Jump to ratings and reviews
Rate this book

ಕಂದೀಲು

Rate this book

136 pages, Unknown Binding

Published January 1, 2019

2 people want to read

About the author

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
1 (11%)
4 stars
3 (33%)
3 stars
5 (55%)
2 stars
0 (0%)
1 star
0 (0%)
Displaying 1 - 3 of 3 reviews
Profile Image for Nayaz Riyazulla.
417 reviews94 followers
June 1, 2020
"ಕರಾಟೆ ಒಂದ್ ಕಲಿಯೊಧ್ ಬಾಕಿ ಐತ್ ನೋಡ್" ಎಂದು ಕುಸುಮಿ ಸೂಜಿಗೆ ಹೇಳುವ ಹೊತ್ತಿಗೆ ಜಗತ್ತಿನ ಕೌರ್ಯದ ಅಷ್ಟೂ ಪರಿಚಯ ಆಗಿ ಹೋಗಿರುತ್ತದೆ. ಕಂದಿಲು ಇಡಿದು ಬೆಳುಕು ಕೊಡುವ ಸಂಸಾರಕ್ಕೆ ಕತ್ತಲು ಬಹುಮಾನವಾಗಿ ಸಿಕ್ಕಿರುತ್ತದೆ.

ನಾನು ಇತ್ತೀಚಿಗೆ Non fiction ಓದೋದು ಜಾಸ್ತಿ ಆಗಿದೆ... ಇತಿಹಾಸ, ವಿಜ್ಞಾನ, ಆತ್ಮಚರಿತ್ರೆ, ಮಹಾತ್ಮರ ಚರಿತ್ರೆಗಳು ಹೀಗೆ, ಆದರೆ ಸಾಮಾನ್ಯರ ಅಸಮಾನ್ಯತೆ ತಿಳಿಯಬೇಕಾದರೆ Non fiction ಓದಲೇಬೇಕು, ಹಾಗೆ ನಮಗೆ ಸಿಕ್ಕವರೇ ಗೃಹಭಂಗದ ನಂಜಮ್ಮ, ಅಲನಹಳ್ಳಿ ಕೃಷ್ಣರ ಗೆಂಡೆತಿಮ್ಮ, ಕಾರಂತರ ಚೋಮ, ತೇಜಸ್ವಿರ ಮಂದಣ್ಣ ಹೀಗೆ, ಅಂತದೆ ಒಂದು ಅಸಾಮಾನ್ಯ ಪಾತ್ರ ಮತ್ತು ಕಥೆ ಸೋಮು ರೆಡ್ಡಿರವರ "ಕಂದಿಲು".

ಉತ್ತರ ಕರ್ನಾಟಕದ ಬಾಗಲಕೋಟೆಯ ಕೆರಕಲಮಟ್ಟಿ ಗ್ರಾಮದಲ್ಲಿ ಮೂಡಿ ಬರುವ ಈ ಕಥೆ ಎರಡು ಕುಟುಂಬದ್ದು ಒಂದು ಆಗರ್ಭ ಶ್ರೀಮಂತ ಅನಂತ ದೇಸಾಯಿಯ ಕುಟುಂಬದ್ದು ಮತ್ತು ಒಂದು ಕಂದಿಲು ಹಿಡಿಯುವ ಪಂಗಡಕ್ಕೆ ಸೇರಿದ ಕಂದಿಲು ರಂಗಪ್ಪ ಮತ್ತು ಕುಸುಮಿದು.

ತಮ್ಮ ಮೂಡ ನಂಬಿಕೆಯಿಂದ ಅನಂತ ದೇಸಾಯಿ ರಂಗಪ್ಪನನ್ನು ಸುಡುಗಾಡಿಗೆ ಅಟ್ಟಿ ಅವನ ಸಾವಿಗೆ ಕಾರಣರಾಗುತ್ತಾರೆ, ಊರಿನ ಜನ ಇಲ್ಲದ ಸಲ್ಲದ ಗಾಳಿಮತನ್ನು ಕೇಳಿ, ಮಾಡದಿರುವ ತಪ್ಪನ್ನು ಕುಸುಮಿಯ ತಲೆಗೆ ಕಟ್ಟಿ ಅವಳ ಜೀವನವನ್ನು ಕತ್ತಲೆಯ ಕೂಪಕ್ಕೆ ತಳ್ಳುತ್ತಾರೆ. ಹೀಗೆ ಗಂಡಸರ ಕ್ರೌರ್ಯಕ್ಕೆ ಕುಸುಮಿ ನಲುಗಿ ಗಟ್ಟಿಯಾಗುತ್ತಾಳೆ. ಇಲ್ಲಿ ಬರೀ ಕೆಟ್ಟ ಮನಸ್ಥಿತಿಗಳು ಮಾತ್ರವಿಲ್ಲ, ಇಲ್ಲಿ ಪಾಪಣ್ಣ ಮತ್ತು ಶ್ರೀಪಾದ ಅನ್ನುವ ಒಳ್ಳೆಯ ಮನಸ್ಸುಗಳು ಇವೆ.

ಸೋಮು ರೆಡ್ಡಿರವರ ಉತ್ತರ ಕರ್ನಾಟಕದ ಭಾಷಾ ಶೈಲಿ ಅದ್ಭುತವಾಗಿದೆ, ಅವರ ಕಥೆ ಹೇಳುವ ಶೈಲಿಯು ಉತ್ತಮ, ಎಲ್ಲ ಒಂದೇ ಬಾರಿ ಹೇಳಿ ಬೇಸರಗೊಳ್ಳಿಸುವುದಿಲ್ಲ, ಸಂದರ್ಭಕ್ಕೆ ಅನುಸಾರವಾಗಿ ಹೇಳಿ ಓದುಗನನ್ನು ಹಿಡಿದು ಕೂರಿಸುತ್ತಾರೆ. ಸಾವಿನ ಕನಸಿಂದ ಶುರು ಮಾಡಿ ಕೊನೆಗೆ ಅದರ ಸಾರ ತಿಳಿಸುತ್ತಾರೆ.
Profile Image for Prashanth Bhat.
2,150 reviews137 followers
May 30, 2020
ಕಂದೀಲು - ಸೋಮು ರೆಡ್ಡಿ

ಉತ್ತರ ಕರ್ನಾಟಕದ ಭಾಷೆಯ ಗಡಸು ಭಾಷೆಯ ಹೃದಯಂಗಮ ಕಥೆ ಇದು.
ಕಂದೀಲು ಹಿಡಿಯುವವನ‌ ಮದುವೆಯಾಗಿ ಸುಂದರ ಬದುಕಿನ ಕನಸು ಹೊತ್ತು ಬಂದ ಕುಸುಮಿಗೆ ತನ್ನ ಹೊಟ್ಟೆಯಲ್ಲಿ ಕೂಸಿಲ್ಲ ಎಂಬ ಕೊರಗು.
ಬದುಕಿನ ಅನಿವಾರ್ಯಗಳು ಆಕೆಯನ್ನು ಹೊಟ್ಟೆಪಾಡಿಗಾಗಿ ಸೆರಗು ಹಾಸುವಂತೆ ಮಾಡುತ್ತದೆ. ಮುಂಬಯಿ ಶಹರಿಗೂ ದಂಧೆಗಾಗಿ ಹೋಗುವ ಆಕೆಗೆ ಅಲ್ಲಿ ನರಕ ದರ್ಶನವಾಗುತ್ತದೆ‌. ಪೋಲಿಸನೊಬ್ಬನ ಸಹಾಯದಿಂದ ಬದುಕು ಕೊಂಚ ಹಳಿಗೆ ಬರುತ್ತದೆ.ಆಕೆಗೂ ಮಗುವಾಗುತ್ತದೆ. ಆಕೆಯ ಒಡಲ ಕುಡಿಗೆ ವಂಶದ ಕಸುಬಾದ ಕಂದೀಲು ಹಿಡಿಯುವುದು ದೊರೆಯುತ್ತದಾ? ಅವಳ ಈ ಹೋರಾಟಕ್ಕೆ ಗ್ರಾಮಸ್ಥರ ವಿರೋಧ ಏಕೆ? ಇವಕ್ಕೆ ನೀವು ಪುಸ್ತಕ ಓದಬೇಕು.
ಮೊದಲನೆಯದಾಗಿ ನನ್ನ ಗಮನ ಸೆಳೆದದ್ದು ಭಾಷೆ.
ಅಪ್ಪಟ ಗ್ರಾಮ್ಯ ಭಾಷೆಯ ಸೊಗಸು.
ಎರಡನೆಯದು ಕೃತಕವೆನಿಸದ ವಾತಾವರಣ. ಸಾಮಾನ್ಯವಾಗಿ ಪಾತ್ರಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು ಅಂತ ಲೇಖಕರು ಎಲ್ಲೋ ಒಂದು ಕಡೆ ಸಣ್ಣ ಹೊಂದಾಣಿಕೆ ಮಾಡಿ ಕಥೆ ಸಹಜತೆ ಕೆಡಿಸುತ್ತಾರೆ. ಇಲ್ಲಿ ಅದಾಗಿಲ್ಲ. ಅವಳ ಬದುಕು ದುರಂತ ಎಂದು ಅನಿಸಬಹುದು ಆದರೆ ಅದರ ಹೊರತು ಬೇರಾವ ದಾರಿಯೂ ಅವಳಲ್ಲಿರಲಿಲ್ಲ ಎಂಬುದು ವಾಸ್ತವ ಅಲ್ಲವೇ?
ಸೋಮು ರೆಡ್ಡಿಯವರು ಈ ಕಾದಂಬರಿಯ ಬಳಸಿದ ನಿರೂಪಣಾ ಶೈಲಿಯೂ ವಿಭಿನ್ನವಾಗಿದೆ.
Profile Image for Vinodkumar Kulkarni.
15 reviews7 followers
April 6, 2021
‘ಕಂದೀಲು’ ನಾನು Mylang Appನಲ್ಲಿ ಓದಿದ ಮೊದಲ e-ಪುಸ್ತಕ. ಓದಿನ ಅನುಭವ ಸಂತಸ ನೀಡಿತು. ಈಗೀನ Digital ಲೋಕದ ವಾತಾವರಣದಲ್ಲಿ e-ಪುಸ್ತಕಗಳ ಅವಶ್ಯಕತೆಯ ಅನಿವಾರ್ಯತೆ ಹೆಚ್ಚಾಗುತ್ತಲೇ ಇದೆ. ಅದರಂತೆ ಕನ್ನಡಿಗರಿಗೆ ಕನ್ನಡ ಪುಸ್ತಕಗಳನ್ನು ಸುಲಭವಾಗಿ ತಲುಪಿಸಿಕೊಡುವಲ್ಲಿ Mylang App ತಂಡ ಯಶಸ್ವಿಯಾಗಿದೆ. ಅವರ ಈ ಕಾರ್ಯಕ್ಕೆ ಶುಭಾಶಯ.

(ಆದರೂ ಪುಸ್ತಕವನ್ನು ಓದಿದಾಗ ಪುಸ್ತಕದ ಹಾಳೆಯ ಗಟ್ಟಿಯಾದ ಘಮ ಮೊಬೈಲಿನ ಕೃತಕ ಬೆಳಕಿನ ಬೆಳ್ಳನೆ ಹಾಳೆಯಲ್ಲಿ ಘಮಿಸದೆ ಕಣ್ಣನ್ನು ಮಂಜುಗೊಳಿಸುತ್ತದೆ.)

ಲೇಖಕರು ಉತ್ತರ ಕರ್ನಾಟಕದವರೇ ಆದುದರಿಂದ ಅಲ್ಲದೆ ಪೋಲಿಸ್ ವೃತ್ತಿ ಜೀವನ ನಡೆಸುತ್ತಿರುವದರಿಂದಲೇ ಹಾಗೂ ಒಂದು ಸತತಾಧ್ಯನದಿಂದ ಈ ಕಾದಂಬರಿಯ ಕಥಾಗುಚ್ಛವು ಸತ್ವಶಾಲಿಯಾಗಿ ಮೂಡಿಬಂದಿರುವುದು. ಅಲ್ಲದೆ ಅವರ ಸರಳ ಹಾಗೂ ಸತ್ವಶಾಲಿಯಾದ ಬರವಣಿಗೆ ಓದುಗನನ್ನು ಕಾದಂಬರಿ ಓದಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಉತ್ತರ ಕರ್ನಾಟಕದ ಭಾಷೆಯ ಘಾಟಿನೊಂದಿಗೆ ಘಟಿಸುವ ಘಟನೆಗಳು ಕಂದೀಲು ರಂಗಪ್ಪನ ಮದುವೆಯಿಂದ ಕೊನೆಗೆ ಕುಸುಮಿಯ ವ್ಯಥೆಯ ಕತೆಗೆ, ಬದುಕಿನ ಸವಾಲುಗಳ ಎಡೆಯಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ಕಾರಂತರ ಮೂಕಜ್ಜಿಯ ಕನಸು ಕಾದಂಬರಿಯ ನಾಗಿ ಹಾಗೂ ಗಂಡ ರಾಮಣ್ಣ ಪಾತ್ರಗಳು ಕಣ್ಣು ಮುಂದೆ ಬಂದು ಹಾದುಹೋದವು. ಕಂದೀಲು ರಂಗಣ್ಣನ ಕುಲಕಸುಬು, ಧಣಿಯರ ಬಗೆಗಿನ ಅವನ ನಿಷ್ಠೆಯ ಬದುಕು, ಕಂದೀಲು ಮೇಲಿನ ವೃತ್ತಿಯ ಭಕ್ತಿಯ ನೆಲೆಗಟ್ಟು, ಕುಸುಮಿಯ ಮೇಲಿನ ಸೂಕ್ಷ್ಮ ಪ್ರೀತಿ, ಅವನ ಹಾಡು ಕಟ್ಟುವ ಕ್ರಮಕ್ಕೆ ಕಂದೀಲು ರಂಗ ಹತ್ತಿರವಾಗುತ್ತಾನೆ. ರಂಗನಿಗಿದ್ದ ವೃತ್ತಿಯ ಮೇಲಿನ ಬಲವಾದ ನಂಬುಗೆ ನಿಸ್ವಾರ್ಥ ಬದುಕಿನ ಗಾಢತೆ ಈ ಒಂದು ಜನಪದದ ಹಾಡಿನಲ್ಲಿ ಎದ್ದು ಕಾಣುತ್ತದೆ.

‘ಮನದೊಳಗ ನೆನೆದೇನ ಕುಲದೇವರ

ತಲಿಮ್ಯಾಗ ಸುರುವಿಕೊಂಡೇನ ತಣ್ಣೀರ

ಮಡಿಬಟ್ಟೆ ತೊಟ್ಟ ಕಂದೀಲ ಹೊತ್ಸೀನಿ

ತಲಿಮ್ಯಾಗ ರುಮಾಲು, ಕೈಯಗ ಹಿಡಿಗೋಲು

ಕಂದೀಲ ಹೊತ್ತ ಕಾಲಕಿತ್ತೇನಿ ಬೆಳಕ

ಬೇಕಂದರಿಸಿ ಬಂದವ್ರ ಮನಿಗೆ. ನಾ

ಹೋದಂತಾ ಮನಿಗೆಲ್ಲಾ ಬೆಳಕಾಗಲಿ’

ಈ ತರಹದ ಕೆಲವು ಜನಪದದ ಹಾಡುಗಳನ್ನು ಬಳಸಿಕೊಂಡು ಹಳ್ಳಿಯ ಸೊಗಡನ್ನು ಓದುಗನ ಎದೆಯ ಬಾಗಿಲಿನ ಮುಂದೆ ತಂದು ನಿಲ್ಲಿಸುತ್ತವೆ. ಜನಪದದ ಹಿಂದಿನ ಬದುಕಿನ ಸಾರವನ್ನು ಎತ್ತಿ ಹಿಡಿಯುತ್ತದೆ. ಸೋಮು ರೆಡ್ಡಿಯವರ ಬರವಣಿಗೆಯ ಗಟ್ಟಿತನವನ್ನು, ಕಲಾತ್ಮಕ ಗುಣವನ್ನು ಇಲ್ಲಿ ಕಾಣಬಹುದಾಗಿದೆ.

ಕುಸುಮಿ ಕಂದೀಲು ರಂಗನನ್ನೆ, ಅವನ ನಿಸ್ವಾರ್ಥ ಜೀವನದ ಕಸುಬನ್ನೆ ನಂಬಿ ಬಂದವಳು. ಬಂಜೆಯೆಂಬ ಕಾರಣಕ್ಕೆ ಬದುಕಿನಲ್ಲಿ ಹುಟ್ಟುವ ತೊಡಕುಗಳು ಬೆಳೆಯುತ್ತಿದ್ದರೂ ಅವರ ಪ್ರೀತಿಯ ಗಂಧ ಇಬ್ಬರಲ್ಲೂ ಮರೆಯಾಗದೇ ಇರುವುದು ವಿಶೇಷ. ಮುಂದೆ ಕಷ್ಟದಿಂದ ಕೂಡಿದ ಕುಸುಮಿಯ ಬದುಕು ಜೀವನ ಹೋರಾಟ ಎಲ್ಲರ ಮನದಲ್ಲೂ ಘಳಿಗೆ ಕಂಪಣ ಹುಟ್ಟಿಸುತ್ತದೆ. ತುಂಡು ಜಾಗಕ್ಕಾಗಿ ಹೋರಾಟ ಮಾಡುವ, ಜನರೇದುರಿಗೆ ಗೆಲ್ಲಬೇಕೆಂಬ ಕುಸುಮಿಯ ಆಕಾಂಕ್ಷೆ ಅವಳನ್ನು ತಪ್ಪು ದಾರಿ ಹಿಡಿಯುವ ಅನಿವಾರ್ಯತೆಯ ಅಂಚಿನಲ್ಲಿ ತಳ್ಳಿ ತೊಂದರೆಗಿಡುಮಾಡುತ್ತದೆ. ಬಾಗಲಕೋಟೆಯ ಕೆರಕಲಮಟ್ಟಿಯಿಂದ ಗೆಳತಿಯ ಅತಿಯಾದ ನಂಬಿಕೆಯ ಮೇಲೆ ಬಾಂಬೆಯ ಬೃಹತ್ತ ನಗರದವರೆಗೂ ಸಾಗಿ ಅಲ್ಲಿಂದ ಮಿನಿ ಬಾಂಬೆಯ ಹುಬ್ಬಳ್ಳಿಯನ್ನು ತಲುಪಿ ವಾಪಸ್ಸು ಕೆರಕಲಮಟ್ಟಿಗೆ ಬಂದು ತಲುಪುತ್ತದೆ.

ನಂತರದಲ್ಲಿ ಕುಸುಮಿಯ ದಂಧೆಗೆ ಕೋಪಗೊಳ್ಳುವ ಊರು ಜನರ ಬದುಕಿನ ಹಿಂದಿನ ಮರ್ಮ ಕುಸುಮಿಯ ದಂಧೆಗಿಂತಲೂ ಹೆಚ್ಚು ವಿಭಿನ್ನವಾಗಿರುವುದಿಲ್ಲ. ಬಂದ ಗಂಡಸರುಗಳಿಗೆ(ಕೇವಲ ನೊಂದ ಜೀವಗಳಿಗೆ) ಕಾಮದ ಹಸಿವನ್ನು ನೀಗಿಸಿ ತನ್ನ ಹೊಟ್ಟೆಯನ್ನು ತುಂಬಿಸುವಲ್ಲಿ ನಿರತಳಾಗುತ್ತಾಳೆ. ಹೀಗೆ ಸಾಗುವ ಕಥೆ ಬದುಕಿನ ನೈಜತೆಯ ಅನಿವಾರ್ಯತೆಯನ್ನು ತಿಳಿಸುತ್ತದೆ. ಇನ್ನು ತಲುಪಬೇಕಾದ ವಿಳಾಸಗಳಿಗೆ ತಲುಪದೆ ಅಂಚೆಯಲ್ಲಿಯೇ ಬಟವಾಡೆಯಾಗೆ ಉಳಿದ ಪತ್ರಗಳು ಅನಂತ ದೇಸಾಯಿಯವರ ಮನೆಯಲ್ಲಿ ಮತ್ತಷ್ಟು ಆತಂಕಗಳಿಗೆ ಕಾರಣವಾಗುತ್ತದೆ. ಕುಟುಂಬದ ಮರ್ಯಾದೆಯ ಹಪಾಹಪಿಯಲ್ಲಿ ದೇಸಾಯಿಯವರು ತಪ್ಪು ನಿರ್ಧಾರಗಳಿಗೆ ದಾಸರಾಗಿ ಮೋಸ ಹೋಗುವುದು ಇನ್ನೊಂದು ಕಥೆಯ ತಿರುವಿಗೆ ದಾರಿ ಮಾಡಿಕೊಡುತ್ತದೆ.

ಪೋಲಿಸ್ ಇಲಾಖೆಯ ಮತ್ತೊಂದು ಮುಖವನ್ನು ಕಾದಂಬರಿಯು ಅನಾವರಣಗೊಳಿಸಿದೆ.. ದೊಡ್ಡ ಹುದ್ದೆಯ ಅಧಿಕಾರಿಗಳೆ ತಪ್ಪು ಹಾದಿಗೆ ತಳ್ಳುವ, ಅಲ್ಲದೆ ಸ್ವತಃ ತಾವೇ ಅದರತ್ತ ಸಾಗುವ ತಪ್ಪು ಕೆಲಸಗಳನ್ನು ಲೇಖಕರು ಮುಜುಗರವಿಲ್ಲದೆ ತಿಳಿಸಿಕೊಟ್ಟಿದ್ದಾರೆ. ವೇಶ್ಯೆಯರ ಸಮೂಹವೇ ಒಂದು ದಂಧೆಯಾಗಿರುವುದು ಅಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುವ ದೌರ್ಜನ್ಯವನ್ನು ನಾವು ಊಹಿಸಿಕೊಳ್ಳಬಹುದು.

ಈ ಕಾದಂಬರಿಯ ಭಾಷೆಯ ಸೊಗಡು ಓದುಗನಿಗೆ ತುಂಬಾ ಹತ್ತಿರವಾಗುವಲ್ಲಿ ಗೆದ್ದಿದೆ ಎಂದೇ ಹೇಳಬಹುದು. ಹಳ್ಳಿ ಜನರ ಗ್ರಾಮ್ಯ ಜೀವನದಲ್ಲೆ ಮಿಂದು ಹೋಗಿರುವ ಅನಾದಿಕಾಲದ ಹಲವು ಗಾದೆಗಳು ಖುಷಿ ನೀಡುತ್ತವೆ. ಉತ್ತರ ಕರ್ನಾಟಕದ ಸುಲಲಿತವಾದ ಬೈಗುಳಗಳು, ಪ್ರಾಸಗಳು, ಹತ್ತಿರವಾಗಿರುವ ಅಂಕಿತಗಳು ಹಾಗೂ ನೈಜ ನಿಷ್ಠುರ ಮಾತುಗಳು ವಾಕ್ಯದ ಯಥಾವತ್ತಾದ ಬರವಣಿಗೆ ಈ ಕಾದಂಬರಿಯ ಮತ್ತೊಂದು ವಿಶೇಷ. ಜಾಗತೀಕರಣ, ಭಾಷೆ, ಅಧಿಕಾರ, ದುರುಪಯೋಗ, ಆಸೆ, ತೋಳಲಾಟ, ವೃತ್ತಿಧರ್ಮ ಹಲವಾರು ವಿಷಯಗಳ ಬಗ್ಗೆ ಕಾದಂಬರಿಯ ಸಾರ ಅಡಕವಾಗಿದೆ.

ಇನ್ನು ವಾಡೆಯ ಮನೆ ಮ���ನದಲ್ಲೆ ಇದ್ದು ಎಲ್ಲವನ್ನೂ ತನ್ನ ನೆರಳಿನಲ್ಲಿ ನೋಡುತ್ತಾ ಕೊನೆಗೆ ನ್ಯಾಯವನ್ನು ಒದಗಿಸಿಕೊಡುವ ನ್ಯಾಯದೇವತೆಯಂತೆ ಕಾಣುತ್ತದೆ. ಮೂಡಲ ಮನೆಯ(ಧಾರಾವಾಹಿ) ದೇಸಾಯಿ ಮನೆತನದ ವಾಡೆಗಳನ್ನು ನೆನಪಿಸಿಕೊಳ್ಳಬಹುದು. ದೇಸಾಯಿ ಮನೆತನದ ಕಟ್ಟುನಿಟ್ಟುಗಳು, ಸಂಪ್ರದಾಯದ ಪಾಡುಗಳು, ವಾಡೆ ಮನೆಯ ಇತಿಹಾಸ, ರಹಸ್ಯಗಳು, ಸೂಕ್ಷ್ಮಗಳು, ವಿಶೇಷತೆಗಳನ್ನು ಲೇಖಕರು ತಿಳಿಸಿಕೊಡುತ್ತಾರೆ.

ಕ್ರೌರ್ಯದ ಕತೆಯಂತಿದ್ದರೂ ಗ್ರಾಮ್ಯ ಜೀವನದ ನೈಜತೆಯನ್ನೊಳಗೊಂಡ ಸಂಗತಿಗಳು ಕಾದಂಬರಿಯ ಜೀವಂತಿಕೆಯನ್ನಲ್ಲದೆ, ಬಾಯಿಯಲ್ಲಿ ಸರಾಗವಾಗಿ ಹಾಡುವ ಹಾಡುಗಳು ಜನಪದವಾದುದು ಹೇಗೆ? ಎಂದು ಅರಿತುಕೊಳ್ಳಬಹುದು. ಮುಂದೆ ಕುಸುಮಿಯ ಅದಮ್ಯ ಹೋರಾಟಕ್ಕೆ ನ್ಯಾಯ ಒದಗಿತೋ? ಇಲ್ಲವೋ? ಎಂಬುದೇ ಕಾದಂಬರಿಯ ಸಾರಾಂಶ.

ಮೂಲತಃ ಬಾಗಲಕೋಟೆಯವರಾದ ಲೇಖಕ ಸೋಮು ರೆಡ್ಡಿಯವರು ಸದ್ಯ ಹುಬ್ಬಳ್ಳಿ ಪೋಲಿಸ್ ಇಲಾಖೆಯಲ್ಲಿ ತಮ್ಮ ವೃತ್ತಿ ಬದುಕನ್ನು ಸಾಗಿಸುತ್ತಿದ್ದಾರೆ. ಕಥೆ, ಕಾದಂಬರಿ, ನಾಟಕ, ವಿಮರ್ಶೆಯಲ್ಲದೆ ಇನ್ನಿತರೆ ಹಲವು ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಎ. ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಷಯದಲ್ಲಿ ಎಂ.ಎ. ಮುಗಿಸಿದ್ದಾರೆ. ರಾಜ್ಯದ ಹಲವು ದಿನ ಪತ್ರಿಕೆಗಳಲ್ಲಿ ಸಾಹಿತ್ಯಿಕ ಲೇಖನಗಳನ್ನು ಬರೆದಿದ್ದಾರೆ. ಇವರ ಮೊದಲ ಕಾದಂಬರಿ “ಅಭಿನೇತ್ರಿ”, “ನೋಟದಾಗ ನಗೆಯಾ ಮೀಟಿ” ಕಥಾಸಂಕಲನ, “ತಲಾಷ್” ಇವರು ಬರೆದ ನಾಟಕ ಹಾಗೂ “ಕಂದೀಲು” ಸೋಮು ರೆಡ್ಡಿಯವರ ಎರಡನೇ ಕಾದಂಬರಿ. ಸಾಹಿತ್ಯ ರಾಜ್ಯ ರತ್ನ ಪ್ರಶಸ್ತಿ, ಕ್ರಾಂತಿ ಪ್ರಶಸ್ತಿ, ಕುವೆಂಪು ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.

ಯುವ ಓದುಗರನ್ನು ಸಾಹಿತ್ಯದತ್ತ ಓದಿಸಿಕೊಳ್ಳುವಲ್ಲಿ, ಬರೆಸುವಲ್ಲಿ ಸತತವಾಗಿ ಪ್ರೋತ್ಸಾಹಿಸುತ್ತಿರುವ ಸೋಮು ರೆಡ್ಡಿಯವರಿಗೆ ಕೃತಜ್ಞ. ಹೀಗೆ ಬರೆಯುತ್ತಿರಿ ಎಂಬ ಆಶಯದಿಂದ…

ಧನ್ಯವಾದ..

ಪುಸ್ತಕ Mylang app ಹಾಗೂ Amazonನಲ್ಲೂ ಲಭ್ಯ – Kandeelu
Displaying 1 - 3 of 3 reviews

Can't find what you're looking for?

Get help and learn more about the design.