ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಭಾರತವು ಸ್ವತಂತ್ರ ಪಡೆಯುವವರೆಗೆ ನಡೆದ ಸಶಸ್ತ್ರ ಹೋರಾಟದ ಕಥಾನಕವನ್ನು ತೆರೆದಿಡುತ್ತದೆ ಈ ಪುಸ್ತಕ. ಈ ಪುಸ್ತಕವು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಇದ್ದ ರೋಷಾವೇಷಗಳ ಕುರಿತು ಬೆಳಕು ಹರಿಸುತ್ತದೆ. ಬ್ರಿಟಿಷರ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿ ತಮ್ಮ ಪ್ರಾಣತ್ಯಾಗ ಮಾಡಿದ ಕ್ರಾಂತಿಕಾರಿಗಳ ದಿಟ್ಟ ಪರಂಪರೆಯನ್ನು ಲೇಖಕರು ಹೇಳುತ್ತಾ ಹೋಗುತ್ತಾರೆ.
ನಾವೆಲ್ಲ ಶಾಲಾತರಗತಿಗಳಲ್ಲಿ ಓದಿದಂತೆ ನಮಗೆ ಸ್ವಾತಂತ್ರ್ಯ ದೊರಕಿದ್ದು ಅಹಿಂಸೆಯ ಹೋರಾಟದ ಮೂಲಕ. ಆದರೆ ಪುಸ್ತಕದ ಆರಂಭದಲ್ಲೇ ಸುಮಾರು ೬೫ ದಂಗೆಗಳನ್ನು ಪಟ್ಟಿ ಮಾಡಿದ್ದಾರೆ. ಸ್ವಾತಂತ್ರ್ಯದ ಕಿಚ್ಚು ಭಾರತಾದ್ಯಂತ ಹಬ್ಬಲು ಕ್ರಾಂತಿಕಾರಿಗಳ ಕೊಡುಗೆ ಅಪಾರವಾದದ್ದು. ಆದರೆ ಅವರನ್ನು ನಮ್ಮ ದೇಶದ ಇತಿಹಾಸವು ಬಿಂಬಿಸುವ ರೀತಿ ಮಾತ್ರ ಬೇಸರ ತರಿಸುತ್ತದೆ. ಈ ಹೋರಾಟಗಳು ಭಾರತಕ್ಕೆ ಸ್ವಾತಂತ್ರ್ಯ ದೊರಕಿಸುವ ಪ್ರಕ್ರಿಯೆಗೆ ವೇಗವನ್ನು ತುಂಬಿದ್ದನ್ನು ಮಾತ್ರ ಅಲ್ಲಗಳೆಯುವಂತಿಲ್ಲ.
ಸುಮಾರು ೩೭ ಅಧ್ಯಾಯಗಳು ಕ್ರಾಂತಿಕಾರಿಗಳ ಹುಟ್ಟು, ಹೋರಾಟದ ಹಾದಿ,ಎದುರಿಸಿದ ಸವಾಲುಗಳು, ಬ್ರಿಟಿಷ್ ಆಡಳಿತದ ಕ್ರೌರ್ಯ ಮತ್ತು ಹಲವು ಭಾರತೀಯರ ವಿಶ್ವಾಸ ಘಾತುಕತನದ ಕುರಿತು ವಿವರಿಸುತ್ತದೆ.ಎಲೆಮರೆಯ ಕಾಯಿಯಂತೆ ಇದ್ದುಕೊಂಡು ತಾಯ್ನಾಡಿನ ಬಿಡುಗಡೆಗೆ ಪ್ರಯತ್ನಿಸಿದ ಹೋರಾಟಗಾರರು ಮತ್ತು ಹೋರಾಟದ ಅನೇಕ ವಿಚಾರಗಳು ಇಲ್ಲಿವೆ.
ದಾರಿ ಯಾವುದಾದರೇನು? ಭಾರತಮಾತೆಯನ್ನು ದಾಸ್ಯದ ಸಂಕೋಲೆಯಿಂದ ವಿಮುಕ್ತಿಗೊಳಿಸುವ ಕಾರ್ಯಕ್ಕೆ ಕೈ ಹಾಕಿ ನಾನಾ ಬಗೆಯ ಕಷ್ಟ ನಷ್ಟಕ್ಕೆ ಈಡಾಗಿ ಪ್ರಾಣವನ್ನರ್ಪಿಸಿದ ಕ್ರಾಂತಿಕಾರಿಗಳ ಹೋರಾಟವನ್ನು ದೇಶವು ಸದಾ ಸ್ಮರಿಸಿ ನೆನಪಿಟ್ಟುಕೊಳ್ಳುವುದು ಅವರಿಗೆ ನಾವು ಸಲ್ಲಿಸಬಹುದಾದ ಗೌರವ.