“ ಗೋಪಾಲಕೃಷ್ಣ ಪೈ ಅವರ ಬೃಹತ್ ಕಾದಂಬರಿ ಸ್ವಪ್ನ ಸಾರಸ್ವತ ಓದಿ ತುಂಬಾ ಖುಷಿಪಟ್ಟಿದ್ದೆ ಮತ್ತು ಅವರದೇ ಈ ಕಥಾಸಂಕಲನವನ್ನು ಓದುವಂತೆ ಪ್ರೇರೇಪಿಸಿತು ಕೂಡ. ಇದರಲ್ಲಿ ಒಟ್ಟು ೧೩ ವಿಭಿನ್ನ ಕಥೆಗಳಿವೆ. ಲೇಖಕರ ಅನುಭವ ಬುತ್ತಿಯ ಸುತ್ತ ಹೆಣೆದ ಕಲ್ಪನಾತೀತ ಸನ್ನಿವೇಶಗಳೇ ಒಟ್ಟು ಕಥೆಯಾಗಿ ಹೊಮ್ಮಿವೆ. ಲೇಖಕರು ನಂಬಿದಂತೆ ಓದುಗ ಯಾವಾಗಲೂ ಬುದ್ಧಿಜೀವಿಯೇ, ಓದುಗನನ್ನು ತಿದ್ದುವ ತತ್ವಕ್ಕೆ ಒಳಗಾಗದೇ ತಮ್ಮದೇ ಅನುಭವಗಳನ್ನು ಕಥೆಯನ್ನಾಗಿಸಿ ಓದುಗರ ಮುಂದಿರಿಸಿದ್ದಾರೆ. ಪ್ರತೀ ಕಥೆಯು ನಾವು ದಿನನಿತ್ಯ ನೋಡುವ ಜೀವನದ ಗಟ್ಟಿತನವನ್ನು ಹಾದು ಹೋಗುವ ಸನ್ನಿವೇಶಗಳಿಂದಲೇ ಕೂಡಿವೆ.
ಕೆಲವು ಕತೆಗಳು ಸಾಂಸ್ಕೃತಿಕ ಕುತೂಹಲಗಳು ಮತ್ತು ವೈಚಾರಿಕ ವಿಚಾರಗಳ ಸುತ್ತ ನಡೆಯುತ್ತವೆ. ಕೆಲವು ಜೀವನದ ಪ್ರಾಮಾಣಿಕ ಪ್ರೀತಿ, ಸಣ್ಣ ಮಾನವ ಕ್ಷಣಗಳ ಆಳವಾದ ವಿಶ್ಲೇಷಣೆ ಸುತ್ತ ಕಾಣಿಸುತ್ತದೆ. “ಬೇಲಾಡಿ ಹರಿಶ್ಚಂದ್ರ” ಅತ್ಯುತ್ತಮ ಕಥೆ ಮತ್ತು ಅನನ್ಯ ಕಾಸರವಳ್ಳಿ ನಿರ್ದೇಶನದಲ್ಲಿ ಇದೇ ಕಥೆ ಚಲನಚಿತ್ರ ಕೂಡ ಆಗಿದೆ.