ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ಪ್ರಕಾರಗಳಲ್ಲಿ ಓದುಗರಿಗೆ ಮೆಚ್ಚುವಂತಹ 26ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಗಿರಿಮನೆ ಪ್ರಕಾಶನ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.
ಪ್ರಕೃತಿ ಎಂಥಾ ಅದ್ಭುತವೋ ಅಷ್ಟೆ ನಿಗೂಢವೂ ಕೂಡ ನಿಜ. ಕಾಡಿನಲ್ಲಿ ಈ ಟ್ರೆಕ್ಕಿಂಗ ಅಂತ ಹೋಗಿ ಬರೋದು ಹೆಚ್ಚಾಗಿರೋ ಸಮಯದಲ್ಲಿ ಕೆಲವೊಮ್ಮೆ ಎಡವಟ್ಟು ಮಾಡಿಕೊಂಡು ಬರುವವರು ತುಂಬಾ ಜನರಿದ್ದಾರೆ. ಅಂತಹ ಒಂದು ವಿಷಯವನ್ನು ಇಟ್ಟುಕೊಂಡೇ ಕತೆ ಕಟ್ಟಿದ್ದಾರೆ ಲೇಖಕರು. ಈ ಪೂರ್ತಿ ಕತೆಯಲ್ಲಿ ಕಾಡಿನ ನಿಗೂಡ ವಾತಾವರಣ ಮತ್ತು ಅದರ ಸೌಂದರ್ಯತೆಯನ್ನು ತುಂಬಾ ಚೆನ್ನಾಗಿ ಹೇಳಿದ್ದಾರೆ. ಈ ಪೂರ್ಣ ಕಾದಂಬರಿಯಲ್ಲಿ ನನಗೆ ತೀರಾ ಖುಷಿ ಕೊಟ್ಟಿದ್ದು ಸಿದ್ದರಾಜು ಎಂಬ ಒಂದು ಪಾತ್ರ.
ಮಲೆನಾಡಿನ ರೋಚಕ ಕತೆಗಳು ಎಂಬ ಸರಣಿಯ ಎರಡನೇ ಕಾದಂಬರಿ "ಅರಮನೆ ಗುಡ್ಡದ ಕರಾಳ ರಾತ್ರಿಗಳು". ಹೆಸರೇ ಸೂಚಿಸುವಂತೆ ಕಡು ಮಳೆಗಾಲದಲ್ಲಿ ಚಾರಣಕ್ಕಾಗಿ ಕಾಡಿನೊಳಗೆ ಹೋಗಿ ದಾರಿ ತಪ್ಪಿದ ಯುವ ಜೋಡಿಗಳು ಅನುಭವಿಸುವ ಯಾತನೆಯನ್ನು ಈ ಕಾದಂಬರಿಯು ತೆರೆದಿಡುತ್ತದೆ. ದಟ್ಟ ಅಡವಿಯ ಕುರಿತಾದ ಮಾಹಿತಿಯ ಕೊರತೆ, ಅತ್ಯುತ್ಸಾಹ, ತಮಗೇನು ಆಗುವುದಿಲ್ಲ ಎಂಬ ಅಸಡ್ಡೆ, ಪ್ರಾಣಾಪಾಯವನ್ನೂ ಲೆಕ್ಕಿಸದೆ ಸಾಹಸ ಪ್ರವೃತ್ತಿಗೆ ಇಳಿಯುವ ಮನೋಭಾವದ ಯುವ ಜನಾಂಗವು ದುರ್ಗಮವಾದ ಅರಣ್ಯದಲ್ಲಿ ಅನುಭವಿಸುವ ಸಂಕಷ್ಟಗಳನ್ನು ಬಹಳ ಸರಳವಾಗಿ ಅಷ್ಟೇ ಮನೋಜ್ಞವಾಗಿ ತಮ್ಮ ಬಿಗುವಾದ ನಿರೂಪಣೆಯಿಂದ ಓದುಗರ ಮುಂದಿಡುತ್ತಾರೆ ಲೇಖಕರು.
ಮಳೆಗಾಲದಲ್ಲಿ ಮಲೆನಾಡಿನ ಸೌಂದರ್ಯವನ್ನು ಮನಸೋ ಇಚ್ಛೆ ನೋಡಿ ಆನಂದಿಸಬೇಕೆಂಬ ಅಮಿತ ಉತ್ಸಾಹದಿಂದ ಹೊರಡುವ ಎರಡು ಯುವ ಜೋಡಿಗಳು ಸ್ಥಳೀಯರ ಮುನ್ನೆಚ್ಚರಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಕಾಡಿನೊಳಗೆ ಪ್ರವೇಶಿಸುತ್ತಾರೆ. ದೂರದಿಂದ ರಮಣೀಯವಾಗಿ ಕಾಣುವ ಕಾಡಿನ ನಿಗೂಢತೆ ಮತ್ತು ರೌದ್ರತೆಯು ಅವರ ಕಣ್ಮುಂದೆ ನಿಧಾನವಾಗಿ ಅನಾವರಣಗೊಳ್ಳುತ್ತದೆ. ಇನ್ನೇನು ಹೊರಗಡೆ ಬಂದೇ ಬಿಟ್ಟೆವು ಎನ್ನುವಷ್ಟರಲ್ಲಿ ಮತ್ತಷ್ಟು ಒಳಗಡೆ ಸೆಳೆದುಕೊಂಡು ದಿಕ್ಕು ತೋಚದಂತಾಗಿ ಬಸವಳಿದು ತಮ್ಮ ತಪ್ಪಿನ ಅರಿವಾಗುವಷ್ಟರಲ್ಲಿ ಪಶ್ಚಿಮ ಘಟ್ಟದ ಘೋರ ಅರಣ್ಯವಾದ ಅರಮನೆಗುಡ್ಡದ ಬುಡವನ್ನು ತಲುಪುತ್ತಾರೆ. ಒಂದೆಡೆ ಬಿಟ್ಟು ಬಿಡದೆ ಸುರಿಯುವ ಮಳೆ,ದಟ್ಟವಾಗಿ ಆವರಿಸಿರುವ ಮಂಜು, ತಾಳಲಾರದ ಹಸಿವು,ವಿಷ ಜಂತುಗಳು,ಕಾಡು ಪ್ರಾಣಿಗಳ ಭಯ ಅವರನ್ನು ಮತ್ತಷ್ಟು ಹೈರಾಣಾಗಿಸುತ್ತದೆ. ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದೆ ಪರದಾಡುತ್ತಿರುವಾಗ ಹಸಿಮಾಂಸ ಭಕ್ಷಕ ಸೀಳುನಾಯಿಗಳ ಗುಂಪು ಇವರ ಮೇಲೆ ದಾಳಿ ಮಾಡುತ್ತವೆ. ಆಗಲೇ ನಾಗರಹಾವು, ಕಾಡಾನೆಗಳನ್ನು ಕಂಡು ದಿಕ್ಕೆಟ್ಟ ಚಾರಣಿಗರ ಬದುಕುವ ಆಸೆ ಸಂಪೂರ್ಣವಾಗಿ ನಶಿಸಿಹೋಗುತ್ತದೆ. ಮುಂದೇನಾಯಿತು…. ಅವರು ಬಾಹ್ಯ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಿ ಕಾಡಿನಿಂದ ಹೊರಬರುವಲ್ಲಿ ಯಶಸ್ವಿಯಾದರೆ? ಇದಕ್ಕೆ ಉತ್ತರ ಕಾದಂಬರಿ ಓದುವುದು!!!
ಪಶ್ಚಿಮ ಘಟ್ಟಗಳ ರಮಣೀಯ ಸೌಂದರ್ಯ ಮತ್ತು ರೌದ್ರತೆಯನ್ನು ಸುಂದರವಾಗಿ ನಮ್ಮ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಕಾಡಿನೊಳಗೆ ಸಂಚರಿಸುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ ಎದುರಾಗುವ ಸವಾಲುಗಳ ಕುರಿತು ಚೆನ್ನಾಗಿ ವಿವರಿಸಲಾಗಿದೆ. ಒಂದು ವೇಳೆ ದಾರಿ ತಪ್ಪಿ ಕಾಡಿನೊಳಗೆ ಅಲೆಯಬೇಕಾಗಿ ಬಂದರೂ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳುವ ಕನಿಷ್ಠ ಜ್ಞಾನ ಇರಬೇಕು,ಇಲ್ಲ ಅಕ್ಷರಶಃ ನರಕದರ್ಶನವಾಗುತ್ತದೆ. ನಾವು ಇವತ್ತು ಪ್ರಕೃತಿಯಿಂದ ಎಷ್ಟು ವಿಮುಖವಾಗಿದ್ದೇವೆ ಎಂದರೆ ಪ್ರಕೃತಿಯಲ್ಲಿ ಯಥೇಚ್ಛವಾಗಿ ಬದುಕುಳಿಯಲು ಬೇಕಾದಂತಹ ಆಹಾರ ದೊರಕುತ್ತಿದ್ದರೂ ಸಣ್ಣಪುಟ್ಟ ಖಾಯಿಲೆಗಳಿಗೆ ಔಷಧಿಗಳು ಸಿಗುತ್ತವೆಯಾದರೂ ಅದನ್ನು ಗುರುತು ಹಿಡಿಯಲು ನಮ್ಮ ತಲೆಮಾರಿಗೆ ಸಾಧ್ಯವಾಗುತ್ತಿಲ್ಲ ಎಂಬುದು ಖೇದಕರ. ಅದೇ ಕಾಡಿನ ಜೊತೆ ತಾದ್ಯಾತ್ಮವನ್ನು ಮೇಳಾಮೇಳಿಯನ್ನು ಉಳಿಸಿಕೊಂಡಿರುವ ತಲೆಮಾರು ಎಂತಹ ದಟ್ಟ ಅಡವಿಯಲ್ಲಿ ಸಹ ದಾರಿ ತಪ್ಪದೇ ಕ್ಷೇಮವಾಗಿ ಹಿಂತಿರುಗುವುದು ನಮ್ಮ ಮತ್ತು ಪ್ರಕೃತಿಯ ನಡುವೆ ಹೊಂದಾಣಿಕೆಯ ಅಗತ್ಯತೆಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ. ಸರ್ಕಾರದ ಇಲಾಖೆಗಳ ಮೂಗಿನಡಿಯಲ್ಲಿಯೇ ಕಾಡಿನಲ್ಲಿ ನಡೆಯುವ ದೌರ್ಜನ್ಯಗಳ ಕುರಿತು ಸಹ ಕಾದಂಬರಿ ಕೊಂಚ ಮಟ್ಟಿಗೆ ಬೆಳಕು ಚೆಲ್ಲುತ್ತದೆ.
ಕಾಡು ಎಂದರೆ ಅದು ಬರೀ ಪುಸ್ತಕದಲ್ಲಿರುವ ವಿವರಣೆಯನ್ನು ಓದಿ ಪ್ರಯಾಣಿಸಬಹುದಾದ ತಾಣವಲ್ಲ. ಸರಿಯಾದ ಮಾರ್ಗದರ್ಶನ, ಮುನ್ನೆಚ್ಚರಿಕೆ ಮತ್ತು ರಮ್ಯತೆಗೆ ಮರುಳಾಗದೆ ಮನಸ್ಸನ್ನು ಸದಾ ಹಿಡಿತದಲ್ಲಿಟ್ಟುಕೊಂಡು ಪಯಣಿಸಿದರೆ ನಿಸರ್ಗದ ಸೊಬಗನ್ನು ಸವಿಯಬಹುದು… ಇಲ್ಲದಿದ್ದರೆ ಪ್ರಾಣಕ್ಕೆ ಸಂಚಕಾರವನ್ನು ತಂದೊಡ್ಡುತ್ತದೆ ಎಂಬುದು ಕೃತಿಯ ಆಶಯ…
ಗಿರಿಮನೆ ಶ್ಯಾಮರಾವ್ ರವರ ಮಲೆನಾಡಿನ ರೋಚಕ ಕಥೆಗಳ ಎರಡನೇ ಭಾಗ ಆದರೆ ಮೊದಲನೇ ಭಾಗಕ್ಕೂ, ಈ ಪುಸ್ತಕಕ್ಕೂ ಯಾವುದೇ ನಂಟಿಲ್ಲ.
ಮಲೆನಾಡಿನ ಕಾಡುಗಳ ನೋಡ ಬಯಸುವ 4 ಚಾರಣ ಪ್ರಿಯರು ಹೇಗೆ ಇಲ್ಲಿ ಇರುವ ದಟ್ಟ ಕಾಡಿನಲ್ಲಿ ಜೋರು ಗಾಳಿ ಮಳೆ ಕಾಲದಲ್ಲಿ ಸಿಕ್ಕು ಪ್ರತಿ ರಾತ್ರಿಯೂ ಹೇಗೆ ಸಾವಿನ ಕದ ತಟ್ಟಿ ವಾಪಸ್ಸು ಬರುತ್ತಾರೆ , ಪ್ರತಿ ರಾತ್ರಿಯೂ ಹೇಗೆ ಅವರ ಜೀವನದ ಕರಾಳ ರಾತ್ರಿಗಳು ಆಗಿ ಹೋಗುತ್ತವೆ, ಅಲ್ಲಿ ಸಿಗುವ ಅರಮನೆ ಗುಡ್ಡ ತಲುಪಿದ ಜನ ಹಿಂದುರುಗಿ ಬರೋದಿಲ್ಲ , ಅಲ್ಲಿ ಅವರಿಗೆ ಸಿಕ್ಕ ಪ್ರಾಣಿಗಳು ಹೇಗೆ ಅವರ ಮನದ ದುಗುಡ ಹೆಚ್ಚಿಸುತ್ತಾ ಹೋಗುತ್ತದೆ. ಮಲೆನಾಡಿನಲ್ಲಿ ಮಳೆ ನೋಡಿ ಸವಿಯುವ ಎಂದು ಹೋಗುವ ಇವರು ಇಲ್ಲಿರುವ ಭಯಾನಕ ಅರಣ್ಯದಲ್ಲಿ ಸಿಕ್ಕಿ ಮತ್ತೆ ವಾಪಸ್ಸು ಬರುವವರೋ ಇಲ್ಲವೋ?? ಇದೆಲ್ಲವನ್ನೂ ತುಂಬಾ ಚೆನ್ನಾಗಿ ಕಣ್ಣಿಗೆ ಕಟ್ಟುವ ಹಾಗೆ ಬರೆದು ನಮ್ಮ ಮುಂದೆ ಇಟ್ಟಿದ್ದಾರೆ. ಇದರ ಜೊತೆ ಮಲೆನಾಡು ಹೇಗೆ ಚಂದವಾಗಿ ಇದೆಯೋ ಅದರ ಒಡಲಲ್ಲಿ ಇರುವ ಕಾಡು ಅಷ್ಟೇ ಭಯಾನಕ ಎಂದು ಹೇಳಿದ್ದಾರೆ , ಮುಂದೆ ಯಾರಾದರೂ ಕಾಡಿನ ಒಳಗೆ ನುಗ್ಗುವ ಆಲೋಚನೆ ಮಾಡುವ ಮುನ್ನ ಈ ಪುಸ್ತಕ ಒಮ್ಮೆ ಓದುವುದು ಸಹ ಒಳಿತು .
20 ಪುಟಗಳನ್ನು ಓದಿ ಇಡೋಣವೆಂದು ಕೈಗೆಯೆತ್ತಿಕೊಂಡ ಪುಸ್ತಕ ಅದನ್ನು ಓದಿ ಮುಗಿಸುವವರೆಗೆ ಓದುಗನನ್ನು ಹಿಡಿದಿಟ್ಟುಕೊಳ್ಳುತ್ತದೆಂದರೆ ಅದು ಪುಸ್ತಕಕ್ಕೆ ಇರುವ ನಾಡಿನ ಶಕ್ತಿಯೇ ಸರಿ....!!! ಮುಂಗಾರಿನ ಆರಂಭದಲ್ಲಿ ಸಕಲೇಶಪುರದ ಅರಮನೆಗುಡ್ಡಕ್ಕೆ ಚಾರಣಕ್ಕೆ ಎಂದು ಹೋಗುವ ನವ ವಿವಾಹಿತ ದಂಪತಿಗಳು ಸುಂದರ ನಿಸರ್ಗದ ಮಡಿಲಿನಲ್ಲಿ ದಾರಿತಪ್ಪಿ ಪಶ್ಚಿಮಘಟ್ಟವು ನೋಡಲು ಎಷ್ಟು ಸುಂದರ ರಮಣೀಯವಾಗಿದೆಯೋ ಎಂದು ಅವರು ತಿಳಿದುಕೊಂಡಿದ್ದರೋ,ಅದಕ್ಕಿಂತ ಹೆಚ್ಚು ಭೀಕರತೆ,ಭಯಾನಕತೆ ಮತ್ತು ನಿಗೂಢತೆಗಳಿಂದ ಕೂಡಿದೆ ಎಂಬುದನ್ನು ನಿಸರ್ಗವು ಅವರಿಗೆ ಪ್ರತಿಯೊಂದು ಸನ್ನಿವೇಶದಲ್ಲಿ ಅರ್ಥ ಮಾಡಿಸುವ ರೀತಿ ಓದುಗನನ್ನು ಸಹ ಬೆಚ್ಚಿ ಬೀಳಿಸುವಂತಿದೆ.
‘ಅರಮನೆ ಗುಡ್ಡದ ಕರಾಳ ರಾತ್ರಿಗಳು‘ ಪುಸ್ತಕವನ್ನು ಕೈಗೆತ್ತಿಕೊಳ್ಳಲು ಅದರ ಹೆಸರೇ ಕಾರಣ ಅನ್ನಬಹುದು. ಇದು ನಾನೋದಿದ ಗಿರಿಮನೆ ಶ್ಯಾಮರಾವ್ ಅವರ ಎರಡನೇ ಪುಸ್ತಕ. ಹಾರರ್ ಸ್ಟೋರಿ ಇರಬಹುದೇನೋ ಎಂದುಕೊಂಡೆ ಓದಲು ಶುರುಮಾಡಿದೆ. ಆಮೇಲೆ ತಿಳಿದಿದ್ದು ಇದು ಹಾರರ್ ಅಲ್ಲಾ, ಮಲೆನಾಡಿನ ಮಿಸ್ಟರಿ ಅಂತ. ಒಟ್ಟಾರೆ ಒಂದೊಳ್ಳೆ ಓದು. ನಾನಂತೂ ನನ್ನ ಕಲ್ಪನೆಯಲ್ಲಿ ಪಾತ್ರಗಳೊಂದಿಗೆ ಪ್ರವಾಸ ಮಾಡಿದ ಅನುಭವ. ಕ್ಲೈಮಾಕ್ಸ್ ಏನಾಗತ್ತೆ ಅನ್ನೋ ಕುತೂಹಲ. ಓದಿ ಮುಗಿಸಿದ ಮೇಲೂ ಮನಸಿನಲ್ಲಿ ಕೆಲಕಾಲ ಉಳಿಯುವಂತ ಕತೆ. ನಾವು ಎಷ್ಟು ತಿಳಿದಿದ್ದರೂ ಪ್ರಕೃತಿಯ ಮುಂದೆ ಅದು ಅಲ್ಪವೇ…Enjoy the nature..but know your limits…
ಬೆಟ್ಟ ಗುಡ್ಡ ಕಾಡುಗಳ ಪರಿಚಯವೇ ಇಲ್ಲದ ಅಥವಾ ಅಲ್ಪ ಸ್ವಲ್ಪ bookish ಜ್ಞಾನ ಇಟ್ಕೊಂಡ್, ಮಳೆಗಾಲದಲ್ಲಿ ಮಲೆನಾಡ ಬೆಟ್ಟ ಹತ್ತ ಹೊರಟ 4 ಬೆಂಗಳೂರು ಜನರ ಕಥೆ ಇ���ು. ಅವ್ರಿಗೆ ಆ ಕಾಡಲ್ಲಿ ಆಗೋ ಅನುಭವದ ಚಿತ್ರಣ ಅನ್ನಬಹುದು. ಇದನ್ನ ಓದ್ತಾ ಇರೋವಾಗ newspaper ಅಲ್ಲಿ ಬಂದ್ ಹೋದ ಕಾಡಲ್ಲಿ ಕಣ್ಮರೆಯಾದ so and so person ಅನ್ನೋ ಎಷ್ಟೋ news ಎಲ್ಲ ಕಣ್ಣಮುಂದೆ tapp ಅಂತ ಹಾದು ಹೋದಾಗೆ ಆಯ್ತು. ಕೆಲವು ಕಡೆ narration ಸ್ವಲ್ಪ ಅತಿರೇಖಾ ಅನ್ಸೋದ್ ಬಿಟ್ರೆ ಒಂದೇ ಸರಿ ಕೂತು ಓದಿ ಮುಗಿಸಬಹುದಾದ book.