ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ಪ್ರಕಾರಗಳಲ್ಲಿ ಓದುಗರಿಗೆ ಮೆಚ್ಚುವಂತಹ 26ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಗಿರಿಮನೆ ಪ್ರಕಾಶನ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.
ಪುಸ್ತಕದ ಕೊನೆಯಲ್ಲಿ ನಂಗೆ ಗೊತ್ತಿಲ್ಲದ ಹಾಗೆ 4 ಹನಿ ಕಣ್ಣೀರು ಬಂತು. ಮನುಷ್ಯ ಸ್ವಾರ್ಥ ಜೀವಿ. ಜಗತ್ತಿನ ಎಲ್ಲ ಸೃಷ್ಟಿನೂ ತನ್ನದು ಅನ್ನೋ ಅಹಂ ಅವ್ನಿಗೆ . ಉಳಿದ ಪ್ರಾಣಿ ಪಕ್ಷಿಗಳು ಕೂಡ ತನ್ನ ಹಾಂಗೆ ಅನ್ನೋ ಪರಿಕಲ್ಪನೆ ದಿನೇ ದಿನೇ ಕಮ್ಮಿ ಆಗ್ತಾ ಇದೆ. ಪಶ್ಚಿಮ ಘಟ್ಟ ಈಗ ಬೋಳಮ್ಮಜ್ಜಿ ತಲೆ ತರ ಆಗ್ತಾ ಇದೆ. ಇದರ ಪರಿಣಾಮವಾಗಿ ಅಲ್ಲಿರೋ ಎಷ್ಟೋ ಪ್ರಾಣಿ ಪಕ್ಷಿಗಳು ತಮ್ಮ ನೆಲೆ ಕಳ್ಕೊಂಡ್ ನಾಡಿನತ್ತ ಬರ್ತಾ ಇವೆ. ಈ ಒಂದು ಅಂಶ ಇಟ್ಕೊಂಡ್ ಬರ್ದಿರೋ ಕಾಲ್ಪನಿಕ ಕಥೆಯೇ ಒಂದು ಆನೆಯ ಸುತ್ತ. ಚೆನ್ನಾಗಿದೆ.
ಗಿರಿಮನೆ ಶ್ಯಾಮರಾವ್ ಅವರ ಪುಸ್ತಕಗಳು ಓದೋದು ಅಂದ್ರೇನೆ ದಟ್ಟ ಪಶ್ಚಿಮಘಟ್ಟದ ಕಾನನದ ಮಧ್ಯೆ ಸಾಗುವ ಅನುಭವ. ಆನೆಗಳನ್ನ ನೋಡದೆ ಅತವಾ ಕೇಳದೇ ಇರುವವರು ತುಂಬಾ ಕಡಿಮೆ ಇರ್ತಾರೆ.. ಅವುಗಳ ಬಗ್ಗೆ ಆಸಕ್ತಿ ಇರುವವರು ಇನ್ನೂ ಕಡಿಮೆ. ನನ್ನ ಮಟ್ಟಿಗೆ ಆನೆಗಳು ಎಂದರೆ ಕೇವಲ ಒಂದು ದೈತ್ಯ ಪ್ರಾಣಿ ಅಷ್ಟೇ ಆಗಿರದೆ ಪರಿಸರ ವ್ಯಸ್ಥೆಯ (Ecosystem) ಒಂದು ಅವಿಭಾಜ್ಯ ಅಂಗ. ಆನೆಗಳು ಒಂದು ರೀತಿಯ ಪರಾಗಸ್ಪರ್ಶ ಕ್ರಿಯೇ Elephophily(Pollination) ಮಾಡುವ ಮೂಲಕ ಕಾಡಿನ ಅಭಿವೃದ್ದಿಗೆ ಕಾರಣವಾಗುತ್ತವೆ. ಅಂತ ಆನೆಗಳ ಸಂತತಿ ಇಂದು ಹೇಳಹೆಸರಿಲ್ಲದಂತೆ ಆಗುತ್ತಿವೆ. ಒಂದು ಆನೆಯ ಸುತ್ತ ಪುಸ್ತಕ ಮಾನವ ಆನೆಯ ಸಂಘರ್ಷದ ಒಂದು ಸಣ್ಣ ಇಣುಕು ನೋಟ ಅಷ್ಟೇ. ಹೇಗೆ ಒಂದು ಆನೆಯ ದಾಳಿ ಆ ಊರಿನ ಜನರ ಮತ್ತು ಆನೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಸುತ್ತ ಸುತ್ತುತ್ತದೆ. ಅಂತ್ಯ ಸ್ವಲ್ಪ ಬೇಸರ ತರಿಸುತ್ತದೆ ಬಿಡದೆ ಓದಿಸಿಕೊಂಡು ಹೋಯಿತು.. A Goodread..
ಪುಸ್ತಕದ ಹೆಸರೇ ಹೇಳುವಂತೆ ಇದು ಒಂದು ಆನೆಯ ಸುತ್ತ ಬರೆದಿರುವ ಕಥೆ. ತನ್ನ ಮನೆ, ಜಾಗ ಎಲ್ಲವೂ ಮನುಷ್ಯನ ಸ್ವಾರ್ಥಕ್ಕೆ ಬಲಿಯಾಗುತ್ತಿರುವಾಗ ಆ ಕಾಡು ಪ್ರಾಣಿ ತಾನೇ ಎಲ್ಲಿಗೆ ಹೋಗ್ಬೇಕು. ತಿಳಿದೋ ತಿಳಿಯದೆಯೋ ಊರಿಗೆ ಬರುವ ಆನೆ. ಅದ್ರಿಂದ ಕಷ್ಟ ಅನುಭವಿಸುವ ಜನರು ಎಲ್ಲವನ್ನೂ ಲೇಖಕರು ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಕೊನೆಕೊನೆಗೆ ಮನುಷ್ಯ ತಾನು ಮಾಡುವ ಹಾಗೂ ಮಾಡಿದ ಎಲ್ಲ ಕಾರ್ಯಕ್ಕೂ ಆ ಮೂಕ ಪ್ರಾಣಿಯನ್ನೆ ಕಾರಣ ಮಾಡೋದು ಏಷ್ಟು ವಿಚಿತ್ರ ಅನ್ಸತ್ತೆ. ಬಿಂದು ಮತ್ತು ಜಗದಲೆ ಪಾತ್ರ ಇಷ್ಟ ಆಗತ್ತೆ. ಮಲೆನಾಡಿನ ಕಾಡು ಅದರ ಸೊಬಗು ಚೆನ್ನಾಗಿ ಮೂಡಿ ಬಂದಿದೆ. ಆದ್ರೆ ಕೊನೆಯಲ್ಲಿ ಓದುಗನ ಕಣ್ಣಿಂದ ಒಂದು ಹನಿ ನೀರು ಜಾರುವುದಂತು ಖಂಡಿತ. ಮನಸು ಭಾರ ಅನ್ನಿಸದೇ ಇರಲಾರದು. ಆನೆಗೆ ಇರುವಷ್ಟು ಮನುಷ್ಯತ್ವ ಮನುಷ್ಯನಿಗೆ ಇಲ್ಲ.
ಪುಸ್ತಕದ ಶಿರ್ಷಿಕೆಯೇ ಹೇಳುವಂತೆ ಒಂದು ಆನೆಯ ಸುತ್ತ ನಡೆಯುವಂತಹ ಕಥೆ. ವನ್ಯಜೀವಿ ಮತ್ತು ಮಾನವ ಸಂಘರ್ಷದ ವಿಷಯವೇ ಈ ಕಾದಂಬರಿಯ ಕಥಾವಸ್ತು. ಇತ್ತಿಚಿನ ವರ್ಷಗಳಲ್ಲಿ ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅನುಭವಿಸುತ್ತಿರುವ ಸಮಸ್ಯೆ ಇದು. ಆನೆಗಳು ಬಂದು ತೋಟಗಳನ್ನು ಹಾಳು ಮಾಡುವುದು ಹಾಗೆ ಮನುಷ್ಯರ ಸಾವು ಆನೆಗಳಿಂದ ಸಂಭವಿಸುತ್ತಿರುವುದು ಇಂದಿನ ಸಮಸ್ಯೆ. ಇದಕ್ಕೆ ಕಾರಣ ಮನುಷ್ಯನೇ. ಮನುಷ್ಯನಿಂದನೇ ಉದ್ಭವಿಸಿದ ಸಮಸ್ಯೆ ಇದು. ಲೇಖಕರು ತುಂಬಾ ಚೆನ್ನಾಗಿ ಆನೆಗಳ ಬಗೆಗೆ ತಿಳಿಸಿಕೊಡುತ್ತಾ ಆನೆ ಯಾಕೆ ಹೀಗೆಲ್ಲಾ ಮಾಡುತ್ತದೆ ಎನ್ನುವುದನ್ನು ಹೇಳಿದ್ದಾರೆ. ಪಶ್ಚಿಮ ಘಟ್ಟಗಳನ್ನು ಉಳಿಸಲು ,ಎಲ್ಲರಿಗೂ ತಿಳಿಸಲು ಈ ರೀತಿಯ ಕಾದಂಬರಿಗಳನ್ನು ಬರೆದು ಜನಕ್ಕೆ ಅರ್ಥೈಸುತ್ತಿರುವುದು ನಿಜಕ್ಕೂ ಶ್ಲಾಘನೀಯ.