ಕೈಲಾಸಂ ಎಂದರೆ ಅವರ ನಾಟಕಗಳ ಆಡುಮಾತಿನಂತಹ ಸಂಭಾಷಣೆ, ಅವರ ಬಗೆಗಿನ ಕಥೆಗಳು ನೆನಪಿಗೆ ಬರುತ್ತವೆ. ಈ ಪುಟ್ಟ ಪುಸ್ತಕ ಅವರನ್ನು ಹತ್ತಿರದಿಂದ ಕಂಡ ಕೆ.ವಿ.ಅಯ್ಯರ್ ಅವರು ಬರೆದದ್ದು. ತಾವು ಮೊದಲು ಅವರ ಕಂಡ ಘಟನೆ ಸಹಿತವಾಗಿ ಅವರ ದಿನಚರಿಯನ್ನು ,ಒಡನಾಟವನ್ನೂ ಕಣ್ಣಿಗೆ ಕಟ್ಟುವಂತೆ ವರ್ಣಿಸಿ ಬರೆದ ರೀತಿ ಚಂದ. ಓದುವಾಗ ನಮಗೆ " ಛೇ " ಎಂಬಷ್ಟು ವಿಷಾದವಾಗುತ್ತದೆ.
'ಕೈಲಾಸಂ ಜೋಕ್ಸೂ ಸಾಂಗ್ಸೂ ' ಪುಸ್ತಕ ಓದಿದವರಿಗೆ ಅವರ ಬಗ್ಗೆ ತಿಳಿದೇ ಇರುತ್ತದೆ. ಆ ಅಪಾರ ಹಾಸ್ಯಪ್ರಜ್ಞೆಯ ಹಿಂದಿನ ನೋವು ಕಾಡುತ್ತದೆ.
ಈ ಪುಸ್ತಕಕ್ಕೆ ಡಿ.ವಿ.ಜಿ. ಅವರು ಬರೆದ ಉತ್ಕೃಷ್ಟ ಮುನ್ನುಡಿಯಿದೆ. ಒಳ್ಳೆಯ ಬದುಕಿಗೆ ಸಹೃದಯ ವ್ಯಕ್ತಿಯೊಬ್ಬ ಬರೆದ ಭಾಷ್ಯದಂತಿದೆ ಅದು.
ವಿಷಾದದ ಸಂಗತಿ ಎಂದರೆ ರವಿ ಬೆಳಗೆರೆ ತನ್ನ ಖಾಸ್‌ಬಾತ್ ಒಂದರಲ್ಲಿ ಕೈಲಾಸಂ ಬಗ್ಗೆ ತೀರಾ ಕೆಟ್ಟದಾಗಿ ಬರೆದದ್ದು. ಕಂಡದ್ದೆಲ್ಲ ಅನೈತಿಕವೆಂಬಂತೆ ಚಿತ್ರಿಸುವ ಆ ಬರಹ ಕೀಳು ಅಭಿರುಚಿಯದಾಗಿ ನನ್ನ ಘಾಸಿಗೊಳಿಸಿತ್ತು.
ನವಕರ್ನಾಟಕ ಮಂಗಳೂರಲ್ಲಿ ಕೇವಲ ನಲವತ್ತೈದು ರೂಪಾಯಿಗೆ ಇದರ ಪ್ರತಿಗಳ ಲಭ್ಯತೆ ಇದೆ. ಓದಿ ನೋಡಿ.