ಮಯೂರ
ದೇವುಡು
ಮೊದಲ ಮುದ್ರಣ:1930
ಬೆಲೆ:130
ಕದಂಬ ವಂಶದ ಮಯೂರವರ್ಮನು ಕರ್ನಾಟಕ ಸಾಮ್ರಾಜ್ಯವನ್ನು ಕಟ್ಟಿದ ಬಗೆ ಈ ಕಾದಂಬರಿಯಲ್ಲಿ ಚಿತ್ರಿತವಾಗಿದೆ.
ಭಾಗ-೧
ಕಥೆ ಶುರುವಾಗುವುದು ಗರಡಿಯಲ್ಲಿ ಒಬ್ಬ ಹುಡುಗನು ಹಿರಿಯ ಜಟ್ಟಿಯ ಮಗನನ್ನು ಗೆದ್ದು ಜಟ್ಟಿಯಿಂದ ಭೇಷ್ ಅನ್ನಿಸಿಕೊಂಡಿದ್ದನು, ಗರಡಿಯವರೆಲ್ಲರೂ ಹುಡುಗನನ್ನು ಭುಜಗಳ ಮೇಲೇರಿಸಿಕೊಂಡು ಮೆರೆದುಬಿಟ್ಟರು, ಆ ಹುಡುಗನಿಗೆ ವೇದದ ಓದಿಗಿಂತಲೂ ಗರಡಿ ಮಾಡುವುದರಲ್ಲಿ ಹೆಚ್ಚು ಆಸಕ್ತಿಯಿದ್ದಿತು. ಒಮ್ಮೆ ಅರಸುಮಕ್ಕಳು ಕುದುರೆ ಸವಾರಿಯ ವರಸೆಯನ್ನು ಕಲಿಯುತ್ತಿದ್ದರು, ಸುತ್ತಲೂ ಭಟ್ಟರ ಕಾವಲಿದ್ದಿತು, ಅದೇ ಸಮಯದಲ್ಲಿ ಒಬ್ಬ ಹುಡುಗನು ಆಕಸ್ಮಿಕವಾಗಿ ಬಂದಿದ್ದನು, ಇದನ್ನು ಗಮನಿಸಿದ ಅರಸನ ಕಿರಿಯ ಮಗ ವಿಷ್ಣುಗೋಪನು ಆ ಹುಡುಗನ ಮೇಲೆ ಆಕ್ರಮಣ ಮಾಡಲು ಹೋದಾಗ ಆತನಿಂದ ಪೆಟ್ಟು ತಿಂದನು, ಕ್ರೋಧಗೊಂಡ ವಿಷ್ಣುಗೋಪನು ಆ ಹುಡುಗನ ಜೊತೆ ಕತ್ತಿವರಸೆಯಲ್ಲಿ ನಿರತನಾಗಿ ಅದರಲ್ಲೂ ಸೋತು ಎಲ್ಲರ ಸಮ್ಮುಖದಲ್ಲಿ ಅವಮಾನಿತಗೊಂಡನು ಹಾಗು ಆ ಹುಡುಗನು ವಿಷ್ಣುಗೋಪನ ಕುದುರೆಯ ಮೇಲೆ ಚಂಗನೆ ಹಾರಿ ಪರಾರಿಯಾದನು. ಅವಮಾನಿತಗೊಂಡ ವಿಷ್ಣುಗೋಪನು ಆ ಹುಡುಗನನ್ನು ಹಿಡಿಯಲು ಆಜ್ಞೆ ಮಾಡಿದನು. ಆದರೆ ರಂಗಾಜಟ್ಟಿಯ ಸಹಾಯದಿಂದ ಆ ಕೋಟೆಯಿಂದ ಆ ಹುಡುಗನು ಅಷ್ಟರಲ್ಲೇ ಪಾರಾಗಿದ್ದನು.
ನಂತರ ಆ ಹುಡುಗನಿಗೆ ಬೈರಾಗಿಯ ಭೇಟಿಯಾಗುತ್ತದೆ, ಆತನ ಹೆಸರು ಷಡಾನನ, ಹುಡುಗನ ವಂಶದ ಬಗ್ಗೆ ಮೊದಲೇ ತಿಳಿದ ಷಡಾನನನು ಪಲ್ಲವರೊಡನೆ ಸಮಸಮವಾಗಿ ನಿಂತು ಹೋರಾಡಿ ಅವರನ್ನು ಗೆಲ್ಲುವ ಆಕಾಂಕ್ಷೆಯನ್ನು ತಿಳಿಯುತ್ತಾನೆ. ಇತ್ತ ಪೆಟ್ಟು ತಿಂದ ವಿಷ್ಣುಗೋಪನು ಸಭೆಯಲ್ಲಿ ಅರಸನ ಮುಂದೆ ತಲೆ ತಗ್ಗಿಸಿ ನಿಂತಿದ್ದನು, ಅದೇ ಸಮಯದಲ್ಲಿ ಆ ಹುಡುಗನು ಬ್ರಾಹ್ಮಣನಲ್ಲವೆಂದು ಹಾಗು ತಾವು ವೈಜಯಂತಿಯನ್ನು ಹಿಡಿದಾಗ ಚಂದ್ರವರ್ಮನ ರಾಣಿ ಪುಷ್ಪಾವತಿಯೂ ಆಕೆಯ ಒಂದು ವರ್ಷ ಮಗುವೂ ಸಿಕ್ಕಿರಲಿಲ್ಲ, ಕೆಲವು ದಿನಗಳಾದ ಮೇಲೆ ಅವರಿಬ್ಬರೂ ಮೃತರಾದರೆಂದು ಪಲ್ಲವರಿಗೆ ಸುದ್ಧಿಬಂದಿತು, ಆದರೆ ಕಂಚಿಯಲ್ಲಿ ನಡೆದ ಘಟನೆಯಿಂದ ಆ ಹುಡುಗನೇ ಮಯೂರಶರ್ಮನೆಂದು ತಿಳಿದು ಬರುತ್ತದೆ, ಅಂದರೆ ಕದಂಬ ವಂಶದವನಾದ ಮಯೂರನು ಬದುಕಿರುವುದಾಗಿ ಇತ್ತ ಪಲ್ಲವರಿಗೆ ಧೃಡವಾಗುತ್ತದೆ. ಈ ಸುದ್ಧಿ ಊರಿನಲ್ಲೆಲ್ಲಾ ಹರಡುತ್ತದೆ, ಆ ಹುಡುಗ ಯಾರೂ ಅಲ್ಲ ಆತನು ಮಯೂರಶರ್ಮನೆಂದು, ರಂಗಾಜಟ್ಟಿಯ ಬಳಿಯಲ್ಲಿ ಗರಡಿಯ ವಿದ್ಯೆಯನ್ನು ಕಲಿಯುತ್ತಿದ್ದನೆಂದು, ಆತನು ತುಂಗಾತೀರದ ಅಗ್ರಹಾರದ ಈಶಭಟ್ಟರಲ್ಲಿ ಅಧ್ಯಯನ ಮಾಡುತ್ತಿದ್ದನೆಂಬುದು.
ಇತ್ತ ಮಯೂರನಿಗೆ ತನ್ನ ವಂಶದ ಬಗ್ಗೆ ಬೈರಾಗಿಯಿಂದ ಹಾಗು ಈಶಭಟ್ಟರಿಂದ ತಿಳಿಯುತ್ತದೆ,ಬನವಾಸಿಯ ಶಾತವಾಹನನಿಗೆ ಮಕ್ಕಳಿರಲಿಲ್ಲ, ರಾಜ್ಯಲಕ್ಷ್ಮಿಯು ಪಟ್ಟದಾನೆಯನ್ನು ಪೂಜಿಸಿ ಅದರ ಕೈಗೆ ಒಂದು ಪುಷ್ಪಮಾಲೆಯನ್ನು ಕೊಟ್ಟು ಆ ಮಾಲೆ ಯಾರ ಕೊರಳಿಗೆ ಆನೆ ಹಾಕುತ್ತದೊ ಆತನಿಗೆ ಪಟ್ಟಗಟ್ಟು ಎಂದು ಒಮ್ಮೆ ಆತನಿಗೊಂದು ಕನಸು ಬೀಳುತ್ತದೆ. ಆಗ ತಮ್ಮ ವಂಶದ ಮೂಲಪುರುಷನಾಗಿ ಬಂದವನೇ ತ್ರಿನೇತ್ರ ಕದಂಬ, ಗುರುತರಿಯದ ಪರದೇಶಿ ಅರಸನಾದುದಕ್ಕೆ ಅಂತಃಪುರದಲ್ಲಿ ಕೆಲವರಿಗೆ ಸಹಿಸಲಾಗಲಿಲ್ಲ, ಆತನನ್ನು ನಿರ್ಮೂಲ ಮಾಡಲು ಸರಿಯಾದ ಸಮಯಕ್ಕೆ ಕಾಯುತ್ತಿದ್ದರು. ಆದರೆ ಜ್ಯೋತಿಷ್ಯನು ಹೇಳಿದ ಪ್ರಕಾರ ತ್ರಿನೇತ್ರ ಕದಂಬ ವಂಶದ ಮೂರು ತಲೆಗಳವರೆಗೂ ಏನೂ ಮಾಡಲು ಸಾಧ್ಯವಿಲ್ಲ, ನಾಲ್ಕನೆ ತಲೆಗೆ ಹಗೆ ತೀರಿಸಿಕೊಳ್ಳಲಾಗುತ್ತದೆಂದು ತಿಳಿಯುತ್ತದೆ, ಈ ಮಧ್ಯೆ ಅವರು ಎಷ್ಚೇ ಪ್ರಯತ್ನಪಟ್ಟರೂ ಅವರನ್ನು ಕೊಲ್ಲಲು ಸಾಧ್ಯವಾಗಲಿಲ್ಲ, ನಾಲ್ಕನೆಯವನೆ ಚಂದ್ರವರ್ಮನು, ಆತನ ಪತ್ನಿ ಪುಷ್ಪಾವತಿಯು ಅವರಿಬ್ಬರ ಮಗನೇ ಮಯೂರನು. ಪುಷ್ಪಾವತಿಯನ್ನು ಕೊಲ್ಲಲು ನಾಗಶ್ರೀ ಪ್ರಯತ್ನಪಟ್ಟಳು ಆದರೆ ಸಾಧ್ಯವಾಗಲಿಲ್ಲ.
ಹೀಗೆ ಮಯೂರನಿಗೆ ತನ್ನ ವಂಶದಲ್ಲಿ ನಾಗಶ್ರೀ ಎಂಬುವಳು ಚಂದ್ರವರ್ಮನನ್ನು ಕೊಲ್ಲಿಸಿದ್ದಳು ಆ ಸಮಯದಲ್ಲಿ ತನ್ನ ತಾಯಿ ಪುಷ್ಪಾವತಿಯು ಹೇಗೋ ತಪ್ಪಿಸಿಕೊಂಡು ಹೋಗಿ ತನ್ನನ್ನು ಕಾಪಾಡಿದ್ದಳು, ನಂತರ ತನ್ನ ತಾಯಿಗೆ ಆಶ್ರಯಕೊಟ್ಟುದ್ದು ಈಶಭಟ್ಟರು, ತನ್ನ ತಾಯಿ ಇನ್ನು ಹೆಚ್ಚು ದಿನ ಉಳಿಯಲಾರನೆಂದು ತಿಳಿದು ಮಗುವನ್ನು ಕಾಪಾಡಿ ದೊಡ್ಡದು ಮಾಡಿ ಪ್ರಭುವಿನ ಮನೆಯನ್ನು ಬೆಳಕುಮಾಡಿ ಎಂದು ಕೇಳಿಕೊಂಡಾಗ ತನ್ನನ್ನು ಕಂಚಿಗೆ ಓದುವ ನೆಪದಿಂದ ಕಳುಹಿಸಿದುದು ಹಾಗು ಅಲ್ಲಿಯ ಕ್ಷತ್ರಿಯೋಚಿತವಾದ ವಿದ್ಯೆಯನ್ನು ಕಲಿಸಿದ ಉದ್ದೇಶ ಮಯೂರನಿಗೆ ತಿಳಿದಾಗ ತನ್ನ ತಂದೆಯ ಸ್ಥಾನದಲ್ಲಿದ್ದು ತನ್ನನ್ನು ಕಾಪಾಡಿ ಬೆಳಸಿ ವಿದ್ಯೆ ಕೊಟ್ಟ ಈಶಭಟ್ಟನನ್ನು ನೆನೆದು ಕಣ್ಣೀರು ಸುರಿಸುತ್ತಾನೆ. ಅವರಿಂದ ವಿದ್ಯಾಭ್ಯಾಸವನ್ನೂ ಪಡೆಯುತ್ತಾನೆ.
ಭಾಗ-೨
ಬನವಾಸಿಯಲ್ಲಿ ದೊಡ್ಡ ಹಬ್ಬ, ಸಾಮ್ರಾಟರ ವರ್ಧಂತಿ, ಪಟ್ಟಣವೆಲ್ಲವೂ ತಳಿರು ತೋರಣಗಳಿಂದ ಮೆರೆಯುತ್ತಿತ್ತು, ನಗರದ ನಡುವೆ ಭವ್ಯವಾದ ಮಹಾಮಾಂಡಲಿಕೇಶ್ವರನ ಅರಮನೆ ವೈಭವದಿಂದ ಮೆರೆಯುತ್ತಿತ್ತು. ಸಭೆಯಲ್ಲಿ ಸಾಮ್ರಾಟನ ಪ್ರತಿನಿಧಿ ದಂತಿವರ್ಮನು ಹಾಗು ಸಂಧಿವಿಗ್ರಹಿಯಾದ ಮಾಂಡಲಿಕ ನಂದಿವರ್ಮರು ಉಪಸ್ಥಿತರಿದ್ದರು. ಅದರಲ್ಲಿ ದಂತಿವರ್ಮನಿಗೆ ನೀಲಕಂಠ ಗುಪ್ತನೆಂದರೆ ಪಂಚಪ್ರಾಣ, ಉತ್ತರ ದೇಶದಿಂದ ಅಪಾರವಾದ ಐಶ್ವರ್ಯವನ್ನು ತೆಗೆದುಕೊಂಡು ಬನವಾಸಿಯಲ್ಲಿ ನೆಲಸುವುದಕ್ಕೆ ಬಂದಿರುವ ನೀಲಕಂಠಗುಪ್ತನು ತುಂಗಾ ನದಿಯ ಸಮೀಪ ಬೆಟ್ಟಗಳ ನಡುವೆ ಇದ್ದ ಚಿನ್ನದ ಗಣಿಗೆ ಸ್ವಾಮಿಯಾಗಿದ್ದನು. ಸಭೆಯಲ್ಲಿದ್ದಾಗ ಗುಪ್ತನು ಕಳುಹಿಸಿಕೊಟ್ಟಿದ್ದ ಉಡುಗೊರೆಗಳನ್ನು ಕಂಡು ಆತನ ಮೇಲೆ ಗೌರವ ಉಂಟಾಗುತ್ತದೆ, ಗುಪ್ತನನ್ನು ಕಂಡರೆ ಪ್ರಜೆಗಳಿಗೆ ಪ್ರೀತಿ, ದಂತಿವರ್ಮನಿಗೆ ಹತ್ತಿರವಾದವನೂ ಕೂಡ ಆದ್ದರಿಂದ ಗುಪ್ತನನ್ನು ಕಂಡರೆ ನಂದಿವರ್ಮನಿಗೆ ಅಷ್ಟಕಷ್ಟೆ. ನೀಲಕಂಠ ಗುಪ್ತನು ಬಂದನಂತರ ಬನವಾಸಿ ನಾಡಿನಲ್ಲಿ ಎಳೆಯ ಮಕ್ಕಳಿಗೆ ಹಾಲು ಕೊಡಲು ಕರುಹಟ್ಟಿಗಳಾಗಿವೆ, ನಲವತ್ತು ವೈದ್ಯಶಾಲೆ, ೨೪ ದೇವಸ್ಥಾನಗಳು, ಅಲ್ಲಿ ನಡೆಯುವ ಜಾತ್ರೆಗಳು ಇದರಿಂದ ಗುಪ್ತನು ಅಲ್ಲಿ ಹೆಸರುವಾಸಿಯಾಗಿದ್ದನು. ಗುಪ್ತನು ದಾನ ಧರ್ಮಗಳೆಂದು ಮಾಡುತ್ತಿರುವ ಕಾರ್ಯಗಳು ಸಿಂಹಾಸನವನ್ನು ಏರಲೆಂದು ಹಾಗು ಈತನೇ ಚಂದ್ರವರ್ಮನ ಮಗ ಮಯೂರನಿರಬೇಕೆಂಬ ಸಂಶಯ ನಂದಿವರ್ಮನಿಗೆ ಹುಟ್ಟುತ್ತದೆ. ಗುಪ್ತನನ್ನು ನಂದಿವರ್ಮನು ಪರೀಕ್ಷೆ ಮಾಡಿ ಸೋತಿದ್ದನು, ಉಂಗುರದ ಪರೀಕ್ಷೆ, ದೇವಾಲಯದ ಪರೀಕ್ಷೆ, ಖನಿಗಳನ್ನು ಹುಡುಕಿದುದು ಆದರೆ ಎಲ್ಲವೂ ವ್ಯರ್ಥವಾಯಿತು.
ಶ್ರೀಶೈಲದಲ್ಲಿ ನಿತ್ಯೋತ್ಸವ ನಡೆಯುವ ಸಮಯದಲ್ಲಿ ಮಾಂಡಲೀಕೇಶ್ವರರು ಬಂದಿದ್ದರು, ನಗರದ ಶ್ರೀಮಂತರು ಆತನ ದರ್ಶನ ಪಡೆಯಬೇಕೆಂದು ಕಾಯುತ್ತಿದ್ದರು, ಅದೇ ಸಮಯಕ್ಕೆ ಉತ್ತರ ದೇಶದ ದೊಂಬರು ಬಂದಿದ್ದರು, ಅವರು ಕಾಸು ಆಣೆಗಳಿಗೆ ಆಟವಾಡುವವರಲ್ಲ ಏನಿದ್ದರೂ ಶ್ರೀಮಂತರ ಆಶ್ರಯದಲ್ಲಿ ತಮ್ಮ ನೈಪುಣ್ಯವನ್ನು ತೋರಿಸುವುದು ಪದ್ಧತಿ. ಅದರಲ್ಲಿ ೨೫ ವರ್ಷದ ದೊಂಬರ ಗುಂಪಿನ ಯಜಮಾನನ ಮಾತುಕಥೆಗಳ ರೀತಿ ನೀತಿಯನ್ನು, ಕತ್ತಿವರಸೆಯನ್ನು, ಇನ್ನಿತರೆ ವಿದ್ಯೆಗಳನ್ನು ಕಂಡು ಅಲ್ಲಿ ನೆರದಿದ್ದ ವಿಷ್ಣುಗೋಪನು ಮೆಚ್ಚಿಕೊಂಡನು. ಸಮಯವನ್ನು ಕಾಯುತ್ತಿದ್ದ ದೊಂಬನು ವಿಷ್ಣುಗೋಪನನ್ನು ಅಪಹರಿಸಿಕೊಂಡು ಪರಾರಿಯಾದನು, ನಂತರ ವಿಷ್ಣುಗೋಪನು ಬಂಧಿತನಾಗಿರುವುದು ತಿಳಿದು ಅದಕ್ಕೆ ಕಾರಣ ಹಾಗು ನಿವಾರಣೆಯ ಉಪಾಯವನ್ನು ಯೋಚಿಸತೊಡಗಿದನು. ತನ್ನನ್ನು ಸೋಲಿಸಿ ಅಪಹರಿಸಬೇಕಾದರೆ ಯಾರಿಗೂ ಸಾಧ್ಯವಿಲ್ಲ, ಅಂದರೆ ಈ ದೊಂಬನು ಖಂಡಿತ ಮಯೂರನಿರಬೇಕೆಂದು ಧೃಡವಾಯಿತು. ವಿಷ್ಣುಗೋಪನನ್ನು ಹಿಡಿದ ನಂತರ ತನ್ನನ್ನು ಬಿಡಿಸಲು ಪಲ್ಲವರು ಬರುತ್ತಾರೆ, ಕಂಚಿಯ ಸೇನೆಯು ಕದಲುವುದು ಖಂಡಿತ, ಆ ಸಮಯಸಾಧಿಸಿ ಕಂಚಿಯನ್ನು ಬಡಗಲಿಂದ ನಾವು ಮುತ್ತುವುದು, ತೆಂಕಲಿಂದ ಚೋಳರೂ ಪಾಂಡ್ಯರೂ ಮುತ್ತುವರು, ಬನವಾಸಿಯನ್ನು ಲೀಲಾಜಾಲವಾಗಿ ಹಿಡಿಯಲು ಒಳ್ಳೆಯ ಅವಕಾಶವೆಂದು ಮಯೂರನು ಹಾಗು ಆತನ ಸೇನೆಯು ಸಂತಸಪಟ್ಟರು. ಮರುದಿನ ಮಹಾಮಾಂಡಲೀಕೇಶ್ವರನು ಓಡಿಹೋದುದು ಕೇಳಿ ಶ್ರೀಶೈಲದವರು ಬೇಸರಪಟ್ಟರು, ಆದರೆ ಶ್ರೀಶೈಲವನ್ನು ವಶಪಡಿಸಿಕೊಂಡ ಸಾಹಸಿಯಾದ ದೊಂಬನು ಉಚ್ಚ ಕುಲದ ರಾಜಪುತ್ರನು, ಬನವಾಸಿಯ ಹಿಂದಿನರಸರಾದ ಚಂದ್ರವರ್ಮರ ಮಗನೆಂದು ತಿಳಿದು ಪ್ರಜೆಗಳಿಗೆ ಸಂತೋಷವಾಯಿತು.
ಶ್ರೀಶೈಲವನ್ನು ಹಿಡಿದ ಮಯೂರನು ಪಲ್ಲವ ಸಾಮ್ರಾಜ್ಯವನ್ನೇ ಮುರಿದ ಹಾಗಾಯಿತು, ಸಾಮ್ರಾಜ್ಯಕ್ಕೆ ಮೂರು ಭಾರಿಯ ಕೇಂದ್ರಗಳು, ಪಶ್ಚಿಮದ ಬನವಾಸಿ, ಪೂರ್ವದ ಕಂಚಿ, ಉತ್ತರದ ಶ್ರೀಶೈಲವನ್ನು ಈ ಎಲ್ಲಾ ಕೇಂದ್ರಗಳನ್ನು ಮಯೂರನು ಗೆದ್ದನು . ಕೆಲವು ದಿನಗಳಾದನಂತರ ಬನವಾಸಿಯಲ್ಲಿ ಸಿಂಹಧ್ವಜ ಬಿದ್ದು ಕಪಿಧ್ವಜ ತಲೆಯತ್ತಿರುತ್ತದೆ, ಜನರಿಗೆ ಆಶ್ಚರ್ಯವಾಗುತ್ತದೆ. ಸೈನಿಕರ ಬಟ್ಟೆ ಬಣ್ಣ ಬದಲಾವಣೆಯಾಗಿರುತ್ತದೆ, ಪಲ್ಲವ ಸಾಮ್ರಾಟರೂ ಬದಲುಗೊಂಡಿದ್ದಾರೆ. ಸಭೆಯಲ್ಲಿ ಪಂಚಮಹಾ ಬಿರುದ ವಿರಾಜಿತಾ, ಬನವಾಸಿ ವಿಷಯ ಸಮುದ್ರರಾಕಾ ನಿಶಾನಾಥಾ, ಭೂಮಂಡಲ ಸಾಮ್ರಾಜ್ಯಚಕ್ರೇಶ್ವರಾ, ಮಹಾರಾಜಾ ಜಯಜಯ ಎಂಬ ಜಯಘೋಷವು ಕೇಳಿಬರುತ್ತದೆ. ಆಗ ಮಯೂರನು ಸಭೆಯಲ್ಲಿ ಮಾತನಾಡುತ್ತಾನೆ, ತನ್ನನ್ನು ಇಲ್ಲಿವರೆಗೂ ಅನೇಕರು ಚಂದ್ರವರ್ಮನ ಮಗನೆಂದು, ಇತರರು ತಾನೇ ನೀಲಕಂಠಗುಪ್ತನೆಂದು, ತಾನೇ ದೊಂಬರ ಯಜಮಾನನೆಂದು ತಿಳಿದಿದ್ದರು, ಶತ್ರು��ಳು ರಾಜ್ಯಾಪಹಾರ ಮಾಡಿದ ಮೇಲೆ ಗೋಪ್ಯವಾಗಿ ಬ್ರಾಹ್ಮಣ ವೇಷದಿಂದ ಕಾಲಯಾಪನ ಮಾಡುತ್ತಿದ್ದ ಮಯೂರನು ತಾನೇ, ರಾಜ್ಯದ ರಹಸ್ಯವನ್ನು ಕಾಪಾಡಿಕೊಂಡು ಇತರ ರಾಜರೊಡನೆ ಮೈತ್ರಿಯನ್ನು ಸಂಪಾದಿಸಿಕೊಂಡು ರಾಜ್ಯಕ್ಕಾಗಿ ಹಗಲಿರುಳೂ ಹೆಣಗುತ್ತಿದ್ದ ನೀಲಕಂಠಗುಪ್ತನೂ ತಾನೇ, ಶ್ರೀಶೈಲವನ್ನು ಸಾಧಿಸಿದ ದೊಂಬನೂ ತಾನೆ, ನಂತರ ಶ್ರೀಶೈಲ, ಕಂಚಿ, ಬನವಾಸಿ ಕೇಂದ್ರವನ್ನು ಗೆದ್ದು ಬಂದು ರಾಜನ ಸ್ಥಾನದಲ್ಲಿ ನಿಂತಿರುವನೂ ತಾನೇ ಎಂದು ಹೇಳಿದಾಗ ಪಲ್ಲವರನ್ನು ಸೋಲಿಸಿ ಶ್ರೀಶೈಲ, ಕಂಚಿ, ಬನವಾಸಿ ಕೇಂದ್ರಗಳಿಗೆ ಅಧಿಪತಿಯಾದ ಮಯೂರನನ್ನು ಕಂಡು ಜನರಿಗೆ ಸಂತೋಷವಾಗುತ್ತದೆ.
*ಕಾರ್ತಿಕೇಯ*