‘ಅಂತು’ ಎಂಬ ಶಬ್ದದ ಎಲ್ಲ ಸಾಧ್ಯತೆಗಳನ್ನೂ ಅರ್ಥಪೂರ್ಣವಾಗಿ ಧ್ವನಿಸುವ ಈ ಕಾದಂಬರಿಯು, ತನ್ನ ವಸ್ತು ಮತ್ತು ಕಥನತಂತ್ರ ಎರಡೂ ದೃಷ್ಟಿಗಳಿಂದ ಕನ್ನಡ ಕಾದಂಬರಿಲೋಕಕ್ಕೆ ಒಂದು ವಿಶಿಷ್ಟ, ಮೌಲಿಕ ಸೇರ್ಪಡೆ. ಸದ್ಯದ ಅತ್ಯಾಧುನಿಕವಾದ ಕಾರ್ಪೊರೇಟ್ ಜಗತ್ತಿನ ರೋಚಕ ವಿದ್ಯಮಾನಗಳನ್ನು ಲವಲವಿಕೆಯಿಂದ ನಿರೂಪಿಸುತ್ತಲೇ, ಅವುಗಳನ್ನೂ ಮೀರಿದ ನಿತ್ಯಸತ್ಯಗಳನ್ನು ಸ್ಪರ್ಶಿಸಿಬಿಡುವ ಮಹತ್ವಾಕಾಂಕ್ಷೆ ಇಲ್ಲಿ ಕಂಡುಬರುತ್ತದೆ. ಒಂದು ಕುತೂಹಲಕಾರೀ ಪ್ರಾಜೆಕ್ಟಿನ ಪೂರ್ವಾಪರಗಳನ್ನು ಪತ್ತೇದಾರೀ ಶೈಲಿಯಲ್ಲಿ ಶೋಧಿಸುವಂತೆ ಆರಂಭವಾಗುವ ಈ ಬರಹವು ಕ್ರಮೇಣ ಹುಟ್ಟು-ಸಾವು-ಪುನರ್ಜನ್ಮಗಳಂಥ ಗಂಭೀರ ಪ್ರಶ್ನೆಗಳಿಗೆ ಎದುರಾಗಿ ತಾತ್ವಿಕ ಎತ್ತರಗಳಿಗೆ ಬೆಳೆಯುವ ಪರಿ ಗಮನಾರ್ಹವಾಗಿದೆ. ಕನ್ನಡನಾಡಿನಿಂದ ಬಹುದೂರದ ಅಮೆರಿಕಾದಲ್ಲಿ, ತೀರಾ ಭಿನ್ನವಾದ ಪಾತ್ರ-ಭಾಷೆ-ಔದ್ಯಮಿಕ ಪರಿಸರದಲ್ಲಿ ಸೃಷ್ಟಿಯಾಗುವ ಅನುಭವವನ್ನು ಕನ್ನಡ ಭಾಷೆಯಲ್ಲಿ ಒಳಗೊಳ್ಳುವ ಈ ಸೃಜನಶೀಲ ಪ್ರಯೋಗವು ಕನ್ನಡ ಸಾಹಿತ್ಯವು ಹಿಗ್ಗುತ್ತಿರುವ ಬಗೆಯನ್ನೂ ಕಾಣಿಸುತ್ತ ಆಸಕ್ತಿ ಹುಟ್ಟಿಸುತ್ತದೆ. ತನ್ನ ಸ್ಮೃತಿಗಳಲ್ಲಿ ಜತನದಿಂದ ಕಾಪಿಟ್ಟುಕೊಂಡಿರುವ ಸ್ಥಳೀಯ ತಿಳಿವಳಿಕೆಯನ್ನು ಆಧುನಿಕ ಲೋಕಕ್ಕೆ ಮುಖಾಮುಖಿಯಾಗಿಸಿ ಕಥನ ಪ್ರಕ್ರಿಯೆಯನ್ನು ಸತ್ಯದ ಶೋಧವಾಗಿ ವಿಸ್ತರಿಸುವ ಪ್ರಯತ್ನದಲ್ಲಿ ಪ್ರಕಾಶ್ ನಾಯಕರು ಸಾಕಷ್ಟು ಯಶಸ್ವಿಯಾಗಿದ್ದಾರೆ. ‘ಅಂತು’ ನಿಸ್ಸಂದೇಹವಾಗಿ ಈ ದಶಕದ ಮುಖ್ಯ ಕನ್ನಡ ಕಾದಂಬರಿಗಳ ಸಾಲಿನಲ್ಲಿ ನಿಲ್ಲುವಂಥದ್ದು.
ಅಂತು ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕು ನಿರ್ದೇಶಿಸುವ ಸಾಧ್ಯತೆ ಉಳ್ಳ ಕಾದಂಬರಿ. ವಿಶೇಷವೆಂದರೆ ಈ ಕಾದಂಬರಿ ಎತ್ತಿರುವ ಪ್ರಶ್ನೆಗಳು ಭಾರತೀಯರಿಗೆ ಹೊಸದೇನೂ ಅಲ್ಲ. ಆದರೆ ಪ್ರಜ್ಞಾಪೂರ್ವಕವಾಗಿ ಎಂಬಂತೆ ಲೇಖಕರು ಆ ಹಾದಿಯಲ್ಲಿ ನಡೆಯದೆ ಇದನ್ನೊಂದು ಕಾರ್ಪೋರೇಟ್ ಜಗತ್ತಿನ ಮೇಲಾಟಗಳ ಅದರಲ್ಲಿ ಸ್ವವಿಮರ್ಶೆಯ ಹುಡುಕುವ ಕಥನವನ್ನಾಗಿಸಿದ್ದಾರೆ. ಒಂದು ಸಾವು, ಅದರು ಸುತ್ತ ಅನುಮಾನದ ಹುತ್ತ ,ಅದು ಒಯ್ಯುವ ಹಾದಿ ,ಸಂಶೋಧನೆ ಹೀಗೆ ಕಥೆ ಸಾಗುತ್ತದೆ. ಆದರೆ ಪದರ ಪದರವಾಗಿ ರೋಚಕ ಕಾದಂಬರಿಯ ರಹಸ್ಯದಂತೆ ಬಿಚ್ಚಿಕೊಳ್ಳುವ ಕಥೆಯ ಉದ್ದೇಶ ಆ ರಹಸ್ಯ ಬಗೆಯುವುದಲ್ಲ ಅದನ್ನು ಬಗೆದರೂ ಏನು ವ್ಯತ್ಯಾಸ ಆಗುವುದಿಲ್ಲ ಎಂಬುದು ಇದರ ಯಶಸ್ಸಿಗೆ ಕಾರಣ. ಇನ್ನು ನನಗೆ ಅತೃಪ್ತಿ ಮೂಡಿಸಿದ ಅಂಶ. ಮುಖ್ಯ ವಿಷಯದ ಪಾತ್ರಗಳ ಒಳತೋಟಿಯ ವಿವರಿಸಿದ ಲೇಖಕರು ದಿಗಂಬರನ ವೈಯುಕ್ತಿಕ ಜೀವನ ಅವನ ಮೇಲೆ ಉಂಟು ಮಾಡಿದ ಪರಿಣಾಮಗಳ ವಿವರಣೆ ಅಥವಾ ಅವನ ಮನೋವ್ಯಾಪಾರಗಳ ಆ ಕುರಿತಂತೆ ವಿವರಿಸಲು ಹೋಗುವುದಿಲ್ಲ. ಇಡಿಯ ಕಾದಂಬರಿಯ ಬಂಧಕ್ಕೆ ಅದು ಅಗತ್ಯವಿಲ್ಲ ಎಂದು ಕಂಡರೂ ಒಟ್ಟಾರೆ ಹೆಣಿಗೆಯಲ್ಲಿ ಆ ಅಂಶವೂ ಬೇಕಿತ್ತು ಎಂದು ನನಗನಿಸಿತು. ಕಥೆ ಇಲ್ಲಿನ ಪರಿಸರದ್ದಲ್ಲವಾದರೂ ಓದುಗನಿಗೆ ಅದು ಅಪರಿಚಿತ ಅನಿಸುವುದಿಲ್ಲ. ಕಾದಂಬರಿಯ ಮೂಲಪ್ರಶ್ನೆ ಭಾರತೀಯ ತತ್ವಶಾಸ್ತ್ರದ್ದೇ ಆಗಿದ್ದರೂ ಇದು ಅದಕ್ಕೊಂದು ಬೇರೆಯ ಹಾದಿಯಾಗಿದೆ. ಉತ್ತರ ಸಿಗದ ,ಉತ್ತರ ಬೇಡದ ಪ್ರಶ್ನೆ ಅದು!
ದೇಹವೆಂಬುದು ಆತ್ಮವೊಂದು ತೊಟ್ಟು ಕಳಚುವ ಬಟ್ಟೆ ಎಂಬರ್ಥದ ಸಾಲು ಗೀತೆ, ಬೈಬಲ್ ಇತ್ಯಾದಿ ಧರ್ಮಗ್ರಂಥಗಳಲ್ಲಿ ಆಗಾಗ ಕೇಳಿಬರುವ ವಾಕ್ಯವಷ್ಟೇ.. ಅದೇ ದೇಹ, ಆತ್ಮದ ಸಂಬಂಧದ ಸುತ್ತಲೆ ಹೆಣೆದ ರಸವತ್ತಾದ ಕಥೆಯಿದು.
ಒಂದು ಸಾವು, ಅದು ಕೊಲೆಯೋ ಆತ್ಮಹತ್ಯೆಯೋ ಗೊತ್ತಿಲ್ಲ. ಕೊಲೆಯೇ ಆಗಿದ್ದರೆ ಎನ್ನುವ ಅನುಮಾನದಲ್ಲಿ ಆರೊಪಿಯ ಬಂಧನದಿಂದ ಶುರುವಾಗಿ ಸಿಲಿಕಾನ್ ವ್ಯಾಲೀಯ ಸ್ಟಾರ್ಟಪ್ ವ್ಯವಹಾರವೊಂದು ಮರ್ಡರ್ ಮಿಸ್ಟರಿಯನ್ನು ಸೈನ್ಸ್ ಫಿಕ್ಷನ್ ಆಗುವೆಡೆ ತಳ್ಳಿ ಅಲ್ಲಿಂದ ಜೀವಿಯೊಂದರ ದೇಹ, ಆತ್ಮದ ಸಾಧ್ಯತೆಗಳ ಸುತ್ತ ಸುತ್ತುತ್ತಾ ಆಧ್ಯಾತ್ಮಿಕ ಬಣ್ಣ ಪಡೆದು ಕಡೆಗೆ ಓದುಗರ ವಿಶ್ವಾಸ ಯಾವುದರಲ್ಲಿ ಹೆಚ್ಚಿದೆಯೋ ಅದನ್ನೇ ನಂಬಲಿ ಎನ್ನುವಂತೆ ಮುಕ್ತ ಸಾಧ್ಯತೆಗಳೊಂದಿಗೆ ಕಾದಂಬರಿ ಮುಗಿಯಿತು.
Enjoyable read ಅಥವಾ ಸುಲಭದ ಓದು ಎನ್ನಲಾರೆ; ಖಂಡಿತವಾಗಿಯೂ ಒಂದು ಹೊಸಬಗೆಯ ಪ್ರಯತ್ನ. ಸೀಮಿತ ಪಾತ್ರಗಳೊಂದಿಗೆ ಒಂದು ನಿಗದಿತ ಸ್ತಳದಲ್ಲಿ ನಡೆಯೋ ಕಥೆಗಳನ್ನೇ ಹೆಚ್ಚಾಗಿ ಇಷ್ಟಪಡೋ ನನ್ನಂತವರಿಗೆ ಸ್ವಲ್ಪ ಕಿರಿಕಿರಿ ಎನಿಸುವಂತೆ ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಆಗಬಹುದಾದ ಹೊಸ ಪಾತ್ರಗಳ ಆಗಮನ, ಅದಕ್ಕೆ ಲೇಖಕರು ಒದಗಿಸುವ ಹಿನ್ನೆಲೆ ಇದನ್ನೆಲ್ಲ ನೆನಪಿಡುವುದು ಚೂರು ಕಷ್ಟವೆನಿಸಿದ್ದು ಹೌದು. ದಿಗಂಬರ, ಪೊಕ್ಕೆ, ರಿಚರ್ಡ್,ಸೋಫಿಯಾ, ಯಾಲಿ, ಅಲೆಕ್ಸ್.. ಅಭಿಜಿತ್ ಕಿಮಾನಿ, ವಸು, ಏಡ್ರಿಯಾನಾ, ಕೌಶಿಕ್ ಕೃಷ್ಣ(ಹೇ! ಈ ಹೆಸರು ಚಂದ ಇದೆ) ಅನ್ಸೆಲ್ಮೋ, ಎಂಜಲಿತೋ ಉಫ್! ಎಲ್ಲರ ಕುರಿತೂ ಲೇಖಕ ಕೊಡುವ background info ಕೆಲವೊಮ್ಮೆ ಅನಗತ್ಯವೇನೊ ಅಂತ, ಕಥೆಯ ಓಘಕ್ಕೆ ಅಡಚಣೆ ಅಂತ ಅನಿಸಿದ್ದಿದೆ. ಯಾವುದೋ ರೆಸ್ಟೋರೆಂಟ್, ಅದರ ಮೆನ್ಯೂ, ಅದರ ಸ್ಥಾಪಕ..ಸಾವಿ ವೈನರಿ(ಇದು ಇರೋದ್ರಲ್ಲಿ ಕಥೆಗೆ ಸ್ವಲ್ಪ ಸಂಬಂಧಿಸಿದ್ದು) ಇತಿಹಾಸ..ಕೆಲವೆಲ್ಲ ಇಲ್ಲದಿದ್ದರೆ ಕಥೆ ಇನ್ನಷ್ಟು ಕಳೆಗಟ್ಟುತ್ತಿತ್ತೇನೋ ಅನ್ನೋದು ನನ್ನ ಅನಿಸಿಕೆ.
#ಅಕ್ಷರವಿಹಾರ_೨೦೨೨ ಕೃತಿ: ಅಂತು ಲೇಖಕರು: ಪ್ರಕಾಶ್ ನಾಯಕ್ ಪ್ರಕಾಶಕರು: ಛಂದ ಪುಸ್ತಕ ಬೆಂಗಳೂರು
ಕೆಲವೊಂದು ಪುಸ್ತಕಗಳನ್ನು ಒಂದೇ ಸಲ ಓದಿ ಅರ್ಥೈಸಿಕೊಳ್ಳಲು ಸ್ವಲ್ಪ ಕಷ್ಟ. ಮತ್ತೆ ಮತ್ತೆ ಓದಿದಾಗ ಅರ್ಥವಾಗುವವು ಕೆಲವಾದರೆ ಒಂದೊಂದು ಓದಿಗೂ ಹೊಸ ಹೊಳಹು ಅರ್ಥಗಳನ್ನು ಸ್ಫುರಿಸುವ ಪುಸ್ತಕಗಳು ಇನ್ನೂ ಕೆಲವು. ಈ ಪುಸ್ತಕವು ಇವೆರಡೂ ಗುಣಗಳನ್ನು ಹೊಂದಿರುವ ವಿರಳ ಪುಸ್ತಕಗಳ ಪೈಕಿ. ಕಥೆಯ ಪ್ರಾರಂಭ ಮತ್ತು ಅಂತ್ಯ ಕೇವಲ ಬರಹಗಾರರು ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಲು ಮಾಡಿಕೊಂಡಂತಹ ಒಂದು ಚೌಕಟ್ಟು. ಈ ಚೌಕಟ್ಟಿನೊಳಗೆ ಕಾದಂಬರಿಯ ಪಾತ್ರಗಳ ಮೂಲಕ ಅವರು ನಡೆಸುವ ಹುಡುಕಾಟ, ಹೋರಾಟ ಈ ಜಗತ್ತಿನಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯ ಕಥೆ.
ಪ್ರಾರಂಭದಲ್ಲಿ ಇದೊಂದು ಕೊಲೆ ಅಥವಾ ಆತ್ಮಹತ್ಯೆಯೇ ಎಂದು ಬಗೆಹರಿಯದ ಕೇಸಿನ ವಿಚಾರಣೆಯ ಪತ್ತೇದಾರಿ ಕತೆಯಂತೆ ಅನಿಸಿದರೂ ನಿಧಾನವಾಗಿ ತಿರುವುಗಳನ್ನು ತೆಗೆದುಕೊಳ್ಳುತ್ತಾ ಹುಟ್ಟು,ಸಾವು, ಆತ್ಮ, ಪುನರ್ಜನ್ಮ ಮುಂತಾದ ಆಧ್ಯಾತ್ಮಿಕ ಆಯಾಮಗಳನ್ನು ಪಡೆದುಕೊಳ್ಳುತ್ತದೆ. ಸತ್ತ ವ್ಯಕ್ತಿಯ ಆತ್ಮದ ಮರುಜೋಡಣೆಯ ಯಂತ್ರವನ್ನು ಕಂಡುಹಿಡಿಯುವ ಪ್ರಾಜೆಕ್ಟ್ ಒಂದರ ಮೂಲಕ ಕಥೆ ಬೆಳೆಯುತ್ತದೆ. ಇದರ ಜೊತೆಗೆ ಅಮೆರಿಕದ ಕಾರ್ಪೋರೇಟ್ ಜಗತ್ತಿನ ಒಳಸುಳಿಗಳ ಜೊತೆಗೆ ಆಧ್ಯಾತ್ಮಿಕ ವಿವರಗಳ ಸಂಘರ್ಷದ ವಿವರಗಳು ಮುಂದೇನು ಎಂಬುದನ್ನು ಕಾತರಿಸುವಂತೆ ಮಾಡುತ್ತವೆ. ನಂಬಿಕೆ ಮತ್ತು ವ್ಯವಹಾರ(ಬಿಸಿನೆಸ್)ಗಳ ನಡುವೆ ಬದುಕಿನ ಮೌಲ್ಯಗಳ ಪಾತ್ರವು ಕೆಲವೊಮ್ಮೆ ತೀರಾ ಕ್ಷುಲ್ಲಕವಾಗಿಯೂ ಮತ್ತೊಮ್ಮೆ ಎಂದಿಗಿಂತಲೂ ಪ್ರಸ್ತುತವಾಗಿ ಕಾಣುವುದೇ ಬದುಕಿನ ಒಳಗುಟ್ಟಾಗಿರಬಹುದೇ ಎಂಬ ಪ್ರಶ್ನೆಗೆ ನಾವೇ ಉತ್ತರ ಕಂಡುಕೊಳ್ಳಬೇಕಷ್ಟೇ… ಇಲ್ಲಿ ಪುನಹ ನನ್ನ ಉತ್ತರ ಇನ್ನೊಬ್ಬರದರ ಜೊತೆ ತಾಳೆಯಾಗಲಾರದು!!… ತಾಳೆಯಾಗುವುದೂ ಇಲ್ಲ!!....
"ವಾಸ್ತವ ಪಾರದರ್ಶಕ, ಕಣ್ಣಿಗೆ ಕಾಣದು,ಮಾತಿಗೆ ಸಿಕ್ಕದು. ಸುಳ್ಳಿನ ಅಪಾರದರ್ಶಕತೆಯಲ್ಲಿಯೇ ಬದುಕಿನ ವಾಸ್ತವತೆ ಅಡಗಿದೆ" ಮತ್ತು "ಸಾವು ಬದುಕಿಗಿಂತ ಹೆಚ್ಚು ನಿಶ್ಚಿತ. ಮತ್ತೆ ಹುಟ್ಟಲಾರದವ, ಬಿದ್ದರೆ ಎದ್ದು ನಿಲ್ಲಲಾರದವ ಬದುಕುವುದಾದರೂ ಹೇಗೆ?" ಎಂಬಂತಹ ಸಾಲುಗಳು ಕಾದಂಬರಿಯುದ್ದಕ್ಕೂ ಅಲ್ಲಲ್ಲಿ ಗೋಚರಿಸಿ ಬದುಕಿನ ನಿರ್ಧಾರಗಳನ್ನು, ನಡೆದಿರಬಹುದಾದ ವಿಲಕ್ಷಣ ಸಂಗತಿಗಳ ಪುನರ್ ಅವಲೋಕನಕ್ಕೆ, ಮಂಥನಕ್ಕೆ ಬುನಾದಿಯನ್ನು ಹಾಕುತ್ತವೆ. "ಸಾವು ಕೂಡ ದೇವರಂತೆಯೇ ಮನುಷ್ಯನ ಸೃಷ್ಠಿ, ಹುಟ್ಟು ಸಾವುಗಳು ನಮಗೆ ನಾವೇ ಹಾಕಿಕೊಂಡ ಕೃತ್ರಿಮ ಮಿತಿಗಳು" ಎಂಬ ವಾಕ್ಯಗಳಲ್ಲಿ ನಿರಂತರ ಚಲನಶೀಲತೆಯೇ ಬದುಕು, ಅದು ಒಂದಲ್ಲ ಒಂದು ರೂಪದಲ್ಲಿ ಮತ್ತೆ ಮತ್ತೆ ಅವತರಿಸುತ್ತದೆ… ಕೊನೆ ಮೊದಲುಗಳಿಲ್ಲದೇ… ಎಂಬಂತಹ ಹೊಸ ಹೊಳಹುಗಳನ್ನು ಓದಿದಾಗ ರೋಮಾಂಚನವಾಯಿತು.
ಗಹನವಾದ ವಿಚಾರಗಳಿಂದ ತುಂಬಿದ್ದರೂ ಕೆಲವು ಅಂಶಗಳನ್ನು ಮತ್ತೆ ಮತ್ತೆ ಓದಿ ಮನದಟ್ಟುಮಾಡಿಕೊಂಡರೂ ನಿರೂಪಣೆಯ ಶೈಲಿ ಬಹಳ ಚೆನ್ನಾಗಿ ಓದಿಸಿಕೊಳ್ಳುತ್ತದೆ. ಆತ್ಮ ಪುನರ್ಜನ್ಮಗಳು ನಿಜವಾಗಿಯೂ ಇವೆಯೇ? ಒಬ್ಬ ವ್ಯಕ್ತಿ ಸತ್ತ ಮೇಲೆ ಆತನ ಆತ್ಮವನ್ನು ಇನ್ನೊಬ್ಬರ ದೇಹದಲ್ಲಿ ಸೇರಿಸುವ ಪ್ರಯೋಗ ಯಶಸ್ವಿಯಾಯಿತೇ? ರೂಪಾಂತರ ಎಂಬುದು ಕೇವಲ ಭೌತಿಕ ಸ್ಥಿತಿಯೇ ಅಥವಾ ಆತ್ಮಗಳ ರೂಪಾಂತರವು ಸಹ ಸಾಧ್ಯವೇ ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಕಾದಂಬರಿ ಓದುವುದರ ಮೂಲಕ ಮಾಡಬಹುದು. ಅಂದಹಾಗೆ "ಅಂತು" ಅಂದರೆ ಕೊನೆಯೂ ಹೌದು….. ಒಳಗುಟ್ಟು ಹೌದು….
ಒಂದು ಸಾವು - ಹಂತ ಹಂತವಾಗಿ , ಪದರ ಪದರವಾಗಿ ಘಟನೆಯ ಎಲೆಯನ್ನು ಹಿಡಿದು ಗೋಜಲನ್ನು ಬಿಡಿಸುತ್ತ ಸಾವಕಾಶವಾಗಿ ಕತೆಯನ್ನು ಹೆಣೆದ ರೀತಿ , ಕತೆಯನ್ನು ತಕ್ಷಣಕ್ಕೆ ಹೇಳಿ ಮುಗಿಸಬೇಕೆಂಬ ಧಾವಂತಕ್ಕೆ ಸಿಲುಕದ ಪಾತ್ರಗಳು ಮತ್ತು ಅವುಗಳ ಬೆಳವಣಿಗೆ. ಒಟ್ಟಾರೆಯಾಗಿ ಪುಸ್ತಕ ನನಗೆ ಇಷ್ಟವಾಯಿತು. ಅಲ್ಲಲ್ಲಿ ಪಾತ್ರಗಳು ಇನ್ನೂ ದಟ್ಟವಾಗಬೇಕಿತ್ತೇನೋ ಅನ್ನಿಸುತಿತ್ತು. ಉದಾಹರೆಣೆಗೆ 'disgusting' ಎಂದು ಹೇಳಿ ಹೋದ ಅಭಿಯ ಹೆಂಡತಿ , ಇದ್ದಕ್ಕಿದ್ದ ಹಾಗೆ ಎದ್ದು ಹೋದ ಅಭಿಯ ಅಪ್ಪ, ಎಲ್ಲದರೊಳಗಿದ್ದು ಹೊರಗಿದ್ದ ದಿಗಂಬರ . ಸಾವನ್ನು ಪ್ರತಿಬಿಂಬಿಸುವದು ರಾವಣ ರುದ್ರ ವೀಣೆ ನುಡಿಸುತ್ತಿರುವ ಚಿತ್ರವೇ ಅಥವಾ ಬಲವಂತವಾಗಿ ಕುಬ್ಜವಾಗಿರಿಸಿದ ಅಶ್ವತ್ಥವೇ ? ಇನ್ನು ಹುಡುಕಾಟದಲ್ಲಿದ್ದೇನೆ. ಮತ್ತೊಮ್ಮೆ ಓದಿದಾಗ ಸ್ಪಷ್ಟವಾಗಬಹುದೇನೋ .
ಕಾದಂಬರಿಗೆ ಚಿತ್ತಾಲರ ಛಾಯೆ ಇದೆಯೇ ? ಎನ್ನುವ ಪ್ರಶ್ನೆ ನನ್ನಲ್ಲಿ ಎದ್ದಿತ್ತಾದರೂ, ಇಂತಹ ವಸ್ತುವನ್ನು ಕತೆಯನ್ನಾಗಿಸುವ , ಅದನ್ನು ಅಷ್ಟೇ ಸಮರ್ಥವಾಗಿ ಓದುಗರಿಗೆ ವರ್ಗಾಯಿಸುವ ಕ್ರಿಯೆಯಲ್ಲಿ ಕೊನೆಗೆ ಈ ತೆರನಾದ ಕಥಾವಸ್ತುವಿರುವ , ಒಂದ್ಕಕೊಂಡು ಖೋ ಕೊಟ್ಟು ವರ್ತುಲದಲ್ಲಿ ಕೊನೆಯಿಲ್ಲದೆ ಓಡುವ ಪಾತ್ರಗಳೆಲ್ಲಕ್ಕೂ ಚಿತ್ತಾಲರ ಛಾಯೆ ಇದೆಯೇ ಅನ್ನಿಸುವದು ಸಹಜ.
ಕತೆ ಹೇಳುವ , ಕಟ್ಟಿಕೊಡುವ , ಕಟ್ಟಿದ್ದನ್ನು ನಾಜೂಕಾಗಿ ಬಿಡಿಸಿಡುವ ಸಂಯಮದ ಬರಹಗಳು ಮರೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ 'ಅಂತು ' ಅತ್ಯುತ್ತಮ ಪ್ರಯತ್ನ.
A fast paced, interesting, thriller-like story set in the San Franciso Bay Area. ಕುತೂಹಲಕಾರಿಯಾಗಿರುವ ಕಥೆ. ಈ ಕಥೆ ನಡೆಯುವ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದ ಚಿತ್ರಣ ಬಹಳ ಚೆನ್ನಾಗಿ ಮೂಡಿ ಬಂದಿದೆ. ಕಾದಂಬರಿಯ ಪಾತ್ರಗಳನ್ನು ಮನಸ್ಸಿನಲ್ಲೇ ಊಹೆ ಮಾಡಿಕೊಳ್ಳುತ್ತಾ ಓದಲು ಸೊಗಸಾಗಿದೆ. ಇಲ್ಲಿನ ಸ್ಯಾನ್ ಫ್ರಾನ್ಸಿಸ್ಕೋ ಬೇ ಪ್ರದೇಶದ ಚಿತ್ರಣ ಚಿತ್ತಾಲರ ಪುರುಷೋತ್ತಮ ದಲ್ಲಿ ಕಾಣುವ ಉತ್ತರಕನ್ನಡ/ಮುಂಬಯಿ, ದತ್ತಾತ್ರಿ ರಾಮಣ್ಣ ಅವರ ದ್ವೀಪವ ಬಯಸಿ/ಮಸುಕು ಬೆಟ್ಟದ ಹಾದಿ - ಗಳ ಬೇಲೂರು/ಚಿಕ್ಕಮಗಳೂರು ತಾಲೂಕಿನ ಸುಂದರ ಚಿತ್ರಣವನ್ನು ನೆನಪಿಸಿತು
Very interesting unique kannada novel. Taking the idea of transmigration of subtle body from Vedas and mixing it with 21 century silicon valley corporate thriller was unique attempt. Thoroughly enjoyed the read.
ಕಳೆದ ವರ್ಷ ನಾನು The Midnight Library ಎನ್ನುವ ಇಂಗ್ಲೀಷ್ ಕಾದಂಬರಿಯೊಂದನ್ನು ಓದಿದ್ದೆ. 2020 ರಲ್ಲಿ ಬಿಡುಗಡೆಯಾದ ಈ ಪುಸ್ತಕ best seller ಆಗಿದೆ. ಆತ್ಮಹತ್ಯೆಗೆ ಯತ್ನಿಸುವ ಮಹಿಳೆಯೊಬ್ಬಳು ಸಾವು ಮತ್ತು ಹುಟ್ಟು - ಇವೆರಡರ ನಡುವಿನಲ್ಲಿ ನಿಂತಿದ್ದಾಗ ಮ್ಯಾಜಿಕಲ್ ಲೈಬ್ರರಿಯೊಂದು ಸಿಗುತ್ತದೆ. ಇಲ್ಲಿಯವರೆಗಿನ ಬದುಕಿನಲ್ಲಿ ಅವಳು ಕೈಗೊಂಡ ನಿರ್ಧಾರಗಳನ್ನು, ಸಾಗಿ ಬಂದ ದಾರಿಯನ್ನು ಬದಲಾಯಿಸಿಕೊಳ್ಳುವ ಅವಕಾಶ ಸಿಕ್ಕರೆ ಬದುಕು ಹೇಗಿರುತ್ತದೆ ಎಂದು explore ಮಾಡಿ ನೋಡುವ ಆಯ್ಕೆಗಳು ಅವಳಿಗೆ ಸಿಗುತ್ತವೆ. ನೋಡುತ್ತ ಹೋದರೆ ತನ್ನದೇ ಬದುಕಿನ ಎಷ್ಟೊಂದು version ಗಳು! ಆ ಪುಸ್ತಕಕ್ಕೆ, ಪ್ರಕಾಶ ನಾಯಕ್ ಅವರು ಬರೆದಿರುವ ಈ ಅಂತು ಕಾದಂಬರಿಗು ಯಾವ ಸಂಬಂಧವೂ ಇಲ್ಲ. ಅದನ್ನು ಇಲ್ಲಿ ಯಾಕೆ ಹೇಳಿದೆನೆಂದರೆ - ಹುಟ್ಟು, ಸಾವು, ಪುನರ್ಜನ್ಮ ಇತ್ಯಾದಿಗಳ ಬಗ್ಗೆ ವಿಜ್ಞಾನ ಅದೆಷ್ಟು ಸಂಶೋಧನೆ ಮಾಡುತ್ತಿದೆಯೋ ಅಷ್ಟೇ ಪ್ರಯೋಗಗಳು ಇಂಗ್ಲೀಷ್ ಸಾಹಿತ್ಯದಲ್ಲಿಯೂ ಆಗಿವೆ. ಆದರೆ ನಮ್ಮ ಕನ್ನಡದಲ್ಲಿ ಇಂತಹ ಪುಸ್ತಕಗಳು ಕಡಿಮೆ. ಹಾಗೆ ನೋಡಿದರೆ ಸಾವಿಗೆ ಗರುಡಪುರಾಣದಂತಹ ಮಹಾನ್ ಗ್ರಂಥವೇ ಇರುವ ನಮ್ಮಲ್ಲಿ ಈ ತರಹದ ಕಥಾವಸ್ತುವನ್ನು ಆಧುನಿಕತೆಯ ಚೌಕಟ್ಟಿನಲ್ಲಿ ಹಾಕಿ ನೋಡಿರುವವರು ಕಡಿಮೆ ಎಂಬುದು ಅಚ್ಚರಿ.
ಮರುಹುಟ್ಟಿನ ಬಗ್ಗೆ, ಒಂದು ಆತ್ಮವನ್ನು ಇನ್ನೊಂದು ದೇಹಕ್ಕೆ ಹಸ್ತಾಂತರಿಸುವಂತಹ ನಿಗೂಢ ಯಂತ್ರದ ಸುತ್ತ ಸುತ್ತುವ ಈ ಕಥಾನಕ ಬರಿ ಅದಷ್ಟನ್ನೇ ಅಲ್ಲದೇ ಕಾರ್ಪೋರೆಟ್ ಜಗತ್ತಿನ ಇನ್ನೊಂದು ಮುಖವನ್ನು ತೋರಿಸುತ್ತದೆ. ಪ್ರತಿಯೊಂದನ್ನು ಉದ್ಯಮವಾಗಿ ನೋಡುವ, ಅದರ ಲಾಭ ಪಡೆಯಲು ಯತ್ನಿಸುವ ನಾವು ಮನುಷ್ಯರ ಮಧ್ಯದಲ್ಲಿ ನೈತಿಕತೆ ಕಡಿಮೆಯಾಗುತ್ತಿದೆಯೇ ಎಂಬ ಪ್ರಶ್ನೆಯೊಂದು ಮೂಡುತ್ತದೆ. ಜೊತೆಗೆ ಇದು ಅಮೇರಿಕದ ನೆಲದಲ್ಲಿ ನಡೆಯುವ ಕಥೆ. ಹಾಗಾಗಿ ಇಲ್ಲಿ ಬರುವ ಬಹಳಷ್ಟು ಜಾಗಗಳು, ಪದ್ಧತಿಗಳು ನನಗೆ ಪರಿಚಿತ ಎನ್ನಿಸಿತು. ಜೊತೆಗೆ ಬಿಟ್ಟು ಬಂದ ಊರಿನ ನೆನಪು ಸಹ ಅಲ್ಲಲ್ಲಿ ಕಾಣಿಸುತ್ತದೆ. ಕಥೆಯನ್ನು ಶುರು ಮಾಡಿದ ಕ್ರಮ, ಒಂದೊಂದೇ ಪದರ ಬಿಡಿಸುತ್ತ ಪಾತ್ರಗಳ ಮೂಲಕ ಅದನ್ನು ಬಿಚ್ಚಿಡುತ್ತ ಹೋದ ಶೈಲಿ, ಕೊನೆಗೆ ಯಾವುದಕ್ಕು ಇದು ಹೀಗೆಯೇ ಎಂದು ತೀರ್ಪು ಕೊಡದೇ ಎಲ್ಲವನ್ನು ಓದುವನಿಗೆ ಬಿಟ್ಟ ಚಾಣಾಕ್ಷತನ... ಜೊತೆಗೆ ಲೇಖಕರ ನಿರೂಪಣೆಯ ಪ್ರಬುದ್ಧತೆಯನ್ನು ಕಂಡು ನನಗೆ ಅಚ್ಚರಿಯಾಗಿದೆ. ಕಾರಣ ಇದು ನಾನು ಓದಿದ ಪ್ರಕಾಶ್ ಅವರ ಮೊದಲ ಪುಸ್ತಕ. ಇಷ್ಟು ಚೆನ್ನಾಗಿ ಬರೆಯುವವರು ಯಾಕೆ ವರ್ಷಕ್ಕೊಂದು ಪುಸ್ತಕ ಬರೆಯುತ್ತಿಲ್ಲ ಎಂಬುದೇ ನನ್ನ ಪ್ರಶ್ನೆ. ಈ ಕಾದಂಬರಿಯಲ್ಲಿ ಒಂದೇ ಒಂದು ಸಮಸ್ಯೆ ಎಂದರೆ ಪಾತ್ರಗಳು ಮತ್ತು ವಿಷಯಗಳು ಧುತ್ತನೇ ಎದುರಾದಾಗ ಯಾರಿವರು, ಯಾಕೆ ಬಂದರು ಎಂದು ತಿಳಿಯಲು ತುಸು ಕಷ್ಟವೆನ್ನಿಸಿತು. ಅದು ನನ್ನ ಗ್ರಹಿಕೆಯ ಮಿತಿಯೂ ಆಗಿರಬಹುದು.
ಒಟ್ಟಿನಲ್ಲಿ ಹೊಸ ಕಥಾವಸ್ತುವಿರುವ, ಮಾಗಿದ ನಿರೂಪಣೆಯಿರುವ ಅಪರೂಪದ ಕಾದಂಬರಿ.