Jayanth Kaikini is an Indian poet, short stories author and a lyricist working in Kannada cinema. ಜಯಂತ ಗೌರೀಶ ಕಾಯ್ಕಿಣಿ(ಜನನ : ೨೪,ಜನವರಿ, ೧೯೫೫) ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಜಯಂತ್ ರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು.ಇಳಿಸಂಜೆಯ ಬಿಸಿಲು,ಬಿಸಿಲುಕೋಲು,ಪಾತರಗಿತ್ತಿ,ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ,ಮೆಲುದನಿಯ ವ್ಯಕ್ತಿತ್ವ ಅವರದು.[೩] ಸಾಹಿತ್ಯ ಪ್ರಕಾರಗಳ ಹಲವು ವಿಭಾಗಗಳಲ್ಲಿ, ಕವಿಯಾಗಿ, ಈಟಿವಿ ಕನ್ನಡ ವಾಹಿನಿಯಲ್ಲಿ ಸಂದರ್ಶಕನಾಗಿ, ಸಿನೆಮಾ ಹಾಡುಗಳ ಸಾಹಿತಿ,ಸಂಭಾಷಣೆಗಾರನಾಗಿ, ಅಂಕಣಕಾರ ನಾಗಿ, ನಾಟಕಕಾರನಾಗಿ, ಕಥೆಗಾರನಾಗಿ, ಮತ್ತು ಕನ್ನಡಿಗರ (ಸಾಗರದಾಚೆಗೂ ನೆಲೆ ನಿಂತಿರುವ ಕನ್ನಡಿಗರ) ಅಚ್ಚುಮೆಚ್ಚಿನ ಲೇಖಕರಾಗಿದ್ದಾರೆ.
ನಾನು ಬಾಲ್ಯ ಕಳೆದ ನಮ್ಮ ಮನೆಯಲ್ಲಿ ದೇವರ ಕೋಣೆಯಿದೆ. ಒಂದು ಸಲ ಕರೆಂಟು ಹೋದಾಗ ಏನನ್ನೋ ಹುಡುಕಲು ಟಾರ್ಚ್ ಹಾಕಿದವನಿಗೆ ಅಕಸ್ಮಾತ್ ಎಂಬಂತೆ ಅದರ ಮೂಲೆಯೊಂದು ಕಣ್ಣಿಗೆ ಬಿದ್ದು ,ಇಷ್ಟು ದಿನ ಈ ಕೋಣೆಯ ಈ ಭಾಗ ನೋಡೇ ಇಲ್ಲವಲ್ಲ ಅಂತ ಆಶ್ಚರ್ಯವಾಗಿತ್ತು. ಜಯಂತರ ಕತೆಗಳೇ ಹಾಗೇ. ನಾವು ಪ್ರಜ್ಞಾಪೂರ್ವಕವಾಗಿ ಭಾಗವಹಿಸದ ಕ್ರಿಯೆಗಳನ್ನೂ ಅವರ ಬರವಣಿಗೆ ಹೊಳೆಸುತ್ತದೆ. ಹಾಗಾಗಿ ನಮ್ಮ ಮುಂದೆ ಸಾಗಿ ಹೋಗುತ್ತಿರುವ ವ್ಯಕ್ತಿ ಜಯಂತರ ಬರವಣಿಗೆಯಲ್ಲಿ ಸಿದ್ಧನೋ ಎಂಬ ಅನುಮಾನ ಹುಟ್ಟಿಸುತ್ತಾನೆ. ಎರಡು ಅಂಶಗಳು ಇವರ ಕತೆಗಳಲ್ಲಿ ನನಗೆ ಅರಿವಿಗೆ ಬಂದದ್ದು. ಒಂದು ದಟ್ಟ ನಗರ ಪ್ರಜ್ಞೆ. ಎರಡು ಅಲ್ಲಿ ಕತೆಯ ಎಲ್ಲಾ ಪಾತ್ರಗಳಿಗೂ ಹೇಳದೆ ಉಳಿದ ಅವರದೇ ಕತೆಗಳಿರುತ್ತದೆ.ಬರಿಯ ಮುಖ್ಯ ಪಾತ್ರದ ಕಡೆ ಗಮನ ಕೇಂದ್ರೀಕರಿಸದೆ ವಾತಾವರಣವೂ ಪಾತ್ರವಾಗುವ ಬಗೆ. 'ಮಧುಬಾಲ' ಕತೆಯ ಈ ಸಾಲುಗಳ ಗಮನಿಸಿ. " ನಾವು ರಕ್ತಸಂಬಂಧ ಇತ್ಯಾದಿಗಳಿಂದ ಅನಾಥರಾಗುವುದಿಲ್ಲ ಜೂಲಿ..ಈ ಜಗತ್ತಿನಲ್ಲಿ ನಮ್ಮದೇ ಅಂತ ಒಂದು ಜಾಗ ಇರ್ತದೆ.ಯಾವುದೋ ನಿಗದಿತ ಬಸ್ಸು,ಯಾವುದೋ ನಮ್ಮದೇ ಸ್ಟಾಪು,ರೈಲ್ವೇ ಫ್ಲಾಟ್ಪಾರ್ಮನಲ್ಲಿ ನಾವು ನಿಲ್ಲೋ ನಮ್ಮದೇ ಮೂಲೆ,ನಮ್ಮದೇ ಮುರುಕು ಹಿಡಿಕೆಯ ಚಹಾ ಕಪ್ಪು, ಕೆಲವು ಸಲ ನಾವು ಮಾತಾಡಿರದ ಆದರೆ ನಿಯಮಿತವಾಗಿ ನೋಡುವ ವ್ಯಕ್ತಿಗಳೂ ಈ ಜಾಗದ್ದೇ ಭಾಗವಾಗಿರ್ತಾರೆ.ಈ ಜಾಗ ಕಳಕೊಂಡರೆ ಮಾತ್ರ ನಾವು ಖರೇ ತಬ್ಬಲಿಗಳು..' ಇಲ್ಲಿನ ಮಧುಬಾಲ,ಅಭಂಗ ಅಭಿಸಾರ(ಗೆಳೆಯರಿಬ್ಬರ ಬಗೆ),ನೀರು ,ಅಲ್ಪವಿರಾಮ(ಇದು ನನ್ನ ಮೆಚ್ಚಿನ ಕತೆ ಟಿವಿಯಲ್ಲಿ ಬರುವವಳು ಹೋದ ನಮ್ಮ ಬೇಬಿಯೇ ಅಂತ ನಂಬಿದ ಜೀವಗಳ ಕತೆ) ಜೀ,ಒಳಾಂಗಣ (ಶೂಟಿಂಗಿಗೆ ಮನೆ ಕೊಟ್ಟು ಅಪರಿಚಿತರಾಗುವ ಸನ್ನಿವೇಶ ಚೆನ್ನಾಗಿದೆ) ಇವೆಲ್ಲ ತಮ್ಮ ದಟ್ಟ ವಿವರಗಳಿಂದ ನಮ್ಮೊಳಗೆ ಬೆಳೆಯುತ್ತದೆ. ಚದುರಿದ ಚಿತ್ರಗಳಂತೆ ಭಾಸವಾಗುವ ಈ ಎಲ್ಲಾ ಕತೆಗಳ ಮುಂಬಯಿ ಎಂಬ ಶಹರದ ಕ್ಯಾನ್ವಾಸ್ ಮೇಲೆ ಇಟ್ಟು ನೋಡಿದರೆ ಪರಸ್ಪರ ಇವೆಲ್ಲ ಹೆಣೆದುಕೊಂಡಿರುವುದು ಗೋಚರಕ್ಕೆ ಬರುತ್ತದೆ. ಮುಖಪುಟ,ಚಿತ್ರಗಳು, ಭಾಷೆ, ಹೆಸರು ಎಲ್ಲದರಲ್ಲಿ ಪೂರ್ಣಾಂಕ ಕೊಡಬಹುದಾದ ಅಪರೂಪದ ಪುಸ್ತಕ. ಜಯಂತ್ ಕಾಯ್ಕಿಣಿ ಶೈಲಿ ಬಗ್ಗೆ ಮಾತುಂಟೇ? 'ವ್ಹಾ ಉಸ್ತಾದ್'
ಕಾಯ್ಕಿಣಿ ಯವರು ಪ್ರೇಮ ಕವಿ, ಅವರು ಪ್ರೀತಿ ಹುಡುಕದ ಜಾಗ ಇಲ್ಲ ಅನ್ನಿಸ್ತು. ಈ ಪುಸ್ತಕ ಅವರು ಅಂಚೆ ಕಚೇರಿಯಲ್ಲಿ ಬಟವಾಡೆಯಾಗದೆ ಉಳಿಯುವ ಅನಾಥ ಕಾಗದಗಳಿಗೆ ಅರ್ಪಿಸಿದ್ದಾರೆ.. ಇಂತಹ ಸಣ್ಣ ವಿಚಾರಗಳು ನಮ್ಮ ಗಮನಕ್ಕೆ ಬರದಿದ್ದತಹ ಬಹಳಷ್ಟು ವಿಚಾರಗಳು ಈ ಪುಸ್ತಕದಲ್ಲಿವೆ. ಗೆಳೆಯರ ಗಾಡ ಸ್ನೇಹದ ಕಥೆಯಿದೆ, ವಯಸ್ಕ ದಂಪತಿಗಳ ಪ್ರೇಮದ ಕಥೆಯಿದೆ, ಒಬ್ಬ ಪೈಂಟರ್ ಕಥೆಯಿದೆ. ಮುಂಬೈ ಮಳೆ ಮೇಲೆನೇ ಒಂದು ಕಥೆ ಇದೆ. ಪ್ರತಿಯೊಬ್ಬರಲ್ಲೂ ಹಾಗೂ ಪ್ರತಿಯೊಂದರಲ್ಲೂ ಕಥೆ ಹುಡುಕುವ ಜಯಂತ್ ಕಾಯ್ಕಿಣಿ ಇಷ್ಟ ಆಗ್ತಾರೆ . ಚಾರ್ಮಿನಾರ್ ಎಂಬ ಕಥೆ ಇಷ್ಟ ಆಯಿತು...