ಕೆಲವು ಕಥೆಗಳೇ ಹಾಗೆ. ಮನಸ್ಸಿಗೆ ಅದೆಷ್ಟು ಇಷ್ಟವಾಗಿ ಬಿಡುತ್ತದೆಂದರೆ ಅದರ ಬಗ್ಗೆ ಏನಾದರೂ ಬರೆಯೋಕೆ ಹೋದಾಗ ಒಂದಕ್ಷರವೂ ಹುಟ್ಟೋದು ಕಷ್ಟ. ಅಂತಹ ಕೆಲವು ಪುಸ್ತಕಗಳಲ್ಲಿ ಹೆಲೆನ್ ಕೆಲರ್ ಕಥೆಯೂ ಒಂದು. ಓದಿ ಮುಗಿಸಿ ಒಂದು ವಾರವೇ ಕಳೆದಿದ್ದರೂ ಹೇಗೆ ಬರಿಲಿ, ಎಲ್ಲಿಂದ ಶುರು ಮಾಡಲಿ ಅಂತ ಹಾಗೆಯೇ ಬಿಟ್ಟಿದ್ದೆ. ಆ ಗುಂಗಿನಿಂದ ಹೊರ ಬರಲು ಸ್ವಲ್ಪ ಸಮಯ ಬೇಕಿತ್ತು. ಬಿಡುವಿನಲ್ಲಿ ಸಮಯ ಹೊಂದಿಸಿಕೊಂಡು ಓದಿಯೇ ಹೀಗಾಗಿರಬೇಕಾದರೆ ಇನ್ನು ಒಂದೇ ಸಲಕ್ಕೆ ಇಡೀ ಪುಸ್ತಕ ಮುಗಿಸಿದ್ದರೆ ಕಥೆ ಏನಾಗುತ್ತಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ನನಗೆ ಈ ವರ್ಷದಲ್ಲಿ ತುಂಬಾ ಇಷ್ಟವಾದ ಓದು ಇದು.
ನನಗೆ ಮೊದಲಿನಿಂದಲೂ ಒಂದು ಕಲ್ಪನೆಯಿತ್ತು. ನೋಡಲು ಸಾಧ್ಯವಾಗದವರು ಇನ್ನೊಬ್ಬರು ಹೇಳುವುದನ್ನು ಗ್ರಹಿಸುತ್ತಾರೆ. ಕೇಳಲು ಸಾಧ್ಯವಿರದವರು ಎದುರಿಗಿರುವವರ ಹಾವ- ಭಾವಗಳನ್ನೋ ಅಥವಾ ಅವರ ತುಟಿಯ ಚಲನೆಯನ್ನೋ ನೋಡಿ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಇವೆರಡೂ ಇಲ್ಲದವರಿಗೆ? ನೋಡಿ ಅರ್ಥ ಮಾಡಿಕೊಳ್ಳಲೂ ಸಾಧ್ಯವಿಲ್ಲ, ಕೇಳಿ ತಿಳಿದುಕೊಳ್ಳಲೂ ಆಗುವುದಿಲ್ಲ. ಅಂಥವರಿಗೆ ಯಾವ ರೀತಿಯಲ್ಲಿಯೂ ಮಾತನಾಡಲು ಆಗುವುದೇ ಇಲ್ಲ ಅಂತಾನೆ ನಂಬಿಕೊಂಡು ಬಂದಿದ್ದೆ. ಅದು ಸುಳ್ಳೆಂದು ನನಗೆ ಹೆಲೆನ್ ಕೆಲರ್ ನಿರೂಪಿಸಿದ್ದಾಳೆ.
ಒಬ್ಬ ಕಣ್ಣು ಕಾಣದ, ಕಿವಿ ಕೇಳದ ಹುಡುಗಿ ಅಕ್ಷರಗಳನ್ನು ಕಲಿತು, ಸಾಹಿತ್ಯದಲ್ಲಿ ತೊಡಗಿಕೊಂಡು ನಂತರ ಮಾತನಾಡಲೂ ಕಲಿತಳು ಎಂದರೆ ಎಂಥವರಿಗೂ ನಂಬಿಕೆ ಬರುವುದು ಕಷ್ಟವೇ. ಆದರೆ ಇದನ್ನು ಓದಿದ ಮೇಲೆ, ಆಕೆಯ ಶ್ರಮವನ್ನು ತಿಳಿದ ಮೇಲೆ, ಅವಳ ಟೀಚರ್ ಮಿಸ್ ಸಲ್ಲಿವನ್ ಅವರ ಕಲಿಕೆಯ ವಿಧಾನಗಳನ್ನು ಅರಿತ ಮೇಲೆ ಇಂಥವುಗಳೂ ಸಾಧ್ಯವೆಂದು ಗೊತ್ತಾಗಿದೆ ನನಗೆ.
ಹೆಲೆನ್ ಕೆಲರ್ ಒಂದು ಅದ್ಭುತವೇ ಸರಿ. ಇದಕ್ಕಿಂತ ಹೆಚ್ಚು ಅವಳ ಬಗ್ಗೆ ಬೇರೇನನ್ನೂ ಹೇಳಲು ತೋಚುತ್ತಿಲ್ಲ. 18 ತಿಂಗಳ ಮಗುವಾಗಿದ್ದಾಗ ಖಾಯಿಲೆಯಿಂದ ತನ್ನ ದೃಷ್ಟಿ ಮತ್ತು ಶ್ರವಣ ಶಕ್ತಿಯನ್ನು ಕಳೆದುಕೊಂಡ ಹುಡುಗಿ ಆಕೆ. ಬೆಳೆಯುತ್ತಾ ಬಂದಂತೆ ತನ್ನ ಭಾವನೆಗಳನ್ನು ಹೊರಹಾಕಲು ಪ್ರಯತ್ನಿಸಿ ತಾನು ಹೇಳಬೇಕೆಂದುಕೊಂಡ ವಿಷಯಗಳು ಬೇರೆಯವರಿಗೆ ಅರ್ಥವಾಗದಿದ್ದಾಗ ಬೇರೆ ದಾರಿ ಕಾಣದೆ ಅದನ್ನೆಲ್ಲ ಸಿಟ್ಟು, ಆಕ್ರೋಶದ ಮೂಲಕ ಹೊರಹಾಕುತ್ತಿದ್ದವಳು. ಆರೇಳು ವರ್ಷಗಳ ತನಕ ಕತ್ತಲಲ್ಲೇ ಕಳೆದ ಹುಡುಗಿಯ ಜೀವನ ಬದಲಾಗಿದ್ದು ಮಿಸ್ ಸಲ್ಲಿವನ್ ಅವರು ಆಕೆಯ ಶಿಕ್ಷಕಿಯಾಗಿ ಬಂದಾಗಲೇ.
ಮೊದಮೊದಲು ಅವರ ಬಳಿ ವಿರೋಧ ವ್ಯಕ್ತಪಡಿಸಿದವಳು, ತನ್ನ ತಾಯಿಯನ್ನು ಬಿಟ್ಟು ಬೇರೆ ಯಾರಿಗೂ ಮುದ್ದು ಮಾಡಲು ಅವಕಾಶ ಕೊಡದವಳು ನಿಧಾನವಾಗಿ ಮಿಸ್ ಸಲ್ಲಿವನ್ ಅವರಿಗೆ ಆಪ್ತವಾಗಿದ್ದಳು. ಶೀಘ್ರದಲ್ಲೇ ಹೆಲೆನ್ ತನ್ನ ಶಿಕ್ಷಕಿಯು ಹೇಳಿಕೊಟ್ಟಂತೆ ಒಂದೊಂದೇ ಪದಗಳನ್ನು ಕಲಿಯುತ್ತಾ ಅಧ್ಯಯನದಲ್ಲಿ ನಿರತಳಾದರೆ ಮಿಸ್ ಸಲ್ಲಿವನ್ ಆಕೆಯನ್ನು ಕತ್ತಲೆಯಿಂದ ಬೆಳಕಿನೆಡೆಗೆ, ಒಂಟಿತನದಿಂದ ಒಡನಾಟದೆಡೆಗೆ ಕೊಂಡೊಯ್ಯುತ್ತಾ ಸಾಗಿದ್ದರು. ಜ್ಞಾನವೇ ಪ್ರೀತಿ, ಬೆಳಕು ಹಾಗೂ ದೃಷ್ಟಿ ಎಂದು ಕೇವಲ ಹೆಲೆನ್'ಗೆ ಮಾತ್ರವಲ್ಲ ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದರು.
ಹೆಲೆನ್ ಕಥೆಯನ್ನು ಓದುವಾಗ ನನಗೆ ಎಷ್ಟೋ ಬಾರಿ ಅನ್ನಿಸಿದ್ದೇನೆಂದರೆ ಮಿಸ್ ಸಲ್ಲಿವನ್ ಮತ್ತು ಹೆಲೆನ್ ಇಬ್ಬರೂ ಒಬ್ಬರಿಗಾಗಿಯೇ ಇನ್ನೊಬ್ಬರು ಹುಟ್ಟಿದ್ದಾರೆನೋ ಅಂತ. ತನಗೇನು ಬೇಕೆಂದು ಕೂಡ ಸರಿಯಾಗಿ ಸನ್ನೆಯ ಮೂಲಕ ಹೇಳಲು ಸಾಧ್ಯವಾಗದ ಹುಡುಗಿಗೆ, ಮನಸಿನ ತುಂಬೆಲ್ಲ ಕೇವಲ ಹತಾಶೆಯನ್ನೇ ಬೆಳೆಸಿಕೊಂಡು ಬಂದವಳಿಗೆ ಬಹುಶಃ ಮಿಸ್ ಸಲ್ಲಿವನ್ ದೊರಕಿರದಿದ್ದರೆ ಅಥವಾ ಇನ್ಯಾರೋ ದೊರಕಿದ್ದರೆ ಈ ಮಟ್ಟಿಗಿನ ಯಶಸ್ಸು ಸಿಗುತ್ತಿರಲಿಲ್ಲವೇನೋ. ಆಕೆಗೆ ವಿಷಯವನ್ನು ಅರ್ಥ ಮಾಡಿಸಲು ಮಿಸ್ ಸಲ್ಲಿವನ್ ಬಳಸಿಕೊಂಡ ವಿಧಾನಗಳೇ ಅಂಥವು. ಆಕೆಗಾಗಿ ತಮ್ಮ ಪೂರ್ತಿ ಜೀವನವನ್ನೇ ಮುಡಿಪಾಗಿಟ್ಟವರು ಅವರು. ಹಾಗಂತ ಇಲ್ಲಿ ಕೇವಲ ಮಿಸ್ ಸಲ್ಲಿವನ್ ಶ್ರೇಷ್ಠ ಎನ್ನುವಂತೆಯೂ ಇಲ್ಲ. ತನ್ನ ವಿದ್ಯಾಭ್ಯಾಸ ಮುಗಿಸಿ ಹೊರಬಿದ್ದಾಗ ಜೀವನೋಪಾಯಕ್ಕೆ ಏನು ಮಾಡುವುದೆಂಬ ಯೋಚನೆಲ್ಲಿದ್ದಾಗ ಹೆಲೆನ್ ಅಂತಹ ಅಪರೂಪದ ಶಿಷ್ಯೆ ಸಿಕ್ಕು ಅವರೆಲ್ಲ ಹೊಸ ಮಾದರಿಯ ಕಲಿಕಾ ವಿಧಾನಗಳನ್ನು ಕಷ್ಟಪಟ್ಟು ಹಾಗೂ ಇಷ್ಟಪಟ್ಟು ಕಲಿತವಳು ಅವಳು. ಹೆಲೆನ್ ಬಿಟ್ಟು ಬೇರೆ ಯಾರೇ ಅವರ ಶಿಷ್ಯೆಯಾಗಿದ್ದರೂ ಅವರ ಕಲಿಕಾ ವಿಧಾನಗಳು ಇಷ್ಟು ಯಶಸ್ವಿಯಾಗುತ್ತಿತ್ತಾ? ಎನ್ನುವ ಅನುಮಾನವೂ ಮೂಡದೇ ಇರುವುದಿಲ್ಲ.
ಈ ಪುಸ್ತಕದಲ್ಲಿ ಮೂರು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಹೆಲೆನ್ ತನ್ನ ಆತ್ಮಕಥೆಯನ್ನು ಮನಮುಟ್ಟುವಂತೆ ಬಿಚ್ಚಿಟ್ಟಿದ್ದಾಳೆ. ಎರಡನೆಯ ಭಾಗದಲ್ಲಿ ಆಕೆಯು ಬರೆದ ಪತ್ರಗಳನ್ನು ನೀಡಲಾಗಿದೆ. ಅವಳಿನ್ನೂ ಬರೆಯಲು ಕಲಿಯೋಕೆ ಶುರು ಮಾಡಿದಾಗಿನಿಂದ ಹಿಡಿದು ಸುಮಾರು ಆಕೆಗೆ 21 ವರ್ಷವಾಗುವವರೆಗಿನ ಪತ್ರಗಳನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ. ಇನ್ನು ಮೂರನೆಯ ಭಾಗದಲ್ಲಿ 5 ಅಧ್ಯಾಯಗಳಿವೆ. ಆಕೆಯ ವ್ಯಕ್ತಿತ್ವ ಹೇಗಿತ್ತು, ಅವಳ ಶಿಕ್ಷಣ ಯಾವ ರೀತಿಯಲ್ಲಿತ್ತು, ಆಕೆ ಮಾತು ಕಲಿತ ಬಗೆ, ಹಾಗೆ ಅವಳ ಸಾಹಿತ್ಯದ ಬಗ್ಗೆ ಮಾಹಿತಿ ನೀಡಲಾಗಿದೆ. ಇದರ ಪ್ರತಿಯೊಂದು ಭಾಗವೂ ಮನಮುಟ್ಟುವಂತೆ ಬಂದಿದ್ದರೂ ನನಗೆ ಹೆಚ್ಚು ಆಪ್ತವಾಗಿತ್ತು ಮೂರನೆಯ ಭಾಗ. ಅದರಲ್ಲೂ ಮಿಸ್ ಸಲ್ಲಿವನ್ ಅವರು ಬರೆದ ಪತ್ರಗಳು ನನಗೆ ಬಹಳ ಇಷ್ಟವಾಯಿತು. ಈ ಪತ್ರಗಳು ಹೆಲೆನ್ ವ್ಯಕ್ತಿತ್ವದ ಬಗ್ಗೆ, ಅವಳ ಕಥೆಯ ಬಗ್ಗೆ ಬೇರೆಲ್ಲಾ ಭಾಗಗಳಿಗಿಂತ ಹೆಚ್ಚು ನಿಖರವಾಗಿ ಮಾಹಿತಿ ನೀಡುತ್ತದೆ.
ಈಗಾಗಲೇ ಒಂದು ಸಾರಿ ಓದಿದ್ದೇನೆ ಪುಸ್ತಕವನ್ನು. ಮತ್ತೊಮ್ಮೆ ಹಾಗೆ ಮೇಲಿಂದ ಮೇಲೆ ಕಣ್ಣಾಡಿಸಿಟ್ಟಿದ್ದೇನೆ. ಸ್ವಲ್ಪ ದಿನಗಳ ನಂತರ ಇನ್ನೊಮ್ಮೆ ಪುಸ್ತಕವನ್ನು ಪೂರ್ತಿಯಾಗಿ ಓದಬೇಕು.
ಜೀವಿಯೊಂದಕ್ಕೆ ತನ್ನ ದೇಹದ ಎಲ್ಲ ಭಾಗಗಳೂ ಆರೋಗ್ಯಕರ ಜೀವನಕ್ಕೆ ಮುಖ್ಯವೇ ಆದರೂ ಪಂಚೇಂದ್ರಿಯಗಳು; ಮುಖ್ಯವಾಗಿ ಶ್ರವಣ ಹಾಗೂ ದೃಷ್ಟಿ ಪ್ರಪಂಚದೆಡೆಗಿನ ಬೆಸುಗೆಗೆ ಮುಖ್ಯ ಕೊಂಡಿಗಳಾಗಿವೆ. ಮಗುವೊಂದು ಹುಟ್ಟಿದಾಕ್ಷಣ ಕಣ್ಣು ತೆರೆದು ಪ್ರಪಂಚವನ್ನು ನೋಡುತ್ತದೆ, ಕಿವಿಯಿಂದ ಶಬ್ದಗಳನ್ನು ಗ್ರಹಿಸುತ್ತದೆ ಮತ್ತು ಆಕ್ಷಣದಿಂದಲೇ ಅದರ ಕಲಿಕೆ, ಮಾನವ ಜಗತ್ತಿನ ಆಗುಹೋಗುಗಳೊಂದಿಗೆ ಬಾಂಧವ್ಯ ಮೊದಲಿಡುತ್ತದೆ.
ಈ ಕಲಿಕೆಯ ಪ್ರಾರ್ಥಮಿಕ ಹಂಥದಲ್ಲೇ ಅಂದರೆ ಎರಡರ ಎಳೆ ಪ್ರಾಯದಲ್ಲೇ ಕಣ್ಣಿನ ದೃಷ್ಟಿ ಹಾಗೂ ಶ್ರವಣ ಶಕ್ತಿ ಎರಡನ್ನೂ ಕಳೆದುಕೊಂಡರೂ ತನ್ನದೇ ಕತ್ತಲ ಕೂಪದಲ್ಲಿ ಕಳೆದುಹೋಗದೇ ಸ್ಪರ್ಶ ಜ್ಞಾನ, ಗ್ರಹಣ ಶಕ್ತಿ ಮತ್ತು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದಲೇ ಸಾಮಾನ್ಯ ಮನುಷ್ಯರು ಮಾಡಬಹುದಾದ ಎಲ್ಲ ಕೆಲಸಗಳನ್ನೂ ಅಸಾಮಾನ್ಯ ರೀತಿಯಲ್ಲಿ ಸಾಧಿಸಿದ, 87 ವರ್ಷಗಳ ಒಂದು ಸಾರ್ಥಕ ಬಾಳು ಬಾಳಿದ ಕೀರ್ತಿ ಹೆಲೆನ್ ಕೆಲರ್'ಳದ್ದು.
ನನ್ನ ಬದುಕಿನ ಕಥೆಯ ಮೊದಲ ಭಾಗ ಹೆಲೆನ್ ತನ್ನ ಜೀವನಗಾಥೆಯನ್ನು , ಕಲಿಕೆಯ ವಿವಿಧ ಹಂತಗಳನ್ನು ವಿವರಿಸುವ ಅನುಭವ ಕಥನ ದೃಷ್ಟಿ ಹಾಗೂ ಶ್ರವಣ ಸಾಮರ್ಥ್ಯವಿರುವ ನಮಗೆ ಸುಲಭವಾಗಿ ಅರ್ಥವಾಗದ ಬೇರೆಯದೇ ಲೋಕ ಯಾನದಂತೆ, ಮೂರನೇ ಭಾಗ ಆನ್ ಸಲಿವನ್'ರು ಹೆಲೆನ್'ಳ ಕುರಿತು ಬರೆದಿದ್ದು 2005-6 ರ ಸುಮಾರಿಗೆ ಬಂದ "ಹೆಲೆನ್ ಜೀವನದಿಂದ ಪ್ರೇರಿತವಾದ ಹಿಂದಿ ಸಿನಿಮಾ ಬ್ಲಾಕ್" ನೆನಪಿಸಿತು.
ನಿಜಕ್ಕೂ ಈ ಸೆಮಿ ಆಟೋಬಯಾಗ್ರಫಿಗೆ ಇಬ್ಬರು ಕಥಾನಾಯಕಿಯರು. ಕಾಣದ, ಕೇಳದ ಅಸಹಾಯಕ ಸ್ಥಿತಿಯಿಂದ ಬಾಲಕಿ ಹೆಲೆನ್ ಮ್ಯಾನ್ಯುಯಲ್ ಆಲ್ಫಾಬೆಟ್ ನಿಂದ ಮೊದಲ್ಗೊಂಡು ಗ್ರೀಕ್, ಪ್ರೆಂಚ್, ಜರ್ಮನ್ ಕಲಿತು, ಪದವೀಧರೆಯಾಗಿ ನೂರಾರು ಪುಸ್ತಕಗಳನ್ನು ಓದುವುದೂ, ಉತ್ತಮ ವ್ಯಕ್ತಿಗಳೊಂದಿಗೆ ಒಡನಾಡುವುದೂ, ಹತ್ತಾರು ಪುಸ್ತಕಗಳನ್ನು ಬರೆಯುವುದೂ ಸಾಧ್ಯವಾಗಿದ್ದು ಆಕೆಗೆ ಸಿಕ್ಕ ಆನ್ ಸಲಿವನ್'ರಂತಾ ಉತ್ತಮ ಶಿಕ್ಷಕಿಯ ಕಾರ್ಯ ಕ್ಷಮತೆಯಿಂದಲೇ ಎನಿಸುತ್ತದೆ.
ಲೇಖಕಿ ಶೃತಿ ಬಿ.ಎಸ್'ರ ಭಾಷಾನುವಾದ ಸಮರ್ಥವಾಗಿದೆ. ಕೆಲವೊಂದು ಊರು, ವ್ಯಕ್ತಿಯ ಹೆಸರುಗಳ ಉಚ್ಚಾರಣೆಯ (ಪೆನ್ಸಿಲ್ವೆನಿಯಾ- ಪೆನಿನ್ಸ್ಲೇವಿಯಾ, ಬೆಲ್ಲ್- ಬೆಲ್ಲೆ, ಆನ್- ಆನ್ನೆ ಹೀಗೆ ಚಿಕ್ಕಪುಟ್ಟವು) ಹೊರತಾಗಿ ಮಿಕ್ಕಂತೆ ಎಲ್ಲಿಯೂ ಓದಿಗೆ, ಬರಹದ ಆಶಯಕ್ಕೆ ಚ್ಯುತಿಯಾಗದಂತಾ ಅಚ್ಚುಕಟ್ಟಿನ ಅನುವಾದ. ನನ್ನಮಟ್ಟಿಗೆ ಈ ಪುಸ್ತಕ ಓದುವುದು ಹೊಸದೊಂದು ಜಗತ್ತಿಗೆ ಕಾಲಿಟ್ಟ ಅನುಭವ. __________________________ ಚಾರ್ಲ್ಸ್ ಡೂಡ್ಲೆ ವಾರ್ನರ್ 1896ರಲ್ಲಿ ಹಾರ್ಪರ್ ಮ್ಯಾಗಜೀನಿನಲ್ಲಿ ಆಕೆಯ ಬಗ್ಗೆ ಬರೆಯುತ್ತಾ " ಬಹುಶಃ ಸೃಷ್ಟಿಯಲ್ಲಿ ಈಕೆಯಷ್ಟು ಶುದ್ಧ ಮನಸ್ಸಿನವಳು ಯಾರೂ ಇಲ್ಲ. ಆಕೆಗೆ ತನ್ನ ಮನಸ್ಸು ಹೇಗಿದೆಯೋ ಜಗತ್ತು ಕೂಡ ಹಾಗೇ ಇದೆ. ತಮ್ಮನ್ನು ತಾವು ಮಹಾನ್ ವ್ಯಕ್ತಿ ಎಂದು ತೋರ್ಪಡಿಸಿಕೊಳ್ಳುವ ಹಲವು ಜನರಿದ್ದಾರೆ, ಆದರೆ ಹೆಲೆನ್ ಅಂತಹದನ್ನು ಕಲಿಯಲೇ ಇಲ್ಲ" (ಪುಸ್ತಕದ 226ನೇ ಪುಟದಿಂದ)
ಹೆಲೆನ್ ಕೆಲರ್ ಅಂದರೆ ನಮಗೆಲ್ಲರಿಗೂ ನೆನಪಾಗುವುದು ನಮ್ಮ ಪ್ರೌಢಶಾಲೆಯಲ್ಲಿದ್ದ ಕನ್ನಡ ಪಾಠ ಮತ್ತು ಠಾಗೋರ್ ರವರ ಜೊತೆಯಲ್ಲಿ ಇದ್ದ ಇವರ ಸುಂದರ ಭಾವಚಿತ್ರ...
ಕೆಲರ್ ತಾವು 19ನೇ ತಿಂಗಳ ವಯಸ್ಸಿನಲ್ಲಿ ಮೆದುಳಿನ ಜ್ವರಕ್ಕೆ ತುತ್ತಾಗಿ ತಮ್ಮ ದೃಷ್ಟಿ ಮತ್ತು ಶ್ರವಣ ಶಕ್ತಿಯನ್ನು ಸಂಪೂರ್ಣ ಕಳೆದುಕೊಳ್ಳುತ್ತಾರೆ, ಕ್ರೂರ ವಿಧಿಗೆ ಎದೆ ಸೆಟದು ನಿಂತು ಗೆದ್ದು ಜೀವನಪ್ರೀತಿಯ ಕಲಶವಾಗುತ್ತಾರೆ.
ಕೆಲರ್ರವರ ಈ ಗೆಲುವಿಗೆ ದಿಗ್ದರ್ಶಕರಾಗಿದ್ದವರು ಅವರ ಗುರುಗಳು ಸಲ್ಲಿವನ್... ಕೆಲರ್ ರವರ ಗೆಲುವಿಗೆ ಬಹು ದೊಡ್ಡ ಪಾತ್ರ ವಹಿಸಿದ ಕೀರ್ತಿ ಇವರಿಗೆ ಸಲ್ಲಲೇಬೇಕು... ನನಗೆ ಇಲ್ಲಿ ಕೆಲರ್ರವರಿಗಿಂತ ಸಲ್ಲಿವನ್ ಬಹಳ ಇಷ್ಟವಾಗುತ್ತಾರೆ... ಏಕೆಂದರೆ ಕೆಲರ್ ಗೆ ಸಲ್ಲಿವನ್ ರಂತ ಗುರುಗಳು ಸಿಗದೇ, ಬೇರೆ ಶಿಕ್ಷಕ ಮಾತ್ರ ಸಿಕ್ಕಿದ್ದರೆ, ಇಂತಹ ಅಸಾಮಾನ್ಯ ಗೆಲುವು ಬಹುಷಃ ಸಿಗುತ್ತಿರಲಿಲ್ಲವೇನೋ.... ಸಲ್ಲಿವನ್ ಮತ್ತು ಕೆಲರ್ ನನಗಂತೂ ಆಧುನಿಕ ದ್ರೋಣಾರ್ಜುನ ಕಂಡಂತೆ ಕಾಣುವರು.
ಕೆಲ ಭಾಗಗಳು ಬಹಳ ಪುನರಾವರ್ತನೆವಾಗಿ ಬೇಸರ ತರಿಸುತ್ತದೆ ಉದಾ : ಫ್ರಾಸ್ಟ್ ಕಿಂಗ್ ಕಥೆಯ ಕೃತಿಚೌರ್ಯ ಭಾಗ.
ಒಟ್ಟಿನಲ್ಲಿ ಹೆಲೆನ್ ಅಸಾಮಾನ್ಯಳು, ಈಕೆಯ ಜೀವನ ಓದಿ ಎರಡು ದಿನ ಆದರ್ಶವಾಗಿಟ್ಟುಕೊಂಡು ಮರೆತು ಹೋಗುವ ಜೀವನವಲ್ಲ, ಹಠಯೋಗವದು... ಕಣ್ಣಿದ್ದು ಕಿವಿಯಿದ್ದು ಜೀವನದ ಸೌಂದರ್ಯ ಕಾಣದ ನಮ್ಮಂತವರಿಗೆ ಈಕೆಯ ಜೀವನದ ನೋಟ, ಒಂದು ಪಾಠ
ಶೃತಿರವರ ಅನುವಾದಕ್ಕೆ ನಾವೆಲ್ಲರೂ ನಿಂತು ಚಪ್ಪಾಳೆ ಹೊಡೆಯಬೇಕು... ಈಗಿನ ಬಹುತೇಕ ಅನುವಾದಗಳಗಳನ್ನು 4 ಪುಟ ಓದುವುದೇ ಸಾಧನೆ... ಎಲ್ಲ ಗೂಗಲ್ ಮಹಾಶಯನ ಅನುವಾದ. ಆದರೆ ಇಲ್ಲಿ ಸ್ವತಂತ್ರ ಕೃತಿಯಂತೆ ಹೆಲೆನ್ ನಮ್ಮ ಕನ್ನಡದವರೇನೋ ಎನ್ನುವಷ್ಟು ಆಪ್ತ ಭಾವ ಮೂಡಿಸುತ್ತದೆ...