ಒಂದೇ ತರದ ಕಥೆಗಳನ್ನ ಓದಿ ಓದಿ ಏಕತಾನತೆ ಅನಿಸುವವರು ಈ ಕಥಾಸಂಕಲವನ್ನು ಖಂಡಿತಾ ಓದಬೇಕು..zara hatke se ಸ್ಟೋರಿ. ರಿಮ್ಯಾಂಡ್ ಹೋಂ ನಲ್ಲಿ ಕೆಲಸ ಮಾಡುವ ತಿತ್ಲಿ ಮತ್ತು ಭೋಸ್ಲೆಕಥೆ, ಬಟ್ಟೆ ಅಂಗಡಿಯಲ್ಲಿ ಗೊಂಬೆಗಳಿಗೆ ಬಟ್ಟೆ ತೊಡಿಸುವ ಮೂಗ ಖಲೀಲನ ಕಥೆ ಇರಬಹುದು...ಹಲಸಿನ ಹಣ್ಣನ್ನು ಅತಿಯಾಗಿ ಇಷ್ಟ ಪಡುವ ರೇಷ್ಮಾಳ ಕಥೆ ಇರಬಹುದು... ಶಶಿ ತರೀಕೆರೆಯವರ ತಿರಮಿಸು ಓದಿಯೇ ಇಷ್ಟಪಟ್ಟಿದ್ದೆ...ಇನ್ನೊಮ್ಮೆ ಅವರ ಬರಹ ಆಸ್ವಾದಿಸುವ ಸರದಿ ನನ್ನದು.... ಪಾತ್ರಗಳ ಹೆಸರು ಯಾಕೆ ಹಾಗೆ chose ಮಾಡಿದರೆ ಅಂತ ಅರ್ಥ ಆಗ್ಲಿಲ್ಲ ...ತಿತ್ಲಿ, ಡಾಮಗುಲಿ, ಪಿನ್ನಿಗುಳಿ, ಹಸ್ತಕ್ಷೇಪ, ಪಪಿತಾ...ಹೆಸರುಗಳು ನಂಗೆ ನೆನಪಿನಲ್ಲಿ ಉಳಿಯುವುದು ಕಷ್ಟ ಕಷ್ಟ ...
ವಿಶಿಷ್ಟ ಶೈಲಿಯ ಕಥೆಗಳು, ವಿಚಿತ್ರ ಹೆಸರುಗಳು, ವಿಭಿನ್ನ ಪಾತ್ರಗಳು ಇವುಗಳಿಂದ ಕತೆಗಳು ಸೊಗಸಾಗಿ ಮೂಡಿ ಬಂದಿದೆ. ಹೆಚ್ಚಿನ ಕತೆಗಳಲ್ಲಿ ಪಾತ್ರಗಳೇ ಪ್ರಧಾನವೆನಿಸಿ ಅವುಗಳ ಸುತ್ತ ಹೆಣಿದ ಸಹಜ ಕತೆಗಳಿನಿಸುತ್ತವೆ. ಜೀನಿ ಕತೆ ಇಷ್ಟವಾಯ್ತು. ಮತ್ತೆ ಮತ್ತೆ ಓದುವಂತಹ ಸಾಲುಗಳು ಇನ್ನೊಮೆ ಪುರುಸೊತ್ತಲ್ಲಿ ಪುಸ್ತಕ ಓದ ಬೇಕು ಅನಿಸುವಂತಿದೆ. ಕನ್ನಡದ ಭರವಸೆಯ ಲೇಖಕರಲ್ಲಿ ಒಬ್ಬರಾಗುವ ಎಲ್ಲ ಲಕ್ಷಣಗಳು ಈ ಲೇಖಕರಲ್ಲಿ ಇದೆ ಅನಿಸಿತು.
ಕಥೆಗಳು ಓದುವುದಕ್ಕೆ ಹೇಗಿರಬೇಕೆಂದು ಯೋಚಿಸಿದರೆ ಉತ್ತರ ಹೇಳಲು ಕಷ್ಟ!?, ಎಂತಹ ಕಥೆಗಳು ಇಷ್ಟ ಆಗುತ್ತವೆ ಎಂದು ಹೇಳಲು ಕಷ್ಟ!?. ಈ ಕೃತಿಯಲ್ಲಿರುವ ಕಥೆಗಳಲ್ಲಿ ಕೆಲವಕ್ಕೆ ಅಂತ್ಯವೇ ಇಲ್ಲ, ಯಾವ ಸಂದೇಶಗಳನ್ನು ನೀಡುವುದಿಲ್ಲ. ಇನ್ನು ಇಲ್ಲಿ ಇರುವ ಹೆಸರುಗಳನ್ನು ಕೇಳಿರುವವರು ಅಥವಾ ಓದಿರುವವರು ತುಂಬಾನೇ ಕಮ್ಮಿ. ಕೆಲವು ಕಥೆಗಳು ಬೇಗನೆ ಒಳಬಿಟ್ಟು ಕೊಳ್ಳುವುದಿಲ್ಲ ಹಾಗೇ ಓದಿಯಾದ ಮೇಲೆ ಬೇಗನೆ ಬಿಟ್ಟುಕೊಡುವುದಿಲ್ಲ. ಕೆಲವು ಪಾತ್ರಗಳಿಗೂ ಕಥೆಗೂ ಸಂಬಂಧವೇ ಇಲ್ಲ.
ಇಷ್ಟೆಲ್ಲಾ ಇಲ್ಲಗಳ ನಡುವೆಯೂ ಇಲ್ಲಿ ಕಥೆಗಳಿವೆ! ಅವುಗಳು ಓದುಗನಿಗೆ ದಕ್ಕಿದಷ್ಟು ಮಾತ್ರವೆ. ಖಂಡಿತ ಓದಬೇಕಾದಂತ ಉತ್ತಮ ಕಥಾಸಂಕಲನವಿದು.
ತುಂಬಾ ಹಿಡಿಸುವ ಕಥೆಗಳು. ಪಾತ್ರಗಳ ವಿಚಿತ್ರ ಹೆಸರುಗಳಿಂದ ನೆನಪಿನಲ್ಲಿ ಉಳಿಯುತ್ತವೆ. ಕೆಲವು ಹೆಸರುಗಳು ಹೀಗಿವೆ ಭುಜಕೀರ್ತಿ, ಧಾವಂತ,pinnuguli, ಪರ್ಚಂಡಿ, ನಾಕಾಣಿ.. ಎಲ್ಲೋ ಒಂದು ಕಡೆ ಕಾಯ್ಕಿಣಿ ಕಥೆಗಳು ನೆನಪಿಗೆ ಬರುತ್ತವೆ.. ಒಂದು ಒಳ್ಳೆಯ ಓದು..
ಕನ್ನಡದ ಶ್ರೇಷ್ಠ ಬರಹಗಾರರಾದ ತರಾಸು, ಕಾರಂತ, ಕುವೆಂಪು, ಮಾಸ್ತಿ, ಲಂಕೇಶ, ತೇಜಸ್ವಿ, ವಿವೇಕ ಶಾನಭಾಗ್, ಜಯಂತ್ ಕಾಯ್ಕಿಣಿ ಹೀಗೆ ಹಲವರು ತಮ್ಮ ಬರಹಗಳಲ್ಲಿ ಪದೇ ಪದೇ ಬಳಸುವ ಪದಗಳನ್ನೇ ಬಳಸುತ್ತಿರುತ್ತಾರೆ ಹಾಗಾಗಿ ಅವರನ್ನು ಅನುಕರಿಸುವುದು ತುಂಬಾ ಸುಲಭ ಎಂಬ ಒಂದು ಮಾತಿದೆ. ಕಥೆ ಬರೆಯುವುದು ಅಷ್ಟೆನು ಸುಲಭವಲ್ಲದಿದ್ದರೂ ಬರೆಯಲಾರದಷ್ಟು ಕಠಿಣವೆನಲ್ಲ ಈ ಕಥೆ ಬರೆಯುವುದು ಎಂಬ ಅಸಡ್ಡೆಯ ಮಾತೂ ಕಿವಿಗೆ ಬೀಳುತ್ತಿರುತ್ತದೆ. ಈ ಮಾತುಗಳು ಬಹುಶಃ ಯುವ ಬರಹಗಾರರಿಗೆ ಪರಿಣಾಮ ಬೀರದಿರಲಾರದು. ಆದರೂ ಈ ಎಲ್ಲ ಅಸಡ್ಡೆ ಮಾತೂಗಳನ್ನೂ ಮಿರಿ ಹಲವು ಬರಹಗಾರರು ತಮ್ಮ ವಿಶಿಷ್ಟ ಬರವಣಿಗೆಯಿಂದ ಗಮನ ಸೆಳೆಯುತ್ತಿದ್ದಾರೆ. ಅಂತಹ ಕೆಲವೇ ಕೆಲವು ಪುಸ್ತಕಗಳಲ್ಲಿ ನಾನು ಇತ್ತೀಚೆಗೆ ಓದಿ ಬಹುವಾಗಿ ಮೆಚ್ಚಿದ ಕೃತಿ ‘ಡುಮಿಂಗ’. ಈ ಕೃತಿ ಬರೆದಿದ್ದು ಛಂದ ಪುಸ್ತಕ ಸ್ಪರ್ಧೆಗಾಗಿದ್ದರಿಂದ ಈ ಪುಸ್ತಕಕ್ಕೆ ಮೊದಲ ಛಂದ ಪುಸ್ತಕ ಬಹುಮಾನವೂ ಲಭಿಸಿದೆ.
ಶಶಿ ತರೀಕೆರೆಯವರ ವಿಭಿನ್ನ ಬರವಣಿಗೆ ಯಾವ ಮತ್ತಿತರ ಬರಹಗಳಿಗೆ ಹೊಲಿಸಲಾಗದೆ ತನ್ನ ವಿಭಿನ್ನ ಕಥಾ ಭಾಷೆಯಿಂದಲೇ ಗಮನ ಸೆಳೆಯುತ್ತದೆ. ಮುದುಕನೊಬ್ಬನ “ಕಣ್ಣಿನ” ಮೂಲಕ ಯುವಕನೊಬ್ಬನು ಬರೆದ ಕಥೆಗಳು ಕನ್ನಡಕ್ಕೆ ಇಲ್ಲಿ ಸಿಕ್ಕಿವೆ ಎಂಬ ಲತಾ ಸಿದ್ಧಬಸವಯ್ಯರವರ ಮಾತಿನಂತೆ ಕಥೆಗಳು ಮುದುಕನ ವಿಶಿಷ್ಟ ಕಣ್ಣಿನಿಂದಲೇ ನೋಡಲಾದ ಕಥೆಗಳೆನ್ನಿಸುತ್ತವೆ. ಪುಸ್ತಕದ ‘ಡುಮಿಂಗ’ ಎಂಬ ಹೆಸರಿನಂತೆ ಕಥೆಗಳಲ್ಲಿ ಬಳಸಲಾದ ವಿಭಿನ್ನ ಹೆಸರುಗಳು ಆ ಪಾತ್ರದಷ್ಟೆ ವಿಚಿತ್ರವಾಗಿ ಕಂಡರೂ ಹತ್ತಿರವೆನ್ನಿಸುತ್ತವೆ. ಜೀನಿ, ಭುಜಕೀರ್ತಿ, ಧಾವಂತ, ಪಿಣ್ಣಿಗುಲಿ, ಪಪೀತಾ ಇವುಗಳು ಕಥೆಗಳಲ್ಲಿ ಬಳಸಲಾಗಿರುವ ಪಾತ್ರಗಳ ಹೆಸರುಗಳು.
ಕಥೆ ಬರೆಯುವ ವಿಧಾನ, ಸಂಭಾಷಣೆ, ಭಾಷೆ ಇವುಗಳು ಹೇಗೆ ಒಂದು ಕಥೆಗೆ ಪ್ರಮುಖವಾದ ಅಂಶಗಳಾಗುತ್ತವೆ ಎಂಬುದನ್ನು ಪ್ರತಿಯೊಂದು ಕಥೆಯು ತಿಳಿಸುತ್ತದೆ. ಅದಲ್ಲದೆ ಒಂದು ವಿಭಿನ್ನ ಪ್ರಯತ್ನ ಹೇಗೆ ಓದುಗನನ್ನು ಮೆಚ್ಚುಸುವಲ್ಲಿ ಯಶಸ್ವಿಯಾಗುತ್ತದೆ ಎಂಬುದನ್ನೂ ನಿರೂಪಿಸಿದೆ. ನಾನು ಒಂದೊಂದು ಕಥೆಗಳನ್ನು ಒಂದೇ ಬಾರಿಗೆ ಓದಿ ಮುಗಿಸದೆ ನಿಧಾನವಾಗಿ ಒಂದೊಂದೆ ಕಥೆಗಳನ್ನು ಓದಿ ಸ್ವಾದಿಸಿದ್ದರಿಂದ ಕಥೆಗಳ ನಿಜವಾದ ಸತ್ವ ತುಸು ಹೆಚ್ಚೆ ಒದಗಿಸಿತೆನ್ನಬಹುದು. ನನ್ನುನ್ನು ಬಹುವಾಗಿ ಕಾಡಿದ ಕಥೆಗಳು ‘ಪ್ರಣಯರಾಜ ಲೇಡೀಸ್ ಟೇಲರ್’, ‘ಜಾಗರಣೆ’, ‘ಜಾದೂಗಾರನ ನಿದ್ದೆ’ ಇನ್ನೂ ಕೆಲವು. ಇಲ್ಲಿ ವ್ಯಥೆಯ ಕಥೆಗಳಿದ್ದರೂ ಅವು ನನ್ನವೆನೋ, ಸಂತಸದ ಸಂಗತಿಗಳಾದರೂ ನನ್ನದೆ ಸಂತದಸದ ಘಳಿಗೆಯೆನೋ ಎಂಬ ಅನುಮಾನ ಹುಟ್ಟಿಸುತ್ತದೆ. ಕಥೆಗಳು ಗೆದ್ದು ಬೀಗುತ್ತವೆ.
ಬಹುಶಃ ಜೀವನದ ಬಗೆಗಿನ ದೃಷ್ಟಿ ಶಶಿ ತರೀಕೆರೆಯವರನ್ನು ‘ಡುಮಿಂಗ’ ಎಂಬ ಉತ್ತಮ ಕೃತಿಯನ್ನು ರಚಿಸುವಲ್ಲಿ ಕಾರಣವಾಗಿರುವುದಕ್ಕೆ ಅನುಮಾನವಿಲ್ಲ. ಇದು ಅವರ ಮೊದಲ ಕೃತಿಯಾದರೂ ಗಳಿಸಿದ ಜನಮನ್ನಣೆ ಹೊಟ್ಟೆಕಿಚ್ಚಿಗಿಡುಮಾಡುತ್ತದೆ. ಈ ಅನುಮಾನವನ್ನು ಹೋಗಲಾಡಿಸಲೆಂದೆ ಈ ಬಾರಿಯ ಟೊಟೊ ಪುರಸ್ಕಾರವೂ ಶಶಿ ತರೀಕೆರೆಯವರ ಪಾಲಾಗಿರುವುದು ವಿಶೇಷ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯವರಾದ ಶಶಿಯವರು ಬೆಂಗಳೂರಿನ ಇಸ್ರೋದಲ್ಲಿ ಟೆಕ್ನಿಷಿಯನ್ ಆಗಿ ಉದ್ಯಮ ಮಾಡುತ್ತಿದ್ದರೂ ಕತೆ, ಕವಿತೆ. ಚಿತ್ರ ನಿರ್ಮಾಣ ಮತ್ತು ನಿರ್ದೇಶನ ಇವರ ಹವ್ಯಾಸಗಳಾಗಿವೆ.
ಡುಮಿಂಗ ನನಗೆ ಉತ್ತಮ ಓದು ನೀಡಿದ್ದಲ್ಲದೆ ಹಲವು ಮುಖಗಳಲ್ಲಿ ಪ್ರೇರಣೆಯನ್ನು ನೀಡಿದೆ. ಕನ್ನಡದ ಇತರ ಬರಹಗಾರನನ್ನು ಅನುಕರಿಸದೆಯೂ ಒಂದು ಕೃತಿ ಗೆಲ್ಲಬಹುದು ಎಂಬ ಆತ್ನವಿಶ್ವಾಸವನ್ನೂ ನೀಡಿದೆ. ಇನ್ನೂ ಹೆಚ್ಚು ಕೃತಿಗಳನ್ನೂ ಓದಲು ಪ್ರೇರೆಪಿಸಿದೆ.
ಶಶಿ ತರೀಕೆರೆ ಬರೆದ ಕತೆಗಳನ್ನು ಓದುವುದು ರೋಲರ್ ಕೋಸ್ಟರಿನಲ್ಲಿ ಕೂತು ಒಂದು ಸುತ್ತು ಸುತ್ತಿಬಂದ ಹಾಗೆ. ಯಾವುದೋ ಸಾದಾ ರೋಲರ್ ಕೋಸ್ಟರ್ ಅಲ್ಲ, ನಡುನಡುವೆ ನೀರು ಸಿಡಿಸಿ, ಹೆದರಿಸಿ, ಅಳಿಸಿ, ನಗಿಸಿ ನಂತರ ಹೊರಟ ಜಾಗಕ್ಕೇ ತಂದುಬಿಡುವಂಥದ್ದು. ಆರಂಭ ಅಂತ್ಯಗಳ ನಡುವೆ ಹಿಡಿದಿಡಲಾಗದಂತಹ ಒಂದೊಂದು ಕತೆಯೂ ಒಂದೊಂದು ವಿಶಿಷ್ಟ ಅನುಭವವನ್ನು ನೀಡುತ್ತದೆ. ಶಶಿಯವರಿಗೆ ಸರಾಗ ಬರವಣಿಗೆಯ ಶೈಲಿ ಸಹಜವಾಗಿ ಒಲಿದಿದೆ, ಪ್ರತೀ ಕತೆಯಲ್ಲೂ ತಾಜಾತನವವಿದೆ. ಇವರ ಎರಡನೇ ಸಂಕಲನ 'ತಿರಾಮಿಸು'ವನ್ನು ಓದಿದ ನಂತರ ಇವರ ಮೊದಲ ಸಂಕಲನ (ಛಂದ ಪುಸ್ತಕ ಪ್ರಶಸ್ತಿ ವಿಜೇತ) 'ಡುಮಿಂಗ'ವನ್ನು ಓದಿದೆ, ಮೆಚ್ಚಿಕೊಂಡೆ. ಪ್ರತಿಯೊಂದು ಕತೆ ಓದುವಾಗಲೂ ಹೊಸತನದ ಅಲೆಗಳು ಬಂದು ಅಪ್ಪಳಿಸುತ್ತವೆ. ಅವರು ಬಳಸುವ ಲೆಕ್ಕವಿಲ್ಲದಷ್ಟು ಉಪಮೆಗಳು ಕೆಲವೊಮ್ಮೆ ಕಚಗುಳಿಯಿಟ್ಟರೆ ಇನ್ನೊಮ್ಮೆ ಕಣ್ಣಲ್ಲಿ ನೀರು ಜಿನುಗಿಸಿಬಿಡುತ್ತವೆ .
“ಡುಮಿಂಗ-ಶಶಿ ತರೀಕೆರೆ ಅವರ ೨೦೧೯ ರಲ್ಲಿ ಛoದ ಪುಸ್ತಕ ಬಹುಮಾನ ಪಡೆದ ಕಥಾ ಸಂಕಲನ.”
“ಶೀರ್ಷಿಕೆ ನೋಡಿ ಕೈಗೆತ್ತುಕೊಂಡಿದ್ದು ನಿಜ, ಆದರೆ ಇದಕ್ಕೂ ಮೀರಿದ ವಿನೂತನ ಹೆಸರುಗಳು ಕೃತಿಯ ತುಂಬಾ ರಾರಾಜಿಸಿವೆ. ಲೇಖಕರ ಜೀವನದೃಷ್ಟಿ ಮತ್ತು ಅನುಭವ�� ಭಾವ ಕೃತಿಯಲ್ಲಿ ಅಚ್ಚ ಹಸಿರಾಗಿದ್ದು ಓದುಗನ ಭಾವನೆಗೂ ಹೆಣೆದುಕೊಳ್ಳುತ್ತಾ ತಾನೇ ಕತೆಯೊಳಗೆ ಒಂದು ಪಾತ್ರಕ್ಕೆ ಒಗ್ಗಿ ತನ್ನನ್ನು ಕನ್ನಡಿಯಲ್ಲಿ ನೋಡಿ ವಿಮರ್ಶಿಸಿಕೊಳ್ಳುವಷ್ಟು ಪ್ರಭಾವ ಬೀರುವ ಬರವಣಿಗೆಯಿಂದ ಅಚ್ಚರಿ ಮೂಡಿಸಿದ್ದಾರೆ. ಪ್ರತಿ ವಾಕ್ಯವೂ ಹೊಚ್ಚ ಹೊಸ ಶೈಲಿಯಿಂದ ಕೂಡಿದ್ದು ಕಥೆಯ ಧರ್ಮಕ್ಕೆ ಸೂಕ್ಷ್ಮ ಪ್ರಜ್ಞೆಯಿಂದ ನ್ಯಾಯ ಒದಗಿಸಿ ವಿಜೃಂಭಿಸಿವೆ.”
“ಸಣ್ಣ ಕತೆಗಳು ಲೇಖಕನ ಸೃಜನ ಶೀಲತೆಯ ಸೃಷ್ಟಿ ಕಾರ್ಯವನ್ನು ಹಿಂಡಿ ಹಿಪ್ಪೆಮಾಡುತ್ತವೆ. ನಿಜವಾದ ಬರಹಗಾರನು ಹಿಗ್ಗು-ತಗ್ಗುಗಳನ್ನು ಶಿಲ್ಪಿಯಂತೆ ನಿಂತು ವಿಗ್ರಹವನ್ನು ಚೊಕ್ಕಟವಾಗಿ ಕೆತ್ತಿ ಪ್ರತಿಯೊಬ್ಬರ ಪೂಜ್ಯ ಭಾವಕ್ಕೂ ಅನುವುಮಾಡಿಕೊಟ್ಟು ಭಕ್ತಿಪರವಶನಾಗಬೇಕಾಗುತ್ತದೆ. ಕೊನೆಗೆ ಓದುಗನಿಗೆ ಬೇಕಾಗಿರುವುದು ದಿವ್ಯಾನುಭವದ ದರ್ಶನವೇ ಹೊರತು ಕೃತಕ ಪುತ್ತಳಿಕೆಯಲ್ಲ. ಈ ಕೃತಿಯಲ್ಲಿ ಲೇಖಕರು ಸಾಹಿತ್ಯಕ್ಕೆ ಹೊಸ ಭಾಷಾ ಶೈಲಿಯ ವಿಗ್ರಹ ಕೊಟ್ಟು ಗೆದ್ದಿದ್ದಾರೆ ಎನ್ನಬಹುದು.”
“ ಜನರಲ್ ವಾರ್ಡ್ನಿಂದ ಶುರುವಾಗಿ ಶುಗರ್ ಫ್ರೀ ಡುಮಿಂಗನು ಮಲೀನಾಳ ಪ್ರೀತಿಯಲ್ಲಿ ಬಿದ್ದು ಮುಗಿಲಕರೆಯ ಜಾದುವಿನ ನಿದ್ದೆಯೊಳಗೆ ಇಳಿದು ಜಾಗರಣೆಯ ಪ್ರಣಯರಾಜನ ಬಟ್ಟೆಯೊಳಗೆ ಜೀನಿನಿಂದ ಅಂತ್ಯವಾಗುತ್ತದೆ.”
“ಕನ್ನಡದ ಅತ್ಯುತ್ತಮ ಕಥಾಸಂಕಲನವೆಂದು ಮೊದಲ ಸಾಲಿನಲ್ಲಿ ಹೆಸರಿಸಬಹುದು.”
ಶಶಿ ತರೀಕೆರೆ ಯವರು ಕನ್ನಡದ ಯುವ ಬರಹಗಾರರಲ್ಲೊಬ್ಬರು ಹಾಗೂ ಕನ್ನಡ ಓದುಗರು ಓದಲೇಬೇಕಾದ ಒಬ್ಬ ಲೇಖಕರು,ಅವರ ಪಾತ್ರಗಳು,ಕಥೆಗಳು ಅವುಗಳ ಮನಸ್ಥಿತಿ ಹಾಗೂ ಅವರವರ ವಿಕೃತ ಮನೋಭಾವಗಳು ಅಥವಾ ವಿಭಿನ್ನ ನಾಮಧೇಯಾಗಳು ಮತ್ತು ಅವರ ಬರೆಯುವ ಶೈಲಿ ಓದುಗರಲ್ಲಿ ಒಂದು ಹೊಸ ಉಲ್ಲಾಸ ವನ್ನೆ ಹುಟ್ಟಿಸಬಹುದು...
ಅವರ ಎರಡನೆ ಕೃತಿ "ತಿರಮಿಸು" ಓದಿ ತುಂಬಾ ಇಷ್ಟಪಟ್ಟಿದ್ದೆ, ಎಲ್ಲ ಕಥೆಗಳು ಹಿಡಿಸಿದವು, ಆಗ ತಿಳಿದದ್ದು ಅವರ ಮೊದಲ ಕೃತಿ "ಡುಮಿಂಗ" ಛಂದ ಪುಸ್ತಕ ಬಹುಮಾನ ಪಡೆದಿದೆ ಎಂದು, ಆಗಲೇ ಈ ಪುಸ್ತಕವನ್ನು ಆದಷ್ಟು ಬೇಗ ಒದಬೇಕೆಂದಿದ್ದೆ..
ಎಲ್ಲ ಕಥೆಗಳು ಹಿಡಿಸಿದವು, ಅದರಲ್ಲೂ " ಜನರಲ್ ವಾರ್ಡ್" "ಡುಮಿಂಗ" "ಮಲೀನ" "ಪ್ರಣಯಾರಾಜ ಲೇಡೀಸ್ ಟೇಲರ್" ತುಂಬಾ ಹಿಡಿಸಿದವು..
ಅವರ ಮುಂದಿನ ಕೃತಿಗಾಗಿ ಆತುರದಿಂದ ಎದುರು ನೋಡುತ್ತಿದ್ದೇನೆ..
ಹೊಸ ಲೇಖಕರು ಮತ್ತು ಹೊಸದೆನ್ನಬಹುದಾದ ಕಥನ ಶೈಲಿ. ವಿಶೇಷವಾಗಿ ಪಾತ್ರಗಳ ಹೆಸರು, ಚಿತ್ರಣ ಮತ್ತು ಉಪಯೋಗಿಸುವ ಭಾಷೆಯಲ್ಲಿ ಹೊಸತನ. ಪ್ರಯೋಗಶೀಲತೆಯ ಉಮೇದು ಕೆಲವೊಮ್ಮೆ ವಿವರಗಳಲ್ಲಿ ಓದುಗನನ್ನು ಸಂದಿಗ್ಧದಲ್ಲಿ ಕೆಡವಿ, ಇಡೀ ಕತೆಯ ಉದ್ದೇಶದ ಕುರಿತು ವಿಚಾರಿಸುವಂತೆ ಮಾಡುತ್ತದೆ. (ಕತೆಗಳ ಉದ್ದೇಶ ಮತ್ತು ಚೌಕಟ್ಟಿನ ಬಗ್ಗೆ ಕತೆಗಾರರಲ್ಲಿಯೇ ಅಭಿಪ್ರಾಯಭೇದವಿದೆ ಎನ್ನುವುದೂ ಅಷ್ಟೇ ನಿಜ.) ಒಟ್ಟಿನಲ್ಲಿ ಯಾವ ಚೌಕಟ್ಟಿಗೂ ಒಳಪಡದೇ, “ಇದು ಹೀಗೆಯೇ” ಎಂದು ಹೇಳಲು ಬಾರದ, ಕನ್ನಡ ಕತೆಗಳಿಗೆ ಒಂದಷ್ಟು ಹೊಸತನ ತರಬಲ್ಲ ಕತೆಗಳಿವು.