Jump to ratings and reviews
Rate this book

ಸಾವು

Rate this book
ಕಾದಂಬರಿಯ ಬೆನ್ನುಡಿ:

ಇಂದ್ರಿಯಗಳಿಂದಾಚೆ ಯೋಚಿಸದ ಹೊರತು, 'ನಾನು ಯಾರು?' ಎಂದು ಅರಿವಾಗುವುದಿಲ್ಲ. 'ನಾನು ಯಾರು?' ಎಂದು ಅರಿವಾಗದ ಹೊರತು 'ಸಾವು' ಅರ್ಥವಾಗುವುದಿಲ್ಲ. 'ನೀನು ಯಾರು' ಎನ್ನುವ ಅರಿವು ನಿನಗಿದೆಯಾ?

298 pages, Unknown Binding

Published January 1, 2020

22 people want to read

About the author

Supreeth K.N.

6 books2 followers

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
5 (31%)
4 stars
9 (56%)
3 stars
1 (6%)
2 stars
1 (6%)
1 star
0 (0%)
Displaying 1 - 6 of 6 reviews
Profile Image for That dorky lady.
374 reviews71 followers
March 17, 2023
ಸಾವು - ಹೆಸರಿನಷ್ಟೆ ಗಂಭೀರವಾದ ಅಧ್ಯಾತ್ಮಿಕ ಕಾದಂಬರಿ.

ಇದುವರೆಗೂ ಸುಪ್ರೀತರ ಎರಡು ಕಾದಂಬರಿ ಓದಿದ್ದೇನೆ. ಮೊದಲನೆಯದು 'ಉತ್ತರ' ಮತ್ತೀಗ 'ಸಾವು'. ಎರಡೂ ಕಾದಂಬರಿಗಳೂ ತಮ್ಮದೇ ಆದ ರೀತಿಯಲ್ಲಿ ಬಹಳಾಗಿ ಕಾಡುವಂತವು, ಮನಸ್ಸನ್ನು ಯೋಚನೆಗೆ ಹಚ್ಚುವಂತವು. ಉತ್ತರ ಮತ್ತು ಸಾವು ಎರಡರ ನೆಲೆಗಟ್ಟೂ ಆಧ್ಯಾತ್ಮವೇ ಆದರೂ ಸಾವು ಸ್ವಲ್ಪಮಟ್ಟಿಗೆ ಧಾರ್ಮಿಕತೆಯೆಡೆಗೂ ವಾಲಿಕೊಂಡಿದೆ ಎನಿಸಿತು‌. (ಆಧ್ಯಾತ್ಮ ಮತ್ತು ಧಾರ್ಮಿಕತೆ ಬೇರೆಯಾ ಅಂದ್ರೆ.. ಹೌದು)
ಸಾವು ಕಾದಂಬರಿಯಲ್ಲಿ ವಿಶೇಷವಾಗಿ ಇಷ್ಟವಾಗಿದ್ದು ಶೃಂಗೇರಿ ಮತ್ತು ಅಲ್ಲಿನ ಸರಳ ಆಡುಭಾಷೆಯ ಬಳಕೆಯನ್ನೇ ಕಥೆಯಲ್ಲೂ ಬಳಸಿರೋದು. ಶೃಂಗೇರಿಯ ಅಮ್ಮನವರು, ಮಠ ಎಲ್ಲದರ ಬಗ್ಗೆ ಬರೆದಿರುವುದು ಓದುವಾಗ ಅಷ್ಟೇನೂ ಧರ್ಮಭೀರುವಲ್ಲದ ನನ್ನ ಮನಸ್ಸೂ ಸಹ ಸುಮ್ಮನೇ ಭಾವುಕವಾಗುತ್ತದೆ. ಕಾಶಿಯ ವರ್ಣನೆ ಓದುವಾಗ ಜೀವಮಾನದಲ್ಲಿ ಒಮ್ಮೆ ನೋಡಲೇಬೇಕು ಅನಿಸುತ್ತದೆ. ಇದೆಲ್ಲ ಒಂದು ಚಂದದ ಅನುಭವ, ವಿಮರ್ಶೆಗೆ ನಿಲುಕದ್ದು ಅಂತ ನನ್ನ ಭಾವನೆ.
ನಾವೆಲ್ಲರೂ ಸಾಮಾನ್ಯವಾಗಿ ಕಥೆಯೊಂದನ್ನು ಓದುವಾಗ ಅದರಲ್ಲಿ ಯಾವುದೋ ಒಂದು ಅಥವಾ ಹೆಚ್ಚು ಪಾತ್ರಗಳೊಂದಿಗೆ ನಮ್ಮನ್ನು ನಾವು ಗುರಿತಿಸಿಕೊಳ್ತೆವೆ. ಸಾವು ಓದುವಾಗ ಮೊದಲಲ್ಲಿ ರಾಧಿಕಾಳ ಪಾತ್ರ, ಸೋಮಯಾಜಿಗಳ ಪಾತ್ರ ಬಹಳ ಆಕರ್ಷಕ ಎನಿಸಿದರೂ ಬರಬರುತ್ತಾ ನಾನು ದೀಪಕ್'ನ ಪಾತ್ರದತ್ತ ಹೆಚ್ಚೇ ಪಾರ್ಶಲ್ ಆಗುತ್ತಾ ಸಾಗಿದೆ. ಪಾಪದ ಹುಡುಗ, ಅದೆಷ್ಟು ಕಾಡಿಸುತ್ತಾಳಲ್ಲ ಇವಳಿಗೇನಾಗಿದೆ ಅಂತ ರಾಧಿಕಾಳನ್ನು ಬೈದುಕೊಂಡಿದ್ದೂ ಇದೆ. ಕಡೆಗೆ ಸೋಮಯಾಜಿಗಳು ಮತ್ತು ರಾಧಿಕಾಳ ನಡುವಿನ ಧಾರ್ಮಿಕ ಜಿಜ್ಞಾಸೆ/ ಸಂಭಾಷಣೆಯ ನಂತರ 'ಅರೆ, ಈಗೆಂತ ಮದುವೆ ಆಗುತ್ತದೋ ಇಲ್ಲವೋ! ಅವನಲ್ಲಿ ಕಾಯುತ್ತಿದ್ದಾನಲ್ಲ, ಎಂತ ಕಥೆ ಈಗ' ಅಂತೆಲ್ಲ ಅನಿಸಿ ತಲೆಬಿಸಿ ಮಾಡಿಕೊಂಡದ್ದೂ ಇದೆ. ಆದರೆ ತಕ್ಷಣವೇ 'ಅಯ್ಯೋ ಇದೇನು, ಇಷ್ಟು ಹೊತ್ತು ಏನನ್ನು ಓದಿದ್ದು ನಾನು, ಪರಮಾನಂದ ಭಾರತಿಗಳು ಹೇಳಿದ್ದೇನು? ಸೋಮಯಾಜಿಗಳು ಹೇಳಿದ್ದೇನು? ಇಡೀ ಕಾದಂಬರಿಯುದ್ದಕ್ಕೂ ಲೇಖಕ ಹೇಳುತ್ತಿರುವುದೇನು? ಸಂಸಾರಕ್ಕೆ ಅಂಟಿಯೂ ಅಂಟದಂತಿರುವುದು ಸಾಧನೆ ಅಂತಲ್ಲವಾ! ಯಕಶ್ಚಿತ್ ಕಾದಂಬರಿಯ ಕಾಲ್ಪನಿಕ ಪಾತ್ರಗಳನ್ನೇ ಇಷ್ಟೊಂದು ಹಚ್ಚಿಕೊಂಡಿದ್ದೀನಲ್ಲ ಆ ಅಂಟದಂತಿರುವುದು ಏನೋ ಅದು ನನಗೆಂದಾದ್ರೂ ಸಾಧ್ಯವಾದೀತಾ' ಎನಿಸಿ ನಗು ಬಂದುಬಿಟ್ಟಿತು. ಕಥೆಯನ್ನೂ ಪಾತ್ರಗಳನ್ನೂ ಅಷ್ಟು ಪ್ರಭಾವಿಸುವಂತೆ ಸೃಷ್ಟಿಸಬಲ್ಲ ಲೇಖಕರಿಗೆ ಶರಣು.
ಕಾದಂಬರಿ ಇಷ್ಟವಾದ ಮಾತ್ರಕ್ಕೆ ಕೊರೆ ಇಲ್ಲವೆಂದಲ್ಲ. ತುಂಬ ಕುತಂತ್ರಿ, ವುಮನೈಸರ್ ಪಾತ್ರವೊಂದಿದೆ. ಥೋ ಯಾಕಾದ್ರು ಬಂತಪ್ಪ ಈ ಪ್ರಾಣಿ ಈ ಬುಕ್ಕೊಳಗೆ ಅನ್ನಿಸಿ ಅಸಹ್ಯ ಆಗುವಂತಹ ಪಾತ್ರ. ಓದುವಾಗ ನನಗೇ ಮದ್ಯದಲ್ಲಿ ಎದ್ದು ಕೈ ತೊಳ್ಕೊಳೋಣ ಅಂತ ಸಾ ಅನ್ನಿಸಿದ್ದಿದೆ. ಅಷ್ಟು ಹೊಲಸು ಪ್ರಾಣಿಯ ಕ್ಯಾರೆಕ್ಟರ್ ರಿವೀಲಿಂಗ್ ಟೈಮಲ್ಲಿಒಳ್ಳೆ ಪಾತ್ರ ಒಂದರ ಬಾಯಲ್ಲಿ ಸಾಹಿತ್ಯ ಓದುವವರ ಬಗ್ಗೆ ಒಂದೆರಡು ಬೇಸರ ಹುಟ್ಟಿಸುವಂತ ಸಾಲುಗಳನ್ನ ಹೇಳಿಸಿದ್ದು ನನಗಷ್ಟು ಇಷ್ಟವಾಗಲಿಲ್ಲ. ಕೆಲವೊಂದು ಸಂಪ್ರದಾಯ, ಆಚಾರಗಳ ಪಾಲನೆಗಳು ಕೂಡ ಹೆಚ್ಚಿನವರು ಒಪ್ಪುವಂತದ್ದಲ್ಲ ಅನಿಸಿತು. ನಮಗೆಷ್ಟು ಸಾಧ್ಯವೋ, ಅಗತ್ಯವೋ ಅಷ್ಟನ್ನೇ ಸ್ವೀಕರಿಸುವುದು ಎಂದಿಗೂ ಉತ್ತಮವಷ್ಟೇ.
Profile Image for Mallikarjuna M.
51 reviews14 followers
May 19, 2023
ಸುಂದರ ಸಂಸಾರದಲ್ಲಿ ಒಂದು ಆಕಸ್ಮಿಕ "ಸಾವು" ತೆರೆದಿಡುವ ತೊಳಲಾಟಗಳಿಗೆ ಆಧ್ಯಾತ್ಮಿಕತೆಯನ್ನು ಬೆರೆಸಿ ಓದುಗರಿಗೆ to-be or not to-be ಎನ್ನುವ ತುಮುಲಕ್ಕೆ ಒಳಪಡಿಸುವ ಒಂದೊಳ್ಳೆಯ ಕಾದಂಬರಿ.
ರಾಧಿಕಾ - ಸೋಮಯಾಜಿ, ಸೋಮಯಾಜಿ - ಪರಮಾನಂದ ಭಾರತಿಗಳ ಸಂಭಾಷಣೆಯ ಭಾಗಗಳನ್ನು ಪ್ರಾಯಶಃ ಮತ್ತೊಮ್ಮೆ ಓದಿದರೆ ಕಾದಂಬರಿಯನ್ನು ಮತ್ತಷ್ಟೂ ಗ್ರಹಿಸಲು ಸುಲಭವಾಗಬಹುದು.
ಕಾದಂಬರಿಯ ಪಾತ್ರಗಳೇ ಆಗಿರುವ ಕಾಶಿ - ಶೃಂಗೇರಿಗೆ ಮತ್ತೊಮ್ಮೆ ಹೋಗಬೇಕೆನಿಸುವಷ್ಟು ಆಪ್ತವಾಗಿ ಲೇಖಕರು ಈ ಕ್ಷೇತ್ರಗಳ ಬಗ್ಗೆ ವಿವರಿಸಿದ್ದಾರೆ 👌👌👌
Profile Image for Soumya.
217 reviews49 followers
June 4, 2023
ಶೃಂಗೇರಿಯ ಬ್ರಾಹ್ಮಣ ಕುಟುಂಬದ ಒಂದು ಸಾವಿಂದ ಶುರು ಆಗುವ ಕಥೆ.
ಒಂದು ಸಾವು ಹೇಗೆ ಜನರ ಮೇಲೆ ಬೇರೆ ಬೇರೆ ರೀತಿಯ impact ಮಾಡತ್ತೆ ಅನುತ್ತ ಸಾಗುವ ಕಥೆ. ರಾಧಿಕಾ ಹಾಗೂ ಸೋಮಯಾಜಿಯ ನಡೆವ ಸಂಭಾಷಣೆ ಇಷ್ಟ ಆಯ್ತು. ಅಲ್ಲದೇ ಸೋಮಯಾಜಿ ಪ್ರಶ್ನೆಗಳಿಗೆ ಪರಮಾನಂದ ಭಾರತೀಯ ಉತ್ತರಗಳು ಕೂಡ ಮನಸಿನಲ್ಲಿ ಉಳಿಯುವಂಥದ್ದು.
ಇನ್ನು ದೀಪಕ್ ತರ ವ್ಯಕ್ತಿ ನಿಜ ಜೀವನದಲ್ಲಿ ಇರೋದಕ್ಕೆ ಸಾಧ್ಯ ನ ಅಂತ ಪುಸ್ತಕ ಓದುವಾಗ ಹಲವು ಬಾರಿ ನಂಗೆ ನಾನೇ ಕೇಳಿಕೊಂಡೆ.

ಇಷ್ಟೆಲ್ಲಾ ಓದಿ ಕಡೆಯಲ್ಲಿ ಒಂದು ರೀತಿಯ ಓಪನ್ ending ಕೊಟ್ಟದ್ದು ಸ್ವಲ್ಪ ನಿರಾಸೆ ಆಯ್ತು.

ಇರುವ ಕೆಲ್ಸ ಎಲ್ಲ ಬಿಟ್ಟು, ಒಂದೇ ಸಾರಿ ಕೂತು ಓದಿದ ಪುಸ್ತಕ. ಚೆನ್ನಾಗಿದೆ.
This entire review has been hidden because of spoilers.
Profile Image for Bhavya.
18 reviews7 followers
February 4, 2025
ವೈಯಕ್ತಿವಾಗಿ ಆಧ್ಯಾತ್ಮ ಪುಸ್ತಕಗಳನ್ನ ಜಾಸ್ತಿ ಇಷ್ಟಪಡುವವಳು ನಾನದ್ದರಿಂದ ಸುಪ್ರೀತ್ ಅವರ ಉತ್ತರ ಕಾದಂಬರಿ ಮೊದಲು ಓದಿ ತುಂಬಾ ಇಷ್ಟಪಟ್ಟಿದ್ದರಿಂದ ‘ಸಾವು’ ತರಿಸಿಕೊಂಡದ್ದು..
ಶೃಂಗೇರಿಯವಳೇ ಆದ್ದರಿಂದ ನಾನು ‘ಸಾವು’ ಕೂಡ ನನಗೆ ಉತ್ತರದಷ್ಟೇ ಆಪ್ತವೆನಿಸಿತು..
ಒಂದು ಸಾವಿಂದ ಶುರುವಾಗುವ ಕಥೆ ಇದು. ಇದರಲ್ಲಿ ಬರುವ ಜಾಗಗಳು ನನಗೆ ತೀರಾ ಪರಿಚಯವಿದ್ದುದರಿಂದ ಹಾಗೂ ರಾಧಿಕಾನಂತಹ ಪಾತ್ರವನ್ನು ನನ್ನ ಆಪ್ತರಲ್ಲಿ ನಾನು ಹತ್ತಿರದಿಂದ ನೋಡಿದ್ದರಿಂದ ರಾಧಿಕಾ ಕಷ್ಟ ಪಡುತ್ತಿದ್ದ ರೀತಿ,ಅನುಭವಿಸುತ್ತಿದ್ದ ನೋವು, ಅವಳ ಒಂಟಿತನ, ಅವಳ ಮಾನಸಿಕ ತೊಳಲಾಟವನ್ನು ಲೇಖಕರು ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ ಅನ್ನಿಸಿತು.
ಹಾಗೆ ರಾಧಿಕಾ ಮತ್ತು ಸೋಮಯಾಜಿಗಳ ಸಂಭಾಷಣೆ ತುಂಬಾ ಅದ್ಭುತವಾಗಿ ಮೂಡಿಬಂದಿದೆ..
ಕಾದಂಬರಿ ಓದುತ್ತಾ ಓದುತ್ತಾ ಹೋದಂತೆ ದೀಪಕ್ ಪಾತ್ರ ಜಾಸ್ತಿ ಇಷ್ಟವಾಗಲು ಶುರುವಾಯಿತು. ಪಾಪದ ಹುಡುಗನಿಗೆ ರಾಧಿಕಾ ಈ ತರ ಸತಾಯಿಸ್ತಾ ಇದಾಳಲ್ಲ ಅನ್ನಿಸಿತು..
ಹಾಗೆ ಚೈತ್ರ, ರಮೇಶ, ಗಣೇಶ ಭಟ್ಟರು, ಅವರದೇ ಪಾತ್ರಗಳಲ್ಲಿ ತುಂಬಾ ಪ್ರಭಾವಿಸುವ ವ್ಯಕ್ತಿತ್ವಗಳಾಗಿ ಕಂಡವು.. ಕಾದಂಬರಿಯ ಮುಕ್ತಾಯ ಕೂಡ ನಂಗೆ ಇಷ್ಟ ಆಯಿತು..
ಒಟ್ಟಿನಲ್ಲಿ ತುಂಬಾ ಪ್ರಭಾವಿಸುವ, ಯೋಚನೆಗೆ ಹಚ್ಚುವಂತಹ ಕಾದಂಬರಿ ಈ ‘ಸಾವು’.
Profile Image for Prashanth Bhat.
2,155 reviews137 followers
June 25, 2020
ಸಾವು - ಸುಪ್ರೀತ್ ಕೆ. ಎನ್.

ಸಾವು ನಮಗೆ ತೀರಾ ಭಯ ಹುಟ್ಟಿಸುವ ವಿಷಯ.ಅದರ ಬಗೆಗಿನ ಕುತೂಹಲ ಮುಗಿಯದಂತಹದ್ದು‌. ಜಿಜ್ಞಾಸೆ ಸದಾ ನಡೆಯುತ್ತಿರುವುದು‌.ಇಂತಹ ವಸ್ತುವನ್ನಿಟ್ಟುಕೊಂಡು ಕಾದಂಬರಿ ಬರೆಯುವುದು ಕಷ್ಟದ ಕೆಲಸ.
ಸುಪ್ರೀತರ ಕಾದಂಬರಿ ಈ ಪ್ರಯತ್ನದಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ ಎಂದು ಹೇಳಬಹುದು.
ಕಾದಂಬರಿಯ ಆರಂಭದಲ್ಲೇ ಒಂದು ಸಾವು ಸಂಭವಿಸುತ್ತದೆ. ಸಾವಿನ ದಟ್ಟ ಮೌನ, ಅದು ಸುತ್ತಲಿನವರ ಕಾಡುವ ಪರಿ, ಅವಲಂಬನೆಯ ಬಳ್ಳಿಗೆ ಮರ ಕುಸಿದು ಬಿದ್ದಾಗ ಆಗುವ ಆಘಾತ ಇವೆಲ್ಲ ಮನಸಿಗೆ ತಾಗುವ ಹಾಗೆ ಚಿತ್ರಣವಿದೆ. ಇದಕ್ಕೆ ಪೂರಕವಾಗಿ ಶೃಂಗೇರಿಯ ಚಿತ್ರಣ ,‌ ಇಡೀ ಕಾದಂಬರಿ ಸರಿ ತಪ್ಪುಗಳ ತೊಳಲಾಟ, ಪಾರಮಾರ್ಥದ ಚಿಂತನೆಯಲ್ಲಿ ಸಾಗುತ್ತದೆ.
ಸುಪ್ರೀತರಿಗೆ ಕಥೆ ಕಟ್ಟುವ ಕೌಶಲ ಒಲಿದಿದೆ. ಅವರ ಭಾಷೆಯ ಬಳಕೆಯಾಗಲೀ, ಪಾತ್ರ ಚಿತ್ರಣವಾಗಲೀ ಇಲ್ಲಾ ಸಂಬಂಧಗಳ ಮನುಷ್ಯನ ಮನಸಿನ ತೊಳಲಾಟವಾಗಲೀ ಮೇಲ್ಮಟ್ಟದ್ದು. ಎಲ್ಲೂ ಕೂಡ ಅದರಲ್ಲಿ ಟೊಳ್ಳು ಕಾಣಿಸಲಿಲ್ಲ‌.

ಆದಾಗ್ಯೂ ನನಗೆ ಕ್ರಿಯೆಯ ವಿವರಗಳಲ್ಲಿ ಇವರಿಗೆ ಅಷ್ಟಾಗಿ ಅನುಭವ ಇರುವಂತೆ ಕಾಣುವುದಿಲ್ಲ ಎಂದು ತೋಚಿತು‌. ಆ ಭಾಗದಲ್ಲಿ ಅಷ್ಟು ವಿವರಣೆಯ ಅಗತ್ಯವೂ ಬೇಡವಿದ್ದಂತೆ ಅನಿಸಿತು. ಇದೇನೂ ಕೊರತೆ ಅಲ್ಲ ಸ್ವಲ್ಪ ಅಸಹಜ ಅನಿಸಿತು.

ವಂಶವೃಕ್ಷದ ಕಾತ್ಯಾಯಿನಿ ಮಾತ್ರ ಪದೇ ಪದೇ ನೆನಪಾದಳು.
Profile Image for Mamatha Venkatesh.
9 reviews5 followers
January 3, 2021
ನಾನು ಓದಿದ ಸುಪ್ರೀತ್ ರವರ ಮೊದಲ ಕಾದಂಬರಿ (?) ಅದರ ನಂತರ ಓದಿದ್ದೇ ಈ ಕೃತಿಯನ್ನು. ಸಾವೆಂದರೆ ಮನುಷ್ಯನಿಗೆ ಒಂದು ರೀತಿಯ ಭಯ ಅಂತಲೇ ಹೇಳಬಹುದು...ನಾವು ಸಾಯುವ ಭಯ...ನಮಗೆ ಪ್ರಿಯವಾದವರು ಸಾಯುವ ಭಯ  .... ನಮ್ಮ ಕಣ್ಣ ಮುಂದೆ ಆತ್ಮೀಯರು ಸತ್ತಾಗ ಅದಕ್ಕಿಂತ ಬೇರೆ ನರಕವಿಲ್ಲ..‌.ತುಂಬಾ ಅನ್ಯೋನ್ಯವಾಗಿದ್ದ ಪತಿ ಪತ್��ಿಯರಲ್ಲಿ ಒಬ್ಬರು ಸಾವಿಗೀಡಾದಾಗ ಅದರ ನೋವು ಸಂಕಟಗಳು ಎಷ್ಟುಭಯಂಕರ ಎನ್ನುವುದನ್ನು  ಹೇಳಲಸಾಧ್ಯ..

ಅದರಲ್ಲಿಯೂ ಸಹ ಚಿಕ್ಕ ವಯಸ್ಸಿನ ಹೆಣ್ಣು ರಾಧಿಕಾ.. ತನ್ನ ಪತಿ ವಿನಯನನ್ನು  ಅತ್ಯಂತ ಅನಿರೀಕ್ಷಿತವಾಗಿ ಕಳೆದುಕೊಂಡಾಗ ಅವಳ ಮುಂದೆ ಧುತ್ತೆಂದು ಅವಳ ಮುಂದಿನ ಜೀವನದ ಬಗ್ಗೆ ..ಅವಳ ಮುದ್ದು ಪುಟ್ಟ ಮಗಳು ಸಾನ್ವಿಯ ಭವಿಷ್ಯದ ಬಗ್ಗೆ ...ಭೂತಾಕಾರವಾಗಿ ಅವಳ ಮುಂದೆ ನಿಲ್ಲುವ ಸಮಸ್ಯೆ ಅತ್ಯಂತ ಭೀತಿ ಹುಟ್ಟಿಸುತ್ತದೆ. ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಲು ಅವಳು ಬಹಳಷ್ಟು ಹೆಣಗಾಡುತ್ತಾಳೆ . ಅವಳು    ಅನುಭವಿಸಬೇಕಾದ ಸಂಕಟಗಳು, ತುಮುಲಗಳು  ಇಲ್ಲಿ ಅತ್ಯಂತ ಸಹಜವಾಗಿ ಮೂಡಿಬಂದಿವೆ. ಬ್ರಾಹ್ಮಣ ಮನೆತನದಲ್ಲಿ ಹುಟ್ಟಿ ಮರು ಮದುವೆಯ ಪ್ರಸ್ತಾಪ ಬಂದಾಗ ಸಹಜವಾಗಿ ಅವಳು ಹಿಂಜರಿಯುತ್ತಾಳೆ. ಆದರೆ ತನ್ನ ಶಾರೀರಿಕ ಬಯಕೆಗಳನ್ನು ಹತ್ತಿಕ್ಕುವಲ್ಲಿ ತನ್ನ ಮಾನಸಿಕ ಒಂಟಿತನವನ್ನು ನೀಗುವಲ್ಲಿ ಅವಳು ವಿಫಲವಾಗುತ್ತಾಳೆ. ಇದರ ಮಧ್ಯೆಯೇ ಅವಳ ಸಹೋದ್ಯೋಗಿ ಮೂರ್ತಿಯ ನಡವಳಿಕೆ ಅಚ್ಚರಿಯನ್ನು ನಮಗೆ ಹುಟ್ಟಿಸುವುದಿಲ್ಲ!!!! ನಮ್ಮ ಸಮಾಜದಲ್ಲಿ ಇಂತಹವರೇ ಪಾರ್ಥೇನಿಯಂ ಕಳೆಗಳ ಹಾಗೆ ಬೇಕಾದಷ್ಟು ಜನ ಹುಟ್ಟಿಕೊಂಡಿದ್ದಾರೆ. ಆದರೆ ಅಂತಹವರನ್ನು ಗುರುತಿಸುವಲ್ಲಿ ರಾಧಿಕ ವಿಫಲವಾಗುವುದು ಅಚ್ಚರಿ ಹುಟ್ಟಿಸುತ್ತದೆ.

ತನ್ನೆದುರು ಮರುಮದುವೆಯ ಪ್ರಸ್ತಾಪವನ್ನಿಡುವ ದೀಪಕ್ ನ ವಿಷಯದಲ್ಲಿ ಅವಳು ನಡೆದುಕೊಳ್ಳುವ ರೀತಿ ಸಹಜವಾದ ನಡುವಳಿಕೆಯೇ  ಅನಿಸುತ್ತದೆ. ಏಕೆಂದರೆ ಒಬ್ಬ ಬ್ರಾಹ್ಮಣ ವಿಧವೆಯಾಗಿ ಅವಳು ತನ್ನ ಮರು ಮದುವೆಯಾಗುವ ಆಸೆಯ ಮಧ್ಯೆಯೂ ಅವನನ್ನು ನಿರಾಕರಿಸುವುದು ನಮಗೇನು  ಆಶ್ಚರ್ಯ ಹುಟ್ಟಿಸುವುದಿಲ್ಲ. ಸಮಾಜ ಹೆಂಗಸು ಮರು ಮದುವೆಯಾಗುವುದನ್ನು ಇನ್ನೂ ಅಷ್ಟೊಂದು ಸಹಜವಾಗಿ ತೆಗೆದುಕೊಳ್ಳುವಷ್ಟು ನಿರ್ವಿಕಾರಿಯಾಗಿಯೂ ಉದಾರಿಯಾಗಿಯೂ ತಯಾರಾಗಿಲ್ಲವಲ್ಲ.ಅತ್ಯಂತ ಆಧುನಿಕರೂ ಇದಕ್ಕೆ ಹೊರತಾಗಿಲ್ಲ.ಇದನ್ನು ನಾನೂ ಸಹ ಕಣ್ಣಾರೆ ಕಂಡಿದ್ದೇನೆ.ನಿನ್ನೆಯವರೆಗೂ ಮುತ್ತೈದೆ ಲಕ್ಷ್ಮಿಯಾಗಿದ್ದವಳು ಪತಿಯ ಸಾವಿನ ನಂತರ   ಅಮಂಗಲಕಾರಿ ವಿಧವೆಯಾಗಿಬಿಡುವುದು ಅವಳ ಪಾಲಿಗೆಷ್ಟು ಯಾತನಾಕಾರಿ...

ಅವರವರ ಜೀವನ ಅವರದು ಎನ್ನುವ ಮನೋಭಾವನೆ ಇನ್ನೂ ನಮ್ಮ ಸಮಾಜದಲ್ಲಿ ಹುಟ್ಟಿಲ್ಲ. ವಿಧುರ  ಮದುವೆಯಾಗುವುದು  ಎಷ್ಟು ಸಹಜವೋ ಹೆಣ್ಣು ವಿಧವೆಯಾಗಿ ಒಂಟಿತನದ ಶಾಪಕ್ಕೆ ಒಳಗಾಗಿ ಒಂಟಿತನದ ಬೆಂಕಿಯಲ್ಲಿ ಬೇಯ ಬೇಕಾದ ಪರಿಸ್ಥಿತಿ ಇನ್ನೂ ನಮ್ಮ ಆಧುನಿಕ ಸಮಾಜದಲ್ಲಿ ಇರುವುದಕ್ಕಾಗಿ ನಾವು ನಾಚಿಕೆ ಪಡಬೇಕಾಗುತ್ತದೆ .

ಇದು ರಾಧಿಕಾರ ಒಂಟಿತನದ ಜೀವನದ ಪಯಣದ ಕಥೆಯಾದರೂ ಸಹ ಸೋಮಯಾಜಿಗಳು ಹಾಗೂ ಪರಮಾನಂದ ಭಾರತಿಯವರು ನಮ್ಮ ಮನದಲ್ಲಿ ಉಳಿದು ಹೋಗುತ್ತಾರೆ .ಸೋಮಯಾಜಿಗಳು ಹೇಳುವ ಒಂಟಿತನ ಏಕಾಂತವಾಗಿ ಪರಿವರ್ತನೆ ಹೊಂದದ ಹೊರತು ಸ್ವರೂಪದ ಅನುಭವವಾಗುವುದಿಲ್ಲ ಪೂರ್ಣತೆ ಹೊಂದುವುದಿಲ್ಲ ಎಂಬುದು ರಾಧಿಕಾಳ ಮರುಮದುವೆಯ ವಿಷಯದಲ್ಲಿ ಎಷ್ಟು ಸರಿ ಎನ್ನುವುದು ನಮ್ಮನ್ನು ಆಲೋಚನೆಗೀಡಾಗಿಸುತ್ತದೆ!!!!.

ದೀಪಕ್ ರ ತಂದೆ ರಾಧಿಕಾಳ ವಿಷಯದಲ್ಲಿ ನಡೆದುಕೊಳ್ಳುವ ರೀತಿಯಂತೂ ಅಸಹ್ಯ ಹುಟ್ಟಿಸುತ್ತದೆ. ರಾಧಿಕಾಳ ಬಗ್ಗೆ ನಮ್ಮಲ್ಲಿ ಅನುಕಂಪ ಮೂಡುತ್ತದೆ.ಒಂದೆಡೆಗೆ ಸಮಾಜದ ಭೀತಿ.. ಇನ್ನೊಂದೆಡೆಗೆ ತಾಯಿ-ತಂದೆಯರ ವಿರೋಧ ...ಮತ್ತೊಂದೆಡೆಗೆ ವಿನಯನ ತಂದೆ-ತಾಯಿಯರ ಜೀವನದ ಚಿಂತೆ... ಅವಳನ್ನು ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ತಡೆಯುತ್ತಿರುತ್ತದೆ.

ಅಲ್ಲಲ್ಲಿ ನಮಗೆ ಯಾಕೋ ವಂಶವೃಕ್ಷ ನೆನಪಾಗುತ್ತದೆ. ಕಾದಂಬರಿಯು ಸಹ ಭೈರಪ್ಪನವರ ಬರವಣಿಗೆಯನ್ನು ಅಲ್ಲಲ್ಲಿ ನೆನಪಿಗೆ ತರುತ್ತದೆ.ಕಾದಂಬರಿಯಲ್ಲಿ ಹೆಣೆದುಕೊಂಡ ಆಧ್ಯಾತ್ಮಿಕತೆಯೇ ಇದಕ್ಕೆ ಕಾರಣವೇನೋ  ಎನಿಸುತ್ತದೆ. ಕಾದಂಬರಿ ಅಂತ್ಯದಲ್ಲಿ ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟು ತೀರ್ಮಾನವನ್ನು ಓದುಗರಿಗೆ ಬಿಡುತ್ತದೆ.

ಕಾದಂಬರಿ ಚುರುಕಾಗಿ ...ವೇಗವಾಗಿ ...ಓದಿಸಿಕೊಂಡು ಹೋಗುತ್ತದೆ. ರಾಧಿಕಾಳ ಒಂಟಿತನದ ವೇದನೆ ಅತ್ಯಂತ ಸಹಜವಾಗಿಯೂ, ಮನೋಜ್ಞವಾಗಿ ಮೂಡಿಬಂದಿದೆ. ವಿಧವೆಯರ  ಪರಿಸ್ಥಿತಿ ಮೊದಲಿಗಿಂತ ಎಷ್ಟೋ ಸುಧಾರಿಸಿದ್ದರೂ ಸಹ ಇಂದಿನ ಆಧುನಿಕ ಸಮಾಜದ ನಾಗಾಲೋಟದಲ್ಲಿ ಈ ವಿಷಯದಲ್ಲಿ ಮಾತ್ರ ಏಕೋ ಹಿಂದುಳಿದಿದೆ. ಕಾದಂಬರಿ ಈ ನಿಟ್ಟಿನತ್ತ ಬೆಳಕು ಚೆಲ್ಲುತ್ತದೆ. ತಂದೆ-ತಾಯಿಯ ಪ್ರಬಲ ವಿರೋಧದ ಮಧ್ಯೆಯೂ ರಾಧಿಕಾಳ ಜೀವನಕ್ಕೆ ಬೆಳಕು ಚೆಲ್ಲಲು ದೃಢ ಮನಸ್ಕನಾಗಿ ಸಿದ್ಧನಾಗುವ  ದೀಪಕ್ ನತ್ತ ನಮಗೆ ಮೆಚ್ಚುಗೆ ಮೂಡುತ್ತದೆ. ಅಂತಹ ದೀಪಕ್ ರ ಸಂಖ್ಯೆ ಹೆಚ್ಚಾಗಿ ನಮ್ಮ ಸಮಾಜದಲ್ಲಿ ಹುಟ್ಟಿಕೊಂಡರೆ ಬಹುಶಃ ವಿಧವೆಯರ ಪರಿಸ್ಥಿತಿ ಸುಧಾರಿಸಬಹುದು.

ಈ  ಪುಸ್ತಕವನ್ನು ಓದಿದ ಬಳಿಕ ಮೊದಲು ಓದಿದ (?)ಕಾದಂಬರಿ ನಿಜಕ್ಕೂ ಸುಪ್ರೀತ್ ರು ಬರೆದಿದ್ದೇ ಎನಿಸುತ್ತದೆ !!!??? ಎರಡೂ ಪೂರ್ತಿಯಾಗಿ ಭಿನ್ನ ಧ್ರುವಗಳೆ ಸರಿ !! ಈ ಪುಸ್ತಕ  ಜೀವನದಲ್ಲಿ ಎಷ್ಟೋ  ಅನುಭವ ಪಡೆದು.. ಬದುಕಿನ ಕಷ್ಟಸುಖಗಳನ್ನು ಕಂಡುಕೊಂಡ ಹಿರಿಯರು ಬರೆದ ಧಾಟಿಯಲ್ಲಿ ಇದೆ. ಅದಕ್ಕಾಗಿಯೇ ಸುಪ್ರೀತ್ ರ ಈ ಪುಸ್ತಕ ಮೆಚ್ಚುಗೆ ಮೂಡಿಸುತ್ತದೆ. ಮೊದಲ (?)ಕಾದಂಬರಿ ಅವರ ವಯಸ್ಸಿಗೆ ತಕ್ಕಂತೆ ಇದ್ದರೆ ಈ ಕಾದಂಬರಿ ಸಾಕಷ್ಟು ಅಧ್ಯಯನದ ಫಲವೇನೋ ಎನಿಸುತ್ತದೆ. ಓದುವಾಗ ಮಾತ್ರ ಈ ಕಾದಂಬರಿಯನ್ನು ಕೆಳಗಿಡಲು ಮನಸ್ಸಾಗುವುದಿಲ್ಲ. ಚಂದದ ನಿರೂಪಣೆಯ  ಕಾದಂಬರಿಯಿದು. ಈ ತಲೆಮಾರಿನ  ಯುವ ಲೇಖಕರ ಪುಸ್ತಕಗಳಲ್ಲಿ ಗಮನ ಸೆಳೆಯುವಂತಹ ಪುಸ್ತಕಗಳ ಪಟ್ಟಿಯಲ್ಲಿ ಖಂಡಿತ ಈ ಪುಸ್ತಕಕ್ಕೆ ಅಗ್ರಸ್ಥಾನವಿರುತ್ತದೆ. ಸುಪ್ರೀತ್ ಅಂತಹ ಚಿಕ್ಕವಯಸ್ಸಿನ ಲೇಖಕರು ಇಷ್ಟೊಂದು ಪ್ರಬುದ್ಧವಾಗಿ ಬರೆಯುವುದು ಖುಷಿ ಹುಟ್ಟಿಸುತ್ತದೆ .ತುಂಬಾ ದಿನಗಳವರೆಗೂ  ಆಲೋಚನೆಗೆ ಹಚ್ಚಿದ ಕಾದಂಬರಿ.

ನೀವೊಮ್ಮೆ ಓದಿ  ಕೈಗೆತ್ತಿಕೊಂಡರೆ ಮುಗಿಸುವವರೆಗೆ ನಿಲ್ಲಿಸಲಾರಿರಿ .ಒಮ್ಮೆ ಪ್ರಯತ್ನಿಸಿ.
Displaying 1 - 6 of 6 reviews

Can't find what you're looking for?

Get help and learn more about the design.