ಪಟೇಲರ ಮಗ ಸುಮಂತ್ ಮನೆ ಬಿಟ್ಟು ಕಾಡು ಸೇರಿದ ಹೊತ್ತಲ್ಲೇ ಕಾಡಿನಂಚಿನಲ್ಲಿ ಕಾಣಿಸಿಕೊಂಡಿದೆ ಒಂದು ಹೆಬ್ಬುಲಿ ..! ಲಂಡನ್ನಿಗೆ ಓದಲು ಹೋಗಿ ಕಾಕನಕೋಟೆಗೆ ಹಿಂದಿರುಗಿದ್ದ ಸಾರಂಗನೂ ಗೆಳೆಯ ಅಬು ಜೊತೆ ಸುಮಂತನ ಹುಡುಕಾಟಕ್ಕೆ ಕಾಡಿಗೆ ಇಳಿದಿದ್ದಾನೆ.. ಸುಮಂತ ಸಿಗುತ್ತಾನಾ? ಸುಮಂತ ಕಾಡಲ್ಲಿ ಸುರಕ್ಷಿತವಾಗಿದ್ದಾನೆ, ಇನ್ನೆರಡು ದಿನದಲ್ಲಿ ಬರಲಿದ್ದಾನೆ ಎಂದು ಹುಲಿ ಪತ್ರಿಕೆಯಲ್ಲಿ ಬರೆದಿದ್ದು ನಿಜವಾಗುತ್ತಾ? ಹುಲಿ ಪತ್ರಿಕೆಯನ್ನು ಬರೆಯುತ್ತಿರುವುದು ಯಾರು ಎಂದು ತಿಳಿಯುವ ಇನ್ಸಪೆಕ್ಟರ್ ಕೇಶವ್ ಪ್ರಯತ್ನ ಕೈಗೂಡತ್ತಾ? ಸಾರಂಗ ಮತ್ತು ವೇದ ಒಂದಾಗುತ್ತಾರಾ?
ಕಥಾ ನಿರೂಪಣೆ: ಗಣೇಶ್ ಮಂದಾರ್ತಿ, ಹುಲುಗಪ್ಪ ಕಟ್ಟಿಮನಿ, ಮೇಘ ಸಮೀರ, ದಿಶಾ ರಮೇಶ್, ಬರ್ಟಿ ಒಲಿವೆರ, ಯತೀಶ್ ಕೊಳ್ಳೇಗಾಲ, ಉಮೇಶ್ ಸಾಲಿಯಾನ ಮತ್ತು ನಟನ ರಂಗ ಶಾಲೆ, ಮೈಸೂರಿನ ರಂಗಕರ್ಮಿಗಳು.
ಅನುಷ್ ಜನಿಸಿದ್ದು ಮಂಗಳೂರಿನಲ್ಲಿ. ವಿದ್ಯಾಭ್ಯಾಸ ಹುಣಸೂರು, ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ವಿದ್ಯುನ್ಮಾನ ಮಾಧ್ಯಮದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಇವರು ಕನ್ನಡಪ್ರಭಾ, ಸಾಧ್ವಿ ದಿನಪತ್ರಿಕೆಗಳಲ್ಲಿ, ಜೀ ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 15 ವರ್ಷಗಳ ಕಾಲ ಮೃದಂಗ ವಾದನ ಕಲಿತ ಇವರು, ಅನೇಕ ಲಯವಾದ್ಯಗಳನ್ನು ನುಡಿಸಬಲ್ಲವರಾಗಿದ್ದು, ತಮ್ಮ ಗೆಳೆಯರೊಂದಿಗೆ ಸೇರಿ ಆರಂಭಿಸಿರುವ 'ನಾವು' ಮತ್ತು 'ರಿದಂ ಅಡ್ಡ' ಬ್ಯಾಂಡ್‌ಗಳ ಮೂಲಕ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕೆಲವು ವರ್ಷಗಳಿಂದ ರಂಗ ಸಂಗೀತವನ್ನೂ ಮಾಡುತ್ತ ದೇಶಾದ್ಯಂತ ಓಡಾಡುತ್ತಿದ್ದಾರೆ. ಅನುಗ್ರಹ ಪ್ರಕಾಶನವನ್ನು ಮುನ್ನಡೆಸುತ್ತಿದ್ದಾರೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳಿಂದ ಪ್ರೇರಿತರಾಗಿ ಸಾಹಿತ್ಯ ಸೃಜಿಸುವೆಡೆಗೆ ಬಂದ ಅನುಷ್‌ರ ಈವರೆಗಿನ ಬರಹದ ಮೂಲವಸ್ತು ಪ್ರಕೃತಿಮೇ ಆಗಿದೆ. ಸಣ್ಣ ವಿಷಯಗಳಲ್ಲೂ ಕೌತುಕ ತೋರುತ್ತ, ಸದಾ ಊರಿಂದ ಊರಿಗೆ ಓಡಾಡುತ್ತ, ಹಾಡುತ್ತ, ಬರೆಯುತ್ತ ಇರುವ ಇವರು ಸದ್ಯ ಮಡದಿ ಡಾ. ಅನುಷಾ ಅವರೊಂದಿಗೆ ಮೈಸೂರಿನಲ್ಲಿ ನೆಲೆಸಿದ್ದಾರೆ.
ನಮಗ್ಯಾಕೆ ತೇಜಸ್ವಿ ಇಷ್ಟ? ಗಹನ ಸಂಗತಿಗಳ ಸರಳವಾಗಿ ವಿವರಿಸಿದರು ಎಂದೇ? ಹೊಟ್ಟೆ ಹುಣ್ಣಾಗುವಂತೆ ನಗಿಸ್ತಾ ಇದ್ದರು ಎಂದೇ? ಜಗತ್ತಿನ ವಿಸ್ಮಯಗಳ ಕುರಿತು ಕನ್ನಡಿಗರಿಗೆ ಪರಿಚಯ ಮಾಡಿಸಿದರು ಎಂದೇ? ನಿಗೂಢತೆಗಾ?
ಅಲ್ಲ. ಅತ್ಯಂತ ಸರಳವಾದ ಅವರ ಬರವಣಿಗೆ ಓದಿ ಮುಗಿಸಿದ ಮೇಲೋ ಏನೋ ಒಂದು ಕಾಡಲು ಉಳಿಸಿ ಹೋಗುತ್ತಿತ್ತು. ಆ ಏನೋ ಒಂದು ಏನಂತ ಸ್ಪಷ್ಟವಿಲ್ಲದಿದ್ದರೂ ತೇಜಸ್ವಿ ನಮ್ಮೊಳಗೆ ಹುಟ್ಟಿಸಿದ ಆ ಅಪೂರ್ಣತೆಯೇ ನಮ್ಮ ಆಸಕ್ತಿಯ ಹವ್ಯಾಸಗಳ ಬೆಳೆಸಿತು ಎನ್ನುವುದು ಅವರ ಕೈ ಹಿಡಿದು ಕನ್ನಡ ಸಾಹಿತ್ಯಕ್ಕೆ ನಡೆದು ಬಂದ ಎಲ್ಲ ಓದುಗರಿಗೆ ಅರಿವಿರುವ ವಿಷಯ.
ಅನುಶ್ ಶೆಟ್ಟಿಯವರ ಈ ಹಿಂದಿನ ನಾಲ್ಕೂ ಕಾದಂಬರಿಗಳ ಓದಿದ್ದೆ. ಚಿಕ್ಕಮಗಳೂರು ಕಡೆಗೆ ನೀವ್ಯಾವತ್ತಾದರೂ ಹೋಗಿದ್ದೀರಾ? ಬಸ್ಸಲ್ಲಿ? ಕಿಟಕಿಯ ಅರೆ ತೆರೆದು ಆ ತಿರುವುಗಳಲ್ಲಿ ಹೊರ ನೋಡಿದಾಗ ಕಾಣುವ ಬೆಟ್ಟಗಳ ಸೌಂದರ್ಯದಲ್ಲಿ ಒಂದು ನಿಗೂಢತೆ ಕಾಡುತ್ತದೆ(ನಿಗೂಢ ಮನುಷ್ಯರು ಓದಿದರೆ ಕಾಡುವ ಹಾಗೆ) ಅನುಶ್‌ರ ಬರವಣಿಗೆ ತೇಜಸ್ವಿಯವರ ನೆನಪಿಸುತ್ತದೆ. ದಟ್ಟವಾಗಿ. ಭಾಷೆ ಬೇರೆಯೇ. ಆದರೆ ನಿಮಗೆ ತೇಜಸ್ವಿ ನೆನಪಾಗಲೇ ಬೇಕು.
ಸುಲಲಿತ ಹಾಡಿನಂತಹ ಶೈಲಿ! ಇಲ್ಲೇ ಎಲ್ಲ ಮುಗಿದಿಲ್ಲ ಎಂಬಂತಹ ಕೊನೆ! ಅವರ ಈ ಮೊದಲ 'ನೀನು ನಿನ್ನೊಳಗೆ ಖೈದಿ' ಕನ್ನಡದಲ್ಲಿ ಬಂತ ಒಳ್ಳೆಯ ಸೈನ್ಸ್ ಫಿಕ್ಷನ್ ಕಾದಂಬರಿಗಳಲ್ಲಿ ಒಂದು.
ಹುಲಿ ಪತ್ರಿಕೆಯೂ ಅವರ ಹಿಂದಿನ ಬರವಣಿಗೆಯ ಹಾಗೇ. ಊರು, ಅಲ್ಲೊಂದು ರಹಸ್ಯ, ಹುಡುಕಾಟ,ಗೆಳೆಯರು,ಪ್ರೀತಿ ಹೀಗೆ.
ಅನುಶ್‌ರ ಓದಬೇಕು ನೀವು.
ಅನುಗ್ರಹ ಪ್ರಕಾಶನದ ಮುದ್ರಣ ನನಗೆ ಯಾವತ್ತೂ ಚಂದ. ಆದರೆ ಈಗ ತಗೊಂಡ ಇಬುಕ್ ಅಲ್ಲಿ ನಾಲ್ಕಾರು ಸಣ್ಣ ಸಣ್ಣ ಅಕ್ಷರ ತಪ್ಪುಗಳು ಕಂಡಿತು.
ನನಗೆ ಅನುಶ್‌ರ ಬರವಣಿಗೆ ಬಗ್ಗೆ ಇರುವ ಏಕೈಕ ತಕರಾರು. ಬಹಳ ಚಿಕ್ಕ ಚಿಕ್ಕ ಪುಸ್ತಕ ಬರೀತಾರೆ ಅಂತ. ಒಂದು - ಎರಡು ಗಂಟೆಯಲ್ಲಿ ಓದಿ ಮುಗಿಸಬಹುದಾದಷ್ಟು (ನೀನು ನಿನ್ನೊಳಗೆ ಖೈದಿ ಬಿಟ್ಟು.ಅದು ಸ್ವಲ್ಪ ಸಮಯ ಬೇಡುತ್ತದೆ ಅರ್ಥ ಮಾಡಿಕೊಳ್ಳಲು) ತಮಾಷೆಗೆ.
ನಾ ಅವತ್ತೇ ಹೇಳಿದ ಹಾಗೆ ಭರವಸೆಯ ಲೇಖಕ ಇವರು.
This entire review has been hidden because of spoilers.
ಇದು ನಾ ಓದುತ್ತಿರುವ ಅನುಷ್ ರವರ ನಾಲ್ಕನೆಯ ಕಾದಂಬರಿ. ನೀನು ನಿನ್ನೊಳಗೆ ಖೈದಿ ಮತ್ತು ಆಹುತಿ ತುಂಬಾ ಇಷ್ಟ ಪಟ್ಟ ಮೇಲೆ ಅನುಷ್ ರವರ ಎಲ್ಲಾ ಕತೆಗಳು ಓದೇ ಓದುವೆ ಅನ್ನೋ ತೀರ್ಮಾನ ಮಾಡಿದ್ದೆ. ಹುಲಿ ಪತ್ರಿಕೆ ೧ ಮತ್ತು ೨ ಆ ಲೈನ್ನಲ್ಲಿ ಇದ್ದವು. ನಗರ ಕೇಂದ್ರ ಗ್ರಂಥಾಲಯದಿಂದ ಎರಡೂ ಪುಸ್ತಕಗಳು ಸಿಕ್ಕಿದ್ದು ಖುಷಿ ದುಪ್ಪಟ್ಟುಗೊಳಿಸಿತು.
ಸಂಪಾದಕರಿಲ್ಲದ ಪತ್ರಿಕೆ ಒಂದು ಹಳ್ಳಿಯಲ್ಲಿ ಹರಡುತ್ತಿದೆ, ಕೆಲವರಿಗೆ ಅದು ಒಂದು ಬೆರಗಾಗಿಸುವ ಸುದ್ದಿ ತಲುಪಿಸೋ ವಿಧಾನ, ಆದ್ರೆ ಕೆಲವರಿಗೆ ಆ ಪತ್ರಿಕೇನೇ ತಲೆ ನೋವುಂಟು ಮಾಡಿದೆ.
ವರ್ಷಗಳು ಕಳೆದ ಮೇಲೆ ಫಾರಿನ್ನಿಂದ ಬಂದ ಯುವಕನೊಬ್ಬ ಬಂದ ಕೂಡಲೆಯೇ ಹಳ್ಳಿಯ ವಿಷಯಗಳಲ್ಲಿ ಆಸಕ್ತಿ ತೋರಿಸಿ ಕಾಡಲ್ಲಿ ಕಳೆದೋಗಿರೋ ಗೆಳೆಯನನ್ನು ಹುಡುಕೋ ಪ್ರಯತ್ನದಲ್ಲಿ ಇದ್ದಾನೆ. ಇತ್ತ ಹೆಂಡದಂಗಡಿಯಲ್ಲಿ ಸೇರೋ ಕುಡುಕ್ರ ಗಲಾಟೆ ಒಂದಿನ ಆದ್ರೆ ಮತ್ತೊಂದಿನ ಅವ್ರವ್ರ ಬಾಟ್ಲು ಖಾಲಿ ಮಾಡಿ ಮನೆ ಸೇರ್ತಾರೆ. ಲೋಕಲ್ ಪೊಲೀಸ್ ಸ್ಟೇಷನ್ನ ಕೇಶವ್ಗೆ ಒಂದೇ ವಿಷ್ಯ ಅವನ ನಿದ್ದೆ ಗೆಡಿಸುತ್ತಿದೆ, ಅದೇ ಆ ಪತ್ರಿಕೆ.
ಪುಸ್ತಕ ಕೆಳೆಗಿಡುವ ಮನಸೇ ಆಗಿಲ್ಲ, ಓದ್ತಾ ಓದ್ತಾ ಕತೆ ಮುಗಿದಿದ್ದೆ ಗೊತ್ತಾಗಿಲ್ಲ. ಪುಸ್ತಕದ ಕೊನೆಯ ಹಂತಕ್ಕೆ ಬಂದ ತಿರುವು ಕೆಲವ್ರು ಊಹಿಸಬಹುದು, ಆದ್ರೂ ಸ್ವಲ್ಪ ಕಷ್ಟನೇ, ಯಾಕಂದ್ರೆ ಕತೆಯ ಪ್ರಾರಂಭ ಹಾಗೂ ಮುಂದುವರಿದ ರೀತಿ ಹಾಗಿದೆ ಅನ್ನಬಹುದು.
ಮಿಸ್ಟ್ರಿ ಥ್ರಿಲ್ಲರ್ ಇಷ್ಟ ಪಡುವವರು ಖಂಡಿತವಾಗಿ ಓದಲೇಬೇಕು. ಎರಡನೆಯ ಭಾಗ ಓದುವ ಕುತೂಹಲ, ಆದರೂ ಈ ಕತೆಯ ಗುಂಗು ಒಂದೆರಡು ದಿನ ಇರಲಿ.
ಪುಸ್ತಕದ ಮೊದಲ ಕೆಲವು ಪುಟಗಳನ್ನು ಓದೋದಷ್ಟೇ ನಾವು- ಓದುಗರ ಜವಾಬ್ದಾರಿ, ಆಮೇಲೂ ಪುಸ್ತಕ ಕೆಳಗಿಡದಂತೆ ಮಿಕ್ಕ ಪುಟಗಳನ್ನು ಓದಿಸ್ಕೊಳೋದು ಪುಸ್ತಕದ/ಲೇಖಕರ ಜವಾಬ್ದಾರಿ. In that manner this book is perfect. The story is short, witty yet powerful and true to its purpose. ಅನುಷ್'ರ ಬರವಣಿಗೆ ಶೈಲಿ ಹೇಗಿದೆಯೆಂದರೆ ಪೂರ್ಣಚಂದ್ರ ತೇಜಸ್ವಿ, ಪ್ರದೀಪ ಕೆಂಜಿಗೆ, ಸ್ವಲ್ಪಮಟ್ಟಿಗೆ ಜೋಗಿ...ಇವರೆಲ್ಲ ನೆನಪಾಗದೇ ಈ ಪುಸ್ತಕ ಓದಿ ಮುಗಿಸೋದು ಸಾಧ್ಯವೇಯಿಲ್ಲ. ಹೆಚ್ಚೇನೂ ಕಮಿಟ್ಮೆಂಟ್ ಬೇಡದ, ಅರ್ಧ ತಾಸಿನಲ್ಲಿ ಓದಿ ಬದಿಗಿಡಬಹುದಾದ ಪುಸ್ತಕ. ಕಥಾ ವಸ್ತು ಮಾತ್ರ ಗಂಭೀರ ಯೋಚನೆಗೆ ಹಚ್ಚುವಂತದ್ದು.
ಕಳೆದ ವರ್ಷ ನಾ ಓದಿದ ಉತ್ತಮ ಕೃತಿಗಳಲ್ಲಿ ಹುಲಿ ಪತ್ರಿಕೆ ಭಾಗ 1 ಖಂಡಿತ ಒಂದು... ಈ ಕೃತಿ ಅನುಷ್ ಶೆಟ್ಟಿ ಎಂಬ ಒಳ್ಳೆಯ ಬರಹಗಾರನನ್ನು ಪರಿಚಯಿಸಿತ್ತು.
ಈ ಕಾದಂಬರಿಯ ಮುಂದುವರೆದ ಭಾಗಕ್ಕೆ ಕಾದ ಹಲವಾರು ಸಾಹಿತ್ಯಾಸಕ್ತರಲ್ಲಿ ನಾನು ಒಬ್ಬ... ಈಗ ಅದರ ಮುಂದುವರೆದ ಭಾಗ ಬಿಡುಗಡೆಯಾಗಿದೆ... ಭಾಗ 2 ಓದುವುದರ ಮೊದಲು ಭಾಗ 1 ರ revisitಗೆ ಮನಸ್ಸು ಬಯಸಿತ್ತು... ಮತ್ತೆ ಆ ಕಾಕನಕೋಟೆಯ ಘಮಕ್ಕೆ ಸೋತಿದ್ದೇನೆ... ಎರಡನೇ ಭಾಗ ಕೈಯಲ್ಲಿದೆ. ಓದುವ ಸುಖವಷ್ಟೇ ಬಾಕಿ.
ಒಂದೇ ದಿನದಲ್ಲಿ ಎರಡೂ ಭಾಗಗಳನ್ನು ಓದಿ ಮುಗಿಸಿದೆ. ಸರಳ ಬರವಣಿಗೆ ಮತ್ತು ಮುಂದೇನು ಎನ್ನುವ ಕುತೂಹಲ ಅದಕ್ಕೆ ಕಾರಣ. ಹುಲಿ ಪತ್ರಿಕೆ ೧ ಪ್ರಶ್ನೆ ಪತ್ರಿಕೆಯಾದರೆ, ಹುಲಿ ಪತ್ರಿಕೆ ೨ ಉತ್ತರ ಪತ್ರಿಕೆ. ಇಲ್ಲಿನ non-linear ನಿರೂಪಣೆ ಇಷ್ಟವಾಯ್ತು, ಹಿಂದಿನ ಅಧ್ಯಾಯದಲ್ಲಿ ಏನೋ ಮಿಸ್ಸಾಯ್ತು ಅಂದುಕೊಳ್ಳುತ್ತಿರುವಾಗಲೇ ಮುಂದಿನ ಅಧ್ಯಾಯದಲ್ಲಿ " ಓಹ್...! ಹಿಂಗ ಇದು" ಎನ್ನುವಂತೆ ಮಾಡುವಂತಹ ಚಾಲಾಕಿ ಬರವಣಿಗೆ ಲೇಖಕರದ್ದು.
ಮಿಸ್ಟರಿ ಥ್ರಿಲ್ಲರ್ ಪ್ರಕಾರಕ್ಕೆ ಸೇರಬಹುದಾದ ಈ ಸರಣಿ ಪುಸ್ತಕಗಳಲ್ಲಿದ್ದಿದ್ದು ಬೆರಳಣಿಕೆಯಷ್ಟು ಪಾತ್ರಗಳು, ಗೋಜಲಿಗೆ ಸಿಲುಕಿಸದ ಸರಳ ರಹಸ್ಯ ಭೇದಿಸುವ ಕಥೆ. In my opinion, when it comes to mystery thrillers, the world building is as crucial as the mystery itself, ಅದನ್ನು ಬಹಳ ಅಚ್ಚುಕಟ್ಟಾಗಿ ಅನುಷ್ ಅವರು ಭಾಗ ಒಂದರಲ್ಲಿ ನಿರ್ಮಿಸಿದ್ದಾರೆ, ಎರಡನೇ ಭಾಗದಲ್ಲಿ ನಾವು ಆ ಪ್ರಪಂಚದಲ್ಲಿ ಭಾಗಿಯಾಗುವಂತೆಯೂ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ Protagonist ಸಾರಂಗ ಹೆಸರಿನ ಪಾತ್ರ ಪತ್ರಿಕೋದ್ಯಮದ ಸ್ಥಿತಿಯ ಬಗ್ಗೆ ಮಾತನಾಡಿದ್ದು ಇಷ್ಟವಾಯ್ತು, ಭಾಗ ಎರಡರಲ್ಲಿ ಬರುವ ಎರಡು detective ಪಾತ್ರಗಳಿಗೆ space ಇರಲಿಲ್ಲ ಎನ್ನುವುದು ಒಂದು ಕೊರತೆ, ಮಿಕ್ಕಿದ್ದೆಲ್ಲವೂ ಓದುಗನಿಗೆ ಇಷ್ಟವಾಗುವಂತದ್ದೆ.
ಅನುಷ ಎ ಶೆಟ್ಟಿ ಅವರು ಬರೆದಿರುವ ಕಾದಂಬರಿ ನೀನು ನಿನ್ನೊಳಗೆ ಖೈದಿ ಓದಿ ಮರುಳಾದ ನಾನು, ಅವರ ಇತರ ಕಾದಂಬರಿಯು ಓದಬೇಕೆಂಬ ಆಸೆ ಹುಟ್ಟಿದೆ.
ಹುಲಿ ಪತ್ರಿಕೆ -೧ ಕಾದಂಬರಿ ಪುಟಗಳು ಓದುತ್ತ ಹೋದಂಗೆ ನಮಗೆ ಗೊತ್ತಿದ್ದು ಕೂಡ ಅಥವ ಗೊತ್ತಿಲ್ಲದಿರಬಹುದು ನಮ್ಮೊಳಗೆ ಪ್ರಶ್ನೆಗಳು ಒಂದರಂತೆ ಒಂದು ಸೇರ್ಪಡೆಯಾಗುತ್ತಾ ಹೋಗುತ್ತದೆ , ಕಥೆ ಶುರುವಾಗುವುದೇ ಕಾಕನಕೋಟೆಯ ದಡ ಕರ್ನಾಟಕ ನದಿ ದಾಟಿದರೆ ಆ ದಡ ಕೇರಳದ ಪಡಿಚಿರ ದೋಣಿ ನಡೆಸುವ ಮಾಣಿಯ ಕಾಯಕವಾಗಿತ್ತು .
ಸಾರಂಗ ಲಂಡನ್ನಿಂದ ಯಾರಿಗೂ ಹೇಳದೆ ಅಚಾನಕ್ಕಾಗಿ ತನ್ನೂರಿಗೆ ಮರಳಿ ಬರುತ್ತಾನೆ ! ಸುಮಂತ ಕಾಣೆಯಾಗಿದ್ದಾನೆ ? ಹುಲಿ ಪತ್ರಿಕೆ ಸಂಪಾದಕರು ಮತ್ತು ಅದರ ಹಿಂದಿರುವವರು ಯಾರು ?
ಪಟೇಲರ ಮಗ ಸುಮಂತ ಕಾಣೆಯಾಗಿದ್ದಾನೆ ಅವನು ಸಿಗುತ್ತಾನೆ ಅಥವಾ ಇಲ್ಲೊ ಅದನ್ನು ತಿಳಿ ಬೇಕಾದರೆ ಕಾದಂಬರಿ ಓದಬೇಕು ಅದೇ ರೀತಿ ಇಲ್ಲಿ ಬರುವ ದೃಶ್ಯಗಳು ಭಯಾನಕ ಹುಲಿ ಕಾಣಿಸಿಕೊಂಡಿದೆ ಇನ್ನೊಂದು ಕಡೆ ಹೆಂಡದ ಅಂಗಡಿಯಲ್ಲಿ ಊರು ಕೆರೆ ಮಾತು ! ಸಾರಂಗ ,ವೇದ ,ಅಬು ,ಸಂತು ,ನಾಲ್ಕು ಜನರ ಕೊನೆಯ ಟ್ವಿಸ್ಟ್ ! ಹಾಗಾದ್ರೆ ಕಾಡಲ್ಲಿ ಓಡಾಡುತ್ತಿರುವ ಹುಲಿ ಕೊನೆಗೂ ಅರಣ್ಯ ಇಲಾಖೆಯವರಿಗೆ ಸಿಗುತ್ತದೆಯಾ ?
ನಾ ಓದಿದ ಅನುಶ್ ಶೆಟ್ಟಿಯ ಮೊದಲ ಪುಸ್ತಕ. ಖಂಡಿತವಾಗಿಯು ಅವರ ಉಳಿದ ಪುಸ್ತಕಗಳನ್ನು ಓದುತ್ತೇನೆ 😊
ಒಂದು ಹಳ್ಳಿ, ಒಂದಷ್ಟು ಜನ, ಸ್ನೇಹ, ಪ್ರೀತಿ, ಒಂದು ಹುಲಿ ಇದಿಷ್ಟನ್ನ ಇಟ್ಕೊಂಡ್ ಎಷ್ಟ್ ಚೆನ್ನಾಗಿರೋ ಕಥಯನ್ನ ಕೊಟ್ಟಿದ್ದಾರೆ. ಕಥೆಯ ಕೊನೆಯಲ್ಲಿ ಬರೋ twist ಸೂಪರ್!! ಹುಲಿ ಪತ್ರಿಕೆ 2 ಬೇಗ ಬರಲಿ. ಕಥೆ ಓದೋಕೆ ಶುರು ಮಾಡಿದ್ರೆ ಸಾಕು, ಓದಿ ಮುಗಿಯುವವರೆಗೆ ಪುಸ್ತಕ ಕೆಳಗೆ ಇಡೋ ಪ್ರಮೇಯನೆ ಬರಲ್ಲ - ಒಂದು, ಕಥೆ ಅಷ್ಟು ಚೆನ್ನಾಗಿ ಇದೆ; ಮತ್ತೊಂದು, ಚಿಕ್ಕ ಪುಸ್ತಕ 😆
ಚೆಂದದ ಚಿಕ್ಕದಾದ ಕುತೂಹಲಕಾರಿ ಪುಸ್ತಕ. ಸುಲಭವಾಗಿ ಓದಿಸಿಕೊಂಡು ಹೋಗುತ್ತೆ. ೨ನೇ ಭಾಗ ಓದಲೇ ಬೇಕು ಹಾಗೆ ಪುಸ್ತಕ ಮುಕ್ತಾಯಗೊಂಡಿರುವುದು ತುಸು ನಿರಾಸೆ ಮೂಡಿಸಿದರು ಸ್ವಾರಸ್ಯಕರವಾಗಿದೆ. ಮುಂದಿನ ಭಾಗ ಬೇಗ ಬರಲಿ.
ಶುರುಮಾಡಿದಷ್ಟೇ ಸುಲಭವಾಗಿ ಮುಗಿಸಬಹುದಾದಂತ ಓದಿಸಿಕೊಂಡು ಹೋಗುವ ಬರಹಗಾರಿಕೆಯು ಅನುಷ್ ರನ್ನು ತೇಜಸ್ವಿಯವರ ಬಿ ಟೀಮ್ ಗೆ ಸೇರಿಸುತ್ತದೆ. ಕಾಡು ಎಂದರೇನೇ ನಿಗೂಢತೆ, ವಿಸ್ಮಯತೆ, ಕುತೂಹಲ; ಹಾಗಿರುವಾಗ ಅಲ್ಲೊಂದು ಹುಲಿಯ ಪಾತ್ರ ಸೇರಿಕೊಂಡರೆ! ವಿಭಿನ್ನವಾದ ಕಥಾ ವಸ್ತು, ಸೃಜನಶೀಲ ಬರವಣಿಗೆ ಓದುಗರನ್ನು ಸದಾ ಆಕರ್ಷಿಸುತ್ತದೆ. ಹುಲಿ ಪತ್ರಿಕೆಯ ಲೇಖಕರು ಸಹ ಈ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು. ಹುಲಿಯ ಹುಡುಕಾಟಕ್ಕೆ ಪೊಲೀಸ್, ಅರಣ್ಯ ಇಲಾಖೆ ಹಾಗೂ ಖಾಸಗಿ ಪತ್ತೇದಾರರೊಂದಿಗೆ ನನ್ನಲ್ಲಿಯ ಓದುಗನೂ ಸಹ ಭಾಗ 2 ರೊಂದಿಗೆ ಸಿದ್ದವಾಗಿದ್ದಾನೆ.
ತೇಜಸ್ವಿಯವರ ಬರಹಗಳು ಮತ್ತು ಕಾದಂಬರಿಗಳಿಂದ ಪ್ರೇರಣೆಗೊಂಡು ಅನೇಕ ಯುವಸಾಹಿತಿಗಳು ಕೃತಿಗಳನ್ನು ರಚಿಸಲು ಮುಂದಾದರು. ಅವರಲ್ಲಿ ಅನುಶ್ ಶೆಟ್ಟಿಯೂ ಒಬ್ಬರು. ಮೂಲತಃ ಮಂಗಳೂರಿನವರಾದ ಲೇಖಕರು ಮಲೆನಾಡನ್ನು ಸವಿದವರು. ಅದಕ್ಕೆ ಪೂರಕವಾಗಿ ಈ ಪುಸ್ತಕದಲ್ಲಿ ಮಲೆನಾಡಿನಲ್ಲಿ ಜರಗುವ ಕಥಾಪ್ರಸಂಗವನ್ನು ಬರೆದಿದ್ದಾರೆ. ಊರಿನಲ್ಲಿ ಒಂದು ಹುಲಿ ಪತ್ರಿಕೆ ಎಂಬ ಹೆಸರಿನಲ್ಲಿ ಒಂದು ಪತ್ರಿಕೆ ನಡೆಯುತ್ತಿರುತ್ತದೆ. ಅದು ಯಾರು, ಎಲ್ಲಿಂದ ಹೇಗೆ ನಾಡಿಯುತ್ತಿದೆ ಎಂದು ಯಾರಿಗೂ ಗೊತ್ತಿರುವುದಿಲ್ಲ. ಆ ಊರಿನಲ್ಲಿ ನಡೆಯುವ ಕಾರ್ಯ ಲೋಪಗಳು, ವಂಚನೆಗಳ ಬಗ್ಗೆ ಪತ್ರಿಕೆಯ ರೂಪದಲ್ಲಿ ಎಲ್ಲರ ಮನೆಮಾತಾಗಿರುತ್ತದೆ. ಹೀಗಿರುವಾಗ ಊರಿನ ಪಟೇಲನ ಮಗ ಕಾಣೆಯಾದಾಗ ಅಲ್ಲಿ ನಡೆಯುವ ಅವನ ಹುಡುಕಾಟ, ಊರಿನ ಜನಗಳ ಹುಡುಗಾಟ ಈ ಪುಸ್ತಕದಲ್ಲಿ ಮೂಡಿ ಬಂದಿವೆ. ಅದರ ಜೊತೆಗೆ ಪುಸ್ತಕದ ಕೊನೆಯವರೆಗೂ ಈ ಪತ್ರಿಕೆಯ ಮುದ್ರಣ ಯಾರು ಮಾಡುತ್ತಿದ್ದಾರೆ, ವಿಷಯಸಂಗ್ರಹ ಎಲ್ಲಿಂದ ಆಗುತ್ತಿವೆ ಎನ್ನುವುದನ್ನು ಚೆನ್ನಾಗಿ ಗುಟ್ಟಿನಲ್ಲಿಟ್ಟಿದ್ದಾರೆ ಲೇಖಕರು. ಕೊನೆಗೆ ಕಾಡಿನಲ್ಲಿ ನಾಪತ್ತೆಯಾದ ಪಟೇಲರ ಮಗ ಸಿಗುತ್ತಾನೋ ಇಲ್ಲವೋ, ಊರಲ್ಲಿ ಹುಲಿಯ ಹೆದರಿಕಯಿಂದ ಇದ್ದ ಜನರಿಗೆ ಆ ಹುಲಿಯಿಂದ ಮುಕ್ತಿ ದೊರೆಯುವದೋ ಇಲ್ಲವೋ ಇದು ನೀವು ಪುಸ್ತಕ ಓದಿಯೇ ತಿಳಿಯಬೇಕು. ಇಲ್ಲವಾದಲ್ಲಿ ಪುಸ್ತಕದಲ್ಲಿರುವ ಸಸ್ಪೆನ್ಸ್ ಹಾಳಾಗುತ್ತೆ. .
ಕತೆಯ ನಿರೂಪಣೆ ಸರಳವಾಗಿದೆಯಾದರೂ, ಕಥಾವಸ್ತು ಗಾಢವಾಗಿದೆ.. ನಾನು (ಓದಿದ್ದಲ್ಲ) ಕೇಳಿಸಿಕೊಂಡದ್ದು. ಕತೆಯನ್ನ ಕೇಳಿಸಿದ ಪರಿಯೂ ಇಷ್ಟವಾಗುತ್ತದೆ. ಅಲ್ಲಲ್ಲಿನ ಹಿನ್ನೆಲೆ ಸಂಗೀತ, ಮಧ್ಯೆ ಮಧ್ಯೆ ಪಾತ್ರಗಳೇ ಬಂದು ಮಾತಾಡಿ ಹೋಗುವುದು ಎಲ್ಲವೂ ಇಷ್ಟವಾಗುತ್ತದೆ..
ಒಟ್ಟಾರೆ ಮುಂದಿನ ಭಾಗಕ್ಕಾಗಿ ಕಾಯುವಂತೆ ಖಂಡಿತ ಮಾಡುತ್ತದೆ.
Listened to the audio book by MyLang. Being my first ever audio book, I liked it a lot. ಕಥಾ ನಿರೂಪಣೆ ತುಂಬಾ ಸ್ವಾರಸ್ಯಕರವಾಗಿದೆ ಹಾಗೂ ಓದುಗರ ಮನಸನ್ನು ಸೆಳೆಯುತ್ತದೆ. Mylang app ಅಲ್ಲಿ ಇರುವ ಈ audio book ಕೇಳುತ್ತಿದರೆ, ಪ್ರತಿಯೊಂದು ಪಾತ್ರಕ್ಕೂ ಜೀವ ಬಂದಂತಿರುತ್ತದೆ.
Re-read the book in 2025 and re-lived the characters once again !
ಅನುಷ್ ಎ ಶೆಟ್ಟಿಯವರ "ನೀನು ನಿನ್ನೊಳಗಿನ ಖೈದಿ ಪುಸ್ತಕವು" ಅವರ ಹುಲಿ ಪತ್ರಿಕೆ ಕಾದಂಬರಿ ಒದಲು ಸ್ಪೂರ್ತಿ. ಒಂದು ಚಿಕ್ಕ ಪುಸ್ತಕ ಹಾಗೆ ಚಿಕ್ಕ ಓದು, ಒಂದೇ ಬಾರಿಗೆ ಓದಿ ಮುಗಿಸಬಹುದಾಂತ ಪುಸ್ತಕ. ಪುಸ್ತಕ ಚಿಕ್ಕದಾದರೂ ಅದರಲ್ಲಿರುವ ವಿಷಯಗಳು ರೋಮಾಂಚಕಾರಿ ಹಾಗು ಗಾಡವಾಗಿದೆ. ಹುಲಿ ಪತ್ರಿಕೆ ಕಾಕನಕೋಟೆಯಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಪ್ರಸಾರ ಮಾಡತ್ತಿದ್ದ ಪತ್ರಿಕೆ. ಅದರ ಸಂಪಾಕರ ಹೆಸರು ಯಾರಿಗೂ ತಿಳಿಯದೇ ಗೌಪ್ಯವಾಗಿರತ್ತದೆ. ಇದರ ಪ್ರಭಾದಿಂದಾಗಿ ಕೆಲವು ವ್ಯಕ್ತಿಗಳು ತಮ್ಮ ಬಣ್ಣ ಬಯಲಾಗುತ್ತದೆ ಎನ್ನೊ ಗುಮಾನಿಯಿಂದ ಸಂಪಾದಕರ ಹುಡುಕಾಟದಲ್ಲಿ ತೊಡಗಿರುತ್ತಾರೆ. ಕರ್ನಾಟಕದ ಕಾಕನಕೋಟೆ ಹಾಗು ಕೇರಳದ ಪಡಿಚಿರಗಳ ಮಧ್ಯೆ ಕಬಿನಿ ನದಿ ಹರಿದು ರಾಜ್ಯಗಳನ್ನು ಇಬ್ಬಾಗ ಮಾಡಿರುತ್ತದೆ. ಕಾಡು, ಮಳೆ, ಹಾಡು ಹೆಳುತ್ತಾ ನದಿದಾಟಿಸುತ್ತಾ ದೋಣಿ ಹುಟ್ಟು ಹಾಕುತ್ತಿರುವ ಮಾಣಿ, ಎಲ್, ಆರ್ ಈಶ್ವರಿ ಹಾಡು ಕೇಳುತ್ತ ಎಣ್ಣೆಯ ಮಂಪರಿನಲ್ಲಿ ಸದಾ ತೇಲಾಡುತ್ತಿರುವ ಬೋರಿ ಅಂಗಡಿಯ ಕುಡುಕರು, ನದಿಯ ದಡದಲ್ಲಿ ಕಾಣಿಸಿಕೊಂಡ ಹುಲಿ, ಅದೇ ಸಮಯದಲ್ಲಿ ಕಾಡಿನಲ್ಲಿ ನಾಪತ್ತೆಯಾಗಿರುವ ಸುಮಂತ್.
ಪತ್ರಿಕೆಯ ಸಂಪಾದಕರು ಸಿಕ್ತಾರ...?? ಕಾಡಲ್ಲಿ ಕಾಣೆಯಾದ ಸುಮಂತ್ ಏನಾದ..?? ಹುಲಿಯ ಹುಡುಕಾಟ ಏನಾಯ್ತು..?
ಇಲ್ಲೀಗಲ್ ಪತ್ರಿಕೆಯ ಹುಡುಕಾಟದ ಹಾದಿಯಲ್ಲಿ ಡಿಟೆಕ್ಟಿವ್‌ಗಳ ತನಿಖೆಗಳಿಗೆ ಸಿಕ್ಕ ತಿರುವುಗಳು.. ಈ ಎಲ್ಲ ವಿಷಯಗಳನ್ನೊಳಗೊಂಡ ಈ ಪುಸ್ತಕ ಒಂದು ಪಕ್ಕ ಸಸ್ಪೆನ್ಸ್, ಥ್ರಿಲ್ಲರ್ ಕಾದಂಬರಿ..
ನನ್ನನ್ನೂ ಒಳಗೊಂಡು ಎಷ್ಟೋ ಜನ, ಈ ಲಾಕ್ಡೌನ್ ಟೈಮ್ ಅಲ್ಲಿ ಏನೂ ಕೆಲಸ ಮಾಡೋಕೆ ಆಗ್ತಿಲ್ಲ ಅಂತ ಪರಿತಪಿಸ್ತಿರೋವಾಗ, ಅನುಷ್ ಶೆಟ್ಟಿ ಒಂದು ಕಾದಂಬರಿ ಬರೆದಿದ್ದಾರೆ! ಅದೂ ಸಹ, ಒಮ್ಮೆ ಓದಲು ಶುರು ಮಾಡಿದರೆ ಕೆಳಗೆ ಇಡಲೂ ಆಗದಂತಹ ಕಾದಂಬರಿ!
'ಹುಲಿ ಪತ್ರಿಕೆ' ಎಂಬುದು ತುಂಬಾ ವರ್ಷಗಳ ಹಿಂದೆ ಮೈಸೂರಿನಲ್ಲಿ ಪ್ರಕಟವಾಗುತ್ತಿದ್ದ ಒಂದು ವಿಶಿಷ್ಟ, ವಿಚಿತ್ರ ಪತ್ರಿಕೆಯಂತೆ. ಆ ಪತ್ರಿಕೆಯ ವೈಶಿಷ್ಟ್ಯ ಎಂದರೆ, ಅದರ ವರದಿಗಾರರ ಅಥವಾ ಸಂಪಾದಕರ ಹೆಸರುಗಳು ಈವರೆಗೂ ಯಾರಿಗೂ ತಿಳಿದಿಲ್ಲವಂತೆ! ಲೇಖಕರು ಇಂತಹ ಒಂದು ಎಳೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು, ಅದಕ್ಕೆ ತಮ್ಮದೇ ಆದ ಒಂದು ಕತೆಯನ್ನು ಹೆಣೆದು, ಓದುಗರನ್ನು ಹಿಡಿದಿಟ್ಟುಕೊಳ್ಳುವ ಸಸ್ಪೆನ್ಸ್ ಥ್ರಿಲ್ಲರ್ ಹೆಣೆದಿದ್ದಾರೆ.
ಪುಸ್ತಕ ತುಂಬಾ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಓದಿ ರೂಢಿ ಇದ್ದವರಿಗೆ, ಸಣ್ಣ ಓದು ಇದು; ರೂಢಿ ಇಲ್ಲದವರೂ ಇಲ್ಲಿಂದ ಆರಂಭಿಸಬಹುದಾದ ಕೃತಿ ಇದು.
ಕೃತಿಯ ಅಂತ್ಯವಾದರೂ, ಕತೆಯ ಅಂತ್ಯವಾಗುವುದಿಲ್ಲ. ಇದಿನ್ನೂ 'ಹುಲಿ ಪತ್ರಿಕೆ -೧' ಅಷ್ಟೇ. ಮುಂದಿನ ಭಾಗ ಬರುತ್ತದೆ ಎಂದಿದ್ದಾರೆ ಲೇಖಕರು. ಆದಷ್ಟು ಬೇಗ ಮುಂದಿನ ಭಾಗ ಹೊರ ಬರಲಿ, ಅದು ಇನ್ನಷ್ಟು ಖುಷಿ ನೀಡಲಿ.
ಹುಲಿ ಪತ್ರಿಕೆ 2 ಈಗಲೇ ಶುರು ಮಾಡ್ತಿನಿ. ಆಮೇಲೆ ನನ್ನ ಅಭಿಪ್ರಾಯ:
_____
ನಾನು ಹುಲಿ ಪತ್ರಿಕೆ 1 ಮತ್ತು 2 ರನ್ನು ಓದಿದ್ದು ನನ್ನ, ವಾರದಲ್ಲಿ ಮೂರು ದಿನದ, ಬೆಂಗಳೂರಿನ ಮೆಟ್ರೋ ಪ್ರಯಾಣದಲ್ಲಿ. ಕೆಲಸಕ್ಕೆ ಹೋಗಿ ಬರುವ ದಾರಿಯಲ್ಲಿ. ಈ ಹಿಂದೆ ಅನುಷ್ ರವರ ಎರಡು ಪುಸ್ತಕ ಓದಿ ಮೆಚ್ಚಿ, ಅವರು ಕನ್ನಡದಲ್ಲಿ ಬರೆಯುವ ಮಾಡರ್ನ್ ಕಥೆಗಳು ಹಿಡಿಸಿ, ನನಗೆ ಮಜಾ ಕೊಡುವ ಪುಸ್ತಕ ಓದಬೇಕು ಎಂದೆನಿಸಿದಾಗ ಆನುಷ್ ರವರ ಪುಸ್ತಕ ಕೈಗೆತ್ತಿಕೊಳ್ಳುತ್ತೇನೆ.
ಮಾಡರ್ನ್ ಎಂದ ಮಾತ್ರಕ್ಕೆ ಇವರ ಬರವಣಿಗೆ ಏನೂ ಗ್ರಹಿಸಲಾಗದ modernism ತರ ಅಲ್ಲ. ನಾನು ಜೀವನದಲ್ಲಿ ಪುಸ್ತಕ ಓದೋಕ್ಕೆ ಶುರು ಮಾಡಿದ್ದು ಸ್ವಲ್ಪ ಲೇಟಾಗಿ, ಅದರಲ್ಲೂ ಕನ್ನಡ ಶುರು ಮಾಡಿದ್ದು ಇನ್ನೂ ಲೇಟು. ಹಾಗೇ ಇಂಗ್ಲಿಷ್ ಸಾಹಿತ್ಯ ಹಾಗೂ ಸಿನೆಮಾಗಳ ಪರಿಣಾಮ ನನ್ನ ಅಚ್ಚುಮೆಚ್ಚಿನ ಮೇಲೆ ಕೊಂಚ ಹೆಚ್ಚೇ ಇದ್ದಾಗ, ಅನುಷ್ ರವರ ನೀನು ನಿನ್ನೊಳಗೆ ಖೈದಿ ಓದಿದಾಗ ನನಗೆ ನನ್ನ ಭಾಷೆಯಲ್ಲೂ ಈ ಅಚ್ಚುಮೆಚ್ಚಿಗೆ ಸೇರೋ ಕೃತಿಗಳು ಇದೆಯಲ್ಲಾ ಎಂದು ಸಂತಸವಾಯಿತು. ಇದನ್ನ ನಾನು ಮಾಡರ್ನ್ ಅಂದಿದೀನಿ. ಅದು ತಪ್ಪಾದರೆ ತಪ್ಪು, ಇರ್ಲಿ ಬಿಡಿ.
ನನಗೇಕೆ ಅನುಷ್ ರವರ ಬರವಣಿಗೆ ಅಷ್ಟು ಇಷ್ಟ ಎಂದರೆ ಅವರ ಬರವಣಿಗೆಯ ಶೈಲಿ ತುಂಬ visual. ಇವರ ಪುಸ್ತಕ ಓದಬೇಕಾದರೆ ನಡೆಯುತ್ತಿರುವ ದೃಶ್ಯಗಳು, ಪಾತ್ರಗಳು, ಅವರ ಸಂದರ್ಶನ ಎಲ್ಲ vividಆಗಿ ಕಣ್ಣಮುಂದೆ ಬರುತ್ತವೆ. ಒಂದು ಸಿನಿಮಾ ಸ್ಕ್ರಿಪ್ಟ್ ಓದೋತರನೇ ಭಾಸವಾಗುತ್ತದೆ.
ಹುಲಿ ಪತ್ರಿಕೆ ಬಗ್ಗೆ ಹೇಳೋದಾದ್ರೆ, ಎರಡೂ ಭಾಗಗಳೂ ಅತಿ ವೇಗವಾಗಿ ಚಲಿಸುತ್ತವೆ. ಸಿಂಪಲ್ ಆಗಿರುವ ಭಾಷೆ ಆದರೆ ಭಾಷೆಯ ಸೊಗಸಿಗೆ, ಅನುಷ್ ರವರು ಬಳಿಸುವ ಮೆಟಫಾರ್ಸ್ ಗೆ, ಕಥೆ ಕಟ್ಟುವ ರೀತಿಗೆ, ಕಥೆಯ structure ಗೆ ಏನು ಕಮ್ಮಿಯೆನಿಸುವುದಿಲ್ಲ. ಎರಡನೇಯ ಭಾಗದ ಮುಂಚೆ ಅನುಶ್ ರವರು "ಪುಸ್ತಕ ಓದುವಾಗ ನಿಮ್ಮ ಕಿಟಕಿಯಾಚೆ ಮಳೆಯಾಗುತ್ತಿರಲೆಂದು ಆಶಿಸುತ್ತೇನೆ" ಎನ್ನುತ್ತಾರೆ. ನಾನು ಇದನ್ನು ಓದಿದ್ದು ಫೆಬ್ರುವರಿಯಲ್ಲಿ. ಬೆಂಗಳೂರು ಚಳಿಗಾಲ ಬಿಟ್ಟು ಧಗೆ ಧಗಿಸುವ ಬೇಸಿಗೆಗೆ ಕಾಲಿಡುವ ಸಮಯ. ಮಳೆ ಬಿಡಿ, ಆಗಸದಲ್ಲಿ ಮೋಡ ಕಂಡರೂ ಅದು ನಮ್ಮ ಪುಣ್ಯ. ಇಂಥ ಸಮಯದಲ್ಲಿ ಮೆಟ್ರೋನಲ್ಲಿ ಪ್ರಯಾಣಿಸಿ ಓದುತ್ತಿರುವ ನನಗೆ, ದಿವಸ 1 ರಿಂದ 1.5 ಘಂಟೆ ಬೆಂಗಳೂರಿನಲ್ಲಿ ಫೆಬ್ರುವರಿಯಲ್ಲಿ ಮಳೆ ಧರೆಗಿಳಿದಿದೆ ಎಂಬಂತೆಯೇ ಇತ್ತು.
ಕೇವಲ ಪತ್ತೇದಾರಿ ಕೃತಿ ಹಾಗು ಗೆಳೆತನದ ಕೃತಿಯಾಗದೆ, ಹುಲಿ ಪತ್ರಿಕೆ ನಮ್ಮ ಈ ಜಗತ್ತಿನ ಈಗಿನ ಪರಿಸ್ಥಿತಿ, ಅದನ್ನು ಕಂಡು ತೆಪ್ಪಗಿರೋ ಸುದ್ದಿ ಮಾಧ್ಯಮಗಳು, ದ್ವೇಷ ಸಾರಿಸೋ ಟಿವಿ ನ್ಯೂಸ್ ಚಾನೆಲ್ಗಳು, ಸುಳ್ಳು ಸುದ್ದಿ ಹಬ್ಬಿಸೋ ಸೋ ಕಾಲ್ಡ್ ಪತ್ರಕರ್ತರು ಹಾಗು ಪತ್ರಿಕೋದ್ಯಮದ ಇಂಪಾರ್ಟೆನ್ಸ್ ಬಗ್ಗೆ ಬರೆದಿರುವ ಸಂಗತಿಗಳು, ಈ ಪುಸ್ತಕವನ್ನು ಒಂದು ಲೆವೆಲ್ ಮೇಲಕ್ಕೆ ಏರಿಸುತ್ತದೆ. ಕೊನೆಯಲ್ಲಿ ನಮ್ಮ ನಾಯಕ ಸಾರಂಗ ಸ್ವಲ್ಪ monologueಗಿಗೆ ಹೋದರು, ಅದುವರಿಗೂ ಒಳ್ಳೆ ಪತ್ರಕರ್ತರು ಯಾರು, ಹೇಗಿರಬೇಕು. ಪತ್ರಿಕೆ, ಸುದ್ಧಿಗಳ ಪರಿಣಾಮ ಸಮಾಜದಲ್ಲಿ ಎಷ್ಟು ಮುಖ್ಯ, ಇವೆಲ್ಲವನ್ನು ತುಂಬ ಅಂದವಾಗಿ ಚಿತ್ರಿಸಿದ್ದಾರೆ.
ಆದರೆ ಒಂದು ನನಗೆ ಕಿರಿಕಿರಿ ಅನ್ನಿಸಿದ್ದು ಪುಸ್ತಕದ ಪ್ರಮುಖ ೫ ಪಾತ್ರಗಳಲ್ಲಿ ಮೂರು ಪಾತ್ರಗಳ ಹೆಸರು ಸ ಇಂದ ಶುರುವಾಗುತ್ತದೆ. ಸಾರಂಗ ನಮ್ಮ ನಾಯಕ, ಸಂತು ಅವನ ಗೆಳೆಯ, ಸುಮಂತ ಕಾಡಿಗೆ ಓಡಿಹೋಗಿರುವ ಹುಡುಗ. ಪುಸ್ತಕದ ಮೊದಮೊದಲು ಈ ಮೂವರು ಪತ್ರಗಳನ್ನು ಬೇರೆಬೇರೆಯಾಗಿ ನೋಡಲು ಸ್ವಲ್ಪ ಕಷ್ಟಯೆನಿಸಿತು. ಆದರೆ ಮುಂದೆ ಹೋಗ್ತಾಹೋಗ್ತಾ ಏನು ತೊಂದರೆಯಾಗಲಿಲ್ಲ. ಇದು ನನ್ನ ಸ್ಕಿಲ್ ಇಶ್ಯೂ ಕೂಡ ಇರಬಹುದು.
ಕಾಕನಕೋಟೆ ಎಂಬ ಸುಂದರವಾದ ಊರು ಸುತ್ತಲೂ ದಟ್ಟ ಕಾಡು ಹಾಗೂ ನದಿಗಳಿಂದ ಕೂಡಿದೆ. ಇಂತ ಊರಲ್ಲಿ ನಡೆಯುವ ಅನ್ಯಾಯ ಮತ್ತು ಜನರಿಗೆ ಆಗುವ ತೊಂದರೆಯನ್ನು ತಿಳಿಸುವ ಕೆಲಸ ಹುಲಿ ಪತ್ರಿಕೆ ಮಾಡುತಿದ್ದೆ. ಆದರೆ ಹುಲಿ ಪತ್ರಿಕೆಗೆ ಸಂಪಾದಕರು ಯಾರು? ಹಾಗೂ ಅದು ಎಲ್ಲಿಂದ ಬರುತ್ತಿದೆ ಎಂಬುದು ಯಾರಿಗು ತಿಳಿದಿಲ್ಲ. ಪಟೇಲರ ಮಗ ಸುಮಂತ ಕಾಡಿನಲ್ಲಿ ಕಳೆದುಹೋಗಿ ಅವನನ್ನು ಹುಡುಕುತ್ತಿರುವ ಊರ ಜನರಿಂದ ಶುರುವಾಗುವ ಕಥೆ ಮುಂದೆ ಅದ್ಭುತ ತಿರುವುಗಳನ್ನು ಪಡೆಯುತ್ತದೆ. ಹುಲಿ ಪತ್ರಿಕೆ ನಡೆಸುತ್ತಿರುವವರು ಯಾರು? ಸುಮಂತ ಕಾಡಲ್ಲಿ ಸಿಗುತ್ತಾನ? ಎಂಬುದನ್ನು ತಿಳಿಯಲು ಖಂಡಿತ ಪುಸ್ತಕವನ್ನು ಒಮ್ಮೆ ಓದಿ. ಲೇಖಕರಾದ ಅನುಷ್ ಶೆಟ್ಟಿ ಅವರು ಎಲ್ಲೂ ಅನಗತ್ಯ ವಿವರಣೆ ನೀಡದೆ ಸರಳವಾಗಿ ಸುಂದರವಾಗಿ ಪುಸ್ತಕವನ್ನು ಬರೆದಿದ್ದಾರೆ. ಥ್ರಿಲರ್, ಮಿಸ್ಟರಿ ಪುಸ್ತಕಗಳನ್ನು ಇಷ್ಟಪಡುವವರು ಖಂಡಿತ ಈ ಪುಸ್ತಕವನ್ನು ಒಮ್ಮೆ ಓದಿ.
ಪುಸ್ತಕ ಓದುತಿರುವಾಗಲೆ ಅನುಷ್ ಅವರು ಅಪ್ಪಟ್ಟ ತೇಜಸ್ವಿ ಅಭಿಮಾನಿಯೇ0ದು ತಿಳಿಯಿತು..
ಕಥೆ ತುಂಬಾ ಸ್ವಾರಸ್ಯವಾಗಿ ಮೂಡಿ ಬಂದಿದೆ..ಆ ಊರು, ಆ ಜನರು,ಆ ನಿಗೂಢ 'ಹುಲಿ ಪತ್ರಿಕೆ',ಹೆಂಡದಂಗಡಿಯಲ್ಲಿ ನಡೆಯುವ ತಮಾಶಿಯ ಘಟನೆಗಳು..
ಅದರಲ್ಲೂ ಆ ಪಾತ್ರಗಳು ಹೃದಯಕ್ಕೆ ತುಂಬಾ ಹತ್ತಿರವಾದವು..ಸಾರಂಗ ಮತ್ತು ವೇದಾ ನಮ್ಮ ಎದೆಯಲ್ಲಿ ಸದಾ ಉಳಿದಿರುತಾರೆ..
ಅನಿಷ್ ಅವರು ಕನ್ನಡ ಫಿಕ್ಷನ್ ಲಿಟರೇಚರ್ಗೆ ಒಂದು ಒಳ್ಳೆಯ ಉಡುಗೊರೆಯನ್ನೇ ನೀಡಿದ್ದಾರೆ..ಆದಷ್ಟು ಬೇಗ ಹುಲಿ ಪತ್ರಿಕೆ ೨ ನು ಓದಲಿದ್ದೇನೆ.. ಹಾಗೂ ಅವರ ಎಲ್ಲ ಪುಸ್ತಕಗಳನ್ನೂ ಒದ ಬೇಕೆಂಡದಿದೇನೆ..
ಮಳೆ, ಕಾಡು, ದೋಣಿ, ನದಿ, ನದಿ ಅಂಚಿನ ಊರು, ಊರಿನ ಜನ ಹಾಗೂ ಅಲ್ಲಿ ನಡೆಯುವ ನಿಗೂಢ ಘಟನೆಗಳು!
ಇಷ್ಟನ್ನು ಇಟ್ಟುಕೊಂಡು ಒಂದು ರೋಚಕ ಕಥೆ ಹೇಳುವ ಒಳ್ಳೆಯ ಪ್ರಯತ್ನ. ಸುಲಭ ಭಾಷೆ, ಸರಾಗ ವಾಗಿ ಕಥೆ ಹೇಳುವ ಪರಿ, ಪ್ರತಿ ಅಧ್ಯಾಯದ ಕೊನೆಗೆ ಉಳಿವ ಸಸ್ಪೆನ್ಸ್ , ಇವು ಎಲ್ಲವೂ ಅನುಷ್ ಅವರ ಬರವಣಿಗೆಯ ಪ್ಲಸ್ ಪಾಯಿಂಟ್. ಒಟ್ಟಿನಲ್ಲಿ ಒಂದು ಒಳ್ಳೆಯ ಪುಸ್ತಕ.
ನೀನು ನಿನ್ನೊಳಗೆ ಖೈದಿ ಓದಿದ ನಂತರ ಕೈಗೆತ್ತಿಕೊಂಡ ಪುಸ್ತಕ...ಬಹಳ ಇಷ್ಟ ಆಯ್ತು... ಸಾರಂಗ, ವೇದ, ಸಂತು ಅವರ Friendship ನನಗೆ "ಅಮೇರಿಕಾ ಅಮೇರಿಕಾ " ಚಿತ್ರವನ್ನು ನೆನಪಿಸಿತು... ಒಂದೊಳ್ಳೆ ಸಸ್ಪೆನ್ಸ್ webseries ನೋಡಿದ ಅನುಭವವಾಯಿತು... ಭಾಗ-2 ಓದಲು ಕಾತರನಾಗಿದ್ದೇನೆ...
ಇದ್ಯಾವ ರೀತಿಯ ಕಾದಂಬರಿ. ಹೇಳಲಾಗುತ್ತಿಲ್ಲ. ಓದಿಸಿಕೊಂಡು ಹೋಗುತ್ತವೆ. ಕೊನೆಯ ಹತ್ತು ಪುಟಗಳು ಕಣ್ಣಲ್ಲಿ ನೀರು ತರುವುದು ನಿಜ. ವೇದ, ಸಂತು ಮತ್ತು ಅಬು, ಇವರ ಸಂಭಾಷಣೆ (ಕೊನೆಯಲ್ಲಿ) ಓದುತ್ತಾ ಕಣ್ಣಲ್ಲಿ ನೀರು ಬಂದದ್ದು ಗೊತ್ತಾಗಲೇ ಇಲ್ಲ. ಅದ್ಭುತ, ಎಲ್ಲಾರೂ ಒಮ್ಮೆಯಾದರೂ ಓದಲೇ ಬೇಕು
This entire review has been hidden because of spoilers.
ಸರಳ ಸಾಹಿತ್ಯ, ಓದಿಸಿಕೊಂಡು ಹೋಗತ್ತೆ. "ಹುಲಿ" ಯ ನಿಗೂಢತೆಯನ್ನ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಓದುಗನಿಗೆ, ಕತೆ ಮುಂದೆ ಏನಾಗಬೇಕು ಎನ್ನಿಸುತ್ತಿರುತ್ತದೆಯೋ ಬಹಳಷ್ಟು ಸಾರಿ ಹಾಗೆಯೇ ಹಾಗುವಂತೆ ಬರೆದಿದ್ದಾರೆ. ಕೊನೆಯ ಪುಟಗಳಲ್ಲಿ ಕುತೂಹಲ, ಆಶ್ಚರ್ಯ, ಮತ್ತು ಸಂತೋಷ. "೨ ನೇ ಹುಲಿ" ಗೆ ಕಾಯಬಹುದು.
ಇದೊಂದು ಹುಡುಕಾಟದ ಕಥೆ. ಕಾಡಿನಲ್ಲಿ ಮರೆಯಾದ ಸುಮಂತ , ನೇರ ನೇರ ಸುದ್ದಿಯ ಮೂಲಕ ಸಮಾಜ ಘಾತಕರ ನಿದ್ದೆ ಕೆಡಿಸುವ ‘ಹುಲಿ ಪತ್ರಿಕೆ’ ಹಾಗೂ ಜನರ ನಿದ್ದೆ ಕೆಡಿಸುವ ಹುಲಿಯ ಹುಡುಕಾಟದಲ್ಲಿ ಕತೆ ಸಾಗುತ್ತದೆ. ಸುಮಂತ ಸಿಗುತ್ತಾನ? ಹುಲಿ ಪತ್ರಿಕೆಯ ಸಂಪಾದಕರು ಯಾರು ? ಈ ಎಲ್ಲಾ ಪ್ರಶ್ನೆಗಳು ಒಂದು ಬಿಂದುವಿನಲ್ಲಿ ಕೂಡಿ ಓದುಗರ ಕುತೂಹಲ ತಣಿಸುತ್ತದೆ.
ಅನುಷ್ ಶೆಟ್ಟಿ ಅವರ ಪದ ಪ್ರಯೋಗಗಳು, ಕಥೆ ಕಟ್ಟುವಿಕೆ ಮುದ ನೀಡಿತು. ಹುಲಿ ಪತ್ರಿಕೆ 2 ಬಗ್ಗೆ ನಿರೀಕ್ಷೆ ಹೆಚ್ಚಿದೆ, ಆದಷ್ಟು ಬೇಗ ಓದುವೆ👍🏼