ಹೊಳೆಬಾಗಿಲು (ಸುಶ್ರುತ ದೊಡ್ಡೇರಿ) ಮತ್ತು ತೂಗುಮಂಚದಲ್ಲಿ ಕೂತು (ಶ್ರೀನಿಧಿ ಡಿ.ಎಸ್.)
ಯಾಕೋ ಗೊತ್ತಿಲ್ಲ. ಇವೆರಡನ್ನೂ ಓದುವಾಗ ಒಟ್ಟೊಟ್ಟಿಗೆ ಒಂದಾದ ಮೇಲೆ ಒಂದರಂತೆ ಓದುವ ಹುಕಿ ಬಂತು. ಇಬ್ಬರ ಬರಹಗಳೂ ಸಮುದ್ರದೆದುರು ಕಿನಾರೆಯಲ್ಲಿ ಕೂತಾಗ ಗಾಳಿ ನಮ್ಮೊಡನೆ ಪಿಸುಗುಟ್ಟಿದಂತಿರುವುದು ಇಸಕ್ಕೆಡ ಕಾರಣವಿರಬಹುದು!
ಎರಡೂ ಪುಸ್ತಕಗಳ ನಡುವಿನ ಅಂತರ ಹತ್ತು ವರ್ಷ.. ಹೊಳೆಬಾಗಿಲು ಹಳ್ಳಿಯಿಂದ ಬೆಂಗಳೂರೆಂಬ ಮಾಯಾನಗರಿ ಸೇರಿದ ಹುಡುಗನೊಬ್ಬನ ಆರಂಭದ ದಿನದ ಲಹರಿಗಳನ್ನ ಚೆನ್ನಾಗಿ ಹಿಡಿದಿಡುತ್ತದೆ. ರೂಮ್‌ಮೇಟುಗಳೊಂದಿಗೆ ಬ್ಯಾಚುಲರ್ ಜೀವನ, ಅಡಿಗೆಯ ಪ್ರಯೋಗಗಳು, ನಗರದ ಏಕಾಕಿತನ, ಪಟ್ಟಣಕ್ಕೆ ಅಮ್ಮನ ಭೇಟಿಯ ಅನುಭವ, ತನ್ನೂರಿನ ಅದರಲ್ಲೂ ಬಾಲ್ಯದ ಮೊಗೆ ಮೊಗೆದು ಬರುವ ನೆನಪು, ಒಂಚೂರು ಹಳೆ ಪ್ರೀತಿಯ ಕನವರಿಕೆ ಹೀಗೆ...
ತೂಗುಮಂಚದಲ್ಲಿ ಕೂತು ಇದೇ ಪಯಣದ ಮುಂದಿನ ಹಂತವನ್ನು ಚೆನ್ನಾಗಿ ಹೇಳುತ್ತದೆ. ಈಗ ಅದೇ ಬೆಂಗಳೂರಿಗೆ ಮೆಟ್ರೋ ಬಂದಿದೆ. ಕೆಲಸ ಹುಡುಕಿಕೊಂಡು ಬಂದ ಹುಡುಗ ಈಗ ಗೃಹಸ್ಥ ಮತ್ತು ಮಗಳ ಅಪ್ಪ (ಇವೆರಡೂ ಪುಸ್ತಕಗಳ ಲೇಖಕರೂ ಓದುಗನಾದ ನಾನೂ ಮಗಳಂದಿರನ್ನೇ ಪಡೆದದ್ದು ಮತ್ತು ನಮ್ಮೆಲ್ಲರನ್ನೂ ತಮ್ಮ ಕಿರುಬೆರಳ ಸನ್ನೆಯಲ್ಲಿ ಮಖಾಡೆ ಮಲಗಿಸುವ ತಾಕತ್ತು ಅವರಿಗಿರುವುದು ಕಾಕತಾಳೀಯವಾದ ಸತ್ಯ!) ಇಲ್ಲಿಯೂ ಬೆಂಗಳೂರಿನ ಅಪರಿಚಿತತೆ, ಬಂದು ಇಷ್ಟು ವರ್ಷವಾದರೂ ಮರಳಿದಾಗಲೆಲ್ಲ ಆಹ್ಲಾದ ಭಾವ ತುಂಬುವ ಊರಿನ ನೆನಪು ಪಡಿಮೂಡಿದೆ.ಇಲ್ಲೀಗ ವೃತ್ತಿಯ ಬಗೆಗಿನ ಅನುಭವಗಳಿಗೂ ಜಾಗವಿದೆ.
ನನಗಂತೂ ಈ ಬರಹಗಳು ಖೋ ಕೊಟ್ಟು ಬರೆದ ಹಾಗೆ, ಮುಂದುವರೆಸಿದ ರೀತಿ ಅನಿಸಿತು. ನಗರ ಬೆಳೆದಿದೆ. ಉದ್ಯೋಗ ನಿಮಿತ್ತ ವಲಸೆ ಮುಂದುವರೆದಿದೆ. ಆದರೆ ಭಾವಕೋಶದಲ್ಲಿ ಈಗಲೂ ಅಮ್ಮ,ಅಪ್ಪ,ಹುಟ್ಟಿದೂರು ಎಲ್ಲವೂ ಹಾಗೇ ಇದೆಯಲ್ಲವೇ? ಇದು ನಮಗೂ ನಿಮಗೂ ಅಷ್ಟೇ!