Jump to ratings and reviews
Rate this book

ಸುಪ್ತ

Rate this book

190 pages, Unknown Binding

Published January 1, 2019

3 people want to read

About the author

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
4 (57%)
4 stars
3 (42%)
3 stars
0 (0%)
2 stars
0 (0%)
1 star
0 (0%)
Displaying 1 - 5 of 5 reviews
Profile Image for Prashanth Bhat.
2,154 reviews137 followers
October 14, 2019
ಸುಪ್ತ - ಡಾ.ಕೆ.ಬಿ.ಶ್ರೀಧರ್

ಇದರ ಬಗ್ಗೆ ಬರೆಯುವುದೆಂದರೆ ಮತ್ತೆ ಆ ಪಾತ್ರಗಳ‌ ಒಳತೋಟಿಗಳ ಮತ್ತೆ ನೋಡುವಂತೆ. ಇಲ್ಲಿ ಬರುವ ಪ್ರತಿಯೊಂದು ಪಾತ್ರವೂ ಎಷ್ಟು ನೈಜ ಅಂದರೆ ಇದು ಕಾದಂಬರಿ ಅಲ್ಲ ಬದುಕು ಅಂತ ಮನಸ್ಸು ಚೀರಿ ಹೇಳುತ್ತದೆ.
ನಿನ್ನೆಯಷ್ಟೇ ಪೌಲ್ ಅವರ ಬ್ರೀತ್ ಬಿಕಮ್ಸ್ ಏರ್ ಅನ್ನುವ ಕ್ಯಾನ್ಸರ್ ಜೊತೆಗಿನ ಹೋರಾಟದ ಪುಸ್ತಕ ಓದಿ ಮನಸು ದುಗುಡಗೊಂಡಿತ್ತು.ಇವತ್ತು ಡಾ.ಶ್ರೀಧರ್ ಅವರ ಪುಸ್ತಕವೂ ಅದೇ ವಿಷಯದ ಕುರಿತಾಗಿ ಇತ್ತು.ಮೊದಲಿಗೆ ಈಗ ಬೇಡ ಅನಿಸಿದರೂ ನೋಡುವ ಅಂತ ಶುರು ಮಾಡಿದವ ಮುಳುಗಿ ಹೋದೆ.

ಅವರ ಮೊದಲ ಕಾದಂಬರಿ 'ಪಂಚಮುಖ' ಬಿಡಿ ಬಿಡಿಯಾದ ಬಾಲ್ಯದ ದಟ್ಟ ನೆನಪುಗಳ ಜಾತ್ರೆ‌. ಲೇಖಕ ಗುರುಪ್ರಸಾದ ಕಾಗಿನೆಲೆ ಅಂದಂತೆ ಬರವಣಿಗೆ ಒಂದು ಥೆರಪಿ ಅಂದರೆ ಬಹುಶಃ ಈ ಮೊದಲ ಕಾದಂಬರಿ ಅವರಿಗೆ ಥೆರಪಿಯಾಗಿತ್ತು ಅನಿಸುತ್ತದೆ. ಮೊದಲ ಕಾದಂಬರಿಯ ಎಲ್ಲಾ ತಪ್ಪು,ದೌರ್ಬಲ್ಯ ಇದ್ದೂ ಇಷ್ಟವಾದ ಕೃತಿ ಅದು.

ಎರಡನೆಯ ಕಾದಂಬರಿ ಸುಪ್ತ ನನ್ನ ಆವರಿಸಿಕೊಂಡ ಬಗೆ ಹೇಗೆ ಹೇಳಲಿ?
ಅವಿನಾಶ ,ನಗರ ಬದುಕಿನ ಎಲ್ಲಾ ಯಾತನೆಗಳ(ಕೆಲಸದ ಬಿಸಿ, ಟ್ರಾಫಿಕ್ ,ಬದುಕು ಕಟ್ಟುವ ಹೆಣಗಾಟ) ನಡುವೆ ಸಿಲುಕಿಕೊಂಡವ. ಅವನಿಗೀಗಷ್ಟೇ ತನ್ನ ತಂದೆಯ ಸಾವಿನ ಆಘಾತದಿಂದ ಹೊರಬರಲು ತನ್ನ ತಾಯಿಯ ಸಂತೈಸಲು ನಡುವೆ ತನ್ನ ಬದುಕು ಕಟ್ಟಿಕೊಳ್ಳಲು ಮುಗಿಯದ ಕೆಲಸದ ಒತ್ತಡವ ನಿವಾರಿಸಲು ಹೋರಾಡಬೇಕಾದ ಅನಿವಾರ್ಯತೆ.
ಅವನ ರೂಮಿಗೆ ಬರುವ ಕಾಲೇಜಿನ ಗೆಳೆಯ ಗಿರೀಶನ ನೋಡಿ ಆಶ್ವರ್ಯವಾಗುತ್ತದೆ. ಗಿರೀಶನಿಗೆ ಕ್ಯಾನ್ಸರ್! ಅವನಿಗೆ ಗಿರೀಶನೊಂದಿಗೆ ತನ್ನ ಗೆಳೆತನದ ಆಯಾಮಗಳ ಕುರಿತು ಗೊಂದಲಗಳಿವೆ. ಹೀಗೆ ಕಥೆ ಬೆಳೆಯುತ್ತದೆ. ಗಿರೀಶ ಮೊಂಡ.ಈಗಷ್ಟೇ ಬದುಕ ಶುರು ಮಾಡಲು ಹೊರಟವ. ಮೂರನೇ ಸ್ಟೇಜಿಗೆ ಬಂದ ಕ್ಯಾನ್ಸರ್ ‌ಮಾರಿಯ ವಿರುದ್ಧ ಹೋರಾಟ ಅವನಿಗೆ ಅನಿವಾರ್ಯ.

ಈ ಮಾರಿಯ ವಿರುದ್ಧದ ಚಿಕಿತ್ಸೆಯ ಒಂದೊಂದು ಹಂತವನ್ನೂ ಭಾವುಕರಾಗದೆ ವಿವರಿಸುವಲ್ಲಿ ಲೇಖಕರ ಕುಸುರಿ ಎದ್ದು ಕಾಣುತ್ತದೆ. ಇದು ಕಪ್ಪು ಇದು ಬಿಳಿ ಎಂದು ಹೇಳಲಾಗದ ಮನುಷ್ಯರ ಬಣ್ಣಗಳು, ಮನಸಿನ ಮಾತುಗಳ ಅಪ್ಪಟ ತುಮಕೂರಿನ ಭಾಷೆಯಲ್ಲಿ ಅವರು ವಿವರಿಸಿದ ರೀತಿ ಬೆರಗು ಹುಟ್ಟಿಸುತ್ತದೆ.

ಇಲ್ಲಿ ಖಾಸಗಿಯಾದ ಕೆಲ ಮಾತುಗಳ ಹೇಳಲೇಬೇಕು. ವೈಯಕ್ತಿಕವಾಗಿ ಈ ಕ್ಯಾನ್ಸರ್ ಮಾರಿ ಹಲವರ ಬದುಕು ನಜ್ಜುಗುಜ್ಜು ಮಾಡಿದ್ದು ನಾನು ಕಣ್ಣಾರೆ ಕಂಡವ. ಎಲ್ಲೋ ಒಂದು ಕಡೆ ಆ ಭಯ,ಆ ನೋವು ಒಳಗಿಂದೊಳಗೆ ಇದ್ದೇ ಇದೆ.ಅದರ ಚಿಕಿತ್ಸೆಗೆ ಒಳಗಾದವರ ನೋವೂ ಗೊತ್ತಿದೆ. ಅಂತಹ ಸಂದರ್ಭದಲ್ಲಿ ಅವರ ಕುಟುಂಬದ, ಗೆಳೆಯರ,ಸಮಾಜದ ನಡವಳಿಕೆ ಎಲ್ಲಾ ಚೆನ್ನಾಗೇ ಗೊತ್ತು. ಇನ್ನು ಕುಟುಂಬದ ಹಿರಿಯರೊಬ್ಬರು ಪಾರ್ಶ್ವವಾಯುವಿಗೆ ಈಡಾಗಿ ಮಲಗಿದಲ್ಲೇ ಆದರೆ ಏನಾಗಬಹುದು ಎಂಬುದೂ ಅನುಭವದಲ್ಲಿದೆ. ಹಾಗಾಗಿ ಇಲ್ಲಿ ಶ್ರೀಧರ್ ಅವರ ಬರವಣಿಗೆ ಓದುವಾಗ ಆ ನೆನಪುಗಳೆಲ್ಲ ಅಲೆ ಅಲೆಯಾಗಿ ನುಗ್ಗಿ ಬಂತು.
ಆ ಸಮಯದ ಮನೋವ್ಯಾಪಾರವೂ..
ಎಲ್ಲೂ ರಾಜಿಯಾಗದೆ ಇದ್ದ ಹಾಗೆ ಮನಸಿನ ಗೊಂದಲಗಳ ಸಹಿತ ಅವರು ಬರೆದ ಬಗೆ ಓದಲೇಬೇಕು.

ವೃತ್ತಿಯಲ್ಲಿ ಮನೋವೈದ್ಯರಾದ್ದರಿಂದಲೋ ಏನೋ ಮನಸಿನ ಕೊವೆಗಳ‌ ವಿವರಣೆ ಕೊಡುವಾಗ ಶ್ರೀಧರ್ ನುರಿತ ದರ್ಜಿ ಹೊಲಿವಂತೆ ಬರೆಯುತ್ತಾರೆ ಹಾಗಾಗಿಯೇ ಅವರ ಪಾತ್ರಗಳು ನೈಜವಾಗಿದೆ.

ಈ ಕಾದಂಬರಿಯನ್ನು ಹೆಚ್ಚಿನ ಆಸಕ್ತರು ಓದಬೇಕು ಅನ್ನುವುದು ಆಶಯ.
Profile Image for Guruprasad Kanle.
3 reviews1 follower
October 16, 2019
#ಓದಿ_ಓದಿಸಿ ( ಪುಸ್ತಕ ಪರಿಚಯ 9 ) (ಸುಪ್ತ – ಡಾ.ಕೆ.ಬಿ.ಶ್ರೀಧರ್)

ಸಾವು ಈ ಪದ ಕೇಳಿದ ತಕ್ಷಣ ಜನರು ಹಾವಿನ ಹೆಡೆ ತುಳಿದವರಂತೆ ಆಡುತ್ತಾರೆ. ಕಾರಣ ಅದೊಂದು ನಿಗೂಢ, ವಿಸ್ಮಯ, ಭಯಜನಕ, ಕುತೂಹಲ, ಆತಂಕ, ಸುಲಭದಲ್ಲಿ ಜೀರ್ಣಿಸಿಕೊಳ್ಳಲೂ ಆಗದ, ತಪ್ಪಿಸಿಕೊಳ್ಳಲೂ ಸಾಧ್ಯವಾಗದ, ಅನಿವಾರ್ಯ ಘಟನೆ. ಆದರೆ ಡಾ.ಕೆ.ಬಿ.ಶ್ರೀಧರ್ ಅವರ “ಸುಪ್ತ” ಕಾದಂಬರಿಯಲ್ಲಿ ಸಾವಿನ ಜೊತೆಜೊತೆಗೇ ಬದುಕೂ ಸಮಾನಾಂತರವಾಗಿ ಸಾಗುತ್ತದೆ. ಸಾವು ಎದುರಿಗೆ ಹೆಡೆಯೆತ್ತಿ ನಿಂತಿರುವುದನ್ನು ನೋಡುತ್ತ ಅದನ್ನೆದುರಿಸಲು ಪರದಾಡುತ್ತಿರುವ ಗಿರೀಶ ಒಂದುಕಡೆ ಇದ್ದರೆ, ಅವನ ಜೊತೆಗಿನ ತನ್ನ ಸಂಬಂಧದ ಸ್ವರೂಪ ಏನು ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ಚಡಪಡಿಸುತ್ತ, ತಮ್ಮಿಬ್ಬರ ಸಂಬಂಧದ ಜಟಿಲತೆಯನ್ನು ಬಿಡಿಸುವಾಗ, ತನ್ನ ಮನದಲ್ಲಿ ಅಡಗಿದ್ದ ಹಲವು ಉತ್ತರ ಕಾಣದ ಪ್ರಶ್ನೆಗಳಿಗೆ ಉತ್ತರ ಹೊಳೆದಂತಾಗುವ ಆದರೆ ಉತ್ತರ ಸಿಗದ ಅನುಭವಗಳಿಂದ ಅಚ್ಚರಿಗೊಳಗಾಗುವ ಅವಿನಾಶ ಇನ್ನೊಂದೆಡೆ ಇದ್ದಾನೆ. ಬದುಕನ್ನು ಕಟ್ಟಿಕೊಳ್ಳಲು ಯತ್ನಿಸುತ್ತಿರುವ ಅವಿನಾಶನಿಗೆ, ತನ್ನದೇ ಸುಪ್ತ ಮನಸ್ಸಿನಲ್ಲಿ ಗೆಳೆಯನ ಬಗೆಗಿರುವ ಅಸಹನೆ, ಹೊಟ್ಟೆಕಿಚ್ಚು, ಕರುಣೆ, ಪ್ರೀತಿ, ಇತ್ಯಾದಿಗಳನ್ನು ಕಂಡು ಅಚ್ಚರಿಯಾಗುತ್ತದೆ ಕೂಡಾ.

ಕಾದಂಬರಿಯ ಪ್ರಾರಂಭದಲ್ಲಿ ಒಂದು ಘಟನೆ ಬರುತ್ತದೆ. ವರ್ಷಗಳ ನಂತರ ಗೆಳೆಯ ಅವಿನಾಶನನ್ನು ಕಾಣಲು ಬರುವ ಗಿರೀಶ ಅದಾಗಲೇ ಮಾರಕ ಕಾಯಿಲೆಗೆ ತುತ್ತಾಗಿದ್ದಾನೆ. ಅವನ ಸ್ಥಿತಿ ಕಂಡು ಆಶ್ಚರ್ಯಭರಿತ ಸಿಟ್ಟಿನಿಂದ ಅವಿನಾಶ ಯಾಕೋ ವೈದ್ಯರಿಗೆ ತೋರಿಸೋದಿಕ್ಕೆ ತಡ ಮಾಡಿದೆ? ಕಾಲೇಜು ಕಾಲದಂತೆ ಇಲ್ಲೂ ಓತ್ಲಾ ಹೊಡೆದ್ಯಾ ಅಂತ ಬೈಯುತ್ತಾನೆ. ಅದಕ್ಕೆ ಗಿರೀಶ ನೀಡುವ ಸಮಜಾಯಶಿ ನಮ್ಮೆಲ್ಲರ ಮನದಲ್ಲಿ ಬರುವ ಭಾವನೆಗಳನ್ನು ಪ್ರತಿನಿಧಿಸುತ್ತದೆ. “ ಅದೇ ಇರ್ಬೋದು ಅನ್ಸುದ್ರು, ಟೆಸ್ಟ್ ಮಾಡ್ಬಿಟ್ರೆ ಆ ಕಾಯ್ಲೇನೆ ಇದೆ ಅಂತ ಪ್ರೂವ್ ಆಗೋಗುತ್ತಲ್ವಾ? ಬೇರೆ ಏನೋ ಬಂದಿದೆ ಹೊರ್ಟೋಗುತ್ತೆ ಅಂತ ನನ್ಗೆ ನಾನೇ ಸುಳ್ಳು ಹೇಳ್ಕಂಡ್ ಮುಂದುಕ್ ತಳ್ಕೊಂಡ್ ಬಂದ್ಬುಟ್ಟೆ “ ಅನ್ನುತ್ತಾನೆ ಅವ. ವಾಸ್ತವ ಸ್ಥಿತಿಯನ್ನು ಒಪ್ಪಲು ನಿರಾಕರಿಸುವ ಮನಸ್ಸನ್ನು ಇಲ್ಲಿ ಲೇಖಕರು ಬಹಳ ಚೆನ್ನಾಗಿ ವರ್ಣಿಸುತ್ತಾರೆ ನೋಡಿ..!!

ಏನೂ ಆಗಲ್ಲ, ಎಲ್ಲಾ ಸರಿಹೋಗುತ್ತೆ ಎಂದು ನಮಗೆ ನಾವೇ ಹೇಳಿಕೊಳ್ಳುವ ಸಾಂತ್ವನಗಳು ಕೆಲವೊಮ್ಮೆ ಅನಾಹುತ ಮಾಡುತ್ತವೆ ಎಂಬುದು ಈಗಾಗಲೇ ಅವಿನಾಶನಿಗೆ ಅರಿವಿಗೆ ಬಂದಿದೆ. ತನ್ನ ತಂದೆಯನ್ನು ಹೀಗೆ ಹೇಳಿಕೊಂಡೇ ಕೊನೆಗೆ ಕಳೆದುಕೊಳ್ಳಬೇಕಾಯ್ತು ಎಂಬುದು ನೆನಪಿಗೆ ಬರುತ್ತದೆ. “ ನಮಗೇನಾನ ಕೆಟ್ಟುದಾದ್ರೆ ಅದುನ್ನ ಒಪ್ಕೊಳ್ಳಕ್ಕೆ ಎಷ್ಟ್ ಕಷ್ಟ ಆಗುತ್ತಲಾ? ಕೆಟ್ಟುದಾಗದು ಗ್ಯಾರಂಟಿಯಿದ್ರೂ ಆತರ ಆಗದೇಯಿಲ್ವೇನೋ, ಆಗೇಯಿಲ್ವೇನೋ, ಇದೆಲ್ಲಾ ಸುಳ್ಳು ಅಂತ ಎಂಗೆಂಗೆ ನಮ್ ಮನುಸ್ಸು ಭ್ರಮೆ ಹುಟ್ಸುತ್ತಲಾ? ಯಾಕ್ ಇಂಗೆ? “ ಎಂದು ಅವನ ಮನದಲ್ಲಿ ಯೋಚನಾಸರಣಿ ಸಾಗುತ್ತದೆ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ..! ಅನಾದಿಕಾಲದಿಂದಲೂ ಇರುವ ಈ ಮನೋಭಾವದ ಬಗ್ಗೆ, ಮಹಾಭಾರತದಲ್ಲಿ ಧರ್ಮರಾಯನೇ ಅಚ್ಚರಿಪಡುತ್ತಾನೆ. ಮಹಾಭಾರತದ ಅರಣ್ಯಪರ್ವದಲ್ಲಿ ಒಂದು ಘಟನೆ ಬರುತ್ತದೆ. ಅರಣಿಯೋಪಾಖ್ಯಾನ ಎಂಬ ಹೆಸರಿನ ಈ ಆಖ್ಯಾನವು `ಯಕ್ಷಪ್ರಶ್ನೆ ಪ್ರಸಂಗ’ಎಂದೇ ಪ್ರಸಿದ್ಧವಾಗಿದೆ. ಅದರಲ್ಲಿ ಯಮಧರ್ಮರಾಯ ಧರ್ಮಜನಿಗೆ ಕೇಳುವ ಒಂದು ಪ್ರಶ್ನೆ “ ಈ ಜಗತ್ತಿನಲ್ಲಿ ಆಶ್ಚರ್ಯಕರವಾದದ್ದು ಏನು? “ ಎಂಬುದು ಬಹಳ ಮಾರ್ಮಿಕವಾಗಿದೆ. ಅದಕ್ಕೆ ಧರ್ಮನಂದನನ “ ಈ ಜಗತ್ತಿನಲ್ಲಿ ಪ್ರತಿನಿತ್ಯವೂ ಅನೇಕ ಜೀವಿಗಳು ಗತಪ್ರಾಣರಾಗಿ ಯಮಪುರಿಗೆ ಹೋಗುತ್ತಿರುವುದು ಕಂಡರೂ ಉಳಿದವರು ತಾವು ಇಲ್ಲಿಯೇ ಶಾಶ್ವತವಾಗಿ ಇರುತ್ತೇವೆ ಎಂದು ಭಾವಿಸುವುದು ಅತ್ಯಂತ ಆಶ್ಚರ್ಯಕರವಾದ ಸಂಗತಿ. “ ಎಂದು ಉತ್ತರಿಸುತ್ತಾನೆ. ಇದು ನಿಜ ಕೂಡಾ ! ಅದನ್ನೇ ಲೇಖಕರು ಕಾದಂಬರಿಯ ೬೪ ನೇ ಪುಟದಲ್ಲಿ “ ನಮ್ಮ್ ಸುತ್ತಾಮುತ್ತಾ ಡೈಲಿ ಸಾವು ಓಡಾಡ್ತಾ ಇದ್ರೂ, ನಮ್ಗೆ ಅದು ಬರದೇ ಇಲ್ವೇನೋ ಅನ್ನೋತರ ಇರ್ತೀವಿ “ ಎನ್ನುವ ಮೂಲಕ ಬೇರೆ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ

ಪ್ರಸಿದ್ಧ ಮನೋವಿಜ್ಞಾನಿ ಕಾರ್ಲ್ ಯೂಂಗ್ (Carl Jung) ಹೇಳುವಂತೆ ಮನುಷ್ಯನಿಗೆ ಸ್ವಯಂ ಸಾಕ್ಷಾತ್ಕಾರ (Self-realization) ಆಗಬೇಕು; ಅವನಲ್ಲಿ ಹುದುಗಿರುವ ಆಂತರಿಕ ಶಕ್ತಿ ಹೊರಬರಬೇಕು. ಆಗ ಅವನ ಮನಸ್ಸಿನಲ್ಲಿ ಸುಖಶಾಂತಿಗಳು ನೆಲೆಸುತ್ತವೆ. ಲೇಖಕರು ಈ ಕಾದಂಬರಿಯಲ್ಲಿ ಗಿರೀಶನ ರೋಗದ ಮೂಲಕ ಅವಿನಾಶನಿಗೆ ತನ್ನ ಕುಟುಂಬದ ಹಲವು ಘಟನೆಗಳನ್ನು ನೆನಪು ಮಾಡಿಸಿ, ಅವನ ಮನಸ್ಸಿನ ಗೊಂದಲಗಳಿಗೆ ಅವನು ಉತ್ತರ ಹುಡುಕುವ ಪ್ರಯತ್ನ ಮಾಡಿಸುತ್ತಾರೆ. ಮನಸ್ಸು ನಮಗೆ ಕಾಣದು; ಆದರೆ ಅದು ನಮ್ಮ ಕಾಣಿಸುವ ಮತ್ತು ಕಾಣಿಸದ- ಎರಡೂ ಜಗತ್ತನ್ನು ಆಳುತ್ತಿರುತ್ತದೆ. ಮನಸ್ಸಿಗೆ ಇರುವ ಆಯಾಮಗಳು ಅಸಂಖ್ಯ. ಪ್ರಜ್ಞೆ, ಬುದ್ಧಿ, ಯೋಚನೆ, ಚಿಂತನೆ, ಅಂತಃಕರಣ, ಕನಸು- ಹೀಗೆ ಎಷ್ಟೆಲ್ಲ ವಿಧದಲ್ಲಿ ಮನಸ್ಸು ಕೆಲಸ ಮಾಡುತ್ತಿರುತ್ತದೆ ! ಲೇಖಕರು ಅವಿನಾಶನ ಸುಪ್ತ ಮನದಲ್ಲಿ ಅಡಗಿರುವ ಹಲವು ವಿಷಯಗಳನ್ನು ಕನಸಿನ ಮೂಲಕ ಹೊರಗೆಡಹುವ ಪ್ರಯತ್ನ ಕೂಡಾ ಮಾಡುತ್ತಾರೆ. ಮನದಾಳದಲ್ಲಿ ಪದರಗಳಲ್ಲಿ ಸೇರಿಹೋಗಿರುವ ಹಲವು ನೆನಪುಗಳು ನಮಗೆ ಅರಿವಿದ್ದೋ, ಅರಿವಿಲ್ಲದೆಯೋ ನಮ್ಮ ವರ್ತನೆಯ ಮೇಲೆ ಪ್ರಭಾವ ಬೀರುತ್ತದೆ ಎಂಬ ವಿಷಯವನ್ನು ಕೂಡಾ ಸ್ನೇಹಿತರಿಬ್ಬರ ನಡುವಿನ ಹಲವು ಘಟನೆಗಳಲ್ಲಿ ನಮಗೆ ಸೂಚ್ಯವಾಗಿ ತಿಳಿಸಲು ಲೇಖಕರು ಇಲ್ಲಿ ಸಫಲರಾಗಿದ್ದಾರೆ. ಕಾದಂಬರಿಯ ೭೩ ನೇ ಪುಟದಲ್ಲಿ ಬರುವ “ ಬೆಂಕಿ ಆರಿಹೋಗಿ ಬೂದಿ ಮುಚ್��ಿದ್ದರೂ ಒಳಗಿರುವ ಕೆಂಡವು ಹೊಗೆಯಾಡಿಸುವಂತೆ, ಕಲಕಿದ ಸುಪ್ತ ಮನಸ್ಸು ತನ್ನ ಸ್ವರೂಪವನ್ನು ನಾನಾರೀತಿಯಲ್ಲಿ ಬಹಿರಂಗಪಡಿಸುತ್ತದೆ. ಜಾಗೃತ ಸ್ಥಿತಿಯಲ್ಲಿ ಅನುಭವಿಸುವ ವಿವರಿಸಲಾಗದ ಭಾವನೆಗಳು ಒಂದು ಮುಖವಾದರೆ, ಕನಸಿನ ಲೋಕದಲ್ಲಿ ಜರುಗುವ ದೃಶ್ಯಾವಳಿಗಳು ಸುಪ್ತ ಮನಸ್ಸಿನ ಇನ್ನೊಂದು ಮುಖ.” ಎಂಬ ಪ್ಯಾರಾ ಎಲ್ಲ ಘಟನೆಗಳನ್ನೂ ವಿವರಿಸುವಂತಿದೆ.

ಸಾವು ಎದುರಿಗೆ ನಿಂತಾಗ ಕಂಗೆಡುವ ಮನಸ್ಸು ಅದರಿಂದ ತಪ್ಪಿಸಿಕೊಳ್ಳಲು, ಕೊನೆಯಪಕ್ಷ ಅದನ್ನು ಸಾಧ್ಯವಾದಷ್ಟು ಮುಂದೆಹಾಕಲು ಯತ್ನಿಸುವ ಬಗೆಯನ್ನು ಇಲ್ಲಿ ಬಹಳ ಚೆನ್ನಾಗಿ ವಿವರಿಸಿದ್ದಾರೆ. ದೇವರಾಯನ ದುರ್ಗ ಬೆಟ್ಟದ ಮೇಲೆ ಸಿಕ್ಕಿದ ವೃದ್ಧರು ಹೇಳಿದ ಮಾಟ, ಮಂತ್ರ, ದಾಟು, ತಡೆ ಹೊಡೆಸುವುದು, ಶಾಂತಿ ಮಾಡಿಸುವುದು, ಇತ್ಯಾದಿಗಳನ್ನು ತನ್ನ ಬದುಕಿನಲ್ಲಿ ಎಂದೂ ನಂಬಿರದ ಗಿರೀಶ ಕೂಡಾ ಕೊನೆಯಲ್ಲಿ ಅದನ್ನೇ ಹುಡುಕಿಕೊಂಡು ಹೋಗಿ ಮಾಡಿಸುವುದು ಒಂದು ರೀತಿಯಲ್ಲಿ ಅಸಹಾಯಕ ಪರಿಸ್ಥಿತಿಗೆ ಸಿಕ್ಕ ಮನಸ್ಸು ಎಲ್ಲಾ ವಿಧದಲ್ಲಿ ಪ್ರಯತ್ನ ಮಾಡುವುದರ ಸೂಚಕವಾಗಿ ಕಾಣುತ್ತದೆ. ಆದರೆ ಯಾವುದರಿಂದಲೂ ಪ್ರಯೋಜನವಿಲ್ಲ, ಸಾವನ್ನು ಶಾಂತವಾಗಿ ಬರಮಾಡಿಕೊಳ್ಳುವುದೊಂದೇ ಉಳಿದ ದಾರಿ ಎಂಬುದು ಮನಸ್ಸಿಗೆ ಮನದಟ್ಟಾದಾಗ, ಕೊನೆಯ ಆಶ್ರಯವಾಗಿ ನಾವು ಮಂದಿರ, ಆಶ್ರಮ, ಗುರುಗಳು, ಸನ್ಯಾಸಿಗಳು, ಇತ್ಯಾದಿ ತಾಣಗಳತ್ತ ಓಡುತ್ತೇವೆ. “ ಹಾಗೆಯೇ ಗಿರೀಶನೂ ಓಡುತ್ತಾನೆ.

ಒಂದು ಕಡೆ ಸಾವಿನತ್ತ ಇಂಚಿಂಚಾಗಿ ಸಾಗುತ್ತಿರುವ ಗಿರೀಶನಾದರೆ ಇನ್ನೊಂದು ಕಡೆ ಬದುಕನ್ನು ರೂಪಿಸಿಕೊಳ್ಳುವ ಯತ್ನದಲ್ಲಿ ಸಾಗುತ್ತಿರುವ ಅವಿನಾಶ. ಸಾಯುತ್ತಿರುವವನಿಗೆ ದುಡ್ಡು ಕೊಟ್ಟರೆ ಅದು ಮರಳಿ ಬರೋಲ್ಲ ಎಂದು ಯೋಚಿಸುವ ಅವಿನಾಶ, ಅದೇ ಸಮಯಕ್ಕೆ ತನ್ನ ತಂದೆಯ ಸಾವಿನ ಸಂದರ್ಭದಲ್ಲಿ ತನ್ನ ಕುಟುಂಬಕ್ಕೆ ಸಹಾಯ ಮಾಡಿದವರನ್ನು ನೆನೆಯುತ್ತಾನೆ. ಎಲ್ಲರೂ ಅವರವರ ಸ್ವಾರ್ಥ ನೋಡಿಕೊಳ್ಳುತ್ತಾರೆ ಎಂದು ಮನದಲ್ಲೇ ಜಗತ್ತನ್ನು ದೂರುತ್ತಿರುವವನಿಗೆ, ಎಲ್ಲರಿಗೂ ಅವರದ್ದೇ ಆದ ಬದುಕು ಇರುತ್ತದೆ ಎಂಬುದು ಅರಿವಾಗುತ್ತದೆ. ಅವರವರ ಬದುಕಿನ ಕಷ್ಟಗಳ ನಡುವೆಯೂ ನಮಗೆ ಇಷ್ಟು ಸಹಾಯ ಮಾಡಿದ್ದರಲ್ಲ ಎಂಬ ಭಾವನೆ ಮನದಲ್ಲಿ ಮೂಡಿದ ನಂತರ, ತಮ್ಮ ಊರಿನಲ್ಲಿನ ಹೊಲವನ್ನು ದೊಡ್ಡಪ್ಪನಿಗೆ ಕೊಡಲು ಒಪ್ಪಿಕೊಳ್ಳುತ್ತಾನೆ.

ಲೇಖಕರು ಮೈಸೂರಿನ ಆಶ್ರಮದ ಅಚ್ಯುತರಿಂದ ಹೇಳಿಸುವ ಕೆಲವು ಮಾತುಗಳು ಗಮನಾರ್ಹ. “ ಬಂಧನಗಳಿಂದಲೇ ಶೋಕ “ “ ಬದುಕಬೇಕು ಎಂಬ ಆಸೆ ಅತ್ಯಂತ ಪ್ರಭಲವಾದ ಬಂಧನ. ಹಾಗಂತ ಬದುಕಬೇಕು ಎಂಬ ಆಸೆಯನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದು ಬಂಧಮುಕ್ತನಾದಂತಲ್ಲ. “ ಬಂಧನಗಳಿಂದ ಬಿಡಿಸ್ಕೊಬೇಕು ಹೊರತು ಬದುಕಿನಿಂದಲ್ಲ, ಈ ಬದುಕು ಒಂದು ಅಮೂಲ್ಯವಾದ ಅವಕಾಶ “ ಎನ್ನುತ್ತಾರೆ ಅಚ್ಯುತ. ಅಧ್ಯಾತ್ಮ, ದಾರ್ಶನಿಕತೆ, ಅದ್ವೈತ ಎಲ್ಲವೂ ಮೇಳೈಸಿದ ಅವರ ಮಾತುಗಳು ಬದುಕಿನೆಡೆಗೆ ಹೊಸ ಹೊಳಹು ನೀಡುತ್ತದೆ.

ಬೇರೆಬೇರೆ ಜನಾಂಗಗಳಲ್ಲಿ, ಧರ್ಮಗಳಲ್ಲಿ, ರಿಲಿಜನ್ನುಗಳಲ್ಲಿ, ಜಾತಿಗಳಲ್ಲಿ, ಪಂಗಡಗಳಲ್ಲಿ ಸಾವನ್ನು ಬೇರೆಬೇರೆ ರೀತಿಯಲ್ಲಿ ಪರಿಗಣಿಸುತ್ತಾರಾದರೂ ಹಿಂದೂ ನಂಬಿಕೆಗಳಲ್ಲಿ ಸಾವು ಎಂಬುದು ಅಂತಿಮವಲ್ಲ. ಪುನರ್ಜನ್ಮದಲ್ಲಿ ನಂಬಿಕೆ ಇರುವ ಹಿಂದೂಗಳು ಭಗವದ್ಗೀತೆಯಲ್ಲಿ ಭಗವಂತ ವರ್ಣಿಸಿದ
“ ವಾಸಾಂನಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋsಪರಾಣಿ |
ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ ||೨೨|| “
ಅಂದರೆ
“ ಹೇಗೆ ಮನುಷ್ಯನು ಹಳೆಯದಾದ ವಸ್ತ್ರಗಳನ್ನು ತ್ಯಾಗಮಾಡಿ ಬೇರೆಯ, ಹೊಸದಾದ ವಸ್ತ್ರಗಳನ್ನು ಧರಿಸುತ್ತಾನೋ, ಹಾಗೆಯೇ ಜೀವಾತ್ಮನು ಹಳೆಯದಾದ ಶರೀರಗಳನ್ನು ತ್ಯಾಗಮಾಡಿ ಬೇರೆಯಾದ ಹೊಸ ಶರೀರಗಳನ್ನು ಪಡೆಯುತ್ತಾನೆ. ||೨೨|| “
ಎಂಬ ಮಾತುಗಳನ್ನು ನಂಬುತ್ತಾರೆ.

“ ಸಾವು ಎಂಬ: ಎಂದಿಗೂ ಅರ್ಥೈಸಲಾಗದ, ಸಮ್ಮಿಶ್ರ ಭಾವಗಳನ್ನು ಉದ್ದೀಪಿಸುವ, ಸರ್ವೇಸಾಮಾನ್ಯವಾದರೂ ದಿಗ್ಭ್ರಾಂತಿಗೊಳಿಸುವ, ನೈಸರ್ಗಿಕ ಘಟನೆಯ ಬಗ್ಗೆ ಕಾದಂಬರಿಯು ಸುತ್ತಿದ್ದರೂ, ಓದಿ ಪುಸ್ತಕವನ್ನು ಮುಚ್ಚಿಟ್ಟ ಮೇಲೆ ನಿರ್ಲಿಪ್ತ ಭಾವವೊಂದು ಆವರಿಸಬೇಕೆಂಬುದು ನನ್ನ ಸುಪ್ತ ಬಯಕೆಯಾಗಿರಬೇಕು. “ ಎಂದು ಲೇಖಕರೇ ಒಂದು ಕಡೆ ಹೇಳುತ್ತಾರೆ.
ನಿಜ.. ಕಾದಂಬರಿಯನ್ನು ಓದಿ ಪಕ್ಕಕ್ಕಿಟ್ಟ ಮೇಲೆ, ಕಾದಂಬರಿಯಲ್ಲೇ ಬರುವ,
“ ಕಾರಣಗಳಿಗಾಗಿ ಹುಡುಕಾಡಿ ಒದ್ದಾಡೋದ್ರಿಂದ್ಲೇ ಮನಸ್ಸಿಗೆ ದುಃಖ ಆಗೋದು. ಪರಿಸ್ಥಿತಿ ನಮ್ಮ ಕಂಟ್ರೋಲಿನಲ್ಲಿ ಇರ್ಬೇಕು ಅಂತ ತಿಣುಕಾಡೋದ್ರಿಂದ್ಲೇ ಎಲ್ಲಾ ಪ್ರಾಬ್ಲಮ್ಮು. ಅದರಿಂದಲೇ ನೂರಾರು ಥಿಯರಿಗಳು... ಒಂದೂ ನೆಮ್ಮದಿ ಕೊಡೋಲ್ಲ. ಎಲ್ಲಾ ಬಿಟ್ಟಾಕ್ಬೇಕು.. ಆಗ್ಲೇ ನೆಮ್ಮದಿ “ ಎಂಬ ಸಾಲುಗಳು ಒಮ್ಮೆ ನಮ್ಮನ್ನಾವರಿಸಿ ಉಳಿದೆಲ್ಲವನ್ನು ಮರೆಸುತ್ತವೆ.

ಮನೋರೋಗಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಲೇಖಕರು ತಮ್ಮ ವೃತ್ತಿಯ ಮತ್ತು ಅಧ್ಯಯನದ ಅನುಭವವನ್ನು ಈ ಕಾದಂಬರಿಗೆ ಧಾರೆ ಎರೆದಿದ್ದಾರೆ. ಹಾಗಾಗಿ ಕನ್ನಡ ಸಾಹಿತ್ಯಕ್ಕೆ ಒಂದು ಉತ್ತಮ ಕೃತಿ ಲಭ್ಯವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಎಲ್ಲೂ ಬೇಸರ ಬಾರದಂತೆ, ಅತ್ಯಂತ ಸಹಜವಾಗಿ ಕಾಣುವಂತೆ ಪಾತ್ರಗಳನ್ನು ಹೆಣೆಯುವುದು ಸುಲಭವಲ್ಲ. ಮತ್ತು ನಾನು ಗಮನಿಸಿದಂತೆ, ಅಲ್ಲಲ್ಲಿ ಲೇಖಕರು ನೀಡುವ ಉಪಮೆಗಳು ಕಾದಂಬರಿಗೆ ಬಹಳ ಸೊಗಸಾಗಿ ಸೇರಿಕೊಳ್ಳುತ್ತವೆ ಕೂಡಾ..! ಕಾದಂಬರಿಯಾಗಿ ಓದುವವರು, ಅಧ್ಯಯನಕ್ಕಾಗಿ ಓದುವ ಓದುಗರು ಎಲ್ಲರಿಗೂ ಉಪಯುಕ್ತವಾಗುವ, ಕೃತಿ ಇದು. ಧನ್ಯವಾದಗಳು ಡಾಕ್ಟ್ರೇ..
==========================
ಕಾದಂಬರಿಯ ಬಗ್ಗೆ ನನ್ನದು ಒಂದೇ ಒಂದು ದೂರು ಇದೆ. ಕೆಲವು ಕಡೆ ಕಂಡುಬರುವ ಮುದ್ರಣದೋಷ ಆಗಾಗ ಕಿರಿಕಿರಿಯನ್ನುಂಟು ಮಾಡುತ್ತದೆ. ಲೇಖಕರ ಈ ಕಾದಂಬರಿ ಇನ್ನೂ ಹಲವು ಮುದ್ರಣಗಳನ್ನು ಕಾಣಲಿ. ಆಗ ಅವುಗಳನ್ನು ಸರಿಪಡಿಸಿಕೊಳ್ಳಲಿ ಎಂದು ಆಶಿಸುತ್ತೇನೆ.
==========================
ಪುಸ್ತಕ : ಸುಪ್ತ
ಲೇಖಕರು : ಡಾ.ಕೆ.ಬಿ.ಶ್ರೀಧರ್
ಪ್ರಕಟಣೆ : ಅಭಿರುಚಿ ಪ್ರಕಾಶನ. ಮೈಸೂರು.(2019)
ಬೆಲೆ : 175 ರೂಪಾಯಿಗಳು
ಪುಟಗಳು : 200
ಲಭ್ಯತೆ : ಅಭಿರುಚಿ ಪ್ರಕಾಶನ ಮೈಸೂರು. 9980560013

'ಸುಪ್ತ' ಕಾದಂಬರಿ ಪ್ರಜೋದಯ ಪ್ರಕಾಶನದಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಕೊಂಡಿ ಒತ್ತಬಹುದು....
https://imojo.in/1ui2knh
==========================
ಹಿರಿಯ ಲೇಖಕರಾದ ಶ್ರೀ ವಸುಧೇಂದ್ರ ಅವರು ಪುಸ್ತಕದ ಬಗ್ಗೆ ಬರೆದ ಕಿರುವಿಮರ್ಶೆ ಇಲ್ಲಿದೆ ನೋಡಿ..
https://m.facebook.com/story.php?stor...

ಮೊತ್ತೊಬ್ಬ ಲೇಖಕರಾದ ಶ್ರೀ ವಿಠ್ಠಲ ಶಣೈ ಅವರು ಪುಸ್ತಕದ ಬಗ್ಗೆ ಬರೆದ ಕಿರುವಿಮರ್ಶೆ ಇಲ್ಲಿದೆ.
https://m.facebook.com/story.php?stor...
ಪ್ರಗಾಢ ಓದುಗ ಪ್ರಶಾಂತ್ ಭಟ್ರು ಈ ಪುಸ್ತಕದ ಬಗ್ಗೆ ಬರೆದ ಬರಹದ ಕೊಂಡಿ ಇಲ್ಲಿದೆ. ಓದಿ.
https://m.facebook.com/story.php?stor...

ಗುಡ್ ರೀಡ್ಸ್ ನಲ್ಲಿ ಪುಸ್ತಕದ ಬಗ್ಗೆ ವಿವರಕ್ಕಾಗಿ ..
https://www.goodreads.com/book/show/4...
==========================
@ಗೌತಮಾಯನ – Gouthamaayana
16/10/2019
https://www.facebook.com/gouthamaayana/
==========================

172 reviews20 followers
March 3, 2025
#ಅಕ್ಷರವಿಹಾರ_೨೦೨೫
ಕೃತಿ: ಸುಪ್ತ
ಲೇಖಕರು: ಡಾ. ಕೆ.ಬಿ.ಶ್ರೀಧರ್
ಪ್ರಕಾಶಕರು: ಅಭಿರುಚಿ ಪ್ರಕಾಶನ, ಮೈಸೂರು
ಬೆಲೆ: 175
ಪುಟಗಳು: ೧೯೦

ಸೃಜನಶೀಲತೆ, ವಿಷಯ ಜ್ಞಾನ ಮತ್ತು ಭಾಷೆಯ ಮೇಲೆ ಸ್ವಲ್ಪ ಹಿಡಿತವಿದ್ದರೆ ಎಷ್ಟೇ ಕಠಿಣವಾದ ವಿಚಾರವನ್ನು ಸಹ ಓದುಗನಿಗೆ ಸುಲಭವಾಗಿ ದಾಟಿಸಬಹುದು ಎನ್ನುವುದಕ್ಕೆ ಈ ಕೃತಿಯು ಸಾಕ್ಷಿಯಾಗಿ ನಿಲ್ಲುತ್ತದೆ. ಕೃತಿಯ ಲೇಖಕರು ಮೂಲತಃ ಮನೋವೈದ್ಯರಾಗಿದ್ದು ಕಾದಂಬರಿಯಲ್ಲಿ ಪ್ರಸ್ತಾಪವಾಗುವ ಸಾವು ಮತ್ತು ಅದರ ಸುತ್ತಲಿನ ಬದುಕು,ಮನಸ್ಸಿನ ಚಿತ್ರವಿಚಿತ್ರ ತಲ್ಲಣಗಳಿಗೆ ಕಾರಣೀಭೂತವಾಗಬಹುದಾದಂತಹ ಅಂಶಗಳನ್ನು ಬಹು ಸೊಗಸಾಗಿ,ಸರಳವಾಗಿ ಚಿತ್ರಿಸಿದ್ದಾರೆ. ಇಲ್ಲಿ ಮನಸ್ಸಿನ ಆಲೋಚನೆಗಳನ್ನು,ವಿಚಾರಲಹರಿಗಳನ್ನು ಮತ್ತು ಮನಸ್ಸಿನ ತುಮುಲಗಳನ್ನು ವಿವರಿಸುವಾಗ ಬಳಸಿದಂತಹ ರೂಪಕಗಳು ಇಡೀ ಕಾದಂಬರಿಯ ಸೊಗಡನ್ನು ಹೆಚ್ಚಿಸಿವೆ.

ಕತೆಯು ಗಿರೀಶ ಮತ್ತು ಅವಿನಾಶ ಎಂಬ ಇಬ್ಬರು ಗೆಳೆಯರ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತ ಗಿರಕಿ ಹೊಡೆಯುತ್ತದೆ. ಅವಿನಾಶ ಕೆಲವು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡ ಸಾವಿನ ದುಃಖದ ಜೊತೆಗೆ ಆ ನಂತರ ಎದುರಾದ ಬದುಕಿನ ಸವಾಲುಗಳನ್ನು ಎದುರಿಸಿ ಒಂದು ತರಹದ ಗಂಭೀರತೆಯನ್ನು ಬೆಳೆಸಿಕೊಂಡಂತಹ ವ್ಯಕ್ತಿ. ಆದರೆ ಆ ಸಾವು ತೋರಿಸಿದ ಬದುಕಿನ ಕರಾಳತೆಯಿಂದ ಅವನು ಪೂರ್ತಿಯಾಗಿ ಬಿಡಿಸಿಕೊಂಡಿಲ್ಲ. ಸುಪ್ತ ಮನಸ್ಸಿನೊಳಗೆ ಮಡುಗಟ್ಟಿರುವ ಆ ನೋವು ಆಗಾಗ ಹೊರಬಂದು ಅವನನ್ನು ಜರ್ಜರಿತಗೊಳಿಸುತ್ತವೆ. ಇವನ ವ್ಯಕ್ತಿತ್ವದ ತದ್ವಿರುದ್ಧವಾಗಿ ಗಿರೀಶನ ವ್ಯಕ್ತಿತ್ವ. ತನಗೆ ಮಾರಣಾಂತಿಕ ಖಾಯಿಲೆ ಇದ್ದರೂ ಅದರ ಬಗ್ಗೆ ಒಂದು ಬಗೆಯ ಅಸ���್ಡೆಯ ಮನೋಭಾವ, ಎಲ್ಲವೂ ಅವನ ಬಳಕೆಯ ನಂತರದಲ್ಲಿ ಬಿಸಾಕುವಂತಹವುಗಳು, ಅದು ಹೆತ್ತವರು, ಬಂಧುಬಳಗ ಅಥವಾ ಸ್ನೇಹಿತರು ಯಾರಾದರೂ ಸರಿ. ಇವೆಲ್ಲಕ್ಕೂ ಕಲಶವಿಟ್ಟಂತೆ ಅವನ ಉಡಾಫೆಯ ಸ್ವಭಾವ.

ಗಿರೀಶನಿಗೆ ಮಾರಣಾಂತಿಕ ಕಾಯಿಲೆಯಾಗಿದೆ ಎಂದು ಗೊತ್ತಾದಾಗ ಅವಿನಾಶನ ವ್ಯಕ್ತಿತ್ವದ ಅಗೋಚರ ಮುಖಗಳು ಅವನಿಗೆ ಒಂದೊಂದಾಗಿ ಕಾಣಿಸಿಕೊಂಡು ಸ್ವತಃ ಮುಜುಗರಪಟ್ಟುಕೊಳ್ಳುವಂತಹ ಸನ್ನಿವೇಶಗಳನ್ನು ಎದುರಿಸುತ್ತಾನೆ. ಈ ಪ್ರತಿಕ್ರಿಯೆಗಳಿಗೆ ಗತಕಾಲದಲ್ಲಿ ನಡೆದ ಘಟನೆಗಳನ್ನು ತಳುಕು ಹಾಕುವ ಮನಸ್ಸಿನ ವಿಚಿತ್ರ ಪರಿಗೆ ಅವನು ಬೆರಗಾಗುತ್ತಾನೆ. ಎಂದೋ ನಡೆದಿದ್ದ ಕ್ಷುಲ್ಲಕ ಅಥವಾ ಗಂಭೀರ ವಿಚಾರಗಳು ಮನಸ್ಸಿನ ಪದರದಲ್ಲಿ ಗಟ್ಟಿಯಾಗಿ ಕೂತು, ಸರಿಯಾದ ಸಂದರ್ಭದಲ���ಲಿ ಹೊರಬಂದು ವ್ಯಕ್ತಿಯೋರ್ವನ ನಡವಳಿಕೆಗೆ ಪ್ರಚೋದನೆ ನೀಡುವಂತಹ ವಿಷಯ ಮನಸ್ಸಿನ ಸಂಕೀರ್ಣತೆಯನ್ನು ಓದುಗನಿಗೆ ಪರಿಚಯಿಸುತ್ತದೆ. ಇತ್ತ ಕಡೆ ಒಂದು ಬಾರಿ ತನ್ನ ಕಾಯಿಲೆಗೆ ಚಿಕಿತ್ಸೆಯನ್ನು ಪಡೆದು,ನಂತರ ಮತ್ತೆ ನಾಯಿಬಾಲ ಯಾವತ್ತಿಗೂ ಡೊಂಕು ಎನ್ನುವ ಗಾದೆಗೆ ಅನ್ವರ್ಥವಾಗಿ ಬದುಕುವ ಗಿರೀಶ ಮತ್ತೊಮ್ಮೆ ಕಾಯಿಲೆಯು ಉಲ್ಭಣಗೊಂಡು ಪರಿಸ್ಥಿತಿಯು ತನ್ನ ಹತೋಟಿಯನ್ನು ಮೀರುತ್ತಿದೆ ಎನ್ನುವಾಗ ಆತ್ಮಾವಲೋಕನ ಮಾಡಿಕೊಂಡು ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಅಧ್ಯಾತ್ಮದ ಕಡೆಗೆ ವಾಲುತ್ತಾನೆ.

ನನಗೆ ಇಲ್ಲಿ ಬಹು ಮುಖ್ಯವಾದ ವಿಚಾರವೊಂದು ಅನಿಸಿದ್ದು,“ಸಾವು” ಎನ್ನುವ ಪ್ರಕ್ರಿಯೆಗೆ ಸಾಮಾನ್ಯವಾಗಿ ಸ್ಪಂದಿಸುವ ಬಗೆ. ತನ್ನ ಆತ್ಮೀಯರ ಅಥವಾ ಪ್ರೀತಿಪಾತ್ರರ ಸಾವು ಬದುಕಿನ ಬಗೆಗಿನ ದೃಷ್ಟಿಕೋನವನ್ನು ಬದಲಿಸಿದರೆ, ನಮ್ಮ ಸಾವು ಕಣ್ಣೆದುರು ಗುರಾಯಿಸಿಕೊಂಡು ನಿಂತಿರುವಾಗ ವ್ಯಕ್ತಿಯು ಮಾಡಿಕೊಳ್ಳುವ ಸ್ವಯಂವಿಮರ್ಶೆ ಅತ್ಯಂತ ಪ್ರಾಮಾಣಿಕತೆಯಿಂದ ಕೂಡಿರುತ್ತದೆ ಎಂದು ನನ್ನ ಅನಿಸಿಕೆ. ಇನ್ನು ಲೇಖಕರು ಮಂಡಿಸಿದ ಅನೇಕ ವಿಚಾರಗಳು ನನಗೆ ಬಹಳ ಹಿಡಿಸಿದವು. ಉದಾಹರಣೆಗೆ ಒಂದು ಕಡೆಗೆ ಪಾತ್ರವೊಂದು ಹೇಳುವ ಮಾತನ್ನು ಗಮನಿಸಿ,“ಹುಟ್ಟು ಮತ್ತು ಸಾವಿಗೆ ಮಾತ್ರ ಸಂಬಂಧವಿದೆ, ಜೀವನಕ್ಕೆ ಮತ್ತು ಸಾವಿಗೆ ಯಾವುದೇ ಸಂಬಂಧವಿಲ್ಲ” ಮತ್ತು “ಸಾವು ಎಂಬುದು ಹುಟ್ಟಿನಷ್ಟೇ ಸಹಜವಾದ ಕ್ರಿಯೆ, ಸಾವು ನಮಗೆ ದುಃಖ ಕೊಡುವುದು ನಾವು ಮೋಹಕ್ಕೆ ಒಳಗಾದಾಗ ಮಾತ್ರ. ನಮ್ಮ ಮೋಹದ ಪರಿಧಿಯ ಹೊರಗಿನ ಸಾವು ನಮ್ಮನ್ನು ಕಂಗೆಡಿಸುವುದಿಲ್ಲ” ಮೇಲಿನ ಅರ್ಥ ಬರುವಂತಹ ಚಿಂತನೆಗಳು ಮತ್ತೆ ಮತ್ತೆ ಓದಿಸಿಕೊಂಡು ಮೆದುಳಿಗೆ ಸ್ವಲ್ಪ ಕೆಲಸವನ್ನು ಕೊಟ್ಟವು.

ಇಡೀ ಕಾದಂಬರಿಯಲ್ಲಿ ಸಿಕ್ಕಾಪಟ್ಟೆ ಕಾಗುಣಿತದ ತಪ್ಪುಗಳು ಓದುವ ಓಘವನ್ನು ನಿಧಾನಿಸಿದ್ದು ಬಿಟ್ಟರೆ ಬೇರೇನೂ ಕೊರತೆಗಳಿಲ್ಲದ ಕೃತಿ.

ನಮಸ್ಕಾರ,
ಅಮಿತ್ ಕಾಮತ್
Profile Image for Srikanth.
236 reviews
June 24, 2020
'ಸುಪ್ತ' ಒಂದು ಒಳ್ಳೆಯ ಕಾದಂಬರಿ. ಕಥಾವಸ್ತು ಇಬ್ಬರು ಸ್ನೇಹಿತರ ನಡುವೆ ನಡೆಯುವ ಮಾನಸಿಕ ತೊಳಲಾಟಗಳು. ಈ ಕಥೆಯನ್ನು ಓದುತ್ತಿದ್ದಂತೆ ನಮ್ಮ ಮನಸಿನ ಭಾವನೆಗಳನ್ನೂ ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಬೇರೆಯವರ ನ್ಯೂನತೆಗಳನ್ನು ಎತ್ತಿ ಹೇಳುವ ನಾವು, ನಮ್ಮದೇ ತಪ್ಪುಗಳನ್ನು ಅಷ್ಟಾಗಿ ಗಮನಿಸುವುದಿಲ್ಲ ಅನ್ನೋದನ್ನು ಲೇಖಕರು ತುಂಬಾ ಚೆನ್ನಾಗಿ ತೋರಿಸಿದ್ದಾರೆ.
Profile Image for Vidya Ramakrishna.
267 reviews18 followers
November 2, 2019
ಮನೋರೋಗ ತಜ್ಞರು ಸಾವಿನ ಬಗ್ಗೆ ಬರೆದ, ಉತ್ತಮ ಪುಸ್ತಕ ಎಂದು ಚರ್ಚಿತವಾದ 'ಸುಪ್ತ' ಓದುವಾಗ ಬಹಳ expectation ಇತ್ತು. ಯಾಕಂದ್ರೆ ಸಾವು ಎಲ್ಲರಲ್ಲೂ ಕುತೂಹಲ, ಭಯ ಹುಟ್ಟಿಸುವ ವಿಷಯ. 3 ವರ್ಷದ ಕೆಳಗೆ ನಮ್ಮಪ್ಪ ನಮ್ಮನ್ನು ಏಕಾಏಕಿ ಅಗಲಿದಾಗಲಿಂದ ಇನ್ನಷ್ಟು ನನ್ನ ಮನ ಆಕ್ರಮಿಸಿ ಹುಳುವಿನಂತೆ ಕೊರೆದ, ಕೊರೀತಿರೋ ವಿಷಯ.

ಮೊದಲ ಕೆಲವು ಪುಟಗಳು ಓದುವಾಗ ಸಂಭಾಷಣೆಯ ಭಾಷೆ, ಅಲ್ಲಲ್ಲಿ ನುಸುಳಿದಂತನಿಸಿದ ದೋಷ (ಅಥವಾ ಅದು ಆ ಆಡುಭಾಷೆಯ ಸೊಗಡೆ ಇರಬಹುದು) ಸ್ವಲ್ಪ ಕಿರಿ ಕಿರಿ ಮಾಡಿದವು. ಆದರೆ ನಂತರ ಒಮ್ಮೆ ಹಿಡಿತ ಸಿಕ್ಕಮೇಲೆ ಸಲೀಸಾಗಿ ಓದಿಸಿಕೊಂಡು ಹೋಗಿ, ಒಂದೇ ದಿನದಲ್ಲಿ ಪೂರ್ತಿ ಮುಗಿಸುವ ತನಕ ಸಮಾಧಾನ ಇರಲಿಲ್ಲ! ಕೊನೆಗೆ ಅನ್ನಿಸಿದ್ದು ಆ ತುಮಕೂರು ಸೊಗಡಿನ ಸಂಭಾಷಣಾ ರೂಪದಲ್ಲಿ ಮೂಡಿಬಂದಿರೋದರಿಂದಲೇ ಪುಸ್ತಕ ಬಹಳ ಆತ್ಮೀಯ; ಅವಿನಾಶ, ಗಿರೀಶ ನಮಗೆ ಬಹಳ ಹತ್ತಿರದವರು ಎನ್ನಿಸಿ ಮನಸೆಳೆಯಿತು ಅಂತ.

ಕೆಲವು ನಂಬಿಕೆಗಳಿಗೆ ತರ್ಕಬದ್ಧವಾದ ಆಧಾರ, ಉತ್ತರ ಹುಡುಕಲು ಸಾಧ್ಯವಿಲ್ಲ, ಜೀವನ ಪಯಣದಲ್ಲಿ ಕಡೆವರೆಗೆ ಜೊತೆಯಾಗಿರುತ್ತೀವಿ ಅಂದುಕೊಂಡ ದಂಪತಿಗಳಲ್ಲಿ, ಒಬ್ಬರು ಕಾಣದ ತೀರಕ್ಕೆ ಹಾದಿ ಮಧ್ಯದಲ್ಲೇ ಬಿಟ್ಟುಹೋದರೆ, ಒಬ್ಬಂಟಿಯಾಗಿ ಉಳಿದವರ ನಂಬಿಕೆಗಳನ್ನು ತರ್ಕದ ಭೂತಕನ್ನಡಿಯಲ್ಲಿ ನೋಡುವುದು ಕ್ರೌರ್ಯವಲ್ಲವೇ ಎನ್ನುವ ಅವಿನಾಶನ ತರ್ಕ ಬಹಳ ಹಿಡಿಸಿತು.
ಪ್ರಶ್ಮೆಗಳಿಗೆ ಉತ್ತರ ದೊರಕುವುದಕ್ಕಿಂತ ಪ್ರಶ್ನೆಗಳೇ ಕರಗಿಹೋಗುವ ಸ್ಥಿತಿಯಲ್ಲಿ ನಿಜವಾದ ಆನಂದ ಅಡಗಿರುವುದು ಅನ್ನೋ ಮಾತು ಚಿಂತಿಸಲು ಮತ್ತು ಆ ದಾರಿ ಹಿಡಿಯುವ ಪ್ರಯತ್ನ ಮಾಡಲು ಯೋಗ್ಯ ಅನ್ನಿಸಿತು.

ಇನ್ನು ಅಚ್ಯುತರ ಆಧ್ಯಾತ್ಮಿಕ ಮಾತುಗಳು (ಬಂಧನಗಳಿಂದಲೇ ಶೋಕ, ಬದುಕೋ ಆಸೆನು ಬಂಧನನೇ, ಬದುಕು ಅಮೂಲ್ಯ ಅವಕಾಶ, ಮೂಲಶಕ್ತಿಯ ಅಗಾಧತೆ, ವೈವಿಧ್ಯತೆ....ಹೀಗೆ ಇನ್ನೂ ಹಲವು ) ಓದಲು, ಕೇಳಲು ಚೆನ್ನಾಗಿದ್ದರೂ, ಗಿರಿಯ ಅನುಭವದ 'ಸಾವಿನ ಬಗ್ಗೆ ಎಷ್ಟೇ discuss ಮಾಡಿದ್ರೂ, ಎಷ್ಟೇ ಓದಿದ್ರೂ, ಅದು ನಿಜವಾದ experience ಆಗಿರಲು ಸಾಧ್ಯವಿಲ್ಲ ಅಲ್ವಾ..ಸಾಯೋ ಕ್ಷಣದಲ್ಲಿ ಅದ್ರ ಅನುಭವ ಗೊತ್ತಾದಾಗ ಅಲ್ಲಿವರಿಗೂ ಮಾತಾಡಿದ್ದೆಲ್ಲ ಟೊಳ್ಳು ಅನ್ಸುತ್ತೆ' ಅನ್ನುವ ಮಾತು ಮನಕ್ಕೆ ತುಂಬಾ ನಾಟುತ್ತೆ. ಅವರ ಗುರುಗಳು ಹೇಳಿದ ಹಾಗೆ ಅಲೌಕಿಕ ಜಗತ್ತು ಮಾತಿನ ಸಂಪತ್ತಲ್ಲ, ಮಾತನು ಮೀರಿದ, ಮನಸನ್ನು ದಾಟಿದ ಶೂನ್ಯ ಲೋಕವೇ ಇರಬಹುದೇನೋ. ಆ ಮನೋಸ್ಥಿತಿ ತಲುಪಲು ಎಲ್ಲರಿಗೂ ಸಾಧ್ಯವಿಲ್ಲದಿದ್ದರೂ, ಅಂಥವರ ಒಡನಾಟದಿಂದಲೇ ಮನಸ್ಸಿಗೆ ನೆಮ್ಮದಿ ಸಿಗುವುದು ಸತ್ಯವೇನೋ.

ಅವಿನಾಶನ ಆತ್ಮಾವಲೋಕನ ಬಹಳ ಚೆನ್ನಾಗಿತ್ತು, ನಮ್ಮ ನಡೆನುಡಿಗಳನ್ನ ಹೀಗೆ ವಿಮರ್ಶಿಸಿ ಆದಷ್ಟು ಬದಲಾವಣೆ ಮಾಡಿಕೊಂಡು ಬೇರೆ ಜೀವಕ್ಕೆ ನಾವು ಕೊಡುವ ನೋವು ಆದಷ್ಟು ಕಡಿಮೆ ಮಾಡುವುದು ಎಲ್ಲ ಮನುಷ್ಯರೂ ಅನುಸರಿಸಬಹುದಾದ ಮಾರ್ಗ. ಇದು ಪಾಪ, ಕರ್ಮಾದಿಗಳಂಥಹ ಮಾನವ ನೆಮ್ಮದಿಗಾಗಿ ಹುಡುಕಿದ ತತ್ವಗಳು, ಸಿದ್ಧಾಂತಗಳಲೆಲ್ಲಾ ತುಂಬಾ ಪರಿಣಾಮಕಾರಿ ಅನ್ನಿಸಿತು.

ಪರಿಸ್ಥಿತಿ ನಮ್ಮ ಕಂಟ್ರೋಲ್ ಅಲ್ಲಿ ಇರಬೇಕು ಅಂತ ಒದ್ದಾಡೋದ್ರಿಂದಲೇ ಮನಸ್ಸಿಗೆ ದುಃಖ, ಎಲ್ಲ problem. ನಮಗೆ ತಿಳಿದಿರೋದು ಬಹಳ ಅಲ್ಪ, ಜೀವನ ಅದಕ್ಕಿಂತ ಬಹಳ ವಿಶಾಲ ಎಂಬ ಅರಿವೇ ಸದ್ಯಕ್ಕೆ ನೆಮ್ಮದಿ, ಅದಕ್ಕೂ ದಾಟಿದ ಮುಂದಿನ ಮನೋಸ್ಥಿತಿ ತಲುಪುವವರೆಗೆ. ಇದು ನನ್ನ ಅನಿಸಿಕೆಯೂ ಆಗಿತ್ತು, ಅದನ್ನ ಈ ಪುಸ್ತಕ ಇನ್ನೂ ಬಲವಾಗಿ ಪುಷ್ಟೀಕರಿಸಿತು.

ಒಟ್ಟಿನಲ್ಲಿ ಸಾವು ಇಷ್ಟು ನಿಗೂಢವಾಗಿ ಇರೋದೇ ಜೀವನದ ಅಂದ. ಎಲ್ಲದಕ್ಕೂ ಉತ್ತರ ಸಿಕ್ಕಿದ್ರೆ ಬದುಕು ಇಷ್ಟು ಮೋಹಕವಾಗಿರುತ್ತಿರಲಿಲ್ಲ ಅನ್ನೋದನ್ನ ಡಾ.ಶ್ರೀಧರ್ ಅವರು ಬಹಳ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಅದಕ್ಕಾಗಿ ಬಹಳ ಅಭಿನಂದನೆಗಳು ಡಾಕ್ಟ್ರೇ.

ಒಂದು ಸಣ್ಣ observation - ಗಿರಿಯ ಪ್ರೇಯಸಿಯ ಹೆಸರು ಮೊದಲು ಅರ್ಚನಾ ಇದ್ದದ್ದು ಕೊನೆಯಲ್ಲಿ ಬರುವಾಗ ಅಂಜನ ಆಗಿದೆ :)
Displaying 1 - 5 of 5 reviews

Can't find what you're looking for?

Get help and learn more about the design.