ಶೂದ್ರ ಶ್ರೀನಿವಾಸರು ಅದ್ಭುತವಾಗಿ ಅಂಕಣ ಬರೆಯುತ್ತಾರೆ. ಅವರು ಮತ್ತು ನಟರಾಜ್ ಹುಳಿಯಾರ್ ಅಂದರೆ ನೆನಪಾಗುವುದು ಲಂಕೇಶ್. ಇಬ್ಬರೂ ಎಷ್ಟು ಇಲ್ಲ ಎಂದು ಹೇಳಿಕೊಂಡರೂ ಲಂಕೇಶ್ ಬರವಣಿಗೆಯ ನೆರಳಿಂದ ಆಚೆ ಬಂದಿಲ್ಲ. ಇತ್ತೀಚೆಗೆ ಶೂದ್ರ ಶ್ರೀನಿವಾಸ್ ಕಾದಂಬರಿ ಬರವಣಿಗೆಗೆ ಹೊರಳಿಕೊಂಡಿದ್ದಾರೆ. ಅವರೇ ಹೇಳುವಂತೆ ದಶಕಗಳಿಂದ ಅವರ ತಲೆಯಲ್ಲಿ ಇದ್ದ ಕಥೆಯನ್ನು ಈಗ ಬರೆದದ್ದಂತೆ. ಅದನ್ನು ಅಲ್ಲೇ ಬಿಟ್ಟರೆ ಸಾಕಿತ್ತು. ನವ್ಯದ ರೈಲು ನಿಲ್ದಾಣ ಬಿಟ್ಟಾಗಿದೆ. ಇವರು ಈಗ ಆ ಬಂಡಿ ಹತ್ತಲು ಓಡಿ ಬಂದ ಸುಸ್ತಾದ ಪ್ರಯಾಣಿಕರಂತೆ ಕಾಣುತ್ತಾರೆ. ನವ್ಯದ ಕಥೆ ಕಾದಂಬರಿಗಳ ಗಮನಿಸಿದರೆ ಕಾಣುವ ಅಂಶಗಳು ಇವು ಕಥಾನಾಯಕನ ಪಾಪಪ್ರಜ್ಞೆ, ಏಕಾಕಿತನ, ಒಂದು ಅನೈತಿಕ ಸಂಬಂಧ, ಅದರಿಂದ ಉಂಟಾಗುವ ಪರಿಣಾಮಗಳು ಮತ್ತು ಸ್ಪಷ್ಟವಾಗಿಲ್ಲದ ಪರಿಸರ.
ಇದೆಲ್ಲವನ್ನೂ ಈ ಎರಡೂ ಕಾದಂಬರಿಗಳಲ್ಲಿ ಢಾಳಾಗಿ ಕಾಣಬಹುದು.
ತನ್ನ ಅತ್ತಿಗೆಯೊಂದಿಗಿನ ಸಂಬಂಧದಿಂದ ಮನೆ ಬಿಟ್ಟು ಓಡಿ ಬರುವ ಮುಖ್ಯ ಪಾತ್ರ ಎಲ್ಲಿಯೋ ಸ್ಟೇಷನ್ ಅಲ್ಲಿ ಯಾರಿಗೋ ಸಹಾಯ ಮಾಡಿ ಅವರ ಮನೆಗೆ ಹೋಗಿ ಅಲ್ಲಿ ಇನ್ನೊಂದು ಸಂಬಂಧ ಬೆಳೆಸುವಂತಹ ಕಲ್ಪನಾತೀತ ಕಥೆಗಳ ಕಾಲ ಮುಗಿದು ಯಾವ ಕಾಲವಾಯಿತು ಸ್ವಾಮಿ?
ಆ ದಿನವೂ ಇಷ್ಟೇ ನೀರಸ ಕಾದಂಬರಿ. ಎರಡು ಪಾತ್ರಗಳು ಗಂಟೆಗಟ್ಟಲೆ ಅಸಂಬದ್ಧ ಮಾತಾಡುವ ಪುಟ ತುಂಬಿಸುವ ಬರವಣಿಗೆ ಇಲ್ಲಿ ಮುಖಕ್ಕೆ ರಾಚುತ್ತದೆ.
ಹಳೆಯ ಕಾಲದ ಕಥೆಗಳ ಬರೆಯಿರಿ. ಎಷ್ಟು ಜನ ಹಿರಿಯ ಸಾಹಿತಿಗಳು ಬರೆದಿದ್ದಾರೆ. ಆದರೆ ಕಾಲಘಟ್ಟವ ಚಿತ್ರಿಸುವಾಗ ಓದುವವ ಅದನ್ನು ನಂಬಬೇಕು. ಕನಸಿನಲ್ಲಿ ಬರೆದ ಹಾಗೆ ಯಾವುದೂ ಸ್ಪಷ್ಟವಿಲ್ಲದೆ ಬರೆದರೆ ಅದು ನವ್ಯದ ರೋಧನೆ ಅಷ್ಟೇ.