ನಾ.ಮೊಗಸಾಲೆ ಎನ್ನುವ ಹೆಸರಿನಲ್ಲಿ ಓದುಗರಿಗೆ ಪರಿಚಿತರಾದ ಡಾ| ನಾರಾಯಣ ಭಟ್ಟ, ಮೊಗಸಾಲೆ ಇವರು ಹುಟ್ಟಿದ್ದು ೧೯೪೪ ಅಗಸ್ಟ ೨೭ ರಂದು. ಅವರು ಹುಟ್ಟಿದ ಊರು ಸಾರ್ಕುಡೇಲು ಮನೆ. ಈ ಗ್ರಾಮ ಇದೀಗ ಕಾಸರಗೋಡು ಜಿಲ್ಲೆಯ ಕೇರಳ ರಾಜ್ಯದಲ್ಲಿ ಮಂಜೇಶ್ವರದ ಹತ್ತಿರ ಇದೆ. ೧೯೪೯ರಲ್ಲಿ ತಂದೆ ತೀರಿಕೊಂಡದ್ದರಿಂದ ಮೊಗಸಾಲೆಯವರು ಚಿಕ್ಕಪ್ಪನ ಸುಪರ್ದಿನಲ್ಲಿ ಬೆಳೆದರು. ೧೯೬೧ರಲ್ಲಿ ಎಸ್.ಎಸ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ, ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ಕಲಿತು, ೧೯೬೫ರಲ್ಲಿ ಡಿ.ಎಸ್.ಸಿ.ಎ. ಪದವಿಯನ್ನು ಪಡೆದರು.
ಬರವಣಿಗೆ ಸಂಘಟನೆಗಳ ಮೂಲಕ ನಾ.ಮೊಗಸಾಲೆಯವರು ಕನ್ನಡ ಸಾಹಿತ್ಯಕ್ಕೆ ಬಹುಮುಖ ಸೇವೆ ಸಲ್ಲಿಸಿದ್ದಾರೆ.
ಬೃಹತ್ ಕಾದಂಬರಿಗಳ ಯಶಸ್ಸಿಗೆ ಅದು ಕೊಡುವ ವಿಸ್ತಾರ ವಾಸ್ತವ ಚಿತ್ರಣ ಮತ್ತು ಪಾತ್ರಗಳ ಗಟ್ಟಿತನ ಮುಖ್ಯ ಕಾರಣ. ಇದನ್ನು ಗಮನದಲ್ಲಿಟ್ಟುಕೊಂಡು ಅಲ್ಲದೆ ನೋಡಿದಾಗಲೂ ಈ ಕಾದಂಬರಿ ನಿಸ್ಸಂಶಯವಾಗಿ ಕನ್ನಡದ ಅತ್ಯುತ್ತಮ ಹತ್ತು ಕಾದಂಬರಿಗಳ ಪಟ್ಟಿಯಲ್ಲಿ ತನ್ನ ಸ್ಥಾನ ಗಳಿಸಿಕೊಳ್ಳುತ್ತದೆ. ಕರಾವಳಿಯ ಬಂಟ ಸಮುದಾಯದಲ್ಲಿ ಗುತ್ತಿನವರದು ದೊಡ್ಡ ಹೆಸರು. ಜಮೀನುದಾರರಾಗಿ ಮನೆತನದ ಗೌರವದ ಜೊತೆಗೆ ತಮ್ಮದೇ ಆಚಾರ ವಿಚಾರಗಳ ಕಾಪಾಡಿಕೊಂಡು ಘನತೆಯಿಂದ ಬದುಕುತ್ತಿದ್ದ ವರ್ಗ ಅದು. ಒಕ್ಕಲುಗಳಿಂದ ಗೇಣಿ ಸ್ವೀಕರಿಸುತ್ತಾ ಊರಿನ ಆಗುಹೋಗುಗಳಲ್ಲಿ ಸಕ್ರಿಯ ಪಾಲ್ಗೊಳುವಿಕೆ,ಪ್ರಭಾವ ಇದ್ದ ಗುತ್ತಿನ ಮನೆತನದ ಕಥೆ ಇದು.
ಸ್ವಾತಂತ್ರ್ಯ ಪೂರ್ವದ ಕಾಲದ ಕರಾವಳಿ. ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟ ಈ ಹಳ್ಳಿಗೂ ಬಂತು. ಅದರಿಂದ ಆದ ಬದಲಾವಣೆಗಳ ಗಾಳಿ ಇಲ್ಲಿಗೂ ಬೀಸಿತು.
ಕರಾವಳಿಯ ಬಂಟ ಸಮುದಾಯದ ಆಚರಣೆಗಳ ಅಧ್ಯಯನ ಮಾಡುವವರಿಗೆ ಈ ಕಾದಂಬರಿ ಒಂದು ಮಾಹಿತಿಪೂರ್ಣ ಕೈಪಿಡಿ. ಆಡು ಭಾಷೆ ತುಳುವಿನ ಪದಗಳ ಬಳಕೆ (ಅದಕ್ಕೆ ಕನ್ನಡದ ಅರ್ಥ) ಇಲ್ಲಿಯವರಲ್ಲದವರಲ್ಲೂ ಭಾಷೆ ಅರ್ಥ ಮಾಡಿಕೊಳ್ಳಲು ಸಹಕಾರಿ.
ಅತ್ಯಂತ ಸರಳವಾಗಿ ಹೇಳುವುದಾದರೆ ಕುವೆಂಪು ಅವರ ಎರಡು ಬೃಹತ್ ಕಾದಂಬರಿಗಳಿಗೆ ಕರಾವಳಿಯ ಸಂವಾದಿಯಾಗಿ ನಿಲ್ಲಬಲ್ಲ ಸತ್ವವುಳ್ಳ ಕೃತಿ ಇದು.
ಗುತ್ತಿನ ಮನೆತನದ ಏಳು ಬೀಳು , ಗುತ್ತಿನ ಆಳು ಮಕ್ಕಳ ಹಾಡು ಪಾಡು, ಕರಾವಳಿಯ ಪಾಡ್ದನಗಳು ,ಅಡುಗೆಗಳ ವಿವರಣೆಗಳು ,ಬ್ರಾಹ್ಮಣರ ಬದುಕು, ಮನುಷ್ಯರ ಸಣ್ಣತನ,ದೊಡ್ಡತನ ಹೀಗೆ ಕೊನೆಯ ಭಾಗದಲ್ಲಿ ಆಧುನಿಕತೆಯ ಸ್ಪರ್ಶವಾಗುತ್ತಿರುವ ವಿವರಣೆ ಬಿಟ್ಟರೆ ಇಡೀ ಕಾದಂಬರಿ ತನ್ನೊಳಗೆ ಸ್ವಾತಂತ್ರ್ಯ ಪೂರ್ವದಿಂದ ಸ್ವಾತಂತ್ರ್ಯಯ ಭೂಮಸೂದೆಯವರೆಗಿನ ಕರಾವಳಿಯ ಜನಜೀವನ ಇಲ್ಲಿ ಪಡಿಮೂಡಿದೆ.
ಈ ಕಾದಂಬರಿಯ ಅರ್ಥ ಹೆಚ್ಚಿಸಿರುವುದು ಮೋಹನ್ ಸೋನಾರ ರೇಖಾಚಿತ್ರಗಳು. ಇವೆರಡೂ ಒಂದಕ್ಕೊಂದು ಸೂಕ್ಷ್ಮವಾಗಿ ಹೆಣೆದುಕೊಂಡು ಓದಿನ ರುಚಿ ಹೆಚ್ಚಿಸುತ್ತದೆ.
ನನಗೆ ವೈಯಕ್ತಿಕವಾಗಿ ನಾನು ಬೆಳೆದ ಸೀಮೆಯ ಭೂಭಾಗದ ,ಪರಿಸರದ ವಿವರಣೆ ಎಷ್ಟು ಸರಿಯಾಗಿ ಬಂದಿದೆ ಎಂಬ ಅಚ್ಚರಿ.
ಇದೀಗ ಮರುಮುದ್ರಣ ಆಗುವ ಮಾಹಿತಿ ಇದೆ.
ವಿಷಾದದ ಸಂಗತಿ ಎಂದರೆ ಕನ್ನಡದ ಬಹುಮುಖ್ಯ ಕಾದಂಬರಿಗಳಲ್ಲಿ ಒಂದಾದ ಇದು ಪ್ರಶಸ್ತಿ ಬಹುಮತಿಗಳ ಗಳಿಸಿದರೂ ಬಹುಜನರ ಗಮನಕ್ಕೆ ಬಾರದೆ ಹೋಯಿತಲ್ಲ ಎಂದು!
ತುಳುನಾಡಿನ ಸಂಸ್ಕೃತಿ, ಇತಿಹಾಸ ಮತ್ತು ಸಾಮಾಜಿಕ ಜೀವನವನ್ನು ಹೊಂದಿರುವ ೬೨೩ ಪುಟಗಳ ಬೃಹತ್ ಕಾದಂಬರಿ. ನಾನು ಹುಟ್ಟಿ ಆಡಿ ಬೆಳೆದ,ನೋಡಿ ತಿಳಿದ,ಕೇಳಿ ಕಲಿತ ಪರಿಸರದ ಕುರಿತಾದ ಕಾದಂಬರಿಯನ್ನು ಓದುವುದೇ ಒಂದು ಅಪರೂಪದ ಅನುಭವ. ಹಾಗಾಗಿ ಓದುವಾಗ ಹಲವು ಕಡೆಗಳಲ್ಲಿ ರೋಮಾಂಚನಗೊಂಡದ್ದು ಸಹ ಇದೆ….
ಸಾಂತೇರ್ ಗುತ್ತು ಎಂಬ ಬಂಟ ಸಮುದಾಯದ ಗುತ್ತಿನ ಮನೆಯನ್ನು ಪ್ರಮುಖ ಕೇಂದ್ರವಾಗಿ ಇಟ್ಟುಕೊಂಡು ಸ್ವಾತಂತ್ರ್ಯ ಪೂರ್ವದಿಂದ ಮೊದಲಾಗಿ ಸ್ವಾತಂತ್ರ್ಯ ನಂತರದ ಭೂಮಸೂದೆ ಕಾಯ್ದೆ ಜಾರಿಯಾಗಿ ಭೂ ಹಿಡುವಳಿದಾರರು ಜಮೀನು ಕಳೆದುಕೊಂಡು ಮಾಲೀಕ ಮತ್ತು ಒಕ್ಕಲಾಳು ಎಂಬ ಸ್ತರಗಳು ನಿಧಾನಕ್ಕೆ ಮಾಯವಾಗುವವರೆಗಿನ ಕಾಲದ ತುಳುನಾಡಿನ ಜನ ಜೀವನವು ಕಾದಂಬರಿಯ ಜೀವಾಳ. ತುಳುವರ ಸಾಂಸ್ಕೃತಿಕ ಪರಂಪರೆ,ಹಬ್ಬ ಹರಿದಿನಗಳು, ಮಾತೃಪ್ರಧಾನ ಕುಟುಂಬ ವ್ಯವಸ್ಥೆ, ಮದುವೆ ಮುಂತಾದ ಶುಭಕಾರ್ಯಗಳು,ಕೃಷಿ ಚಟುವಟಿಕೆಗಳು, ಭೂತಾರಾಧನೆ, ನಾಗಾರಾಧನೆ ಜಮೀನ್ದಾರರು ಮತ್ತು ಗೇಣಿದಾರರ ನಡುವಿನ ಸಂಬಂಧಗಳು, ಮುಂಬಯಿಗೆ ವಲಸೆ ಹೋಗಿ ಅಲ್ಲಿಯೇ ಬೇರೂರಿ ತನ್ನ ಛಾಪು ಮೂಡಿಸಿದ್ದು ಬಹಳ ಸಹಜವಾಗಿ ಮೂಡಿಬಂದಿವೆ. ಭೂಮಸೂದೆ ಕಾಯ್ದೆ ಜಾರಿಗೆ ಬಂದ ನಂತರ ಉಂಟಾದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತ್ಯಂತರಗಳು,ಒಂದು ಸಮಾಜ ಆಧುನಿಕತೆಗೆ ತೆರೆದುಕೊಂಡಾಗ ಉಂಟಾಗುವ ಪಲ್ಲಟಗಳು, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಪ್ರಕೃತಿಯ ನಾಶ, ಕಾಲಕಾಲಕ್ಕೆ ಬದಲಾಗುವ ನಂಬಿಕೆಗಳು ಮತ್ತು ಆಚಾರ ವಿಚಾರಗಳಲ್ಲಿ ಆಗುವ ಮಾರ್ಪಾಡುಗಳು ಮನಮುಟ್ಟುವಂತೆ ಚಿತ್ರಿತವಾಗಿವೆ.
ಹಾಗಾದರೆ ಈ ಕಾದಂಬರಿ ಏಕೆ ಇಷ್ಟವಾಯಿತು ಅಂದರೆ ಲೇಖಕರು ಕಥೆಯನ್ನು ಬೆಳೆಸಿಕೊಂಡು ಹೋಗುವ ಪರಿ. ಸಾಮಾನ್ಯವಾಗಿ ಭೂ ಮಾಲೀಕರು ತಮ್ಮ ಆಳುಗಳನ್ನು ಶೋಷಣೆಯ ಜೊತೆಗೆ ಅವರ ಜೀವವನ್ನು ಹೀರಿ ಬಿಡುತ್ತಾರೆ ಎಂಬ ಚಿತ್ರಣ ನಮ್ಮಲ್ಲಿದೆ. ಈ ಕಾದಂಬರಿಯು ಯಾರನ್ನೂ ದೂಷಿಸಲು ಅಥವಾ ವೈಭವೀಕರಿಸುವ ಗೋಜಿಗೆ ಹೋಗಿಲ್ಲ.ಮನುಷ್ಯನ ಸ್ವಾಭಾವಿಕ ಗುಣಗಳನ್ನು ಸಹಜವಾಗಿ ವಿವರಿಸಿರುವುದರಿಂದ ಎಲ್ಲವೂ ನಮ್ಮ ಊರಿನ ಕಥೆ,ನಾವು ಕೇಳಿರಬಹುದಾದ ಅಥವಾ ನೋಡಿರಬಹುದಾದಂತಹ ಘಟನೆಗಳ ಜೀವಂತಿಕೆ ಇಲ್ಲಿ ಎದ್ದು ಕಾಣುತ್ತದೆ. ಕಾದಂಬರಿಯ ಉತ್ತರಾರ್ಧ ಓದುವಾಗ ನಾವು ಬಿಟ್ಟು ಬಂದ ಊರಿನ ನೆನಪು ಇನ್ನಿಲ್ಲದಂತೆ ಕಾಡಲಾರಂಭಿಸುತ್ತದೆ ಮತ್ತು ಮನಃಸಾಕ್ಷಿಯನ್ನು ಚುಚ್ಚುತ್ತದೆ.
ಮತ್ತೊಂದು ವಿಚಾರ ತುಂಬಾ ಚೆನ್ನಾಗಿ ನನ್ನನ್ನು ಸೆಳೆದದ್ದೆಂದರೆ ಗುತ್ತು ಮನೆಯ ಅಂಗಳದಲ್ಲಿ ಸೂರ್ಯೋದಯದ ಮೂಲಕ ಪ್ರಾರಂಭವಾಗುವುದು. ಅದೇ ರೀತಿ ಕೃತಿಯನ್ನು ಬಹಳ ಮಾರ್ಮಿಕವಾಗಿ ಮುಗಿಸಿದ್ದಾರೆ…. ಹೇಗೆ?? ಕಾದಂಬರಿ ಓದಿಯೇ ತಿಳಿದರೆ ಉತ್ತಮ….
ಕೃತಿಯ ಸಾಲುಗಳ ಝಲಕ್…..
"ಚುನಾವಣೆಯಲ್ಲಿ ಯಾರನ್ನು ಯಾಕೆ ಆಯ್ಕೆ ಮಾಡಬೇಕು ಎನ್ನುವುದು ಜನರಿಗೆ ಇನ್ನೂ ಗೊತ್ತಿರುವ ಹಾಗೆ ಇಲ್ಲ"
ನಮ್ಮ ಹಿರಿಯರ ಗುತ್ತಸುತ್ತುಗಳಿಗೆ ಹಿಂದೆ ವೈಭವ ಇತ್ತು ಅಂತ ಮುಂಬೈಯಲ್ಲಿ ಕುಳಿತು ಈಗ ಹೇಳ ಹೊರಟರೆ, ಆ ಸಂಸ್ಕೃತಿ ಖಂಡಿತ ಉಳಿಯುವುದಿಲ್ಲ. ಆದರೆ ಸಂಸ್ಕೃತಿಯ ಒಂದು ಭಾಗವಾಗಿ ನೀವು ಬದುಕಬಹುದೆಂದು ಸಂಕಲ್ಪಿಸಿದರೆ ಮಾತ್ರ ಅದನ್ನು ಸ್ವಲ್ಪವಾದರೂ ಉಳಿಸಬಹುದು"
ಬಹಳ ಸರಳವಾಗಿರುವ ಭಾಷೆ ಸಹ ಈ ಬೃಹತ್ ಕಾದಂಬರಿಯ ಓದನ್ನು ಸರಾಗವಾಗಿಸುತ್ತದೆ…. ಜನಸಾಮಾನ್ಯರ ಜೀವನವನ್ನು ಬಹಳ ರಸವತ್ತಾಗಿ ಕಟ್ಟಿಕೊಟ್ಟ ಅನನ್ಯ ಕಾದಂಬರಿ….
ಉಲ್ಲಂಘನೆ ಡಾ ನಾ ಮೊಗಸಾಲೆ Na Mogasale ಪ್ರಕಾಶಕರು: ಸೃಜನ ಪ್ರಕಾಶನ ಪುಟಗಳು:೬೨೩
೬೨೩ ಪುಟಗಳನ್ನೊಳಗೊಂಡ ಈ ಬೃಹತ್ ಕಾದಂಬರಿಯನ್ನು ಓದಿದ ಸಂತೋಷ ಹೇಳತೀರದು. ಇಲ್ಲಿ ಬರುವ ಎಷ್ಟೋ ಪಾತ್ರಗಳು ಮನಸ್ಸಿನಲ್ಲಿ ಉಳಿದುಬಿಡುತ್ತದೆ, ಕಾರಂತರ ಮರಳಿ ಮಣ್ಣಿಗೆಯಲ್ಲಿ ಸರಸೋತಿ ಪಾರೋತಿಯರನ್ನು ಹಾಗು ಇಲ್ಲಿಯ ಅಂಬಕ್ಕೆ, ಶಾಂತಕ್ಕೆ, ಸಂಕಪ್ಪ ಹೆಗ್ಡೆ ಪಾತ್ರಗಳನ್ನು ಮರೆಯಲು ಸಾಧ್ಯವಿಲ್ಲ. ಈ ಕಾದಂಬರಿಯು ಬಂಟರ ಜಮೀನುದಾರಿಯ ಪದ್ಧತಿ, ಸ್ವಾತಂತ್ರ ಪೂರ್ವ ಹಾಗು ತದ ನಂತರ ಕಾಲದ ರೀತಿ ನೀತಿಗಳಿಗೆ ಸಂಬಂಧಿಸಿದೆ. ಇಲ್ಲಿ ಮೂರು ತಲೆಮಾರಿನ (ವೆಂಕಪ್ಪ ಹೆಗ್ಡೆ, ಶೀನಪ್ಪ ಹೆಗ್ಗಡೆ, ಸಂಕಪ್ಪ ಹೆಗ್ಡೆ) ಕಥೆಗಳನ್ನು ಎಷ್ಟು ಸೊಗಸಾಗಿ ಬರೆದಿದ್ದಾರೆಂದರೆ, ಅದನ್ನು ಓದುವುದೇ ಒಂದು ಆನಂದ . ಕೆಲವು ಕಡೆ ತುಳುವಿನಲ್ಲಿ ಬರುವ ಪದ್ಯಗಳು, ಹಾಗು ಅವುಗಳ ಅರ್ಥಗಳು ತುಂಬಾ ಸೊಗಸಾಗಿದೆ. ಎಷ್ಟೋ ಕಡೆ ಪಿತೃಸಂಪ್ರದಾಯವು ಹಬ್ಬಿರುವಾಗ , ದಕ್ಷಿಣಕನ್ನಡದ ಬಂಟ ಸಮುದಾಯದಲ್ಲಿ ಮಾತೃಪ್ರಧಾನ ಸಂಪ್ರದಾಯಕ್ಕೆ ಹೆಚ್ಚು ಆದ್ಯತೆ ಹಾಗು ಈಗಲೂ ಅದೂ ಉಳಿದುಕೊಂಡು ಬಂದಿರುವುದು ವಿಶೇಷವೆ. ಬಸುರಿಯ ಹೆಂಗಸು ತನಗೆ ಹೆಣ್ಣು ಮಗುವೇ ಬೇಕೆಂದು ಆಸೆ ಪಡುತ್ತಾಳೆ, ಕಾರಣ ಆಕೆ ನಂತರ ಗುತ್ತಿನ ಮನಗೆ ಬಲ್ಲಾಳ್ದಿ (ಯಜಮಾನಿ) ಯಾಗಿ, ಮನೆಯೊಡತಿಯಾಗಿ, ಆಸ್ತಿಯ ಒಡತಿಯಾಗಿ, ತನ್ನ ತವರು ಮನೆಯಲ್ಲಿದ್ದುಕೊಂಡು ಬಂಟರ ಸಂಪ್ರದಾಯವನ್ನು ಪಾಲಿಸುತ್ತಾ ಆಡಳಿತ ನಡೆಸುವ ಸ್ಥಾನ ಪಡೆಯುತ್ತಾಳೆ. ವಾಸ್ತವವಾಗಿ ಗುತ್ತಿನ ಯಜಮಾನ ಗುತ್ತಿನಾರ್ ಆಗಿದ್ದರೂ ಗುತ್ತಿನ ನಿಜವಾದ ಅಧಿಕಾರ ಇರುವುದು ಯಜಮಾನಿಯಲ್ಲೇ, ಆಕೆಯೇ ಇಡೀ ಜಮೀನಿಗೆ ಒಡತಿ, ಇಲ್ಲಿ ಬರುವ ಗುತ್ತಿನ ಮನೆಯ ಹೆಸರೇ ಸಾಂತೇರುಗುತ್ತು.
ಸಂಕಪ್ಪ ಹೆಗ್ಡೆ ಕಾಲದಲ್ಲಿ ಭೂಮಸೂದೆಯ ಕಾನೂನು ಜಾರಿಗೆ ಬಂದಾಗ ಜಮೀನುದಾರರು ತಮ್ಮ ಭೂಮಿಯನ್ನು ಗೇಣೀದಾರರಿಗೇ ಕೊಡಬೇಕಾಗಿರುವ ಪರಸ್ಥಿತಿಯಿಂದ ಅಂಬಕ್ಕೆಯ ಮನಸ್ಸಿನ ಆಘಾತದಿಂದ ಕಾದಂಬರಿ ಶುರುವಾಗಿ ವೆಂಕಪ್ಪ ಹೆಗ್ಡೆ, ಶೀನಪ್ಪ ಹೆಗ್ಗಡೆ, ಸಂಕಪ್ಪ ಹೆಗ್ಡೆಯ ಮೂರು ತಲೆಮಾರಿನ ಸಾಂತೇರುಗುತ್ತಿನ ಕಥೆಯನ್ನು ನಮ್ಮ ಮುಂದೆ ಲೇಖಕರು ತೆರದಿಡುತ್ತಾರೆ. ಈ ತಲೆಮಾರಿನಲ್ಲಿ ತುಳುನಾಡಿನ ಎಲ್ಲಾ ಸಂಪ್ರದಾಯಗಳೂ ಆ ತಲೆಮಾರಿಗೆ ತಕ್ಕಂತೆ ಚಿತ್ರಿಸಿದ್ದಾರೆ. ವೆಂಕಪ್ಪ ಹೆಗ್ಡೆಯವರ ಕಾಲದಲ್ಲಿ ಇಜ್ಜಲಿನಿಂದ ಓಡುವ ಬಸ್ಸಿನ ಪ್ರಯಾಣದಿಂದ ಹಿಡಿದು ಸಂಕ��್ಪ ಹೆಗ್ಡೆಯವರ ಅಳಿಯನ ಕಾಲಕ್ಕೆ ಅಂಬಾಸಿಡರ್ ಕಾರಿನಲ್ಲಿ ಪ್ರಯಾಣಿಸುವ ತನಕ ಸಮಾಜದಲ್ಲಿ ಆಗುವ ವ್ಯತ್ಯಾಸವನ್ನು ಹಾಗು ಸಾಂತೇರುಗುತ್ತಿನಲ್ಲಿ ತಲೆಮಾರಿನಿಂದ ತಲೆಮಾರಿಗೆ ಆಗುವ ಸಂಪ್ರದಾಯದ ಹಾಗು ಭಾಷೆಯಲ್ಲಾಗುವ ಬದಲಾವಣೆಗಳನ್ನು ಕಾಣಬಹುದು. ವೆಂಕಪ್ಪ ಹೆಗ್ಡೆ ಕಾಲದಲ್ಲಿ ಪೊಲಿ ಪೊಲಿ ಪೊಲಿ ಎಂದು ಗೇಣಿದಾರರು ತೋಟದಲ್ಲಿ ಬೆಳೆದ ಸೂಡಿ ಪೈರನ್ನು ಪಡಿಮಂಚಕ್ಕೆ ಬಡಿಯಲು ಹಾಡತೊಡಗಿದ ಕಾಲದಿಂದ ಸಂಕಪ್ಪನ ಕಾಲಕ್ಕೆ ಬಂದಾಗ ಅದೆಲ್ಲವೂ ಬದಲಾವಣೆಯಾಗಿ ಕಡೆಗೆ ಭೂಮಸೂದೆ ಜಾರಿಯಾಗಿ ಗೇಣೀದಾರರಿಗೇ ಭೂಮಿಯ ಪಾಲಾಗಿ ಅಲ್ಲಿ ಅಕ್ಕಿ, ಬತ್ತವನ್ನು ಬೆಳೆಯದೆ ಹಣ ಸಂಪಾದನೆಗಾಗಿ ಒಳ್ಳೊಳ್ಳೆ ಬೃಹದಾಕಾರದ ಮರಗಳನ್ನು ಕಡಿದು ಅವುಗಳನ್ನು ಮಾರಿ ಹಣ ಸಂಪಾದನೆಯ ಜೊತೆ ಅಲ್ಲಲ್ಲಿ ಕಡೆಗೆ ಅಡಿಕೆ ಮರಗಳನ್ನು ಬೆಳಸುವಲ್ಲಿಗೆ ಬಂದು ನಿಲ್ಲುತ್ತದೆ, ಚಹಾ ಕಾಫೀ ಎಂದರೇ ಏನೆಂದು ತಿಳಿಯದ ಜನರು ಅದರ ರುಚಿಗೆ ಮಾರುಹೋಗುತ್ತಾರೆ, ಈ ಎಲ್ಲಾ ಬದಲಾವಣೆಗಳನ್ನು ಕಂಡ ಅಂಬಕ್ಕೆ ಸಂಕಪ್ಪನವರ ದುಃಖ ಹೇಳತೀರದು. ಸಂಕಪ್ಪನವರದು ತಾಳ್ಮೆಯ ಸ್ವಭಾವ, ಚಿಕ್ಕ ವಯಸ್ಸಿನಲ್ಲೇ ಶಾಲೆಯನ್ನು ತೊರೆದು ಸ್ವಾತಂತ್ರ ಚಳುವಳಿಯಲ್ಲಿ ಧುಮುಕಿ ಗುತ್ತಿನ ಪದವೂ ಬೇಡ ಆಸ್ತಿಯೂ ಬೇಡ ತನಗೆ ಗಾಂಧೀತತ್ವವೇ ಮುಖ್ಯವೆಂದು ಸಾಂತೇರ್ ಗುತ್ತನ್ನು ಬಿಟ್ಟು ಎಷ್ಟೋ ವರ್ಷದ ಬಳಿಕ ಪುನಃ ಬಂದು ಅಂಬಕ್ಕೆಗೆ ಬೆನ್ನೆಲುಬಾಗಿ ನಿಲ್ಲುವ ಸಂಕಪ್ಪನವರ ಗುಣ ಇಷ್ಟವಾಗುತ್ತದೆ.
ಈ ಕಾದಂಬರಿಯಲ್ಲಿ ಗಡಿಹಿಡಿಯುವ ಪ್ರಸಂಗ, ಭೂತಾರಾಧನೆಯ ಸಂದರ್ಭದಲ್ಲಿ ಪಟ್ಟದ ದೈವ ತನ್ನ ಕತ್ತಿಯ ತುದಿಯನ್ನು ಗಡಿ ಹಿಡಿದವನಿಗೆ ಮುಟ್ಟಿಸಿ ನುಡಿ ಹೇಳುವ ಪದ್ದತಿ, ಸಾವಿನ ನಂತರ ದಹನ ಕ್ರಿಯೆಗಳು, ವಿಶು ಹಬ್ಬದಲ್ಲಿ ಕಣಿ ಇಡುವ ಆಚರಣೆ, ಜುಮಾದಿ ದೈವಕ್ಕೆ ಗುತ್ತಿನವರು ಸಲ್ಲಿಸುವ ಪೂಜೆ, ತಿಂಡಿ ತಿನಿಸುಗಳು ಉದಾಹರಣೆಗೆ ನೀರುಪ್ಪುಡು ಮಾಡುವ ವಿಧಾನ, ಪೆಲತ್ತರಿಗೆ ಉಪ್ಪು ಹಾಕಿ ಬೇಯಿಸಿ ಮಳೆಗಾಲದಲ್ಲಿ ತಿನ್ನಲು ಮಳೆಗಾಲದ ಪ್ರಾರಂಭವಾಗುವ ಮುಂಚೆಯೇ ಸಿದ್ಧಮಾಡಿರುತ್ತಾರೆ, ಗಡಿ, ಮಿಡಿ,ಇಡಿ ಉಪ್ಪಿನಕಾಯಿಗಳ ಬಗ್ಗೆ ಎಳೆ ಎಳೆಯಾಗಿ ವಿವರಣೆ ನೀಡಿದ್ದಾರೆ. ಪತ್ತನಾಜೆ ಎಂದರೇನು ಹಾಗು ಆ ದಿನದಂದು ಎಲ್ಲಾ ದೈವಗಳ ಗುಡಿ ಮುಚ್ಚಲಾಗುತ್ತದೆ, ಪತ್ತನಾಜೆಯಿಂದ ದೀಪಾವಳಿ ತನಕ ತುಳುನಾಡಿನಲ್ಲಿ ಆಚರಣೆಯಿರುವುದಿಲ್ಲ. ಆಟಿ ಅಮವಾಸೆಯ ವಿಶೇಷ, ಸೋಣ ತಿಂಗಳಿನಲ್ಲಿ ತಡ್ಯದಜ್ಜಿ(ಹೊಸ್ತಿಲ ಅಜ್ಜಿ)ಯನ್ನು ಆರಾಧಿಸುವ ಕ್ರಮ, ಕಂಬಳ, ಯಕ್ಷಗಾನ ಬಯಲಾಟ, ನಾಗಮಂಡಲ, ಜುಮಾದಿ ಭೂತದ ಆರಾಧನೆ, ಮೂಲಗೇಣಿ, ಚಾಲಗೇಣಿಯ ವ್ಯತ್ಯಾಸಗಳು ಈ ಎಲ್ಲದರ ಕುರಿತು ಅತ್ಯದ್ಭುತವಾಗಿ ಮಾಹಿತಿ ನೀಡಿದ್ದಾರೆ, ಒಂದಲ್ಲಾ , ಎರಡಲ್ಲಾ ಎಷ್ಟೆಲ್ಲಾ ಆಚರಣೆಗಳು, ಹೇಳುತ್ತಾ ಹೋದರೆ ಸಾಕಷ್ಟಿವೆ, ಆದರೆ ಓದುವುದೇ ಆನಂದ.
ವೆಂಕಪ್ಪ ಹೆಗ್ಡೆ ಕಾಲದಲ್ಲಿ ಹೀಗೆ ಗುತ್ತಿನಾರ್, ಗುತ್ತಿನ ಯಜಮಾನಿಯೆಂದರೆ ಭಯಪಡುವ ಗೇಣಿದಾರರು ಸಂಕಪ್ಪನ ಅಳಿಯ ಸುಂದರ ಹೆಗ್ಡೆ ಕಾಲಕ್ಕೆ ಬಂದಾಗ ಗೇಣೀದಾರರೇ ಜಮೀನುದಾರರ ಭೂಮಿಯನ್ನೇ ಸ್ವಾಧೀನಪಡಿಸಿಕೊಂಡು ಮೆರದದ್ದು ಹಾಗು ಎತ್ತರಕ್ಕೆ ಬೆಳೆದದ್ದು, ಇದರ ಮಧ್ಯೆ ಯಾರೋ ಕೇರಳದಿಂದ ಬಂದು ಬೀಡಿ ವ್ಯಾಪಾರ ಶುರು ಮಾಡಿ, ಇನ್ನಿತರೆ ವ್ಯಾಪಾರಗಳನ್ನು ಬುದ್ಧಿವಂತಿಕೆಯಿಂದ ಮುಂದುವರೆಸಿ, ಇಡೀ ಊರಿಗೇ ದೊಡ್ಡವ್ಯಕ್ತಿಯಾಗಿ ಹಾಗು ರಾಜಕೀಯದಲ್ಲಿ ಅವಕಾಶ ದೊರಕಿಸಿಕೊಳ್ಳುವುದನ್ನು, ಈ ಒಂದು ಉದಾಹರಣೆಯಿಟ್ಟುಕೊಂಡು ರಾಜಕೀಯದ ಕುರಿತೂ ಈ ಕಾದಂಬರಿಯಲ್ಲಿ ಬರುತ್ತದೆ. ಸಂಕಪ್ಪನವರಿಗೆ ರಾಜಕೀಯದಲ್ಲಿ ಎಷ್ಟೆಲ್ಲಾ ಅವಕಾಶವಿದ್ದರೂ ಯಾವುದನ್ನೂ ಬಯಸದೆ ತಾನಾಯಿತು ತನ್ನ ಗಾಂಧೀ ತತ್ವವಾಯಿತು ಎಂಬುದರಿಂದ ಊರಿನವರಿಗೆಲ್ಲಾ ಸಂಕಪ್ಪನವರೆಂದರೆ ಗೌರವ. ಸುಂದರ ಹೆಗ್ಡೆ ಮುಂಬಯಿಗೆ ಹೋಗಿ ದೊಡ್ಡ ಹೋಟಲ್ ಉದ್ಯಮಿಯಾಗಿ ಬೆಳೆದು, ನಂತರ ಸಾಂತೇರ್ ಗುತ್ತು ಮಂಗಳೂರಿಗೆ ಹತ್ತಿರವಾಗಿದ್ದರಿಂದ ಅದು ಆರ್ಥಿಕ ವಲಯವಾಗಿ ಪರಿವರ್ತನೆಗೊಳ್ಳುತ್ತಿರುವಾಗ ಅದನ್ನು ತನ್ನ ಅಜ್ಜಿ ಅಂಬಕ್ಕೆಗೆ ತಿಳಿಸದೆ ಮೋಸ ಮಾಡಿ ಸಾಂತೇರ್ ಗುತ್ತನ್ನೇ ಮಾರಲು ಹೊರಟ ಸುಂದರ ಗುಣವು ಸರಿಕಾಣುವುದಿಲ್ಲ. ಆದರೆ ಇದನ್ನು ತಿಳಿದ ಅಂಬಕ್ಕೆಯ ಮೊಮ್ಮಗಳು ಭೂಮಿಯನ್ನು ಪ್ರೀತಿಸುವ ಜೈನ ಹುಡಗನನ್ನು ಪ್ರೀತಿಸಿ ಮದುವೆಯಾಗಿ ಭೂಮಿಯನ್ನು ಉಳಿಸಿಕೊಳ್ಳಲು ಪ್ರಯತ್ನ ಪಡುವಲ್ಲಿಗೆ ಕಾದಂಬರಿ ಮುಕ್ತಾಯವಾಗುತ್ತದೆ. ಇಲ್ಲಿ ಬರುವ ಅಂಬಕ್ಕೆ ಹಾಗು ಮೊಮ್ಮಗಳ ನಡುವೆ ನಡೆಯುವ ಸಂಭಾಷಣೆಗಳು ಅತ್ಯದ್ಭುತವಾಗಿವೆ, ಸಿಟ್ಟಿನ ಗುಣದ ಅಂಬಕ್ಕೆ ಗಾಂಧೀತತ್ವವನ್ನು ಅಳವಡಿಸಿಕೊಂಡ ಸಂಕಪ್ಪನನ್ನು ಮೊದಲು ದ್ವೇಷಿಸಿದರೂ, ಸಂಕಪ್ಪನವರು ಯಾವುದೇ ವಿಷಯವನ್ನು ತಾಳ್ಮೆಯಿಂದ ಸ್ವೀಕರಿಸುವ ಗುಣಕ್ಕೆ ಅಂಬಕ್ಕೆ ಶರಣಾಗಿಬಿಡುತ್ತಾಳೆ. ಒಂದು ಅತ್ಯುತ್ತಮ ಕಾದಂಬರಿಯನ್ನು ಓದಿದ ತೃಪ್ತಿ. ಮತ್ತೊಮ್ಮೆ ಮರಳಿ ಮಣ್ಣಿಗೆ ಕಾದಂಬರಿಯ ಪಾತ್ರಗಳೂ ನೆನಪಾದವು.
What I love about this book is that it tells us the story of Matrilineal society. It is also a tale of changing times and people. Through the overlapping narratives of the characters, we get a glimpse into their journey from tradition to modernity. The characters strive to reshape new values when old values are slowly questioned and erased as they move on and are swept along in the waves of modernity. Even though some new values get corrupted. The story mentioned the land reform act which led many landlords to lose their lands. The novel portrays that this society, like others, was affected by the changing laws during the post-independence period. Now I know why I came across so many Kannadiga in Mumbai in Hotel business. I came to know lots of things regarding Yakshagana, Tulu Nadu and their culture.
This was my second Novel of Na Mogasale after reading Dharmayuddha. I am surprised that despite winning so many awards this book is not well known. The sketches by Mohana Soona were cherry on the top. This book is also available in Marathi. Maybe after sometime, I will get The Other face (Mukhantara in Kannada).