ಪುರುಷ ಪ್ರಧಾನ ಸಮಾಜ ನಮ್ಮದು . ನಮ್ಮದು ಎಂದರೆ ? ಒಂದೇ ದೇಶಕ್ಕೆ ಸೀಮಿತವ ? ಒಂದೇ ಧರ್ಮಕ್ಕೆ ಸೀಮಿತವ? ಅಲ್ಲವೇ ಅಲ್ಲ . ಇಡೀ ಲೋಕ ಬಹುಪಾಲು ಪುರುಷ ಪ್ರಧಾನದ್ದೇ ಆಗಿದೆ .ಎಷ್ಟೋ ವಿಷಯಗಳಲ್ಲಿ, ಧರ್ಮಗಳಲ್ಲಿ , ಆಚರಣೆಗಳಲ್ಲಿ ಹೆಣ್ಣು ಮಕ್ಕಳಿಗೆ ಸಮನಾದ ಅವಕಾಶಕೊಡದೇ, ಅವಳ ಆಸೆ ಆಕಾಂಕ್ಷೆಗಳನ್ನು ಅದುಮಿಸಿಟ್ಟು, ಅವಳ ಭಾವನೆಗಳನ್ನೂ ಸಹ ವ್ಯಕ್ತಪಡಿಸಲು ಆಗದ ಸ್ಥಿತಿಗೆ ತಲುಪಿಸಿ, ಮೌನದಿಂದಲೆ ಎಲ್ಲವನ್ನೂ ಸಹಿಸಲು ಕಲಿಸಿ " ಗಟ್ಟಿಗಿತ್ತಿ " , " ದಯಾಮಯಿ" , "ಕ್ಷಮಯಾ ಧರಿತ್ರಿ" , " ತ್ಯಾಗಮಯಿ " , " ಸಹನಾಮೂರ್ತಿ " ಎಂಬೆಲ್ಲಾ ಹಣೆ ಪಟ್ಟಿ ಕೊಟ್ಟು ಅವಳ ಬಾಯಿ, ಕೈ - ಕಾಲು ಕಟ್ಟಿದ್ದು ಇದೆ ಪು(ಪೌ)ರುಷ ಸಮಾಜವೇ ಅಲ್ಲವೇ ?
ಇಂತಹ ಪುರುಷಪ್ರಧಾನದ ಬೆನ್ನೆಲುಬಾವುದು?
ಹೆಣ್ಣನ್ನು ಗಂಡಸಿನ ಮುಷ್ಟಿಯಲ್ಲಿಡುವ ಸಲುವಾಗಿ ಹೊಸದಾಗಿ ಸೃಷ್ಟಿಸಿ ತಂದ, ಯಾವುದೇ ಹುರುಳಿಲ್ಲದ ನಿಯಮಗಳಿಗೆ " ಧರ್ಮ ಪಾಲನೆ" ಎಂದು ನಾಮಕರಣ ಮಾಡಿ ಅದರ ಛಾಟಿ ಗಂಡಸಿನ ಕೈಗೆ ಕೊಟ್ಟಿದ್ದು.
ಧರ್ಮದಲ್ಲಿರುವ ಎಲ್ಲಾ ಆಚರಣೆ, ನಿಯಮಗಳನ್ನು ನಾನು ಹೀಗಳೆಯುತ್ತಲಿಲ್ಲ, ಆದರೆ ಹೆಣ್ಣನ್ನು ಜೀವವಿರುವ ಬೊಂಬೆಯಂತೆ " ಹೀಗೆ ಇರಬೇಕು ಹಾಗೆ ಇರಕೂಡದು , ಇದನ್ನ ಒಪ್ಪಲೇಬೇಕು ಪ್ರಶ್ನಿಸುವ ಹಕ್ಕಿಲ್ಲ" ಎಂದು ಒಂದು ಸಾವಿರ ಗಟ್ಟಲೆ ಷರತ್ತು ವಿಧಿಸಿ, ಗಂಡು ಏನು ಮಾಡಿದರೂ ನಡೆಯುತ್ತದೆ ಎಂಬ ತಾರತಮ್ಯಕ್ಕೆ ಮಾತ್ರ ನನ್ನ ಅಸಹನೆ, ಈ ತ್ರಿವಳಿ ತಲಾಖ್ ಎಂಬುದೂ ಸಹ ಆ ಪಟ್ಟಿಗೆ ಸೇರಿದ್ದು .
ಈಗಿನ ಕಾಲಕ್ಕೆ ಸಮವಾದ ಶಿಕ್ಷಣ , ಕೆಲಸ ಇತ್ಯಾದಿ ದೊರೆತಿರುವುದರಿಂದ ಸ್ವಲ್ಪ ಹೆಣ್ಣಿಗೂ ಮನ್ನಣೆ ದೊರೆತಿದೆ ಮತ್ತು ಹಲವು ಗಂಡಸರ ಆಲೋಚನೆಗಳೂ ಸಹ ಬದಲಾಗುತ್ತಿರುವ ಕಾಲಮಾನದಲ್ಲಿ ಹೆಣ್ಣು ಅಲ್ಪ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವ ಹಾಗಾಗಿದೆ. ಆದರೆ ಹೆಣ್ಣಿನ ಕಲಿಕೆ, ಜ್ಞಾನ ಸಂಪಾದನೆಯ ಹಕ್ಕನ್ನು ಕಸಿದು ಅವಳನ್ನು "ಅನಕ್ಷರಸ್ಥಳಾಗಿ" ಮಾಡಿದ ಕಾಲದಲ್ಲಿ ಅವಳ ಗತಿ?
ಹೆಣ್ಣಿನ ಅಸಹಾಯಕತೆ , ನೋವು , ತನ್ನವರ ಮೇಲಿನ ಒಲವು , ಸಂಕಟ , ಜ್ಞಾನದ ಕೊರತೆ, ಅಧೈರ್ಯ, ಪರವಾಲಂಬನೆ ಹಾಗೂ ಗಂಡಸರ ದ್ವೇಷ , ರೋಷ , ದುಡುಕುತನ, ಹೇಡಿತನ , ತಿಳಿ(ಯ)ದವರು ತಪ್ಪಾಗಿ ಗ್ರಹಿಸಿ, ರೂಪಿಸಿದ ಧರ್ಮ ವ್ಯವಸ್ಥೆ ಹೇಗೆ ಹೆಣ್ಣನ್ನು ಹಿಂಸಿಸುತ್ತದೆ ಎಂಬುದನ್ನು ಫಾತಿಮಾ , ನಾದಿರ, ಮುಹಮ್ಮದ್, ರಶೀದ್ ಪಾತ್ರಗಳ ಮುಖಾಂತರ ಕಟ್ಟಿಕೊಟ್ಟಿದ್ದಾರೆ ಲೇಖಕಿ .
ಒಮ್ಮೆ ಓದಲೇ ಬೇಕಾದ ಕೃತಿಯಿದು ಈಗ ತಲಾಖ್ ಪದ್ಧತಿ ಇಲ್ಲದೆ ಇದ್ದರೂ ಸಹ ಅದರಿಂದ ನೊಂದ ಮನಸ್ಸುಗಳ ಸ್ಮರಣೆ ಒಮ್ಮೆ ಆಗಲಿ .
- ಪುಸ್ತಕ_ಭೃತ