ದೇಹವೆಂಬುದು ಆತ್ಮವೊಂದು ತೊಟ್ಟು ಕಳಚುವ ಬಟ್ಟೆ ಎಂಬರ್ಥದ ಸಾಲು ಗೀತೆ, ಬೈಬಲ್ ಇತ್ಯಾದಿ ಧರ್ಮಗ್ರಂಥಗಳಲ್ಲಿ ಆಗಾಗ ಕೇಳಿಬರುವ ವಾಕ್ಯವಷ್ಟೇ.. ಅದೇ ದೇಹ, ಆತ್ಮದ ಸಂಬಂಧದ ಸುತ್ತಲೆ ಹೆಣೆದ ರಸವತ್ತಾದ ಕಥೆಯಿದು.
ಒಂದು ಸಾವು, ಅದು ಕೊಲೆಯೋ ಆತ್ಮಹತ್ಯೆಯೋ ಗೊತ್ತಿಲ್ಲ. ಕೊಲೆಯೇ ಆಗಿದ್ದರೆ ಎನ್ನುವ ಅನುಮಾನದಲ್ಲಿ ಆರೊಪಿಯ ಬಂಧನದಿಂದ ಶುರುವಾಗಿ ಸಿಲಿಕಾನ್ ವ್ಯಾಲೀಯ ಸ್ಟಾರ್ಟಪ್ ವ್ಯವಹಾರವೊಂದು ಮರ್ಡರ್ ಮಿಸ್ಟರಿಯನ್ನು ಸೈನ್ಸ್ ಫಿಕ್ಷನ್ ಆಗುವೆಡೆ ತಳ್ಳಿ ಅಲ್ಲಿಂದ ಜೀವಿಯೊಂದರ ದೇಹ, ಆತ್ಮದ ಸಾಧ್ಯತೆಗಳ ಸುತ್ತ ಸುತ್ತುತ್ತಾ ಆಧ್ಯಾತ್ಮಿಕ ಬಣ್ಣ ಪಡೆದು ಕಡೆಗೆ ಓದುಗರ ವಿಶ್ವಾಸ ಯಾವುದರಲ್ಲಿ ಹೆಚ್ಚಿದೆಯೋ ಅದನ್ನೇ ನಂಬಲಿ ಎನ್ನುವಂತೆ ಮುಕ್ತ ಸಾಧ್ಯತೆಗಳೊಂದಿಗೆ ಕಾದಂಬರಿ ಮುಗಿಯಿತು.
Enjoyable read ಅಥವಾ ಸುಲಭದ ಓದು ಎನ್ನಲಾರೆ; ಖಂಡಿತವಾಗಿಯೂ ಒಂದು ಹೊಸಬಗೆಯ ಪ್ರಯತ್ನ. ಸೀಮಿತ ಪಾತ್ರಗಳೊಂದಿಗೆ ಒಂದು ನಿಗದಿತ ಸ್ತಳದಲ್ಲಿ ನಡೆಯೋ ಕಥೆಗಳನ್ನೇ ಹೆಚ್ಚಾಗಿ ಇಷ್ಟಪಡೋ ನನ್ನಂತವರಿಗೆ ಸ್ವಲ್ಪ ಕಿರಿಕಿರಿ ಎನಿಸುವಂತೆ ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಆಗಬಹುದಾದ ಹೊಸ ಪಾತ್ರಗಳ ಆಗಮನ, ಅದಕ್ಕೆ ಲೇಖಕರು ಒದಗಿಸುವ ಹಿನ್ನೆಲೆ ಇದನ್ನೆಲ್ಲ ನೆನಪಿಡುವುದು ಚೂರು ಕಷ್ಟವೆನಿಸಿದ್ದು ಹೌದು. ದಿಗಂಬರ, ಪೊಕ್ಕೆ, ರಿಚರ್ಡ್,ಸೋಫಿಯಾ, ಯಾಲಿ, ಅಲೆಕ್ಸ್.. ಅಭಿಜಿತ್ ಕಿಮಾನಿ, ವಸು, ಏಡ್ರಿಯಾನಾ, ಕೌಶಿಕ್ ಕೃಷ್ಣ(ಹೇ! ಈ ಹೆಸರು ಚಂದ ಇದೆ) ಅನ್ಸೆಲ್ಮೋ, ಎಂಜಲಿತೋ ಉಫ್! ಎಲ್ಲರ ಕುರಿತೂ ಲೇಖಕ ಕೊಡುವ background info ಕೆಲವೊಮ್ಮೆ ಅನಗತ್ಯವೇನೊ ಅಂತ, ಕಥೆಯ ಓಘಕ್ಕೆ ಅಡಚಣೆ ಅಂತ ಅನಿಸಿದ್ದಿದೆ. ಯಾವುದೋ ರೆಸ್ಟೋರೆಂಟ್, ಅದರ ಮೆನ್ಯೂ, ಅದರ ಸ್ಥಾಪಕ..ಸಾವಿ ವೈನರಿ(ಇದು ಇರೋದ್ರಲ್ಲಿ ಕಥೆಗೆ ಸ್ವಲ್ಪ ಸಂಬಂಧಿಸಿದ್ದು) ಇತಿಹಾಸ..ಕೆಲವೆಲ್ಲ ಇಲ್ಲದಿದ್ದರೆ ಕಥೆ ಇನ್ನಷ್ಟು ಕಳೆಗಟ್ಟುತ್ತಿತ್ತೇನೋ ಅನ್ನೋದು ನನ್ನ ಅನಿಸಿಕೆ.