗಿ ಮುಳುಗಿದ್ದಲ್ಲದೇ ಶರಾವತಿ ಕಣಿವೆಯ ನೆಮ್ಮದಿಯೂ ಹಾಳಾಗುತ್ತದೆ, ದೋಣಿ ಗಣಪನ ಸಾವಾಗುತ್ತದೆ, ಸರ್ಕಾರ ಒಂದಿಷ್ಟು ಪರಿಹಾರ ಕೊಡುವ ಸೌಜನ್ಯವೂ ತೋರಿಸುವುದಿಲ್ಲ, ಪ್ರಾಮಾಣಿಕ ಇಂಜಿನಿಯರ್ರ್ನ ಸಾವಾಗುತ್ತದೆ, ಕಂಡ ಕಂಡಲ್ಲಿ ಕ್ವಾರಿಗಳನ್ನು ಮಾಡಲು ಸರ್ಕಾರ ಕೇರಳದವರಿಗೆ ಅವಕಾಶ ಕೊಡುತ್ತದೆ, ಆ ಮನುಷ್ಯರು ತುಂಗಕ್ಕಯ್ಯ ಮಗಳಾದ ಶರಾವತಿಯ ಮೇಲೆ ಅತ್ಯಾಚಾರ ಮಾಡುತ್ತಾರೆ. ಭಾರಂಗಿ ಕೋಟೆಯ ಕಲ್ಲುಗಳನ್ನು ಕೆಡವಿ ಡ್ಯಾಮ್ ಕಟ್ಟುತ್ತಾರೆ, ಹಳ್ಳಿ ಜನಗಳಿಗೆ ಆರೋಗ್ಯ, ನೈರ್ಮಲ್ಯ, ದೀಪ, ಕುಡಿಯೋ ನೀರು,ಶಿಕ್ಷಣ ಯಾವ ಸೌಲಭ್ಯವು ಕೊಡಲಿಲ್ಲ ಅದು ಬರಿ ಕಾಲೋನಿಯವರಿಗೆ ಮಾತ್ರ, ಅಂತೂ ತೋಟವಿಲ್ಲದಲ್ಲಿ ತೋಟವಿದೆ ಅಂತ ದಾಖಲೆ ಸೃಷ್ಟಿಸಿ ಹಣ ಮಾಡುತ್ತದೆ, ಕಾಡನ್ನು ಕಡಿದು , ದೇವರಿಗೆ ಗಂಧ ತೇಯಲು ಬಳಸುತ್ತಿದ್ದ ಗಂಧದ ಮರಗಳನ್ನು ಮಾರಿ ಹಣ ಮಾಡಿಕೊಂಡಿತು, ಪ್ರಾಣಿಗಳ ಭೇಟೆ ಮಾಂಸ, ದಂತ, ಕೊಂಬು ಮಾರಾಟ ಮಾಡಿ ಹಣ ಮಾಡಿಕೊಂಡಿತು, ದತ್ತಪ್ಪನ ಮಗ ಗಣೇಶ ಊರು ಬಿಟ್ಟು ಭದ್ರಾವತಿಯಲ್ಲಿ ನೆಲಸಿ ಭಾರಂಗಿ ಮನೆಯ ವಾಸ್ತು ಬಾಗಿಲು, ದೇವರ ಸಾಮಾನು ಎಲ್ಲವೂ ಭದ್ರಾವತಿಗೆ ಸೇರಿಸುತ್ತಾನೆ, ತುಂಗಕ್ಕನ ಸಾವಾಗುತ್ತದೆ, ದತ್ತಪ್ಪನಿಗೆ ಆಪ್ತರಾದ ಊರಿನವರು ಒಬ್ಬೊಬ್ಬರೇ ಊರು ಬಿಡುತ್ತಾರೆ, ಇದೇ ದುಃಖದಿಂದ ದತ್ತಪ್ಪ ಭಾರಂಗಿ ಬಿಟ್ಟು ಕಾಣೆಯಾಗುತ್ತಾರೆ, ಕಡೆಯಲ್ಲಿ ತಂದೆಯ ಮನಸ್ಸನ್ನು ಅರ್ಥ ಮಾಡಿಕೊಂಡ ಗಣೇಶ ದತ್ತಪ್ಪನನ್ನು ಭೇಟಿಯಾಗುವುದೇ ಇಲ್ಲ, ತುಂಗಕ್ಕಯ್ಯ ಸಾವು, ಶರಾವತಿಯ ಮೇಲೆ ನಡೆದ ಅತ್ಯಾಚಾರ, ಭಾರಂಗಿಯ ಸಂಪೂರ್ಣ ಮುಳುಗಡೆಯಿಂದ ತಾನು ಯಾವುದಕ್ಕೆ ಬೆಲೆಕೊಡಬೇಕೊ ಅವಕ್ಕೆ ಬೆಲೆಕೊಡದೇ ಪಶ್ಚಾತ್ತಾಪ ಪಡುತ್ತಾನೆ.
ಶರಾವತಿಯ ಯೋಜನೆಯನ್ನು ಪೂರ್ಣಗೊಳಿಸಲು ಕೃಷ್ಣರಾವ್ ಹಾಗು ಅವರಿಗೆ ಬೆನ್ನೆಲಬಾಗಿನಿಂತ ಪತ್ನಿ ವಸುಧಾ, ಈ ಗುರಿಯನ್ನು ಪೂರ್ಣಗೊಳಿಸಬೇಕೆಂದು ಒಂದು ಕಡೆಯಾದರೆ, ಭಾರಂಗಿಯನ್ನು ಉಳಿಸಿಕೊಳ್ಳಲು ದತ್ತಪ್ಪ ಹೆಗ್ಡೆಯವರು ಪಟ್ಟ ಶ್ರಮ ಮತ್ತೊಂದು ಕಡೆ. ಇಂತಹ ಮನಸ್ಸುಗಳ ತೊಳಲಾಟದಲ್ಲಿ ನಡೆಯುವುದೇ ಪುನರ್ವಸುವಿನ ಕಥೆ.
ಎರಡು ದಿನಗಳಿಂದ ಬಿಡದಂತೆ ಪುಸ್ತಕ ಓದಿ ಮುಗಿಸಿದ ಮೇಲೆ ಏನೋ ಒಂದು ವೇದನೆ. ಬಹಳ ದಿನಗಳಿಂದ ಬಯಕೆಪಟ್ಟಿಯಲ್ಲಿ ಓದಬೇಕು ಅಂತ ಇಟ್ಟುಗೊಂಡಿದ್ದ ಈ ಪುಸ್ತಕ ಓದುವಂತಾಯಿತು. ಬಹಳ ಕಾಡಿದಂತಹ ಪುಸ್ತಕ. ಜೋಗಕ್ಕೆ ಒಂದು ಅಣೆಕಟ್ಟು ಸರ್ ಎಂವಿ ಅವರ ಕನಸಾಗಿತ್ತು. ಅದು ಸಾಕಾರವಾಯಿತು ಆದರೆ ಅದರಿಂದ ಮುಳುಗಡೆಗೊಂಡ ಮನೆಗಳು ಎಷ್ಟೋ, ಕೊಚ್ಚಿಹೋದ ಕನಸುಗಳೆಷ್ಟೋ, ಮಣ್ಣುಗೂಡಿದ ಜೀವಗಳೆಷ್ಟೋ. ಇದರ ಸಂಶೋಧನೆ ಮತ್ತು ಅವಲೋಕನವೇ ಈ ಪುಸ್ತಕ. ಕಾದಂಬರಿಯಲ್ಲಿ ಕೃಷ್ಣರಾವ್ ಎಂಬ ಎಂಜಿನೀಯರಿಗೆ ಅಣೆಕಟ್ಟಿನ ಉಸ್ತುವಾರಿಯ ಜವಾಬ್ದಾರಿ ನೀಡಲಾಗುತ್ತದೆ. ಅವರ ಮೇಲಾಧಿಕಾರಿ ಫೋರ್ಬ್ಸ್ ರಾಯರಿಗೆ ಈ ಅಣೆಕಟ್ಟು ರಾಯರಿಗೆ ತಮ್ಮ ಕೂಸು ಅಂತ ಹೇಳಿದ್ದರು. ಅದರಂತೆಯೇ ಕೃಷ್ಣರಾವ್ ಅದಕ್ಕೆ ಪ್ರಾಮಾಣಿಕರಾಗಿ ದುಡಿದ್ದರೂ ಸಹ. ಆದರೆ ಆ ದುಡಿತ ಬೇರೆಯವರ ಹೃದಯದ ಮಿಡಿತವನ್ನು ಕಡಿತಗೊಳಿಸುತ್ತದೆ ಎಂದು ತಿಳಿದಿರಲಿಲ್ಲ. ಅದು ತಿಳಿದಿದ್ದು ಎಲ್ಲವೂ ಮುಗಿದು ಹೋದ ನಂತರ. ಕಾದಂಬರಿಯಲ್ಲಿಯ ಕೇಂದ್ರಬಿಂದು ಭಾರಂಗಿಯ ದತ್ತಪ್ಪ ಹೆಗಡೆ. ಆ ಊರಿನ ಜಮೀನ್ದಾರರಾಗಿದ್ದ ಇವರ��� ಕೃಷ್ಣರಾವರನ್ನು ಭೇಟಿ ಮಾಡಿದ ಮೊದಲ ದಿನವೇ ತಮ್ಮವರು ಅಂತ ತಿಳಿದುಕೊಳ್ಳುತ್ತಾರೆ. ಕೃಷ್ಣರಾವರ ಮಡದಿ ವಸುಧಾಳಿಗೂ ಭಾರಂಗಿಯ ಜನರಿಗೆ ಗಡುಸಾದ ಬಾಂಧವ್ಯ ಬೆಳೆಯುತ್ತದೆ. ಬಂಜೆಯಾದಂತಹ ವಸುಧಾಳನ್ನು ತಮಗೆ ಗೊತ್ತಿದ್ದಂತಹ ನಾಟಿವೈದ್ಯರಿಂದ ಮತ್ತೆ ಬೀಜ ಬಿತ್ತುವ ಹಾಗೆ ಮಾಡುತ್ತಾರೆ. ಅವರ ಜೊತೆ ಅವರ ಅಕ್ಕ ತುಂಗಕ್ಕಯ್ಯಳ ಪಾತ್ರ ಮನದಲ್ಲಿ ಅಚ್ಚಾಗಿ ಉಳಿಯುತ್ತದೆ. ತುಂಗಕ್ಕಯ್ಯಳ ಪ್ರೀತಿ ತುಂಬಿದ ಮಾತುಗಳು, ಅಬ್ಬಾ ಇನ್ನೊಂದು ಸಲ ಓದಿದ್ದನ್ನೇ ಓದಬೇಕು ಎನ್ನಿಸುತ್ತದೆ. ಕಾದಂಬರಿಯಲ್ಲಿಯ ಪ್ರತಿ ಪಾತ್ರವರ್ಗ ತಮ್ಮದೇ ಆದ ಛಾಪನ್ನು ಮೂಡಿಸಿವೆ. ಪ್ರತಿ ಪಾತ್ರಗಳಿಗೆ ಒಂದು ವಿಶೇಷವಿದೆ. ಕೃಷ್ಣರಾವ್ ಮತ್ತು ವಸುಧಾ IB ಯಲ್ಲಿ ಇದ್ದಾಗ ಅಲ್ಲಿಯ ವೃಷಭಯ್ಯ, ಪದ್ಮರಾಜು ಅವರ ಮಮತೆ ಮತ್ತು ಕಾರ್ಯವೈಖರಿ ಎಷ್ಟು ಆತ್ಮೀಯತೆಯನ್ನು ಕೊಡುತ್ತವೆ. ಆದರೆ ಓದುತ್ತಾ ಹೋದಂತೆ ನಮಗೆ ಈಗಿನ ದಿನಗಳಲ್ಲಿ ನಮ್ಮ ಸುಖಕ್ಕೆ ಎಷ್ಟೋ ಸಾಧನಗಳು ಉಂಟು, ಆದರೆ ಸುಖವಿಲ್ಲ, ಲವಲವಿಕೆಯಿಲ್ಲ. ನಮ್ಮವರೆಂತಿಲ್ಲ. ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರೆದಿದ್ದರೂ ಮಾನವೀಯತೆಯಿಂದ ದಿನೇ ದಿನೇ ಹಿಂದೆ ಹೋಗುತ್ತಾ ಇದ್ದೇವೆ. ಜೀವನದಲ್ಲಿಯ ಸುಖವನ್ನು ಕಳೆದುಕೊಂಡಿದ್ದ ವಸುಧಾಳನ್ನು ಮತ್ತೆ ಮರುಜೀವ ನೀಡಿದ್ದ ಈ ಭಾರಂಗಿ ತನ್ನ ಕಳೆಯನ್ನು ಕಳೆದುಕೊಂಡಿತ್ತು, ಕಾರಣ ಈ ಅಣೆಕಟ್ಟಿನ ನಿರ್ಮಾಣ. ಇದರಿಂದ ಕೃಷ್ಣರಾವರ ಮೇಲಿದ್ದ ಭರವಸೆ ಕಳೆದುಕೊಳ್ಳುತ್ತಾರೆ. ಒಂದು ರೀತಿಯಿಂದ ನೋಡಿದರೆ ಕೃಷ್ಣರಾವರಿಗೆ ಇದು ಸಮ್ಮಾನಿತವಾದದ್ದು ಆದರೆ ಹೆಗಡೆಯಂತಹ ಜನರಿಗೆ? ಅಲ್ಲಿದ್ದ ಜನರು ತಮ್ಮ ಭದ್ರ ನೆಲೆಗಾಗಿ ಜಾಗವನ್ನು ಹುಡುಕುತ್ತಾ ಹೋದರೆ, ಹೆಗಡೆಯವರು ಅದೇ ತಮ್ಮ ಬೆಳೆದು ಬಂದಿದ್ದ ಊರಿನಲ್ಲೇ ನೆಲೆನಿಲ್ಲುತ್ತಾರೆ. ಕಾರಣ ತಮ್ಮ ಊರಿನ ಋಣದ ಪಾಶ ಹೆಗಡೆಯವರನ್ನು ಎಳೆದಿಟ್ಟಿರುತ್ತದೆ. ಕಾದಂಬರಿಯಲ್ಲಿ ಇಷ್ಟವಾಗುವ ಸಾಲು: ಅಲ್ಲಿ ರಸ್ತೆಗಳಿರಲಿಲ್ಲ ದಾರಿಯಿತ್ತು, ಶಾಲೆಗಳಿರಲಿಲ್ಲ ಶಿಕ್ಷಣವಿತ್ತು, ಆಸ್ಪತ್ರೆಗಳಿರಲಿಲ್ಲ ಔಷಧವಿತ್ತು, ಆದರೆ ಈಗ?! ಅವೆಲ್ಲ ನೀರುಪಾಲಾಗಿತ್ತು.
ಕೆಲವು ಪುಸ್ತಕಗಳು ಎಷ್ಟು ಇಷ್ಟವಾಗುತ್ತವೆ ಅಂದ್ರೆ, "ಓದಿದ್ದನ್ನೆಲ್ಲಾ ನೆನಪಿನಿಂದ ಅಳಿಸಿ ಮೊತ್ತೊಮ್ಮೆ ಆ ಅದ್ಭುತ ಓದಿನ ಅನುಭವವನ್ನು ಪಡೆದುಕೊಳ್ಳುವ ಅವಕಾಶವಿರಬಾರದಿತ್ತಾ!?" ಎನ್ನಿಸುವಷ್ಟು. ಆ ರೀತಿ ನನಗೆ ಇಷ್ಟವಾದ ಪುಸ್ತಕಗಳ ಪಟ್ಟಿಗೆ "ಪುನರ್ವಸು" ಕಾದಂಬರಿಯನ್ನೂ ಸೇರಿಸುತ್ತೇನೆ. "ಪುನರ್ವಸು" ಎಷ್ಟು ಚಂದದ ಶೀರ್ಷಿಕೆ ಅಲ್ವಾ?
ಶರಾವತಿ ತೀರದ ಮಲೆನಾಡಿನ ಹಳ್ಳಿಗರ ಬದುಕನ್ನು ಜೋಗ್ ಯೋಜನೆ ಶಿಥಿಲಗೊಳಿಸಿದ ಬಗೆಯನ್ನೂ, ಆಧುನಿಕ ಬದುಕಿಗೆ ವಿದ್ಯುತ್ ಅನಿವಾರ್ಯವೆಂದು ವೃತ್ತಿನಿಷ್ಠೆ ಮೆರೆದವರ ಬದ್ಧತೆಯನ್ನೂ ವಿಸ್ತಾರವಾಗಿ ತಿಳಿಸುವ ಕಾದಂಬರಿ "ಪುನರ್ವಸು". ಕಾದಂಬರಿಯ ವಸ್ತುವೇನೋ ಬಹಳ ಸರಳವಾಗಿದೆ ಆದರೆ ಶರಾವತಿ ವಿದ್ಯುತ್ ಯೋಜನೆಯಿಂದಾದ ಅನಾನೂಕೂಲಗಳೆಷ್ಟು? ಹಾಳುಗೆಡವಿದ ನೈಸರ್ಗಿಕ ಪರಿಸರವೆಷ್ಟು? ಸಾವನ್ನಪ್ಪಿದ ಮುಗ್ಧರ ಸಂಖ್ಯೆಯೆಷ್ಟು? ಮುಳುಗಡೆಯಿಂದ ತುಂಡರಿಸಿಕೊಂಡ ಬಾಂಧವ್ಯಗಳೆಷ್ಟು? ನೋಡುವುದಕ್ಕೆ ಸುಂದರವಾಗಿ ಕಾಣುವ ಆ ಆಣೆಕಟ್ಟು ಬೆಲೆ ಕಟ್ಟಲಾಗದ ಸುಂದರ ಬದುಕುಗಳನ್ನು, ಮಾನವೀ ಮೌಲ್ಯಗಳನ್ನು ಬಲಿ ಪಡೆದದ್ದು ವಿಪರ್ಯಾಸವೇ ಸರಿ.
ಜೇಮ್ಸ್ ಬಾಲ್ಡ್ವಿನ್ ಇಂಗ್ಲೀಷಿನಲ್ಲಿ ಹೇಳಿದ ಒಂದು ಮಾತು ನನಗೆ ನೆನಪಾಗುತ್ತಿದೆ, ಆತ ಹೇಳುತ್ತಾನೆ "You think your pain and your heartbreaks are unprecedented in the history of world, but then you read." ಎಷ್ಟು ನಿಜ ಅಲ್ವಾ? ನಮ್ಮ ನೋವೇ ಪ್ರಪಂಚದ ಅತ್ಯಂತ ದೊಡ್ಡ ನೋವು ಎಂದು ಭಾವಿಸಿರುತ್ತೇವೆ. "ಪುನರ್ವಸು" ಕಾದಂಬರಿ ಓದಿದ ಮೇಲೆ ನನಗೆ ಅರಿವಾಯ್ತು, ಅಲ್ಲಿ ಮುಳುಗಡೆಗೆ ಸಿಕ್ಕು ನೆಲ ನೆಲೆ ಕಳೆದುಕೊಂಡವರ ನೋವಿನ ಮುಂದೆ ನನ್ನ ನೋವು ನಗಣ್ಯ ಎಂದು.
ಕಾದಂಬರಿಯಲ್ಲಿ ಬಹಳಷ್ಟು ವಿಚಾರಗಳಿವೆ, ಅವುಗಳನ್ನೆಲ್ಲಾ ವಿಸ್ತೃತವಾಗಿ ಇಲ್ಲಿ ಬರೆಯುವುದು ನನಗೆ ತುಸು ಕಷ್ಟ. ಓದಿನ ಮೂಲಕವೇ ಆ ಅನುಭವ ನಿಮ್ಮದಾಗಲಿ ಎನ್ನುವುದು ನನ್ನ ಅಭಿಪ್ರಾಯ. ನಿಷ್ಕಲ್ಮಶ ಪ್ರೀತಿ ತೋರುವ ಆರೈಕೆ ಮಾಡುವ ಭಾರಂಗಿ ಕುಟುಂಬವೊಂದು ಇಲ್ಲಿದೆ. ಗೇರುಸೊಪ್ಪೆ-ಬಿಳಗಿ-ಕೆಳದಿ ನಾಯಕರ ಇತಿಹಾಸ ತುಸು ಪರಿಚಯವಾಗುತ್ತದೆ. ಸರ್. ಎಂ. ವಿಶ್ವೇಶ್ವರಯ್ಯನವರ ಕಾಲಘಟ್ಟ ಮತ್ತು ಅವರಿಗಿದ್ದ ಜೋಗ್ ಯೋಜನೆಯ ಕನಸಿನ ಅರಿವು ನಮಗಾಗುತ್ತದೆ. ವೃತ್ತಿಧರ್ಮ ಮತ್ತು ತಾತ್ವಿಕ ಬದ್ಧತೆಯುಳ್ಳಂತಹ ಅಧಿಕಾರಿಗಳನ್ನು ಇಲ್ಲಿ ಕಾಣಬಹುದು. ಮಲೆನಾಡಿನ ಪರಿಸರ, ಮಳೆಗಾಲ, ಸಂಸ್ಕೃತಿ ಪರಂಪರೆ ಹೀಗೆ ಸುಮಾರು ವಿಷಯಗಳನ್ನು ಪರಿಚಯ ಮಾಡಿಕೊಡುತ್ತದೆ "ಪುನರ್ವಸು" ಕಾದಂಬರಿ. ಕೊನೆಯ ಐವತ್ತು ಪುಟಗಳಂತೂ ನನ್ನಲ್ಲಿ ದುಃಖ ಉಮ್ಮಳಿಸಿ ಬರುವಂತೆ, ಕಣ್ಣೀರು ಧಾರೆಯಾಗಿ ಹರಿಯುವಂತೆ ಮಾಡಿದವು.
ಮುಳುಗಿದ್ದು ಭೂಮಿಯೋ, ಬದುಕೋ, ಸಂಸ್ಕೃತಿಯೋ? ಅದ್ಯಾವುದೂ ಅಲ್ಲ. ಮುಳುಗಿದ್ದು ಭರವಸೆ, ನಂಬಿಕೆ, ಶ್ರದ್ಧೆ.
ಪೂರ್ತಿ ಓದಿ ಮುಗಿಸುವಾಗ ಹಲವಾರು ಬಾರಿ ಕಣ್ಣು ಒದ್ದೆ ಆಗಿದ್ದವು. ನನ್ನ ಬೆಚ್ಚಗಿನ ಮನೆಯಲ್ಲಿ ಕೂತು, ಮನೆ ಗದ್ದೆ ತೋಟ ಎಲ್ಲವನ್ನೂ ಬಿಟ್ಟು ಹೋಗಬೇಕಾದವರ ಬಗ್ಗೆ ಓದಿದಾಗ ಬಹಳ ಬೇಜಾರ್ ಆಯ್ತು. ಜೋಗಕ್ಕೆ ಹಲವಾರು ಬಾರಿ ಹೋಗಿದ್ದೆ. ಆದರೆ ಈ ಪುಸ್ತಕ ಓದಿದ ನಂತರ ಇನ್ನೊಮ್ಮೆ ಜೋಗಕ್ಕೆ ಹೋದರೆ ಅದರ ಭಾವಗಳೇ ಬೇರೆ ಆಗತ್ತೆ. ಒಂದು dam ದೇಶದ ಪ್ರಗತಿಗೆ ಅಂತ ಹೇಳುವಾಗ, ಅದರ ಹಿಂದಿನ ಮುಳುಗಡೆಯ ನೋವು ಬೇಜಾರುಗಳನ್ನ ಈ ಪುಸ್ತಕ ಹೇಳತ್ತೆ.
' ಮುಳುಗಿದ್ದು ಭೂಮಿಯೋ, ಬದುಕೋ, ಸಂಸ್ಕೃತಿಯೋ, ಪರಮಪರೆಯೋ '?? ' ಮುಳುಗಿದ್ದು ಭರವಸೆ, ನಂಬಿಕೆ, ಶ್ರದ್ಧೆ ' ಈ ಸಾಲುಗಳನ್ನ ಓದಿದಾಗ ಏನೋ ಒಂದು ರೀತಿಯ ಭಾರದ ಅನುಭವ ಆಯ್ತು.
ದತ್ತಣ್ಣ, ತುಂಗಕ್ಕಯ್ಯ, ವಸುಧಾ, ಕೃಷ್ಣರಾಯರು ಎಂಬ ಮುಖ್ಯ ಪಾತ್ರಗಳು ಮಾತ್ರವಲ್ಲದೆ, ಮಾಣಿಚಿಕ್ಕಯ್ಯ, ದೋಣಿ ಗಣಪ, ಮುರಾರಿ ಭಟ್ಟ, ರಂಗನಾಥ್, ಶರಾವತಿ ಈ ಎಲ್ಲಾ ಪಾತ್ರಗಳು ತನ್ನದೇ ಆದ ಕಾರಣಕ್ಕೆ ತಲೆಯಲ್ಲಿ ಉಳಿಯತ್ತೆ.
ಈ ಪುಸ್ತಕ ಓದುವಾಗ, ಅನಾರೋಗ್ಯದ ಕಾರಣ ಊರಿನಿಂದ ಬೆಂಗಳೂರಿಗೆ ಬಂದು, ಇದ್ದಷ್ಟು ದಿನವೂ ಊರಿನ ತನ್ನ ಮನೆ, ದೇವರು, ಅಂಗಳ, ತೋಟ ಗದ್ದೆ, ದನಗಳ ಬಗ್ಗೆ ಯೋಚಿಸುತ್ತಾ ಬೆಂಗಳೂರಲ್ಲೆ ಪ್ರಾಣ ಬಿಟ್ಟ ನನ್ನ ದೊಡ್ಡ(ಅಜ್ಜಿ) ಬಹಳ ನೆನಪಾದರು.
ಕರ್ನಾಟಕದ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಜೋಗ ಜಲವಿದ್ಯುತ್ ಯೋಜನೆಯ ಫಲಾನುಭವಿಗಳು. ಆದರೆ ಈ ಮಹತ್ವಾಕಾಂಕ್ಷಿ ಯೋಜನೆಯ ಕನಸು ಸಾಕಾರವಾಗುವ ಹಾದಿಯಲ್ಲಿ ಎದುರಾದ ಸವಾಲುಗಳ ಬಗ್ಗೆ ನಮಗೆ ಗೊತ್ತಿರುವ ವಿಚಾರಗಳು ಅತ್ಯಲ್ಪ. ಇಡೀ ರಾಜ್ಯಕ್ಕೆ ಬೆಳಕು ನೀಡುವ ಮತ್ತು ದೇಶದ ಅಭಿವೃದ್ಧಿಯ ಪಥವನ್ನು ಬದಲಿಸಿದ ಈ ಯೋಜನೆಯಿಂದಾಗಿ ಮುಳುಗಡೆಯಾದ ಹಳ್ಳಿಗಳು,ಅರಣ್ಯ ಪ್ರದೇಶ,ನಾಶವಾದ ಕೃಷಿ ಭೂಮಿ,ಸ್ಥಳೀಯರು ಪಟ್ಟ ಬವಣೆ ಮತ್ತು ಯೋಜನೆಯ ಅನುಷ್ಠಾನಕ್ಕೆ ಹಗಲಿರುಳು ದುಡಿದ ಜನರ ಒಟ್ಟು ಕಥೆಯೇ ಈ ಕಾದಂಬರಿ..
ಮೊದಲನೆಯದಾಗಿ ತಮ್ಮ ಪಾಡಿಗೆ ತಾವಿದ್ದ ಶರಾವತಿ ನದಿ ದಂಡೆಯ ಗ್ರಾಮಗಳಲ್ಲಿ ಶರಾವತಿ ಜಲಾನಯನ ಪ್ರದೇಶದಲ್ಲಿ ವಿದ್ಯುತ್ ಸ್ಥಾವರ ಸ್ಥಾಪನೆಗೆ ಸರ್ಕಾರ ಸರ್ವೇ ಕಾರ್ಯ ಪ್ರಾರಂಭಿಸಿದಾಗ ನಿಧಾನಕ್ಕೆ ಮುಳುಗಡೆಯ ಭೀತಿ ಆವರಿಸಿಕೊಳ್ಳುತ್ತದೆ.ಹೀಗೆ ಪ್ರಾರಂಭವಾದ ಕಥೆಯು ಮಲೆನಾಡಿನ ಪ್ರಕೃತಿ ಸೌಂದರ್ಯ,ಮಲೆನಾಡಿನ ಜೀವ ವೈವಿಧ್ಯ ಮತ್ತು ಸಸ್ಯ ಸಂಪತ್ತು,ಅಲ್ಲಿನ ಜನರ ಜೀವನ ನಿಸರ್ಗದೊಂದಿಗೆ ಬೆಸೆದುಕೊಂಡ ರೀತಿ,ಜಾನುವಾರುಗಳ ಬಗ್ಗೆ ಇದ್ದ ಆದರ,ತಮ್ಮ ಸುತ್ತಲಿನ ಪರಿಸರದ ಕುರಿತಾದ ಅವರ ಆಗಾಧ ಜ್ಞಾನ,ಹಳ್ಳಿಯ ಜನರ ಮುಗ್ಧತೆ,ಪ್ರೀತಿ,ವಿಶ್ವಾಸ ನಂಬಿಕೆಗಳು ಮತ್ತು ಜೀವನ ಮೌಲ್ಯಗಳನ್ನು ಎಳೆ ಎಳೆಯಾಗಿ ಬಿಡಿಸಿಡುತ್ತದೆ. ಜೋಗ ಜಲಪಾತದ ನಾಲ್ಕು ಧಾರೆಗಳು ತಮ್ಮ ಹೆಸರನ್ನು ಪಡೆದ ಬಗೆ,ಅಲ್ಲಿನ ಕೆಲವು ಸ್ಥಳಗಳಿಗಿದ್ದ ಐತಿಹಾಸಿಕ ಹಿನ್ನೆಲೆ ಮತ್ತು ಪ್ರಾಮುಖ್ಯತೆಯ ಬಗ್ಗೆಯೂ ವಿವರಗಳಿವೆ.
ಇದು ಒಂದು ಕಡೆಯಾದರೆ ಶರಾವತಿ ಯೋಜನೆಯ ಕುರಿತು ಸರ್ ವಿಶ್ವೇಶ್ವರಯ್ಯ ಅವರು ಕಂಡ ಕನಸು,ಅದರ ಸಾಕಾರಕ್ಕಾಗಿ ಅವರು ದುಡಿದ ಬಗೆ,ಇಂತಹ ಬೃಹತ್ ಗಾತ್ರದ ಯೋಜನೆಯು ಕಾರ್ಯರೂಪಕ್ಕೆ ಬರುವಾಗ ಉಂಟಾದ ಅಡಚಣೆಗಳು,ದಟ್ಟ ಅಡವಿಯಲ್ಲಿ ಕಾರ್ಮಿಕರು ಮತ್ತು ಅಧಿಕಾರಿಗಳು ಜೀವ ಪಣಕ್ಕಿಟ್ಟು ಕೆಲಸ ನಿರ್ವಹಿಸಿದ ರೀತಿ,ನಮ್ಮ ದೇಶದಲ್ಲಿ ವಿದ್ಯುತ್ ಇಲ್ಲದೆ ಅಭಿವೃದ್ಧಿ ಕಾರ್ಯಗಳು ನಿಂತ ನೀರಿನಂತಾಗಿದ್ದು,ಎರಡನೇ ಮಹಾಯುದ್ಧ ಮತ್ತು ಬರಗಾಲದಿಂದ ಉಂಟಾದ ವಿಷಮ ಪರಿಸ್ಥಿತಿಯ ಮೂಲಕ ಕಥೆ ಬೆಳೆಯುತ್ತದೆ.
ಈ ನಡುವೆ ಶರಾವತಿಯ ಮೊದಲನೇ ಹಂತದ ಕಾಮಗಾರಿ ಮುಗಿದು ಲೋಕಾರ್ಪಣೆಯಾದ ಬಳಿಕ ಲಿಂಗನಮಕ್ಕಿ ಯೋಜನೆಗೆ ಸಂಬಂಧಿಸಿದಂತೆ ಸರ್ವೇ ಕಾರ್ಯ ಪ್ರಾರಂಭಿಸುವಂತೆ ಮುಖ್ಯಮಂತ್ರಿಗಳು ಆದೇಶಿಸುತ್ತಾರೆ. ಆಗಷ್ಟೇ ಪ್ರವರ್ಧಮಾನಕ್ಕೆ ಬಂದ ಹೊಸತಲೆಮಾರಿನ ಯುವಕರು ಈ ಯೋಜನೆಯಿಂದಾಗಿ ತಮಗೆ ದೊರಕುವ ಸೌಲಭ್ಯಗಳು ಮತ್ತು ಲಾಭದ ಲೆಕ್ಕಾಚಾರಕ್ಕೆ ತೊಡಗುತ್ತಾರೆ.ಮುಳುಗಡೆ ಪರಿಹಾರಕ್ಕಾಗಿ ಅವರುಗಳು ಪಟ್ಟ ಯಾತನೆ,ಅಧಿಕಾರಿ ವರ್ಗದಿಂದ ನಡೆದ ಭ್ರಷ್ಟಾಚಾರ,ಸ್ಥಳೀಯರ ಬಗ್ಗೆ ತೋರಿದ ಅಸಡ್ಡೆ,ಮುಗ್ಧವಾಗಿದ್ದ ಹಳ್ಳಿಗರಲ್ಲಿ ಮೌಲ್ಯಗಳು ಕುಸಿದು ಆಸೆ ದುರಾಸೆಗಳು ಬೇರೊಡೆದದ್ದು,ತಾವು ನಂಬಿದ ಜಮೀನನ್ನು ತೊರೆಯುವಾಗ ಅವರಲ್ಲಿ ಉಂಟಾದ ತುಮುಲಗಳನ್ನು ಮತ್ತು ಹೊಯ್ದಾಟಗಳು ಬಹಳ ಹೃದಯಸ್ಪರ್ಶಿಯಾಗಿ ಮೂಡಿವೆ.
ದೇಶದ ಅಭಿವೃದ್ಧಿ ಹಾಗೂ ನೆಲದ ಸಂಸ್ಕೃತಿ, ನಂಬಿಕೆಗಳು ಮತ್ತು ಪರಂಪರೆಯ ನಡುವೆ ನಡೆಯುವ ಘರ್ಷಣೆಗಳನ್ನು ಬಹಳ ರಸವತ್ತಾಗಿ ಚಿತ್ರಿಸಿದ ಅಪೂರ್ವ ಕೃತಿ.
ಜೋಗದ ಅಪ್ರತಿಮ ಸೌಂದರ್ಯದಂತೆ ಈ ಪುಸ್ತಕ ಕೂಡ ಅದ್ವಿತೀಯ.ಪುಸ್ತಕ ಓದಿದಷ್ಟು ಸಾಲದು, ಅದರ ಬಗ್ಗೆ ಬರೆದಷ್ಟು ಕಡಿಮೆಯೆನಿಸುತ್ತದೆ. ಮಲೆನಾಡಿನ ಗತ ವೈಭವ, ಅಲ್ಲಿಯ ಆತ್ಮೀಯತೆ, ಅದರಲ್ಲಿರುವ ಸರಳ ಸಜ್ಜನ ಪಾತ್ರಗಳು , ಎರಡು ವಿಭಿನ್ನ ಕಾಲಗಟ್ಟಗಳ ಆಲೋಚನ ಲಹರಿ, ಅದರಲ್ಲಿ ಆಗುವ ಬದಲಾವಣೆ ಹೀಗೆ ಹತ್ತು ಹಲವು ವಿಷಯಗಳಿವೆ. ಇತಿಹಾಸದ ಮೆಲುಕುಗಳಲ್ಲಿ ಕಾಣ ಸಿಗುವ ಅಪರೂಪದ ಮಾಹಿತಿಗಳು ಲೇಖಕರ ಅಗಾದ ಸಂಶೋದನೆಯ ಆಳವನ್ನು ನಿರೂಪಿಸುತ್ತದೆ. ಒಂದು ಅಣೆಕಟ್ಟು ಕಟ್ಟುವುದರ ಹಿಂದಿರುವ ಶ್ರಮ, ಅದರಿಂದ ಉಂಟಾಗುವ ಸಾಮಾಜಿಕ, ಆರ್ಥಿಕ, ಭೌಗೋಳಿಕ ಹಾಗೂ ಮಾನಸಿಕ ಸ್ಥಿತ್ಯಂತರದ ಸಮಗ್ರ ಚಿತ್ರಣ ಇದರಲ್ಲಿದೆ. ವಿದ್ಯುತ್ ನೀಡುವ ಬೆಳಕಿನ ಜೊತೆ ಬೆಳಕಿನಡಿಯ ಕತ್ತಲೆಯ ಸವಿವರಗಳು ಇದರಲ್ಲಿದೆ. ಇತಿಹಾಸ ಪ್ರೇರಿತ ಓದಲೇ ಬೇಕಾದ ಪುಸ್ತಕಗಳಲ್ಲಿ ಇದು ಒಂದು.
ಸೂರ್ಯ ಒಂದು ಕಡೆ ಭೂಮಿಯನ್ನು ಬೆಳಗಬೇಕಾದರೆ, ಮತ್ತೊಂದು ಭಾಗ ಕತ್ತಲಾಗಲೇಬೇಕು. ಹಾಗೆಯೇ ಆಧುನಿಕತೆಯ ಹೆಸರಿನಲ್ಲಿ ನೆಡೆಯುವ ನಗರಗಳ ನಿರ್ಮಾಣವು, ಅದುವರೆಗೆ ಆ ಪ್ರದೇಶಗಳಲ್ಲಿ ಬೇರೂರಿದ ಸಂಸ್ಕೃತಿಯನ್ನು ನಿಧಾನವಾಗಿ ತಿಂದುಹಾಕುತ್ತದೆ. ಈ ಸ್ಥಿತ್ಯಂತರದಲ್ಲಿ ಅಂತಹ ಸಂಸ್ಕೃತಿಗೆ ಹೊಂದಿಕೊಂಡ ಜೀವಗಳು ಅನುಭವಿಸುವ ನೋವು ದಾರುಣವಾದದ್ದು. ಅಂತಹದ್ದೇ ಒಂದು ಕಥಾವಸ್ತು ಇರುವ ಕಾದಂಬರಿ "ಪುನರ್ವಸು".
ಕಾಡುವ ಆದರ್ಶ ಪಾತ್ರಗಳು, ಹೊಸತನದ ಸೆಳೆತಕ್ಕೆ ಸಿಕ್ಕು ತಮ್ಮ ಅಸ್ಮಿತೆಯನ್ನು ಕಳೆದುಕೊಳ್ಳುವ ಯುವ ಸಮೂಹವನ್ನು ಬಿಂಬಿಸುವ ಪಾತ್ರಗಳು ಹಾಗೂ ಶರಾವತಿ ನದಿ ಕಾದಂಬರಿಯ ಜೀವಾಳ. ಒಟ್ಟಿನಲ್ಲಿ ಒಂದು ಚೆಂದದ ಓದು.
1917 ರಲ್ಲಿ ಆರಂಭಗೊಂಡ ಲೋಕಕ್ಕೆ ಬೆಳಕು ನೀಡುವ ಯೋಜನೆಯಾದ ಶರಾವತಿ ಜಲ ವಿದ್ಯುತ್ ಯೋಜನೆ ಅದೆಷ್ಟೋ ಹಳ್ಳಿ, ಸಾವಿರಾರು ಕುಟುಂಬಗಳ ಸುಡುವ ಜ್ವಾಲೆಯಾಗಿತ್ತು..
1949 ರಲ್ಲಿ ಲೋಕಾರ್ಪಣೆಗೊಂಡ ಶರಾವತಿಗೆ ಅಡ್ಡಲಾಗಿ ಕಟ್ಟಿದ ಹಿರೇಭಾಸ್ಕರ ಅಣೆಕಟ್ಟು ಜೋಗದ ಸಮೀಪದ ಅದೆಷ್ಟೋ ಹಳ್ಳಿಗಳ ಮುಳುಗಡೆಗೆ ಕಾರಣವಾಯಿತು. ಹುಟ್ಟೂರು ಬಿಡುವ ನಿರಾಶೆಯಿಂದ ಬೇರೆ ಜಾಗಕ್ಕೆ ವಲಸೆ ಹೋದವರೆಷ್ಟೋ, ಕೊರಗಿನಲ್ಲಿ ಸತ್ತವರೆಷ್ಟೋ. ಮನೆಗಳೆಲ್ಲ ಒಡೆದು ಚೂರಾಯಿತು, ಅಣ್ಣ-ತಮ್ಮಂದಿರೆಲ್ಲ ದಾಯಾದಿಗಳಾದರು ಪುನರ್ವಸತಿ ಹಾಗು ಬದಲಿ ಜಮೀನಿನ ಹಕ್ಕುದಾರರಾಗಲು.
ಸದಾ ಉತ್ಸಾಹದಿಂದ ಇರುವ ಹಾಗೇ ಬಂದವರನೆಲ್ಲ ತಮ್ಮ ಬಂಧುಗಳಂತೆ ನೋಡಿಕೊಳ್ಳುವ ಭಾರಂಗಿ ಮನೆಯ ದತ್ತಪ್ಪ ಹೆಗಡೆ ಹಾಗು ತುಂಗತ್ತೆ ಹಾಗು ಇನ್ನು ಹತ್ತು ಹಲವು ಪಾತ್ರಗಳು ಅಂತ್ಯದಲ್ಲಿ ಕಣ್ಣಂಚು ಒದ್ದೆ ಮಾಡುವುದಂತು ಖಂಡಿತ.. ಸದಾ ನಲಿವಿನಿಂದ ಇದ್ದ ಭಾರಂಗಿ ಮನೆ ಕೊನೆಗಾಲದಲ್ಲಿ ಬರಿದಾಗೊ ಸಂದರ್ಭ ಅಂತರಾಳವನ್ನು ಕೆದಕುತ್ತದೆ.. ದೋಣಿ ಗಣಪ, ಮುರಾರಿ ಭಟ್ಟ, ಶರಾವತಿ, ಕೃಷ್ಣರಾವ್, ವಸುಧಾ ಹೀಗೆ ಹಲವು ಪಾತ್ರಗಳು ಅದ್ಭುತವಾಗಿದೆ..
ನನ್ನ ನೆಚ್ಚಿನ ಪುಸ್ತಕಗಳ ಪಟ್ಟಿಯಲ್ಲಿ ಸೇರಿದ ಇನ್ನೊಂದು ಪುಸ್ತಕ.
ಪುಟ ಪುಟಕ್ಕೂ ಆತ್ಮೀಯತೆ ಅಥವಾ ಭಾವೋದ್ವೇಗಕ್ಕೆ ಒಳಪಡಿಸಿ ಹಲವು ಬಾರಿ ಕಣ್ಣೀರಿಡಿಸುವ ಒಂದು ಆತ್ಮೀಯ ನೈಜ ಘಟನೆ ಆಧಾರಿತ ಕಾದಂಬರಿ. ಯಾವುದೇ ಅಭಿವೃದ್ಧಿ ಹೆಸರಿನ ಸಣ್ಣ ಅಥವಾ ಬೃಹತ್ ಯೋಜನೆ ತನ್ನದೇ ಆದ ಆಹುತಿ ಪಡೆಯುವುದು ಸಹಜ ಎಂದು ಭಾವಿಸಿರುವ ನಮಗೆ ಇದು ಕೇವಲ ವ್ಯವಹಾರಿಕವಷ್ಟೇ ಅಲ್ಲ; ನಿಜವಾದ ಆಹುತಿಯಾಗುವುದು ಸ್ಥಳೀಕರ ಬದುಕು, ಸಂಸ್ಕೃತಿ, ಪರಂಪರೆ, ಭರವಸೆ ಎಂದು ಮನದಟ್ಟು ಮಾಡುವ ಕೃತಿ. ಇನ್ನೂ ಶರಾವತಿ - ಜೋಗದಂತ ಯೋಜನೆಗಳು ಸೃಷ್ಟಿಸುವ ಸ್ಥಿತ್ಯಂತರಗಳು ಅವುಗಳಷ್ಟೇ ಆಳ - ಅಗಲ 🙏🙏
ದತ್ತಪ್ಪ ಹೆಗಡೆ, ತುಂಗಕಯ್ಯ, ಶರಾವತಿ, ದೋಣಿ ಗಣಪ, ಮುರಾರಿ, ಭಾರಂಗಿ (ಊರಾದರು ಒಂದು ಪಾತ್ರವೇ ಏನಿಸುವಷ್ಟು) ನಮ್ಮನ್ನು ಕಾಡುವ ಪಾತ್ರಗಳು. ವಸುಧಾ - ಕೃಷ್ಣರಾವ್ ಗಟ್ಟಿ ಪಾತ್ರಗಳು. ಒಟ್ಟಿನಲ್ಲಿ ಒಂದು ಭಾವನಾತ್ಮಕ ಚೆಂದದ ಓದು 👌👌👌
ಬಿಡುಗಡೆಯಾದಾಗಲೇ ಈ ಪುಸ್ತಕವನ್ನು ಖರೀದಿಸಿದ್ದೆ. ಆದರೆ ಓದಲು ಪ್ರೇರಣೆಯಾಗಿರಲಿಲ್ಲ. ಓದಲು ಕುಳಿತಾಗ ಅದೆಷ್ಟು ತಡಮಾಡಿಬಿಟ್ಟೆ ಎಂದು ಪ್ರತೀ ಅಧ್ಯಾಯದಲ್ಲೂ ಅನಿಸಿದೆ. ಆದರೂ ಕೆಲವೊಂದು ಸಾರಿ ತಡಮಾಡಿದಷ್ಟು ಅದರ ರಸಾನುಭವ ಹೆಚ್ಚು. !
ಅದ್ಭುತವಾದ ಕಾದಂಬರಿ. ಮೂಲತಃ ಜೋಗದ ಜಿಲ್ಲೆಯವನೇ ಆಗಿದ್ದರಿಂದ ಕಾದಂಬರಿ ಓದಿದ ಮೇಲೆ ಇನ್ನೂ ಭಾವೋದ್ವೇಗಕ್ಕೊಳಗಾಗಿದ್ದೇನೆ. ಇಂತಹಾ ಅಪರೂಪದ ಸುಂದರವಾದ ಚಿತ್ರಣವನ್ನು ಕಟ್ಟಿಕೊಟ್ಟ ಲೇಖಕರಿಗೊಂದು ದೀರ್ಘದಂಡ ನಮಸ್ಕಾರ.
ಕಾದಂಬರಿಯು ಜೋಗದ ವಿದ್ಯುತ್ ತಯಾರಿಕೆಯ ಪ್ರಾಜೆಕ್ಟ್ /ಅಣೆಕಟ್ಟು ಶುರುವಿನಿಂದಿಡಿದು, ಅಣೆಕಟ್ಟಿನಿಂದ ಸುತ್ತಮುತ್ತಲಿನ ಪ್ರದೇಶಗಳು, ಪರಿಸರದ ಮುಳುಗಡೆಯಾಗುವವರೆಗಿನ ಪ್ರತ್ಯಕ್ಷ ಸಾಕ್ಷಚಿತ್ರದಂತಿರುವ ವಿವರಣೆಗಳು, ಸಂದರ್ಭಗಳನ್ನು ಒಳಗೊಂಡಿದೆ. ಇಲ್ಲಿನ ಪ್ರತಿಯೊಂದು ವಿಷಯಗಳು ಇತಿಹಾಸ, ಕಾಲ್ಪನಿಕತೆಗೆ ಅವಕಾಶವಿದ್ದ ಹಾಗೆ ಎಲ್ಲೂ ಕಾಣಲಿಲ್ಲ.
ಅದೆಷ್ಟೋ ಸಾರಿ ಜೋಗಕ್ಕೆ ಭೇಟಿಕೊಟ್ಟಿರುವೆ. ಎಂದೂ ಯೋಚನೆಗೆ ಬಾರದಂತಹ, ಪ್ರಶ್ನೆ ಹುಟ್ಟಿಸಿರದಂತಃ ವಿಷಯಗಳ, ಉತ್ತರಗಳೂ ಈ ಪುಸ್ತಕದಲ್ಲಿವೆ. ಅದೇನೋ ಓದಿ ಮುಗಿಸಿದಮೇಲೆ ಜೋಗಕ್ಕೆ ಭೇಟಿ ಕೊಟ್ಟು ಎಲ್ಲವನ್ನು ಮತ್ತೆ ಸುದೀರ್ಘವಾಗಿ ಉಸಿರೆಳೆದುಕೊಂಡು ನೋಡುವಂತಃ ಆಸೆ ಚಿಗುರೊಡೆದಿದೆ.
ಅದೆಷ್ಟು ಸುಸಜ್ಜಿತವಾದ ಯೋಜನೆ, ಅದರ ಅಡಿಪಾಯ, ತಾಂತ್ರಿಕತೆ, ನಾಡಿಗೆ ಹೆಸರಾದ ಅಭಿಯಂತರರ ಸಮರ್ಪಣಾ ಭಾವ ಜೊತೆ ಜೊತೆಗೆ ಸಾಗುವ ಕಷ್ಟ ನಷ್ಟಗಳು, ತ್ಯಾಗಗಳು, ಭಾವನಾತ್ಮಕವಾದ ವಿಷಯಗಳು, ಪರಿಸರ, ಶರಾವತಿಯ ಜೊತೆಗೆ ಬೆಸೆದುಕೊಂಡಿರುವ ಜನ ಜೀವನ, ಸಂಸ್ಕೃತಿ, ಪ್ರೀತಿ, ವಾತ್ಸಲ್ಯ, ಮಮತೆ, ಆಧರಗಳು, ಹಬ್ಬ ಹರಿದಿನ ಆಚರಣೆಗಳು. ಪ್ರತಿಯೊಂದು ವಿಷಯಗಳು ಆಸಕ್ತಿದಾಯಕ ಮತ್ತು ಪ್ರೇರಣೆ.
ಒಂದೊಂದು ಸಾರಿ ನಾವೂ ಕಾದಂಬರಿಯಲ್ಲಿನ ಪಾತ್ರಗಳಾಗಬಾರದಿತ್ತೇ ? ಜೋಗ, ಹೊನ್ನೇಮರಡು , ಹಿರೇಭಾಸ್ಕರ, ತಲಕಳಲೆ, ಭಾರಂಗಿಯ ವಿಷಯಗಳು ಬಂದಾಗ, ಅಲ್ಲೆಲ್ಲೂ ನಾನೂ ಸಹಾ ಪ್ರತ್ಯಕ್ಷದರ್ಶಿ ಯಾಗಿದ್ದೇನೆ ಎಂದು ಭಾಸವಾಗುತ್ತಿತ್ತು.
ಸಂಪೂರ್ಣವಾಗಿ ಓದಿ ಮುಗಿಸಿದ ಮೇಲೆ ಅದೇನೋ ಕಳೆದುಕೊಂಡಿರುವ ಭಾವನೆ, ಅದೇನೋ ಸಾಧಿಸಿರುವ ಉತ್ಸಾಹ. ಭಾರಂಗಿಯನ್ನೂ ಸೇರಿ ಅದೆಷ್ಟೋ ಹಳ್ಳಿ ಪ್ರದೇಶಗಳ ದುರಾದೃಷ್ಟವೋ ಅಥವಾ ಶರಾವತಿಯಿಂದ ನಾಡಿನ ಜನರಿಗಾದ ಅದೃಷ್ಟವೋ ಗೊತ್ತಿಲ್ಲ. ಯಾವುದು ಸರಿ, ಯಾವುದು ತಪ್ಪು ? ಇಲ್ಲಿ ಎಲ್ಲವೂ ಸರಿ ಮತ್ತು ಎಲ್ಲವೂ ತಪ್ಪು.
ಹೆಚ್ಚು ಕಾದಂಬರಿಯಲ್ಲಿನ ವಿಷಯಗಳನ್ನು ಬಹಿರಂಗಪಡಿಸಲು ಇಚ್ಚಿಸುವುದಿಲ್ಲ. ಸ್ವತಃ ನೀವೇ ಓದಿಕೊಳ್ಳಿ. ಖಂಡಿತಾ ನಿರಾಸೆಯಾಗುವುದಿಲ್ಲ.
We see sharaavati as the source of electricity to the major parts of karnataka. Although its an engineering marvel, Its built on sacrifices of so many malenaadu folks. The author through the characters of Dattanna Hegade, Tungakkayya, Sharavaati, has showed us how important and strong are their moral values, samskruti and paddhati. Through the characters like Kadambi and Krishna Rao, he has narrated the values of Kartavyanishthe.
"ನಮ್ಮಲ್ಲಿ ರಸ್ತೆಗಳಿರಲಿಲ್ಲ, ನಿಜ. ಆದರೆ ದಾರಿಗಳಿದ್ವು. ನಮ್ಮಲ್ಲಿ ಶಾಲೆಗಳಿರಲಿಲ್ಲ, ಆದರೆ ಶಿಕ್ಷಣ ಇತ್ತು. ನಮ್ಮಲ್ಲಿ ಆಸ್ಪತ್ರೆ ಇರಲಿಲ್ಲ, ಆದರೆ ವೈದ್ಯೋಪಚಾರ ಇತ್ತು. ನಮ್ಮಲ್ಲಿ ಸೇತುವೆ ಇರಲಿಲ್ಲ, ಆದ್ರೆ ಸಂಪರ್ಕ ಇತ್ತು. ವಿದ್ಯುತ್ ಇರಲಿಲ್ಲ, ಆದ್ರೆ ಬೆಳಕಿತ್ತು. ಸೌಲಭ್ಯಗಳು ಇರಲಿಲ್ಲ, ಆದ್ರೆ ನೆಮ್ಮದಿಯಿತ್ತು. ನಮ್ಮಲ್ಲಿ ದೋಣಿಯಿತ್ತು. ದೋಣಿ ಗಣಪನಂತಹ ಗುಣವಂತರು ಇದ್ದರು. ಈಗ ನಿಮ್ಮಿಂದಾಗಿ ದೋಣಿಯೂ ಇಲ್ಲ ಗಣಪನೂ ಇಲ್ಲ". ಎಂಬ ಈ ವಾಕ್ಯಗಳು ಇಡೀ ಕೃತಿಯ ಸಾರವನ್ನು ಹೊಂದಿದೆ ಎನ್ನಬಹುದು.
'ದೀಪದ ಬುಡದಲ್ಲಿ ಎಂದಿಗೂ ಕತ್ತಲು' ಎಂಬ ಮಾತಿನ ನಿಜಾರ್ಥವನ್ನು ಬಿಂಬಿಸುತ್ತದೆ ಈ ಕೃತಿ. ಇಡೀ ನಾಡನ್ನು ಬೆಳಗಲು ಕಾರಣವಾದ ಜೋಗ ತನ್ನ ಒಡಲಿನಲ್ಲಿರುವ ಅನೇಕ ಸ್ಥಳಗಳ, ಪರಿಸರ, ಜನರ ಬಾಳನ್ನು ಕತ್ತಲಾಗಲೂ ಕಾರಣವಾಗುತ್ತದೆ.
ಮಲೆನಾಡಿನ ದಟ್ಟ ಪರಿಸರ, ಅಲ್ಲಿನ ಜನರ ಆಚಾರ-ವಿಚಾರ, ಅವರೊಳಗಿನ ಅನ್ಯೋನ್ಯತೆ ಮತ್ತು ಭವ್ಯ ಸಂಸ್ಕೃತಿಯ ಪ್ರತೀಕದ ಭಾರಂಗಿಯ ಮುಳುಗಡೆಯನ್ನು ಚಿತ್ರಿಸುತ್ತಲೇ, ಇಡಿ ನಾಡಿನ ಭವಿಷ್ಯವನ್ನೇ ಬೆಳಗುವ ಜೋಗದ ವಿದ್ಯುತ್ ಯೋಜನೆಯನ್ನು ಪ್ರತಿ ವಿವರಗಳೊಂದಿಗೆ ಕಟ್ಟಿಕೊಟ್ಟಿರುವುದು ಅನನ್ಯ. ಅದನ್ನು ಓದಿಯೇ ಸವಿಯಬೇಕು.
ಕೃತಿಯ ಬಗ್ಗೆ ಹೆಚ್ಚು ಹೇಳಲಾಗುತ್ತಿಲ್ಲ. ಹೇಳಬಾರದು ಕೂಡ. ಓದುತ್ತ ಹೋದಂತೆ ಕಣ್ಣಂಚು ಒದ್ದೆಯಾಗುತ್ತದೆ. ಇಲ್ಲಿರುವ ಎಷ್ಟೋ ವಿಷಯಗಳು ಸಂಗ್ರಹಯೋಗ್ಯ ಮತ್ತು ಮನನೀಯ ಕೂಡ.
ಕೃತಿಯು ಓದುಗನನ್ನು ಆವರಿಸುವುದು ಇಲ್ಲಿರುವ ಉತ್ಕೃಷ್ಟ ಭಾಷೆ, ಅಡಕವಾಗಿರುವ ವಿಷಯಗಳು ಮತ್ತು ನಿರೂಪಣೆ ಶೈಲಿಯಿಂದ.
ವಿದ್ಯುತ್ ಶಕ್ತಿಯನ್ನು ಯತೆಚ್ಛವಾಗಿ ಉಪಯಯೋಗಿಸುವ ನಾವು ಎಂದಿಗೂ ಅದರ ಮೂಲವನ್ನು ತಿಳಿಯಲಿಲ್ಲ. ಮಹತ್ಮಾ ಗಾಂಧಿ ವಿದ್ಯುತ್ ಸ್ಥಾವರ ಇಂದು ದೇಶದ ಅತೀ ಅಗ್ಗದ ವಿದ್ಯುತ್ ಉತ್ಪಾದನಾ ಘಟಕ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಆದರೆ ಸಾಗರಕ್ಕೆ ಹೋಗಿ ಒಂದು ಹತ್ತು ಜನರನ್ನು ಮಾತಾಡಿಸಿದರೆ ಕನಿಷ್ಠ ಪಕ್ಷ ಒಂದಿಬ್ಬರಾದರೂ ನಾವು ಮುಳುಗಡೆಯಿಂದ ಬಂದವರು ಎನ್ನುತ್ತಾರೆ. ಅಣಿಕಟ್ಟು ಕಟ್ಟಿದ ದಶಕಗಳು ಕಳೆದ ನಂತರವೂ "ಮುಳುಗಡೆ" ಎನ್ನುವುದು ಜನಮಾನಸದಲ್ಲಿ ನೆಲೆಯಗಿದೆ ಎಂದರೆ ಇದರ ಕರಾಳತೆಯನ್ನು ಊಹಿಸಬಹುದು. ಆದರೆ ಈ ಮಗ್ಗುಲು ನಮಗೆ ಎಲ್ಲೂ ಕಾಣ ಸಿಗುವುದಿಲ್ಲ. ಆ ನಿಟ್ಟಿನಲ್ಲಿ ಪುನರ್ವಸು ಒಂದು ಮುಖ್ಯವಾದ ಕಾದಂಬರಿ. ಇದು ಶರಾವತಿ ಪ್ರೊಜೆಕ್ಟಿನ ಹಿಂದಿನ ಕಾಲದಲ್ಲಿ ಸಾಗರ ಸೀಮೆಯ ಸಾಮಾನ್ಯ ಜನರ ಜೀವನವನ್ನು ತೆರೆದಿಡುತ್ತದೆ. ಶರಾವತಿ ಕಣಿವೆಯ ಕಾಡು, ಮಳೆ, ಜನ ಸಂಪರ್ಕ, ಒಡನಾಟ, ಹಬ್ಬಗಳು ಎಲ್ಲವನ್ನೂ ಹೇಳುತ್ತದೆ. ದೀಪಾವಳಿ ಹಬ್ಬವು ವಿಶೇಷವಾಗಿ ಗಮನ ಸೆಳೆಯುತ್ತದೆ.
ಪಾತ್ರಗಳಲ್ಲಿ ತುಂಗಕ್ಕಯ್ಯ ಎಲ್ಲರಿಗಿಂತ ಹೆಚ್ಚು. ಮನಸ್ಸಿನಲ್ಲಿ ಉಳಿಯುತ್ತಾಳೆ. ವಸುಧಾ, ಶರಾವತಿ, ದತ್ತಪ್ಪ ಹೆಗಡೆ, ಗಣೇಶ ಹೆಗಡೆ, ದೋಣಿ ಗಣಪ, ಕೃಷ್ಣ ರಾವ್ ಪಾತ್ರಗಳು ಚೆನ್ನಾಗಿ ಮೂಡಿ ಬಂದಿವೆ.
ಈ ಕಾದಂಬರಿಯ ವಿಶ್ಲೇಷಣೆ ಮಾಡುವ ಕೆಲಸ ಸ್ವಲ್ಪ ಕಷ್ಟಕರ. ಆದಿಯಲ್ಲಿ ನಿಧಾನವಾಗಿ ಸಾಗುವ ಕಥೆ ಅಂತ್ಯದಲ್ಲಿ ತುಂಬಾ ನೋವಿನಿಂದ ಅಂತ್ಯಗೊಳ್ಳುತ್ತದೆ. ಮನುಷ್ಯನಿಗೆ ಇಷ್ಟೊಂದು ಧಾವಂತ ಅವಶ್ಯಕನ ಎಂಬ ಗೋಜಳು ಕಾಡುತ್ತದೆ. ನಾವು ಯಾವ ಲಿಂಗನಮಕ್ಕಿ ಅಣೆಕಟ್ಟು ವಿಶ್ವೇಶ್ವರಯ್ಯ ನವರ ಚಾಣಾಕ್ಷತೆ ಗೆ ಹಿಡಿದ ಕನ್ನಡಿ ಅಂತ ಅನ್ಕೊಂಡು ಇದ್ವೋ ಅದು ಅಲ್ಲಿನ ಮಲೆನಾಡು ಸೀಮೆಯ ಬದುಕೇ ಮುಳುಗಿಸಿದ್ದು ಸುಳ್ಳಲ್ಲ. ಹಾಗೆ ನೋಡಿದರೆ ವಾರಾಹಿ ನೀರಾವರಿ ಯೋಜನೆಯು ಮಲೆನಾಡಿನ ಎಷ್ಟೋ ಕುಟುಂಬಗಳು ಬೀದಿಗೆ ಬಂದ ನಿದರ್ಶನ ನಮ್ಮ ಮುಂದೆ ಇದೆ. ಕಾದಂಬರಿಯಲ್ಲಿ ಹೇಳಿದ ಹಾಗೆ ಮನುಷ್ಯನ ಯೋಜನೆಗಳು ದೊಡ್ಡದಾಗಿದ್ದು ಯೋಚನೆಗಳು ಸಣ್ಣದಾಗಿದೆ. ಜನರ ಬಯಕೆಗಳ ಈಡೇರಿಕೆಗೆ ಯೋಜನೆ. ಅದರಿಂದ ಮತ್ತೆ ಬಯಕೆ, ಆ ಬಯಕೆಗೆ ಮತ್ತೆ ಯೋಜನೆ.
ಮೊದಲು ಕಾವೇರಿ, ನಂತರ ಶರಾವತಿ , ತುಂಗಾ, ಭದ್ರ, ವಾರಾಹಿ ಹೀಗೆ ಯೋಜನೆಗಳ ಸರಮಾಲೆ. ಮನುಷ್ಯನ ಆಸೆಗೆ, ಭೋಗಕ್ಕೆ ಕೊನೆಯಿಲ್ಲ. ಆ ಭೋಗಕ್ಕೆ ಪರಿಸರ, ಜನರು, ಬದುಕು, ಆಚರಣೆ ಎಲ್ಲಾ ಬಲಿಯಾಗುತ್ತದೆ.
ಮಾನವನಿಗಿಂತ ಪಶುಗಳು ಮೇಲು ಎಂಬ ಅರ್ಥಗರ್ಭಿತವಾದ ಮುಕ್ತಾಯ ಈ ಕಥೆಗೆ ಲಭಿಸಿದೆ. ಲೇಖಕರಾದ ಗಜಾನನ ಶರ್ಮಾ ರವರಿಗೆ ಧನ್ಯವಾದಗಳು 🙏
ಪುನರ್ವಸು ಮುಳುಗಿದ್ದು ಬಾರಂಗಿಯೇ?.. ಭರವಸೆಯೇ? ಬದುಕೆ? ನಿಜವಾಗಿಯೂ ಮುಳುಗಿದ್ದು ಭರವಸೆ… ನಂಬಿಕೆ.. ಶ್ರದ್ಧೆ.. ಜೊತೆಗೆ ಕಾದಂಬರಿಯಲ್ಲಿ ನಾನು. ಬಾರಂಗಿ ದತ್ತಪ್ಪ ಹೆಗಡೆಯ ಮನೆಯಂಗಳದಿಂದ ಶುರು ಆಗುವ ಕಥೆ, ನಿಧಾನಕ್ಕೆ ಶರಾವತಿ ನದಿ ದಂಡೆಯ ಮೇಲೆ ಇರುವ ಪ್ರಕೃತಿ, ಪ್ರಕೃತಿಯನ್ನು ಅವಲಂಬಿಸಿ ಬೆಳೆದು ಬಂದ ಮಾನವ ಜನಾಂಗ, ಅದರ ಸಂಸ್ಕೃತಿ ಆಚಾರ-ವಿಚಾರ ಜೀವನಶೈಲಿ ಎಲ್ಲವನ್ನು ವಿವರಿಸುತ್ತಾ ಕಥೆ ಸಾಗುತ್ತದೆ. ಜಗತ್ಪ್ರಸಿದ್ಧ ಜೋಗ ಕಥೆಯ ತಿರುವಿನ ಕೇಂದ್ರಬಿಂದು 1916ರಲ್ಲಿ ವಿಶ್ವೇಶ್ವರಯ್ಯನವರು ಜೋಗವನ್ನು ನೋಡಲು ಬಂದವರು ವ್ಯರ್ಥವಾಗಿ ಹರಿದು ಹೋಗುತ್ತಿರುವ ನೀರನ್ನು ನೋಡಿ ಇದನ್ನು ಹಿಡಿದು ನಿಲ್ಲಿಸಿದರೆ ದೇಶದ ಪ್ರಗತಿಯ ನಕ್ಷೆಯನ್ನು ಬದಲಾಯಿಸಬಹುದು ಎನ್ನುವ ಕನಸನ್ನು ಕಾಣುತ್ತಾರೆ. ಈ ಕನಸೇ ಪುನರ್ವಸು ಕಾದಂಬರಿಯ ಆರಂಭ. ಒಂದು ಕಡೆ ಕನಸು... ಇನ್ನೊಂದು ಕಡೆ ಮುಳುಗಡೆ... ದೇಶದ ಪ್ರಗತಿಗೋಸ್ಕರ ಬಂದಂತ ಪ್ರತಿಯೊಂದು ಯೋಜನೆಗಳ ಇಬ್ಬಂದಿತನವನ್ನು ಈ ಕಾದಂಬರಿ ವಿವರಿಸುತ್ತದೆ. ದೇಶಕ್ಕೆ ಪ್ರಗತಿಪರ ಯೋಜನೆಗಳು ಬೇಡವೇ? ದೇಶದ ಪ್ರಗತಿಗಾಗಿ ಸಂಸ್ಕೃತಿಯ ನಾಶ ಸರಿಯೇ? ವಿಶ್ವೇಶ್ವರಯ್ಯ, ಕಡಾಂಬಿ, ಕೃಷ್ಣರಾವ್ ಮುಂತಾದ ದಕ್ಷ ಅಧಿಕಾರಿಗಳ ಅವ್ಯಾಹತ ಪ್ರಯತ್ನದಿಂದ ದೇಶದ ಮಹತ್ತರ ಯೋಜನೆಯೇನೋ ಸಹಕಾರಗೊಂಡಿತು. ಆದರೆ ಬಾರಂಗಿಯ ದತ್ತಪ್ಪ ಹೆಗಡೆ, ಮುರಾರಿ, ತುಂಗಕ್ಕ, ಮಾಣಿ ಚಿಕ್ಕಯ್ಯ ,ಶರಾವತಿ ಅವರ ಜೀವನ ಅವರ ಮುಳುಗಡೆ ಯಲ್ಲಿ ಜಲಸಮಾಧಿ ಕಂಡವು. ಲೇಖಕರು ಅಂದಿನ ಕಾಲಘಟ್ಟವನ್ನು ಸವಿಸ್ತಾರವಾಗಿ ದೃಶ್ಯರೂಪದಲ್ಲಿ ಹೆಣೆದಿದ್ದಾರೆ. ಒಂದು ಕಡೆ ಯೋಜನೆಗಳ ಸವಿಸ್ತಾರ ರೂಪರೇಷೆಗಳ ಮಾಹಿತಿಯನ್ನು ನೀಡುತ್ತಾರೆ. ಜೊತೆಗೆ ಒಂದು ಯೋಜನೆಯ ಹಿಂದೆ ಬರುವ ಎಲ್ಲಾ ಸಮಸ್ಯೆಗಳ ಚಿತ್ರಣ ಅದನ್ನು ಸಾಕಾರಗೊಳಿಸಲು ಬೇಕಾಗುವ ನಿಸ್ವಾರ್ಥ ಸೇವೆಯನ್ನು ವಿವರಿಸುತ್ತಾ, ಅದೇ ಯೋಜನೆ ಒಂದು ಪರಿಸರವನ್ನು, ಅದನ್ನು ನಂಬಿದ ಜನಾಂಗವನ್ನು , ಅವರ ಜೊತೆಗೆ ಬೆಳೆದ ಸಂಸ್ಕೃತಿಯನ್ನು ಹೇಗೆ ನಿರ್ನಾಮ ಮಾಡಿತು ಎನ್ನುವುದರ ಬಗ್ಗೆಯೂ ಹೇಳಿದ್ದಾರೆ. ಎರಡು ವಿವರಗಳನ್ನು ಸೇರಿಸಿ ಸೊಗಸಾಗಿ ಕಥೆ ಹೆಣೆದಿದ್ದಾರೆ. ಲೇಖಕರು ಶರಾವತಿ ಯೋಜನೆಯ ಬೆಂಕಿಯಲ್ಲಿ ಬೆಂದು ಬಸವಳಿದ ಕುಟುಂಬದಿಂದ ಬಂದವರು , ಅದರ ಕಷ್ಟ-ಸುಖವನ್ನು ಸ್ವತಹ ಅನುಭವಿಸಿದವರು. ಮುಳುಗಡೆಯ ಸಹಸ್ರಾರು ಕತೆಗಳನ್ನು ಕಣ್ಣಾರೆ ಕಂಡವರು ಕೇಳಿದವರು. ಕೊನೆಗೆ ಅದೇ ಯೋಜನೆಯಲ್ಲಿ ಬರುವ ವಿದ್ಯುತ್ ಇಲಾಖೆಯಲ್ಲಿ ವೃತ್ತಿ ಜೀವನವನ್ನು ಶುರುಮಾಡಿ ಬದುಕಿಗೆ ಅನ್ನ ಕಂಡವರು. ಇಂಥ ಬೃಹತ್ ಪ್ರಗತಿಪರ ಯೋಜನೆಗಳ ಕಾದಂಬರಿಯ ಅಂತರಾಳ… ಯೋಜನೆಯ ಮಹತ್ವ ಒಂದು ಕಡೆಯಾದರೆ ಅದರಿಂದ ಆಗುವ ಅನಾಹುತವನ್ನು ವಿವರಿಸುವುದೇ ಪುನರ್ವಸು
* ವಿದ್ಯುತ್ ಶಕ್ತಿ ಎಂಬುದು ಬದಾಲಾಗುತ್ತಿರುವ ಜಗತ್ತಿನ ಅವಶ್ಯಕತೆಯಾದರೆ ಅದರ ಉತ್ಪಾದನೆಗಾಗಿ ನದಿಗೆ ಅಡ್ಡಲಾಗಿ ಕಟ್ಟುವ ಬೃಹದಾಕಾರವಾದ ಜಲಾಶಯಗಳು ಅದೆಷ್ಟು ಅಮಾಯಕ ಮುಗ್ಧ ಹಳ್ಳಿಗಳನ್ನು ಜೀವಂತ ಸಮಾಧಿಯಾಗಿ ಮಾಡುತ್ತದೆ ಎನ್ನುವುದನ್ನು ಬಹಳ ಮನಸ್ಸಿಗೆ ನಾಟುವಂತೆ ಲೇಖಕರು ಹೇಳಿದ್ದಾರೆ.
* ಲೇಖಕರು ಮೂಲತಃ ಉತ್ತರ ಕನ್ನಡದ ಹವ್ಯಕ ಬ್ರಾಹ್ಮಣರಾದ ಕಾರಣ ಹವ್ಯಕರ ಜೀವನಕ್ರಮ, ಭಾಷೆ, ಅತಿಥಿ ಸತ್ಕಾರಗಳನ್ನು ಬಹಳ ಸುಂದರವಾಗಿ ತೋರಿಸಿದ್ದಾರೆ. ಕಾದಂಬರಿಯ ಶೇಕಡ ೧೦ ರಷ್ಟು ಭಾಗ ಹವ್ಯಕ ಭಾಷೆಯನ್ನು ಬಳಸಿದ್ದು ಪಾತ್ರಗಳನ್ನು ಮತ್ತಷ್ಟು ಆಪ್ತವಾಗಿಸುತ್ತದೆ.
* ಈಗಲೂ ಕೆಲವು ಉತ್ತರ ಕನ್ನಡದ ಹವ್ಯಕರ ಮನೆಗಳಲ್ಲಿ ನಿಶ್ಕಲ್ಮಶ ಪ್ರೀತಿ, ಗೌರವ, ಸಂಸ್ಕಾರವಂತರಾಗಿ ಬದುಕುತ್ತಿದ್ದಾರೆ. ನನ್ನ ಗೆಳೆಯರ ಮನೆಗೆ ಹೋದಾಗ ಅವರು 'ಅತಿಥಿ ದೇವೋ ಭವ' ಎನ್ನುವುದನ್ನು ಅಕ್ಷರಶಃ ಪಾಲಿಸುತ್ತಾರೆ, ಅದರ ಅನುಭವವೂ ಆಗಿತ್ತು. ಜಗತ್ತು ತಾ ಮುಂದು ನಾ ಮುಂದು ಎಂದು ಓಡುತ್ತಿರುವಾಗ, ತೋಟದ ಮಧ್ಯದಲ್ಲೊಂದು ಮನೆಯೊಳಗಿನ ಸಂಸಾರ ಹವ್ಯಕರ ಸೊಗಡು, ಸಂಸ್ಕಾರವನ್ನು ಪಾಲಿಸಿ, ಪೋಶಿಸಿಕೊಂಡು ಜೀವನ ಸವೆಸುತ್ತಿದ್ದಾರೆ ಎನ್ನುವುದೇ ಸಂತೋಷ.
* ಪುನರ್ವಸು ಎಂಬ ಸುಂದರ ಶೀರ್ಷಿಕೆಯ ಕಾರಣ ತಿಳಿಯಲು, ಕಾದಂಬರಿಯ ಆರ್ಧ ದಾರಿ ತಲುಪಬೇಕು. ಇದೊಂದು ಕಾಲ್ಪನಿಕ ಕಾದಂಬರಿಯಾಗಿ ಕಾಣುತ್ತಿಲ್ಲ, ಕಾದಂಬರಿಯುದ್ದಕದಕ್ಕೂ ಲಿಂಗನಮಕ್ಕಿ ಜಲಾಶಯದ ನಿರ್ಮಾಣದ ಹಂತಗಳನ್ನು ಸವಿವರವಾಗಿ ಹೇಳುತ್ತಾ ಕ್ರಮವಾಗಿ ಹಳ್ಳಿಯವರ ಬವಣೆಗಳು ಹೆಚ್ಚುತ್ತಾ ಹೋಗಿ ಕೊನೆಗೊಂದು ದಿನ ಭಾರಂಗಿಯಂತಹ ನೂರಾರು ಹಳ್ಳಿಗಳು ಜಲಸಮಾಧಿಯಾಗುವಲ್ಲಿಗೆ ದತ್ತಪ್ಪ ಹೆಗಡೆ, ತುಂ���ಕ್ಕ, ದೋಣಿಗಣಪ, ಮಾಣಿಚಿಕ್ಕಯ್ಯ, ಶರಾವತಿ, ವಸುಧಾ, ಮಂಗಳಗೌರಿಗಳಂತಹ ಪಾತ್ರಗಳಿಗಾಗಿ ಓದುಗ ಮರುಗುವಂತೆ ಮಾಡುತ್ತದೆ.
* ಮೇಕೆದಾಟು, ಎತ್ತಿನಹೊಳೆಯಂತಹ ಅಣೆಕಟ್ಟುಗಳು, ಜಲಾಶಯಗಳಿಗಾಗಿ ಜನ ಮುಗಿಬೀಳುವ ಮೊದಲು ಇಂತಹ ಪುಸ್ತಕಗಳನ್ನು ಓದಿ ಅಲ್ಲಿಯ ಮುಳುಗಡೆಯಾಗಲಿರುವ ಹಳ್ಳಿ ಜನರ ಸಂವೇದನೆಗಳನ್ನು ಅರ್ಥೈಸಿಕೊಂಡರೆ, ಮೇಕೆದಾಟುವಿನಂತಹ ಅಣೆಕಟ್ಟಿಗಾಗಿ ಹೋರಾಟಕ್ಕೆ ಬಲವಿಲ್ಲದೆ ಒಂದಷ್ಟು ಜನರ ಜೀವನ ಛಿದ್ರವಾಗುವುದನ್ನು ತಡೆಯಬಹುದು.
ಜೋಗ್ ( ಶರಾವತಿ) ವಿದ್ಯುತ್ ಯೋಜನೆ ಸರ್ ಎಂ ವಿಶ್ವೇಶ್ವರಯ್ಯರವರ ಕನಸಾಗಿತ್ತು , ಅದೂ ನನಸಾಯಿತು ಕೂಡ. ಆದರೆ ಇದರಿಂದ ಬೆಳಕು ಮತ್ತು ಕತ್ತಲು ಒಟ್ಟಿಗೇ ಅವತರಿಸಿತು. ಬೆಳಕು ಮತ್ತು ಕತ್ತಲಿನ ಅನುಭವವೇ ಈ ಪುನರ್ವಸು ಕಾದಂಬರಿ!
ಈ ವಿದ್ಯುತ್ ಯೋಜನೆಯಿಂದ ಪ್ರಕೃತಿ ಮೇಲಾದ ದುಷ್ಪರಿಣಾಮ ಒಂದೆಡೆಯಾದರೆ, ಇನ್ನೊಂದೆಡೆ ಹಳ್ಳಿಗರು ಪಟ್ಟ ಕಷ್ಟ, ನೋವು, ಬಡತನ, ಹಸಿವು ಇತ್ಯಾದಿ ಬಗ್ಗೆ ಓದಿದಾಗ ಕಲ್ಲು ಹೃದಯ ಕೂಡ ಕರಗದೆ ಇರದು. ಹಿರಿಯರು ಕೈಗೆತ್ತಿಕೊಂಡ ಇಂತಹ ಪ್ರೊಜೆಕ್ಟ್ ಗಳಿಂದ ಅಭಿವೃದ್ಧಿ ಕಂಡರೂ, ಇದು ಇಡೀ ಹಳ್ಳಿಗರ ಸಂಸ್ಕೃತಿ, ಪರಂಪರೆ, ಕನಸು ಹಾಗೂ ಭಾವನೆಗಳನ್ನು ಸಂಪೂರ್ಣವಾಗಿ ಅಳಿಸಿ ಹಾಕಿತು.
ದತ್ತಪ ಹೆಗಡೆ, ತುಂಗಕ್ಕಾ, ಕೃಷ್ಣರಾವ್, ವಸುದಾ, ದೋಣಿ ಗಣಪ ಎನ್ನುವ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಜೋಗಕ್ಕೆ ಡ್ಯಾಂ ಕಟ್ಟೋಕೆ ಹೊರಟವರ, ಡ್ಯಾಂಗಾಗಿ ಜಾಗ ಕಳೆದುಕೊಂಡವರ; ಬದುಕು ಮುಳುಗಡೆಯಾದವರ ಕತೆ.
ನಿಜ ಹೇಳಬೇಕು ಅಂದ್ರೆ ಮೊದಲ ತುಂಬಾ ಚೆನ್ನಾಗಿಯೆ ಕಾದಂಬರಿಯನ್ನ ತೆರೆದಿಡುತ್ತೆ; ಒಂದಷ್ಟು ಪಾತ್ರಗಳನ್ನ ಆಪ್ತವಾಗಿಸೋ ಪ್ರಯತ್ನ ಮಾಡುತ್ತೆ. ಆದ್ರೇಕೋ ಗೊತ್ತಿಲ್ಲ ಮುಕ್ಕಾಲು ಕಾದಂಬರಿಯಲ್ಲಿ ಬದುಕಿನ ಏರಿಳಿತಗಳೆ ಕಾಣಿಸ್ಲಿಲ್ಲ ಅನಿಸ್ತು; ಅಂದ್ರೆ ಕಾದಂಬರಿ ಅದೇ ಒಂದಷ್ಟು ಪಾತ್ರಗಳ ಸುತ್ತ ಸುತ್ತುತ್ತಾ ಇತ್ತೇ ಹೊರತು ಶರಾವತಿ ಮತ್ತೆ ಜೋಗದ ಹತ್ರ ತುಂಬಾ ಕಮ್ಮಿಯೇ ತೆರಳಿತು ಅನಿಸ್ತು. ಕೃಷ್ಣರಾವ್ ಸರ್ವೆ ಮಾಡಿದ್ದು ಮತ್ತು ಅವರ ಹೆಂಡತಿಯನ್ನು ಜೋಗಕ್ಕೆ ಕರೆತಂದಿದ್ದು, ದತ್ತಪ್ಪನವರ ಮನೆಯವರ ಜೊತೆ ಅನ್ಯೋನ್ಯವಾಗಿದ್ದು ಮತ್ತು ಅವರ ಕಷ್ಟಸುಖಗಳಿಗೆ ಸ್ಪಂದಿಸಿದ್ದು ಮೊದಲಷ್ಟು ಭಾಗದ ಕಾದಂಬರಿಯಲ್ಲೆ ನಮಗೆ ಕಾಣಿಸೋದರಿಂದ ಮುಂದೆ ಹೋಗ್ತಾ ಹೋಗ್ತಾ ಕಾದಂಬರಿಯಲ್ಲಿ ಏನು ಸಹ ಜರುಗ್ತಾನೆ ಇಲ್ಲ ಅನಿಸ್ತು. ಕೊನೆಗಳಲ್ಲಿ ಆಗೋ ದೊಡ್ಡ ಘಟನೆ ಮತ್ತೆ ಮುಳುಗಡೆ ನೀರು ಜನರ ಬದುಕಲ್ಲಿ ಆಡೋ ಆಟ ಇರಲಿಲ್ಲ ಅಂದ್ರೆ ಕಾದಂಬರಿಗೊಂದು ತೂಕಾನೆ ಇರ್‍ತಾನೆ ಇರ್‍ಲಿಲ್ಲ ಅನಿಸ್ತು. ಆಮೇಲೆ ಕೆಲವು ವಿಷಯಗಳು ನಾವಂದುಕೊಂಡ ಹಾಗೆಯೆ ನಡೆಯೋದ್ರಿಂದ ವಾವ್ ಅನಿಸ್ತಾ ಇರ್‍ಲಿಲ್ಲ. ಶರಾವತಿ, ಜೋಗ, ಸುತ್ತಮುತ್ತ ಊರುಗಳ ವಿವರಣೆ, ಅಲ್ಲಿನ ಪರಿಸರವನ್ನ ಕಟ್ಟಿಕೊಟ್ಟ ರೀತಿ; ಕತೆಯಲ್ಲಿನ ಡ್ರಾಮಾಕ್ಕೆ ಹೋಲಿಸಿದರೆ ತೀರಾ ಕಮ್ಮಿಯಿತ್ತು ಅನಿಸ್ತು. ನೀವೊಂದು ತಾಳ್ಮೆಯಿಂದ ನಿದಾನವಾಗಿ ಸಾಗೋ, ಕೊನೆಯಲ್ಲೊಂದು ಮನಸನ್ನು ಕಾಡೋ ಕಾದಂಬರಿ ಓದಬೇಕಂತ ಇದ್ರೆ ಇದನ್ನ ಎತ್ತಿಕೊಳ್ಳಿ; ಕಾದಂಬರಿಯ ಕೊನೆಯವರೆಗೆ ಓದುತ್ತಾ ಹೋಗೋ ತಾಳ್ಮೆಯಿಟ್ಟುಕೊಳ್ಳಿ. ಜೈ
ಅಯ್ಯೋ ! ಈ ಉದ್ಗಾರ ಬಿಟ್ಟರೆ ಈ ಕ್ಷಣಕ್ಕೆ ಬರೆಯಲು ಏನೂ ತೋಚುತ್ತಿಲ್ಲ . 'ಪುನರ್ವಸು' ಈ ಮನಕಲಕುವ ಕಾದಂಬರಿಯನ್ನು ಓದುವಾಗ ಹಲವು ಬಾರಿ ಕಣ್ಣಾಲಿಗಳನ್ನು ಮಂಜಾಗಿಸಿದ್ದುಂಟು. ಯಾವುದೋ ಊರಬೆಳಗಿಸಲು ಇನ್ಯಾರದ್ದೋ ಜೀವ /ಜೀವನ ಕತ್ತಲಾಗಿಸಿದ ಕಥಾನಕವಿದು. ಈ ಕಾದಂಬರಿ ಬರಿಯ ಒಂದು ನದಿ (ಶರಾವತಿ ) ಪಾತ್ರದ ಜನರ ನೋವಿನ ಕಥೆಯೆನಿಸದೆ,ಭವ್ಯ ಭಾರತದ ಅಥವಾ ಪ್ರಪಂಚದ ಇನ್ಯಾವುದೇ ದೇಶದ ಅಭಿವೃದ್ಧಿ ಎನ್ನುವ ಹೆಸರಿನಲ್ಲಿ ಹಲವರ ಬಾಳಿಗೊ,ಕನಸಿಗೊ,ನೆಮ್ಮದಿಗೋ ತಿಳಿದೋ ತಿಳಿಯದೆಯೋ ಕೊಳ್ಳಿಯಿಟ್ಟಿರುತ್ತವೆ ಹಾಗು ನಾವುಗಳು ಸಹ ಈ ಅಭಿವೃದ್ಧಿಯನ್ನು ಆ ಹಲವರ ನೋವಿನ ಗೋರಿಗಳ ಮೇಲೆ ಸ್ವಾಗತಿಸಿರುತ್ತೇವೆ ಅನ್ನಿಸುತ್ತದೆ. ಕಾದಂಬರಿಕಾರ ಶ್ರೀ ಗಜಾನನಶರ್ಮರ ಬರೆವಣಿಗೆ ಮೊದಲ ಪುಟದಿಂದಲೇ ಆವರಿಸಬಿಡುತ್ತದೆ,ಮಲೆನಾಡ ಸೀಮೆಯ ಭಾಷೆ ,ಆಚಾರ ವಿಚಾರ ,ನಂಬಿಕೆಗಳನ್ನೂ ಬಹಳ ಮನೋಜ್ಞವಾಗಿ ಚಿತ್ರಿಸಿದ್ದಾರೆ ಹಾಗು ಕನ್ನಡ ಭಾಷೆಯ ಸೊಗಸನ್ನು ಮಲೆನಾಡ ಸೊಬಗನ್ನು ಚಿತ್ರಿಸಲು ಬಹಳ ಚೆನ್ನಾಗಿ ಬಳಸಿದ್ದಾರೆ . ಕಾದಂಬರಿಯ ಪಾತ್ರಗಳಂತೂ ನಮಲ್ಲಿ ಅಚ್ಚಳಿಯದೆ ಮನಸಿನಲ್ಲಿ ಉಳಿಯುವಂತೆ ಚಿತ್ರಿಸಿದ್ದಾರೆ, 'ಶರಾವತಿ'ಯನ್ನಂತೂ ತನ್ನ ಮಡಿಲಿನ ಮಕ್ಕಳ ಬಾಳನ್ನು ತನಗೇ ತಿಳಿಯದೇ ತನ್ನ ಓಡಿಲಿಗೆ ದಬ್ಬಿದ ಅಭಿವೃದ್ಧಿಕಾರರ ಸಂಚಿಗೆ ಮೂಕಳಾಗಿಸಿದ್ದಾರೆ ...............
...ಪುನರ್ವಸು ಎಂಬ ಕಥನ ಕಾದಂಬರಿ ಮುಗಿಸಿ ಕುಳಿತಿದ್ದೇನೆ. ಕಾದಂಬರಿಯ ಬಹುತೇಕ ಘಟನೆಗಳು ಸಂಭವಿಸುವುದು ಮಳೆಯಲ್ಲಿ..ವಿಚಿತ್ರವೆಂದರೆ ಅದೇ ತರಹದ ಧಾರಕರದ ಮಳೆ ಈ ವರ್ಷ ನಮ್ಮಲ್ಲಿ.. ಒಂದು ಕಪ್ಪು ಮೋಡದ ಮಳೆ ಈ ಕ್ಷಣಕ್ಕೂ ಬೀಳುತ್ತಲೇ ಇದೆ. ನನ್ನನ್ನು ತುಂಬಾ ಕಾಡಿದ್ದು ಶರಾವತಿ ಕಣಿವೆಯ ಜನರ ತ್ಯಾಗ. ಇವತ್ತು ನಾವೆಲ್ಲ ಬಳಸುತ್ತಿರುವ ವಿದ್ಯುತ್, ತನ್ಮೂಲಕ ಬಂದ ಉದ್ಯಮ ಕ್ರಾಂತಿ.. ಎಲ್ಲದರ ಮೂಲ ಸೆಲೆ ಇಲ್ಲಿ, ಲಿಂಗನಮಕ್ಕಿ ಎಂಬ ಗರ್ಭದಲ್ಲಿದೆ ಎಂಬುದೇ ಅಚ್ಚರಿ. ಲೇಖಕರು ವರ್ಣಿಸಿದ ಅಬ್ಬರದ ಜೋಗ, ಬಹುಶಃ ನಾನು ಓದುತ್ತಿರುವ ಈ ವರ್ಷ ಮತ್ತೆ ಮರುಕಳಿಸಿದೆ.. .. ಇದೆಲ್ಲದಕ್ಕಿಂತ ಇರುವ ಆರ್ದ್ರತೆ , ಅದು ಮಾನವೀಯ ಸಂಬಂಧಗಳದ್ದು.. ಹವ್ಯಕ ಬ್ರಾಹ್ಮಣ ಕುಟುಂಬವೊಂದು ಬದಲಾಗುತ್ತಿರುವ ಕಾಲದೊಂದಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ, ಕಳೆದುಕೊಳ್ಳಬೇಕಾದ ಪರಂಪರೆ ಇವೆರಡರ ನಡುವಿನ ತಾಕಲಾಟದಲ್ಲಿ ಸೋಲುವ ಚಿತ್ರಣ , ನನಗೆ ಭಯಾನಕ ಎನ್ನಿಸಿದ್ದು ನಿಜ..
ಮುಳುಗಿದ್ದು ಬರೀ ಭಾರಂಗಿಯಲ್ಲ, ಭರವಸೆ, ಬದುಕು..ಮತ್ತು ಒಂದು ಅತ್ಯಂತ ಶ್ರೀಮಂತ ಜನಪದ ಸಹ.
Sorrows of people whose livelihood is lost because of Hydro electric project is factually well explained in this book. The book brings out an important philosophical debate about the cost we need to pay for progress, and the extent to which mankind goes to pay for it, progress almost feels harmful. Also sheds light on the sense of superiority one gets who works for a project like this and for them sorrows of common folk is nothing compared to progress. This book re-affirms one’s sense of belonging to a particular place/culture. Highly recommended!
ಸಾಗರ ಊರಿನವನದ ನನಗೆ, ಈ ಕೃತಿ ಸ್ವಲ್ಪ ಜಾಸ್ತಿಯೇ ಇಷ್ಟ ಆಗಿರುವದರಲ್ಲಿ ಆಶ್ಚರ್ಯವೇನು ಇಲ್ಲ. ಆನೆಕಟ್ಟು ಕಟ್ಟಿದ ಕಥೆ, ಅದರ ಹಿಂದೆ ಅಡಗಿದೆ ಜನರ ವ್ಯತೆ ತುಂಬ ಚೆನ್ನಾಗಿ ಕಟ್ಟಿ ತೋರಿಸುತ್ತಿದೆ. ಮಲೆನಾಡಿನ ಜನಜೀವನ, ಭಾಷೆ, ಆಚರಣೆ ಸಂಸ್ಕೃತಿ ಮತ್ತೆ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ಮೂಡಿಸುವುದರಲ್ಲಿ ಕೃತಿ ಸಫಲವಾಗುತ್ತೆ. ಕೊನೆ ಪುಟಗಳಲ್ಲಿ ನನಗೇ ಗೊತ್ತಿಲ್ಲದಂತೆ ಕಣ್ಣು ಒದ್ದೆ ಆಗಿದ್ದವು. ಬೇರೆ ಯಾರದೋ ಮನೆ ಬೆಳಗಲಿಕ್ಕೆ ನಮ್ಮ ಮನೆ ದೀಪ ಆರಿಸುವುದು ಎಷ್ಟು ನ್ಯಾಯ ಎಂದು ಎನಿಸುತ್ತಿದೆ.