ಜೀವಜಗತ್ತಿನ ವೈವಿಧ್ಯಗಳ ಕುರಿತು ನಮ್ಮೆಲ್ಲರಲ್ಲೂ ಒಂದು ಅಸ್ಪಷ್ಟ ಪ್ರಜ್ಞೆ ಇದ್ದೇ ಇರುತ್ತದೆ. ನಮ್ಮೂರಲ್ಲಿ ಮಾತ್ರ ಅದು ಯಾಕೆ ಬೆಳೆಯುತ್ತದೆ? ಸುತ್ತಮುತ್ತಲಿನ ಪರಿಸರ ಹೇಗೆ ಸಮತೋಲನ ಹೊಂದಿದೆ? ಇತ್ಯಾದಿ ಪ್ರಶ್ನೆಗಳಿಗೆ ನಮಗೆ ಪೂರ್ತಿಯಾಗಿ ವಿವರಿಸಲಾಗದಿದ್ದರೂ ಅದು ಹಾಗಿರಬಹುದು ಎಂಬುದೊಂದು ವಿವರಣೆ ಸುಪ್ತ ಮನಸಲ್ಲಿ ಇರುತ್ತದೆ. ಅದಕ್ಕೆ ಶಾಲೆಯ ಪಾಠಗಳೂ,ನೋಡಿದ ವಿವರಗಳೂ ಕಾರಣವಾಗಿರುತ್ತದೆ. ಅಂತಹ ಹಲ ವಿಚಾರಗಳ ಸರಳ ಭಾಷೆಯಲ್ಲಿ ಇಲ್ಲಿ ವಿವರಿಸಿದ್ದಾರೆ. ಪರಿಸರ ಎಲ್ಲ ಜೀವಿಗಳ ಪೊರೆವ ಬಗೆ, ಡಾರ್ವಿನ್‍ನ ವಿಕಾಸವಾದಕ್ಕೆ ಪೂರಕ ಉದಾಹರಣೆಗಳು,ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ, ವಿನಾಶವಾದ ಡೋಡೋ ತರಹದ ಜೀವಿಗಳ ದುರಂತ ಇವೆಲ್ಲವನ್ನೂ ಚೆನ್ನಾಗೇ ವಿವರಿಸಿದ್ದಾರೆ. ತೇಜಸ್ವಿಯವರ ವಿಸ್ಮಯ ಸರಣಿ ಓದಿದವರಿಗೆ ಇದು ಅದರ ಮುಂದುವರಿಕೆಯಂತೆ ಕಾಣುತ್ತದೆ. ಬಹಳ ಉಪಯುಕ್ತ ಪುಸ್ತಕ.
ನಮ್ಮ ದೇಹದ ಯಾವುದೋ ಭಾಗದಲ್ಲಿ ಒಂದು ಗಾಯವಾದರೆ ಅದು ವಾಸಿಯಾಗುವವರೆಗೂ ಅದರ ನೋವು, ನಮ್ಮ ದೇಹ ಮತ್ತು ಮನಸ್ಸನ್ನು ಕಾಡುತ್ತಲೇ ಇರುತ್ತದೆ. ಆದರೆ ಅದು ಮಾಯವಾಗದ ಸ್ಥಿತಿಗೆ ತಲುಪಿದರೆ!? ಯೋಚಿಸುವುದಕ್ಕೂ ಕಷ್ಟವಾಗುತ್ತದೆ ಅಲ್ಲವೇ. ಅದೇ ರೀತಿ ನಾವು ಅಂದರೆ ಮನುಷ್ಯರು ಭೂಮಿಯ ಮೇಲಿರುವ ಇತರ ಸಂಕುಲಗಳ ಮೇಲೆ ಮಾಡಿರುವ ಗಾಯ ವಾಸಿಮಾಡಲಾಗದಂಥದ್ದು.
ಭೂಮಿ ಇರುವುದು ಮನುಷ್ಯರಿಗೆ ಮಾತ್ರವಲ್ಲ ಸಕಲ ಜೀವರಾಶಿಗೆ. ಆದರೆ ಮನುಷ್ಯನ ಹುಚ್ಚಾಟಗಳಿಂದ ಕಳೆದುಹೋದ ಅನೇಕಾನೇಕ ಸಂಕುಲಗಳನ್ನು ಮರುಸೃಷ್ಟಿಸಲು ಮನುಷ್ಯನಿಂದ ಎಂದೂ ಸಾಧ್ಯವಿಲ್ಲ. ಈ ಮೇಲಿನ ಮಾತುಗಳ ಅರ್ಥ ಮೂಡಿಸುವ ಕೃತಿಯೇ "ಜೀವಜಾಲ".
ಈ ಕೃತಿಯೂ ಜೀವವಿಕಾಸದಿಂದಿಡಿದು- ಜೀವನಾಶದವರೆಗೂ ಬೆಳಕು ಚೆಲ್ಲುತ್ತದೆ. ಇದರ ಮಧ್ಯದಲ್ಲಿ ಜೀವಿಗಳ ಬದುಕು, ಬದುಕಿಗಾಗಿ ಮಾಡುವ ಹೋರಾಟ, ಹೊಂದಾಣಿಕೆ, ಅವುಗಳ ವಂಶಾಭಿವೃದ್ಧಿ ಬಗ್ಗೆ ಸರಳವಾಗಿ, ಸುಂದರವಾಗಿ, ಅಚ್ಚರಿಪಡುವಂತೆ, ಅಳುಕು ಮೂಡುವಂತೆ ಕಟ್ಟಿಕೊಟ್ಟಿದ್ದಾರೆ ಲೇಖಕರು.
ಓದುತ್ತಾ ಹೋದಂತೆ ತೇಜಸ್ವಿಯವರ ಮಿಲೇನಿಯಂ ಸರಣಿಯನ್ನು ನೆನಪಿಸುತ್ತದೆ. ಎಲ್ಲರೂ ಓದಬೇಕಾದ ಪುಸ್ತಕ. ಅದರಲ್ಲೂ ಶಾಲಾ ಕಾಲೇಜುಗಳ ಮಕ್ಕಳು ಇಂಥ ಪುಸ್ತಕಗಳನ್ನು ಓದಬೇಕು.